Sunday 6 January 2019

ಹೆಸರಲ್ಲೇನಿಲ್ಲ ?

ಹೆಸರಲ್ಲೇನಿಲ್ಲ ? ಸೃಷ್ಟಿ ಏನು, ಯಾರೂ ಮಾಡಬಹುದು. ಆದರೆ ಹೆಸರಿಡುವುದು ಮಾತ್ರ ಬಹು ದೊಡ್ಡ ಕೆಲಸ. 300 ಪುಟಗಳ ಪುಸ್ತಕವೊಂದನ್ನು ಮೂರೇ ರಾತ್ರಿಗಳಲ್ಲಿ ಬರೆದು ಮುಗಿಸಿದ ಸ್ಪೂರ್ತಿಯ ಮೂರ್ತಿಯೊಬ್ಬರು, ಆ ಗ್ರಂಥಕ್ಕೆ ಹೆಸರು ಹುಡುಕಲು ಮೂರು ತಿಂಗಳು ತಿಣಿಕಿ, ಕಡೆಗೆ "ಮೂರುನೂರು ಪುಟಗಳು" ಎಂದೇ ಹೆಸರಿಕ್ಕಿದರಂತೆ, ರೈಲ್ವೆ ಗೈಡಿನಂತಹ ತಮ್ಮ ಹಿರಿ ಹೊತ್ತಗೆಗೆ --> ಬೀಚಿ

ಒಳ್ಳೆ ಶೀರ್ಷಿಕೆ ಕೊಡುವುದು ಶೀರ್ಷಾಸನ ಮಾಡಿದ್ದಕ್ಕಿಂತಲೂ ಕಷ್ಟವೇ ಅಂತ ಹೆಸರಿಡಲು ಹೋದವರಿಗೆಲ್ಲ ಗೊತ್ತಿದೆ, ಹೀಗಿರುವಾಗ ಒಂದಷ್ಟು ಒಳ್ಳೊಳ್ಳೆ ಶೀರ್ಷಿಕೆಗಳಿರುವ ಪುಸ್ತಕಗಳ ಪಟ್ಟಿ ಮಾಡಿದರೆ ಹೇಗೆ ಅಂತ ಕಂಡು ಪಕ್ಕನೆ ತಲೆಗೆ ಬಂದಷ್ಟನ್ನು ಕೊಟ್ಟಿದ್ದೇನೆ. ಕೆಲವು ಯೋಚನೆಗೆ ಹಚ್ಚುವಂತವು , ಕೆಲವು ಪದಗಳ ಜೊತೆ ಆಟ ಆಡುವ, ಚಮತ್ಕಾರದವು, pun ಮಾಡುವವು, ತಮಾಷೆಯವು , ಕೆಲವು ಧ್ವನಿಪೂರ್ಣವಾದವು,ಅರ್ಥಪೂರ್ಣವಾದವು, ಕೆಲವು ಚಂದದ ಪದಸಂಯೋಜನೆಯಿಂದ ನಳನಳಿಸುವವು:
ಬೀಚಿಯವರಿಂದಲೇ ಶುರು ಮಾಡೋಣ: ಹುಲಿಯ ಬೆನ್ನ ಮೇಲಿಂದ (ಇದರ ಅರ್ಥ ಏನು ಅಂತ ಯೋಚಿಸಿನೋಡಿ!), ಭಯಾಗ್ರಫಿ (ಇದನ್ನು ಅಣಕಿಸಿ ರಾಜರತ್ನಂ ನಿರ್ಭಯಾಗ್ರಫಿ ಅಂತ ಒಂದನ್ನೂ ಬರೆದರು)
ಸೇಡಿಯಾಪು ಕೃಷ್ಣಭಟ್ಟರ 'ವಿಚಾರ ಪ್ರಪಂಚ' ಎಂಬುದು ಮಾಮೂಲಿ ಹೆಸರಾದರೂ ಅದರ ಹಿನ್ನೆಲೆಯಲ್ಲಿ ವಿಶೇಷ ಉಂಟು. ಈ ಕೃತಿಗೆ ಪಕ್ವಾಪಕ್ವ ಎಂಬ ಹೆಸರು ಇಡುವ ಯೋಚನೆ ಮಾಡಿದ್ದರಂತೆ, ಪಕ್ವತೆ ಅಪಕ್ವತೆಯನ್ನು ನಿರ್ಧರಿಸಬೇಕಾದ ವಾಚಕರ ಸ್ವಾತಂತ್ರ್ಯವನ್ನು ಅವಗಣಿಸಬಾರದೆಂದು ಅದನ್ನು ಕೈಬಿಟ್ಟರಂತೆ,ಆಮೇಲೆ ಬಹುಮುಖಿ, ವಿಚಾರ ಪಂಚಾನನ,ವಿಚಾರ ಪಂಚಮುಖ, ವಿಚಾರ ಪಂಚರಂಗ ಎಂಬೆಲ್ಲ ಹೆಸರುಗಳು ಕೊಡಬಹುದಾದ ಅರ್ಥದ ಬಗ್ಗೆ ಚಿಂತಿಸಿ, 'ವಿಚಾರ' ಮತ್ತು 'ಪ್ರಪಂಚ' ಎಂಬೆರಡು ಶಬ್ದಗಳಿಗೆ ಆಪ್ಟೆ ನಿಘಂಟಿನಲ್ಲಿ ಇರುವ ಎಲ್ಲ ಅರ್ಥಗಳನ್ನೂ ನೋಡಿ, ಹೊರಡಬಹುದಾದ ಎಲ್ಲ ಅರ್ಥಗಳನ್ನೂ ವಿಮರ್ಶಿಸಿ ಕಡೆಗೆ "ವಿಚಾರ ಪ್ರಪಂಚ"ವನ್ನೇ ಗಟ್ಟಿ ಮಾಡಿದರಂತೆ.

