Monday, 7 January 2019

Title troubles

The word "Ayogya" has been used 486.5 times in a recently released 2.5 hour long film" Stated a research team from Indian Statistical Institute while addressing the press conference in KG road. 'The film thereby topples the record set by "Dana kayonu"' they informed.

"This is probably the hardest effort in the history of cinema to justify the title", the research team said. As per the findings that our team could lay its hands on, Dana Kayonu had used a software technique to randomly insert the words "Naanu Dana Kayonu" once every two minutes in the screenplay.

The team explained that the onus is on the audience to make sure that these directors do not come across titles like,"The Englishman Who Went Up a Hill But Came Down a Mountain" or "Night of the Day of the Dawn of the Son of the Bride of the Return of the Terror"

Sources have relevealed that another ambitious project that attempts to count the number of times "Alright Mundak hogona" is used in a certain News channel is facing acute shortages of staff because of the sheer enormity of the task at hand.

#SulSuddiBureau

By Sharath Bhat Seraje

ವಂದೇ ಮಾತರಂ, ಒಂದು ಪದ್ಯ, ಐದು ಅನುವಾದಗಳು - ಒಂದು ಸಂವಾದ

ವಂದೇ ಮಾತರಂ! ಒಂದು ಪದ್ಯ, ಐದು ಅನುವಾದಗಳು! ಒಂದೇ ಭಾವವನ್ನು ೫ ಜನ, "ಇವಳ ಸೊಬಗನವಳು ತೊಟ್ಟು,ನೋಡ ಬಯಸಿದೆ; ಅವಳ ತೊಡಿಗೆ ಇವಳಿಗಿಟ್ಟು ಹಾಡ ಬಯಸಿದೆ" ಎಂಬಂತೆ ಬೇರೆ ಬೇರೆ ನುಡಿಗಳ ಉಡಿಗೆಗಳನ್ನು ಉಡಿಸಿ ನಡೆಸಿದ್ದನ್ನು ನೋಡುವ, ಅದರ ಒನಪು ಒಯ್ಯಾರಗಳು ಬದಲಾಗುವುದನ್ನು ಕಾಣುವ ಸುಖಕ್ಕಾಗಿ ಇಲ್ಲಿ ಅವನ್ನು ಕೊಟ್ಟಿದ್ದೇನೆ. ಮೂಲವನ್ನು ಕಮೆಂಟಿನಲ್ಲಿ ಕೊಟ್ಟಿದ್ದೇನೆ
ಮೊದಲ ಅನುವಾದ ಶಿಕಾರಿಪುರ ಹರಿಹರೇಶ್ವರ ಅವರದ್ದು. ಬಹುಶ್ರುತರು ಅಂತ ಹೆಸರು ಮಾಡಿದ್ದ, ಅಮೆರಿಕಾದಲ್ಲಿ ಕೂತು ಕನ್ನಡದ ಕೆಲಸ ಮಾಡಿದ್ದ ಪಂಡಿತರಿವರು. ಮೂಲದ ಯಥಾವತ್ ಅನುವಾದ ಇವರದು:
ಒಳ್ಳೆ ನೀರುಳ್ಳವಳೇ,
ಒಳ್ಳೇ ಹಣ್ಣುಳ್ಳವಳೇ,
ಮಲಯ ಮಾರುತದಿಂದ ತುಂಬ ತಂಪುಗೊಂಡವಳೇ,
ಬಳ್ಳಿ ಗಿಡಮರಗಳಿಂ ಕಪ್ಪು ಕಪ್ಪಾದವಳೇ-
ಓ ತಾಯಿ, ಭಾರತಿಯೆ, ನಿನಗೆ ನಮನ!
ಅಚ್ಚ ಬೆಳದಿಂಗಳು ಬಿದ್ದು
ನೀ ಪುಲಕಗೊಂಡಿರುವೆ ಇರುಳಿನಲ್ಲಿ ;
ಶೋಭಿಸುತ್ತಿಹೆ ನೀನು
ಮರಗಿಡದ ಎದೆಯಿಂದ ಹೂವುಗಳು ಅರಳಿ;
ಒಳ್ಳೆ ನಗೆಯುಳ್ಳವಳೇ,
ಸವಿ ಮಾತನಾಡುವಳೇ,
ಎಲ್ಲಾ ಸುಖ ನೀಡುತ್ತ,
ಕೇಳಿದ್ದ ಕೊಡುವವಳೇ-
ಓ ತಾಯೆ, ಭಾರತಿಯೇ, ನಿನಗೆ ನಮನ

ಎರಡನೆಯದ್ದು ಅರಬಿಂದೋ ಅವರದ್ದು. ಕೀಟ್ಸ್,ಷೆಲ್ಲಿ ಮುಂತಾದವರನ್ನು ನೆನಪಿಸುವ, ಮೂಲದ ಪ್ರೇರಣೆ ಇರುವ ಪ್ರತಿಸೃಷ್ಟಿ ಅನ್ನಬಹುದಾದ ಅನುವಾದ:
Mother, I bow to thee!
Rich with thy hurrying streams,
bright with orchard gleams,
Cool with thy winds of delight,
Dark fields waving Mother of might,
Mother free.
Glory of moonlight dreams,
Over thy branches and lordly streams,
Clad in thy blossoming trees,
Mother, giver of ease
Laughing low and sweet!
Mother I kiss thy feet,
Speaker sweet and low!
Mother, to thee I bow.

ಮೂರನೆಯದ್ದು Keshab Bhattarai ಅನ್ನುವವರದ್ದು, ಮೂಲದಲ್ಲಿ ಇರುವಂತೆಯೇ ಮರುಸೃಷ್ಟಿ ಮಾಡುವ ರೀತಿ ಇವರದ್ದು :
Salutations (to you), oh Mother!
(You are blessed with) Richness in water
resources, plenty of fruits (and forest
resources), flushed with cool air breezing
from Malaya mountains;
Green with rice plants o ! our motherland
Salutations (to you), oh Mother!
Where nights are made joyous by sparkling light
very beautiful by buds-flowers- and rows of trees
Always looking pleasant, sweet speaking
giver of happiness and riches
o! our motherland!
Salutations (to you), oh Mother!

ಇನ್ನೊಂದು ಅನುವಾದ ಮಂಜುನಾಥ ಕೊಳ್ಳೇಗಾಲ ಅವರದ್ದು. ಭಾಷೆ, ವ್ಯಾಕರಣ, ಹಳಗನ್ನಡ ಮುಂತಾದ ವಿಷಯಗಳಲ್ಲಿ ನಿರ್ದುಷ್ಟ ನಿರ್ಮಲವೂ, ಅಕ್ಲಿಷ್ಟ ಸುಂದರವೂ ಆದ ಶೈಲಿ ಯಲ್ಲಿ ಫೇಸ್ಬುಕ್ಕಿನ ಗ್ರೂಪುಗಳಲ್ಲಿ ಬರೆಯುತ್ತ ಬಂದಿರುವ ವಿದ್ವಾಂಸರಿವರು. ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಬಂದಿರುವ ಅಚ್ಚಗನ್ನಡದ ಅನುವಾದ ಇದು, ಅರಬಿಂದೋ ಅವರಿಗೆ ಹೆಚ್ಚು ಹತ್ತಿರ ಇದೆನ್ನಬಹುದು:

ತಾಯೇ ಬಾಗುವೆ
ಸವಿನೀರ್, ತನಿವಣ್, ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...

ಮುಂಜಾವದ ಬಿಳಿ ಸೋನೆಯ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ
ತಾಯೇ ಬಾಗುವೆ...

ಅರಬಿಂದೋ ಅವರ ಸಾಲಿಗೆ ಸೇರಬಹುದಾದ ಮತ್ತೊಂದು ಅನುವಾದ ರಂಜಿತ್ ಭಿಡೆ ಅವರದ್ದು :
ಹರಿವ ತಿಳಿ ಜಲವಾಗಿ ಬಿರಿವ ಸಿಹಿ ಫಲವಾಗಿ
ಗಿರಿಪಂಕ್ತಿಯಲಿ ಸುಳಿವ ತಂಗಾಳಿಯಾಗಿ
ತರುಲತೆಗಳಲಿ ತುಂಬಿರುವ ಹಚ್ಚಹಸಿರಾಗಿ
ಚಿರಕಾಲ ಜನಮನದಿ ಭಾವೈಕ್ಯವಾಗಿ
ನೆಲೆಸಿರುವ ಓ ತಾಯೇ ಭಾರತಿ,
ನಿನಗಿದೋ ವಂದನೆಗಳಾರತಿ
ಬಿಳಿಯ ಬೆಳದಿಂಗಳಲಿ ಹೊಳೆವಂತೆ ಬೆಳೆದಿರುಳು,
ಇಬ್ಬನಿಯನಿಳಿಸಿರಿಸಿ ನಲಿವಂತೆ ಹೂಪಕಳೆ,
ಎಳೆ ಹಸುಳೆ ನಗುವಂತೆ, ತಿಳಿಯಾದ ಮಾತುಗಳ
ಮಳೆಯಂತೆ, ಹರುಷವನು ಹಂಚುತಿರುವವಳೇ
ನೀನೆ ಸುಖದಾಯಿ ವರದಾಯಿ
ನಮನಗಳನೊಪ್ಪಿಸಿಕೊ ತಾಯಿ

ಸಂವಾದ 

ಭಾಸ್ಕರ ನರಸಿಂಹಯ್ಯ:  ಮಂಜುನಾಥ ಕೊಳ್ಳೇಗಾಲ ಅವರೇ ನಿಮ್ಮ ರಚನೆ ಸುಂದರವಾಗಿದೆ.
ಸುಜಲ, ಸುಫಲ ವೆಂಬುದು 'ಹೇರಳ' ಎಂಬ ಅರ್ಥ ಹೊಂದಿದಂತಿದೆ; ಅಷ್ಟರಮಟ್ಟಿಗೆ 'ಸವಿನೀರ್', 'ತನಿವಣ್' ಪದಗಳು ಬದಲಾದರೆ ನಿಮ್ಮ ಅನುವಾದ ನನ್ನ ತಿಳಿವಿನ ಮಟ್ಟಿಗೆ ಮೂಲದ ಓಘವನ್ನು, Brevity ಯನ್ನು ಉಳಿಸಿಕೊಂಡಿರುವ ಅರವಿಂದರ ಅನುವಾದದಷ್ಟೇ ಸುಂದರ ಮೋಹಕ.
'ಶಾಮಲ' ವನ್ನು Dark ಎಂದು ಅರ್ಥೈಸದೆ 'ಸಿರಿಹಸಿರು' ದಟ್ಟ ಎಂಬ ಅರ್ಥ ಬರುವಂತೆ ಅನುವಾದಿಸಿ ಮೂಲ ಆಶಯವನ್ನು ಉಳಿಸಿದ್ದೀರಿ.
'ತಂಬೆಲರು' ಪದವು ಸುಂದರ ಆಯ್ಕೆ.
ಮಂಜುನಾಥ ಕೊಳ್ಳೇಗಾಲ : ಧನ್ಯವಾದಗಳು. ಭಾಷಾಂತರದ ಮಿತಿಯೇ ಇದು. ಸಂಸ್ಕೃತದಲ್ಲಿ ಸು ಉಪಸರ್ಗಕ್ಕೆ ಬಹುವಿಶಾಲ ಅರ್ಥವಿದೆ. ಆದರೆ ಇಂಗ್ಲಿಷಿನಲ್ಲಾಗಲೀ ಕನ್ನಡದಲ್ಲಾಗಲೀ ಅಷ್ಟು ವಿಶಾಲ ಅರ್ಥ ಸೂಚಿಸುವ ಒಂದು ಉಪಸರ್ಗವೋ ಪದವೋ ಸಿಗುವುದು ದುಸ್ತರ. ಸು ಎನ್ನುವುದಕ್ಕೆ ಅಷ್ಟೇ ವಿಶಾಲವಾದ ತಟಸ್ಥವಾದ ಒಳ್ಳೆಯ good ಎಂಬ ವಿಶೇಷಣಗಳು ಕನ್ನಡ ಮತ್ತು ಇಂಗ್ಲಿಷಿನಲ್ಲಿ ಇವೆಯಾದರೂ, ಬಳಕೆಯಲ್ಲಿ ಅವು ತೀರ ಸಪ್ಪೆ, ಏನೂ ಹೇಳಿದಂತಾಗುವುದಿಲ್ಲ. ಒಳ್ನೀರ್ ಒಳ್ವಣ್ ಎಂಬ ಅನುವಾದ ಮೂಲದ ನಾದವನ್ನು ಹಿಡಿಯದೇ ಕಿವಿಗೆ ಕಟುವಾಗುತ್ತದೆ. ಹೀಗಾಗಿ ಸುಜಲಾಂ ಎಂಬಲ್ಲಿ ಸುಫಲಾಂ ಎಂಬಲ್ಲಿ ಸು ಸೂಚಿಸುವ ಮುಖ್ಯ ಆಯಾಮವನ್ನಷ್ಟೇ ತೆಗೆದುಕೊಂಡು ಅನುವಾದವು ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ನೀರಿನ ’ಒಳ್ಳೆಯ’ತನದ ಮುಖ್ಯಾಂಶ ಯಾವುದು? ಸವಿ. ಹಣ್ಣಿನ ’ಒಳ್ಳೆಯ’ತನದ ಮುಖ್ಯಾಂಶ ಯಾವುದು? ತನಿಪು - ತಾಜಾತನ, ರುಚಿ. ಹೀಗಾಗಿ ಸವಿನೀರ್ ತನಿವಣ್ ಎಂದು ಅನುವಾದಿಸಬೇಕಾಗಿದ್ದು.

ಅರವಿಂದರಂಥವರೂ ಸಸ್ಯಶ್ಯಾಮಲೆಯನ್ನು dark fields ಎಂದು ಅನುವಾದಿಸಿದ್ದು ಅಚ್ಚರಿಯನ್ನುಂಟುಮಾಡಿತು. ಜೊತೆಗೆ, ಜಲ, ಫಲ, ಮಲಯಜಶೀತಲತೆ, ಸಸ್ಯಶ್ಯಾಮಲತೆ ಇವೆಲ್ಲಾ ಆ ತಾಯಿಯ ವ್ಯಕ್ತಿತ್ವದ ಭಾಗಗಳೇ ಎಂಬ ಜೀವಂತ ಚಿತ್ರಣವು ಮೂಲದಲ್ಲಿದ್ದರೆ, ಅರವಿಂದರ ಅನುವಾದದಲ್ಲಿ ಅವೆಲ್ಲಾ hurrying streams, orchard gleams, winds of delight, dark fields ಮೊದಲಾಗಿ ಕೇವಲ ಭೌತಿಕ ವಸ್ತುಗಳಾಗಿ ಬಂದಿವೆ - ಅದು ಮೂಲದ ಆಶಯವಲ್ಲ. ಅಲ್ಲದೇ, ಸು ಎಂಬುದನ್ನು hurrying ಎಂದೂ gleam ಎಂದೂ ಅನುವಾದಿಸಿದ್ದಾರೆ. ಆದರೆ ಹರಿವಾಗಲೀ ಹೊಳಪಾಗಲಿ ನೀರು ಹಣ್ಣುಗಳ ಮುಖ್ಯಾಂಶಗಳಲ್ಲ. ಇನ್ನು ಮಾರುತಗಳಲ್ಲಿ ಮಲಯಮಾರುತಕ್ಕೆ ಬಹಳ ವಿಶಿಷ್ಟಸ್ಥಾನವಿದೆ. ಸಮುದ್ರದ ಮೇಲಿನಿಂದಲೂ ತಂಗಾಳಿ ಬೀಸಬಹುದು, ಅದು delightಅನ್ನು ಸಹಾ ತರುತ್ತದೆ, ಆದರೆ ಮಲಯಮಾರುತ ಸ್ಪಷ್ಟವಾಗಿಯೇ ನಮೂದಿಸಬೇಕಾದ್ದು. Cool with winds of delights ಎನ್ನುವಲ್ಲಿ ಮಲಯಮಾರುತದ ಸುಗಂಧ ಶೀತಲತೆ ಕಾಣುವುದಿಲ್ಲ. ಶರತ್ ಸೇರಾಜೆಯವರು ಹೇಳುವಂತೆ, ಇದು ಮೂಲದ ಸ್ಫೂರ್ತಿಯಿಂದ ಬಂದ ಪ್ರತಿಸೃಷ್ಟಿಯಿರಬಹುದು, ಅನುವಾದ/ಭಾವಾನುವಾದವೆನ್ನಲಾಗದು.

ಸುಮ್ಮನೇ ಕುತೂಹಲಕ್ಕಾಗಿ ಇದೊಂದು ಪ್ರಯತ್ನ, ಇಂಗ್ಲಿಷಿನಲ್ಲಿ. ಆದರೆ ಇದು ಮೂಲದ brevityಗೆ ಎಷ್ಟುಮಾತ್ರವೂ ಹತ್ತಿರವಲ್ಲ, ಪ್ರಾಸಪದಗಳೂ perfectಆಗಿ ಪ್ರಾಸಪದಗಳಲ್ಲ, ಆದರೂ ಮೂಲದ ಭಾವವನ್ನು ಸಾಧ್ಯವಾದಷ್ಟು ಹಿಡಿದಿಡುವ ಪ್ರಯತ್ನವಿದು

To thee I bow, O mother

Rich with sweet streams, fruits so fresh,
And cool with fragrant mountain breeze,
And green, O mother, so rich and lush
To thee I bow, O mother

O thou, with nights tingled by moonlight bright
Adorned with woods blooming,
With those soft smiles and words so sweet
Comforting with bounties

To thee I bow, O mother

ಶರತ್ ಸೇರಾಜೆ : ನಾನು ಇಂತಹಾ ಸೂಕ್ಷ್ಮಗಳ ಚರ್ಚೆಗಾಗಿಯೇ ಕಾಯುತ್ತಿದ್ದೆ !

