Sunday 15 May 2016

ಚಿತ್ರೋತ್ಸವದ ನೆನಪುಗಳು

ಚಿತ್ರೋತ್ಸವ! ಮತ್ತೊಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮುಗಿಯಿತು. ಚಿತ್ರೋತ್ಸವ ಅಂದರೆ ಸಾವಿರ ನೆನಪುಗಳ ಮೆರವಣಿಗೆ. ದೇಶ-ವಿದೇಶಗಳ ಚಲನ ಚಿತ್ರಗಳು ನಮ್ಮ ಮನೆಬಾಗಿಲಿಗೇ ಬಂದು ಹುಲಿವೇಷ ಕುಣಿದ ಹಾಗೆ ಇದು. ನಸು ಬೆಳಕಿಗೆ ಎದ್ದು ಚಿತ್ರೋತ್ಸವಕ್ಕೆ ಹೊರಟರೆ ಮನಸು ಜಿಂಕೆ. ಈ ಒಕ್ಕಣೆ ನೋಡಿ ಸಿನೆಮಾಗಳ ಬಗ್ಗೆ ಬರೆಯುತ್ತೇನೆ ಅಂದುಕೊಳ್ಳಬೇಡಿ. ನಾನು ಹೇಳ ಹೊರಟದ್ದು ಚಿತ್ರರಂಗದ ಕೆಲವು ವ್ಯಕ್ತಿಗಳ ಬಗ್ಗೆ - ಚಿತ್ರೋತ್ಸವದಲ್ಲಿ ಮತ್ತು ಅದರ ಆಸುಪಾಸಿನಲ್ಲಿ ಕಂಡಂತೆ. ಒಟ್ಟಾರೆಯಾಗಿ ಏನನ್ನೂ ಹೇಳುವ ಉದ್ದೇಶ ಇಲ್ಲದೆ ಬಿಡಿ ನೆನಪುಗಳನ್ನು ಒಟ್ರಾಶಿ ಪೋಣಿಸಿದ ಹಾಗೆ ಒಂದಷ್ಟು ಹೇಳುತ್ತೇನೆ.
ಅದು 2008. ಆಗಿನ್ನೂ ಸುಚಿತ್ರ ಫಿಲಂ ಸೊಸೈಟಿಯವರೇ ಈ ಸಿನಿಮಾ ಹಬ್ಬವನ್ನು ಮಾಡುತ್ತಿದ್ದರು.
ಪೂರ್ವಭಾವಿಯಾಗಿ Appreciating Cinematography ಅಂತ ಒಂದು ವರ್ಕ್ ಶಾಪ್ ಮಾಡಿದ್ದರು. ಜಿ ಎಸ್ ಭಾಸ್ಕರ್ ಅದರ ಕೇಂದ್ರ ಬಿಂದು. ಈ ಭಾಸ್ಕರ್ ರಮೇಶ್ ಅರವಿಂದರ ಆಕ್ಸಿಡೆಂಟ್ ಚಿತ್ರದ ಛಾಯಾಗ್ರಾಹಕರು, ನಾಗೇಶ್ ಕುಕನೂರನ ಹೈದರಾಬಾದ್ ಬ್ಲೂಸ್ ಚಿತ್ರಕ್ಕೆ ಕ್ಯಾಮೆರಾ ಹಿಡಿದವರು, ಸಾಯಿ ಪರಾಂಜಪೆ, ಕಾಸರವಳ್ಳಿ ಜೊತೆಯಲ್ಲ ಇರುವವರು/ಇದ್ದವರು. ನಾಗಮಂಡಲಕ್ಕೂ ಇವರದ್ದೇ ಛಾಯಾಗ್ರಹಣ. ಒಮ್ಮೆ ನೋಡಿದರೆ ಪಕ್ಕಕ್ಕೆ ಮರೆಯಲಾರೆವು ಅನ್ನಿಸುವಂತ ವ್ಯಕ್ತಿ. ಬುದ್ಧಿಜೀವಿ ಸ್ಟೈಲ್ ನ ಉದ್ದನೆಯ ಬಿಳೀ ಗಡ್ಡ, ತೆಳ್ಳನೆಯ ದೇಹ. ನಲ್ಲಿ ಬಿಟ್ಟು ಮರೆತರೆ ಬಕೆಟ್ ತುಂಬಿ ಉಕ್ಕಿ ಹರಿಯುವ ಹಾಗೆ ಇವರ ಮುಖದಲ್ಲಿ ನಗೆ ತುಂಬಿ ಚೆಲ್ಲುತ್ತಾ ಇರುತ್ತದೆ. ಇದು ನಿಜವಾ ತೋರಿಕೆಯಾ ಅನ್ನಿಸುವಷ್ಟು ವಿನಯ ಸಂಪನ್ನರು, ಮಗುವಿನಂತೆ ಪುಟಿಯುವ ಉತ್ಸಾಹದ ಬೊಂಬೆ ಇವರು. ಜೊತೆಗೆ ಮಲಯಾಳಂನ ಸನ್ನಿ ಜೋಸೆಫ್ ಕೂಡ ಇದ್ದರು (ಅಮೇರಿಕಾ ಅಮೇರಿಕಾಗೆ ಇವರದ್ದೇ ಛಾಯಾಗ್ರಹಣ).
