ಪಾದೆಕಲ್ಲು ವಿಷ್ಣುಭಟ್ಟರು ಒಂದು ಸಲ ಮಾತಾಡುತ್ತಾ, "ನನ್ನ ಪರಿಚಯ ಮಾಡುವವರೆಲ್ಲ ನನ್ನನ್ನು ಪಂಡಿತ ಪರಂಪರೆಯ ಕೊನೆಯ ಕೊಂಡಿ ಎನ್ನುವುದನ್ನು ಕೇಳಿ ಕೇಳಿ ಸಾಕಾಗಿದೆ, ಇನ್ನು ಬೇರೆ ಥರದ ಪರಿಚಯ ಮಾಡುವುದು ಒಳ್ಳೆಯದು" ಎಂದು ತಮಾಷೆ ಮಾಡಿದ್ದರು. ಆದರೆ ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಬಗ್ಗೆ ಹೇಳುವಾಗ ಆ ಕ್ಲೀಷೆಯನ್ನು ಬಳಸದೇ ಮುಂದೆ ಹೋಗುವುದು ಕಷ್ಟ.
ಶಾಸ್ತ್ರಿಗಳು "ನೆನಪುಗಳ ನೆರಳಲ್ಲಿ" ಎಂಬುದೊಂದು ವ್ಯಕ್ತಿಚಿತ್ರಗಳ ಸಂಗ್ರಹವನ್ನು ಬರೆದಿದ್ದಾರೆ. ಅದರಲ್ಲಿ ಸಾಲು ಸಾಲಾಗಿ ಕನ್ನಡದ ಅಗ್ರ ಪಂಕ್ತಿಯ ವಿದ್ವಾಂಸರ ಪರಿಚಯಗಳು ಬರುತ್ತವೆ. ಮೊದಲ ವ್ಯಕ್ತಿಚಿತ್ರವನ್ನು ಓದಿದಾಗ, "ಆಹಾ ಇವರು ಎಷ್ಟು ದೊಡ್ಡ ಪಂಡಿತರಪ್ಪಾ" ಎಂದು ನಾವು ತಲೆದೂಗಬೇಕು, ಮುಂದಿನವರನ್ನು ನೋಡಿದರೆ ಅವರು ಅದಕ್ಕೂ ಒಂದು ಕೈ ಮೇಲೆ ಅನ್ನಿಸಬೇಕು, ಆಮೇಲಿನವರನ್ನು ನೋಡಿದರೆ ಇವರ ತೂಕ ಮತ್ತೂ ಹೆಚ್ಚು ಎನ್ನಿಸಬೇಕು, ಅದಾದಮೇಲೆ ಬರುವವರನ್ನು ನೋಡಿದರೆ ಇವರ ಪಾಂಡಿತ್ಯದ ವಜನು ಮತ್ತೊಂದು ಕ್ವಿಂಟಾಲು ಅಧಿಕ ಎನ್ನಿಸಬೇಕು, ಹೀಗೆ ಒಬ್ಬರಾದ ಮೇಲೆ ಒಬ್ಬರು ತೂಕದ ವ್ಯಕ್ತಿಗಳ, ಪಂಡಿತಾಗ್ರೇಸರ ಚಿತ್ರಣಗಳು ಆ ಪುಸ್ತಕದಲ್ಲಿ ಬರುತ್ತದೆ. ಶಾಸ್ತ್ರಿಗಳು ಅವರೆಲ್ಲರ ಜೊತೆ ಒಡನಾಡಿದವರು ಎಂದು ತಿಳಿದು ವಿಸ್ಮಯವೇ ಆಗುತ್ತದೆ.
ಶ್ರೇಷ್ಠರಾದ, ಪಾಂಡಿತ್ಯಕ್ಕೆ ಮಾದರಿಯಾದ ತೀನಂಶ್ರೀ, ಡಿ ಎಲ್ ನರಸಿಂಹಾಚಾರ್ ಅವರಂಥ ಅನೇಕ ಗುರುಗಳ ಹತ್ತಿರ ಪಾಠ ಹೇಳಿಸಿಕೊಂಡು, ಅಂಥ ಅನೇಕ ಮಹನೀಯರೊಂದಿಗೆ ಒಡನಾಡಿ, ಆ ಪರಂಪರೆಯ ಸಮರ್ಥ ಪ್ರತಿನಿಧಿಯಾಗಿ ಇರುವವರು ಶಾಸ್ತ್ರಿಗಳು. ಇಡೀ ಜೀವಮಾನವನ್ನು ಅಧ್ಯಯನ, ಸಂಶೋಧನೆ, ಗ್ರಂಥಸಂಪಾದನೆ, ವ್ಯಾಕರಣ, ಶಬ್ದ ಅರ್ಥಗಳ ಚಿಂತನೆ ಮುಂತಾದ ವಿದ್ವತ್ತೆಯ, ಶ್ರಮದಾಯಕವಾದ ಕೆಲಸಗಳಿಗೆ ಮುಡಿಪಾಗಿಟ್ಟ ವೆಂಕಟಾಚಲ ಶಾಸ್ತ್ರಿಗಳಿಗೆ ನಮಸ್ಕಾರ ಹೇಳಲೇಬೇಕು. ಪಂಡಿತರ ಗದ್ಯ ಎಷ್ಟೋ ಸಲ ಪೆಡಸಾಗಿರುವುದುಂಟು, ಇವರು ಪಾಂಡಿತ್ಯದ ಬಲವಿದ್ದರೂ ತಿಳಿಯಾದ, ಹದವಾದ, ಚಂದದ ಗದ್ಯವನ್ನು ಬರೆಯಬಲ್ಲರು.
ಶಾಸ್ತ್ರಿ ಎಂದರೆ ಶಾಸ್ತ್ರಗಳಲ್ಲಿ ಕೋವಿದನಾದವನು. ಇವರು ಆ ಅರ್ಥದಲ್ಲಿ ಶಾಸ್ತ್ರಿಯೇ. ಅವರು ನಮ್ಮ ಜ್ಞಾನದ ಜೋಳಿಗೆಯನ್ನು ಹೀಗೆಯೇ ತುಂಬುತ್ತ ಇರಲಿ
No comments:
Post a Comment