Wednesday, 17 September 2025

ಜೋಗಿಯವರು ಬರೆದ ‘ಕತೆಗಾರರ ಕೈಪಿಡಿ’

 ಸಣ್ಣಕಥೆಯನ್ನು ಬರೆಯುವುದೆಂದರೆ ಪುಟ್ಟ 1 BHK ಮನೆಯ ಹಾಲಿನಲ್ಲಿ ಆನೆಯನ್ನು ಸಾಕುವ ಪ್ರಯತ್ನ ಮಾಡಿದಂತೆ; ಹಾಗಾಗಿಯೇ ಅದು ಎಲ್ಲರ ಗಮನ ಸೆಳೆಯುವ ಮಾಯಾವಿ, ಅದನ್ನು ಓದುವುದು ಎಷ್ಟು ಸುಲಭವೋ ಬರೆಯುವುದು ಅಷ್ಟೇ ಕಷ್ಟ ಎಂದುಕೊಳ್ಳುತ್ತಿದ್ದ ಹೊತ್ತಿನಲ್ಲಿ ಜೋಗಿಯವರು ಬರೆದ ‘ಕತೆಗಾರರ ಕೈಪಿಡಿ’ ಬಂದಿದೆ. ಅದನ್ನೋದಿದೆ. ಇದು ಆ ಕೃತಿಯ ವಿಮರ್ಶೆಯಲ್ಲ; multiple choice questions ಅನ್ನು ಇಷ್ಟ ಪಡುವವರು ಇದನ್ನು ಅದಕ್ಕೊಂದು ಪ್ರಸ್ತಾವನೆ ಅಥವಾ ಸಹೃದಯ ಸ್ಪಂದನ ಅಥವಾ ಪುಸ್ತಕ(ಗಳ!) ಪರಿಚಯ ಎಂದುಕೊಳ್ಳಬಹುದು.

'ಕಥೆಯನ್ನು ಬರೆಯಬಹುದಲ್ಲದೆ ಕಥೆಯ ಬಗ್ಗೆ ಬರೆಯಬಹುದೇ' ಎಂದು ಕೇಳುವ ಓದುಗರಿದ್ದಾರು, ಏನಾದರೊಂದು ಹೊಸಪ್ರಯೋಗಕ್ಕೆ ಕೈಹಾಕುತ್ತಲೇ ಇರುವ ಜೋಗಿಯವರು ಅಂಥವರಿಗೊಂದು ಉತ್ತರವನ್ನು ಇಲ್ಲಿ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಇದು ಇಂಗ್ಲೀಷಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಪ್ರಕಾರ. ಅಮೆರಿಕಾದಲ್ಲಿ Writer's Digest ಎಂಬ ಒಂದು ಮ್ಯಾಗಜೀನೇ ಇದೆ. Lajos Egri ಅವರ The Art of Dramatic Writing ಎಂಬುದು ನಾಟಕಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬಂದಿದ್ದ ಹೊತ್ತಗೆ. Lisa Cron ಅವರ Wired for Storyಯು ನರವಿಜ್ಞಾನದ, ಮಿದುಳಿನ ಕಾರ್ಯವೈಖರಿಯ ದೃಷ್ಟಿಯಿಂದ ಕಥೆ ಬರೆಯುವುದನ್ನು ವಿಶ್ಲೇಷಣೆ ಮಾಡುವ ವಿಶಿಷ್ಟ ಕೃತಿ. Karl Iglesias ಬರೆದಿರುವ Writing for Emotional Impact ಅಭ್ಯಾಸಿಗಳಿಗೆ ಉಪಯುಕ್ತವಾದ ಗ್ರಂಥ. ಜಗತ್ತಿನ ಎಲ್ಲ ಪುರಾಣಗಳಲ್ಲಿ, ಮಹಾಕಾವ್ಯಗಳಲ್ಲಿ ಒಂದೇ ತರದ structure ಇದೆ ಎಂಬ ವಾದವನ್ನು ಜೋಸೆಫ್ ಕ್ಯಾಂಪಬೆಲ್ ಪ್ರತಿಪಾದಿಸಿದ್ದ. ಆ ಎಳೆಯನ್ನು ಇಟ್ಟುಕೊಂಡು Christopher Vogler ಅವರು The Writer's Journey: Mythic Structure for Writers ಎಂಬ ಪುಸ್ತಕ ತಂದಿದ್ದಾರೆ.