ಎಚ್.ಎಸ್.ವೆಂಕಟೇಶಮೂರ್ತಿಯವರ ಕೆಲವು ನೋಡಿ: ಬಾಗಿಲು ಬಡಿವ ಜನಗಳು, ಅಮೆರಿಕದಲ್ಲಿ ಬಿಲ್ಲುಹಬ್ಬ,ಭೂಮಿಯೂ ಒಂದು ಆಕಾಶ, 'ಆಕಾಶದ ಹಕ್ಕು,ಎಚ್ಚೆಸ್ವಿ ಅನಾತ್ಮ ಕಥನ . ಎ. ಕೆ. ರಾಮಾನುಜನ್ ಅವರ ಮತ್ತೊಬ್ಬನ ಆತ್ಮಚರಿತ್ರೆಯೂ ಮಜವಾಗಿದೆ,ಹೊಕ್ಕುಳಲ್ಲಿ ಹೂವಿಲ್ಲವೂ ಕುತೂಹಲ ಹುಟ್ಟಿಸುವ ಶೀರ್ಷಿಕೆ. ಕೆ ಎಸ್ ನ ಪದ್ಯಗಳ ಬಗ್ಗೆ ಬರೆದ ಪುಸ್ತಕಕ್ಕೆ ನರಹಳ್ಳಿ ಬಾಲಸುಬ್ರಮಣ್ಯ "ಇಹದ ಪರಿಮಳದ ಹಾದಿ" ಅಂತ ಸೊಗಸಾದ ಹೆಸರಿಟ್ಟಿದ್ದಾರೆ. ಅಗ್ನಿಹಂಸ , ಚಂದ್ರಮಂಚಕೆ ಬಾ ಚಕೋರಿ, ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ , ರಸೋ ವೈ ಸಃ ತರದ ವಿಶಿಷ್ಟ ಶೀರ್ಷಿಕೆಗಳಿಂದ ಕುವೆಂಪು ಗಮನ ಸೆಳೆಯುತ್ತಾರೆ.

ಶಿವರಾಮ ಕಾರಂತರು, 'ಅದೇ ಊರು, ಅದೇ ಮರ', ಆಳ, ನಿರಾಳ, ಔದಾರ್ಯದ ಉರುಳಲ್ಲಿ, ನಂಬಿದವರ ನಾಕ, ನರಕ ಮುಂತಾದ ಆಕರ್ಷಕ ಶಿರೋನಾಮೆಗಳ ಜೊತೆಗೆ ಪದಗಳ ಜೊತೆ ಆಡುವ, "ಅಪೂರ್ವ ಪಶ್ಚಿಮ", ಪೂರ್ವದಿಂದ ಅತ್ಯಪೂರ್ವಕ್ಕೆ, "ಜಗದೋದ್ಧಾರ ನಾ" ಇಂತವನ್ನೂ ಕಟ್ಟಿದ್ದಾರೆ. ಕಾರಂತರ ಬೆಟ್ಟದ ಜೀವ , ಆಳಿದ ಮೇಲೆ, ಚಿತ್ತಾಲರ ಶಿಕಾರಿ ಇವುಗಳಲ್ಲಿ ವಿಶೇಷ ಏನೂ ಇಲ್ಲದಿದ್ದರೂ, ಇಡೀ ಕಾದಂಬರಿಯ ಸಾರವನ್ನು ಒಂದೋ ಎರಡೋ ಪದಗಳಲ್ಲಿ ಹಿಡಿದಿಟ್ಟಿದ್ದಾರೆ ಅನ್ನಿಸುವ ಅರ್ಥಪೂರ್ಣ ಶೀರ್ಷಿಕೆಗಳು ಇವು. ರಾವ್ ಬಹದ್ದೂರರರ ಗ್ರಾಮಾಯಣ ಪದಕ್ರೀಡೆಯಿಂದ ಮಿಂಚಿದರೆ ಅನಂತಮೂರ್ತಿಯವರ ಸಂಸ್ಕಾರ ಅರ್ಥಬಾಹುಳ್ಯದಿಂದ ಮಿರುಗುತ್ತದೆ(ಸಂಸ್ಕಾರವಂತ ಅಂದರೆ ಉತ್ತಮ ನಡತೆ ಉಳ್ಳವನು,well mannered. ನಮ್ಮಲ್ಲಿ ಷೋಡಶ ಸಂಸ್ಕಾರಗಳು ಅಂತ ಇವೆ, ಅವುಗಳಲ್ಲಿ ಅಂತ್ಯಕ್ರಿಯೆ ಅಥವಾ ಅಂತ್ಯಸಂಸ್ಕಾರವೂ ಒಂದು, ಸಂಸ್ಕಾರ ಮಾಡುವುದು ಅಂದರೆ purify ಮಾಡುವುದು ಅಂತಲೂ ಆಗುತ್ತದೆ, ಕಾದಂಬರಿಯಲ್ಲಿ ಈ ಎಲ್ಲ ಆಯಾಮಗಳೂ ಬರುತ್ತವೆ). ವಿದ್ವಾಂಸ ಎಸ್ ವಿ ರಂಗಣ್ಣ ಬರೆದಿರುವ, ಕಾಳಿದಾಸ, ಮುದ್ದಣ ಇವರಿಗೆಲ್ಲ ಸಿಕ್ಕಿದ ಪ್ರಶಂಸೆ ಹೆಚ್ಚಾಯಿತು ಅಂತ ಹೇಳಿರುವ ಪುಸ್ತಕವನ್ನು ಹೊನ್ನಶೂಲ ಅಂತ ಕರೆದಿರುವುದು ಉಚಿತವಾಗಿದೆ.