ನನ್ನಂತಹ ಎಳೇ ನಿಂಬೇ ಕಾಯಿಗಳೂ ಇದ್ದರು, ಈಗಾಗಲೇ ಸಿನಿಮಾ ಮಾಡಿದವರೂ ಬಂದಿದ್ದರು. Cinematography ಅಂದರೆ ಕ್ಯಾಮೆರಾದ ಬಗ್ಗೆ ಲೆನ್ಸ್ ಗಳ ಬಗ್ಗೆ ಮಾತಾಡ್ತಾರೆ ಅಂದುಕೊಂಡಿದ್ದೆ. ಆದರೆ ಮೂರು ದಿನವೂ ಮಾತಾಡಿದ್ದು ಬೆಳಕಿನ ಬಗ್ಗೆಯೇ. ಛಾಯಾಗ್ರಹಣ ಅಂದರೆ ನೆರಳು ಬೆಳಕಿನ ಆಟ, ಬೆಳಕೇ ಸರ್ವಸ್ವ, ನಾವು ರಾತ್ರಿ ಮಾತ್ರ ಬೆಳಕಿನ ಚಿಂತೆ ಮಾಡಿದರೆ ಒಬ್ಬ ಛಾಯಾಗ್ರಾಹಕನಿಗೆ ಹಗಲಲ್ಲಿಯೂ ಬೆಳಕಿನದ್ದೇ ಯೋಚನೆ. ಆತನದ್ದು ಯಾವಾಗಲೂ Painting with light ಅನ್ನಬಹುದಾದ ಕೆಲಸ ಅಂತ ಗೊತ್ತಾಯಿತು. ಇಂಗ್ಲಿಷಿನ ಸಿನಿಮಾಟೋಗ್ರಫಿ ಅನ್ನುವ ಪದಕ್ಕಿಂತ ನಮ್ಮ "ಛಾಯಾಗ್ರಹಣ"ವೇ ಹೆಚ್ಚು ಅರ್ಥಪೂರ್ಣ ಅಂತ ಭಾಸ್ಕರ್ ಹೇಳಿದ್ದು ಈಗಲೂ ನೆನಪಿದೆ. ಛಾಯಾಗ್ರಹಣ ಅಂದರೆ capturing the shadows, ಒಬ್ಬ cinematographer ಮಾಡುವ ಕೆಲಸಕ್ಕೆ ಇದಕ್ಕಿಂತ ಸೊಗಸಾದ ವಿವರಣೆ ಇಲ್ಲ ಅನ್ನುವುದು ಭಾಸ್ಕರ್ ಅವರ ಅಂಬೋಣ. ಗಾಡ್ ಫಾದರ್ ಚಿತ್ರದಲ್ಲಿ ಮಾಡಿದ ಲೈಟಿಂಗ್ ಅನ್ನು ನಮ್ಮ ಎದುರೇ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದೂ ಆಯಿತು. ಅಂತೂ ಛಾಯಾಗ್ರಹಣದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದರು ಅನ್ನಬಹುದು!!
