Monday 7 January 2019

ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು Part 2

ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):

ಮಾಕೋನಹಳ್ಳಿ ವಿನಯ್ ಮಾಧವ:
ಆ ಪ್ರಶ್ನೆಗೆ ಉತ್ತರ ಇದೇನಾ?...

A Brief History of Timeನ ಮುನ್ನುಡಿಯಲ್ಲಿ, 1973 ರಲ್ಲಿ ಪ್ರಕಟವಾಗಿದ್ದ ತನ್ನ ಪುಸ್ತಕ – `The Large Scale Structure of Spacetime’ ಕುರಿತು ಸ್ಟೀಫನ್ ಹಾಕಿಂಗ್ ಹೀಗೆ ಹೇಳುತ್ತಾನೆ.

`I would not advise readers of this book to consult that book for further information: it is highly technical, and quiet unreadable. I hope that since then I have learned how to write in a manner that is easier to understand’.

ವಿಜ್ಞಾನವನ್ನು ಸರಳವಾಗಿ ಬರೆಯುವುದು ಕಲೆಯಲ್ಲ, ಅದೊಂಥರ ತಪಸ್ಸು ಅಂತ ನಾನು ನಂಬಿದ್ದೆ. `ಬಾಗಿಲು ತೆರೆಯೇ ಸೇಸಮ್ಮ’ ಪುಸ್ತಕ ಓದುವವರೆಗೆ. ಸರಿಯಾಗಿ ಅರ್ಥ ಮಾಡಿಕೊಂಡರೆ, ಅದನ್ನು `ಲಲಿತ ಪ್ರಬಂಧವಾಗಿ’ ಬರೆಯಬಹುದು ಅಂತ ಒಪ್ಪಲೇಬೇಕಾಯ್ತು. ಅದಕ್ಕೆ ಮೊದಲು, ಹತ್ತು ವರ್ಷಗಳಿಂದ ನನ್ನ ಮನೆಯವರಿಗೆ ಮತ್ತು ಮಗಳಿಗೆ ಮನವರಿಕೆ ಮಾಡಲು ನಾನು ಸೋತಿರುವ `ಇಂಗ್ಲಿಶ್ ಎನೆ ಕುಣಿದಾಡುವುದೆನ್ನೆದೆ’ ಅನ್ನುವ ಪ್ರಬಂಧವನ್ನು ಓದಬೇಕು. ಮಾತೃ ಭಾಷೆಯನ್ನು ಅಲಕ್ಷಿಸಿದವರು ಯಾರೂ ಜೀವನವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಎನ್ನುವುದು ನನ್ನ ನಂಬಿಕೆ.

ನನಗೆ, ಶರತ್ ಭಟ್ ಸೇರಾಜೆ ಫೇಸ್ ಬುಕ್ ನಲ್ಲಿ ಗೆಳೆಯ. ಆದರೆ, ಮೊಬೈಲ್ ಫೋನ್ ನಲ್ಲಿ ಹೆಚ್ಚು ಓದುವುದು ನನಗೆ ಯಾಕೋ ಇಷ್ಟವಾಗುವುದಿಲ್ಲ. ಪುಸ್ತಕ ನನ್ನ ಕೈಗೆ ಬಂದು ಮೂರ್ನಾಲ್ಕು ವಾರಗಳಾಗಿರಬೇಕು. ಕೈಗೆತ್ತಿಕೊಂಡಾಗಲೆಲ್ಲ ಏನಾದರೊಂದು ಅಡ್ಡ ಬರುತ್ತಿತ್ತು. ಅಂತೂ, ಓದಿ ಮುಗಿಸಿದೆ.

ಈ ಪುಸ್ತಕದ ಬಗ್ಗೆ ಏನು ಬರೆಯಲೀ? ಮುನ್ನುಡಿಯಲ್ಲಿ ಜೋಗಿ, ಪ್ರಕಾಶ್ ಕಂಬತ್ತಳ್ಳಿ ಮತ್ತು ಹಿನ್ನುಡಿಯಲ್ಲಿ ಗಣೇಶ್ ಭಟ್ ನೆಲೆಮಾಂವ್ ಎಲ್ಲವನ್ನೂ ಬರೆದಿದ್ದಾರೆ. ನನಗೇನೂ ಉಳಿಸಿಲ್ಲವಾದರೂ, ಕೆಲವು ಇಷ್ಟವಾದ ವಿಷಯಗಳನ್ನು ಹೇಳಲೇ ಬೇಕು.