ರವಿ ಬೆಳಗೆರೆ ಮತ್ತು ಜೋಗಿ ಬರೆಹಗಳಿರುವ ಪುಸ್ತಕದ ಹೆಸರು: ರವಿ ಕಂಡದ್ದು/ ರವಿ ಕಾಣದ್ದು. ಜೋಗಿಯವರ ಅಂಕಣ ಗಾಳಿಯಾಟ ಇನ್ನೊಂದು ಆಕರ್ಷಕ ಹೆಸರು (ಪಂಜೆಯವರ ತೆಂಕಣ ಗಾಳಿಯಾಟ ಪದ್ಯದ ರೆಫರೆನ್ಸ್). ರವಿ ಬೆಳಗೆರೆಯ ಹೇಳಿ ಹೋಗು ಕಾರಣ,ಲವ್ ಲವಿಕೆಗಳೂ ಚೆನ್ನಾಗಿವೆ. ಅಮೆರಿಕಾದಲ್ಲಿ ಗೊರೂರು ಅಂದರೆ ರಾಮಸ್ವಾಮಿ ಅಯ್ಯಂಗಾರ್ ಇನ್ ಅಮೆರಿಕಾ ಅಂತಲೂ ಆಗುತ್ತದೆ, ಅವರು ಅಮೆರಿಕಾದಲ್ಲೂ ಗೊರೂರನ್ನು ಹುಡುಕಿದರು/ಕಂಡರು ಅಂತಾಗುತ್ತದೆ. ವಸುಧೇಂದ್ರರ ಹಂಪಿ ಎಕ್ಸ್ ಪ್ರೆಸ್ ಅನ್ನುವುದು ಕಥೆಯೊಂದರಲ್ಲಿ ಬರುವ, ಬಳ್ಳಾರಿಯ ಕಡೆಗೆ ಹೋಗುವ ರೈಲಿನ ಹೆಸರಾದರೂ, ಪುಸ್ತಕವೂ ಆ ರೈಲಿನ ಹಾಗೆ ನಮ್ಮನ್ನು ಆ ಸೀಮೆಗೆ ಒಯ್ಯುತ್ತದೆ ಅಂತ ಅರ್ಥ ಮಾಡಬಹುದು.