ಭಾಷಾಂತರದ ಮಿತಿಯ ಬಗ್ಗೆ ಇನ್ನಷ್ಟು ಹೇಳಬಹುದು. ಕನ್ನಡದಂತಹಾ ಭಾಷೆಯ ಪದಗಳನ್ನು ಸಾವಿರಾರು ವರ್ಷಗಳಿಂದ ಸಾಹಿತಿಗಳು ಬಳಸಿ ಬಳಸಿ, ಅವೊಂದು ರೀತಿಯಲ್ಲಿ ಶ್ರುತಿ ಮಾಡಿಟ್ಟ ವೀಣೆಯಂತಾಗಿರುತ್ತವೆ ಅಂತ ಶತಾವಧಾನಿ ಗಣೇಶರು ಒಂದು ಸಲ ಹೇಳಿದ್ದರು. ಹೀಗಾಗಿ ವಿಕ್ರಮೋರ್ವಶೀಯವನ್ನು The King and the Nymph ಎಂದು ಅನುವಾದಿಸಿದರೆ ನಮಗೆ ಕಷ್ಟವಾಗಬಹುದು, ಊರ್ವಶಿ ಪುರೂರವರ ಕಥೆ ಓದಿದವರಿಗೆ, ಯಕ್ಷಗಾನದ ಊರ್ವಶಿಯನ್ನು ನೋಡಿದವರಿಗೆ, "ಇವಳೊಳ್ಳೆ ರಂಭೆ ಊರ್ವಶಿಯರನ್ನು ಮೀರಿಸುವಂತಿದ್ದಾಳೆ" ಎಂಬ ತರದ ಮಾತುಗಳನ್ನು ಕೇಳಿದವರಿಗೆ ಊರ್ವಶಿಯನ್ನು Nymph ಅಂದರೆ ಒಪ್ಪಿಕೊಳ್ಳಲು ಕಷ್ಟವಾಗಬಹುದು. ಇನ್ನು "ವಿಕ್ರಮ" ಅನ್ನುವ ಪದಕ್ಕಿರುವ ಫೋರ್ಸ್ ಕಿಂಗ್ ಅನ್ನುವ ಸಪ್ಪೆ ಶಬ್ದಕ್ಕೆಲ್ಲಿದೆ ಅನ್ನಿಸಬಹುದು.

ಅಡಿಗರ ಭೂತ ಪದ್ಯವನ್ನು ಇಂಗ್ಲೀಷಿನಲ್ಲಿ ಹೇಳುವುದಾದರೆ, ಭೂತ ಅಂತ ಕನ್ನಡದಲ್ಲಿ ಹೇಳಿದ್ದನ್ನು Ghosts and pasts ಅಂತ ಅಷ್ಟುದ್ದ ಮಾಡಿ ಹೇಳಿದರೆ ಸ್ವಾರಸ್ಯ ಕೆಡಬಹುದು, ಇನ್ನು ಭೂತಾರಾಧನೆಯಿರುವ ದಕ್ಷಿಣ ಕನ್ನಡದವರಿಗೆ ಭೂತ ಎಂಬ ಪದವು ಬೇರೆ ಅರ್ಥಗಳನ್ನು ಉದ್ದೀಪಿಸಬಹುದು. ಇದೇ ಕಾರಣಕ್ಕೆ winds of delightನಲ್ಲಿ ಸಿಕ್ಕದ delight ಕನ್ನಡಿಗರಿಗೆ ತೆಂಕಣಗಾಳಿಯಲ್ಲಿ ಸಿಗಬಹುದು (ಕನ್ನಡಿಗರಲ್ಲೂ ಪಂಜೆ ಮಂಗೇಶರಾಯರ ತೆಂಕಣಗಾಳಿಯ ಆರ್ಭಟವನ್ನು ಸವಿದವರಿಗೆ ಆ ಗಾಳಿಯು ಬೀಸುವ ರೀತಿ ಇನ್ನೊಂದು ತರ ಕಾಣಬಹುದು, ಪಂಪನ ತೆಂಕಣಗಾಳಿ ಸೋಂಕಿದವರಿಗೆ ಅದು ಮಲಯಾಮಾರುತದಷ್ಟೇ ತಂಪೆನ್ನಿಸಬಹುದು). ಮಂಜುನಾಥರ ಪದ್ಯದ "ತನಿವಣ್ಣು" ಮನೋರಮೆಯು ಮುದ್ದಣನಿಗೆ ತನಿವಣ್ಣನ್ನು ತಿನಲಿತ್ತು, ಕೆನೆವಾಲಂ ಕುಡಿವೊಡಿತ್ತು ಉಪಚರಿಸಿದ್ದನ್ನು ನೆನಪಿಸಿತು. ಈ ನೆನಪು ಬ್ರಿಟಿಷರಿಗೆ ಬರಲಾರದು, ಹಾಗಾಗಿ ತನಿವಣ್ಣನ್ನು ಹಾಗೆಯೇ ಇಂಗ್ಲೀಷಿಗೆ ತಂದರೆ ಆ ರುಚಿ ಬಂದೀತೆಂದು ಹೇಳಲಾಗದು. ತಂಬೆಲರೂ ಹಾಗೆಯೇ.

ಸುಜಲಾಂ,ಸುಫಲಾಂ,ಮಲಯಜ,ಶೀತಲಾಂ ಎಂಬಲ್ಲೆಲ್ಲ ಲಕಾರದ ಅನುಪ್ರಾಸವಿದೆ, ಅದೂ ಭಾಷಾಂತರದಲ್ಲಿ ಬರಲಾರದು. ಇನ್ನು ಸುಜಲಾಂ,ಸುಫಲಾಂ,ಶೀತಲಾಂ
,ಶಾಮಲಾಂ,ಮಾತರಂ,ಯಾಮಿನೀಂ,ಭಾಷಿಣೀಂ,ಸುಖದಾಂ,ವರದಾಂ ಮುಂತಾದ ಪದಗಳ ವರ್ಣಸಂಯೋಜನೆ ಹೆಚ್ಚು ಕಮ್ಮಿ ಒಂದೇ ರೀತಿ ಇರುವುದರಿಂದ ಒಂದು ರೀತಿಯ ನಾದ, musicality ಬಂದಿದೆ (ಸುಹಾಸಿನೀಂ ಎಂಬಲ್ಲೂ "ಸು" ಎಂಬ ಅಕ್ಷರವನ್ನು ತೇಲಿಸಿ, ಅದನ್ನು "ಹಾಸಿನೀಂ" ಎಂಬಂತೆ ಹಾಡುತ್ತಾರೆ). ಸರಿಯಾಗಿ ಛಂದಸ್ಸಿನ ನಿಯಮಗಳ ಪ್ರಕಾರ ಮಾತ್ರೆಗಳ ಲೆಕ್ಕ ಮಾಡಿದರೆ ವ್ಯತ್ಯಾಸ ಇರಬಹುದಾದರೂ, ಹಾಡುವಾಗ ಕಿವಿಗೆ ಇವುಗಳೆಲ್ಲ ಒಂದು ರೀತಿ ಸಮರೂಪದ ಪದಗಳಂತೆ ಕೇಳಿಸುತ್ತವೆ, ಈ ಪದಗಳಲ್ಲಿನ ದೀರ್ಘಗಳೂ ಹಾಡುವವರಿಗೆ ಎಳೆದೆಳೆದು ಗಾಯನಪ್ರತಿಭೆಯನ್ನು ತೋರಿಸಲು ಒಳ್ಳೆಯ ಅವಕಾಶ ಕೊಡುವಂತಿವೆ ! ಇವೆಲ್ಲ ಅನುವಾದದಲ್ಲಿ ಬರಬೇಕೆಂದು ನಿರೀಕ್ಷೆ ಮಾಡಲಾಗದು.

ಇನ್ನು ಸಸ್ಯಶ್ಯಾಮಲೆಯನ್ನು dark fields ಎಂದು ಅನುವಾದಿಸಿದ್ದರ ಬಗ್ಗೆ ನನಗನ್ನಿಸಿದ್ದು ಹೀಗೆ: ಇಲ್ಲಿ (ಮೂಲದಲ್ಲಿ)ಬಂಗಾಳ = ಭಾರತಮಾತೆ = ದುರ್ಗಾದೇವಿ(ಮೂಲದಲ್ಲಿ) = ಪ್ರಕೃತಿಮಾತೆ ಎಂಬಂತೆ ಸಂಯೋಜನೆ ಇದೆ. ಸುಹಾಸಿನೀಂ ಸುಮಧುರ ಭಾಷಿಣೀಂ ಎಂಬುವೆಲ್ಲ ದುರ್ಗೆಯ ಗುಣಗಳು ಎಂಬಂತೆ ಹೇಳಲಾಗಿದೆ. ಅವಳ ಗುಣಗಳಿಗೆ ಅನ್ವಯವಾಗುವಂತೆ ಪ್ರಕೃತಿವರ್ಣನೆಯನ್ನೂ ಮಾಡಲಾಗಿದೆ. ಹೀಗಾಗಿ ಶ್ಯಾಮಲೆ ಎಂಬುದು ದುರ್ಗೆಯ ಬಣ್ಣ ಎಂಬುದೇ ಇಲ್ಲಿ ಪ್ರಧಾನವಾದ ಅರ್ಥ. ಮೂಲದಲ್ಲಿ ಕೊನೆಗೆ ಈ ಸಾಲುಗಳು ಬರುತ್ತವೆ :
ವಂದೇ ಮಾತರಂ
ಶ್ಯಾಮಲಾಂ ಸರಲಾಂ
ಸುಸ್ಮಿತಾಂ ಭೂಷಿತಾಂ
ಧರಣೀಮ್ ಭರಣೀಮ್ (धरणीं भरणीं ಎಂಬುದನ್ನು ಹೀಗೆ ಟೈಪ್ ಮಾಡಿದ್ದೇನೆ)
ಮಾತರಂ

ಇಲ್ಲಿ "ಸಸ್ಯ" ಎಂಬ ಪದವಿಲ್ಲದೆ ಶ್ಯಾಮಲಾಂ ಎಂಬ ಪದ ಮಾತ್ರ ಬಂದಿದೆ, ಇದು ದುರ್ಗೆಯನ್ನು ಕುರಿತು ಹೇಳಿರುವ ಸಾಲುಗಳಾದ್ದರಿಂದ ಇಲ್ಲಿ ಶ್ಯಾಮಲ ಎಂಬುದು ಅವಳ ಬಣ್ಣವೇ ಆಗಿರಬೇಕು. ಕೃಷ್ಣನನ್ನು ಶ್ಯಾಮ ಎನ್ನುವುದು, ಗಣಪತಿಯನ್ನು ಶ್ಯಾಮಲವರ್ಣದವನೆಂದು ಹೇಳುವುದು, ಪಂಪ ಕವಿ ತನ್ನನ್ನು 'ಕದಳೀಗರ್ಭ ಶ್ಯಾಮಂ' ಎಂದು ಹೇಳಿಕೊಳ್ಳುವುದು, ಇವನ್ನೆಲ್ಲ ನೆನಪಿಸಿಕೊಳ್ಳಬಹುದು. ಆದರೆ ಸಸ್ಯಶ್ಯಾಮಲ ಎಂದಾಗ ಅಲ್ಲಿ ಹಸುರಿದ್ದರೇ ಉಚಿತ (ಇಲ್ಲಿ ಬಂಕಿಮಚಂದ್ರರು ತೂಕಡಿಸಿರಬಹುದೇ?), Dark Forest ಅನ್ನುವಂತೆ ಕಾಡನ್ನು ಬೇಕಾದರೆ dark ಅನ್ನಬಹುದು, ಮರದ ಕಾಂಡ/ತೊಗಟೆಗಳನ್ನು ಬೇಕಾದರೆ dark ಅನ್ನಬಹುದು, ಆದರೆ ಸಸ್ಯಸಂಪತ್ತನ್ನು ಹೇಳುವಾಗ ಹಸುರನ್ನೇ ಎತ್ತಿ ಆಡುವುದು ರೂಢಿ, ಇನ್ನು Dark fields ಎಂದರೆ ಹೇಗೋ !
ಇಲ್ಲೂ ಒಂದು ವಿಶೇಷವೆಂದರೆ ನಮ್ಮಲ್ಲಿ Dark Forest ಅನ್ನುವುದಕ್ಕೆ ಸಂವಾದಿಯಾದ ಪ್ರಯೋಗಗಳು ಇರಬಹುದಾದರೂ ಅವು ಅಷ್ಟಾಗಿ ಚಾಲ್ತಿಯಲ್ಲಿಲ್ಲ, ನಮ್ಮದು ಏನಿದ್ದರೂ ದಟ್ಟವಾದ ಕಾಡು, ಅದು ದಟ್ಟವಾಗಿರುವುದೇ ಅದರ darkness ಇಗೆ ಕಾರಣ ಎಂದು ಲಕ್ಷಣಾರ್ಥವನ್ನು ಬೇಕಾದರೆ ಹೇಳಬಹುದು !

ಮಂಜುನಾಥ ಕೊಳ್ಳೇಗಾಲ : "ತನಿವಣ್ಣು" ಮನೋರಮೆಯು ಮುದ್ದಣನಿಗೆ ತನಿವಣ್ಣನ್ನು ತಿನಲಿತ್ತು, ಕೆನೆವಾಲಂ ಕುಡಿವೊಡಿತ್ತು ಉಪಚರಿಸಿದ್ದನ್ನು ನೆನಪಿಸಿತು. ಈ ನೆನಪು ಬ್ರಿಟಿಷರಿಗೆ ಬರಲಾರದು, ಹಾಗಾಗಿ ತನಿವಣ್ಣನ್ನು ಹಾಗೆಯೇ ಇಂಗ್ಲೀಷಿಗೆ ತಂದರೆ ಆ ರುಚಿ ಬಂದೀತೆಂದು ಹೇಳಲಾಗದು. ತಂಬೆಲರೂ ಹಾಗೆಯೇ - ಈ ಮಾತಿನ ಮೂಲಕ ಅನುವಾದದ ಮೂಲಭೂತಸಮಸ್ಯೆಯೊಂದನ್ನು ತಾವು ಎತ್ತಿದಿರಿ. ನಿಜ. ಅನುವಾದವೊಂದು ಯಶಸ್ವಿಯಾಗಬೇಕಾದರೆ ಅಲ್ಲಿ ಕೆಲಸ ಮಾಡುವುದು ಒಂದು ನಿಘಂಟು ಮಾತ್ರವಲ್ಲ, ಆ ಪದ್ಯವೋ ಗದ್ಯವೋ ಹುಟ್ಟಿದ ನೆಲದ ಇಡೀ ವ್ಯಕ್ತಿತ್ವ ಅದರಲ್ಲಿ ತೊಡಗಿಕೊಳ್ಳುತ್ತದೆ. ಪದವೊಂದನ್ನು ಅದರೆಲ್ಲ ಸ್ಮೃತಿಗಳೊಂದಿಗೆ ಇನ್ನೊಂದು ಭಾಷೆಗೆ ತರುವುದು ನಿಜವಾದ ಸವಾಲು - ಎಷ್ಟೋ ಬಾರಿ ಅಸಾಧ್ಯವಾದ ಸವಾಲು. ನೀವು ಅನುವಾದಿಸುವ ಪದವು ಅನುವಾದದಲ್ಲಿ ತೀರ ವಿವರಣಾತ್ಮಕವಾಗಬಾರದು, ಹಾಗೆಂದು ಪದವನ್ನು ಹಾಗೆಹಾಗೇ ಹಾಕಿ ವಿವರಣೆಯನ್ನು ಅಡಿ ಟಿಪ್ಪಣಿಯಲ್ಲಿ ಹಾಕಿದರೂ ಪದ್ಯದ ಮೈಯಂತೂ ಕೆಟ್ಟೇ ಕೆಡುತ್ತದೆ, ಜೊತೆಗೆ ನಾದ, ಲಯ ಇವೆಲ್ಲವನ್ನೂ ಒಂದಿಲ್ಲೊಂದು ರೀತಿಯಲ್ಲಿ ಹಿಡಿದಿಡಬೇಕಾಗುತ್ತದೆ. ಇದು ಹೇಗೆಂದರೆ, ಒಂದು ರೀತಿಯಲ್ಲಿ ಸಂಗೀತಕ್ಕೆ ಮೃದಂಗ ನುಡಿಸಿದಂತೆ. ರಾಗದಲ್ಲಿ, ಸ್ವರವಿನ್ಯಾಸದಲ್ಲಿ ಬರುವುದೆಲ್ಲ ಮೃದಂಗದಲ್ಲಿ ಬರಲಾರದು, ಏಕೆಂದರೆ ಅದು ಮೂಲತಃ ಸ್ವರವಾದ್ಯವಲ್ಲ. ಆದರೆ ರಾಗದ ಭಾವಮುದ್ರೆಯನ್ನು ಮೃದಂಗವು ಅದರದೇ ರೀತಿಯಲ್ಲಿ ಪ್ರಸ್ತುತಪಡಿಸಬಲ್ಲುದು. ಹೀಗೆ ಮಾಡುವಲ್ಲಿ ಮೃದಂಗವಾದಕನಿಗೆ, ಆ ರಾಗದ ಭಾವಮುದ್ರೆಯನ್ನು ಹಿಡಿಯುವಷ್ಟು ಸಂಗೀತದ ’ಅರಿವು’ ಇರಬೇಕಾಗುತ್ತದೆ. ಇದು ಕೆಲವೊಮ್ಮೆ "ಗರೀಸನಿದ ರಿಸಾನಿದಪ ಗಾಮಾದಾ" ಎನ್ನುವುದನ್ನು "ತದೀಂತಕಿಟ ತಧೀಂತಕಿಟ ತತ್ತಜ್ಝಂ" ಎಂದು ’ಅನುವಾದಿಸಿ’ದಷ್ಟು ಸರಳವೂ ಇರಬಹುದು, ಅಥವಾ ವಿವರಣೆಗೆ ದಕ್ಕದಷ್ಟು ಕ್ಲಿಷ್ಟವೂ ಇರಬಹುದು. ಒಟ್ಟಿನಲ್ಲಿ ಕೇಳುಗನಿಗೆ ಇವೆರಡರ ನಡುವೆ ’ಮೇಳ’ ಇದೆಯೆನ್ನಿಸುವುದು ಮುಖ್ಯ. ಇದರಲ್ಲಿ ಕೇಳುಗನ ಕೇಳ್ಮೆಯ ಸಂಸ್ಕಾರದ್ದೂ ಬಹುಮುಖ್ಯ ಪಾತ್ರ. ಆದ್ದರಿಂದಲೇ ಸಂಸ್ಕೃತದ ಸುಫಲ ಕನ್ನಡದಲ್ಲಿ ಯಾವಾಗಲೂ ತನಿವಣ್ಣೇ ಆಗುವುದಿಲ್ಲ, ಸಂದರ್ಭಕ್ಕೆ ತಕ್ಕಂತೆ ಇನಿವಣ್ಣೂ ಆಗಬಹುದು, ಸವಿವಣ್ಣೂ ಆಗಬಹುದು; ಸವಿನೀರು ಸಿಹಿನೀರಾಗಬಹುದು. ಅವೇ ಇಂಗ್ಲಿಷಿನಲ್ಲಿ good fruit, tasty fruit, sweet fruit ಏನಾದರೂ ಆಗಬಹುದು, ಅಥವಾ ಸಂದರ್ಭವು ಬಲಗೊಟ್ಟರೆ ಕೇವಲ fruit ಎಂಬ ಶಬ್ದವೇ ಇವೆಲ್ಲ ಅರ್ಥವನ್ನೂ ಕಟ್ಟಿಕೊಡಲೂ ಬಹುದು.