ಕಾರಂಜಿ ಚಿತ್ರ ಮಾಡಿದ್ದ, ಈಗ "ಜಾಲಿ ಬಾರು ಮತ್ತು ಪೋಲಿ ಗೆಳೆಯರು" ಮಾಡುತ್ತಿರುವ ಶ್ರೀಧರ್ ಕೂಡ ಇದ್ದರು. ಒಳ್ಳೆ ಸಾಹಿತ್ಯ ಮತ್ತು ಸಿನಿಮಾ ಅಭಿರುಚಿ ಇರುವ ಶ್ರೀಧರ್ ಜೊತೆ ಸಾಕಷ್ಟು ಹರಟಿದ್ದೆ ಅಂತ ನೆನಪು. ನಟ ಅನಿರುದ್ಧ ಕೂಡ ಬಂದಿದ್ದರು. ಇವರ ಬಗ್ಗೆ ಒಂದಷ್ಟು ಹೇಳಲೇ ಬೇಕು. ಹೀರೋ ಆಗಿದ್ದವರು, ವಿಷ್ಣುವರ್ಧನ್ ಅಳಿಯ, ಆಗ ಏನೋ ಟೀವಿ ಶೋ ನಿರೂಪಣೆಯೂ ಮಾಡ್ತಾ ಇದ್ದರು. ಆದರೂ ಸ್ವಲ್ಪವೂ ಹಮ್ಮು ಬಿಮ್ಮು ಇಲ್ಲದೆ ತಮಾಷೆ ಮಾಡುತ್ತಾ ಹಾಯಾಗಿ ಇದ್ದರು. ನಾನು ಸಂಕೋಚದ ಪ್ರಾಣಿ, ಹೇಗೆ ಮಾತಾಡಿಸುವುದು ಅಂತ ಗೊತ್ತಾಗಲಿಲ್ಲ. ನಾನು ಮತ್ತು ಶ್ರೀಧರ್ ಏನೋ ಪಟ್ಟಾಂಗ ಹೊಡೀತಾ ಇದ್ದಾಗ ಅಲ್ಲಿಗೇ ಬಂದರು ಅನಿರುದ್ಧ, ದನಿ ಸೇರಿಸಿದರು. ಆಮೇಲೆ ಊಟಕ್ಕೆ ನಿಂತಾಗ ಅವರೇ ಬಂದು, ಕೈ ಚಾಚಿ, "ಹಾಯ್, ನಾನು ಅನಿರುಧ್! " ಅಂತ ಅವರೇ ಬಂದು ಪರಿಚಯ ಬೇರೆ ಮಾಡಿಕೊಂಡರು! ಆಮೇಲೆ ಹರಟೆ ಸರಾಗವಾಯಿತು. ಲೂಸಿಯಾದಲ್ಲಿ ಮಾತ್ರೆ ಮಾರುವವನಾಗಿದ್ದ, ಮನಸಾರೆಯಲ್ಲಿ ಡಾಕ್ಟರಾಗಿದ್ದ ಬಾಲಾಜಿ ಮನೋಹರ್ ಕೂಡ ಇದ್ದರು, ಆತನೋ ಬಲು ತಮಾಷೆ ಮನುಷ್ಯ. ನೋಡಿದರೆ ಗಂಭೀರ ಮುಖ ಮುದ್ರೆ, ಮಾಡಿದ್ದೂ ವಿಲನ್ ಪಾತ್ರಗಳು, ಆದರೆ ಕಾಲು ಎಳೆಯುತ್ತಲೇ ಇರುವ, ನಿಮಿಷಕ್ಕೊಂದು ಜೋಕು ಸಿಡಿಸುವ ಭಯಂಕರ ತಮಾಷೆ ಆಸಾಮಿ ಈ ಬಾಲಾಜಿ. ಸನ್ನಿ ಜೋಸೆಫ್ ರಿಗೆ ಹಾಯ್ ಹೇಳಲಿಕ್ಕೆಂದೇ ನಟ ರಮೇಶ್ ಬಂದಿದ್ದರು, ಛಾಯಾಗ್ರಾಹಕ ಎಚ್ ಎಂ ರಾಮಚಂದ್ರ ಅತಿಥಿಯಾಗಿ ಭೇಟಿ ಕೊಟ್ಟಿದ್ದರು, Tarkovskyಯ Stalker ಚಿತ್ರದ ಬಗ್ಗೆ ಮಾತಾಡಿದರು. ಎಲ್ಲಕ್ಕೆ ಕಲಶ ಇಟ್ಟ ಹಾಗೆ ಪ್ಯಾಸಾ, ಕಾಗಝ್ ಕೇ ಫೂಲ್, ಪಾಕೀಜಾ ಖ್ಯಾತಿಯ ವಿ ಕೆ ಮೂರ್ತಿ ಬಂದು ಎರಡು ಮಾತಾಡಿದ್ದರು.
