Sunday 6 January 2019

ರಾವಣ ವಧೆ - ಏಕವ್ಯಕ್ತಿ ತಾಳಮದ್ದಳೆ

ಇವತ್ತು ಬೆಂಗಳೂರಿನ ಗೋಖಲೆ ವಿಚಾರ ಸಂಸ್ಥೆಯಲ್ಲಿ ನಡೆದ, "ಜನ್ಮರಹಸ್ಯ (ರಾವಣ ವಧೆ)" ಏಕವ್ಯಕ್ತಿ ತಾಳಮದ್ದಳೆಗೆ ಹೋಗಿ ಬಂದೆ. ನನಗೆ ತಿಳಿದಂತೆ, ಗೋಖಲೆಯಲ್ಲಿ ಆದ ಎಲ್ಲ ಯಕ್ಷಗಾನ ತಾಳಮದ್ದಲೆಗಳೂ ಸೊಗಸಾಗಿ ಮೂಡಿ ಬಂದಿವೆ.

ಗೋಖಲೆ ಸಂಸ್ಥೆಯ ಗ್ರಂಥಾಲಯವೆಂದರೆ ನನಗೆ ಅದೊಂದು ಪವಿತ್ರಸ್ಥಳವಿದ್ದಂತೆ. ಅಲ್ಲಿ ಡಿವಿಜಿ, ನಿಟ್ಟೂರು ಶ್ರೀನಿವಾಸರಾಯರು, ಎಲ್ ಎಸ್ ಶೇಷಗಿರಿರಾಯರು ಮುಂತಾದವರ ಖಾಸಗಿ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ಓದುವುದು, ನಾಡಿನ ದೊಡ್ಡ ಪಂಡಿತರ ಫೋಟೋಗಳನ್ನು ನೋಡುವುದೂ ಖುಷಿ ಕೊಡುವ ವಿಚಾರ. ಅಲ್ಲಿನ ವೇದಿಕೆಯೂ ಅಷ್ಟೇ, ಡಿವಿಜಯವರ ಕಾಲದಿಂದಲೂ ಅದು ತೂಕದ, ಎಷ್ಟೋ ಜನ ದೊಡ್ಡ ದೊಡ್ಡವರು ಹತ್ತಿ ಇಳಿದಿರುವ ಜಾಗ. ಅಲ್ಲೇ ಮೇಲೆ, "ನಾನು ಕೇಳುತ್ತಿದ್ದೇನೆ, ಎಚ್ಚರವಿರಲಿ" ಎಂಬ ಭಾವ ಹುಟ್ಟಿಸುವ ಡಿವಿಜಿಯವರ ಭಾವಚಿತ್ರ , ಒಪ್ಪ ಓರಣದ, ಸಮಯಕ್ಕೆ ಸರಿಯಾಗಿ ಶುರುವಾಗಿ, ಕ್ಲಪ್ತ ಸಮಯಕ್ಕೆ ಮುಗಿಸುವ ಶಿಸ್ತಿನ ಸಂಯೋಜನೆ, ಹೌಸ್ ಫುಲ್ ಆಗಿಸುವ, ಆಗಾಗ ಮೆಚ್ಚಿ "ಆಹಾ ಓಹೋ" ಅಂತ ತಲೆದೂಗುವ ಸಹೃದಯಿ,ರಸಿಕ ಪ್ರೇಕ್ಷಕವರ್ಗ ಎಲ್ಲ ಸೇರಿ ಒಂದೊಳ್ಳೆ ಕಾರ್ಯಕ್ರಮಕ್ಕೆ ಹೋಗಿಬಂದ ಸಾರ್ಥಕ ಭಾವ ಹುಟ್ಟಿಸುತ್ತದೆ. ಇದು ಕೂಡಾ ಹಾಗೆಯೇ ಇದ್ದು 'ರಸವತ್' ಅನ್ನಿಸಿತು.

ರಂಗಸ್ಥಳದ ಮೇಲೆಯೇ ಶತಾವಧಾನಿ ಗಣೇಶರು ಭಾವಪರವಶರಾಗಿ ದಿವಾಕರ ಹೆಗಡೆಯವರಿಗೆ ಪೊಡಮಡುವ ಅಪೂರ್ವ ವಿದ್ಯಮಾನವೂ ನಡೆದು ಹೋಯಿತು. "ವ್ಯಾಸ ವಾಲ್ಮೀಕಿಯರೇ ಇವರೊಳಗೆ ಕೂತು, ಇವರ ಬಾಯಿಂದ ಮಾತುಗಳನ್ನು ಆಡಿಸುತ್ತಿದ್ದಾರೆ" ಎಂಬ ಕೊಂಡಾಟ ಗಣೇಶರ ಬಾಯಿಂದ ಬಂತು.