ಇದೇ ಹಿನ್ನೆಲೆಯಲ್ಲಿ ಶ್ಯಾಮಲ ಶಬ್ದವನ್ನೂ ವಿವರಿಸಬಹುದು. ದುರ್ಗೆಯ ಬಣ್ಣ ಕಪ್ಪು (ಕಪ್ಪೆಂದರೆ ಕಪ್ಪಲ್ಲ, ಇರಲಿ). ಅದಕ್ಕೆ ಸಂವಾದಿಯಾಗಿ ಪ್ರಕೃತಿವಿವರಣೆಯಲ್ಲಿ ಸಸ್ಯಶ್ಯಾಮಲಾ ಎಂದಿದ್ದಾರೆ. ಸಸ್ಯಶ್ಯಾಮಲಾ ಎನ್ನುವುದು ಬಂಕಿಮಚಂದ್ರರದ್ದೇ ಸೃಷ್ಟಿಯಲ್ಲ. ಸಸ್ಯಶ್ಯಾಮಲಾ ಎನ್ನುವ ಪದವು ಸಸ್ಯಸಿರಿಯನ್ನು ಹೊಂದಿದವಳು ಎಂಬ ಅರ್ಥದಲ್ಲಿ ಬಳಕೆಯಲ್ಲಿರುವ ಪದವೇ. ಆದರೆ ಶ್ಯಾಮಲಾ ಎಂಬ ಪದ ಎಂಥದ್ದೆಂದರೆ, ನಾನು ಈ ಹಿಂದೆ ವಿವರಿಸಿದಂತೆ ವಿವಿಧ ವಸ್ತು ವರ್ಣಗಳೊಡನೆ ಇದು ವಿವಿಧ ಅರ್ಥಚ್ಛಾಯೆಗಳನ್ನು ಪಡೆದುಕೊಳ್ಳುತ್ತದೆ. ಪಂಪನ ಕದಳೀಗರ್ಭಶ್ಯಾಮ ಒಳ್ಳೆಯ ಉದಾಹರಣೆ. ಇಲ್ಲಿ ಶ್ಯಾಮ ಕಪ್ಪಲ್ಲ, ಹಸಿರೂ ಅಲ್ಲ, ಬಾಳೆಯ ಮೋತೆ ಕುಡಿಯೊಡುವಲ್ಲಿ ಕೆಂಗಪ್ಪಿನ ನಡುವೆ ಮೂಡುವ ನಸುಗೆಂಪು. ಇದನ್ನು ಹೇಗೆ ವರ್ಣಿಸುತ್ತೀರಿ? ಶ್ಯಾಮ ಎಂಬ ಒಂದೇ ಪದ ಇದನ್ನು ಕಟ್ಟಿಕೊಡಲಾರದು, ಅದಕ್ಕಾಗಿಯೇ ಅದು "ಕದಳೀಗರ್ಭಶ್ಯಾಮ" ಆಗಬೇಕಾಯಿತು. ಕದಳೀಗರ್ಭಶ್ಯಾಮ, ನೀಲಮೇಘಶ್ಯಾಮ, ಸಸ್ಯಶ್ಯಾಮ, ಕೇವಲ ಶ್ಯಾಮ, ಇವೆಲ್ಲಾ ಕಪ್ಪೇ ಅಲ್ಲ, ನಸುಗಪ್ಪಿನ ಅಂಶ ಹೊಂದಿದ ಬೇರೆಬೇರೆ ಬಣ್ಣಗಳು - ಎಂದರೆ, ಆಯಾ ಬಣ್ಣಗಳಿಗೆ ತುಸು ದಟ್ಟತನವನ್ನು ನೀಡುವಂಥವು. ಹೋಗಲಿ, ದಟ್ಟ ಎಂಬುದನ್ನಾದರೂ ಸರಳವಾಗಿ dark ಎನ್ನಬಹುದೇ? ದಟ್ಟದಂತೆಯೇ dark ಕೂಡ ಪ್ರತ್ಯೇಕವಾಗಿ ಬಳಸಿ ದಕ್ಕಿಸಿಕೊಳ್ಳಬಹುದಾದ ಪದವಲ್ಲ, ಅದನ್ನು ಇನ್ನೊಂದರ ಜೊತೆ ಬಳಸಿದರೆ ಬೇರೆಯೇ ಅರ್ಥ ಕೊಡುವಂಥದು. ಇನ್ನು ಅರವಿಂದರು ಸಸ್ಯಶ್ಯಾಮಲೆ ಎನ್ನುವುದನ್ನು dark fields ಎನ್ನುತ್ತಾರೆ. ಆದರೆ ಈ fields ಎನ್ನುವ ಪದ, ಸಸ್ಯರಾಜಿಯನ್ನು ಹೊಂದಿರುವ ಬಯಲು, ಬೆಟ್ಟ, ಗುಡ್ಡ ಕಾಡು ಇವೆಲ್ಲವನ್ನೂ ಒಂದಿನಿತೂ ಸೂಚಿಸುವುದಿಲ್ಲ. ಆದ್ದರಿಂದ, ಶ್ಯಾಮಲೆ ಎಂಬುದನ್ನು ವಿವಿಧಾರ್ಥಗಳಲ್ಲಿ ಬಳಸಿಕೊಳ್ಳುವ ಸಂಸ್ಕೃತದ ಸೌಲಭ್ಯ ಇಂಗ್ಲಿಷಿನಲ್ಲಿ ಸಿಗದಿರುವಾಗ, ಅದನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಅನುವಾದಿಸುವುದು ಯುಕ್ತ ಮಾರ್ಗ ಎಂದು ನನ್ನ ಅನಿಸಿಕೆ. ಹೀಗೆ ಮಾಡುವಾಗ ಆಯಾ ಸಂದರ್ಭಕ್ಕೆ ಇಂಗ್ಲಿಷಿನಲ್ಲಿ ಸಮಾನವಾದ ಪ್ರತಿಮೆಗಳನ್ನು ರೂಪಿಸಿಕೊಳ್ಳುವುದು ಅನುವಾದಕನ ಕೆಲಸ.
---------------------------------------------------------------------------------------------
ಈ ವಿಷಯವಾಗಿ ಮತ್ತಷ್ಟು ಪದಪ್ರಯೋಗಗಳ ಸೂಕ್ಷ್ಮಗಳ ವಿಶ್ಲೇಷಣೆಯನ್ನು ಮಂಜುನಾಥರು ಇಲ್ಲಿ ಮಾಡಿದ್ದಾರೆ: https://nannabaraha.blogspot.com/2018/09/blog-post.html

ಅದಕ್ಕೆ ನನ್ನ ಪ್ರತಿಕ್ರಿಯೆಯನ್ನು ಕೆಳಗೆ ಕೊಟ್ಟಿದ್ದೇನೆ :

"ಮುಗುಳ್ನಗೆಗೂ ನಗುವುದಕ್ಕೂ (smile and laughter) ಅಜಗಜಾಂತರ ವ್ಯತ್ಯಾಸವಿದೆ. Laughing low ಎನ್ನುವುದು ಅಪಹಾಸ್ಯದ ಮುಸಿನಗೆಯಾಗಬಲ್ಲುದೇ ವಿನಾ ಮುಗುಳ್ನಗೆಯಾಗಲಾರದು. ಮತ್ತು Laughing low and sweet ಎನ್ನುವುದು ಕಪಟದ ನಗೆಯಲ್ಲದೇ ಬೇರೊಂದಾಗಲಾರದು."
ಎಂಬ ಅರೋಬಿಂದೋ ಅವರ ಅನುವಾದದ ಬಗೆಗಿನ ಮಂಜುನಾಥರ ವಿಶ್ಲೇಷಣೆ ನನಗೆ ಒಪ್ಪಿಗೆಯಾಗಲಿಲ್ಲ. ಮೊದಲಿಗೆ smile and laughter ಗಳಿಗೆ ವ್ಯತ್ಯಾಸವಿದೆ ಎಂಬ ನಿಮ್ಮ ಮಾತು ಸರಿಯಾಗಿದೆ. ಆದರೆ ಇಲ್ಲಿ laugh ಅನ್ನುವುದನ್ನು qualify ಮಾಡಲಿಕ್ಕೆಂದೇ low ಎಂಬ ಪದ ಬಂದಿದೆ. ಇಲ್ಲಿನ low ಎಂಬ ಪದ flat adverb ಎಂದು ಕರೆಸಿಕೊಳ್ಳುವ, ಈಗ ಈ ಅರ್ಥದಲ್ಲಿ ಅಷ್ಟಾಗಿ ಬಳಕೆಯಲ್ಲಿಲ್ಲದ ಪದ.

ನಮ್ಮ "ಮುಗುಳ್ನಗೆ"ಯೂ ಹಾಗೆಯೇ ತಾನೇ. ಇಲ್ಲೂ "ನಗೆ" ಎಂಬುದನ್ನು "ಮುಗುಳು" ಎಂಬ ಪದ qualify ಮಾಡಿದೆ. ಮುಗುಳು = ಮೊಗ್ಗು. ಆದ್ದರಿಂದ, ಮೊಗ್ಗು ಅರಳಿದಂತೆ ನಗು = ಮುಗುಳ್ನಗು. ಅಲ್ಲವೇ ? ಮುಗುಳ್ನಗೆಯ ನಗೆಯಂತೆಯೇ Laughing low ಎಂಬಲ್ಲಿನ laugh. ನಮ್ಮಲ್ಲಿ ಸ್ಮಿತ, ಹಸಿತ,ವಿಹಸಿತ ,ಉಪಹಸಿತ,ಅತಿಹಸಿತ ಅಂತೆಲ್ಲ ನಗೆಯ ಬೇರೆ ಬೇರೆ ಪ್ರಕಾರಗಳನ್ನು ಹೇಳುತ್ತಾರಲ್ಲ, ಇವುಗಳಲ್ಲಿನ ಹಸಿತ(Gentle laughter) ಮತ್ತು ವಿಹಸಿತ(Gentle open laughter) ಎಂಬ ಪದಗಳಿಗೆ ಹತ್ತಿರದ ಅರ್ಥವನ್ನು Laughing low ಎಂಬುದಕ್ಕೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ Laughing low is not the same as laughing. Laughing low = ಮೆಲುನಗೆ ಎಂದು ಹೇಳಿದರೆ ಸಾಕು.

ಹೀಗಿದ್ದರೂ Laughing low ಎಂಬುದು ಭಾವದ ದೃಷ್ಟಿಯಿಂದ ಒಳ್ಳೆಯ ಅನುವಾದವಲ್ಲ ಎಂಬಲ್ಲಿ ನಿಮ್ಮ ಅಭಿಪ್ರಾಯ ನನಗೂ ಒಪ್ಪಿಗೆಯೇ, ಇಲ್ಲಿ ಸ್ಮಿತ ಅಥವಾ charming smile ಎಂಬ ಭಾವವೇ ಬರಬೇಕಾದ್ದು. ಇಲ್ಲಿ ಅನುವಾದ ಮಾಡುವಾಗ ಕಷ್ಟವಾಗುವುದು ಏನೆಂದರ soft ,sweet,charming ಮುಂತಾದ ಪದಗಳು ಬಳಸಿ ಬಳಸಿ ಸವಕಲಾಗಿರುವುದರಿಂದ ಅವು (ಅರ್ಥದ ದೃಷ್ಟಿಯಿಂದ ಸರಿಯಾದರೂ) ವಿಶೇಷ ಭಾವಗಳನ್ನು ಉದ್ದೀಪಿಸುವುದು ಕಷ್ಟ. ಇಂತಲ್ಲಿ soft ,sweet,charming ಮುಂತಾದ ಭಾವಗಳನ್ನು ಪ್ರಚೋದಿಸುವಂತೆ ಯಾವುದಾದರೂ ರೂಪಕವನ್ನು ಬಳಸಿ ಈ ಕಷ್ಟದಿಂದ ಪಾರಾಗಬಹುದು. ಅಥವಾ ಇಂತಹಾ ನಗೆಯ sweetness ಅನ್ನು ಹೇಳಬೇಕಾದಾಗ Wordsworth,Coleridge,Shelley,Blake, Keats ಮುಂತಾದವರು ಅಂತದ್ದನ್ನು ಹೇಗೆ ಹೇಳಿದ್ದಾರೆಂದು ನೋಡಿಕೊಳ್ಳಬಹುದು (ಉದಾಹರಣೆಗಳು ಇದ್ದರೆ, ಅವು ಪಕ್ಕನೆ ನೆನಪಾದರೆ ! )

ಮೇಲೆ ಮೊದಲಿಗೆ ಹೇಳಿದ ಮಾತನ್ನೇ speaker sweet and low ಎಂಬುದರ ಬಗ್ಗೆಯೂ ಹೇಳಬಹುದು. speak sweet and low ಅಂದರೆ ಮೆಲ್ನುಡಿ ಎಂದು ಮಾಡಿಕೊಳ್ಳಬೇಕು. ಇಲ್ಲಿ ಬರಬೇಕಾದ್ದು ಬರೀ ಮೇಲ್ನುಡಿಯಲ್ಲ, sweet words ಎಂಬ ಅರ್ಥದಲ್ಲಿ ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ.

Movies with great plot twists

Here is a quick recommendation list of movies with great plot twists.

A good twist for me is one which makes perfect sense even during a second viewing, It is fairly clued, you feel like, "Why on earth did I not see that one coming? All the clues were there!", The worst ones are the ones where they say, It all was just a dream!! Or It was just an imagination/hallucination of Hero!! (There are some notable exceptions to this)

The clues were all there but the writer cleverly misled us. It is similar to how the magician misdirects us. Like Nolan had put it in The Prestige, we were not watching closely! It was right in front of our eyes but the writer managed to misdirect us and make us perceive things differently. When it is revealed in the end, it makes us go 'Wow!!'

Some of the most deliciously ironic/poetic twists that I have seen are the ones in TV shows -- The Twilight Zone and Alfred Hitchcock Presents. I Would highly recommend these 2 shows.

Some good movies with plot twists that I liked:
Memento
Primal fear
6th sense
Predestination
Planet of Apes
House of Games
Orphan
Saw
The Spanish prisoner
The game
The Prestige
The Visit
The crying game (British)
Pieta (Korean)
Incendies (Canadian)
The illusionist
The bird with crystal plumage (Italian)
Psycho
The Village
Unbreakable
The Others
Loft (Belgian)
The secret in their eyes (Argentinean)
Atonement (British)
Chinatown
The Conversation
Scream
Gone baby gone
Body Heat
The Body (Spanish)
Butterfly on a wheel
Matchstick men
Witness for the prosecution
Nine queens(Argentinean)
the best offer(Italian)
Les diaboliques(French)
Dark City
Another Earth
Following
Identity

Recommendations are welcome

Sunday, 6 January 2019

ರಾವಣ ವಧೆ - ಏಕವ್ಯಕ್ತಿ ತಾಳಮದ್ದಳೆ

ಇವತ್ತು ಬೆಂಗಳೂರಿನ ಗೋಖಲೆ ವಿಚಾರ ಸಂಸ್ಥೆಯಲ್ಲಿ ನಡೆದ, "ಜನ್ಮರಹಸ್ಯ (ರಾವಣ ವಧೆ)" ಏಕವ್ಯಕ್ತಿ ತಾಳಮದ್ದಳೆಗೆ ಹೋಗಿ ಬಂದೆ. ನನಗೆ ತಿಳಿದಂತೆ, ಗೋಖಲೆಯಲ್ಲಿ ಆದ ಎಲ್ಲ ಯಕ್ಷಗಾನ ತಾಳಮದ್ದಲೆಗಳೂ ಸೊಗಸಾಗಿ ಮೂಡಿ ಬಂದಿವೆ.

ಗೋಖಲೆ ಸಂಸ್ಥೆಯ ಗ್ರಂಥಾಲಯವೆಂದರೆ ನನಗೆ ಅದೊಂದು ಪವಿತ್ರಸ್ಥಳವಿದ್ದಂತೆ. ಅಲ್ಲಿ ಡಿವಿಜಿ, ನಿಟ್ಟೂರು ಶ್ರೀನಿವಾಸರಾಯರು, ಎಲ್ ಎಸ್ ಶೇಷಗಿರಿರಾಯರು ಮುಂತಾದವರ ಖಾಸಗಿ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ಓದುವುದು, ನಾಡಿನ ದೊಡ್ಡ ಪಂಡಿತರ ಫೋಟೋಗಳನ್ನು ನೋಡುವುದೂ ಖುಷಿ ಕೊಡುವ ವಿಚಾರ. ಅಲ್ಲಿನ ವೇದಿಕೆಯೂ ಅಷ್ಟೇ, ಡಿವಿಜಯವರ ಕಾಲದಿಂದಲೂ ಅದು ತೂಕದ, ಎಷ್ಟೋ ಜನ ದೊಡ್ಡ ದೊಡ್ಡವರು ಹತ್ತಿ ಇಳಿದಿರುವ ಜಾಗ. ಅಲ್ಲೇ ಮೇಲೆ, "ನಾನು ಕೇಳುತ್ತಿದ್ದೇನೆ, ಎಚ್ಚರವಿರಲಿ" ಎಂಬ ಭಾವ ಹುಟ್ಟಿಸುವ ಡಿವಿಜಿಯವರ ಭಾವಚಿತ್ರ , ಒಪ್ಪ ಓರಣದ, ಸಮಯಕ್ಕೆ ಸರಿಯಾಗಿ ಶುರುವಾಗಿ, ಕ್ಲಪ್ತ ಸಮಯಕ್ಕೆ ಮುಗಿಸುವ ಶಿಸ್ತಿನ ಸಂಯೋಜನೆ, ಹೌಸ್ ಫುಲ್ ಆಗಿಸುವ, ಆಗಾಗ ಮೆಚ್ಚಿ "ಆಹಾ ಓಹೋ" ಅಂತ ತಲೆದೂಗುವ ಸಹೃದಯಿ,ರಸಿಕ ಪ್ರೇಕ್ಷಕವರ್ಗ ಎಲ್ಲ ಸೇರಿ ಒಂದೊಳ್ಳೆ ಕಾರ್ಯಕ್ರಮಕ್ಕೆ ಹೋಗಿಬಂದ ಸಾರ್ಥಕ ಭಾವ ಹುಟ್ಟಿಸುತ್ತದೆ. ಇದು ಕೂಡಾ ಹಾಗೆಯೇ ಇದ್ದು 'ರಸವತ್' ಅನ್ನಿಸಿತು.

