Wednesday, 17 September 2025

ದೀವಟಿಗೆಗಳು

 ಒಮ್ಮೊಮ್ಮೆ ಹಾಗಾಗುತ್ತದೆ, ಏನು ಮಾಡುವುದಕ್ಕೂ ಉತ್ಸಾಹ ಬರದೇ, "ಏನು ಮಾಡಿದರೆ ಏನು ಪ್ರಯೋಜನ, ಜೀವನವೆಂದರೆ ಇಷ್ಟೇ" ಎಂಬ ನಿರುತ್ಸಾಹದ ಮಂಕು ಕವಿದು ಬಿಡುತ್ತದೆ. ಹಾಗಾದಾಗ ದೊಡ್ಡವರು ಬಾಳಿ ಬದುಕಿದ ರೀತಿ, ಅವರ ಸಾಧನೆಗಳ ಬಗೆಗೆ ಓದಿದರೆ ಅದು ಒಂದು ಚಿಟಿಕೆ ಪ್ರೇರಣೆಯನ್ನು, ಶಕ್ತಿಮದ್ದಿನಂತೆ ಒಂದಿಷ್ಟು ಉತ್ತೇಜನವನ್ನು ಕೊಡುತ್ತದೆ. ಅಂತಹ ಓದಿಗೆ ಸಿಗಬಹುದಾದದ್ದು ಡಿ.ವಿ.ಜಿ.ಯವರ ಜ್ಞಾಪಕ ಚಿತ್ರಶಾಲೆ ಸರಣಿ, ಟಿ.ವಿ. ವೆಂಕಟಾಚಾಲ ಶಾಸ್ತ್ರಿಯವರ 'ಉದಾರ ಚರಿತರು ಉದಾತ್ತ ಪ್ರಸಂಗಗಳು' ಇಂತಹ ಹೊತ್ತಗೆಗಳು. ಅದೇ ರೀತಿಯ ಆನಂದವನ್ನು ಎಸ್. ಆರ್. ರಾಮಸ್ವಾಮಿಯವರ ‘ದೀವಟಿಗೆಗಳು’ ಎಂಬ ಕೃತಿಯೂ ಕೊಡಬಲ್ಲದು.