ಮತ್ತಷ್ಟು ಚಂದದ ಹೆಸರುಗಳು :
ಬೊಗಸೆಯಲ್ಲಿ ಮಳೆ(ಜಯಂತ ಕಾಯ್ಕಿಣಿ) , ವಾಲ್ಮೀಕಿ ತೂಕಡಿಸಿದಾಗ(ಗೌರೀಶ ಕಾಯ್ಕಿಣಿ)
ವಿಚಿತ್ರಾನ್ನ --> ಶ್ರೀವತ್ಸ ಜೋಶಿ
ಯಾರ ಜಪ್ತಿಗೂ ಸಿಗದ ನವಿಲುಗಳು - ದೇವನೂರ ಮಹಾದೇವರ ಬಗ್ಗೆ ಬಂದ ಪುಸ್ತಕಕ್ಕೆ ಅವರದೇ ಕಾದಂಬರಿಯ ಸಾಲಿನ ಶೀರ್ಷಿಕೆ, ಈ ಕಲ್ಪನೆ ಇಷ್ಟವಾಗಿ ನನ್ನ ಬ್ಲಾಗಿಗೂ ಅದೇ ಹೆಸರು ಇಟ್ಟಿದ್ದೇನೆ.
ಬೇಂದ್ರೆ ಸಾಲುಗಳ ಬಳಕೆ : ಎಚ್ ಎಸ್ ವಿ ಅವರ 'ನೂರು ಮರ, ನೂರು ಸ್ವರ', ಗೌರೀಶ ಕಾಯ್ಕಿಣಿಯವರ ಕಂಪಿನ ಕರೆ , ಡಿ ಆರ್ ನಾಗರಾಜರ ಅಮೃತ ಮತ್ತು ಗರುಡ (ಅಮೃತಕ್ಕೆ ಹಾರುವ ಗರುಡ ಎಂಬ ಸಾಲಿಗೆ ರೆಫರೆನ್ಸ್), ಕೀರ್ತಿನಾಥ ಕುರ್ತಕೋಟಿಯವರ ಭೃಂಗದ ಬೆನ್ನೇರಿ, ರಾ. ಶಿವರಾಂ (ರಾಶಿ) ಅವರ ಕೆಣಕೋಣು ಬಾ (ಕುಣಿಯೋಣು ಬಾರಾ ಪದ್ಯದ ಅಣಕ )
ಆಡಾಡತ ಆಯುಷ್ಯ - ಗಿರೀಶ ಕಾರ್ನಾಡರ ಆತ್ಮಕಥೆ
ಪರಮಾನಂದ (ಪಡುಕೋಣೆ ರಮಾನಂದರಾಯರ ಅಭಿನಂದನ ಗ್ರಂಥ, ಇವರ ಪುಸ್ತಕವೊಂದರ ಹೆಸರು : ಹುಚ್ಚು ಬೆಳದಿಂಗಳಿನ ಹೂಬಾಣಗಳು)
ನಿಸಾರ್ ಅಹಮದ್: ನಾನೆಂಬ ಪರಕೀಯ, ಸ್ವಯಂ ಸೇವೆಯ ಗಿಳಿಗಳು , ಮನಸು ಗಾಂಧಿ ಬಜಾರು
ಚಂಪಾದಕೀಯ (ಚಂಪಾ ಬರೆದ ಸಂಪಾದಕೀಯಗಳು)
ಟಿಪಿ ಕೈಲಾಸಂ - ಹೋಂರೂಲು, ಬಂಡ್ವಾಳಿಲ್ಲದ ಬಡಾಯಿ
ಸುಮಂಗಲಾ - ಕಾಲಿಟ್ಟಲ್ಲಿ ಕಾಲುದಾರಿ
ನಾ. ಮೊಗಸಾಲೆ ಅಭಿನಂದನ ಗ್ರಂಥ - ಅಯಸ್ಕಾಂತಾವರ (ಮೊಗಸಾಲೆಯವರು ಕಾಂತಾವರದಲ್ಲಿ ಕನ್ನಡಸಂಘ ಕಟ್ಟಿ, ಚಟುವಟಿಕೆಗಳನ್ನು ನಡೆಸಿದವರು)
ಹುಳಿ ಮಾವಿನ ಮರ - ಲಂಕೇಶರ ಆತ್ಮಚರಿತ್ರೆ
When You Look Like Your Passport Photo, It's Time to Go Home by Erma Bombeck
Hot, Flat, and Crowded by Thomas L. Friedman (ಜಾಗತೀಕರಣದಿಂದ ಜಗತ್ತೇ ಒಂದು ಊರಾಗಿರುವುದರ ಬಗ್ಗೆ )
Do Androids Dream of Electric Sheep? by Philip K. Dick (ಇದು Bladerunner ಎಂಬ ಹೆಸರಿನಲ್ಲಿ ಚಿತ್ರವಾಯಿತು)
America Again: Re-becoming the Greatness We Never Weren’t by Stephen Colbert
Dave Barry: The Taming of the Screw, Dave Barry Slept Here: A Sort of History of the United States
The God Particle: If the Universe Is the Answer, What Is the Question? by Leon M. Lederman, Dick Teresi
ಬಿ. ಜಿ. ಎಲ್. ಸ್ವಾಮಿ - ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ
ಅ.ರಾ.ಮಿತ್ರ: ಬಾಲ್ಕನಿಯ ಬಂಧುಗಳು , ನಾನೇಕೆ ಕೊರೆಯುತ್ತೇನೆ, ಛಂದೋಮಿತ್ರ(ಛಂದಸ್ಸನ್ನು ಮಿತ್ರನೊಬ್ಬ ತಮಾಷೆ ಮಾಡುತ್ತಾ ಹೇಳಿಕೊಟ್ಟಂತೆ ಹೇಳುವ ಕೃತಿ)
ನಾ. ಕಸ್ತೂರಿ - ಅನರ್ಥಕೋಶ, ಗೃಹದಾರಣ್ಯಕ
ಡುಂಡಿರಾಜರ - ಆಯದ ಕವನಗಳು, ಪಂಚ್-ಕ-ಜಾಯ್, ಹನಿಕೇತನ,ಅಕ್ಷತಾ-ಲಕ್ಷತಾ, ಕಾಯೋಕಲ್ಪ, ಡುಂಡಿಮ (ಜಿ ಎನ್ ಉಪಾಧ್ಯ ಡುಂಡಿಯವರ ಬಗ್ಗೆ ಬರೆದಿರುವ ಪುಸ್ತಕದ ಹೆಸರು : ವಿನೋದ ಸೌಧದ ಸಾಹಿತಿ ಡುಂಡಿರಾಜ್)
ಸಂಪನ್ನರಿದ್ದಾರೆ ಎಚ್ಚರಿಕೆ --> ಬೀಚಿ
ಬೊಮ್ಮನಹಳ್ಳಿಯ ಕಿಂದರಿಜೋಗಿ --> ಕುವೆಂಪು ( Pied Piper of Hamelin ಅನ್ನು ಇಲ್ಲಿಗೆ ಒಗ್ಗುವಂತೆ ಅನುವಾದ ಮಾಡಿರುವ ರೀತಿ ಚಂದವಾಗಿದೆ )
ಪಾತಾಳಲೋಕದಲ್ಲಿ ಪಾಪಚ್ಚಿ --> ನಾ. ಕಸ್ತೂರಿ (Alice in Wonderland ಅನ್ನುವುದನ್ನು ಇಲ್ಲಿಯದ್ದೇ ಕಥೆ ಎಂಬಂತೆ ಅನುವಾದ ಮಾಡಿರುವ ರೀತಿಗೆ ಸಲಾಂ )
ನೀವು ಮೆಚ್ಚಿದ, ಸ್ವಾರಸ್ಯಕರ ಹೆಸರುಗಳು ನೆನಪಾದವೇ ? ಏನು ನೋಡ್ತಾ ಇದ್ದೀರಿ ಮತ್ತೆ? ನಿಮ್ಮ ಪಟ್ಟಿಯನ್ನೂ ಹಾಕುವಂತವರಾಗಿ.