ರಂಗಸ್ಥಳದ ಮೇಲೆಯೇ ಶತಾವಧಾನಿ ಗಣೇಶರು ಭಾವಪರವಶರಾಗಿ ದಿವಾಕರ ಹೆಗಡೆಯವರಿಗೆ ಪೊಡಮಡುವ ಅಪೂರ್ವ ವಿದ್ಯಮಾನವೂ ನಡೆದು ಹೋಯಿತು. "ವ್ಯಾಸ ವಾಲ್ಮೀಕಿಯರೇ ಇವರೊಳಗೆ ಕೂತು, ಇವರ ಬಾಯಿಂದ ಮಾತುಗಳನ್ನು ಆಡಿಸುತ್ತಿದ್ದಾರೆ" ಎಂಬ ಕೊಂಡಾಟ ಗಣೇಶರ ಬಾಯಿಂದ ಬಂತು.

ಎಪಿ ಪಾಠಕರ ಭಾಗವತಿಕೆ. ರಾಜೇಶ್ ಆಚಾರ್ ಅವರೆ ಮದ್ದಳೆಯ ಹಿಮ್ಮೇಳ ಇತ್ತು. ದಿವಾಕರ ಹೆಗಡೆಯವರದ್ದು ಚೊಕ್ಕವಾದ ಉತ್ಕೃಷ್ಟವಾದ, ರಸವ್ಯಂಜಕವಾದ ಪಾತ್ರಸೃಷ್ಟಿ. ಪಾತ್ರಗಳೇ ತಾನಾಗಿ,ಭಾವಪೂರ್ಣ ಪ್ರಸ್ತುತಿಯಿಂದ ಪ್ರದರ್ಶನವನ್ನು ಅವರು ಮೇಲೆ ಹಾಕಿದರು. ಕೋಟೆಬಲ್ ಕೋಟುಗಳಾಗಬಹುದಾದ ಪಂಚ್ ಡೈಲಾಗ್ ಅಂತ ಹೇಳಿಸಿಕೊಳ್ಳುವ ಮಾತುಗಳನ್ನು ಸಾಲು ಸಾಲಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ದಿವಾಕರ ಹೆಗಡೆಯವರ ಶೈಲಿ. ಅದನ್ನವರು ಭಾವ ಕೆಡದಂತೆ, ಔಚಿತ್ಯ ತಪ್ಪದಂತೆ ಮಾಡುವ ರೀತಿ ಶ್ಲಾಘ್ಯ. ಭಾವದ ಎಣ್ಣೆಯಲ್ಲಿ ಕಾಯಿಸಿ ಮುಟ್ಟಿದರೆ ರಸ ಒಸರುವ ಜಿಲೇಬಿಯಂತೆ ಪಾತ್ರವನ್ನು ಕಟ್ಟುವ ಅನನ್ಯ ಸಾಧಾರಣವಾದ ಅವರ ಶೈಲಿಯೊಂದು ಮಾದರಿ.

ವ್ಯಾಸೋಚ್ಚಿಷ್ಠಮ್ ಜಗತ್ ಸರ್ವಂ (ಎಲ್ಲವೂ ವ್ಯಾಸರ ಎಂಜಲು) ಎಂಬೊಂದು ಮಾತು ಸಾಹಿತ್ಯವಲಯದಲ್ಲಿರುವಂತೆ, ಎಲ್ಲವೂ ಶೇಣಿ ಗೋಪಾಲಕೃಷ್ಣ ಭಟ್ಟರು (ಅಥವಾ ಶೇಣಿ ಮತ್ತು ಸಾಮಗರು) ಈಗಾಗಲೇ ಹೇಳಿಬಿಟ್ಟಿರುವುದರ ಅನುಕರಣೆ ಅಥವಾ ಮುಂಬರಿಕೆ ಅಂತೊಂದು ಮಾತಿದೆ. ಬೇರೆಯವರಿಗೆ ಹೊಸತನ್ನು ಹೇಳಲು ಏನೂ ಉಳಿಯಲಿಲ್ಲ ಅನ್ನಿಸುವಷ್ಟು ತರದಲ್ಲಿ, ಬಗೆಬಗೆಯಾಗಿ ಅವರು ಈ ಪಾತ್ರಗಳನ್ನು ಕಡೆದಿದ್ದಾರೆ ಎಂಬುದು ಇಲ್ಲಿನ ಭಾವ . ದಿವಾಕರ ಹೆಗಡೆಯವರನ್ನೂ ಸೇರಿಸಿ ಎಲ್ಲರೂ ರಾವಣನ ಪಾತ್ರಸೃಷ್ಟಿಗೆ ಮತ್ತು ಎಷ್ಟೋ ಪಾತ್ರಗಳಿಗೆ ಶೇಣಿಯವರಿಗೆ ಋಣಿಗಳೇ. ಇಷ್ಟಿದ್ದರೂ ಇಂತದ್ದೊಂದು ಬುದ್ಧಿ ಭಾವಗಳ ವಿದ್ಯುದಾಲಿಂಗನವನ್ನು ಕಂಡಾಗ, ಇಷ್ಟು ರಸ ಉಕ್ಕಿದಾಗ ದಿವಾಕರ ಹೆಗಡೆಯವರು ಅದನ್ನು ಹೊಸತಾಗಿಯೇ ಕಟ್ಟಿದರು ಅನ್ನಿಸುತ್ತದೆ. ಅದಕ್ಕವರಿಗೆ ನಮನಗಳು. "ಇಂತದ್ದೊಂದು ವಿಷಯದಲ್ಲಿ, ನಿಮ್ಮ ಹತ್ತಿರ ಮಾತಾಡಲಿಕ್ಕಿದೆ, ಒಮ್ಮೆ ನಿಮಗೆ ಸಿಕ್ಕಲೇ" ಅಂತ ನಾನು ಕೇಳಿದಾಗ, ಸ್ವಲ್ಪವೂ ದೊಡ್ಡಸ್ತಿಕೆ, ಬಿಗುಮಾನಗಳಿಲ್ಲದೆ "ಫೋನ್ ನಂಬರ್ ತಗೊಳ್ಳಿ" ಅಂತಂದು ಅಲ್ಲಿಯೇ ಕೊಟ್ಟ ಗಣೇಶರ ನಿರಾಡಂಬರ ಶೈಲಿ ಬೋನಸ್ ಖುಷಿ ಕೊಟ್ಟಿತು.

ಹೆಸರಿಗೆ ತಕ್ಕಂತೆ !!

"ಹೆತ್ತ ಮಕ್ಕಳಿಗೆ ಹೆಸರಿಡುವ ಹೊಣೆಯೇನು ಅಂತಿಂತಹದಲ್ಲ. ಪ್ರಹ್ಲಾದ ಅಂತ ಹೆಸರಿಡುವಾಗ ತಂದೆಗೂ, ಘಟೋತ್ಕಚನೆಂದು ಹೆಸರಿಡುವಾಗ ತಾಯಿಗೂ, ಕೃಷ್ಣನೆಂದು ಹೆಸರಿಡುವಾಗ ಸೋದರ ಮಾವನಿಗೂ ಕೊಂಚ ಕಷ್ಟವೆನಿಸಿದರೆ ಏನೂ ಸೋಜಿಗವಿಲ್ಲ. ನಾವು ನಿತ್ಯವೂ ಕಾಣುವ ಹಲವು ವ್ಯಕ್ತಿಗಳ ವ್ಯಕ್ತಿತ್ವಕ್ಕೂ ಅವರ ಹೆಸರಿಗೂ ಇರುವ— ಅಂದರೆ ಇರದಿರುವ — ಸಂಬಂಧವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಆ ಅವರೇ ನಕ್ಕಾರು, ನಗಲು ಅವರಿಗೆ ಬರುತ್ತಿದ್ದರೆ. ಗಂಡನಿಗೆ ಬೇರೆ ಊರಿಗೆ ವರ್ಗವಾದಾಗ ಹಿಂಬಾಲಿಸಲು ತಕರಾರು ಹೂಡಿದ ಸೀತಮ್ಮ,ಅನ್ನದಲ್ಲಿ ವಿಷ ಬೆರೆಸಿ ಕೈಹಿಡಿದ ಗಂಡನನ್ನು ಯಮರಾಯನ ಕೈಗೆ ಹಿಡಿದುಕೊಟ್ಟ ಮಹಾಸತಿ ಸಾವಿತ್ರಮ್ಮ,ಊರಿಗೊಂದು ಹೆಂಣನ್ನಿಟ್ಟ ಡ್ರೈವರ್ ರಾಮು,ದಾಯಾದಿಯ ಮಗನನ್ನು ದತ್ತು ಕೇಳುವ ಸಂತಾನಂ ಅಯ್ಯಂಗಾರರೂ, ಕಾರ್ಕೋಟಕನ ಅನುಗ್ರಹ ಹೊಂದಿದ ನಳನ ರೂಪವನ್ನೂ ಧಿಕ್ಕರಿಸುವಂತಹ ರೂಪವುಳ್ಳ ಸುಂದರರಾಜನ್ನರೂ ಹೇರಳವಾಗಿದ್ದಾರೆ. ಬಸ್ ಸ್ಟ್ಯಾಂಡಿನಲ್ಲಿ ಕಾಡುತ್ತಿದ್ದ ಭಿಕ್ಷುಕಳನ್ನು ಹೆಸರು ಕೇಳಿದರೆ,ಲಕ್ಷ್ಮಿ ಎಂದು ಹೇಳಿ ತಾನೇ ನಕ್ಕಾಳು" ---> ಬೀಚಿ

ಆದರೆ ಒಮ್ಮೊಮ್ಮೆ,ತಮಾಷೆಗೆಂಬಂತೆ, ಇಟ್ಟ ಹೆಸರಿಗೆ ಸರಿಯಾಗಿ ಇರುವವರೂ ಹುಟ್ಟುವುದುಂಟು. ಇಂತಹಾ ಕೆಲವು ಹೆಸರುಗಳನ್ನು ಪಟ್ಟಿಮಾಡುವ ಪ್ರಯತ್ನ. ಸುಮಾರು ನೂರು ವರ್ಷಗಳಿಗೆ ಮೊದಲು ನರವಿಜ್ಞಾನ(neurology)ಕ್ಕೆ ಸಂಬಂಧಪಟ್ಟ ಪತ್ರಿಕೆಯೊಂದು ಬರುತ್ತಿತ್ತು, ಆ ಪತ್ರಿಕೆಯ ಹೆಸರು, "Brain" ಅಂತ. ಅದರ ಸಂಪಾದಕ, ಅಂದರೆ ಹೆಡ್ ಆಗಿದ್ದವನು Henry Head, ಇವನಾದ ಮೇಲೆ ಆ ಜಾಗಕ್ಕೆ ಬಂದವನು Russell Brain ಎಂಬಾತ ! ಇವರಿಬ್ಬರೂ ಮೆದುಳಿನ ಬಗ್ಗೆ ಉದ್ದುದ್ದ ಬರೆದವರೇ. ಈ ಪತ್ರಿಕೆಯಲ್ಲಿ ಹೆನ್ರಿಯ ಬಗ್ಗೆ ರಸೆಲ್ ಬರೆದ ಲೇಖನವೊಂದನ್ನು Brain on Head in Brain ಅಂತ ಹೇಳಲಾಗಿದೆ ! Thomas Crapper ಅನ್ನುವವನು flush ಟಾಯ್ಲೆಟ್ ಗಳನ್ನು ಕಂಡು ಹಿಡಿದು, ಶೌಚಾಲಯದ ಕ್ಷೇತ್ರದಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿದ್ದು ಚೋದ್ಯವೆಂದೇ ಹೇಳಬೇಕು.

Igor Judge ಎಂದೊಬ್ಬ ನ್ಯಾಯಾಧೀಶನಿದ್ದದ್ದು, ಇಸ್ಪೀಟಾಟ(poker)ದ ಚಾಂಪಿಯನ್ ಒಬ್ಬನಿಗೆ Chris Moneymaker ಎಂಬ ನಾಮಧೇಯವಿದ್ದದ್ದು ಎಲ್ಲ ಸುದ್ದಿಯಾಗಿದೆ. Wordsworth ಕವಿಯೂ ಖ್ಯಾತನಾಮನೇ, ಇದೇ ತರ Francine Prose ಅಂತೊಬ್ಬ ಕಾದಂಬರಿಗಾರ್ತಿಯಿದ್ದಾಳೆ. Margaret Court ಎಂಬ ಟೆನ್ನಿಸ್ ಚಾಂಪಿಯನ್ ಒಬ್ಬಳ ಹೆಸರನ್ನು ನೀವು ಓದಿರಬಹುದು, Chris Gayle ಎಷ್ಟೋ ಸಲ ಅಕ್ಷರಶಃ gale(ಬಿರುಗಾಳಿ) ಆಗಿಬಿಡುತ್ತಿದ್ದದ್ದು ಆರ್ಸಿಬಿ ಪ್ರಿಯರಿಗೆ ಗೊತ್ತೇ ಇದೆ, Usain Bolt ಅನ್ನುವುದೂ ಅನ್ವರ್ಥ ನಾಮವೇ ಸರಿ. Ken Hurt, Dalbert Fear ಅಂತೆಲ್ಲ ಹಲ್ಲಿನ ಡಾಕ್ಟರುಗಳಿದ್ದದ್ದು ತಮಾಷೆಯೆನ್ನಬೇಕು("ನೋವುಗಳಲ್ಲಿ ಎರಡು ವಿಧ : ಕೆಲವು ಫಿಸಿಕಲ್, ಇನ್ನು ಕೆಲವು ಮೆಂಟಲ್, ಇವೆರಡೂ ಇದ್ದರೆ ಅದು ಡೆಂಟಲ್!" ಎಂಬ ಆಗ್ಡೆನ್ ನ್ಯಾಶ್ ಪದ್ಯವನ್ನು ನೆನಪಿಸಿಕೊಳ್ಳಿ)

ನಮ್ಮಲ್ಲಿ ಚೆನ್ನಾಗಿ ದುಡ್ಡು ಮಾಡಿದ ಐಶ್ವರ್ಯ ರೈ, ಸುಂದರವಾಗಿ ನಗುತ್ತಿದ್ದ ಸುಸ್ಮಿತಾ ಸೇನ್(ಸ್ಮಿತ = ಮುಗುಳುನಗೆ), ಪಲ್ಲವಿ ಚರಣಗಳನ್ನು ಹಾಡುವ ಎಂಡಿ ಪಲ್ಲವಿ, ದೊಡ್ಡ ದೇಹದ ನಟ ದೊಡ್ಡಣ್ಣ, ಎಲ್ಲ ಅನ್ವರ್ಥ ನಾಮಗಳೆನ್ನಿಸಬಹುದು. ನಮ್ಮ ದೇಶದ ಆಜಾದಿಗಾಗಿ ಹೋರಾಡಿದ ಮೌಲಾನಾ ಅಬುಲ್ ಕಲಾಂ ಆಜಾದ್, ನರೇಂದ್ರ ಮೋದಿ (ನರೇಂದ್ರ ಅಂದರೆ ರಾಜ)ಗಳೂ ಸಾರ್ಥಕ ನಾಮಗಳು, ಅಂತೆಯೇ ದೇವರಾಜ ಅರಸು(ಇವರ ಹೆಸರಿನಲ್ಲಿ ರಾಜ ಮತ್ತು ಅರಸು ಎರಡೂ ಬಂದದ್ದರಿಂದ ಎರಡು ಸಲ ಮುಖ್ಯಮಂತ್ರಿಗಳಾದರು ಅನ್ನೋಣವೇ). ಇಂಥವರ ಕುಮಾರರೆಂದೇ ಹೆಸರಾದ ಎಚ್ಡಿ ಕುಮಾರಸ್ವಾಮಿ ಮತ್ತು ಕುಮಾರ ಬಂಗಾರಪ್ಪರನ್ನೂ ಪಟ್ಟಿಗೆ ಸೇರಿಸಬಹುದು. ಸಾಹಿತಿ, ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಹೆಸರಿಗೂ ತಮಾಷೆಯ ಅರ್ಥ ಕಟ್ಟಲಾಗಿತ್ತು. ಮುಳಿಸು ಅಂದರೆ ಕೋಪ. ಹಾಗಾಗಿ ತಿಮ್ಮಪ್ಪಯ್ಯ ಮುಳಿಯ ಅಂದರೆ ತಿಮ್ಮಪ್ಪಯ್ಯನಿಗೆ ಕೋಪ ಬರುವುದಿಲ್ಲ ಅಂತ ಅರ್ಥ! ಕಡೆಯದಾಗಿ Johnny Cash ಎಂಬ ಸಂಗೀತಕಾರ,Bob Hope ಎಂಬ ಹಾಸ್ಯಪಟುಗಳ ಹೆಸರಿನ ಮೇಲೆ ಬಂದ ಒಂದು ಚಾಟೂಕ್ತಿ: 20 years ago we had Johnny Cash, Bob Hope and Steve Jobs. Now we have no Cash, no Hope and no Jobs. Please don't let Kevin Bacon die!
ಇಂತವು ನಿಮಗೂ ಗೊತ್ತಿದ್ದರೆ, ಕಮೆಂಟು ಹಾಕುವಂತವರಾಗಿ.

