ಪ್ರಿಯ ಬಾಗಿಲು ತೆರೆಯೇ ಸೇಸಮ್ಮ,
ಆ ದಿನಗಳು ನಿನಗೆ ನೆನಪಿವೆಯೇ? ನೀನು ನನ್ನ ತಲೆಯ ಗೂಡು ಬಿಟ್ಟು ಪುಸ್ತಕದ ಅಂಗಡಿಗಳ ಕಡೆಗೆ ಹಾರಿದ ದಿನಗಳು? ನಾನು ಮೊದಮೊದಲು ರ್ಯಾಗಿಂಗ್ ಮಾಡುವವರ ಕಾಲೇಜಿಗೆ ಮಗಳನ್ನು ಕಳಿಸುವ ಪಾಲಕನಂತೆ ಹೆದಹೆದರಿ ನಿನ್ನನ್ನು ಕಳುಹಿಕೊಟ್ಟ ಗಳಿಗೆ? ವಿನಯಕುಮಾರ ಸಾಯ ತಯಾರಿಸಿಕೊಟ್ಟ ಹಳದಿ ಬಣ್ಣದ ಮುಖಪುಟದ ದಿರಿಸನ್ನು ದಿವಿನಾಗಿ ತೊಟ್ಟು, ಗಣೇಶ ಭಟ್ ನೆಲೆಮಾಂವ್ ಅವರ ಬೆನ್ನುಡಿಯನ್ನು ಮೆಚ್ಚಿನೋಲೆಯಾಗಿ ಧರಿಸಿ, ಜೋಗಿಯವರ ಮುನ್ನುಡಿಯನ್ನು ವಿಐಪಿ ಪಾಸಿನಂತೆ ಬೀಸಿ ತೊನೆದಾಡಿಸುತ್ತ ನೀನು ನಿರ್ಗಮಿಸಿದ್ದೆ; ನೀನು ಮೊದಲಿನಿಂದಲೂ ಹೇಳಿದ ಮಾತನ್ನು ಕೇಳಿದವಳಲ್ಲ.
"ನೀನಿಲ್ಲಿಯೇ ಹಾಯಾಗಿ ಇರು, ಪುಸ್ತಕರೂಪವೆಲ್ಲ ನಿನಗೆ ಬೇಡ" ಎಂದು ಸಾರಿ ಸಾರಿ ಹೇಳಿದರೂ ಬಿಡದ ಗಡಸುಗಾರ್ತಿ ನೀನು. ಸಿಂಗಾರ ಬಂಗಾರ ಮಾಡಿಕೊಂಡು, ಪುಸ್ತಕರೂಪಿಯಾಗಿ, ಹಾರಬೇಕೋ ನಡೆಯಬೇಕೋ ಎಂದು ಗೊತ್ತಾಗದೆ ಗೊಂದಲಗೊಂಡ ಮರಿಹಕ್ಕಿಯೊಂದರಂತೆ ನೀನು ಪುಸ್ತಕದ ಮಳಿಗೆಗಳೆಡೆಗೆ, ಸಾಹಿತ್ಯಲೋಕದ ಕಡೆಗೆ ನೆಗೆನೆಗೆದು ಹೊರಟೆ. "ನಿನ್ನನ್ನು ಯಾರು ಓದುತ್ತಾರೆ?" ಎಂದು ಕೇಳಿದರೆ, "ಓದಲೇಬೇಕೆಂದು ಏನಿದೆ? ಯಾರಾದರೂ ಚಹಾದ ಲೋಟವನ್ನಿಡಲು 'ಕೋಸ್ಟರ್' ಆಗಿ, ಮಕ್ಕಳಿಗೆ ತಲೆಯಿಟ್ಟು ಮಲಗಲು ಆಧಾರವಾಗಿ ಅಥವಾ ಪುಟ ಹರಿಯಲು ಸಿಗುವ ಆಟದ ಸಾಮಾನಾಗಿ, ಸೊಳ್ಳೆ ಹೊಡೆಯುವ ಆಯುಧವಾಗಿ ನನ್ನನ್ನು ಬಳಸಬಹುದು" ಎಂದು ಜೋಕ್ ಮಾಡಿದ್ದೆ. ನೀನು ಯಾವುದನ್ನೂ ಸುಲಭದಲ್ಲಿ ಒಪ್ಪಿದವಳೇ ಅಲ್ಲ.
