ಇಸ್ರೋ ನಮಗೆ ತಂದ ಹೆಸ್ರೋ! ಖಗೋಳಕ್ಕೂ ನಮಗೂ ಅದೇನು ನಂಟೋ. ಎಸ್. ಬಾಲಚಂದ್ರರಾವ್ ಅವರು ಆರ್ಯಭಟನ ಬಗ್ಗೆ ಬರೆದಿರುವ ಪುಸ್ತಕದ ಮೊದಲ ಪುಟದಲ್ಲಿಈ ಸಾಲುಗಳನ್ನು ಕೊಟ್ಟಿದ್ದಾರೆ: ಯಥಾ ಶಿಖಾ ಮಯೂರಾಣಾಂ, ನಾಗಾನಾಂ ಮಣಯೋ ಯಥಾ । ತದ್ವದ್ವೇದಾಂಗ ಶಾಸ್ತ್ರಾಣಾಂ ಜ್ಯೌತಿಷಂ ಮೂರ್ಧನಿ ಸ್ಥಿತಮ್. ಇದು ವೇದಾಂಗ ಜ್ಯೋತಿಷ ಎಂಬ ಪ್ರಾಚೀನ ಖಗೋಳ ಗ್ರಂಥದಲ್ಲಿ ಬರುವ ಸಾಲಂತೆ. ನವಿಲುಗಳ ತಲೆಯ ಮೇಲಿರುವ ಶಿಖೆಗಳ ಹಾಗೆ, ನಾಗಗಳ ಹೆಡೆಯ ಮೇಲಿರುವ ಮಣಿಗಳ ಹಾಗೆ ಖಗೋಲವು ವೇದಾಂಗ ಶಾಸ್ತ್ರಗಳ ಶಿರೋಮಣಿಯಾಗಿದೆ ಎಂದು ಇದರ ಅರ್ಥ. ಖಗೋಳ ಶಾಸ್ತ್ರಕ್ಕೆ ನಮ್ಮಲ್ಲಿ ಮೊದಲಿನಿಂದಲೂ ಅಷ್ಟು ಗೌರವ. ಆ ಕಾಲದಿಂದ ಹಿಡಿದು ಆರ್ಯಭಟ, ಬ್ರಹ್ಮಗುಪ್ತರ ಮೂಲಕ ಹಾದು ಸತೀಶ್ ಧವನ್ ಅವರವರೆಗೆ ಖಗೋಲದ ವಿಚಾರಕ್ಕೆ ಬಂದರೆ ನಮ್ಮವರದು ಯಾವಾಗಲೂ rank ಸ್ಟೂಡೆಂಟನ ಛಾಪೇ, ಮೇಲ್ಮಟ್ಟದ ಬಲ್ಮೆಯೇ. ನಮ್ಮ ಕವಿಗಳೇನೋ ಹುಡುಗಿಯರನ್ನು ಚಂದ್ರವದನೆ, ಇಂದುಮುಖಿ ಎಂದೆಲ್ಲ ಕರೆದು, ಮುಖಗಳನ್ನು ಅದೆಷ್ಟೆಷ್ಟೋ ಪರಿಗಳಲ್ಲಿ ಚಂದ್ರನಿಗೆ ಹೋಲಿಸಿ, ಆಗಲೇ ಒಂದರ್ಥದಲ್ಲಿ ಚಂದ್ರನನ್ನು ಮುಟ್ಟಿದ್ದರು. ಈಗ ಪಾಪ ಆ ಕವಿಗಳಿಗೆ, ಚಂದ್ರನ ಮುಖವನ್ನೇ ಕಾಣಿಸುವ ಕೆಲಸ ವಿಜ್ಞಾನಿಗಳದ್ದು. ಅಂತೂ ಈ ತಲೆಹರಟೆಗಳನ್ನು ಬಿಟ್ಟು ಮಾತಾಡಿದರೆ ಇದು ನಮಗೆ ಆನಂದಾತಿಶಯದ ಕಾಲ, ಹರ್ಷೋತ್ಕರ್ಷದ ವರ್ಷಾಕಾಲ.
My Facebook Id is: Sharath Bhat Seraje, my mail id is: sharathbhats@gmail.com
Wednesday, 17 September 2025
ಇಸ್ರೋ
ಇಸ್ರೋದ ಬಗ್ಗೆ ನಾನು ನಾಲ್ಕು ವರ್ಷಗಳ ಮೊದಲು ಬರೆದಿದ್ದ ನಾಲ್ಕು ಸಾಲುಗಳು ಕೆಳಗಿವೆ.
ಯಾವುದಾದರೂ ವಿಷಯದಲ್ಲಿ ಇವತ್ತು ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಟಾಪ್ 5ನಲ್ಲಿ ಇದೆಯೇ ಅಂತ ನೋಡಿದರೆ, ಪಕ್ಕನೆ ಹೊಳೆಯುವುದು: ಜನಸಂಖ್ಯೆ, ಲಂಚ,ಭ್ರಷ್ಟಾಚಾರ, ಬಡತನ, ಅತೀ ಹೆಚ್ಚು ಜನ ಸಿವಿಕ್ ಸೆನ್ಸ್ ಇಲ್ಲದ ನಾಗರಿಕರು, ಬರೀ ಇಂಥವೇ. ಪ್ರಾಚೀನ ಭಾರತ ಹಾಗಿತ್ತು, ಹೀಗಿತ್ತು ಎಂದೆಲ್ಲ ಎಷ್ಟು ಬೇಕಾದರೂ ಹೇಳಬಹುದು, ಆದರೆ ಕಳೆದ ಐವತ್ತು ವರ್ಷದ್ದು ಏನಾದರೂ ಹೇಳಿ ಅಂದರೆ ಬಾಯಿ ಕಟ್ಟುತ್ತದೆ!