ಕಪ್ಪುಕುಳಿಗಳ (Black Hole) ಅನಂತ ಅಂತರಿಕ್ಷ ಲೋಕದಲ್ಲಿ, ರಜನಿ ಕಾಂತ್ ಮತ್ತು ಇತರ ತಮಿಳು, ತೆಲುಗು ಸಿನೆಮಾ ನಟರು ಉಪಮೇಯಗಳಾಗಿ ಬಂದು, ಅದೇನೂ ಬ್ರಹ್ಮವಿದ್ಯೆಯಲ್ಲ ಅಂತ ಅನ್ನಿಸಿದರೆ, ಮುಂದಿನ ಪ್ರಬಂಧ ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಳಿ ಕರೆಯಿತು’ ಪದ್ಯದ ವಿಶ್ಲೇಷಣೆಯೊಂದಿಗೆ, ಪ್ರೇಮಲೋಕಕ್ಕೆ ಕರೆದೊಯ್ಯುತ್ತದೆ. ಬಾಗಿಲು ತೆರೆಯೇ ಸೇಸಮ್ಮ, ಲೆಖ್ಖ ಮತ್ತು ನಮ್ಮ ಪಾಸ್ ವರ್ಡುಗಳಿಗಿರು ಸಂಬಂಧವನ್ನು, ಎರಡನೇ ಅಥವಾ ಐದನೇ ಮಗ್ಗಿಯಷ್ಟೇ ಸುಲಭ ಅಂತ ಅನ್ನಿಸುವಂತೆ ಮಾಡಿದರೆ, ನಾನು ಹೇಳುವ `Statistical Jugglery’ ಎನ್ನುವ ಪದವನ್ನು `ಲೆಕ್ಕ ಹಾಕಿ ಸುಳ್ಳು ಹೇಳಿ’ ಎಂಬ ಪ್ರಬಂಧದಲ್ಲಿ ಸೊಗಸಾಗಿ ವರ್ಣಿಸಿದೆ.

`ಪೂರ್ವಾಗ್ರಹ’ ಪೀಡಿತನಾಗಿ, `ಸಿರಿಗನ್ನಡಂ ಗೆಲ್ಗೆ’ ಎಂದು ಓದಲು ಶುರುಮಾಡಿದ ಪ್ರಬಂಧ, `ಪೂರ್ವಗ್ರಹ’ ವನ್ನು ಹಿಂದುರುಗಿ ನೋಡಿದಾಗ ತಿಳಿಯಿತು – ಅದು `ಸರಿಗನ್ನಡಂ ಗೆಲ್ಗೆ’ ಅಂತ. ನನ್ನ ಕನ್ನಡ ಭಾಷೆ ಎಷ್ಟು ಸುಧಾರಿಸಬೇಕಿದೆ ಎನ್ನುವ ಅರಿವೂ ಆಯಿತು.

ಎಲ್ಲಾ ಪ್ರಬಂಧಗಳ ಬಗ್ಗೆ ಬರೆಯುವುದಿಲ್ಲ. ಅವುಗಳ ಬಗ್ಗೆ ಬರೆಯೋಕೆ, ನಾನೂ ಒಂದು ಪ್ರಬಂಧ ಬರೆಯಬೇಕಾಗುತ್ತದೆ, ಅಷ್ಟೆ. ಆದರೆ, `ಬಲಿ ಚಕ್ರವರ್ತಿಯ ತ್ರಿವಿಕ್ರಮ’ ಪ್ರಬಂಧ ಓದುವಾಗ, ಯಂಡಮೂರಿ ವೀರೇಂದ್ರನಾಥರ `ಬೆಳದಿಂಗಳ ಬಾಲೆ’ ಓದಿದಷ್ಟೇ ಖುಷಿ ಕೊಟ್ಟಿತು.

ಕಾರಂತಜ್ಜನ ಕಥೆಗಳು ಮತ್ತು ಮರ್ಯಾದೆ ತೆಗೆಯುವ ಕಲೆ ಎನ್ನುವ ಎರಡು ಪ್ರಬಂಧಗಳನ್ನು ಓದುವಾಗ, ಕೆಲವು ವಿಷಯಗಳು ನನಗೆ ನೆನಪಾದವು. ಅದು ಶರತ್ ಗೆ ಗೊತ್ತೋ, ಇಲ್ಲವೋ.

ಕುಡಿತದ ಬಗ್ಗೆ ಕಾರಂತರು ಹೇಳಿದ ಒಂದು ಮಾತು ನನಗೆ ಬಹಳ ಇಷ್ಟವಾಗಿತ್ತು: `ಅಸಂಬದ್ದವಾಗಿ ಮಾತನಾಡಲು ಕುಡಿಯುವುದು ಏಕೆ? ಹಾಗೆಯೇ ಮಾತನಾಡಬಹುದಲ್ಲ?’