ಭಾಷೆಯ ಜೊತೆ ಚೆಲ್ಲಾಟ - ದತ್ತಪದಿ

ಇಂಗ್ಲೀಷಿನಲ್ಲಿ ಭಾಷೆಯ ಜೊತೆಗೆ ಹೇಗೆಲ್ಲ ಬಗೆ ಬಗೆಯ ಮೋಜಿನ ಆಟಗಳನ್ನಾಡುತ್ತಾರೆ ಅಂತ ಹಿಂದೊಂದು ಲೇಖನ ಬರೆದಿದ್ದೆ. ಸಂಸ್ಕೃತ, ಕನ್ನಡಗಳಲ್ಲೂ ಇಂತವು ಬೇಕಾದಷ್ಟಿವೆ. ಇವತ್ತು ಅಂತದ್ದೊಂದು ಭಾಷಾಸರಸ ಪ್ರಕಾರದ ಕೈಕುಲುಕಿಸುತ್ತೇನೆ. ಇಂತದ್ದೊಂದು ವಾಟ್ಸಪ್ಪ್ ಮೆಸೇಜು ನಿಮಗೆ ಬಂದಿರಬಹುದು :
ಹೋಟೆಲೊಂದಕ್ಕೆ ಶತಾವಧಾನಿ ಗಣೇಶರು ಉಪಾಹಾರಕ್ಕೆ ಹೋಗಿದ್ದಾಗ, ಅವರ ಮುಖ ಪರಿಚಯ ಇರುವ ಮಾಣಿಯೊಬ್ಬ ಅಲ್ಲಿರುತ್ತಾನೆ, ಶತಾವಧಾನಿಗಳನ್ನು ಸವಾಲು ಜವಾಬಿನ ಆಟಕ್ಕೆ ಎಳೆಯುತ್ತಾನೆ:
'ನಾನೊಂದು ಸಮಸ್ಯೆ ಕೊಡ್ತೇನೆ, ಉತ್ರ ಕೊಡಿ,
'ಹೇಳಪ್ಪ'
'ಒಂದು ಪದ್ಯ ಮಾಡಿ. ಅದರಲ್ಲಿ ನಾನು ಹೇಳೋ ಐಟಮ್ ಅಷ್ಟೂ ಇರ್ಬೇಕು. ಅದೇ ಸರದಿಯಲ್ಲೂ ಬರಬೇಕು'
'ಹೇಳಿ'.
'ಸಾಂಬಾರು, ಚಟ್ನಿ, ವಡೆ, ಇಡ್ಲಿ'.
ಮಾಣಿಯ ಮುಖದಲ್ಲಿ ಗೆದ್ದ ನಗು. ಶತಾವಧಾನಿಗಳು ಅರ್ಧ ನಿಮಿಷ ಕಣ್ಣುಮುಚ್ಚಿ ಯೋಚಿಸಿ, ಗಂಟಲು ಸರಿಪಡಿಸಿಕೊಂಡು ಮಾತು ಶುರು ಮಾಡಿದರು: 'ಹೇ, ಸಾಂಬಾ, ರುದ್ರಾ! ಚಟ ಚಟ್ ನಿಟಿಲಾಕ್ಷಾ! ಜಗದೆಲ್ಲೆಡೆ ನೀನಿರುವಡೆ,ನಾ ಕಾಲೆಲ್ಲಿಡ್ಲಿ?'. ಸುಸ್ತಾದ ಮಾಣಿ, 'ನಿಮಗೆ ಒಂದು ಪೆಷಲ್ ಕಾಪಿ ತರ್ತೇನೆ' ಅಂತ ಓಡಿದ!

ಇಲ್ಲಿ ಮಾಣಿಯೂ ಅವಧಾನಿಗಳೂ ಆಡಿರುವ ಭಾಷೆಯ ಆಟವನ್ನು ದತ್ತಪದಿ ಅನ್ನುತ್ತಾರೆ. ಇಲ್ಲಿ ಬಂದ ಪ್ರಸಂಗ ವಾಸ್ತವವಲ್ಲ,ಮೇಲಿನದು ನಿಜವಾಗಿ ಗಣೇಶರು ಕಟ್ಟಿದ ಪದ್ಯವೇನೋ ಅಲ್ಲ (ವಾಟ್ಸಪ್ಪಿನಲ್ಲಿ ನಿಜ ಎಲ್ಲಿ ಬರುತ್ತದೆ ?!). ಆದರೂ, ಎಲ್ಲರಿಗೂ ಅರ್ಥವಾಗುವಂತೆ ದತ್ತಪದಿಯ ರಸಾಸ್ವಾದನೆ ಮಾಡಿಸಿರುವುದನ್ನು ಮೆಚ್ಚಬೇಕು.

ಅಷ್ಟಾವಧಾನ ಅನ್ನುವುದು ಕ್ಲಿಷ್ಟವಾದ,ಕ್ಲಿಷ್ಟವಾದರೂ ರಂಜನೀಯವಾದ ಕ್ರೀಡೆ. ಎಂಟು ಜನ ಎಂಟು ತರದಲ್ಲಿ, ಒಡ್ಡುವ ಸವಾಲುಗಳನ್ನು ಅವಧಾನಿಯು ಪರಿಹರಿಸಿ ಮುಗುಳುನಗಬೇಕು. ಆ ಎಂಟು ಸವಾಲುಗಳಲ್ಲಿ ನಮ್ಮ ದತ್ತಪದಿಯೂ ಒಂದು. ವಿಷಯಕ್ಕೆ ತಲೆಬುಡ ಸಂಬಂಧವೇ ಇಲ್ಲದ ಯಾವುದೋ ನಾಲ್ಕು ಪದಗಳನ್ನು ಕೊಟ್ಟು ಈ ಪದಗಳನ್ನು ಬಳಸಿಕೊಂಡು ಪದ್ಯವೊಂದನ್ನು ರಚಿಸಲು ಹೇಳುವುದು ಈ ಆಟದ ಕ್ರಮ. ಉದಾಹರಣೆಗೆ, ದೆಹಲಿ ಮತ್ತು ಮುಂಬಯಿ ಎಂಬ ಪದಗಳನ್ನು ಬಳಸಿ, ಕೃಷ್ಣನ ಬಗ್ಗೆ ಮಾತಾಡಿ ಅಂದರೆ ನಾವು ಇದೇನು ಗ್ರಹಚಾರ ಬಂತಪ್ಪಾ ಅಂತ ಮಂಕಾಗಬಹುದು ,ದೆಹಲಿಯನ್ನು ತರುವುದು ಹೇಗೆ ? ಗಣೇಶರು ಹೀಗೊಂದು ಸಾಲನ್ನೆಸೆಯಬಹುದು: ಕೂರ್ಮೆಯೊ೦ದೆ ಹಲಿಯ೦ ವ೦ದಿಪ್ಪನೇ ("ಯೊಂದೆ ಹಲಿ" ಅನ್ನುವಲ್ಲಿ ದೆಹಲಿ ಬಂದಿದೆ. ಕೂರ್ಮೆ = ಪ್ರೀತಿ, ಹಲ = ನೇಗಿಲು , ಹಲಿ = ಬಲರಾಮ, ವ೦ದಿಪ್ಪನೇ = ವಂದಿಸುವವನೇ). ಅಷ್ಟಕ್ಕೇ "ಅಬ್ಬಾ ಮುಗಿಯಿತು" ಅನ್ನುವಂತಿಲ್ಲ, ಮುಂಬಯಿಯೂ ಬರಬೇಕಲ್ಲ, ಗಣೇಶರು ಮುಂಬಯಿಯನ್ನು ಹೀಗೆ ಎಳೆದು ತರಬಹುದು: ನಲ್ಮೆಯ ವಾಕ್ಯಮು೦ ಬಯಿಗಳು೦ (ಪ್ರೀತಿಯ ವಾಕ್ಯವೂ, ಬೈಗುಳವೂ ).

ಕಷ್ಟ ಇಷ್ಟಕ್ಕೇ ಮುಗಿಯುವುದಿಲ್ಲ. ಪದ್ಯವನ್ನು ಕೊಟ್ಟಿರುವ ವಿಷಯದ ಕುರಿತಾಗಿಯೇ ಬರೆಯಬೇಕು. "ಅಯ್ಯೋ ರಾಮ !" ಅನ್ನಬೇಡಿ, ಅಷ್ಟು ಸಾಲದು ಅಂತ ಕೊಟ್ಟ ಛಂದಸ್ಸಿನಲ್ಲಿಯೇ ಬರೆಯಬೇಕು ! ಉದಾ : ಭಾಮಿನೀ ಷಟ್ಪದಿಯಾದರೆ ಮೂರು ಸಾಲುಗಳಲ್ಲಿ ಮಾತ್ರೆಗಳ ಲೆಕ್ಕ ಹೀಗೆ ಬರಬೇಕು :
3 | 4 | 3 | 4
3 | 4 | 3 | 4
3 | 4 | 3 | 4 | 3 | 4 | 2
ಹೀಗೆ ಬೇರೆ ಬೇರೆ ಛಂದಸ್ಸುಗಳದ್ದು ಬೇರೆ ಬೇರೆ ಲೆಕ್ಕ ಇದೆ. ಇಷ್ಟಕ್ಕೆ ಮುಗಿಯಲಿಲ್ಲ, ಪ್ರತೀ ಸಾಲಿನ ಎರಡನೇ ಅಕ್ಷರ ಪ್ರಾಸ ಬೇರೆ ಆಗಬೇಕು(ಆದಿಪ್ರಾಸ). ಇದೆಂತಹಾ ನಿಬಂಧನೆಗಳ ಜಟಿಲ ಜಾಲ ಸ್ವಾಮೀ ಅಂತ ಹೆದರಬೇಡಿ, ಹಳಗನ್ನಡದ ಪದ್ಯಗಳಲ್ಲೆಲ್ಲ ಹೀಗೆ ಛಂದಸ್ಸನ್ನೂ ಆದಿಪ್ರಾಸವನ್ನೂ ಪಾಲಿಸಲಾಗುತ್ತದೆ. ಪದ್ಯಪಾನ ಅಂತೊಂದು ರಾ ಗಣೇಶರ ತಂಡದ್ದೇ ಸೈಟಿದೆ. ಅಲ್ಲಿ ಹೀಗೆ ದತ್ತಪದಿಯ ಸವಾಲುಗಳನ್ನು ಒಡ್ಡಲಾಗುತ್ತದೆ. ಈ ಚಾಲೆಂಜಿಂಗ್ ಪದ್ಯಗಳನ್ನು ಬರೆದೆಸೆಯುವ, ನೀಡಿದ ಪದಗಳನ್ನು ಬಳಸಿ, ಆದಿಪ್ರಾಸ ಮಾಡಿ , ಕೊಟ್ಟ ವಿಷಯದಲ್ಲಿ, ಛಂದಸ್ಸಿನಲ್ಲಿಯೇ ಬರೆಯುವ ಘಟಾನುಘಟಿಗಳು ಅಲ್ಲಿದ್ದಾರೆ. ಅಲ್ಲಿಂದ ಒಂದಷ್ಟು ಸವಾಲು ಜವಾಬುಗಳನ್ನು ಹೆಕ್ಕಿ, ಸಾಹಿತ್ಯದ ಬಾರಿನಲ್ಲಿ ಹೊಸತಾಗಿ ಪದ್ಯಪಾನ ಮಾಡುವವರಿಗಾಗಿ ಇಲ್ಲಿ ಕೊಟ್ಟಿದ್ದೇನೆ (ಆದಷ್ಟೂ ಸುಲಭವಾಗಿ ಅರ್ಥವಾಗುವ ಪದ್ಯಗಳನ್ನೇ ಎತ್ತಿಕೊಂಡಿದ್ದೇನೆ, ಅಲ್ಲಲ್ಲಿ ಬರುವ ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳನ್ನು ಬ್ರಾಕೆಟ್ಟಿನಲ್ಲಿ ಹಾಕಿದ್ದೇನೆ), ತಡವೇಕೆ ? ನಡೆಯಲಿ ಪದ್ಯವೃಷ್ಟಿ:

ದೇವಿಯೊಂ ಔರ್ ಸಜ್ಜನೋ, ಆಪ್ಕಾ ಪೆಹಲಾ ಸವಾಲ್ ಇಂತಿದೆ :
Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನುಪಯೋಗಿಸಿ ಶ್ರೀ ಹರಿಯು, ಭಕ್ತನ ನೆರವಿಗೆ ಬಂದ ಸಂದರ್ಭವನ್ನು ವಿವರಿಸಿ. ಅಬ್ಬಬ್ಬಾ! ಎಲ್ಲಿಯ ಆಟೋ, ಎಲ್ಲಿಯ ವೋಲ್ವೋ, ಎತ್ತಣ ಹರಿಭಕ್ತರು ? ಗೊತ್ತಾಗಬೇಕಾದರೆ ಹಂಸಾನಂದಿ ಅನ್ನುವವರ ಪದ್ಯವನ್ನೇ ನೋಡಬೇಕು:
ಮೊಸಳೆಯಾರ್ಭಟವೇನು! ಆಟೋಪವಿನ್ನೇನು!
ಹಸುಳೆಯಾನೆಯ ಬಾಳೆಗಿಡದವೋಲ್ವೊರಗಿಸೆ
ಅಸುವಕಾಯೆಂಬ ಮೊರೆಗಲ್ಲಾರಿಗೂ ಮೊದಲು
ನಸುನಗುತ ಹರಿಯಂತರಿಕ್ಷದಲೆ ಪೊರೆದ!
(ಎಲ್ಲ ಪದಗಳು ಬಂದವೇ ಅಂತ ನೋಡಿಕೊಳ್ಳಿ. ಗಜೇಂದ್ರಮೋಕ್ಷ ಪ್ರಕರಣದಲ್ಲಿ, ಆನೆ ನೀರು ಕುಡಿಯಲು ಬಂದಾಗ ಮೊಸಳೆ ಅದರ ಕಾಲನ್ನು ಕಚ್ಚಿ ಹಿಡಿದಾಗ,ವಿಷ್ಣು ಅದನ್ನು ಕಾಪಾಡುತ್ತಾನೆ. ಬಾಳೆಗಿಡದವೋಲ್ವೊರಗಿಸೆ = ಬಾಳೆಗಿಡದ ಹಾಗೆ ಕೆಳಗೆ ಬೀಳಿಸಲು)

ಅಲ್ಲಿಂದ ಹೊರಟು ಹನೂಮಂತನ ಕಡೆಗೆ ಹೋಗೋಣ. ಎರಡನೇ ಒಗಟು ಇದು: “ape, lemur, monkey, gibbon” – ಈ ಪದಗಳನ್ನುಪಯೋಗಿಸಿ ನಿಮಗಿಷ್ಟವಾದ ಛಂದಸ್ಸಿನಲ್ಲಿ ಹನುಮಂತನ ಸಮುದ್ರ ಲಂಘನದ ಬಗ್ಗೆ ಪದ್ಯ ರಚಿಸಿರಿ ಅಂದಾಗ ಗಾಯತ್ರಿ ಇಂದಾವರ ಅನ್ನುವವರು ಕೊಟ್ಟ ಪರಿಹಾರ:
ಜಲರಾಶಿಯವನೇ ಪರೀಕ್ಷಿಸಲು ಹೇಳಿದನು
ಸುಲಭವಲೆ ಮೂರು ಜಗದೊಡೆಯನ ಸೇವೆ
ಕುಲಕೆ ಹನುಮಂ ಕೀರ್ತಿ ತರಲೆಂದು ಹಾರಿದನು
ಸಲಿಲವದು ತೋರಲವಗಿಬ್ಬನಿಯವೊಲ್
(ಸಲಿಲ = ನೀರು, ತೋರಲವಗಿಬ್ಬನಿಯವೊಲ್ = ಅವನಿಗೆ ಇಬ್ಬನಿಯಂತೆ ತೋರಲು. ಹನೂಮಂತನು ಉತ್ಸಾಹದಿಂದ ಸಮುದ್ರದ ಮೇಲೆ ಹಾರುತ್ತಿರಲು, ಆ ಜಲರಾಶಿ ಅವನಿಗೆ ಇಬ್ಬನಿಯಂತೆ ತೋರಿತು)

ಇನ್ನೊಂದು ಸಮಾಧಾನ ಸೋಮ ಅವರಿಂದ:
“ಹೇ ಪವನಸುತನೆ ನಿನಗಿಬ್ಬಂದಿತನ ತರವೆ
ಭೂಪನೇಳೀಗಲೇ ಮುರಿದು ಭಯವ
ಭಾಪೆನುವ ಕಜ್ಜಮ೦ ಕೀಳ್ಮಾಡೆ ಶಕ್ಯನೆನೆ”
ಗೋಪುರದವೊಲು ಬೆಳೆದು ತಾ೦ ಜಿಗಿದನಯ್
(ನಿನಗಿಬ್ಬಂದಿತನ = ನಿನಗೆ ಇಬ್ಬಂದಿತನ, ಕಜ್ಜಮ೦ = ಕೆಲಸವನ್ನು, ಗೋಪುರದವೊಲು = ಗೋಪುರದಂತೆ. ಜಾಂಬವಂತನು ಹನೂಮಂತನನ್ನು ಹುರಿದುಂಬಿಸುವುದು ಮೊದಲ ಮೂರು ಸಾಲುಗಳಲ್ಲಿದೆ)

ಆಯಿತಲ್ಲ, ಹನೂಮಂತ ಹಾರಿಯಾಯಿತು, ನಾವೀಗ ಸುಂದರಿಯರ ಕಡೆಗೆ ನೆಗೆಯೋಣ. Bajaj,Yamaha,Kawasaki,Kinetic ಈ ನಾಲ್ಕುಪದಗಳನ್ನು ಬಳಸಿ, ಒಬ್ಬಳು ಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಹೇಗೆ ಬರೆಯುತ್ತಾರಪ್ಪಾ ಅಂತ ತಲೆಹಾಳಾದರೆ ಹಂಸಾನಂದಿಯವರ ಚೆಲುವಾದ ಪರಿಹಾರವನ್ನು ನೋಡಿದರಾಯಿತು :
ಏನು? ಮುಡಿಯಲಿ ತುಂಬ ಜಾಜಿಯ ಹೂವ ಮುಡಿದಿಹೆ ಚೆಂದದಿ
ಏನೊ ಕಾರ್ಯ ಮಹದಾನಂದದಿ ಮಾಡಹೊರಟಿಹೆ ಬಲ್ಲೆನು
ನೀನು ನೋಟದಲೇನೆ ಕೊಲುವುದು ಮಿಕವ ಸಾಕಿನ್ನೆನ್ನುತ
ಕೈನೆ ಟಿಕಲಿಯ ನೊಸಲಿಗಿಡುತಲಿ ಒಡತಿಗೊರೆದಳು ಚೆನ್ನುಡಿ
(ಕೈನೆ= ಸೇವಕಿ; ಟಿಕಲಿ= ಹಣೆಬೊಟ್ಟು,ನೊಸಲು = ಹಣೆ, ಕಿರಿಯ ಪ್ರಾಯದ ಒಡತಿ ಯಾರನ್ನೋ ಮರುಳು ಮಾಡುವುದನ್ನು ನೋಡಿ ಹಿರಿಯವಳಾದ ಪರಿಚಾರಿಕೆ ಹೇಳುವ ಮಾತು ಇಲ್ಲಿದೆ)
ಚಿತ್ರ ವಿಚಿತ್ರ ಪದಗಳನ್ನು ಹೇಗೆ ಸಲೀಸಾಗಿ ಹಿಡಿದು ಪದ್ಯದೊಳಗೆ ಕೂರಿಸಿ ಕವಿಗಳು ನಗುತ್ತಿದ್ದಾರೆ ಅಂತ ನೋಡ್ತಾ ಇದ್ದೀರಲ್ಲ. ಈ ಪದಕ್ರೀಡೆಗೆ ಮನಸ್ಸಿನಲ್ಲೇ "ವಾರೆ ವಾಹ್" ಹೇಳಿ ಮುಂದಿನ ಪಂಥಾಹ್ವಾನಕ್ಕೆ ಬನ್ನಿ.