William Froug ಅವರ Zen and the Art of Screenwriting ಗಮನಾರ್ಹವಾಗಿದೆ. ಫ್ರೆಂಚ್ ನಿರ್ದೇಶಕನೂ, ಬುದ್ಧಿಜೀವಿಯೂ ಆಗಿದ್ದ Francois Truffaut ಹಾಲಿವುಡ್ಡಿನ ದೈತ್ಯಪ್ರತಿಭೆ ಆಲ್ಫ್ರೆಡ್ ಹಿಚ್ಕಾಕನ ಸುದೀರ್ಘ ಸಂದರ್ಶನವನ್ನು ತಿಂಗಳುಗಟ್ಟಲೆ ಮಾಡಿ ಮಾಡಿ Hitchcock ಎಂಬ ಪುಸ್ತಕವನ್ನು ಬರೆದಿದ್ದಾನೆ, ಅದರಲ್ಲಿ ಚಲನಚಿತ್ರಗಳ ಭಾಷೆಯ ಬಗ್ಗೆ, ಕಥೆ ಹೇಳುವುದರ ಬಗ್ಗೆ ಹಲವಷ್ಟು ಒಳನೋಟಗಳಿವೆ. ನಾನು ತುಂಬ ಇಷ್ಟಪಡುವ ನಿರ್ದೇಶಕರಲ್ಲಿ ಒಬ್ಬರಾದ ಬಿಲ್ಲಿ ವೈಲ್ಡರ್ ಅವರು ಎಷ್ಟು ಚೆನ್ನಾಗಿ ಚಿತ್ರಕಥೆಯನ್ನು ಬರೆಯಬಲ್ಲರೋ ಅಷ್ಟೇ ಚೆನ್ನಾಗಿ ಅದರ ಬಗ್ಗೆ ಮಾತಾಡಬಲ್ಲವರು. Cameron Crowe ಎಂಬ ನಿರ್ದೇಶಕರು ಅವರ ಜೊತೆ ಮಾಡಿದ "Conversations with Wilder" ಎಂಬುದೂ ಒಂದು ಸಲ ಓದಬಹುದಾದ ಪುಸ್ತಕ.
ಖ್ಯಾತ ಲೇಖಕರೂ ಈ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಕ್ರೈಂ ಥ್ರಿಲ್ಲರ್ ಕಾದಂಬರಿಗಳಿಂದ ವಿಖ್ಯಾತರಾದ Lawrence Block ಅವರು Telling lies for fun and profit ಎಂಬ ಪುಸ್ತಕವನ್ನೂ Spider, Spin Me A Web A Handbook For Fiction Writers ಎಂಬ ಕೈಪಿಡಿಯನ್ನೂ ಬರೆದಿದ್ದಾರೆ. E. M. Forster ಅವರ Aspects of the Novel ಕೃತಿ ಹಿಂದೆಯೇ ಬಂದಿತ್ತು. ಸೈನ್ಸ್ ಫಿಕ್ಷನ್ನಿನಲ್ಲಿ ದೊಡ್ಡ ಹೆಸರಾದ Damon Knight ಅವರು ಬರೆದ Creating Short Fiction, ಅದರ ಚುರುಕಾದ ಪ್ರಸ್ತುತಿ ಮತ್ತು ಉಪಯುಕ್ತ ಸಲಹೆಗಳಿಂದಾಗಿ ಪ್ರಸಿದ್ಧವಾದ ಕೃತಿ.
ಸೈನ್ಸ್ ಫಿಕ್ಷನ್ನಿನ ಕ್ಷೇತ್ರದಲ್ಲಿ ಕೆಲಸ ಮಾಡಿ ಹೆಸರು ಮಾಡಿರುವ Orson Scott Card ಅವರು ಓದುಗರ ಪ್ರಶ್ನೆಗಳಿಗೆ ಉತ್ತರವಿರುವ Uncle Orson's Writing Class ಎಂಬೊಂದು ಕೃತಿಯನ್ನು ರಚಿಸಿದ್ದಾರೆ. Dean Koontz ಬರೆದಿರುವ Writing Popular Fiction ಮಾರುಕಟ್ಟೆಯಲ್ಲಿದೆ. ಇಂಥ ಐವತ್ತು ಪುಸ್ತಕಗಳನ್ನು ಹೆಸರಿಸಬಹುದು, ನಾನು ಓದಿದ್ದರಲ್ಲಿ ಪಕ್ಕನೆ ನೆನಪಾದದ್ದು ಇಷ್ಟು; ಸದ್ಯಕ್ಕಿಷ್ಟು ಸಾಕು.