ನಿನಗೇನು ಪ್ರಚಾರವಿತ್ತೇ, ಕಟ್ ಔಟುಗಳಿದ್ದವೇ, ಯಾರಾದರೂ ಟಿಕ್ ಟಾಕಿನಲ್ಲಿ ನಿನ್ನ ಬಗ್ಗೆ ಡ್ಯಾನ್ಸ್ ಮಾಡಿದರೇ? ಏನೂ ಇರಲಿಲ್ಲ. ಆದರೂ ನೀನು ಎಷ್ಟು ಸಾಧ್ಯವೋ ಅಷ್ಟು ಜನರನ್ನು ತಲುಪುತ್ತೇನೆಂದು ಹೊರಟೆ. "ಬರೆದದ್ದು ಚೆನ್ನಾಗಿದ್ದರೆ, ಅದೇ ಒಳ್ಳೆಯ ಮಾರ್ಕೆಟಿಂಗ್" ಎಂಬುದು ನಿನ್ನ ವಾದವಾಗಿತ್ತು. ನನ್ನ ಮಾತನ್ನು ನೀನೆಲ್ಲಿ ಕೇಳುತ್ತೀಯೆ? ಕಡೆಗೂ, "ಜನರ ಪ್ರೀತಿಯನ್ನು ಗಳಿಸು" ಎಂದು ಹೇಳಿ ನಾನು ನಿನ್ನನ್ನು ಬೀಳ್ಕೊಟ್ಟೆ. ಓದುಗರು ಮೆಚ್ಚಿ ಕೊಂಡಾಡಿದಾಗ, ನೀನು ನಾಚಿ, ಪುಟದ ಬದಿಗಳು ಕೆಂಪಾದದ್ದನ್ನು ನಾನು ಮರೆತಿಲ್ಲ.
ಈಗ ನೋಡಿದರೆ, ಮೊದಲ ಮುದ್ರಣದ ಎಲ್ಲ ಪ್ರತಿಗಳು ಮುಗಿದು ಎರಡನೆಯ ಮುದ್ರಣಕ್ಕೆ ಹೊರಟಿದ್ದೇನೆಂದು ಹೇಳಿ, "ನನ್ನ ಬಗ್ಗೆ ಫೇಸ್ಬುಕ್ಕಿನಲ್ಲಿ ಏನಾದರೂ ಬರಿ" ಎಂದು ಪೀಡಿಸುತ್ತಿರುವೆ. "ಈ ಪುಟ್ಟ ಸಾಧನೆಯನ್ನು ನಿನ್ನ ಬೈಂಡಿಂಗಿಗೆ ಹತ್ತಿಸಿಕೊಂಡು ಬೀಗಬೇಡ; ನೀನೊಂದು ಪಿಡಿಎಫ್ಫಿನಲ್ಲಿ ಚದುರಿದ ಅಕ್ಷರಗಳ ಮುದ್ದೆಯಾಗಿ identity crisisನಿಂದ ಒದ್ದಾಡುತ್ತಿದ್ದದ್ದನ್ನು ನೋಡಿದ್ದೇನೆ" ಎಂದು ನಾನು ಹೇಳಿದರೂ ಕೇಳದೆ ಒತ್ತಾಯ ಮಾಡಿದೆ. ನಿನಗೆ ಎರಡನೆಯ ಮುದ್ರಣದ ನೆವದಲ್ಲಿ ಅಭಿನಂದನೆಗಳನ್ನು ಬೇಕಾದರೆ ಹೇಳುತ್ತೇನೆ, ಆದರೆ ಈ ಅಲ್ಪತೃಪ್ತಿಯು ಬೇಡ. ನಾನು ಹೇಳಿಕೇಳಿ ಒಬ್ಬ ಇಂಡಿಯನ್ ಪೇರೆಂಟ್; ನನ್ನನ್ನು ಅಷ್ಟು ಸುಲಭದಲ್ಲಿ ಮೆಚ್ಚಿಸಲಾಗದು. ಈಗ ನೋಡು, ನಿನ್ನ ಪುಟ್ಟ ತಮ್ಮನೂ, ನವಜಾತಶಿಶುವೂ ಆದ "ಹತ್ತೇವು ವಿಜ್ಞಾನದ ಜೀಪ" ಇದ್ದಾನಲ್ಲ, ಅವನಿಗೆ ವಿಶ್ವವಾಣಿ ಅಂಕಿತ ಟಾಪ್-10 ಪಟ್ಟಿಯಲ್ಲಿ ಕಳೆದ ವಾರ ಆರನೆಯ ಸ್ಥಾನವೂ ಅದರ ಮೊದಲಿನ ವಾರದಲ್ಲಿ ಮೂರನೆಯ ಸ್ಥಾನವೂ ಬಂದಿದೆ. ನೀನೂ ಬಿಂಕವನ್ನು ಬಿಟ್ಟು ಸ್ವಲ್ಪ ಅವನನ್ನು ನೋಡಿ ಕಲಿ. ಅವನ ಹಾಗೆ ಏನಾದರೂ ಮಾಡಿ ತೋರಿಸು. ನಿಮಗಿಬ್ಬರಿಗೂ ಒಳಿತಾಗಲಿ.