ಹಾಗೆಯೇ, ಲಂಕೇಶರು ಮರ್ಯಾದೆ ತೆಗೆಯುತಿದ್ದ ಪರಿಯ ಬಗ್ಗೆಯೂ ಕೆಲವು ವಿಷಯಗಳು ಪ್ರಸ್ತಾಪವಾಗಿದೆ. ಸಿ ಅಶ್ವಯಥ್ ರನ್ನು, ಕರ್ನಾಟಕ ಸರ್ಕಾರವು, ಅಮೆರಿಕಾದಲ್ಲಿ ನೆಡೆಯುತ್ತಿದ್ದ ಅಕ್ಕ ಸಮ್ಮೇಳನಕ್ಕೆ ಕಳುಹಿಸಲು ನಿರ್ಧರಿಸಿತ್ತು. ಲಂಕೇಶರು, ತಮ್ಮ ಪತ್ರಿಕೆಯಲ್ಲಿ, `ಅಶ್ವಥ್ ರನ್ನು ಅಮೇರಿಕಾಗೆ ಕಳುಹಿಸುವ ಸರ್ಕಾರದ ನಿರ್ಧಾರ ತಿಳಿದ, ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿನ ಭಿಕ್ಷುಕರೆಲ್ಲ, ನಮ್ಮ ರಾಗದಲ್ಲೇನು ದೋಷ, ಅಂಬೋ ಅಂದರಂತೆ,’ ಎನ್ನುವ ಚುಟುಕು ಕವನ ಬರೆದು, ಪ್ರಕಟಿಸಿಯೇ ಬಿಟ್ಟರು. ಈ ವಿಷಯ, ಹೊಡೆದಾಟದ ಹತ್ತಿರದವರೆಗೆ ಹೋಗಿ, ಬೇರೆಯವರ ಮಧ್ಯಸ್ಥಿಕೆಯಲ್ಲಿ ನಿಂತಿತ್ತು.

ಜಾರ್ಜ್ ಬರ್ನಾರ್ಡ್ದ ಶಾ, ವಿಚಿತ್ರ ವ್ಯಕ್ತಿ. ಒಮ್ಮೆ ಪಾರ್ಟಿಯೊಂದರಲ್ಲಿ, ಇಂಗ್ಲೆಂಡ್ ನ ಖ್ಯಾತ ರೂಪದರ್ಶಿಯೊಬ್ಬಳು ಬಂದು ಶಾ ರನ್ನು ಕೇಳಿದಳಂತೆ: `imagine if a child is born with my beauty and your intelligence’.
ರಪ್ಪನೆ ಶಾ ಉತ್ತರಿಸಿದರಂತೆ: `imagine its fate, if it is born with my beauty and your intelligence’.
ಈ ಘಟನೆಯ ನಂತರ ಶಾ ರವರು ಕುಳಿತು ರಚಿಸಿದ ನಾಟಕದ ಹೆಸರು `ಪಿಗ್ಮಲಿಯನ್’. ಮುಂದೆ ಅದು, `ಮೈ ಫೇರ್ ಲೇಡಿ’ ಎಂಬ ಹೆಸರಿನೊಂದಿಗೆ ಜಗತ್ಪ್ರಸಿದ್ದವಾಯಿತು. ಎಷ್ಟು ನಿಜವೋ, ಎಷ್ಟು ಸುಳ್ಳೋ ನನಗಂತೂ ಗೊತ್ತಿಲ್ಲ.

ಚಿಕ್ಕಂದಿನಲ್ಲಿ ಚಂದ ಮಾಮ, ಅಮರ ಚಿತ್ರ ಕಥೆ, ಪಂಚ ತಂತ್ರ, ಅರೆಬಿಯನ್ ನೈಟ್ಸ್, ಈಸೋಪನ ನೀತಿ ಕಥೆಗಳು ಮುಂತಾದ ಪುಸ್ತಕಗಳನ್ನು ಓದಿದಷ್ಟೇ ವಿಸ್ಮಯದಿಂದ ಈ ಪುಸ್ತಕವನ್ನೂ ಓದಿ ಮುಗಿಸಿದೆ. ವಿಜ್ಞಾನ, ಗಣಿತ, ಕಥೆ, ಸಾಹಿತ್ಯ, ಪರಂಪರೆ, ಸಮಕಾಲೀನ ವಿಷಯಗಳನ್ನು, ಮನಸ್ಸಿಗೆ ನಾಟುವಂತೆ, ಪ್ರಬಂಧದಲ್ಲಿ ಪಾತ್ರವಾಗುವಂತೆ ಬರೆಯುವುದು ಕಲೆಯೋ ಅಥವಾ ತಪಸ್ಸೋ ಎಂಬ ಜಿಜ್ಞಾಸೆ ಮತ್ತು ಶುರುವಾಯಿತು.