ಕನ್ನಡದಲ್ಲಿಯೂ ಮೋಹನ ನಾಗಮ್ಮನವರ ಅವರು ಸಂಪಾದಿಸಿರುವ "ಕಥನ ಕುತೂಹಲ" ಎಂಬ ಪುಸ್ತಕವೊಂದಿದೆ(ಇದು ಕಥಾಕಮ್ಮಟವೊಂದರ ಕೃತಿರೂಪ). ಎಂ.ಎಸ್.ಶ್ರೀರಾಮ್ ಅವರೂ "ಕಥನ ಕುತೂಹಲ" ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಬರೆದ ಪುಸ್ತಕವು ಆಶಯದಲ್ಲಿ ಜೋಗಿಯವರ ಪುಸ್ತಕಕ್ಕೆ ಹತ್ತಿರದ್ದು. ಯಶವಂತ ಚಿತ್ತಾಲರ "ಸಾಹಿತ್ಯ, ಸೃಜನಶೀಲತೆ ಮತ್ತು ನಾನು" ಎಂಬ ಕೃತಿಯ ಬಗ್ಗೆ ಸಾಹಿತ್ಯಾಸಕ್ತರಿಗೆ ಗೊತ್ತೇ ಇದೆ. ಆಕಸ್ಮಿಕವೆಂಬಂತೆ ಜೋಗಿಯವರ ಕೃತಿಯ ಜೊತೆಜೊತೆಗೇ ಎಸ್ ದಿವಾಕರ್ ಸಂಪಾದಿಸಿರುವ, 'ಸಣ್ಣಕತೆ ಆಕೃತಿ ಮತ್ತು ಆಶಯ' ಎಂಬ ಪುಸ್ತಕವೂ ಲೋಕಾರ್ಪಣೆಯಾಯಿತು. ಇದರಲ್ಲಿ ಕನ್ನಡದ ಮತ್ತು ಜಗತ್ತಿನ ಬೇರೆ ಬೇರೆ ದೇಶಗಳ ಸಾಹಿತಿಗಳು ಸಣ್ಣಕಥೆಗಳ ಬಗ್ಗೆ ಬರೆದಿರುವ ಲೇಖನಗಳು, ಮಾತುಗಳು ಎಲ್ಲ ಇದೆ. "ಸಣ್ಣಕಥೆಗಳ ಬಗ್ಗೆ ಪ್ರೀತಿ" ಎಂದ ಕೂಡಲೇ ನೆನಪಾಗುವ ದಿವಾಕರ್ ಇಷ್ಟು ವರ್ಷಗಳಲ್ಲಿ ಈ ಕೃತಿಯನ್ನು ಯಾಕೆ ತರಲಿಲ್ಲ ಎಂಬುದೇ ಆಶ್ಚರ್ಯದ ವಿಷಯ! "ದಿವಾಕರ್ ಈ ಕೆಲಸವನ್ನು ಇಪ್ಪತ್ತೈದು ವರ್ಷಗಳ ಹಿಂದೆಯೇ ಮಾಡಿದ್ದರು" ಎಂಬಂಥ ಮಾತು ಹೇಳಿ ಹೇಳಿ ನನಗಂತೂ ಅಭ್ಯಾಸವಾಗಿದೆ! ಇದೆಲ್ಲದರ ಜೊತೆಗೆ ಜೋಗಿಯವರೇ ಸಂಪಾದಿಸಿದ, "ಕಥೆ ಚಿತ್ರಕಥೆ ಸಂಭಾಷಣೆ" ಎಂಬುದೂ ಇದೇ ವಿಷಯಕ್ಕೆ ಮೀಸಲಾಗಿರುವ ಪುಸ್ತಕ. ಅದರಲ್ಲಿ ನಾನು ಬರೆದಿರುವ ಒಂದು ಲೇಖನವೂ ಕಥೆಗಳ ಉದರ ಬಗೆಯುವ ಪ್ರಯತ್ನವೇ! ಅದು ಜೋಗಿಯಯವರಿಗೆ ಮೆಚ್ಚುಗೆಯಾದ ಲೇಖನವಾಗಿತ್ತು ಎಂಬುದು ನನಗೆ ತೃಪ್ತಿಯನ್ನು ಕೊಟ್ಟ ಸಂಗತಿ.
