Sunday 6 January 2019

ಧರ್ಮ ಮತ್ತು ರಾಜಕಾರಣ

 ಜೋಗಿಯವರು ಪುತಿನ ಅವರ ಬಗ್ಗೆ ಬರೆಯುತ್ತಾ, ಅವರೊಬ್ಬ ಕಟ್ಟುನಿಟ್ಟಿನ, ಶ್ರದ್ಧಾಭಕ್ತಿಗಳಿಂದ ನೋಡಬೇಕಾದ, ಆಚಾರವಂತರು, ಮಡಿವಂತರು ಎಂಬಿತ್ಯಾದಿ ಮಿಥ್ ಗಳು/ಮೂಢನಂಬಿಕೆಗಳು ಚಾಲ್ತಿಯಲ್ಲಿದ್ದವು ಅಂತ ಬರೆದದ್ದನ್ನು ಓದಿದಾಗ ಹಲವು ವಿಷಯಗಳು ನೆನಪಾದವು.

ಬಾಬ್ರಿ ಮಸೀದಿ ಗಲಾಟೆಯಾದಾಗ, ಪ್ರತಿಭಟನೆ ಮಾಡಲಿಕ್ಕೆ ಸಾಹಿತಿಗಳೆಲ್ಲ ಟೌನ್ ಹಾಲಿನ ಹತ್ತಿರಕ್ಕೆ ಬರಬೇಕು ಅಂತ ಕರೆಕೊಡಲಾಗಿತ್ತಂತೆ. ಸಮಯಕ್ಕೆ ಸರಿಯಾಗಿ ಮತ್ತು ಎಲ್ಲರಿಗಿಂತ ಮೊದಲು ಬಂದದ್ದು ಪರಮ ದೈವಭಕ್ತರೂ, ಸನಾತನಿಗಳೂ ಆಗಿದ್ದ ಪು. ತಿ. ನರಸಿಂಹಾಚಾರ್ಯರು ! ಅದೂ ಎಂದಿನಂತೆ ತಮ್ಮ ಟೊಪ್ಪಿ,ಇಷ್ಟುದ್ದದ ನಾಮ, ಜುಟ್ಟು ಇತ್ಯಾದಿಗಳ ಜೊತೆಗೆ !
ಹಾಗೆಯೇ ಕ್ರೈಸ್ತ ಧರ್ಮದ ಗ್ರಂಥಗಳನ್ನು ಬಹುಶಃ ಹೀಬ್ರೂ ಭಾಷೆಯಲ್ಲಿಯೇ ಓದಿ, ಏಸು ಕ್ರಿಸ್ತನ ಬಗ್ಗೆ ಗೊಲ್ಗೊಥಾ ಎಂಬ ಖಂಡ ಕಾವ್ಯವನ್ನು ಬರೆದದ್ದು ಬಲಪಂಥೀಯರೂ, ಸನಾತನಿಗಳೂ ಆಗಿದ್ದ ಪಂಡಿತ ಶ್ರೇಷ್ಠ ಮಂಜೇಶ್ವರ ಗೋವಿಂದ ಪೈಗಳು, ಪಾಳಿ ಮತ್ತು ಪ್ರಾಕೃತ ಭಾಷೆಗಳನ್ನು ಕಲಿತು ಬೌದ್ಧ ಮತ್ತು ಜೈನ ಧರ್ಮಗಳ ಬಗ್ಗೆ ಸಾಕಷ್ಟು ಬರೆದದ್ದು ಜಿಪಿ ರಾಜರತ್ನಂ ಅಯ್ಯಂಗಾರ್.

ಇನ್ನು ಹಿಂದೂ ರಾಷ್ಟ್ರ ಕಟ್ಟಿ ಅಂದಿದ್ದ ಸಾವರ್ಕರರು ಒಬ್ಬ ನಾಸ್ತಿಕರು, ಮುಸ್ಲಿಂ ರಾಷ್ಟ್ರ ಕಟ್ಟ ಹೊರಟ ಜಿನ್ನಾ ಒಬ್ಬ ಶ್ರದ್ದಾವಂತ ಮುಸ್ಲಿಮರಾಗಿರಲಿಲ್ಲ, ಅಡ್ವಾಣಿಯವರು ಒಬ್ಬ agnostic ಅಂತ ಕೇಳಿದ್ದೇನೆ, ಸುಬ್ರಮಣ್ಯಂ ಸ್ವಾಮಿಯವರ ಹೆಂಡತಿ ಒಬ್ಬ ಪಾರ್ಸಿ, ಅಳಿಯ ಒಬ್ಬ ಮುಸಲ್ಮಾನ.

ಬಪ್ಪನಾಡು ದುರ್ಗಾಪರಮೇಶ್ವರಿ ದೇವಳವನ್ನು ಕಟ್ಟಿದ್ದು ಬಪ್ಪ ಬ್ಯಾರಿ ಎಂಬ ಶ್ರದ್ದಾವಂತ ಮುಸ್ಲಿಮನೊಬ್ಬ. ಕಾರ್ಪೋರೇಶನ್ ಬ್ಯಾಂಕಿನ ಸ್ಥಾಪಕರಾದ ಹಾಜಿ ಅಬ್ದುಲ್ಲಾ ಸಾಹೇಬರು function ಮಾಡಿದರೆ ಹಿಂದೂಗಳಿಗೆ , ಅವರ ಸಂಪ್ರದಾಯದಂತೆ ಹಂತಿ ಹಾಕಿಸಿ, ಬಾಳೆ ಎಲೆಯಲ್ಲಿ ಶಾಕಾಹಾರಿ ಭೋಜನ ಮಾಡಿಸಿ, ಊಟ ದಕ್ಷಿಣೆಯನ್ನೂ ಕೊಡುತ್ತಿದ್ದರಂತೆ ! ಬೊಳುವಾರು ಮಹಮದ್ ಕುಂಞ್ ಅವರಿಗೆ ಒಂದೊಮ್ಮೆ ಅವರು ಮುಸ್ಲಿಮರು ಅನ್ನುವ ಕಾರಣಕ್ಕೆ ಸುಲಭಕ್ಕೆ ಮನೆ ಸಿಗದೇ ಹೋದಾಗ, ಒಂದು ಫೋನ್ ಮಾಡಿ ಮನೆ ಕೊಡಿಸಿದ್ದು ವೈದಿಕರೂ ಸನಾತನಿಗಳೂ ಆದ ಬನ್ನಂಜೆ ಗೋವಿಂದಾಚಾರ್ಯರು.

ಧರ್ಮವೇ ಬೇರೆ , ಧರ್ಮದ ಹೆಸರಿನಲ್ಲಿ ನಡೆಯುವ ರಾಜಕಾರಣವೇ ಬೇರೆ.

No comments:

Post a Comment