ಓದುತ್ತಾ, ನನ್ನ ಮತ್ತು ಪ್ರದೀಪ್ ಕೆಂಜಿಗೆಯವರ ನಡುವೆ ನೆಡೆದ ಸಂಭಾಷಣೆ ನೆನಪಾಯಿತು. ಪ್ರದೀಪ್ ರವರು ತೇಜಸ್ವಿಯವರು ಇಷ್ಟ ಪಡುತ್ತಿದ್ದ ವಿಷಯಗಳನ್ನೆಲ್ಲ ಹೇಳುತ್ತಿದ್ದಾಗ, `ಹಾಗಾದರೆ, ಸ್ಟೀಫನ್ ಹಾಕಿಂಗ್ ನ `A Brief History of Time’ ಅವರ ಇಷ್ಟದ ಪುಸ್ತಕಗಳಲ್ಲಿ ಒಂದಿರಬೇಕು, ಎಂದೆ.

`ಅದನ್ನು ಅವರು ಯಾವಾಗಲೋ ತರಿಸಿ ಓದಿದ್ದರು. ಅದನ್ನು ಕನ್ನಡಕ್ಕೆ ಟ್ರಾನ್ಸ ಲೇಟ್ ಮಾಡಬೇಕು ಅಂತ ಹೇಳುತ್ತಿದ್ದರು. ಅದನ್ನ ಹ್ಯಾಗ್ರೀ ಟ್ರಾನ್ಸ ಲೇಟ್ ಮಡೋದು? ಆ ಸಬ್ಜೆಕ್ಟ್ ನೋಡಿ, ಅದನ್ನ ಅರ್ಥ ಮಾಡಿಕೊಂಡು, ಎಲ್ಲರಿಗೂ ಅರ್ಥವಾಗುವ ಹಾಗೆ ಕನ್ನಡದಲ್ಲಿ ಬರೆಯೋಕೆ ನಮ್ಮ ಕೈಲಿ ಸಾಧ್ಯಾನಾ?,’ ಅಂತ ಪ್ರದೀಪ್ ಕೇಳಿದರು.

`ಅದು ಯಾರ ಕೈಲಾದ್ರೂ ಸಾಧ್ಯಾನಾ?’ ಅನ್ನೋ ಪ್ರಶ್ನೆ ನನ್ನನ್ನು ಬಹಳ ಕಾಲ ಕಾಡುತ್ತಿತ್ತು. ಯಾಕೋ, ಉತ್ತರ ಸಿಕ್ಕಿದೆ ಅನ್ನಿಸ್ತಾ ಇದೆ.

ಮಾಕೋನಹಳ್ಳಿ ವಿನಯ್ ಮಾಧವ
============================================
ಪ್ರಶಾಂತ್ ಭಟ್ :
ಬಾಗಿಲು ತೆರೆಯೇ ಸೇಸಮ್ಮ - ಶರತ್ ಭಟ್ ಸೇರಾಜೆ

ಗಹನ ವಿಷಯಗಳ ಸರಳವಾಗಿ ಮನಮುಟ್ಟುವಂತೆ ಹೇಳುವುದು ಒಂದು ಕಲೆ. ಶರತ್ ಇಲ್ಲಿ ಹೇಳಿದ ವಿಷಯಗಳು ನಾವಾಗೇ ಗೂಗಲಿಸಿ ಅಥವಾ ಓದಲು ಹೊರಟರೆ ತಲೆಯ ಮೇಲಿಂದ ಹಾರುವಂತಹವು. ಗುರುತ್ವದಂತಹ ವಿಷಯವನ್ನು ಮಣಿಶಂಕರ್ ಅಯ್ಯರ್,ದಿಗ್ವಿಜಯ ಸಿಂಗ್,ಸೋನಿಯಾ ಗಾಂಧಿ ಉದಾಹರಣೆ ಕೊಟ್ಟು ಕಚಗುಳಿ ಇಡಿಸಿ ವಿವರಿಸುವ ಅವರ ಶೈಲಿ ಅನನ್ಯ.