ಹಲವರಿಗೆ ಗೊತ್ತಿರಲಿಕ್ಕಿಲ್ಲ, ಅಂಥದ್ದೊಂದು ಸಾಧನೆ ಆಗಿರುವ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಬಾಹ್ಯಾಕಾಶ ಸಂಶೋಧನೆಯೂ ಒಂದು. ಅಮೆರಿಕಾ, ರಶಿಯಾದಂತಹಾ ದೊಡ್ಡಣ್ಣಂದಿರ ಲೆಕ್ಕವೇ ಬೇರೆ. ಈ ಹೆಸರುಗಳನ್ನು ಬಿಟ್ಟರೆ ಉಳಿಯುವ ಪಟ್ಟಿಯಲ್ಲಿ ನಮ್ಮದೂ ಒಂದು ದೊಡ್ಡ ಹೆಸರೇ. ಒಟ್ಟಿನಲ್ಲಿ, ಜಾಗತಿಕ ಮಟ್ಟದಲ್ಲಿ ಟಾಪ್ 5 ಅಥವಾ ಟಾಪ್ 8ನಲ್ಲಿ ನಾವೂ ಬರಬಹುದು ಅನ್ನುವುದಕ್ಕೆ ಅಡ್ಡಿಯಿಲ್ಲ. ಇಂಥದ್ದೊಂದು ಸಾಧನೆಯ ಹಿಂದಿನ ಕಥೆಯ ಬಗ್ಗೆ ಆಸಕ್ತಿ ಇರುವವರು R. Aravamudan ಮತ್ತು Gita Aravamudan ಬರೆದಿರುವ ISRO: A Personal History ಎಂಬ ಪುಸ್ತಕವನ್ನೋದಬಹುದು. ಅರವಮುದನ್ ಇಸ್ರೋದ ಮೊದಮೊದಲ ದಿನಗಳಿಂದಲೂ ಅಲ್ಲಿದ್ದವರು. ಅವರು ತಿಳಿಹಾಸ್ಯದೊಂದಿಗೆ ಆ ದಿನಗಳ ಕಥೆ ಹೇಳುವುದನ್ನು ಕೇಳುವುದೇ ಒಂದು ಖುಷಿ. ಇಸ್ರೋದ ಶೈಶವದ ಆ ದಿನಗಳಲ್ಲಿ ಅದರ ಅಭ್ಯುದಯಕ್ಕೆ ವಿಕ್ರಂ ಸಾರಾಭಾಯಿಯವರಂತಹಾ ಕನಸುಗಾರರ ಕೊಡುಗೆ ಎಷ್ಟು ದೊಡ್ಡದು ಎನ್ನುವುದರ ವಿವರಗಳನ್ನು ಓದುವಾಗ ಥ್ರಿಲ್ಲಾಗುತ್ತದೆ. ಆಸಕ್ತರು ಈ ಪುಸ್ತಕವನ್ನೊಮ್ಮೆ ಓದಿ ನೋಡಿ.
ಅಂದ ಹಾಗೆ, ಚಂದಿರನ ಅಂಗಳದಲ್ಲಿ ಪ್ರಜ್ಞಾನ ರೋವರಿನ ಚಕ್ರವು ಭಾರತದ ಲಾಂಛನವನ್ನು ಮುದ್ರೆ ಒತ್ತಿರುವ ಚಿತ್ರ ಫೇಕ್. ಅದನ್ನು ಒಬ್ಬರು
ಫೋಟೋಷಾಪ್ ಅನ್ನು ಬಳಸಿ, ಚಂದ್ರಯಾನ ಯಶಸ್ವಿಯಾಗುವ ಮೊದಲೇ, ಮುಂದೆ ಹೀಗಾಗಲಿಕ್ಕೆ ಕಾಯುತ್ತಿದ್ದೇನೆ ಎಂಬ ಅರ್ಥದಲ್ಲಿ ಹಾಕಿದ್ದರು. ಅದನ್ನು ತಪ್ಪಿ ಜನ ವೈರಲ್ ಮಾಡಿಬಿಟ್ಟಿದ್ದಾರೆ.
ವಿಕ್ರಂ ಸಾರಾಭಾಯಿಯವರಿಂದ ಮೊದಲುಗೊಂಡು, ಸೈಕಲ್ಲಿನಲ್ಲಿ ರಾಕೆಟ್ಟುಗಳನ್ನು ಕೊಂಡೊಯ್ಯುವ ಫೋಟೋದ ಮೂಲಕ ಅಮರರಾದ ಕನ್ನಡಿಗ ಸಿಆರ್ ಸತ್ಯರಿಂದ ಹಿಡಿದು ಅಲ್ಲಿ ದುಡಿದ ಇಸ್ರೋದ ಎಲ್ಲ ವಿಜ್ಞಾನಿಗಳಿಗೆ, ಆಡಳಿತಾಧಿಕಾರಿಗಳಿಗೆ, ಈ ಸಲದ ಪ್ರಾಜೆಕ್ಟಿನಲ್ಲಿ ಇದ್ದ ಎಲ್ಲರಿಗೂ ವಂದನೆ, ಅಭಿವಂದನೆ.
Subscribe to:
Post Comments (Atom)
No comments:
Post a Comment