ಬರೆವಣಿಗೆಯ ಬಗ್ಗೆಯೇ ಬರೆದರೆ ಏನು ಮಜಾ ಇರುತ್ತದೆ? ಅದು ಪಾಠ ಹೇಳಿದಂತೆ ನೀರಸವಾಗಿರುವುದಿಲ್ಲವೇ ಅನ್ನಿಸಬಹುದು, ಹಾಗೇನೂ ಇಲ್ಲ. ಚೆನ್ನಾಗಿ ಬರೆಯಬಲ್ಲವರು ಇಂಥಲ್ಲಿಯೂ ತಮ್ಮ ಜಾದೂ ಪ್ರದರ್ಶನ ಮಾಡದೆ ಇರುವುದಿಲ್ಲ. ಉದಾಹರಣೆಗೆ, "ಒಂದು ಕಾದಂಬರಿಯಲ್ಲಿ ಮುಖ್ಯವಾಗಿ ಇರುವುದು ಕಥೆಯೇ" ಎಂಬ ನೀರಸವಾದ, ಪ್ರಾಥಮಿಕ ಮಟ್ಟದ ಒಂದು ವಿವರವನ್ನು, E. M. Forster ಅವರು Aspects of the Novelನಲ್ಲಿ ಎಷ್ಟು ಆಕರ್ಷಕವಾಗಿ, ಕಥೆ ಹೇಳಿದಂತೆಯೇ ಹೇಳುತ್ತಾರೆ ನೋಡಿ:
"Let us listen to three voices. If you ask one type of man, "What does a novel do?" he will reply placidly: "Well—I don't know—it seems a funny sort of question to ask—a novel's a novel—well, I don't know—I suppose it kind of tells a story, so to speak." He is quite good-tempered and vague, and probably driving a motor-bus at the same time and paying no more attention to literature than it merits.
Another man, whom I visualize as on a golf-course, will be aggressive and brisk. He will reply: "What does a novel do? Why, tell a story of course, and I've no use for it if it didn't. I like a story. Very bad taste on my part, no doubt, but I like a story. You can take your art, you can take your literature, you can take your music, but give me a good story. And I like a story to be a story, mind, and my wife's the same." And a third man he says in a sort of drooping regretful voice, "Yes—oh, dear, yes—the novel tells a story." I respect and admire the first speaker. I detest and fear the second. And the third is myself. Yes—oh, dear, yes—the novel tells a story."
"ನನಗೆ ಏನನ್ನು ಬರೆಯಬೇಕೆಂಬುದೇ ಗೊತ್ತಿರಲಿಲ್ಲ" ಎಂಬ ಸರಳವಾದ ಸಂಗತಿಯನ್ನು Lawrence Block ಹೇಗೆ ಬಣ್ಣಕಟ್ಟಿ ಮಜವಾಗಿ ಹೇಳುತ್ತಾರೆ ನೋಡಿ:
"When I was fifteen or sixteen years old and secure in the knowledge that I'd been born to be a writer, it didn't even occur to me to wonder what sort of thing I would write. I was at the time furiously busy reading my way through Great Twentieth Century Novels,
Steinbeck and Hemingway and Wolfe and Dos Passos and Fitzgerald and all their friends and relations, and it was ever so clear to me that I would in due course produce a Great Novel of my own.
I'd go to college first, naturally, where I might get a somewhat clearer idea of what constituted a Great Novel. Then I'd emerge from college into the Real World. There I would Live. (I wasn't quite sure what Capital-L Living entailed, but I figured there would be a touch of squalor in there somewhere, along with generous dollops of booze and sex.) All of this Living would ultimately constitute the Meaningful Experiences which I would eventually distill into any number of great books.