ಮಧ್ಯಾಹ್ನದ ನಿದ್ದೆ ಆದ ಬಳಿಕ ಸಂಜೆ ಚಾ ಕುಡಿಯುವಾಗ ಮನೆಗೆ ನೆಂಟರು ಬಂದರೆ ಅವರ ಜೊತೆ ಪಟ್ಟಾಂಗ ಹಾಕುವ ಶೈಲಿಯ ಇವರ ಲೇಖನಗಳು,ಸಿನಿಮಾದಂತೆ ಮಧ್ಯಂತರವೂ ಹೊಂದಿದೆ. ಅದಲ್ಲದೆ ಉದಾಹರಣೆಗೆ ನಾವು ದಿನ‌ನಿತ್ಯ ಅನುಭವಿಸಿದ್ದನ್ನೇ ತರುವ ಕಾರಣ ವಿಷಯಗಳು ಸರಳವಾಗಿ ಒಳಗಿಳಿಯುತ್ತವೆ.
ಇಲ್ಲಿನ ಹಲ ಲೇಖನಗಳ ಅವರ ಫೇಸ್ಬುಕ್ ಗೋಡೆಯ ಮೇಲೆ ಓದಿದ್ದೆ.ಮೆಚ್ಚಿದ್ದೆ.
ನಂಗಿರೋ ಒಂದೇ ಒಂದು ಸಂಶಯ ಎಂದರೆ ಶರತ್‍ಗೆ ತಾನು ಅನಗತ್ಯವಾಗಿ ಲಂಬಿಸುತ್ತೇನೋ ಎಂಬ ಅನುಮಾನವಿದೆ.ಹಾಗಾಗಿ ನಡು ನಡುವೆ ವಾಚಕ ಮಹಾಶಯರ ಮತ್ತೆ ಮೊದಲ ಸಾಲಿನ ಕಡೆಗೆ ಕರೆದೊಯ್ದು ಬರುತ್ತಾರೆ. ಇದು ಕೆಲ ಕಡೆ ಓದಿನ ರುಚಿ ಹೆಚ್ಚಿಸಿದರೆ ಕೆಲ‌ಕಡೆ ಬೇಡ ಅನಿಸುತ್ತದೆ. ಆದರೆ ಇದು ಗಬ ಗಬನೆ‌ ಓದುವವರಿಗೆ ಮಾತ್ರ ಆಗುವ ಅನಿಸಿಕೆ. ಒಂದು ಲೇಖನ ಸಾವಧಾನದಿಂದ ಓದುವ ಓದುಗ ಇದನ್ನು ಎಂಜಾಯ್ ಮಾಡೇ ಮಾಡ್ತಾನೆ.

ಪುಸ್ತಕ ನಂಗೆ ಬಹಳ ಹಿಡಿಸಿತು. ಬಹುಶಃ ಅವರ ಗೆಳೆಯರ ಬಳಗದಲ್ಲಿ ನೀವಿಲ್ಲದೆ ಇದ್ದರೆ ಇದನ್ನು ಓದಲು ಸಕಾಲ. ಸದ್ಯದಲ್ಲಿ ನಾನು ಓದಿದ ಅತ್ಯುತ್ತಮ ಜ್ಞಾನ ಮತ್ತು ಮನಸಿಗೆ ಹಾಯೆನಿಸಿದ ಪುಸ್ತಕಗಳಲ್ಲಿ ಇದೂ ಒಂದು.
ಮರೆಯದೆ ಓದಿ. ಓದಿಸಿ
================================================

ಸುಬ್ರಹ್ಮಣ್ಯ ಹೆಚ್.ಎನ್:
ಹೊಳಪಿನ ಪ್ರಬಂಧಗಳು
ಇಷ್ಟಲೇಖಕರಾದ ಜೋಗಿಸರ್ ತನ್ನ ಗೋಡೆಯಲ್ಲಿ ಈ ಪುಸ್ತಕಕ್ಕೆ ಬರೆದ ಮುನ್ನುಡಿಯನ್ನು ಲಗತ್ತಿಸಿದ್ದರಿಂದಾಗಿ 'ಸೇಸಮ್ಮ.....' ನನ್ನು ಓದುವ ಆಸೆ ಹುಟ್ಟಿತು. ಯಾವುದಕ್ಕೂ ಜೋಗಿಸರ್‌ಗೆ ಒಂದು ಕೃತಜ್ಞತೆ ಅರ್ಪಿಸಲೇ ಬೇಕು.

ಪತ್ರಿಕೆಯಲ್ಲಿ ಪ್ರಕಟವಾಗುವ ನಗೆಬರಹಗಳು ಗೊತ್ತು. ಗೋರೂರರು ಬರೆಯುವಂತಹ ರಸಮಯ ಪ್ರಬಂಧಗಳೂ ಗೊತ್ತಿವೆ. ವಸುಧೇಂದ್ರರ ಸುಲಲಿತ ಪ್ರಬಂಧಗಳನ್ನು ಕೂಡ ಓದಿರುವೆ. ಇವುಗಳ ನಡುವೆ ಇದೆಂತೆಹದಪ್ಪ .. ವೈಚಾರಿಕ ಲಲಿತ ಪ್ರಬಂಧಗಳು !? ರಾಶಿ ಕುತೂಹಲ ಇಟ್ಟುಕೊಂಡೇ ಓದಲು ಕೂಡ ಬೇಕಾಯ್ತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಹೂರಣ ಈ ಕೃತಿಯಲ್ಲಿ ಸಿಕ್ಕಿತು. ಮಹತ್ತರವಾದ ಸಂಗತಿಗಳನ್ನು ರಸಮಯವಾಗಿ, ಶಾಲೆಯಲ್ಲಿ ಮೇಷ್ಟ್ರು ಮನದಟ್ಟಾಗುವಂತೆ (ಆಗ ಆಸಕ್ತಿ ಇರುವುದಿಲ್ಲ ಬಿಡಿ) ಉದಾಹರಣೆಗಳ ಮುಖಾಂತರ ಪಾಠ ಒಪ್ಪಿಸುವ ರೀತಿ ಹೇಳುವ ಶರತ್‌ರ ಶೈಲಿ ಅನನ್ಯ. ಅವರ ಪುಸ್ತಕ ಓದಿದ ಯಾರಿಗಾದರೂ ಅವರ ಆಸಕ್ತಿಯ ವಿಶಾಲ ಹರವು; ಗಣಿತ, ವಿಜ್ಞಾನ, ಸಾಹಿತ್ಯ, ರನ್ನ, ಪಂಪ, ಅಡಿಗರ ಕುರಿತಾದ ಅಗಾಧ ಜ್ಞಾನ ಬೆರಗು ಮೂಡದೇ ಇರದು.