“ವಿಪ್ರೋ”,“ಸತ್ಯಂ”,”ಟಿಸಿಎಸ್”, “ಗೂಗಲ್”, ಈ ಪದಗಳನ್ನು ಉಪಯೋಗಿಸಿ Raghavendra H ಅವರು ಭಾಮಿನೀಷಟ್ಪದಿಯಲ್ಲಿ ಮಳೆಯನ್ನು ವರ್ಣಿಸಿದ್ದು ಹೀಗೆ:
ಪರಕೆ ಫಲಿಸಿತು ಸತ್ಯಮುಲಿಪರ !
ಕೆರೆಯು ತುಂಬಿತು ಕುಸುಮವರಳಿತು |
ಸರಿಯಲಿ ರವಿ ಪ್ರೋಕ್ಷಿಸುತೆ ಮಳೆಯಿಳೆಗೆ ವರಜಲವ ||
ಧರಿಸಿ ಶರವನು ಮಾರಚಾಪದಿ
ಶರದನೊಡೆಯಲು ನವಿಲುಗೂಗಲಿ |
ಬರದ ಘೋರಾಸುರನ ಕುಟ್ಟಿಸಿ ಎಸೆದ ಮಳೆರಾಯ ||
(ಪರಕೆ = ಹರಕೆ , ಸತ್ಯಂ ಉಲಿಪರ = ಸತ್ಯ ಹೇಳುವವರ, ಸರಿ= ಬೆಟ್ಟದ ಜಾರು. ಶರ= ಬಾಣ/ನೀರು; ಮಾರಚಾಪ = ಕಾಮನಬಿಲ್ಲು , ಬರ= ಕ್ಷಾಮ)

ಶಬ್ದ ಚಮತ್ಕಾರದ ಮಳೆಯಾಯಿತಲ್ಲ. ಇನ್ನೀಗ ಪಬ್ಲಿಕ್ ಟಿವಿಯ ಕಡೆ ಕಿವಿಗೊಡಿ, "ಆಲ್ರೈಟ್ ಮುಂದಕ್ಕೋಗೋಣ" ಎಂಬ ಉದ್ಗಾರ ಕೇಳಿ ಕಿವಿ ಪಾವನವಾಯ್ತಲ್ಲ, ಹಾಗೆಯೇ ಮಾಡೋಣ. ಇಂಗ್ಲೀಷು ಪದಗಳನ್ನು ತಂದು ಇನ್ನಷ್ಟು ಕಠಿಣ ಸವಾಲನ್ನೊಡ್ಡಿ ನೋಡೋಣ.
ಲಿಕ್ಕರ್, ನಿಕ್ಕರ್, ಕುಕ್ಕರ್, ಸಕ್ಕರ್ ಪದಗಳನ್ನು ಬಳಸಿ ದುಷ್ಟರನ್ನು ನಿಂದಿಸುವ ಪದ್ಯ ಬೇಕಂತೆ,ಅಯ್ಯೋ ದೇವರೇ! ಇದು ಹೇಗೆ ? ಶಕುಂತಲಾ ಮೊಳೆಯಾರ ಪಾದೆಕಲ್ಲು ಅವರ ರಚನೆ :
ಪಾಲನಿಕ್ಕರ್,ಬಿಲದೆ ಜೀವಿಪ
ಕಾಲಸರ್ಪಂ ಪಸಿಯಲಿಕ್ಕರ್
ಕೋಲಿನಿಂದಪ್ಪಳಿಸಿ ದುಷ್ಟರ್ ಸಂತಸಂಗೊಂಬರ್ |
ಫಾಲಲೋಚನನಾಲಯದೆ,ಪರಿ-
ಪಾಲಿಸುತೆ,ಸಕ್ಕರೆಯ ನೀಡುತೆ
ಮಾಲೆಯಿಕ್ಕುತೆ,ಕಲ್ಲಿನುರಗನ ಪೂಜಿಪರ್,ಕುಕ್ಕರ್ ||
(ಪಾಲನಿಕ್ಕರ್ = ಹಾಲನ್ನು ಇಕ್ಕರು,ಪಸಿಯಲಿಕ್ಕರ್ = ಹಸಿದಾಗ ಇಕ್ಕರು, ಫಾಲಲೋಚನ = ಹಣೆಯಲ್ಲಿ ಕಣ್ಣಿರುವವನು, ಅಂದರೆ ಶಿವ, ಕಲ್ಲಿನುರಗ = ಕಲ್ಲಿನ ಹಾವು, ಕುಕ್ಕರ್ = ನಾಯಿಗಳು)

ಆಯಿತು ಅಂದಿರಾ ? ತಡೀರಿ. ಈಗ ಇದೆ ಮಜಾ. ಕಾಲರಾ, ಕಾಮಾಲೆ, ಜ್ವರ, ಆಮಶಂಕೆ ಪದಗಳನ್ನು ಬಳಸಿ ಧನ್ವಂತರಿಯ ಸ್ತುತಿಯನ್ನು ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ಮಾಡಿ ನೋಡೋಣ. ಬರೀ ನೋಡುವುದಲ್ಲ, ಮಾಡಿ ನೋಡಿ ಸ್ವಾಮೀ. ಇದೊಳ್ಳೆ ಕಷ್ಟವಾಯಿತಲ್ಲ ಅಂದಿರಾ ? ಆಯಿತು ಬಿಡಿ. ಕಾಂಚನಾ ಅವರ ಉತ್ತರವನ್ನೇ ನೋಡಿಬಿಡಿ:
ಪರಿಮಳದ ಮಲ್ಲಿಕಾ ಮಾಲೆಯಂ ಹೆಣೆಯುತ್ತ
ಲಿರುವಂತ ಮೋಹಜ್ವರವನಳಿಸಲು,
ಚಿರಕಾಲ ರಾಜಿಸಲು ಹೃದಯ ಮಂದಿರದಲ್ಲಿ
ಕರೆವೆನಾ ಹರಿನಾಮ ಶಂಕೆಯಿರದೇ
(ಮಲ್ಲಿಕಾ = ಮಲ್ಲಿಗೆ)
ಯಾವ ಯಾವ ಪದಗಳನ್ನು ಹೇಗೇಗೆ ತೂರಿಸಲಾಯ್ತು ಅಂತ ನೋಡಿಯಾದರೆ ಮುಂದಿನ ಸವಾಲಿನೆಡೆಗೆ ನುಗ್ಗಬಹುದು.

ಹಂಸಾನಂದಿಯವರು ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಆಗುವಂತೆ ಬರೆದದ್ದು:
ಕಾನನದಿ ಸೀತೆಯೆಲ್ಲೋ ನೀರು ತರುವಾಗ
ವೈನಾದ ಹೊನ್ನಜಿಂಕೆಯ ನೋಡಿ ಬಯಸೆ
ತಾನಲ್ಲೆ ಮನದನ್ನೆಯಾಸೆ ತೀರಿಸೆ ರಾಮ
ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ
(ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ = ಚಿನ್ನ ಮಿಗಕೆ ಎಳಸಿರೆ ಎಡಗಣ್ಣು ಅದುರಿತು ಅವಗೆ. ಮಾಯಾ ಮೃಗದ ಸಂದರ್ಭ. ಗಂಡಸರ ಎಡಗಣ್ಣು, ಹೆಂಗಸರ ಬಲಗಣ್ಣು ಅದುರಿದರೆ ಅಶುಭ ಶಕುನವೆಂಬುದು ಕವಿಸಮಯ)

ಗಣಿತಪ್ರಿಯರಿಗೆ Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರೂ ಘಟನಾವಳಿಯನ್ನು ಹೇಳಬೇಕೆಂಬ ಸವಾಲು ಖುಶಿ ಕೊಡಬಹುದು. T S Rajagopal ಅವರು ಕಟ್ಟಿದ ಪದ್ಯ :
ಕಲ್ಲೆದೆಯ ಕಂಸನಿಗೆ ಸೈನಿಕರು ಬಂದೊರೆಯೆ
ಕಲ್ಲೆಸೆದ ಕಾಸಾರವಾಯ್ತು ಮನವು |
ಕಲ್ಲಿಗಪ್ಪಳಿಸಲ್ಕೆ ಶಿಶುವನಕಟಾ ನೆಗಹಿ-
ತಲ್ಲಿಯೇ ಗಗನಕಾಟಿಕೆಯ ತೆರದಿ ||
(ಕಾಸಾರ = ಸರೋವರ , ನೆಗಹಿತು = ಚಿಮ್ಮಿತು. ಕೃಷ್ಣ ಹುಟ್ಟಿದಾಗ, ವಸುದೇವನು ಕಾರಾಗೃಹದಿಂದ ತಪ್ಪಿಸಿಕೊಂಡು, ಅವನನ್ನು ಗೋಕುಲದಲ್ಲಿ ಬಿಟ್ಟು,ಯಶೋದೆ ಮತ್ತು ನಂದಗೋಪರ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ದೇವಕಿಗೆ ಹುಟ್ಟಿದ ಶಿಶು ಅದು ಎಂದು ಭ್ರಮಿಸಿ ಕಂಸನು ಆ ಮಗುವನ್ನು ಕೊಲ್ಲಲು ಪ್ರಯತ್ನಿಸುವ ಸಂಧರ್ಭ ಇದು). ಗಣಿತದ ವಿಷಯ ಎತ್ತಿದರೆ ಕೂಡಲೇ ಡ್ಯಾಗರ್, ಗನ್ನು,ಲಾಂಗು ಎಲ್ಲ ಎತ್ತುವವರಿದ್ದಾರೆ. ಅವುಗಳನ್ನಿಟ್ಟುಕೊಂಡೂ ಪದ್ಯರಚನೆಯಾಗಿ ಹೋಗಲಿ.

Dagger (ಡಾಗರ್/ಡ್ಯಾಗರ್), Gun, Long, Acid (ಆಸಿಡ್) – ಈ ಪದಗಳನ್ನು ಬಳಸಿ ಸತ್ಯಭಾಮೆಯ ಸೆಡವಿಗೆ ಕಾರಣವನ್ನು ಹೇಳಬೇಕು ಅಂದರೆ ಯಾರಾದರೂ ತಬ್ಬಿಬ್ಬಾಗಬಹುದು. ಪರಿಹಾರ ಇದ್ದೇ ಇದೆ . ಕಾಂಚನಾ ಅವರ ರಚನೆ:
ನೋಡಾ! ಗರ್ಜಿಪ ಮೇಘವ – ರವಿಯೆಡೆ
ಕಾಡುತ್ತಿರಲಾಂಗನೆಯರನಂ
ಕೇಡಾ ಸಿಡುಕದ ಭಾಮೆಗೆರಗದೇ?
ಮಾಡಿರೆ ಸವತಿಯ ಘನಶಾಮಂ
(ಕಾಂಚನಾ ಅವರದ್ದೇ ವಿವರಣೆ : ಇತರ ಹೆಂಗಳೆಯರಲ್ಲಿ ರವಿಯ ಸ್ನೇಹವನ್ನು ಕಂಡ ಮೇಘ, ತನ್ನ ರಕ್ಷಣೆಗಾಗಿ ಗರ್ಜಿಸುತ್ತಿದ್ದಾಳೆ. ಅಂತೆಯೇ, ಸವತಿಯ ಸ್ಥಾನವನ್ನು ಗಳಿಸಿದ ಸತ್ಯಭಾಮೆಯೂ ತನಗಾಗುವ ಕೇಡನ್ನು ತಡೆಯಲು ಸಿಡುಕುವುದೇ ಸೂಕ್ತ)

ಕಡೆಯದಾಗಿ, ತಿಂಡಿಪ್ರಿಯರನ್ನು ಸಂಪ್ರೀತರನ್ನಾಗಿಸಿ ಇದನ್ನು ಮುಗಿಸೋಣ. ‘ದೋಸೆ’, ‘ಸಾರು’, ‘ಪಲ್ಯ’, ‘ಪೂರಿ’ ಪದಗಳನ್ನುಪಯೋಗಿಸಿ ನಿಮ್ಮ ಇಷ್ಟದೇವತೆಯ ಸ್ತುತಿಯನ್ನು ಪದ್ಯರೂಪದಲ್ಲಿ ರಚಿಸಿರಿ ಅಂದಾಗ ಹಂಸಾನಂದಿಯವರಿಗೆ ಹೊಳೆದ ಪದ್ಯ ಇದು :
ಕಾಯಿಪಲ್ಯದ ಹಾರತೊಟ್ಟಿಹ
ತಾಯೆ ಶಾಕಂಭರಿಯೆ ನೀ ವರ
ವೀಯೆ ಸಾರುತ ನಂಬಿದವರನು ಪೊರೆವೆನೆನ್ನುತಲಿ
ಹಾಯೆನಿಸಿದೋ ಸೆರೆಯ ಜೀವವ
ಕಾಯುವುದು ತರ ನಿಖಿಳ ಜಗಕೆ-
ನ್ಯಾಯ ಕರುಣಾ ಪೂರಿತೆಯೆ ಹಸಿವನ್ನು ನೀನಳಿಸಿ

ಇದಕ್ಕೆ ಇನ್ನೊಂದು ಮಜವಾದ ಪರಿಹಾರವೂ ಇದೆ. ಸುಧೀರ್ ಕೇಸರಿ ಅನ್ನುವವರು ಸಂಸ್ಕೃತದ ಶಾಲಿನೀ ವೃತ್ತ ಎಂಬ ಛಂದಸ್ಸನ್ನು ಇಂಗ್ಲೀಷಿನಲ್ಲಿ ಹೊಸೆದು, ದೋಸೆ, ಪೂರಿ,ಸಾರು , ಪಲ್ಯಗಳನ್ನೆಲ್ಲ ಆಂಗ್ಲಭಾಷೆಯಲ್ಲಿ ತಂದು ಚಮತ್ಕಾರದ ರಚನೆ ಮಾಡಿದ್ದಕ್ಕೆ ಚಪ್ಪಾಳೆ ತಟ್ಟಲೇಬೇಕು:
Though sages say thou art abstract and abstruse,
Don’t people yearn all the time just to see you?
Those Who saw rules of the Cosmic Dimensions
can't describe you ; speech is poor in that aspect!

ಪದ್ಯಪಾನದಲ್ಲಿ ಬಂದಿರುವ ಎಲ್ಲ ದತ್ತಪದಿಗಳನ್ನೂ, ಪರಿಹಾರಗಳನ್ನೂ ಇಲ್ಲಿ ನೋಡಬಹುದು: http://padyapaana.com/?cat=56

ಅವಧಾನ ಕಲೆಯ ಪರಿಚಯವನ್ನು ಮಂಜುನಾಥ ಕೊಳ್ಳೇಗಾಲ ಅವರ ಬ್ಲಾಗಿನಲ್ಲಿ ಓದಬಹುದು :
http://nannabaraha.blogspot.com/2012/11/blog-post.html

ನೀವು ಓದಬೇಕಾದ ಕೆಲವು ಪುಸ್ತಕಗಳು


#sevendaysbookschallenge

Ganesh Bhat Nelemav ಅವರು ಎಸೆದಿರುವ ಪುಸ್ತಕದ ಸವಾಲನ್ನು ಜಾಂಟಿ ರೋಡ್ಸಿನ ಹಾಗೆ ಹಾರಿ ಹಿಡಿದಿದ್ದೇನೆ.

ಮೊದಲಿಗೆ, ಸೇಡಿಯಾಪು ಕೃಷ್ಣಭಟ್ಟರು ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು(ಆ ಮೂಲಕ ಟೈಪು ಮಾಡುವ ಕಷ್ಟದಿಂದ ಜಾರಿಕೊಳ್ಳಬಹುದು !
“ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕರ್ತ, ಅಚ್ಚಗನ್ನಡದ ಹುಚ್ಚ – ಕ್ಷಮಿಸು, ನಮೋ ನಮೋ, ಕನ್ನಡದ ತಿರುಳನ್ನು ಕಂಡು ಉಂಡು ಉಣಿಸಿದ ಪಂಡಿತರಲ್ಲಿ, ಕನ್ನಡ ಕಾವ್ಯಪಾಠಕರಲ್ಲಿ ಪರಮೋಚ್ಚ, ಸಿರಿವಂತರ ಕುಲದಲ್ಲಿ ಜನಿಸಿಯೂ ಕಡುಬಡವ, ಬದುಕನ್ನೆಲ್ಲಾ ಬಡತನದಲ್ಲಿಯೇ ಕಳೆದೂ ಮನಸ್ವಿ, ವರ್ಚಸ್ವಿ, ಯಶಸ್ವಿ, ಹಳಗನ್ನಡ – ಹೊಸಗನ್ನಡ ಹಾರದ ಮಧ್ಯಮಣಿ, ನಮ್ಮ ಮುದ್ದಿನ ಮುದ್ದಣ, ನವೋದಯದ ಮುಂಗೋಳಿ, ಸ್ವರವೆತ್ತಿ ಕೂಗಿ ಕೆಲೆದು ನುಡಿಯಿಸಿದ ಕನ್ನಡವಕ್ಕಿ ನಮ್ಮ ಮುಳಿಯದ ಪಂಡಿತವಕ್ಕಿ” .