ಓದುಗರ ಕಾಮೆಂಟುಗಳು :
Vinay Koundinya : ತುಂಬಾ ಇಷ್ಟ ಆಯ್ತು ಈ ಪಟ್ಟಿ... ನಂಗೆ ತುಂಬಾ ಇಷ್ಟ ಆಗಿರೋದು ಮೂಕಜ್ಜಿಯ ಕನಸುಗಳು.. ಓದಿದ ಮೇಲೆ ಸಾಧಾರಣ ಅನ್ಸ್ಬೋದು ಆದ್ರೆ ಓದಕ್ಕೂ ಮುಂಚೆ ತುಂಬಾ ಇನ್ಟರೆಸ್ಟಿಂಗ್ ಅನ್ಸತ್ತೆ...ಇನ್ನೊಂದು ಸುಧಾಮೂರ್ತಿ ಅವರ ಮಹಾಶ್ವೇತೆ...ಇದು ಓದಕ್ಕೂ ಮುಂಚೆ ಸಾಧಾರಣ ಅನ್ಸ್ತು..ಓದಾದ್ಮೇಲೆ ಸಕ್ಕತ್ತ್ ಅನ್ಸ್ತು....
Edit: ತ.ರಾ.ಸು ಅವರ ಚದುರಂಗದ ಮನೆ..

Sushma Rao:  I’ve always been fascinated with Bengali names and their book titles..... anuvartan... parivrajak... charitraheen... padmanadir Majhi... aranyer dinratri.. avyakta... ashwajani...pratham pratishruti..,
Speaking of which... Guruprasad Doddahejjaji Narayana please enlighten us sometime when you have time on Bengali classics translated to Kannada...
Kunjaalu kaNiveya Kempu hoo


