'ಕನ್ನಡದ ಗದ್ಯವು ಹೇಗಿರಬೇಕು' ಅಥವಾ 'ಒಳ್ಳೆಯ ಗದ್ಯಶೈಲಿ, ಹಿತವಾದ ವಾಕ್ಯರಚನೆಯ ಕ್ರಮ ಹೇಗಿರುತ್ತದೆ ಎಂದು ಯಾರಾದರೂ ಕೇಳಿದರೆ ಪಕ್ಕನೆ ನನ್ನ ತಲೆಗೆ ಬರುವುದು ತೀ.ನಂ. ಶ್ರೀಕಂಠಯ್ಯನವರ ಗದ್ಯವೇ. ಎ.ಎನ್. ಮೂರ್ತಿರಾವ್, ಡಿವಿಜಿ, ಕುವೆಂಪು, ಸೇಡಿಯಾಪು ಕೃಷ್ಣ ಭಟ್ಟ ಮುಂತಾದವರ ಗದ್ಯ ಬರೆಹಗಳೂ ನನಗೆ ಮಾದರಿಯೇ. ಪಂಡಿತರಾದವರು, ಶಾಸ್ತ್ರಜ್ಞರು ಹೇಗೆ ಬರೆಯಬೇಕು ಎನ್ನುವುದಕ್ಕೂ ತೀ.ನಂ.ಶ್ರೀ ಮತ್ತು ಸೇಡಿಯಾಪು ಅವರ ಕೃತಿಗಳು ಆದರ್ಶಪ್ರಾಯ.
ಕಾವ್ಯಮೀಮಾಂಸೆ ಎಂಬುದು ಕಷ್ಟದ ವಿಷಯ; ಅಸಾಧಾರಣ ಪಾಂಡಿತ್ಯವನ್ನೂ, ನಿಶಿತಮತಿಯನ್ನೂ, ಕವಿಮನಸ್ಸನ್ನೂ, ಸಹೃದಯತೆಯನ್ನೂ ಒಟ್ಟೊಟ್ಟಿಗೇ ಬಯಸುವ ಕ್ಷೇತ್ರವದು. ಈ ಕ್ಷೇತ್ರದಲ್ಲಿ ನೂರಾರು ಪುಸ್ತಕಗಳು ಪ್ರಾಚೀನರಿಂದಲೂ ಆಧುನಿಕರಿಂದಲೂ ಬಂದಿವೆ. ತಲೆ ಚಿಟ್ಟು ಹಿಡಿಸುವ ಉದ್ದುದ್ದ ಪಟ್ಟಿಗಳು, ಕೂದಲು ಸೀಳುವ ತರ್ಕಗಳನ್ನು ಬಳಸಿ ಮಾಡಿದ ನೂರೆಂಟು ವರ್ಗೀಕರಣಗಳು, ಪಾರಿಭಾಷಿಕ ಪದಗಳ ಕಗ್ಗಾಡು,ಚರ್ವಿತ ಚರ್ವಣ ಇವೆಲ್ಲವೂ ಇಂಥ ಪುಸ್ತಕಗಳಲ್ಲಿ ಇವೆ. ಇಂಥ ವಿಷಯವನ್ನಿಟ್ಟುಕೊಂಡು, ಬೋರು ಹೊಡೆಸುವ, ಶುಷ್ಕಪಾಂಡಿತ್ಯದ, ತಲೆಬುಡ ಅರ್ಥ ಆಗದಂಥ ಕೃತಿಯನ್ನು ಬರೆಯುವುದು ಸುಲಭ. ನಮ್ಮ ಪುಣ್ಯಕ್ಕೆ ತೀನಂಶ್ರೀಯವರು ಹಾಗೆ ಮಾಡಲಿಲ್ಲ. ತಮ್ಮ ಪಾಂಡಿತ್ಯದ ಭಾರ ಓದುಗರ ಮೇಲೆ ಬೀಳದಂತೆ, ತೀನಂಶ್ರೀಯವರು ಬರೆದಿರುವ "ಭಾರತೀಯ ಕಾವ್ಯಮೀಮಾಂಸೆ"ಯು ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ ಸುಲಭವಾಗಿರ್ಪ ಲಲಿತವಹ ನಿರೂಪಣೆಯಲ್ಲಿ ಬಂದು, ಈ ಕ್ಷೇತ್ರಕ್ಕೆ ಪ್ರವೇಶ ಬಯಸುವವರಿಗೆ ಹೇಳಿ ಮಾಡಿಸಿದಂತಿರುವ ಕೃತಿ. ಇದೊಂದು ಮಾಸ್ಟರ್ ಪೀಸ್. ಹಾಗಾಗಿಯೇ "No Indian language has a book that can even distantly match Bharathiya Kavya Meemamse" ಎಂದು ಡಿ ಎಲ್ ನರಸಿಂಹಾಚಾರ್ಯರಿಂದ ಅದನ್ನು ಹೊಗಳಿದರು. ಇಂಥ ಕೃತಿಯು ಕನ್ನಡಿಗರ ಭಾಗ್ಯ. ಬೇಸರವೆಂದರೆ ಇಂಥ ಕೃತಿಗೆ ಅವರು ಬದುಕಿರುವಾಗ ಯಾವ ಒಂದು ಪ್ರಶಸ್ತಿಯೂ ಬಂದಿರಲಿಲ್ಲವಂತೆ,ಕೊನೆಗೂ ಅದಕ್ಕೆ ಮರಣೋತ್ತರ ಪಂಪ ಪ್ರಶಸ್ತಿ ಬಂತು.
ವಿಮರ್ಶೆ, ಭಾಷಾಶಾಸ್ತ್ರ ಮುಂತಾದ ವಿಷಯಗಳಲ್ಲಿ ಬೇಕಾದಷ್ಟು ಬರೆದಿರುವ ತೀ.ನಂ.ಶ್ರೀಯವರು ಒಳ್ಳೊಳ್ಳೆಯ ಲಲಿತ ಪ್ರಬಂಧಗಳನ್ನೂ ಬರೆದಿದ್ದಾರೆ. 'ಬಿಡಿಮುತ್ತು' ಎಂಬ ಹೆಸರಿನಲ್ಲಿ ಸಂಸ್ಕೃತದಲ್ಲಿರುವ ಸ್ವಾರಸ್ಯಕಾರಿ ಪದ್ಯಗಳನ್ನೂ ಸುಭಾಷಿತಗಳನ್ನೂ ಅನುವಾದ ಮಾಡಿದ್ದಾರೆ.
ಇಂಥವರು ನನಗೆ ಗುರುಗಳಾಗಿ ಇರಬಾರದಿತ್ತೇ, ಇಂಥವರ ಪರಿಚಯ ನನಗೆ ಇರಬಾರದಿತ್ತೇ ಎಂದು ಆಸೆಯಾಗುವಂಥ ವ್ಯಕ್ತಿತ್ವ ಅವರದು. ಸಜ್ಜನಿಕೆ, ಶಿಷ್ಯವಾತ್ಸಲ್ಯ, ಸಹೃದಯತೆ, ಪಾಂಡಿತ್ಯ, ಅಚ್ಚುಕಟ್ಟಾದ ಬರೆವಣಿಗೆ, ಒಳ್ಳೆಯ ಹಾಸ್ಯಪ್ರಜ್ಞೆ ಎಲ್ಲದಕ್ಕೂ ಅವರದ್ದು ಮೇಲ್ಪಂಕ್ತಿ. ತಮ್ಮ ಕೃತಿಯೊಂದರಲ್ಲಿ, ಒಂದು ವಾಕ್ಯದಲ್ಲಿ ಒಂದು ಮುದ್ರಣದೋಷವೋ, ವ್ಯಾಕರಣದೋಷವೋ ಇದೆ ಎಂದು ಗೊತ್ತಾದಾಗ ತೀ.ನಂ.