ತಿಮ್ಮಪ್ಪಯ್ಯನವರು ಹಳಬರು, ಪುಸ್ತಕ ಪ್ರಕಟಣೆ ಎಲ್ಲ ತುಂಬ ಕಷ್ಟ ಅನಿಸಿದ ಕಾಲ ಅವರದು. ಜೊತೆಗೆ ಆರ್ಥಿಕ ಸಂಕಷ್ಟ ಬೇರೆ. "ನಮ್ಮ ತಿಮ್ಮಪ್ಪಯ್ಯ ಅದೆಂತದೋ ಪಂಪ ಅನ್ನುವ ಪುಸ್ತಕ ಬರೆದಿದ್ದಾನೆ, ನಾನು ಅವನಿಗೆ (ಆ ಕಾಲದ) ಐದು ರೂಪಾಯಿ ಕೊಟ್ಟಿದ್ದೇನೆ, ಅದರ ಒಂದು ಪ್ರತಿಯನ್ನೂ ಖರೀದಿ ಮಾಡಿ ನಮ್ಮ ಹಳ್ಳಿಯ ಗ್ರಂಥಾಲಯಕ್ಕೆ ಕೊಟ್ಟಿದ್ದೇನೆ" ಅಂತ ನಮ್ಮ ಊರಿನ ಆಢ್ಯ ಮಹನೀಯರೊಬ್ಬರು ಆ ಕಾಲದಲ್ಲಿ ಹೇಳಿದ್ದರಂತೆ('ನಾಡೋಜ ಪಂಪ' ಕೃತಿಯ ಬಗ್ಗೆ). ಅವರೋ ಈ ಪುಸ್ತಕಗಳನ್ನೆಲ್ಲ ಓದಿ ಆಸ್ವಾದಿಸುವ ರುಚಿಯಿದ್ದವರಲ್ಲ, ಆದರೂ ತಿಮ್ಮಪ್ಪಯ್ಯ ಮಾಡಿದ್ದು ಅಂದಮೇಲೆ ಒಳ್ಳೆ ಕೆಲಸವೇ ಇರಬೇಕು, ನಾನು ಅದಕ್ಕೆ ನನ್ನಿಂದಾದ ಸಹಕಾರ ಕೊಡಬೇಕು ಅನ್ನುವ ಭಾವ ಅವರದ್ದು !

ಕನ್ನಡದಲ್ಲಿ ಇದುವರೆಗೆ ಸಿಕ್ಕಿರುವ ಗ್ರಂಥಗಳಲ್ಲಿ ಅತ್ಯಂತ ಹಳೆಯದೆಂದರೆ ಕವಿರಾಜಮಾರ್ಗ(ಪುರುಸೊತ್ತಾದರೆ, ಈ ಕವಿರಾಜಮಾರ್ಗ ಕೃತಿಯ ಬಗ್ಗೆ ಒಂದು ಲೇಖನವನ್ನು ಯಾವಾಗಲಾದರೂ ಒಮ್ಮೆ ನಾನೇ ಬರೆಯುತ್ತೇನೆ) ಈ ಪುಸ್ತಕದ ಕುರಿತಾಗಿ ಮುಳಿಯ ತಿಮ್ಮಪ್ಪಯ್ಯನವರು ಮಾಡಿರುವ ಸಂಶೋಧನೆ, ವ್ಯಾಖ್ಯಾನ,ವಿವರಣೆಗಳು “ಕವಿರಾಜಮಾರ್ಗ ವಿವೇಕ”ದಲ್ಲಿವೆ. ಕಥೆ ಕಾದಂಬರಿಗಳನ್ನು ಓದಿದಂತೆ ಇದನ್ನೊಂದು ಟೈಂಪಾಸ್ ಪುಸ್ತಕವಾಗಿ ಓದುವುದು ಕಷ್ಟ If I have seen further it is by standing on the shoulders of giants ಅನ್ನುವುದು ನ್ಯೂಟನ್ನನ ಮಾತು. ನೀನಾಸಂನ ಕೆ.ವಿ. ಸುಬ್ಬಣ್ಣನವರು ತಮ್ಮ "ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು" ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ :
"ಇಲ್ಲಿನ ನನ್ನ ಬರವಣಿಗೆಯು ದಿ. ಮುಳಿಯ ತಿಮ್ಮಪ್ಪಯ್ಯನವರ 'ನಾಡೋಜ ಪಂಪ' ಮತ್ತು 'ಕವಿರಾಜಮಾರ್ಗ ವಿವೇಕ' -- ಈ ಗ್ರಂಥಗಳಿಗೆ ಅನೇಕ ರೀತಿಗಳಲ್ಲಿ ಋಣಿಯಾಗಿದೆ. ಈ ಋಣವನ್ನು ಹೇಳಿಕೊಳ್ಳುವುದೇ ನನಗೆ ಹೆಮ್ಮೆ."

ಇವೆರಡನ್ನು ಸೇರಿಸಿ ಹೇಳುವುದಾದರೆ, ನಾನು ಪಂಪನ ಕಾವ್ಯವನ್ನು,ಮನಸ್ಸನ್ನು ಅಷ್ಟಿಷ್ಟು ಅರ್ಥಮಾಡಿಕೊಂಡದ್ದು ಮತ್ತು ಕವಿರಾಜಮಾರ್ಗಕಾರನ ತಲೆಯೊಳಗಡೆ ಸ್ವಲ್ಪ ಇಣುಕಿ ನೋಡಿದ್ದು ಮುಳಿಯದ ಪಂಡಿತರ ಹೆಗಲಿನ ಮೇಲೆ ನಿಂತೇ ಅನ್ನುವುದು ನನಗೆ ಹೆಮ್ಮೆಯ ವಿಷಯ.

ಎರಡನೇ ದಿನದ ಆಯ್ಕೆ:

ಒಂದು ಕಾಲದಲ್ಲಿ ನಾನು ಕಂಡದ್ದನ್ನೆಲ್ಲ ಓದಿ ಗುಡ್ಡೆ ಹಾಕುತ್ತಿದ್ದವನು, ತೆಂಡೂಲ್ಕರನು ಕೈಗೆ ಕಾಲಿಗೆ ತಡವಿದ, ಸಿಕ್ಕಿ ಸಿಕ್ಕಿದ ದಾಖಲೆಗಳನ್ನೆಲ್ಲಾ ಮುರಿದು ರಾಶಿ ಹಾಕುತ್ತಿದ್ದ ಹಾಗೆ ನಾನು ಸಿಕ್ಕಿದ್ದು, ಹಾಗೆಲ್ಲ ಸಿಕ್ಕದ್ದು, ಕಂಡದ್ದು, ಸುಲಭಕ್ಕೆ ಕಾಣದ್ದು ಎಲ್ಲವನ್ನೂ ಓದಿ ಬಿಸಾಡುತ್ತಿದ್ದೆ. ಇದರಿಂದ ಲಾಭವೂ ಆಯಿತು, ಒಮ್ಮೊಮ್ಮೆ ಸಮಯ ನಷ್ಟವೂ ಆಯಿತು. ಆ ಹೊತ್ತಿನಲ್ಲಿ, ಪ್ಯಾರಿಸ್ ಸುತ್ತುತ್ತೇನೆ ಅಂತ ಹೊರಟವನಿಗೆ ನುರಿತವನೂ, ವಾಕ್ಪಟುವೂ ಆದ ಟೂರ್ ಗೈಡ್ ಸಿಕ್ಕುವಂತೆ ಸಿಕ್ಕಿದ್ದು ಜಾನಕಿ ಕಾಲಂ. ಪೂರ್ವಸೂರಿಗಳ ಪರಿಚಯ ಮಾಡಿಸುತ್ತಾ, ಏನನ್ನು ಓದಬೇಕು, ಏನನ್ನು ಓದಲೇಬೇಕು ಅಂತೆಲ್ಲ ಹೇಳುತ್ತ ಹೋದ, ಓದನ್ನು ಕಲಿಸುತ್ತ ಹೋದ ಕಾಲಂ ಅದು.

ಪ್ರತೀಸಲ ಸಾಹಿತ್ಯಾಸಕ್ತರು ಸಿಕ್ಕಾಗಲೂ ಜಾನಕಿ ಕಾಲಂನ ಪ್ರಸ್ತಾವ ಬಂದು, ಜಾನಕಿ ಯಾರು ಅನ್ನುವ ಪ್ರಶ್ನೆ ಬರುತ್ತಿತ್ತು, ರವಿ ಬೆಳಗೆರೆಯೇ ಜಾನಕಿಯಿರಬಹುದು ಎಂಬಲ್ಲಿಂದ ಶುರುವಾಗಿ ಮಂಗಳಗ್ರಹದ ಉತ್ತರ ಭಾಗದಲ್ಲಿ ವಾಸ ಮಾಡುತ್ತಿರುವವರೊಬ್ಬರೇ ಜಾನಕಿಯಂತೆ ಎಂಬಲ್ಲಿಯವರೆಗೆ ಥರಾವರಿ ಕಥೆಗಳು ಹಬ್ಬಿದ್ದವು. ಕೆಲವರಂತೂ ಕಣ್ಣಾರೆ ನೋಡಿ ಬಂದವರಂತೆ, "ನನಗೆ ಗೊತ್ತಿಲ್ಲವೇ , ಜಾನಕಿ ಓ ಇಂಥವರೇ" ಅಂತ ಬೆರಳು ತೋರಿಸಿ ಹೇಳಿ ಬಿಡುತ್ತಲೂ ಇದ್ದರು! ಸಾಹಿತ್ಯದ ಸಭೆಗಳಲ್ಲಿ ಜಾನಕಿಯನ್ನು ಹುಡುಕುವ ನೆಪದಲ್ಲಿ ಹುಡುಗಿಯರನ್ನು ನೋಡುವ ಅವಕಾಶವೂ ಒದಗಿ ಬಂದಿತ್ತು :p

ಶೇಣಿ ಗೋಪಾಲಕೃಷ್ಣ ಭಟ್ಟರ ತಾಳಮದ್ದಳೆಯ ಅರ್ಥ ಕೇಳಿದವರಿಗೆ, ಯಾವತ್ತೇ ಆದರೂ ಇದನ್ನು ಹೀಗಲ್ಲದೆ, ಇದಕ್ಕಿಂತ ಚಂದದಲ್ಲಿ ನಿರೂಪಿಸುವುದು ಕಷ್ಟ ಅನ್ನಿಸುತ್ತಿತ್ತು, ಜೋಗಿಯವರ ಬರೆಹವೂ ಹಾಗೆಯೇ ಅನ್ನಬೇಕು. ಮಂಗಳೂರಿನಲ್ಲಿ ಒಂದುಕಾಲಕ್ಕೆ ಬರುತ್ತಿದ್ದ ನಿಲ್ಲದ ಮಳೆಯ ಹಾಗೆ ಬರೆಯುತ್ತಲೇ ಹೋದರು. ಯಕ್ಷಗಾನದಲ್ಲಿ ಪುಂಡು ವೇಷಗಳು ಕುಣಿದ ಹಾಗಿನ ವಿಮರ್ಶೆಯ ಪಾರಿಭಾಷಿಕ ಪದಗಳ ಹಾರಾಟ ಇಲ್ಲಿ ಇಲ್ಲ, "ಶ್ರೀಯುತರು ವಸಾಹತ್ತೋತರ ಹಳವಂಡಗಳ ನೇಯ್ಗೆಯ ಕಾಣ್ಕೆಯ ತಾದಾತ್ಮ್ಯದಲ್ಲಿ ತನ್ನತನದ ಅರಿವಿನ ಪರಿವೆಯ ಪರಿಪಾಕದ ಹರಳುಗಟ್ಟಿಸುವಿಕೆಯ ಸೃಷ್ಟಿಯಲ್ಲಿ ಸೋತರೂ ಗೆದ್ದಿದ್ದಾರೆ" ಯಂತಹ ವಾಕ್ಯಗಳು ಇಲ್ಲದ ವಿಮರ್ಶೆ ಜಾನಕಿ ಕಾಲಮ್ಮಿನ ವಿಶೇಷ. ಮಬ್ಬು, ಮಂಕು, ಸಪ್ಪೆ ಎಲ್ಲಕ್ಕೂ ಜಾನಕಿ ಕಾಲಮ್ಮಿಗೂ ಬಸವನಗುಡಿಯಿಂದ ವೈಟ್ ಫೀಲ್ಡ್ ಇಗೆ ಇರುವಷ್ಟು ದೂರ.

MTRನಲ್ಲಿ ಪಲ್ಯ, ಕೋಸಂಬರಿ, ಗಸಿ, ಪೂರಿ, ಚಟ್ನಿಯಿಂದ ಹಿಡಿದು ಐಸ್ ಕ್ರೀಂನ ತನಕ ಎಲ್ಲವೂ ಬಾಯಿಗೆ ಹಿತವಾಗಿ, ರುಚಿಯಾಗಿ ಇರುವಂತೆ ಜೋಗಿಯವರ ಪೆನ್ನಿನಿಂದ ಬಂದ ಎಲ್ಲ ತರದ ಬರೆಹಗಳೂ ಚುರುಕಾಗಿ, ರುಚಿಯಾಗಿ ಇದ್ದವು. ವ್ಯಂಗ್ಯ, ಮೊನಚು, ಸ್ವಾರಸ್ಯ, ರಂಜಕತೆಗಳಿಂದ ಕಳೆಗಟ್ಟಿದ, ಪುಟ್ಟ ಪುಟ್ಟ ವಾಕ್ಯಗಳನ್ನು ಪೋಣಿಸಿದ, ಬೋರು ಹೊಡೆಸುವುದೆಂದರೇನೆಂದೇ ಗೊತ್ತಿಲ್ಲದ ಲವಲವಿಕೆಯ ಗದ್ಯ ಜಾನಕಿ ಕಾಲಮ್ಮಿನ ಶಿಲ್ಪಕಲ್ಪವಾಯಿತು. "ಹಾಗಾದರೆ ಬೆಂಗಳೂರು ನಮ್ಮನ್ನು ನಿಜಕ್ಕೂ ತಬ್ಬಿಬ್ಬಾಗಿಸುತ್ತದಾ?", "ಅಷ್ಟಕ್ಕೂ ನಾವು ಪ್ರಶ್ನೆ ಮಾಡುವುದನ್ನೇ ಮರೆತಿದ್ದೇವಾ?" ಎಂಬಿತ್ಯಾದಿ ಪುಟ್ಟ ಪುಟ್ಟ ಪ್ರಶ್ನೆಗಳು ಕೂಡಾ ಜಾನಕಿ ಕಾಲಮ್ಮಿನ ವಿಶಿಷ್ಟ ನುಡಿಗಟ್ಟಿನ ಭಾಗವೇ ಆಗಿದೆ.
ಒಂದು ರಾಜಕೀಯ ಸಿದ್ದಾಂತಕ್ಕೆ ತಲೆಯನ್ನು ಬಾಂಡ್ ಪೇಪರಿನಲ್ಲಿ ಬರೆದುಕೊಟ್ಟಂತೆ ಕಾಣದ ತೆರೆದ ಮನಸ್ಸು,ಪಲಾವಿನಲ್ಲಿ ಅಲ್ಲಲ್ಲಿ ಕರಿದ ಬ್ರೆಡ್ ಸಿಗುವಂತೆ ಸಿಗುವ witty ಸಾಲುಗಳು, ಸಮಚಿತ್ತದ, ಒಮ್ಮೊಮ್ಮೆ ಚೇಷ್ಟೆಯ, ತುಂಟತನದ ಗ್ರಹಿಕೆ, ವಿಸ್ತಾರವಾದ ಓದು ಎಲ್ಲ ಸೇರಿ ಜೋಗಿ ಸ್ಟೈಲ್ ಆಗಿದೆ.

ಮೂರನೇ ದಿನದ ಆಯ್ಕೆ:
ಇವತ್ತು ಎರಡು ಪುಸ್ತಕಗಳನ್ನು ಒಟ್ಟಿಗೆ ಕೊಡುತ್ತಿದ್ದೇನೆ. ಚಿಂತಕರು, ವಿಚಾರವಾದಿಗಳು , ನಮ್ಮ ಮೆದುಳು ಹೇಗೆ ವಿಷಯಗಳನ್ನು ಗ್ರಹಿಸುತ್ತದೆ ಅಂತ ಯೋಚನೆ ಮಾಡುವವರು, ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಬೇಕು ಅನ್ನುವವರು ಎಲ್ಲ ಓದಲೇಬೇಕಾದ ಪುಸ್ತಕಗಳಿವು. Thinking, Fast and Slow ಒಂದು ಕ್ರಾಂತಿಕಾರಿ ಪುಸ್ತಕ, ಮೈಲಿಗಲ್ಲ. ಅದನ್ನು ಬರೆದ Daniel Kahneman ಅವರು Behavioral economicsನಲ್ಲಿ ದೊಡ್ಡ ಹೆಸರು (ನೊಬೆಲ್ ಪ್ರಶಸ್ತಿ ಪುರಸ್ಕೃತರು). Daniel Gilbertರು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ವಿಜ್ಞಾನಿಯಾಗಿ ಗುರುತಿಸಿಕೊಂಡವರು.

ಮನಃಶಾಸ್ತ್ರಕ್ಕೂ ಅರ್ಥಶಾಸ್ತ್ರಕ್ಕೂ ಮದುವೆ ಮಾಡಿಸಿದರೆ ಹುಟ್ಟುವ ಮಗುವಿಗೆ Behavioral economics ಅಂತ ಹೆಸರಿಡಬಹುದು. ನಮ್ಮ ಗ್ರಹಿಕೆ, ಸಂವೇದನೆ ಹೇಗೆಲ್ಲ ತಪ್ಪಾಗುತ್ತದೆ,ನಮ್ಮ ಮೆದುಳು ಹೇಗೆಲ್ಲ ನಮಗೆ ಗೊತ್ತೇ ಆಗದಂತೆ ಕೈಕೊಡುತ್ತದೆ, ನಮ್ಮ ನಿರ್ಧಾರಗಳು ಎಷ್ಟು ತರ್ಕವಿದೂರವಾಗಿರುತ್ತವೆ ಅಂತ ತಿಳಿಸಿಕೊಡುವುದು ಈ ಎರಡೂ ಪುಸ್ತಕಗಳ ಸಾಮಾನ್ಯ ಅಂಶ. Thinking, Fast and Slowನದ್ದು ಸ್ವಲ್ಪ ಗಂಭೀರವಾದ, ಬುದ್ದಿಜೀವಿಗಳ ಅಕಾಡೆಮಿಕ್ ಶೈಲಿ (ಆದರೂ ಓದಿಸಿಕೊಂಡು ಹೋಗುತ್ತದೆ), Stumbling on Happinessನದ್ದು ಸ್ವಲ್ಪ ಗಮ್ಮತ್ತು ಮಾಡಿ, ಮಜಾ ಕೊಡುವ ತಮಾಷೆಯ ಶೈಲಿ. ವಿನೋದಪ್ರಿಯನಾದ ನನಗೆ Stumbling on Happiness ಬಹಳ ಹಿಡಿಸಿತು ಅಂತ ಬೇರೆ ಹೇಳಬೇಕಾದ್ದಿಲ್ಲವಲ್ಲ.