ತೆಂಕು ತಿಟ್ಟು ಯಕ್ಷಗಾನವನ್ನು ಯಕ್ಷಗಾನವೇ ಅಲ್ಲವೆಂದು ಜರಿದ ಕಾರಂತರಿಗೆ, ವೇದಿಕೆಯಲ್ಲಿ ಶ್ರೇಣಿ ಗೋಪಾಲಕೃಷ್ಣ ಭಟ್ಟರು ಉತ್ತರಿಸಿದ ಅಪರೂಪದ ಪ್ರಸಂಗ, ನಾವು ಆಗಾಗ ಆಡುವ, ಬರೆಯುವ ತಪ್ಪು ತಪ್ಪು ಕನ್ನಡ, ಇಂಗ್ಲೀಷೇ ಪರಮ ಶ್ರೇಷ್ಠ ಭಾಷೆಯೆಂಬ ಮೂಢನಂಬುಗೆ ಇದನ್ನೆಲ್ಲಾ ತರ್ಕಗಳ ಮುಖಾಂತರ ಸರಳವಾಗಿ ತಿಳಿಸುತ್ತಾ ಹೋಗುತ್ತಾರೆ. ಲೇಖಕರು ಅಡಿಗರ 'ಯಾವ ಮೋಹನ ಮುರಳಿ ಕರೆಯಿತು.....' ಕವನದ ಅರ್ಥ ವಿವರಿಸುವಾಗ ಅಡಿಗರು ಬರೆದಿರುವ ಕಾದಂಬರಿಯ ಸಾಲೊಂದನ್ನು ಉಲ್ಲೇಖಿಸುತ್ತಾರೆ‌. ಅದನ್ನು ನಾನಿಲ್ಲಿ ಹೇಳಲೇ ಬೇಕು. "ಅರಬ್ಬೀ ಸಮುದ್ರಕ್ಕೆ ಬಿಡುವಿಲ್ಲ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ - ಹಗಲು, ಇರುಳು, ಪ್ರತಿ ನಿಮಿಷಗಳೂ, ಅದು ಹುಚ್ಚೆದ್ದು ಕೂಗಿ, ರೇಗಿ ಸಾವಿರ ಸಿಂಹಗಳ ಗರ್ಜನೆಯಂತೆ, ಸಹಸ್ರಾರು ಆನೆಗಳು ಘೀಳಿಟ್ಟ ಹಾಗೆ ಮೊರೆಯುತ್ತದೆ, ಬೊಬ್ಬಿಡುತ್ತದೆ, ಹೂಂಕರಿಸುತ್ತದೆ. ಈ ಬೊಬ್ಬಾಟಕ್ಕೆ ಕೊನೆಮೊದಲಿಲ್ಲ. ಯಾವ ದುಃಖ ಬಡಿದಿದೆ ಈ ಕಡಲಿಗೆ? ಯಾವ ಆಕ್ರೋಶ? ಯಾವ ನೋವು? ಯಾರ ಚಿತ್ರಹಿಂಸೆ? ಅಗೋ ಈಗ ವಿಕಟಟ್ಟಾಹಾಸ -ಅಲ್ಲಲ್ಲ ಚೀತ್ಕಾರ- ಪೂತ್ಕಾರ !". ಇದನ್ನೆಲ್ಲಾ ಓದುವ ಭಾಗ್ಯವಾದರೂ ಎಲ್ಲಿತ್ತು!?