ಇಂತಿ ನಿನ್ನ ಪ್ರೀತಿಯ ಸೃಷ್ಟಿಕರ್ತ,
ಶರತ್ ಸೇರಾಜೆ
ಗುರುರಾಜ ಕೊಡ್ಕಣಿ:
ಕನ್ನಡದ ಇತ್ತೀಚಿನ ಬರಹಗಾರರ ಪೈಕಿ ನನಗೆ ತುಂಬ ಇಷ್ಟದ ಯುವ (ಯುವ ಅನ್ನಬಹುದಾ ಇಲ್ಲವಾ ಗೊತ್ತಿಲ್ಲ, ನನ್ನಷ್ಟೇ ವಯಸ್ಸಿರಬಹುದಾ ಅಂತ) ಬರಹಗಾರ Sharath Bhat Seraje . ಇವರ ಚೊಚ್ಚಲ ಕೃತಿ 'ಬಾಗಿಲು ತೆರೆಯೇ ಸೇಸಮ್ಮ' ಓದಿದಾಗ ಇವರ ಬರವಣಿಗೆ ವ್ಯಾಪ್ತಿ ನಿಜಕ್ಕೂ ದಂಗುಬಡಿಸಿತ್ತು. ಸಾಧ್ಯಂತವಾಗಿ ಎಲ್ಲವನ್ನೂ ವಿವರಿಸುವ ಶೈಲಿ, ಕ್ಲಿಷ್ಟಕರ ವಿಷಯಗಳ ಆಯ್ಕೆಯಾದರೂ ಬರವಣಿಗೆ ಲಹರಿ ನನಗಂತೂ ಮೆಚ್ಷಿನದ್ದು. ಅದ್ಯಾಕೋ ಸರಿಯಾದ ಪ್ರಚಾರವೇ ಸಿಕ್ಕಿಲ್ಲ ಎನ್ನಿಸುವಷ್ಟರಲ್ಲಿ 'ಬಾಗಿಲು ತೆರೆಯೇ ಸೇಸಮ್ಮ' ಎರಡನೇ ಮುದ್ರಣ ಕಂಡಿದೆ ಎನ್ನುವ ಸುದ್ದಿ ತಿಳಿದು ಖುಷಿಯಾಯಿತು. ಇತ್ತೀಚೆಗಷ್ಟೇ ಅವರ ಎರಡನೇ ಕೃತಿ,' ಹಚ್ಚೇವು ವಿಜ್ಞಾನದ ಜೀಪ' ಕೂಡ ಮಾರುಕಟ್ಟೆಗೆ ಬಂದಿತ್ತು. ಇವೆರಡರ ನಡುವೆ ಮೂರನೇ ಕೃತಿ ಇನ್ನೇನು ಮಾರುಕಟ್ಟೆಗೆ ಬರಲಿದೆ...
ಒಟ್ಟಾರೆಯಾಗಿ ಯೋಗ್ಯ'ಬರಹಗಾರರೊಬ್ಬರು ನಿಧಾನಕ್ಕಾದರೂ ಸರಿ,ಸಾಹಿತ್ಯವಲಯದಲ್ಲಿ ಗುರುತಿಸಲ್ಪಡುತ್ತಿರುವುದು ಸಂತಸದ ವಿಷಯ..😊😊😊
No comments:
Post a Comment