Stumbling on Happiness ಒಂದು ಟ್ರೆಂಡ್ ಅನ್ನೇ ಹುಟ್ಟುಹಾಕಿತು ಅನ್ನಬೇಕು. ತದನಂತರ ಇದೇ ದಿಕ್ಕಿನಲ್ಲಿ ರಿಚರ್ಡ್ ಥೇಲರ್ ಅವರ Nudge: Improving Decisions about Health, Wealth, and Happiness ಅನ್ನುವ ಪುಸ್ತಕ ಬಂತು (ಇವರಿಗೆ ಕಳೆದ ವರ್ಷ ನೊಬೆಲ್ ಕೊಡಲಾಯಿತು). Dan Ariely ಬರೆದ Predictably Irrational ಸದ್ದು ಮಾಡಿತು. ಇವರು The Upside of Irrationality ಅಂತಲೂ ಒಂದು ಹೊತ್ತಗೆಯನ್ನು ಬರೆದರು.

ಹೆಚ್ಚು ಬರೆಯಲು ಸೋಮಾರಿತನ ಬಿಡುತ್ತಿಲ್ಲ, ಹಾಗಾಗಿ ಈ ಎರಡು ಪುಸ್ತಕಗಳ ಬಗ್ಗೆ ಬೇರೆಯವರು ಬರೆದ ಸಾಲುಗಳನ್ನು ಕೊಟ್ಟಿದ್ದೇನೆ.
Stumbling on Happinessಗೆ ಸಿಕ್ಕಿದ ಪ್ರಶಂಸೆಯ ಸಾಲುಗಳು :
Gilbert has a knack for coming up with zany experiments that show just how flawed and biased the human mind is. Read This Book If…
…you enjoy Harvard professors who reference The Beatles in every chapter and make jokes about quadriplegics.
…you’ve always had a hunch that you are completely full of shit but would like 400 pages of psychological research to confirm it for you.
— Mark Manson

A witty, insightful and superbly entertaining trek through the foibles of human imagination.” —New Scientist

“Gilbert’s book has no subtitle, allowing you to invent your own. I’d call it ‘The Only Truly Useful Book on Psychology I’ve Ever Read.’” —James Pressley, Bloomberg News

Thinking, Fast and Slowನ ಕುರಿತು ಬಂದಿರುವ ಮೆಚ್ಚುಗೆಯ ಸಾಲುಗಳು :

“A sweeping, compelling tale of just how easily our brains are bamboozled, bringing in both his own research and that of numerous psychologists, economists, and other experts...Kahneman has a remarkable ability to take decades worth of research and distil from it what would be important and interesting for a lay audience...Thinking, Fast and Slow is an immensely important book. ―
Jesse Singal, Boston Globe

ನಾಲ್ಕನೇ ದಿನದ್ದು :

ಇವತ್ತು ಉಳಿದ ಲೇಖಕರು ಅಷ್ಟಾಗಿ ಮುಟ್ಟದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿರುವವರ, ಜ್ಞಾನದ ಕಿಟಕಿಗಳನ್ನು ತೆರೆದು ಬುದ್ದಿಗೆ ಕೆಲಸ ಕೊಡುವಂತೆ ಬರೆದವರ,ಕಥೆ ಕಾದಂಬರಿ, ಕವನಗಳ ಆಚೆಯೂ ಸಾಹಿತ್ಯ ಇದೆ ಅಂತ ತೋರಿಸಿದವರ ಪರಿಚಯ, ಪುಸ್ತಕಗಳ ಫೋಟೋಗಳು ನೆಪಕ್ಕೆ ಮಾತ್ರ.

ಮೊದಲಿಗೆ ಪಾ.ವೆಂ. ಆಚಾರ್ಯರ "ಚಿತ್ರ ವಿಚಿತ್ರ ಈ ಜಗತ್ತು" (ಅದರ ಪ್ರತಿ ಸಿಗಲಿಲ್ಲವಾದ್ದರಿಂದ ಆಚಾರ್ಯರ masterpiece ಎನಿಸಿಕೊಂಡ , ನೂರಾರು ಪದಗಳ ಮೂಲವನ್ನು ಕೆದಕುವ ಕೃತಿಯಾದ ಪದಾರ್ಥ ಚಿಂತಾಮಣಿಯನ್ನು ಹಾಕಿದ್ದೇನೆ.

ರೀಡರ್ಸ್ ಡೈಜೆಸ್ಟ್ ಅನ್ನು ನೋಡಿ ಅಂತದ್ದು ಇಲ್ಲೂ ಬೇಕೆಂಬ ಆಸೆಯಿಂದ ಕಸ್ತೂರಿ ಪತ್ರಿಕೆ ಮಾಡಿದವರು ಪಾವೆಂ. ಆಚಾರ್ಯರೇ ಈ ಪತ್ರಿಕೆಯ ವಿಶೇಷ ಅನ್ನಬೇಕು, ಹತ್ತಾರು ಗುಪ್ತನಾಮಗಳಲ್ಲಿ ಬರೆದು ಪತ್ರಿಕೆಯ ಎಲ್ಲ ಪುಟಗಳನ್ನೂ ಒಮ್ಮೊಮ್ಮೆ ಅವರೇ ತುಂಬಿಸುತ್ತಿದ್ದರಂತೆ . ಆಚಾರ್ಯರು ಶಿವರಾಮ ಕಾರಂತರಂತೆ ನಡೆದಾಡುವ ವಿಶ್ವಕೋಶವಾಗಿದ್ದವರು, ಆದರೆ ಯಾಕೋ ಕಾರಂತರಿಗೆ ಸಿಕ್ಕಿದಷ್ಟು ಪ್ರಚಾರ ಇವರಿಗೆ ಸಿಗಲಿಲ್ಲ. SSLCಯಲ್ಲಿ rank ಬಂದರೂ ಕಿತ್ತು ತಿನ್ನುವ ಬಡತನ ಅವರನ್ನು ಡಿಗ್ರಿಗೆ ಓದಲು ಬಿಡಲಿಲ್ಲ, ಅದು ಒಳ್ಳೆಯದೇ ಆಯಿತು , ಮುಂದೆ ವಿಧಿಯ ಮೇಲೆ ಸೇಡು ತೀರಿಸಲೋ ಎಂಬಂತೆ ಪಾವೆಂ ನೂರೆಂಟು ವಿಷಯಗಳನ್ನು ಓದಿಕೊಂಡರು , ಅವುಗಳ ಬಗ್ಗೆ ಕಸ್ತೂರಿಯಲ್ಲಿ ಸೊಗಸಾಗಿ ಬರೆದರು. ವಿಜ್ಞಾನ, ಭಾಷೆ, ರಾಜಕೀಯ,ಕ್ರೈಂ, ಇತಿಹಾಸ, ಭೂಗೋಳ ಹೀಗೆ ಆಚಾರ್ಯರ ಪೆನ್ನು ಹೋಗದ ಜಾಗವಿಲ್ಲ. ಹೀಗೆ ನೂರೆಂಟು ವಿಷಯಗಳ ಬಗ್ಗೆ ಬರೆದದ್ದರ ಸ್ಯಾಂಪಲ್ ಈ "ಚಿತ್ರ ವಿಚಿತ್ರ ಈ ಜಗತ್ತು" ಪುಸ್ತಕದಲ್ಲಿದೆ. ಆಚಾರ್ಯರನ್ನು ಆ ಕಾಲದ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಅನ್ನಬಹುದು. ಇದೇ ಮಾತನ್ನು ಇವತ್ತಿನ ಉಳಿದ ಲೇಖಕರಿಗೂ ಅನ್ವಯಿಸಬಹುದು.

ವೈಎನ್ಕೆ ಬರೆಹಗಳೂ ಕಾಲಿಗೆ ಚಕ್ರ ಕಟ್ಟಿಗೊಂದು ಜಗತ್ತನ್ನು ಸುತ್ತುವ ಜಾತಿಯವು, ಸಿಕ್ಕಾಬಟ್ಟೆ ಪನ್ ಪ್ರಿಯರಾದ ವೈಎನ್ಕೆ ಬರೆದ ಅಂಕಣ ಬರೆಹಗಳು ವಂಡರ್ ಸೀರೀಸ್ ಅಂತ ಐದಾರು ಬಂದಿವೆ. ಮೇಲೆ ಉಪನಿಷತ್ತು, ಅಲ್ಲೇ ಕೆಳಗೆ ಯಾವುದೋ ಹಾಲಿವುಡ್ ಸಿನೆಮಾ ! ಕಣ್ಣು ಮಿಟುಕಿಸುವಷ್ಟರಲ್ಲಿ ರಷ್ಯಾದ ರಾಜಕೀಯ ಬಂದುಹೋಗುತ್ತದೆ, ಮುಂದಿನ ಪುಟದಲ್ಲಿ ಒಂದು ಜೋಕು ಸಿಡಿಯುತ್ತದೆ ! ಅಲ್ಲಿಂದ ಯಾವುದೋ ಯೂರೋಪಿನ ಸಾಹಿತ್ಯಕ್ಕೆ ಜಂಪ್ ! , ಅದಾಯಿತು ಅನ್ನುವಾಗ ವೈಎನ್ಕೆ ಯಾವುದೋ ಕವಿತೆಯ ಬಗ್ಗೆ ಮಾತಾಡುತ್ತಿರುತ್ತಾರೆ , ಉಸಿರು ಬಿಡುವಷ್ಟರಲ್ಲಿ ದಡಕ್ಕನೆ ಯಾರೋ ಹೇಳಿದ witty quote ಒಂದು ಪ್ರತ್ಯಕ್ಷ ! ಅಷ್ಟರಲ್ಲಿ ಅದ್ಯಾರೋ ಒಬ್ಬ ವರ್ಣರಂಜಿತ ವ್ಯಕ್ತಿ ಬರುತ್ತಾನೆ! ಹೀಗೆ ಇಡೀ ಜಗತ್ತೇ ಒಂದು ಲೇಖನದಲ್ಲಿಯೇ ಬಂದು ಬಿಡುವ ವಿಚಿತ್ರ, ವಿಶಿಷ್ಟ ಶೈಲಿ ಇವರದು.

ಮೇಲಿನ ಇಬ್ಬರು ಕೊಟ್ಟದ್ದು ಸಾಕಾಗಲಿಲ್ಲ ಅಂತಾದರೆ ಮೂರನೇ ವಿಕಿಪೀಡಿಯಾವಾದ ಎಸ್ ದಿವಾಕರರ ಅಂಕಣಗಳಿಗೆ ಬರಬಹುದು! ಜಗತ್ತಿನ ಬೇರೆ ಬೇರೆ ಕಡೆ ಬಂದಿರುವ ಅದೆಷ್ಟೋ ವಿಷಯಗಳನ್ನು, ಪುಸ್ತಕಗಳನ್ನು ನುಂಗಿ ನೀರು ಕುಡಿದಿರುವ ಎಸ್ ದಿವಾಕರರಂತವರು ಸಿಕ್ಕಿರುವುದು ನಮ್ಮ ಪಾಲಿಗೆ ಲಾಟರಿಯೇ. ಅವರದ್ದು ಗಾಂಧೀ ಬಜಾರಿನ ವೆಂಕಟೇಶ್ವರ ಸ್ವೀಟ್ ಸ್ಟಾಲಿನ ಹಾಗೆ ಬಗೆ ಬಗೆಯ ಖಾದ್ಯಗಳ ಸಂಗ್ರಹ.

ನಾಗೇಶ ಹೆಗಡೆಯವರ ಕೆಲಸವೂ ಅಪಾರ. ಕನ್ನಡದ ವಿಜ್ಞಾನದ ಬರೆವಣಿಗೆಯು ಬೆಳ್ಳಾವೆ ವೆಂಕಟನಾರಾಣಪ್ಪನವರಿಂದ ಹಾಲುಂಡು , ಜಿಟಿ ನಾರಾಯಣರಾಯರು, ಅಡ್ಯನಡ್ಕ ಕೃಷ್ಣ ಭಟ್ಟರು,ತೇಜಸ್ವಿ, ಸ್ವಾಮಿ, ಕೃಷ್ಣಾನಂದ ಕಾಮತ್ ಇವರೆಲ್ಲರ ಪೋಷಣೆಯಲ್ಲಿ ಬೆಳೆದ ಶಿಶು. ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ವಿಜ್ಞಾನ ವಿಷಯವಾಗಿ ಸೊಗಸಾಗಿ ಬರೆದು ಆ ಶಿಶುವನ್ನು ಒಬ್ಬ ದಷ್ಟ ಪುಷ್ಟ ಮಧ್ಯವಯಸ್ಕನನ್ನಾಗಿಸಿದ ಶ್ರೇಯಸ್ಸು ನಾಗೇಶರಿಗೆ ಸಲ್ಲಬೇಕು. ಚಂದದ, ಆಕರ್ಷಕ ಶೈಲಿ ಇಲ್ಲದಿದ್ದರೆ ಅವರ ಲೇಖನಗಳು ಇಷ್ಟು ಕಾಲ ಬಾಳಿಕೆ ಬರುತ್ತಿರಲಿಲ್ಲ.

ನಮ್ಮ ಈ ಲೇಖನದ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ಕೊನೆಯ ಸದಸ್ಯರು ಶ್ರೀವತ್ಸ ಜೋಶಿ. ನಮ್ಮ ಯಕ್ಷಗಾನ ಅರ್ಥವಾದಿ, ಸರಸ ಭಾಷಣಕಾರ, ವಿದ್ವಾಂಸ, ವಿಮರ್ಶಕರಾಗಿರುವ ಪ್ರಭಾಕರ ಜೋಶಿ ಒಂದು ಘಟನೆ ಹೇಳಿದ್ದರು : ರಂಜನೀಯವಾಗಿ ಮಾತಾಡುವುದಕ್ಕೆ ಹೆಸರಾದ ಅವರು ಸಾವಿರಾರು ಭಾಷಣಗಳನ್ನು ಮಾಡಿದವರು. ಒಮ್ಮೆ ಅವರನ್ನೊಬ್ಬರು ಭಾಷಣಕ್ಕೆ ಬರಬೇಕು ಅಂತ ಕೇಳಿಕೊಂಡರಂತೆ. ಯಾವ ವಿಷಯ ಮಾತಾಡಬೇಕು ಅಂತ ಇವರು ಕೇಳಿದರು. ಅಲ್ಲಿಂದ ಪಟಕ್ಕನೆ ತುಳುವಿನಲ್ಲಿ ಉತ್ತರ ಬಂತು : ಈರೆಗ್ ವಿಷಯ ದಾಯೆ (ನಿಮಗೆ ವಿಷಯ ಯಾಕೆ )?! ಅಂದರೆ ಜೋಶಿಯವರು ಯಾವ ವಿಷಯ ಕೊಟ್ಟರೂ ಮಾತಾಡಬಲ್ಲರು ಅನ್ನುವುದು ಅವರು ಉದ್ದೇಶಿಸಿದ ಅರ್ಥ. "ನನಗೆ ವಿಷಯ ಯಾಕೆ ? ನಾನು ವಿಷಯವೇ ಇಲ್ಲದೆ ಗಂಟೆಗಟ್ಟಲೆ ಮಾತಾಡುವವನು" ಅಂತ ಜೋಶಿಯವರು ಅದಕ್ಕೆ ಮಾಡಿದ ತಮಾಷೆಯ ಅರ್ಥ. ಶ್ರೀವತ್ಸ ಜೋಶಿಯವರನ್ನೂ ಹೀಗೆ "ಈರೆಗ್ ವಿಷಯ ದಾಯೆ ? ನಿಮಗೆ ವಿಷಯ ಯಾಕೆ?" ಅಂತ ಕೇಳಬಹುದು. ಇದೊಂದು ವಿಷಯವೇ ಅಲ್ಲ ಅನ್ನಿಸಬಹುದಾದ ವಸ್ತುವಾದರೂ ಇವರ ಪೆನ್ನಿಗೆ ಸಿಕ್ಕಿದರೆ ಚಿನ್ನದ ಲೇಪನ ಕೊಟ್ಟ ವಸ್ತುವಿನಂತೆ ಸ್ವಾರಸ್ಯಕರವಾಗಿ ಮಿರುಗುತ್ತದೆ ಅಂತ ಇವರನ್ನು ಹೊಗಳಿ ಪೆನ್ನ ಶೂಲಕ್ಕೇರಿಸಬಹುದು ! ಇವರ ಒಂದು ಲೇಖನವನ್ನೋದಿ ಒಬ್ಬರು "bullshit" ಅಂತ ಹೇಳಿದ್ದರಂತೆ, ಇವರು ಬಿಡಬೇಕಲ್ಲ , bullshit ಅಂದರೆ ಏನು ಎತ್ತ ಅಂತ ರಿಸರ್ಚ್ ಮಾಡಿ ಮುಂದಿನ ವಾರ ಅದರ ಬಗ್ಗೆಯೇ ಅಂಕಣ ಬರೆದರಂತೆ. ಹೀಗೆ ಉಳಿದವರು ಹೆಕ್ಕಿಕೊಳ್ಳದ ವಿಷಯಗಳನ್ನು ಎತ್ತಿಕೊಂಡು ರುಚಿಕಟ್ಟಾಗಿ ಬರೆಯುವುದರಲ್ಲಿ ಜೋಶಿಯವರು ಪಿ ಎಚ್ಡಿ ಮಾಡಿದ್ದಾರೆ. ವಿಜ್ಞಾನ, ಗಣಿತ, ಭಾಷೆ , ಸಾಹಿತ್ಯಗಳಿಂದ bullshit ಇನ ವರೆಗೆ ಎಷ್ಟೆಲ್ಲ ವಿಷಯಗಳು ಇವರ ಅಂಕಣಗಳಲ್ಲಿ ಬಂದಿದೆ.