Niranjana Adiga: ಮಡದಿ ಮತ್ತೊಬ್ಬ ಚೆಲುವಗೆ

Ramachandra Hegde: ತುಂಬಾ ಕುತೂಹಲಕರವಾಗಿದೆ ಬರಹ. ಇಷ್ಟವಾಯ್ತು. ಕೆಲವು ಇಂಟರೆಸ್ಟಿಂಗ್ ಶೀರ್ಷಿಕೆಗಳು: ಯೇಗ್ದಾಗೆಲ್ಲಾ ಐತೆ- ಬೆಳಗೆರೆ ಕೃಷ್ಣಶಾಸ್ತ್ರಿ, ಭಗವದ್ಗೀತಾ ಅಥವಾ ಜೀವನಧರ್ಮಯೋಗ, ಉಮರನ ಒಸಗೆ, ಬಾಳಿಗೊಂದು ನಂಬಿಕೆ, ಜೀವನ ಸೌಂದರ್ಯ ಮತ್ತು ಸಾಹಿತ್ಯ- ಡಿವಿಜಿ, ಮಂಕುತಿಮ್ಮನ ಕಗ್ಗ (ಹೆಸರು ಮಂಕುತಿಮ್ಮನಾದರೂ ಬೃಹತ್ ಪ್ರಪಂಚವೇ ಅದರೊಳಗಿದೆ), ಉದಾರಚರಿತರು-ಉದಾತ್ತಪ್ರಸಂಗಗಳು, ಮೂರ್ತಿರಾಯರ ಅಪರವಯಸ್ಕನ ಅಮೆರಿಕಾ ಯಾತ್ರೆ, ವಿಚಿತ್ರ ಎನ್ನಿಸುವ 'ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ' , ಬಿಜಿಎಲ್ ಸ್ವಾಮಿಯವರ 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ', ದೌರ್ಗಂಧಿಕಾಪರಣ - ಸದ್ಯಕ್ಕೆ ನೆನಪಾದದ್ದು.

Srivathsa Joshi : ನಿಮ್ಮ ಈ ಬರಹ, ನಿಮ್ಮ ಓದನ್ನೂ ತಿಳಿಸುತ್ತದೆ, ಆದ್ದರಿಂದ ಇದು "ಓದು-ಬರಹ" :-) [ಇಲ್ಲಿ ಹೆಸರಿಸಿರುವ ಎಲ್ಲ ಪುಸ್ತಕಗಳನ್ನೂ ನೀವು ಆದ್ಯಂತ ಓದಿದ್ದೀರಿ ಎಂದುಕೊಂಡಿದ್ದೇನೆ ಎಂದುಕೊಳ್ಳುತ್ತಿಲ್ಲ. ಆದರೂ ನಿಮ್ಮ ಓದಿನ ಹರಹು ಬಲ್ಲೆ.]

ಸಾಹಿತಿಶ್ರೇಷ್ಠರ ಕೃತಿಗಳ ವಿಶಿಷ್ಟ/ಆಕರ್ಷಕ ಹೆಸರುಗಳನ್ನು ಉಲ್ಲೇಖಿಸಿ ನೀವು ಮಾಡಿರುವ ಈ ಕೆಲಸ, ಬೇರೆಯವರಿಗೆ ಓದಲಿಕ್ಕೊಂದು ಮಾರ್ಗದರ್ಶಿ ಸಹ ಆಗಿದೆ.

ಇನ್ನು, ’ವಿಚಿತ್ರಾನ್ನ’ ಸಹ ನಿಮ್ಮ ಪಟ್ಟಿಯಲ್ಲಿದೆಯೆಂದು ಗಮನಿಸಿದೆ! "I am humbled" ಮತ್ತು, humbled ಆಗಿಯೇ ಇರಬೇಕೆನ್ನುವುದು ನನ್ನ ಹಂಬಲ.

ನಿಮ್ಮ ಈ ಲೇಖನಕ್ಕೆ ಪ್ರತಿಕ್ರಿಯೆಯಲ್ಲಿ ಬರೆಯಬಹುದಾದವು ಎನಿಸಿದ ಒಂದೆರಡು:

* ಎಸ್.ಸುರೇಂದ್ರನಾಥ್ (ಸೂರಿ) ಅವರ ಸಣ್ಣಕತೆಗಳ ಸಂಕಲನ: "ನಾತಲೀಲೆ" [ಪುಸ್ತಕವನ್ನು ನಾನು ಓದಿಲ್ಲ, ಆದರೆ ಹೆಸರು ಆಕರ್ಷಕ.]

* ಭುವನೇಶ್ವರಿ ಹೆಗಡೆಯವರಿಗೆ ಇತ್ತೀಚೆಗೆ ಸಂದ ಅಭಿನಂದನಗ್ರಂಥ: ’ಭುವನಸಿರಿ’ [ಅರ್ಥಗರ್ಭಿತ ಪದ, ಅಲ್ಲದೆ ’ಭುವನೇಶ್ವರಿ’ಯ ಸುಲಭ ಉಚ್ಚಾರ ರೀತಿ: ರಕ್ತೇಶ್ವರಿ->ಲಕ್ಕೆಸಿರಿ ಆದಹಾಗೆ.]