ಶ್ರೀಯವರಿಗೆ ಮೂರು ದಿನ ನಿದ್ರೆ ಬಂದಿರಲಿಲ್ಲವಂತೆ! ಅವರ ಬಗ್ಗೆ ಮೂರ್ತಿರಾಯರು ಬರೆದಿರುವ ಎರಡು ಮೂರು ಲೇಖನಗಳನ್ನು ನೀವು ಓದಲೇಬೇಕು. ಅವರ ಹಾಸ್ಯಪ್ರಜ್ಞೆ, ಸ್ನೇಹ ಎಲ್ಲವನ್ನು ಮೂರ್ತಿರಾಯರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಮೂರ್ತಿರಾಯರು ತಮ್ಮ 'ಚಿತ್ರಗಳು ಪತ್ರಗಳು' ಕೃತಿಯಲ್ಲಿ ಕೊಟ್ಟಿರುವ ಪ್ರಸಂಗವೊಂದು ಹೀಗಿದೆ:
ಒಂದು ದಿನ (ಕಾಲೇಜಿನ)ಕಾಮನ್ ರೂಮಿನಲ್ಲಿ ತಾವು ಆ ದಿನ ಅಪರೂಪಕ್ಕೆ ಕವನವೊಂದನ್ನು ಕಟ್ಟಿದ ವಿಚಾರವನ್ನು ತೀ.ನಂ. ಶ್ರೀಕಂಠಯ್ಯ ತಿಳಿಸಿದರು. ಆಮೇಲೆ ಮಾತು ಹೆಚ್ಚು ಕಡಿಮೆ ಹೀಗೆ ನಡೆಯಿತು;
ಎ.ಎನ್. ಮೂರ್ತಿರಾವ್: ಮೌನವ್ರತಾಚಾರಿಯಾದ ಕೋಗಿಲೆಯಿಂದು ಮೌನವಂ ಬಿಟ್ಟುಲಿಯತೊಡಗಿಹುದು.
ನಾ. ಕಸ್ತೂರಿ: ಕೋಗಿಲೇನ ಯಾಕೆ insult ಮಾಡಿತ್ತೀರಪ್ಪ? ಅದೇನು ಅಪರಾಧ ಮಾಡಿತಯ್ಯ?
ನಾರಾಯಣಶಾಸ್ತ್ರಿ: ಈ ಕೋಗಿಲೆ ಗಂಟಲಿನಿಂದ ಹಾಡಲ್ಲ. ಲೇಖನಿಯಿಂದ ಹಾಡುತ್ತೆ.
ಶಿವರಾಮಶಾಸ್ತ್ರಿ: ನಾವು ಬದುಕಿದೆವು. ದೇವರ ದಯ!
ತೀನಂಶ್ರೀ: ಹೀಗೆಲ್ಲ ಮಾತಾಡಿದರೆ ನಾನು ಗಂಟಲಿಂದಲೇ ಹಾಡಿಬಿಡುತೀನಿ. ಹುಷಾರ್!
ಎಲ್ಲರೂ: (ಭಯದಿಂದ ನಡುಗುವ ಅಭಿನಯ ಮಾಡಿ) ನಿಮ್ಮ ದಮ್ಮಯ್ಯ.
ತೀನಂಶ್ರೀ: ದಮ್ಮಯ್ಯಗಿಮ್ಮಯ್ಯ ನಾನು ಲೆಕ್ಕಕ್ಕಿಡುತಾ ಇರಲಿಲ್ಲ. ಆದರೆ.. (ತಾವೂ ಹೆದರಿದವರಂತೆ) ನನ್ನ ಸಂಗೀತ ನನ್ನ ಕಿವಿಗೂ ಬೀಳುತ್ತಲ್ಲ! ಅದೇ ಹೆದರಿಕೆ!
ಆಚಾರ್ಯ ತೀ.ನಂ.ಶ್ರೀಯವರ ಮತ್ತು ಅವರ ಗೆಳೆಯರಾದ ಮೂರ್ತಿರಾಯರ ಇನಿದಾದ ಕನ್ನಡಗದ್ಯವನ್ನು ಓದುವ ಖುಷಿ ನಿಮ್ಮದಾಗಲಿ.
No comments:
Post a Comment