Now there's nothing necessarily wrong with this approach. Any number of important novels are produced in this approximate fashion, and the method has the added advantage that, should you write nothing at all, you'll at least have treated yourself to plenty of booze and sex along the way."
ಮತ್ತೆ ಜೋಗಿಯವರ ಕೃತಿಗೇ ಬರುವುದಾದರೆ, ಈ ಪುಸ್ತಕದ ಮೊದಲ ಭಾಗದಲ್ಲಿ ಕಥೆಗೆ ಸಂಬಂಧಿಸಿದ ಮೂವತ್ತಾರು ಅಂಶಗಳ ಬಗ್ಗೆ ಸಲಹೆಗಳು, ಟಿಪ್ಪಣಿಗಳು, ಮಾಹಿತಿ, ಅಭಿಪ್ರಾಯಗಳು, ಸೂಚನೆಗಳು ಎಲ್ಲ ಇವೆ. ಜೋಗಿ ಹೇಳಿದ್ದು, ಅವರಿವರು ಹೇಳಿದ್ದನ್ನು ಜೋಗಿ ಹೇಳಿದ್ದು, ಅವರಿವರು ಹೇಳಿದ್ದರ ಬಗ್ಗೆ ಜೋಗಿ ಹೇಳಿದ್ದು ಎಲ್ಲ ಸೇರಿ ಆಗಿರುವ ಈ ವಿಭಾಗದಲ್ಲಿ ಕಥಾಶಾಲೆಯ ಒಂದನೇ ತರಗತಿಯವರಿಗೆ ಹೇಳುವ ಸರಳ ವಿಚಾರಗಳೂ ಇವೆ, ಪ್ರೌಢಶಾಲೆಯ ಪಠ್ಯವೂ ಇದೆ ಎನ್ನಿಸಬಹುದೇನೋ. ಸರಳ ವಿಚಾರಗಳನ್ನು ಒಮ್ಮೆ ಓದಿದರೆ ಸಾಕು, ಮತ್ತೆ ಮತ್ತೆ ಮೆಲುಕು ಹಾಕೇಬಲ್ ಆದ ಒಳನೋಟ ನೀಡುವ ಸಾಲುಗಳೂ ಇಲ್ಲಿ ಸಾಕಷ್ಟು ಬಂದಿರುವುದಕ್ಕೆ ಚಪ್ಪಾಳೆ. ಇಲ್ಲಿನ ಎಲ್ಲ ವಿಚಾರಗಳು ಎಲ್ಲರಿಗೂ ಒಪ್ಪಿಗೆ ಆಗಬೇಕು ಅಂತೇನೂ ಇಲ್ಲ. ನನಗೂ ಕೆಲವು ವಿಚಾರಗಳು ಒಪ್ಪಿಗೆಯಾಗಲಿಲ್ಲ. ನನ್ನ ಪ್ರಕಾರ plot ಎಂಬುದೇ ಸಣ್ಣಕಥೆಯ ಜೀವಾಳ, ಆದರೆ ಈ ಕೃತಿಯಲ್ಲಿ ಪ್ಲಾಟಿಗೆ ಬರೀ ೪ ಪುಟಗಳನ್ನು ಕೊಡಲಾಗಿದೆ; ಅದೊಂದು ಇಲ್ಲದಿದ್ದರೆ ಉಳಿದದ್ದು ಏನಿದ್ದರೂ ಕಥೆಯಾಗುವುದಿಲ್ಲವಾದ್ದರಿಂದ ಅದಕ್ಕೆ ನಲವತ್ತು ಪುಟಗಳಾದರೂ ಸಿಗಬೇಕಾಗಿತ್ತು ಎನ್ನುವುದು ನನ್ನ ತಕರಾರು. ಎರಡನೇ ಭಾಗದಲ್ಲಿ 17 ಮಂದಿಯ 21 ಜಿಜ್ಞಾಸೆಗಳಿಗೆ ಚುಟುಕಾದ ಉತ್ತರಗಳು. ಇದು okayish ಆದ ಭಾಗ.