ಆಮೇಲೆ ಚಿತ್ರೋತ್ಸವ ಶುರು ಆಗಿಯೇ ಬಿಟ್ಟಿತು, ಶಾಂತಿ ನಗರದ ವಿಷನ್ ಸಿನೆಮಾಸ್ ನಲ್ಲಿ ಮತ್ತೆ ಇನ್ನೊಂದೆರಡು ಕಡೆ. ಅಪ್ಪಿ ತಪ್ಪಿ ಒಳ್ಳೆ ಚಿತ್ರ ಕಣ್ಣಿಗೆ ಬಿದ್ದರೆ ಕಷ್ಟ ಅಂತ ಕನ್ನಡ ಚಿತ್ರರಂಗದವರು ವಿಷನ್ ಸಿನೆಮಾಸ್ನ ದಿಕ್ಕಿನಲ್ಲಿ ತಲೆ ಹಾಕಿಯೂ ಮಲಗಲಿಲ್ಲ! ಸರಿಯಾಗಿ ಬಂದವರು ಅನಿರುದ್ಧ, ದತ್ತಣ್ಣ ಇಬ್ಬರೇ. ಶುಭಾ ಪೂಂಜಾ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡಿದ್ದರು, ಬೆಂಜ್ ಕಾರೊಂದು ಭರ್ರನೆ ಬಂದು ಅದರಿಂದ ನಾಗತಿಹಳ್ಳಿ ಮತ್ತು ವಿಷ್ಣುವರ್ಧನ್ ಇಳಿದಿದ್ದರು(ಒಂದು ಶೋ ಇಗೆ). ಮನದೀಪ್ ರಾಯ್ ಇದ್ದರು. ಒಂದು ಶೋಗೆ ಅನಂತಮೂರ್ತಿ ಕೂತಿದ್ದರು.
ನಾನು ಮತ್ತು ಗೆಳೆಯನೊಬ್ಬ ಫ್ರೆಂಚ್ ಚಿತ್ರಗಳು, ಟರ್ಕಿಷ್ ಸಿನಿಮಾ ಇವುಗಳ ಬಗ್ಗೆ ಎಲ್ಲ ವಾಚಾಮಗೋಚರ ಚಚ್ಚುತ್ತ ನಿಂತಿದ್ದೆವು. ಒಬ್ಬ ವ್ಯಕ್ತಿ ನಮ್ಮನ್ನೇ ಒಂದು ಐದು ನಿಮಿಷ ಗಮನಿಸಿ, ಆಮೇಲೆ ಬಂದು ಕೈ ಕುಲುಕಿ ಮಾತಿಗೆ ಸೇರಿಕೊಂಡರು. "ನಾನು 'ರಾಕಿ' ಅನ್ನೋ ಪಿಚ್ಚರಲ್ಲಿ ಮಾಡಿದೀನಿ" ಅಂತ ಹೇಳಿಕೊಂಡರು. "ಓ ಹೌದಾ" ಅಂದೆವು . Butch Cassidy and the Sundance kid ಚಿತ್ರದ ಬಗ್ಗೆ, ನಾನು ತುಂಬಾ ಇಷ್ಟ ಪಡುವ Theo Angelopoulos(ಗ್ರೀಸ್ ದೇಶದವ)ನ ಚಿತ್ರದ ಬಗ್ಗೆ ಎಲ್ಲ ಹತ್ತು ನಿಮಿಷ ಹರಟಿದ್ದಾಯಿತು. ಅಂದ ಹಾಗೆ ಆ ವ್ಯಕ್ತಿ ಯಾರು ಅಂತ ಹೇಳಲೇ ಇಲ್ಲ, ಆಗ ನಮ್ಮ ಜೊತೆ ಮಾತಾಡಿದ ವ್ಯಕ್ತಿ ಇವತ್ತು ದುಶ್ಮನ್ ಕಹಾ ಹೈ ಅಂತ ಹುಡುಕುತ್ತಿರುವ, ಸಾಕಷ್ಟು ಯಶ ಕಂಡಿರುವ ಯಶ್! ಆಗಲೇ ಹೀರೋ ಆಗಿದ್ದ ಅವರನ್ನ ನಾವು ಗುರುತಿಸಿರಲಿಲ್ಲ ಅಂತ ಅವರೇ ಬಂದು ಪರಿಚಯ ಮಾಡಿಕೊಂಡಿದ್ರಾ ? ಹೇಳುವುದು ಕಷ್ಟ.