ಕೃತಿಯಲ್ಲಿ ಹೇಳ ಹೊರಟರೆ ಸಾವಿರ ಸವಿಗಳಿವೆ. ಕತೆ, ಕಾದಂಬರಿ, ಕವಿತೆಯ ನಡುವೆ ಸೇಸಮ್ಮನಿಗೂ ನಿಮ್ಮ ಕಪಾಟಿನಲ್ಲಿ ಜಾಗ ಕೊಡಿ. 'ಲೆಕ್ಕ ಹಾಕಿ ಸುಳ್ಳು ಹೇಳಿ', 'ಪರಂಪರೆಯ ಬೇರುಗಳು', 'ನಮ್ಮ ತಲೆಯೂ ನಮ್ಮ ಹರಟೆಯೂ' ಪ್ರಬಂಧಗಳಿರುವ ಪುಟಗಳ ಕಿವಿ ಮಡಿಚಿಟ್ಟಿದ್ದೇನೆ ಮತ್ತೆ ಮತ್ತೆ ಓದಲು.

ಸುಬ್ರಹ್ಮಣ್ಯ ಹೆಚ್.ಎನ್.
====================================================
ಸ್ಮಿತಾ ಭಟ್:
ನಮಸ್ತೇ ಸೇರಾಜೆಯವರಿಗೆ,

ನಿಮ್ಮ‌ಹಾಸ್ಯಮಿಶ್ರಿತ ಲೇಖನ ಶೈಲಿಯು ತುಂಬಾ ಇಷ್ಟವಾಯಿತು.ದ.ಕ/ ಉಡುಪಿ ಕನ್ನಡದ ಸೊಗಡಿರುವ ಭಾಷೆ, ಅಲ್ಲಲ್ಲಿ‌ ಸಖ್ತ್ ಪಂಚ್ ಗಳು ,ಪುಸ್ತಕವನ್ನು ೨ ಘಂಟೆಗಳಲ್ಲಿ ಒದಿ ಮುಗಿಸಿ ಅಚ್ಚರಿಯ ನಿಟ್ಟುಸಿರು ಬಿಡುವಂತೆ ಮಾಡಿತು.
ಅಡಿಗರ ಕವನವನ್ನು explain ಮಾಡಿದ ರೀತಿಯಂತು ನಮ್ಮ ಕನ್ನಡ lecturer ಅನ್ನು ಜ್ಞಾಪಿಸಿತು. ಯಾರೋ lecture ಕೊಡುತ್ತಿದ್ದಾರೆಂದು feel ಮಾಡಿಕೊಂಡು ಓದಿದೆ. ಆ ಕವಿತೆಗೊಂದು ಅಧ್ಯಾತ್ಮದ touch ಇದೆ ಎಂದು ಗಮನಿಸಿಯೇ ಇರಲಿಲ್ಲ.ಇನ್ನು ಮೇಲೆ ಎಲ್ಲಾ ಕವಿತೆಗಳನ್ನೂ deep ಆಗಿ analyze ಮಾಡಬೇಕು ಅಂತ ಅನಿಸ್ತಾ ಇದೆ.
ಕೆಲವೊಂದು lines ಗಳನ್ನು‌ ನೀವು ಹೇಗೆ explain ಮಾಡಬಹುದು‌ ಅಂತ ಕುತೂಹಲ develope ಆಗಿತ್ತು. ತನಗೂ ,ಇತರರಿಗೂ ಮುಜುಗರವಾಗದಂತೆ ಹಾಸ್ಯಮಯವಾಗಿ ಹೇಳಿದ್ದೀರಿ.
‌       'ಮರ್ಯಾದೆ ತೆಗೆಯುವ ಕಲೆ', 'ಕಾರಂತಜ್ಜನ ಕಥೆಗಳು' ಖುಷಿಯಲ್ಲಿ‌‌ ಓದಿಸಿಕೊಂಡು, ಓಡಿಸಿಕೊಂಡು ಹೋಯಿತು. 'ಸರಿಗನ್ನಡಂ ಗೆಲ್ಗೆ ' bore ಹೊಡೆಸಿದ್ದಕ್ಕೆ ಕಾರಣ  fb ಯಲ್ಲಿ ಇತ್ತೀಚಿಗೆ ನಡೆದ ಚರ್ಚೆ. ಓದಿದ್ದನ್ನೇ ಮತ್ತೆ ಮತ್ತೆ ಓದಿ ವಾಕರಿಕೆ ಬಂದಂತಾಗಿದೆ.( ನಿಮ್ಮ ಲೇಖನದ mistake ಅಲ್ಲ ಬಿಡಿ).
     'ಸಿನಿಮಾ ಮತ್ತು ಕಳ್ಳತನ 'ಈ‌ ಲೇಖನಕ್ಕೆ ಒಂದು ಅತ್ಯುತ್ತಮ ಉದಾಹರಣೆಯಂದರೆ ನಿಮ್ಮದೇ ಇನ್ನೊಂದು ಲೇಖನ AI ಬಗೆಗಿನದು.  Artificial intelligence ಬಗ್ಗೆ ಇತ್ತೀಚಿಗೆ ಒಂದು ಲೇಖನ ಓದಿದ್ದೆ ಕನ್ನಡ ದಿನಪತ್ರಿಕೆಯೊಂದರಲ್ಲಿ. ನೀವು ಅದೇ same old ingredients ಇಟ್ಟುಕೊಂಡು ಹೊಸ ರುಚಿ ಹೇಗೆ‌ ತಯಾರಿಸಿದ್ದೀರಿ ಎನ್ನುವ ಕುತೂಹಲದೊಂದಿಗೆ ಅತೀ ವೇಗದಲ್ಲಿ‌ಓದಿದೆ.‌ ಕಣ್ಣು ಗಳು ಓದುತ್ತಿದ್ದರೂ ಮೆದುಳಿಗೆ process ಮಾಡಲು‌ಕಷ್ಟ ವಾಗುವಂತಹ speed  ಅದು.
Here ingredients are -
1) what is AI in common man's language.
2) about Turing test or loebner prize.
3) can robots take over humans in future?