ಮೂರನೇ ಭಾಗದಲ್ಲಿ 13 ಕತೆಗಳು ಮತ್ತು ಅವುಗಳ ಬಗ್ಗೆ ಟಿಪ್ಪಣಿಗಳು. ಈ ವಿಭಾಗದಲ್ಲಿ ಜೋಗಿ ಸಹಜವಾಗಿಯೇ ಮಿಂಚಿದ್ದಾರೆ; ಕಥೆಗಳ ಆಯ್ಕೆ, ಅವುಗಳನ್ನು ವ್ಯಾಖ್ಯಾನ ಮಾಡುವ ವಿಧಾನ ಎಲ್ಲವೂ ಚಿತ್ತಾಕರ್ಷಕ. ಜೋಗಿಯವರು ಆಯ್ದ ಕಥೆಗಳ ಓದು ಮೊದಲ ಮೂವತ್ತೈದು ಓವರಿನಲ್ಲಿ ಒಂದೇ ವಿಕೆಟ್ಟು ಕಳಕೊಂಡು ಇನ್ನೂರ ಮೂವತ್ತು ರನ್ನು ಮಾಡಿಟ್ಟ ಹಾಗಾದರೆ, ಕೊನೆಗೆ ಬರುವ ಟಿಪ್ಪಣಿಗಳು ಕೊನೆಯ ಹದಿನೈದು ಓವರುಗಳ ಹೊಡಿಬಡಿಯ ಮಜಾ ಕೊಡುತ್ತವೆ. ಮರೆಯಬಾರದ ಹಳೆಯ ಕತೆಗಳು ಎಂಬ ಸಂಕಲನದಲ್ಲಿ ಗಿರಡ್ಡಿ ಗೋವಿಂದರಾಜು ಅವರು ಪ್ರತಿ ಕಥೆಗೂ ಅಭ್ಯಾಸಯೋಗ್ಯವಾದ ವಿಶ್ಲೇಷಣಾತ್ಮಕ ಟಿಪ್ಪಣಿ ಬರೆದದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲಿ ಮರೆಯಬಾರದ ಹಳೆಯ ಕತೆಗಳು; ಇಲ್ಲಿ ಜೋಗಿಯವರದು ಮರೆಯಬಾರದ ಹೊಸಟಿಪ್ಪಣಿಗಳು! ದಕ್ಷಿಣ ಕನ್ನಡದ ಶತಮಾನದ ಕಥೆಗಳು ಎಂಬ ಸಂಕಲನದಲ್ಲಿ ಜನಾರ್ದನ ಭಟ್ಟರೂ ಪ್ರತಿ ಕಥೆಗೂ ಟಿಪ್ಪಣಿ ಬರೆದಿದ್ದಾರೆ. ತೊಂಬತ್ತರ ದಶಕದಲ್ಲಿ ತುಷಾರ ಪತ್ರಿಕೆಯಲ್ಲಿ ಕನ್ನಡದ ಶ್ರೇಷ್ಠ ಕತೆಗಳನ್ನು ಪ್ರಕಟಿಸುತ್ತಿದ್ದರು, ಅಲ್ಲಿ ಪ್ರತಿ ಕಥೆಗೂ ಎಲ್ ಎಸ್ ಶೇಷಗಿರಿ ರಾವ್ ಅವರ ಹತ್ತಿರ ಒಂದು ಟಿಪ್ಪಣಿ ಬರೆಸುತ್ತಿದ್ದರು. ಟಿ.ಪಿ. ಅಶೋಕ ಅವರು 'ಕಥನ ಪ್ರೀತಿ' ಮತ್ತು 'ಕಥನ ಕಾರಣ' ಎಂಬ ಎರಡು ಕೃತಿಗಳಲ್ಲಿ ಸುಮಾರು ನೂರಾ ಎಪ್ಪತ್ತು ಕನ್ನಡ ಸಣ್ಣಕತೆಗಳ ವಿಶ್ಲೇಷಣೆ ಮಾಡಿದ್ದಾರೆ. ಇವೆಲ್ಲ ಪೂರಕ ಓದಿಗೆ ದಕ್ಕಬಹುದಾದವು.