ಆ ಶಾಂತಿ ನಗರದಲ್ಲಿ ಒಂದು ಸರಿಕಟ್ಟು ಹೋಟೆಲ್ ಇರಲಿಲ್ಲ, ಇರುವ ಸಾಧಾರಣ ಹೋಟೆಲಿಗೂ ದೂರ ನಡೆಯಬೇಕು. ಒಂದು ದಿನ ನಾನು, ಅನಿರುದ್ಧ ಮತ್ತು ಇನ್ನೊಬ್ಬರು ಒಂದು ಚಿತ್ರ ಮುಗಿಸಿ ಬಂದೆವು. "ಊಟಕ್ಕೆ ಭಾರೀ ಕಷ್ಟ" ಅಂತೇನೋ ಗೊಣಗಿದೆ. "ಸುಮ್ನೆ, ಯಾಕೆ ಕಷ್ಟ ಪಡ್ತೀರಾ, ನಮ್ ಜೊತೆ ಊಟ ಮಾಡಿ ಶರತ್ " ಅನ್ನಬೇಕೆ ಅನಿರುದ್ಧ? ಹೇಗೆ ಅಂದೆ. ಬನ್ನಿ ಅಂದರು. ಅವರ ಕಾರ್ ಹತ್ತಿದೆವು. ಅವರು ಮನೆಯಿಂದ ತಂದಿದ್ದ ಬುತ್ತಿ ಇತ್ತು. ಆ ಬುತ್ತಿ ಊಟದಲ್ಲೇ ಅರ್ಧ ನನಗೂ ಕೊಟ್ಟರು !! ಚಿತ್ರರಂಗ ಅಂದರೆ ಬರೀ ಸುಳ್ಳರು, ದಗಲ್ಬಾಜಿಗಳು, ತಲೆ ಹಿಡುಕರು ಇರ್ತಾರೆ ಅಂದುಕೊಂಡಿದ್ದ ನನಗೆ ಇಷ್ಟು ಒಳ್ಳೆಯವರು, ಸೌಜನ್ಯಶೀಲರು, ಸಜ್ಜನರು ಇಲ್ಲಿ ಇದ್ದಾರಲ್ಲ ಅಂತ ಆಶ್ಚರ್ಯ. ಯಾರು ಆಟೋ ಗ್ರಾಫ್ ಕೇಳಿದರೂ, ಫೋಟೋ ತೆಗೆಸಿಕೊಳ್ಳಲು ನಿಂತರೂ ಅವರದ್ದು ನಗುನಗು ತ್ತಾ ಮಾತು, ವ್ಯವಹಾರ.