* ಒಮ್ಮೆ ನಾನು ಮತ್ತು ಶಾಮಸುಂದರ್ (ಕನ್ನಡ ಡಾಟ್ ವನ್‌ಇಂಡಿಯಾ) ಇಬ್ಬರೂ ಸೇರಿ ವಿಶ್ವೇಶ್ವರ ಭಟ್ಟರ ಆಫೀಸಿಗೆ ಹೋಗಿದ್ದಾಗ (ಆಗವರು ವಿಜಯಕರ್ನಾಟಕ ಪತ್ರಿಕೆಯ ಸಂಪಾದಕ) ಅವರ ಮೇಜಿನ ಮೇಲೆ ಒಂದು ಪುಸ್ತಕ ಇತ್ತು, ಲೇಖಕರ ಹೆಸರು ನೆನಪಿಲ್ಲ, ಆದರೆ ಪುಸ್ತಕದ ಹೆಸರು ಚೆನ್ನಾಗಿ ನೆನಪಿದೆ: "ತಲೆ ತಿನ್ನುವವರು". ಆ ಶೀರ್ಷಿಕೆಯನ್ನು ನೋಡಿ, ವಿಶ್ವೇಶ್ವರ ಭಟ್ಟರ ಕೆಲಸದ ವೇಳೆಯಲ್ಲಿ ನಾವಿಬ್ಬರು ಹೋಗಿ ಹರಟೆಗೆ ಅವರನ್ನು ಎಳೆದ ಬಗ್ಗೆ ನಮ್ಮಲ್ಲೊಂದು ಮಿಲಿಗ್ರಾಂ ಅಪರಾಧಿಪ್ರಜ್ಞೆ ಮೂಡಿದ್ದೂ ಸುಳ್ಳಲ್ಲ :-)

* ಅಪ್ರಕಟಿತ, ಇನ್ನೂ ಸಾಮಗ್ರಿ ಸಹ ಏನೆಂದು ಗೊತ್ತಿರದ, ಒಂದು ಪುಸ್ತಕ ನನ್ನ ತಲೆಯಲ್ಲಿದೆ. ಅದಕ್ಕೆ "ಹ್ಯೂಮರ ಅರಳಿತು" ಎಂದು ಹೆಸರಿಡಬೇಕೆಂದು ನನ್ನದೊಂದು ತುಂಬ ದಿನಗಳ (ವರ್ಷಗಳ) ಕನಸು.

Prashanth Bhat : ಪಾರಿಜಾತದ ಬಿಕ್ಕಳಿಕೆ, ಬಿಸಿಲು ಚೂರಿನ ಬೆನ್ನು ,ಮೈಲುತುತ್ತು ನಿಮ್ಮ ಲಿಸ್ಟಲ್ಲಿ ಯಾಕಿಲ್ಲ? Lol

Rajesh Srivatsa : ಬೆಟ್ಟದಿಂದ ಬಟ್ಟಲಿಗೆ , ಚಂದ್ರಗಿರಿಯ ತೀರದಲ್ಲಿ

ವೆಂಕಟ್ರಮಣ ಭಟ್ಟ ಕಡೆಮನೆ: ಗಣೇಶಯ್ಯನವರ ಬಹುತೇಕ ಕಾದಂಬರಿಗಳ ಹೆಸರೂ ಹಾಗೆಯೇ ಇವೆ. ನನಗಿಷ್ಟವಾದ ಹೆಸರು ಬಳ್ಳಿಕಾಳ ಬೆಳ್ಳಿ.
ಇನ್ನೂ ಸುಂದರ ಶೀರ್ಷಿಕೆಗಳನ್ನು ನೋಡಲು ಸಂಸ್ಕೃತ ಸಾಹಿತ್ಯದ ಕಡೆ ಕಣ್ಣು ಹಾಯಿಸಬೇಕು. ಮೃಚ್ಛಕಟಿಕ, ಮುದ್ರಾ ರಾಕ್ಷಸ, ವೇಣಿ ಸಂಹಾರ, ಕುಮಾರ ಸಂಭವ ಇತ್ಯಾದಿ..