 With the same ingredients the final dish prepared by you at the end is totally different and you named it..!!

ಬಾಗಿಲು ತೆಗೆಯೇ ಸೇಸಮ್ಮ‌ ಲೇಖನದಲ್ಲಿ encryption and decryption ಬಗ್ಗೆ ಇನ್ನೂ ಆಳವಾಗಿ‌ ವಿವರಿಸಬೇಕಿತ್ತು‌ ಎಂದು ಅನಿಸಿತು.
"Password ಅನ್ನು ಒತ್ತಿ, ತಿರುಚಿ, ಹಿಸುಕಿ,ಜಜ್ಜಿ, ಮುದ್ದೆ ಮಾಡಿ ಬಾಗಿಸಿ,ಗುದ್ದಿ ,ನುಲಿದು,ನಜ್ಜುಗುಜ್ಜು ಮಾಡಿದರೆ ...." ಎನ್ನುವ ಬದಲಿಗೆ ಸುಮ್ಮನೆ cipher keys ಬಗ್ಗೆ, encryption algorithm ಗಳ ಬಗ್ಗೆ ಒಂದೆರಡು ಸಾಲು ಬರೆದಿದ್ದರೆ ಚೆನ್ನಾಗಿತ್ತೇನೋ.!
 ಇನ್ನು ಸಿನಿಮಾ ಮತ್ತು ಕಳ್ಳತನ‌ ಲೇಖನದ‌ ಬಗ್ಗೆಯೂ ಸುಮಾರು ವಿಷಯಗಳನ್ನು ಹಂಚಿಕೊಳ್ಳುವ ಆಸೆ ಇದೆ.

ಇನ್ನೂ ಕೂಡಾ  ಸಾಲುಸಾಲಾಗಿ ಪುಸ್ತಕಗಳನ್ನು ಬರೆಯಿರಿ. ನಿಮ್ಮ ಕೆಲವು ವಾಕ್ಯಗಳು ಬುದ್ಧಿವಂತರಿಗೆ ಮಾತ್ರ ವೆಂದೆನಿಸುತ್ತದೆ. " ಬರವಣಿಗೆ ಶುರುವಾದ ಮೇಲೆ ಭೂಮಿತಾಯಿ ಪ್ರಸನ್ನಳಾಗಿ ನನ್ನನ್ನು ೨-೩ ಸಲ ಸೂರ್ಯನ ಸುತ್ತ ಸುತ್ತುವ ಪ್ಯಾಕೇಜ್ ಟ್ರಿಪ್ಪಿನಲ್ಲಿ ಕರೆದುಕೊಂಡು ಹೋಗಿದ್ದಾಳೆ" ಈ ವಾಕ್ಯದ ಅರ್ಥ ನಾನು ಬರವಣಿಗೆ ಶುರು ಮಾಡಿ ೨-೩ ವರ್ಷ ಆಯ್ತೆಂದಲ್ಲವೇ? ಅರ್ಥ ಆದಾಗ ತುಂಬಾ ನಗು ಬಂತು. ನೀವು ಗೂಢಾರ್ಥಗಳನ್ನು ಮತ್ತು ಅಲಂಕಾರ, ಉಪಮೆಗಳನ್ನು ಬಳಸುವ ರೀತಿ ಚೆನ್ನಾಗಿದೆ. ನೀವು ಒಬ್ಬ ಉತ್ತಮ ಹರಟೆ ಲೇಖಕರೂ ಹೌದು, ವಿಜ್ಞಾನ ಬರಹಗಳ ಲೇಖಕರೂ ಹೌದು.

....ಧನ್ಯವಾದಗಳೊಂದಿಗೆ,
ಸ್ಮಿತಾ ಭಟ್.
=======================================================
# Baagilu Tereye Sesamma Book reviews

No comments:

Post a Comment