ಅನಿರುದ್ಧ ಶೋಕಿಗೆ ಚಿತ್ರರಂಗಕ್ಕೆ ಬಂದವರಲ್ಲ. ಸಿನಿಮಾದ ಬಗ್ಗೆ ಅವರಿಗೆ ಮೊಗೆದಷ್ಟೂ ಮುಗಿಯದ ಪ್ರೀತಿ ಇದೆ. ದಿನಕ್ಕೆ ಫಿಲಂ ಆದ್ರೂ ನೋಡ್ತೀನಿ ಅಂದಿದ್ದರು. ನನ್ನಂತಹ ಕಿರಿಯರಿಂದಲೂ ಕೇಳಿ ತಿಳಿಯುವ ಉತ್ಸಾಹ. ಯಾವಾಗ ಮಾತಾಡಿದರೂ, "ಒಂದಷ್ಟು ಫಿಲಂಸ್ recommend ಮಾಡಿ" ಅನ್ನುತ್ತಿದ್ದರು, ಯಾವುದು ನೋಡಬೇಕು, ಒಳ್ಳೇದು ಯಾವುದಿದೆ ಅಂತ ಕೇಳುತ್ತಿದ್ದರು . ಅವರು ಹಿಚ್ಕಾಕ್ ನ ಅಷ್ಟೂ ಚಿತ್ರಗಳನ್ನು ಗುಡ್ಡೆ ಹಾಕಿ ನೋಡಿದ್ದರು, ನಲುವತ್ತರ ದಶಕದ ಹಾಲಿವುಡ್ ಸಿನಿಮಾಗಳು ಅವರಿಗೆ ಇಷ್ಟ. Billy Wilder, Ernst Lubitsch, John Ford, ಫ್ರಾಂಕ್ ಕಾಪ್ರಾ ರ ಬಗ್ಗೆಯೆಲ್ಲಾ ಅವರು ಕೇಳಿದಾಗ ಕೊರೆದಿದ್ದೆ. White Heat, Out of the past , Laura, The Maltese Falcon, The Big Heat, The third man ತರದ ಚಿತ್ರಗಳನ್ನೆಲ್ಲ ನೋಡಿ ಅಂತ ಶಿಫಾರಸು ಮಾಡಿದ್ದೆ. ಆಮೇಲಾಮೇಲೆ ಸಂಪರ್ಕ ತಪ್ಪಿ ಹೋಯಿತು.
ಆಮೇಲೆ 2012ರ ಕ್ರಿಸ್ಮಸ್ ಗೆ ಮತ್ತೆ ಚಿತ್ರೋತ್ಸವ ಬಂದಿತ್ತು. ನಾನು ಬೇರೆ ಕಾರಣಗಳಿಗೆ ಬೇಜಾರಲ್ಲಿ ಇದ್ದೆ. ಚಿತ್ರೋತ್ಸವಕ್ಕೆ ಅಂತ ಹೊರಟರೆ ಅಲ್ಲಿ ಕಿಕ್ಕಿರಿದ ಜನ ಸಂದಣಿ. ಪಾಸು ಇಲ್ಲ. ಕೇಳಿದರೆ ಭಿಕ್ಷುಕರನ್ನು ಓಡಿಸುವ ತರದ ಮಾತು. ಬೇಸತ್ತು ಹೋಯಿತು. ನನ್ನ ಗೆಳೆಯನೊಬ್ಬ ನನ್ನನ್ನು ನೋಡಿ ಅಯ್ಯೋ ಪಾಪ ಅಂತ ಅವನ ಪಾಸ್ ಕೊಡ್ತೇನೆ ಅಂದ. ಬೇಡ ಅಂದೆ. ಆಮೇಲೆ ಹಾಗೇ ಸುಮ್ಮನೆ ಅನಿರುದ್ಧರ ಹತ್ತಿರ ಹೇಳಿದೆ, "ನೋಡಿ ಹೀಗಾಯಿತು" ಅಂತ. ಅವರದು ಎಂದಿನಂತೆ ನಗು. "ಅಯ್ಯೋ, ನೀವು ಅಗತ್ಯ ಸಿನೆಮಾ ನೋಡಬೇಕು, ನನ್ನತ್ರ ಪಾಸ್ ಇದೆ ನಾನು ಕೊಡ್ತೀನಿ" ಅಂದರು. ಅವರು ಕೊಟ್ಟ VIP ಪಾಸಿನಲ್ಲಿಯೇ ಆ ಸರ್ತಿ ಚಿತ್ರಗಳನ್ನ ನೋಡಿದ್ದಾಯಿತು.