Ganesh Bhat Nelemav: ತೇಜಸ್ವಿಯವರ 'ಹೆಜ್ಜೆ ಮೂಡದ ಹಾದಿ'. ನೇಮಿಚಂದ್ರ ಅವರ 'ನೋವಿಗದ್ದಿದ ಕುಂಚ', ಮತ್ತು 'ಯಾದ್ ವಶೇಮ್'. ರವಿ ಬೆಳಗೆರೆ ಅನುವಾದಿಸಿದ 'ಹಿಮಾಲಯನ್ ಬ್ಲಂಡರ್'. ಎಸ್ ದಿವಾಕರ್ ಅವರ 'ಹಾರಿಕೊಂಡು ಹೋದವನು'. ಬಿ.ಎಸ್‌ ಶೈಲಜಾರ ಗಣಿತ ಲೇಖನಗಳ ಸಂಗ್ರಹ 'ಏನು? ಗಣಿತ ಅಂದ್ರಾ...?' ಡಾ॥ ಉದಯರವಿ ಶಾಸ್ತ್ರಿ ಅವರ, ಇಂಗ್ಲಿಷಿನ ಭಾಷಾಸ್ವಾರಸ್ಯಗಳ ಬಗ್ಗೆ ಕನ್ನಡದಲ್ಲಿ ತಿಳಿಸಿಕೊಡುವ ಪುಸ್ತಕ 'Savvy ಇಂಗ್ಲಿಷ್ ಸವಿ'
Hannibal Lecter ಸರಣಿಯ ಎರಡನೆಯ ಪುಸ್ತಕ Silence of the lambs.(ಈ ಪುಸ್ತಕವನ್ನೂ, ಸಿನಿಮಾವನ್ನೂ ನಾನು ಇನ್ನೂ ಓದಿಲ್ಲ/ನೋಡಿಲ್ಲ. ಆದರೂ ಸಾವಿನ ಮುನ್ಸೂಚನೆಯಂತಿರುವ ವಿಲಕ್ಷಣ ನೀರವತೆಯನ್ನು ಅಷ್ಟೇ ತಣ್ಣನೆಯ ಧಾಟಿಯಲ್ಲಿ ದಾಟಿಸುವಂತೆ ತೋರುವ ಶೀರ್ಷಿಕೆ ಬಹಳ ಇಷ್ಟವಾಯಿತು.) ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಸ್'ನ One hundred years of solitude. ಚಿನುವಾ ಅಚಿಬೆ ಬರೆದ Things fall apart. ರೇಮಂಡ್‌ಸ್ಮಲಿಯನ್ ಸಾಮಾನ್ಯರಿಗಾಗಿ logicನ ಮೇಲೆ ಬರೆದ ಪುಸ್ತಕಗಳ ಹೆಸರು What is the name of this book? ಮತ್ತು This book needs no title. ಮಾರ್ಗರೇಟ್ ಮಿಚೆಲಳ Gone with the wind . ಥಾಮಸ್ ಹಾರ್ಡಿಯ Far from the madding crowd. ಹೆಮಿಂಗ್ವೇಯ For whom the bell tolls. Punctuation markಗಳನ್ನು ಬಳಸುವ ಬಗ್ಗೆ ರಿಚರ್ಡ್‌ ಲೆಡರರ್ ಬರೆದ ಹಾಸ್ಯಭರಿತ ಪುಸ್ತಕ The comma sense. ಹಾಕಿಂಗ್'ನ A breif history of time. ಫ್ರಿಟ್ಜೋ ಕಾಪ್ರಾನ The tao of physics. ಮಾರಿಯೊ ಲಿವಿಯೋನ The equation that couldn't be solved, ಪ್ರಕೃತಿ/ಭೌತಿಕ ಜಗತ್ತಿನಲ್ಲಿ symmetry(ಸಮಮಿತಿ)ಯ ಪ್ರಾಮುಖ್ಯತೆ ಹಾಗೂ ಗಣಿತದಲ್ಲಿ symmetryಯ ಪರಿಕಲ್ಪನೆಯ ಬೆಳವಣಿಗೆಯನ್ನು ವಿವರಿಸುವ ಪುಸ್ತಕ. ಸೆಡ್ರಿಕ್ ವಿಲನಿ ಎಂಬ ಗಣಿತಜ್ಞ, ಪ್ರಮೇಯವೊಂದರ ಹುಟ್ಟು ಹಾಗೂ ಅದಕ್ಕೆ ಸಾಧನೆ (proof) ಕೊಡುವಾಗ ಗಣಿತಜ್ಞ ಎದುರಿಸುವ ಸವಾಲುಗಳು, ಮಾನಸಿಕ ಸ್ಥಿತ್ಯಂತರಗಳನ್ನು, ಕ್ಲೇಶಗಳನ್ನು ತನ್ನದೇ ಅನುಭವದ ಮೂಲಕ ತಿಳಿಸುವ ಪುಸ್ತಕದ ಶಿರೋನಾಮೆ Birth of a theorem ..
ಇದೆಲ್ಲ ಸರಿ, ಹೆಸರನ್ನೇ ಮುಖ್ಯವಾಗಿ ಪರಿಗಣಿಸಿದ ಈ ಪಟ್ಟಿಯಲ್ಲಿ , what's in a name? ಹೆಸರಲ್ಲೇನಿದೆ? ಎಂದು ಹೆಸರಿನ ಔಚಿತ್ಯವನ್ನೇ ಉಪೇಕ್ಷೆ ಮಾಡಿದ ಷೇಕ್ಸ್'ಪಿಯರ್ನ ಕೃತಿಗಳನ್ನೂ ಸೇರಿಸಬೇಕೆ? To include or not to include Shakespeare ? ಎಂದು ಪ್ರಶ್ನೆ ಮಾಡಿದರೆ ಉತ್ತರ "As you like it"

ಮಾಲಾ ಹೊ ನಾ: ಡಾಲರ್ ಸೊಸೆ
The monk who sold his Ferrari

No comments:

Post a Comment