Monday 7 January 2019

ಇಂಡೋನೇಶಿಯಾ ಮತ್ತು ಭಾರತ

ನಾನು ಆಗಾಗ ಬರೆಯುವ, "ನಿಮಗಿದು ಗೊತ್ತೇ" ಸರಣಿಯಲ್ಲಿ ಹಿಂದೊಮ್ಮೆ ಸಿಂಗಾಪುರ ಎಂಬ ಹೆಸರಿನ ಭಾರತೀಯ ಮೂಲ, ಕೊರಿಯನ್ ಭಾಷೆಯ ದ್ರಾವಿಡ ಸಂಪರ್ಕಗಳ ಬಗ್ಗೆ ಎಲ್ಲ ಬರೆದಿದ್ದೆ. ಎಷ್ಟೋ ಇಂಡೋನೇಷಿಯನ್ ಹೆಸರುಗಳೂ ಭಾರತೀಯ ಮೂಲದವು ಅಂತ ಇತ್ತೀಚಿಗೆ ಗೊತ್ತಾಯಿತು. The Raid ಮತ್ತು The Raid: Redemption ಎಂಬ ರೋಮಾಂಚಕ ಫೈಟಿಂಗ್ ಚಿತ್ರಗಳಲ್ಲಿ ನಾಯಕನ ಪಾತ್ರದ ಹೆಸರು "ರಾಮ" ಅಂತಿದ್ದದ್ದು ಸುಲಭಕ್ಕೆ ಸಿಕ್ಕಿ ಮರೆತಿತ್ತು. ಇದರ ನಾಯಕ ಪಾತ್ರ ಮಾಡಿದ Iko Uwaisನ ಪುತ್ರಿಯ ಹೆಸರು: Atreya Syahla Putri.

ಇಂಡೋನೇಶಿಯಾದ ಮೊದಲ ಅಧ್ಯಕ್ಷ, ಪ್ರಸಿದ್ಧ ನಾಯಕರ ಹೆಸರು: ಸುಕರ್ಣೋ, ಇದೊಳ್ಳೆ ಸಂಸ್ಕೃತದ 'ಸುಕರ್ಣ' ಬೆಂಗಾಲಿಗಳ ಬಾಯಿಗೆ ಸಿಕ್ಕಿದಂತಿದೆ ! ಇವರ ಪುತ್ರಿಯ ಹೆಸರು ಇನ್ನಷ್ಟು ಕುತೂಹಲ ಹುಟ್ಟಿಸುವಂತೆ, ಯಾರೋ ಸಂಸ್ಕೃತ ಪ್ರಿಯರ ಹೆಸರಿನಂತೆ ಇದೆ: ಮೇಘವತೀ ಸುಕರ್ಣೋಪುತ್ರಿ. ಈ ಮೇಘವತಿಯ ಅಮ್ಮನ ಹೆಸರು Fatmawati; ಪಕ್ಕನೆ ಪದ್ಮಾವತಿಯಂತೆ ಕೇಳುತ್ತದೆ. ಹೀಗೆ ಸಂಸ್ಕೃತ ಹೆಸರುಗಳನ್ನಿಟ್ಟುಕೊಂಡಿರುವ ಸುಕರ್ಣೋ ಕುಟುಂಬದವರು ಮುಸ್ಲಿಮರು ಅಂದರೆ ಕೆಲವರಿಗೆ ಆಶ್ಚರ್ಯವಾಗಬಹುದು.