ಎಪಿ ಪಾಠಕರ ಭಾಗವತಿಕೆ. ರಾಜೇಶ್ ಆಚಾರ್ ಅವರೆ ಮದ್ದಳೆಯ ಹಿಮ್ಮೇಳ ಇತ್ತು. ದಿವಾಕರ ಹೆಗಡೆಯವರದ್ದು ಚೊಕ್ಕವಾದ ಉತ್ಕೃಷ್ಟವಾದ, ರಸವ್ಯಂಜಕವಾದ ಪಾತ್ರಸೃಷ್ಟಿ. ಪಾತ್ರಗಳೇ ತಾನಾಗಿ,ಭಾವಪೂರ್ಣ ಪ್ರಸ್ತುತಿಯಿಂದ ಪ್ರದರ್ಶನವನ್ನು ಅವರು ಮೇಲೆ ಹಾಕಿದರು. ಕೋಟೆಬಲ್ ಕೋಟುಗಳಾಗಬಹುದಾದ ಪಂಚ್ ಡೈಲಾಗ್ ಅಂತ ಹೇಳಿಸಿಕೊಳ್ಳುವ ಮಾತುಗಳನ್ನು ಸಾಲು ಸಾಲಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ದಿವಾಕರ ಹೆಗಡೆಯವರ ಶೈಲಿ. ಅದನ್ನವರು ಭಾವ ಕೆಡದಂತೆ, ಔಚಿತ್ಯ ತಪ್ಪದಂತೆ ಮಾಡುವ ರೀತಿ ಶ್ಲಾಘ್ಯ. ಭಾವದ ಎಣ್ಣೆಯಲ್ಲಿ ಕಾಯಿಸಿ ಮುಟ್ಟಿದರೆ ರಸ ಒಸರುವ ಜಿಲೇಬಿಯಂತೆ ಪಾತ್ರವನ್ನು ಕಟ್ಟುವ ಅನನ್ಯ ಸಾಧಾರಣವಾದ ಅವರ ಶೈಲಿಯೊಂದು ಮಾದರಿ.

ವ್ಯಾಸೋಚ್ಚಿಷ್ಠಮ್ ಜಗತ್ ಸರ್ವಂ (ಎಲ್ಲವೂ ವ್ಯಾಸರ ಎಂಜಲು) ಎಂಬೊಂದು ಮಾತು ಸಾಹಿತ್ಯವಲಯದಲ್ಲಿರುವಂತೆ, ಎಲ್ಲವೂ ಶೇಣಿ ಗೋಪಾಲಕೃಷ್ಣ ಭಟ್ಟರು (ಅಥವಾ ಶೇಣಿ ಮತ್ತು ಸಾಮಗರು) ಈಗಾಗಲೇ ಹೇಳಿಬಿಟ್ಟಿರುವುದರ ಅನುಕರಣೆ ಅಥವಾ ಮುಂಬರಿಕೆ ಅಂತೊಂದು ಮಾತಿದೆ. ಬೇರೆಯವರಿಗೆ ಹೊಸತನ್ನು ಹೇಳಲು ಏನೂ ಉಳಿಯಲಿಲ್ಲ ಅನ್ನಿಸುವಷ್ಟು ತರದಲ್ಲಿ, ಬಗೆಬಗೆಯಾಗಿ ಅವರು ಈ ಪಾತ್ರಗಳನ್ನು ಕಡೆದಿದ್ದಾರೆ ಎಂಬುದು ಇಲ್ಲಿನ ಭಾವ . ದಿವಾಕರ ಹೆಗಡೆಯವರನ್ನೂ ಸೇರಿಸಿ ಎಲ್ಲರೂ ರಾವಣನ ಪಾತ್ರಸೃಷ್ಟಿಗೆ ಮತ್ತು ಎಷ್ಟೋ ಪಾತ್ರಗಳಿಗೆ ಶೇಣಿಯವರಿಗೆ ಋಣಿಗಳೇ. ಇಷ್ಟಿದ್ದರೂ ಇಂತದ್ದೊಂದು ಬುದ್ಧಿ ಭಾವಗಳ ವಿದ್ಯುದಾಲಿಂಗನವನ್ನು ಕಂಡಾಗ, ಇಷ್ಟು ರಸ ಉಕ್ಕಿದಾಗ ದಿವಾಕರ ಹೆಗಡೆಯವರು ಅದನ್ನು ಹೊಸತಾಗಿಯೇ ಕಟ್ಟಿದರು ಅನ್ನಿಸುತ್ತದೆ. ಅದಕ್ಕವರಿಗೆ ನಮನಗಳು. "ಇಂತದ್ದೊಂದು ವಿಷಯದಲ್ಲಿ, ನಿಮ್ಮ ಹತ್ತಿರ ಮಾತಾಡಲಿಕ್ಕಿದೆ, ಒಮ್ಮೆ ನಿಮಗೆ ಸಿಕ್ಕಲೇ" ಅಂತ ನಾನು ಕೇಳಿದಾಗ, ಸ್ವಲ್ಪವೂ ದೊಡ್ಡಸ್ತಿಕೆ, ಬಿಗುಮಾನಗಳಿಲ್ಲದೆ "ಫೋನ್ ನಂಬರ್ ತಗೊಳ್ಳಿ" ಅಂತಂದು ಅಲ್ಲಿಯೇ ಕೊಟ್ಟ ಗಣೇಶರ ನಿರಾಡಂಬರ ಶೈಲಿ ಬೋನಸ್ ಖುಷಿ ಕೊಟ್ಟಿತು.

No comments:

Post a Comment