Wednesday 22 March 2017

ಅಡಿಗ ಬೇಂದ್ರೆ ಪದ್ಯಗಳ ಅಣಕು

ಇವತ್ತು ಸುಶೀಲ್ ಸಂದೀಪ್ ಬರೆದ ಭೈರಪ್ಪಾನುಕರಣೆ ಓದಿ ನನಗೂ ಸ್ಫೂರ್ತಿ ಉಕ್ಕುಕ್ಕಿ ಬಂತು. ಫೇಸ್ಬುಕ್ಕಿನ ಬಗ್ಗೆ ಒಂದಷ್ಟು ಜನ ಖ್ಯಾತನಾಮರು ಕವಿತೆಗಳನ್ನು ಬರೆದರೆ ಹೇಗೆ ಬರೆದಾರು ಅನ್ನುವ ತಲೆಹರಟೆಯ ಕಲ್ಪನೆ. ಅರ್ಜೆಂಟಿನಲ್ಲಿ ಗೀಚಿದ್ದರಿಂದ ನಾನು ಅಂದುಕೊಂಡ ಹಾಗೆ ಬರಲಿಲ್ಲ,ಹೊಟ್ಟೆಗೆ ಹಾಕಿಕೊಳ್ಳಿ.
ಮೊದಲಿಗೆ ಬೇಂದ್ರೆ ಅಜ್ಜ:
ಫೇಸ್ಬುಕ್ಕು ಬರಿಯಾಟs
ಎಲ್ಲಾ ಮಾಯೆಯ ಮಾಟs
ಹುಡುಗಿಯರ ಫೋಟೇನ ಮಾಟೇನs
ಚಿಂತಕರ ಥಾಟೇನs
ಹುಚ್ಚು ಹುಡುಗರ ಹುಡುಗಾಟೇನs
ಶೇರು ಮಾಡ್ತಾರಾs ಕಾಲ ಕಳೀತಾರs
meme ಕೋಟುಗಳs ತೇರೇ ಎಳೀತಾರs
ಇದ್ದವ್ರ ಬರೀತಾರ
ಇಲ್ದವ್ರು ಬರ್ತಾರ
ಹೋದವ್ರ ಬರ್ತಾರ
ಇದ್ದವ್ರ ಹೋಗ್ತಾರ ಬರ್ತಾರ
ಇದ್ದದ್ದು ಇಲ್ಲದ್ಯಾವ್ದೊ ಯಣ್ಣಾ
ಮಾತು ಹೆಂಗಾರ ಹೊಮ್ಮುತಾವ |
ಒಮ್ಮೊಮ್ಮಿ ಬಂಗಾರ ಚಿಮ್ಮತಾವ |
ಹ್ಯಾಂಗಾರೆ ಕುಣಿಕುಣಿದು
ಲೈಕೊತ್ತಿ ದಣಿದಣಿದು
ನಾನೂನು ಏಸೊಂದು ನಕ್ಕೇನs
ಈ ಫೇಸುಗಳ ಮಾಯೆಗೆ ಸಿಕ್ಕೇನs !

ಈಗ ಗೋಪಾಲ ಕೃಷ್ಣ ಅಡಿಗರ ಸರದಿ :
ಅನ್ಯರು ಜರೆದುದನೆ ನಾ ತೆರೆದು
ಬರೆದು ಕೊರೆದು ಬಿನ್ನಗಾಗಿದೆ ಮನವು.
ನನ್ನ ನ್ಯೂಸು ಫೀಡಿನ ತುಂಬೆಲ್ಲ
ಏನಾದರೂ ಮಾಡುತಿರುವ ತಮ್ಮಂದಿರು
ಅದೇ ಹಳಸಲು memeಗಳ ಬಾಲವಾಡಿಸುವ ಪ್ರೇತಾತ್ಮಗಳ ಗೆರಿಲ್ಲಾಪಡೆಯವರು
ತಮ್ಮ ಪರಾಕು ಪಂಪನ್ನು ತಾವೇ ಒತ್ತಿ ಒತ್ತಿ
ಸಪ್ತ ಸಾಗರದಾಚೆಯೆಲ್ಲೋ ಇರುವ ಸುಪ್ತ ಸಾಗರದಲ್ಲೂ
ಚರಂಡಿ ನೀರ ತುಂಬಿಸುವವರು
ಲೈಕುಗಳ ಡೊಗ್ಗುಸಲಾಮು ತೇಲಿಸುವವರು
ಈ ನರಕದಿಂದ ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಫಲ ಬಿಟ್ಟ ಪೋಸ್ಟುಗಳ ವೃಂದಾವನಕೆ
ಕರೆಯುವ ಮೋಹನ ಮುರಲಿಗೆ ಕಾಯುತ್ತ
ಕೀ ಬೋರ್ಡನ್ನುಜ್ಜುತ್ತ ಕೂತಿದ್ದೇನೆ ಕತ್ತಲೊಳಗೆ

ತದನಂತರ ಯೋಗರಾಜ ಭಟ್ಟರಿಂದ ಕಡೆಯ ಕವಿತೆ :
ಫೇಸು ಬುಕ್ಕಿನ ತುಂಬೆಲ್ಲ
ಕಾಪಿ ಪೇಸ್ಟು ಮಾಡುತ್ತಾ
ಪೇಸ್ಟು ಹಾಕದೇ ಕಿರಿಯುವ ಪೋಲಿ ಹಲ್ಲುಗಳು
ತಲೆ ಬಾಚ್ಕಳ್ದೆ ಲೈಕು ಬಾಚ್ ಕೊಳೋಕೆ ಆಯ್ತದೆ
ಅಂತಾ ಹಳೇ ಡವ್ವಿನ ಹೊಸಾ ಫೋಟೋಗಳಲ್ಲಿ
ಅನ್ಯಾಯವಾಗಿ ಕಳೆದುಹೋದ ಹುಡುಗರು
ಹೊಸ ಕುಕ್ಕರಿನ ತುಂಬೆಲ್ಲ ಹಳೆ ಪಾತ್ರೆ ಇಟ್ಟರೂ ಬೇಯದ ಬೇಳೆಗಳು
ಪೋಸ್ಟು ಓದಿ ಉಗಿಯುವ ವೈಫು
ಲೈಕೇ ಬೀಳದ ಪೋಸ್ಟಿನಂಗೆ ಲೈಫು

No comments:

Post a Comment