ಇಷ್ಟು ಸಿನೆಮಾ ನೋಡುವ, ಕಲಾಪ್ರೀತಿ ಇರುವ ಅನಿರುದ್ಧ ನಿರ್ದೇಶನ ಮಾಡಬೇಕಿತ್ತು ಅಂತ ರಮೇಶ್ ಹೇಳಿದ್ದರಂತೆ, ಸುಮನಾ ಕಿತ್ತೂರು ಕೂಡ ಅದನ್ನೇ ಹೇಳಿದ್ದನ್ನು ನಾನು ನೋಡಿದ್ದೆ. ಸ್ವತಹ ಅವರೇ ನಿರ್ದೇಶನ ಮಾಡಬೇಕು ಅಂತಿದ್ದರು ಕೂಡ, It Happened One Night ತರದ್ದು ಒಂದು ಕತೆ ಇದೆ ಅಂತಲೂ ಹೇಳಿದ್ದರು. ಅದು ಯಾಕೋ ಇನ್ನೂ ಆಗಿಲ್ಲ.(ಮೇಲೆ ಹೇಳಿದ) ಭಾಸ್ಕರ್ ಸರ್ ಜೊತೆ ಕೆಲಸ ಮಾಡಬೇಕು ಅಂತಿದ್ದರು(ಇಜ್ಜೋಡು ಚಿತ್ರದಲ್ಲಿ ಅದು ಸಾಧ್ಯವಾಯಿತು). ಅವರು ಅಭಯ್ ಡಿಯೋಲ್, ಅಮೀರ್ ಖಾನ್, ರಕ್ಷಿತ್ ಶೆಟ್ಟಿ ಇವರುಗಳಂತೆ ಸ್ಕ್ರಿಪ್ಟು ಓದುವ, ವಿಭಿನ್ನ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುವ ನಟರಾಗಬೇಕಿತ್ತು ಅಂತ ನನಗನ್ನಿಸಿದೆ. ಈಗ ಮಾತಾಡಿ ಮೂರುವರೆ ವರ್ಷಗಳಾಯಿತು.
2012ರಲ್ಲಿ ಜಯತೀರ್ಥ, ನಾಗೇಂದ್ರ ಪ್ರಸಾದ್ ಎಲ್ಲ ಕಾಣಿಸಿಕೊಂಡಿದ್ದರು. ನಾಗಾಭರಣ, ಕಾಸರವಳ್ಳಿ, ಶೇಷಾದ್ರಿ ಎಲ್ಲ ಇರಲೇಬೇಕು, ಇದ್ದರು. ಇಷ್ಟು ಜನ ಬಿಟ್ಟರೆ ಚಿತ್ರರಂಗದ ಮಂದಿ ಈ ಕಡೆ ಸುಳಿಯುವ ಉತ್ಸಾಹ ತೋರಿಸಲಿಲ್ಲ. ನಮ್ಮ ಸ್ಟಾರ್ಗಳು, ದೊಡ್ಡ ನಿರ್ದೇಶಕರು ಇಲ್ಲಿಗೆ ಬಂದು, ಯೋಚನೆಗಳನ್ನು ಹಿಗ್ಗಿಸುವಂತ ಹೊಸ ಚಿತ್ರಗಳನ್ನು ನೋಡುವ, ಕಲಿಯುವ ಲಕ್ಷಣಗಳು ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಯಾವುದಾದರೂ ಹೊಸ ಚಿತ್ರಕ್ಕೆ ಐಡಿಯಾ ಸಿಕ್ಕಬಹುದು ಅನ್ನುವ ಕಾರಣಕ್ಕೂ ಬರುವುದಿಲ್ಲ. ಅವರದ್ದೇನಿದರೂ ತೆಲುಗು ರಿಮೇಕೋ, ಮಸಾಲೆ ಚಿತ್ರವೋ ಮಾಡಿ ನಂಬರ್ ಒನ್ ಅನ್ನಿಸಿಕೊಳ್ಳುವ ಹಪಾಹಪಿ.

No comments:

Post a Comment