Cinta Laura ಅಂತೊಬ್ಬಳು ಪಾಪ್ ಸಿಂಗರ್ ಇದ್ದಾಳೆ, ಇವಳು ಹಾಡುವುದನ್ನು ಕೇಳಿ ಯಾರಾದರೂ ಚಿಂತಾಕ್ರಾಂತರಾಗಿದ್ದಾರೋ ಗೊತ್ತಿಲ್ಲ. ಅಲನ್ ಬೂದಿಕುಸುಮ/ಬುದಿಕುಸುಮ ಅಂತೊಬ್ಬ ಬ್ಯಾಡ್ಮಿಂಟನ್ ಪಟು ಇದ್ದ, ಈ ಬೂದಿಕುಸುಮದಲ್ಲೂ ಇರುವುದು "ಬುದ್ಧಿ" ಮತ್ತು 'ಕುಸುಮ' ಎಂಬ ಸಂಸ್ಕೃತ ಪದಗಳೇ, ಅವನ ಹೆಂಡತಿ(ಅವಳೂ ದೊಡ್ಡ ಹೆಸರು ಮಾಡಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ)ಯ ಹೆಸರು ಸೂಸಿ ಸುಸಾಂತಿ, ಈ ಸುಸಾಂತಿಯೂ ಸಂಸ್ಕೃತದ ಸುಶಾಂತಿಯಿಂದ ಬಂದಿರಬೇಕು. Teuku Wisnu ಅಂತೊಬ್ಬ ನಟನೂ ಇದ್ದಾನೆ. Jakarta ಎಂಬುದೂ ಸಂಸ್ಕೃತದ "ಜಯಕೃತ"ದಿಂದ ಬಂದಿದೆಯಂತೆ. ಪ್ರವಾಸಿಗರು ನುಗ್ಗುವ ಬಾಲಿ ದ್ವೀಪವೂ ಮೂಲದಲ್ಲಿ ಬಲಿ ದ್ವೀಪ ಎಂಬ ಭಾರತೀಯ ಹೆಸರೇ ಆಗಿದ್ದಿರಬೇಕು. ಹಲವು ಶತಮಾನಗಳ ಕಾಲ ಹಿಂದೂ ಮತ್ತು ಬೌದ್ಧ ದೊರೆಗಳ ಆಳಿಕೆ ಇದ್ದದ್ದರಿಂದ ಈ ಮಟ್ಟಕ್ಕೆ ಭಾರತೀಯ ಪದಗಳು ಅಲ್ಲಿ ಬಳಕೆಗೆ ಬಂದಿರಬೇಕು. ರಾಮಾಯಣ ಮಹಾಭಾರತಗಳೂ ಅಲ್ಲಿ ಸಿಕ್ಕಾಬಟ್ಟೆ ಪ್ರಖ್ಯಾತ.

"ರಾಮನಿಗೆ ಸೀತೆ ಏನಾಗಬೇಕು?" ಎಂಬ ಹೆಸರಿನ ಪುಸ್ತಕವೊಂದಿದೆ (ತೆಲುಗು ಮೂಲದ್ದು). "ರಾಮನಿಗೆ ಸೀತೆ ಏನಾಗಬೇಕು?" ಎಂಬ ಪ್ರಶ್ನೆ ಪೆದ್ದು ಪ್ರಶ್ನೆಯಲ್ಲ, ಈ ಪ್ರಶ್ನೆಯಲ್ಲಿ ಎಷ್ಟೋ ವಿಚಿತ್ರ ವಿಷಯಗಳು, ಚರ್ಚಿಸಬಹುದಾದಂಥ ಅಂಶಗಳು ಅಡಗಿವೆ ಎಂದು ಪ್ರತಿಪಾದಿಸುವ ಪುಸ್ತಕ ಅದು. ಶ್ರೀಲಂಕಾ, ಟಿಬೆಟ್, ಕಾಂಬೋಡಿಯಾ, ಥಾಯ್ಲೆಂಡ್, ಇಂಡೋನೇಷಿಯಾ, ಮಲೇಷಿಯಾ, ಫಿಲಿಫೈನ್ಸ್ ಇಲ್ಲೆಲ್ಲ ಒಂದೊಂದು ಕಡೆ ಒಂದೊಂದು ತರದಲ್ಲಿ ರಾಮಕಥೆಯು ಚಾಲ್ತಿಯಲ್ಲಿದೆ/ಇತ್ತು ಎಂಬುದರ ಚರ್ಚೆ ಅದರಲ್ಲಿದೆ. (ಹನೂಮಂತನನ್ನು ಹೋಲುವ ಪಾತ್ರವೊಂದು ಚೀನೀ ಪುರಾಣಗಳಲ್ಲಿ ಇರುವುದರ ಪ್ರಸ್ತಾವವನ್ನೂ ಹಿಂದೊಮ್ಮೆ ಮಾಡಿದ್ದೆ). ಎಕೆ ರಾಮಾನುಜನ್ನರು Three Hundred Ramayanas ಅನ್ನುವ ಪ್ರಬಂಧ ಬರೆದದ್ದು ಕೆಲವರಿಗೆ ನೆನಪಿರಬಹುದು. "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂಥಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ" ಅಂತ ನಮ್ಮ ಕುಮಾರವ್ಯಾಸನೇ ಹೇಳಿದ್ದಾನಲ್ಲ ! ಅಷ್ಟೊಂದು ಸಂಖ್ಯೆಯ ರಾಮಾಯಣಗಳು ಅವನ ಕಾಲದಲ್ಲಿಯೇ ಇದ್ದಿರಬೇಕು.

ಇವನ್ನೆಲ್ಲ ನೋಡಿದರೆ, ಪ್ರಾಚೀನ ಭಾರತದ ಹಲವು ಪದಗಳೂ, ಸಾಂಸ್ಕೃತಿಕ ವಿಚಾರಗಳೂ ಇಂಡೋನೇಷಿಯಾದಲ್ಲಿ ಸಿಕ್ಕರೂ ಸಿಕ್ಕಬಹುದು ಅಂತ ಹೇಳುವುದಕ್ಕೆ ಅಡ್ಡಿಯಿಲ್ಲ.

No comments:

Post a Comment