ಜೋಗಿಯವರು ದೈತ್ಯ ಬರೆಹಗಾರರು, ರಾಶಿಗಟ್ಟಲೆ ಬರೆಯುತ್ತಾರೆ ಎಂಬ ಖ್ಯಾತಿಯೇನೋ ಅವರಿಗೆ ಸಿಕ್ಕಿದೆ; ಆದರೆ ಹಲವರು ಗಮನಿಸಿರದ ವಿಚಾರ ಏನಪ್ಪಾ ಎಂದರೆ ಜೋಗಿಯವರು ಹಳತು, ಹೊಸತು ಎಲ್ಲವನ್ನೂ ಓದಿರುವ ಒಬ್ಬ ರಾಕ್ಷಸಶಕ್ತಿಯ ಓದುಗರು ಎಂಬುದು. ಸದ್ಯಕ್ಕೆ ಅವರು ಓದಿರುವಷ್ಟು ಪುಸ್ತಕಗಳನ್ನು ಓದಿರುವವರ ಸಂಖ್ಯೆಯು ಅವರು ಬರೆದಿರುವ ಪುಸ್ತಕಗಳ ಸಂಖ್ಯೆಗಿಂತಲೂ ಎಷ್ಟೋ ಕಡಮೆ ಇದ್ದೀತು ಎಂದು ನನ್ನ ಅಭಿಪ್ರಾಯ! ಹೀಗಾಗಿ, ಈ ಪುಸ್ತಕದಲ್ಲಿ ಯಾವುದೇ ವಿಷಯ ಬಂದರೂ ಅದಕ್ಕೆ ಒಂದು ಉದಾಹರಣೆಯನ್ನು ಕನ್ನಡದ ಸಣ್ಣಕಥೆಗಳಿಂದ ಸಲೀಸಾಗಿಯೇ ಹೆಕ್ಕಿ ಕೊಡಬಲ್ಲ ಸಿದ್ಧಿಯು ಪುಸ್ತಕವನ್ನು ಚಂದಗಾಣಿಸಿದೆ. ತಮಾಷೆಯೆಂದರೆ ಇದು ಜೋಗಿಯವರ ಜೊತೆಗಿನ ಒಡನಾಟದಲ್ಲಿ ನಾನು ಕಂಡದ್ದಕ್ಕೆ ಸ್ವಲ್ಪ ವಿರುದ್ಧವೇ ಆಗುತ್ತದೆ; ವೈಯಕ್ತಿಕವಾಗಿ ನಾನು ನೋಡಿದ ಮಟ್ಟಿಗೆ ಅವರ ನೆನಪಿನ ಶಕ್ತಿ ಅಷ್ಟಕ್ಕಷ್ಟೇ ಎಂಬುದು ನನ್ನ ಅನುಭವದಿಂದ ಬಂದಿರುವ ಗ್ರಹಿಕೆ; ಆದರೆ ನೆನಪಿನ ಶಕ್ತಿ ಅದ್ಭುತವಾಗಿ ಇಲ್ಲದವರು ಹೀಗೆ ಯಾವುದಕ್ಕೆ ಬೇಕಾದರೂ ಕನ್ನಡ ಸಾಹಿತ್ಯದಿಂದ ಒಂದು ಉದಾಹರಣೆಯನ್ನು ಎತ್ತಿ ಕೊಡಲು ಹೇಗೆ ಸಾಧ್ಯ? ಯಾವುದು ಎಲ್ಲಿದೆ, ಯಾವ್ಯಾವ ಕಥೆಯಲ್ಲಿ ಏನೇನಿದೆ ಎಂದು ನೆನಪಿರಬೇಕಲ್ಲ! ಸ್ಪ್ಲಿಟ್ ಪರ್ಸನಾಲಿಟಿ ಇರಬಹುದೇ ? ಸಾಹಿತ್ಯಪ್ರಿಯ ಜೋಗಿಯದು ಅದ್ಭುತವಾದ ಜ್ಞಾಪಕಶಕ್ತಿ; ವೈಯಕ್ತಿಕ ಜೀವನದ ಜೋಗಿ ಮರೆಗುಳಿ ಪ್ರೊಫೆಸರು. ಹೀಗಿರಬಹುದೇ?
ಇಂಥ ತಲೆಹರಟೆಯ ಪ್ರಶ್ನೆಗಳನ್ನು ಬದಿಗಿಟ್ಟು ಕನ್ನಡದಲ್ಲಿ ಇಂಥ ಕೃತಿಯನ್ನು ರಚಿಸುವ ಸಾಹಸಕ್ಕೆ ಕೈಹಾಕಿದ್ದಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆ.

No comments:

Post a Comment