ಇದರಲ್ಲಿ ಅವರು ಡಿ.ವಿ.ಜಿ., ವಿ.ಸೀ., ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ, ಎಸ್. ಶ್ರೀಕಂಠಶಾಸ್ತ್ರೀ ಇಂಥವರ ಉದಾತ್ತಮನೋಹರವಾದ ವ್ಯಕ್ತಿತ್ವಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಇದರಲ್ಲಿ ಸುಮಾರು ನೂರು ಪುಟಗಳು ಡಿ.ವಿ.ಜಿ.ಯವರ ಭವ್ಯವಾದ ವ್ಯಕ್ತಿತ್ವಕ್ಕೇ ಮೀಸಲಾಗಿದೆ. ಡಿ.ವಿ.ಜಿ.ಯವರ ಜೊತೆ ಒಡನಾಡಿದವರ ಜೊತೆ ನಾನು ಒಂದೆರಡು ಸಲ ಮಾತನಾಡುವಾಗ ಅವರೊಂದು ರೀತಿಯ ಭಯ ಭಕ್ತಿಯಿಂದ, ಡಿ.ವಿ.ಜಿ.ಯವರು ಕಣ್ಣಮುಂದೆ ಇಲ್ಲದಿದದ್ದರೂ ಅವರ ತೇಜೋಮಯವಾದ ವ್ಯಕ್ತಿತ್ವವನ್ನು ನೆನೆದು ಕೈಮುಗಿದಿರುವವರಂತೆ ಪೂಜ್ಯಭಾವದಿಂದ ಮಾತಾಡುವುದನ್ನು ಗಮನಿಸಿದ್ದೇನೆ. ರಾಮಸ್ವಾಮಿಯವರ ಚಿತ್ರಣವು ಹಾಗಿಲ್ಲ. ಹಾಗೆ ಚಿತ್ರಿಸುವುದರ ಬದಲಿಗೆ ಅವರಿಗಿದ್ದ ಆತ್ಮೀಯತೆ, ನಿಡುಗಾಲದ ಒಡನಾಟಗಳ ಬಲದಿಂದ ಗೌರವ ಮತ್ತು ಸಲುಗೆಗಳನ್ನೂ ಬೆರೆಸಿ ಆಪ್ತವಾಗಿ, ತಮಾಷೆಯಾಗಿ, ವಿವರವಾಗಿ, ರಸಮಯ ಪ್ರಸಂಗಗಳನ್ನು ಪೋಣಿಸಿ ಬರೆದಿದ್ದಾರೆ. ಡಿ.ವಿ.ಜಿ.ಯವರ ಮೌಲ್ಯಗಳು, ಸಾರ್ವಜನಿಕರ ಬಗೆಗಿನ ಕಾಳಜಿ, ಸಮಾಜಸೇವೆ, ಹೋರಾಟಗಳು, ಜಗಳಗಳು, ಸಾಹಿತ್ಯ, ಪತ್ರಿಕೋದ್ಯಮ, ದೊಡ್ಡ ಮನಸ್ಸು, ವಿನೋದಪ್ರಜ್ಞೆ, ಪರಿಹಾಸ ಪ್ರಜ್ಞೆ ಎಲ್ಲವೂ ಇಲ್ಲಿ ಬಂದು ಸೊಗಯಿಸಿವೆ. ಡಿ.ವಿ.ಜಿ.ಯವರ ಹಾಸ್ಯಪ್ರಜ್ಞೆಯ ಬಗ್ಗೆ ಒತ್ತುಕೊಟ್ಟು ಹೇಳುವಾಗ ಅವರಿಗೆ ವಿನೋದ ಎಂದರೆ ಸೀರಿಯಸ್ ಬ್ಯುಸಿನೆಸ್ ಎಂಬರ್ಥದ ಮಾತೂ ಬಂದಿದೆ.
ಇನ್ನು ವಿ.ಸೀತಾರಾಮಯ್ಯನವರ ಬಗ್ಗೆ ಬರೆದದ್ದಂತೂ ತುಂಬ ಸೊಗಸಾಗಿದೆ. ಅವರ ಹೃದಯ ವೈಶಾಲ್ಯ, ಬಹುಮುಖಿ ಪ್ರತಿಭೆ, ಪಾಂಡಿತ್ಯ, ರಸಿಕತೆ, ಎಡವಟ್ಟುಗಳು, ಪೇಚಿನ ಪ್ರಸಂಗಗಳು, ಅವರ ಬಗೆಗಿನ ಜೋಕುಗಳು, ಸುಸಂಸ್ಕೃತ ವ್ಯಕ್ತಿತ್ವ ಎಲ್ಲವೂ ಸೇರಿ ಒಂದು ಮದುವೆಯ ಊಟವನ್ನು ಸವಿದಂತಹ ಅನುಭವವನ್ನು ಕೊಡುತ್ತವೆ. ಇದರ ಜೊತೆಗೆ ಎಸ್.ದಿವಾಕರ್ ಅವರು ಬರೆದಿರುವ "ವಿ.ಸೀ. ಮತ್ತು ಲಂಡನ್" ಎಂಬ ಪ್ರಬಂಧವನ್ನೂ ಅಗತ್ಯವಾಗಿ ಓದಬೇಕು(ಇದು ದಿವಾಕರ್ ಅವರ ಒಂದೆರಡು ಪ್ರಬಂಧ ಸಂಕಲನಗಳಲ್ಲಿ ಪ್ರಕಟವಾಗಿದೆ). ದಿವಾಕರ್ ಅವರೂ ವಿ.ಸೀ.ಯವರ ವ್ಯಕ್ತಿತ್ವವನ್ನು ಸ್ವಾರಸ್ಯಕಾರಿಯಾಗಿ ನಮ್ಮ ಮುಂದೆ ಇಟ್ಟಿದ್ದಾರೆ. ಅದನ್ನವರು ಪ್ರಬಂಧವನ್ನಾಗಿಸದೆ, ವಿ.ಸೀ.ಯವರ ಬದಲಿಗೆ ಕಾಲ್ಪನಿಕ ವ್ಯಕ್ತಿಯೊಬ್ಬನನ್ನು ಅಲ್ಲಿ ಇಟ್ಟು, ಸಣ್ಣಕಥೆಯನ್ನಾಗಿ ಬರೆದಿದ್ದರೆ ಅದು ಬಹಳ ದಿನಗಳ ಕಾಲ ಕಾಡುವ ಕಥೆಯಾಗುತ್ತಿತ್ತೋ ಏನೋ. ಪ್ರಬಂಧವಾಗಿಯೂ ಅದು ಯಶಸ್ವಿಯಾಗಿದೆ, ಮತ್ತು ಕಾಡುತ್ತದೆ, ಆ ಮಾತು ಬೇರೆ.
ಒಳ್ಳೆಯ ಓದು ಬೇಕೆಂದು ನೀವು ಹುಡುಕುತ್ತಿದ್ದರೆ ಇವುಗಳನ್ನು ಓದಬಹುದು.


No comments:

Post a Comment