'ಚೌಚೌ ಚೌಕಿ' ಇದೊಂದು ವಿಶಿಷ್ಟವಾದ ಪುಸ್ತಕ, ಸುಧಾ ಪತ್ರಿಕೆಯಲ್ಲಿ ಒಂದಾನೊಂದು ಕಾಲದಲ್ಲಿ ಜನಪ್ರಿಯವಾಗಿದ್ದ ಪ್ರಶ್ನೋತ್ತರಗಳ ಅಂಕಣವೊಂದರ ಪುಸ್ತಕರೂಪ. ಟಿ.ಆರ್. ಅನಂತರಾಮು ಮತ್ತು ಶರಣಬಸವೇಶ್ವರ ಅಂಗಡಿಯವರು ಇದರ ರೂವಾರಿಗಳು. ಆ ಕಾಲದಲ್ಲಿ ತರಂಗದಲ್ಲಿ "ಬಾಲವನದಲ್ಲಿ ಕಾರಂತಜ್ಜ" ಎಂಬೊಂದು ಅಂಕಣವೂ ಇತ್ತೆಂದು ನೆನಪು. "ಅದ್ಯಾಕೆ ಹಾಗಜ್ಜಾ, ಇದ್ಯಾಕೆ ಹೀಗಜ್ಜಾ" ಎಂದೆಲ್ಲ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಶಿವರಾಮ ಕಾರಂತರು ಸರಳವಾದ ಉತ್ತರಗಳನ್ನು ಅದರಲ್ಲಿ ಕೊಡುತ್ತಿದ್ದರು. ಇಂಗ್ಲೀಷಿನಲ್ಲಿಯೂ ಇಂಥವು ಬಂದಿದ್ದವು(What Einstein Didn't Know: Scientific Answers to Everyday Questions ಎಂಬ ಪುಸ್ತಕವು ಪಕ್ಕನೆ ನೆನಪಾಯಿತು). ಮಕ್ಕಳಂತೂ ಒಂಥರಾ ನಡೆದಾಡುವ, ನಡೆಯುತ್ತಾ ಆಡುವ, ಆಡುತ್ತಾ ನಡೆಯುವ ಮಾತಾಡುವ ಪ್ರಶ್ನೆಪತ್ರಿಕೆಗಳೇ ತಾನೇ ? "ಸೂರ್ಯನ ಬೆಂಕಿ ಯಾಕಿನ್ನೂ ಆರಿಲ್ಲ?", "ಗುರು ಗುರು ಅನ್ನುವ ಕಾರು ದೂಡಿದರೆ ಯಾಕೆ ಸ್ಟಾರ್ಟ್ ಆಗುತ್ತದೆ?", "ಮಳೆ ಬಂದರೆ ಟ್ರಾಫಿಕ್ ಯಾಕೆ ಜಾಮ್ ಆಗುತ್ತದೆ?", "ಈ ಸಲ ಬೇಸಗೆಯಲ್ಲಿ ಅಷ್ಟೊಂದು ಸೆಖೆಯಾದದ್ದು ಯಾಕೆ?" ಇಂಥ ಎಷ್ಟೋ ಪ್ರಶ್ನೆಗಳು ದೊಡ್ಡವರ ತಲೆಗೂ ಬಂದಿರುತ್ತವೆ, ಆದರೆ ದೊಡ್ಡವರು ಸಣ್ಣ ಪ್ರಶ್ನೆಯನ್ನು ದೊಡ್ಡದಾಗಿ ಕೇಳಿ ಸಣ್ಣವರಾಗಿ ತಮ್ಮ ಅಜ್ಞಾನದ ಪ್ರದರ್ಶನ(!) ಮಾಡುವುದು ಬೇಡ ಅಂತ ಸುಮ್ಮನಾಗಿರುತ್ತಾರೆ ಅಷ್ಟೇ.
My Facebook Id is: Sharath Bhat Seraje, my mail id is: sharathbhats@gmail.com
Wednesday, 17 September 2025
ಚೌಚೌ ಚೌಕಿ
ಅದೇ ಪ್ರಶ್ನೋತ್ತರದ ಪರಿಕಲ್ಪನೆಗೆ ಒಂದು ತಮಾಷೆಯ ಟ್ವಿಸ್ಟ್ ಕೊಟ್ಟಾಗ ಹುಟ್ಟಿದ್ದೇ 'ಚೌಚೌ ಚೌಕಿ' ಎಂಬ ಅಂಕಣ. ದೊಡ್ಡವರಿಗೂ ಮಕ್ಕಳಾಟ ಆಡುವುದಕ್ಕೆ ಅವಕಾಶ ಮಾಡಿಕೊಟ್ಟದ್ದು ಈ ಅಂಕಣದ ಹೆಚ್ಚುಗಾರಿಕೆ. "ಆಕಾಶವು ಯಾಕೆ ನೀಲಿಯಾಗಿದೆ" ಎಂಬುದರಿಂದ "ಮನುಷ್ಯರು ಯಾಕೆ ಗೊರಕೆ ಹೊಡೆಯುತ್ತಾರೆ" ಎಂಬಲ್ಲಿಯವರೆಗೆ ಪ್ರಶ್ನೆಗಳು ಎಷ್ಟೂ ಇವೆ. ಇಂಥ ಪ್ರಶ್ನೆಗಳಿಗೆ ಬೀchi ಯವರ ಉತ್ತರಭೂಪದಲ್ಲೋ, ರವಿ ಬೆಳಗೆರೆಯವರ 'ಕೇಳಿ' ಅಂಕಣದಲ್ಲೋ ಸಿಗಬಹುದಾದ ಉತ್ತರಗಳನ್ನೂ ಊಹಿಸಿಕೊಳ್ಳಿ. ಪ್ರಶ್ನೆಗಳಿಗೆ ಗಂಭೀರವಾದ ಉತ್ತರದ ಜೊತೆಗೆ ಇಂಥ ತರಲೆಯ,ತುಂಟತನದ ಉತ್ತರಗಳನ್ನೂ ಕೊಟ್ಟರೆ ಹೇಗಾದೀತು ಎಂಬುದೇ ಇಲ್ಲಿನ blending science with a dash of humor to make learning fun ಎಂಬಂಥ ಸೊಗಸಾದ ಕಲ್ಪನೆ.
ಒಂದು ಪ್ರಶ್ನೆಯನ್ನು ಕೇಳುವುದು, ಅದಕ್ಕೊಂದು ಗಂಭೀರವೋ ವಿಜ್ಞಾನದ ವಿವರಗಳೋ ಇರುವ ಉತ್ತರವನ್ನು ಕೊಡುವುದು, ಅದರ ಬೆನ್ನಿಗೇ ಅದೇ ಪ್ರಶ್ನೆಗೆ ತರಹೇವಾರಿಯಾದ ತಲೆಹರಟೆಯ ಉತ್ತರಗಳನ್ನು ಓದುಗರಿಂದ ಬರೆಸುವುದು, ಇದು ಈ ಅಂಕಣದ ಕ್ರಮವಾಗಿತ್ತು. ಗಂಭೀರವಾದ ಉತ್ತರವನ್ನು ಆದಷ್ಟೂ ಸರಳವಾದ ಭಾಷೆಯಲ್ಲಿ ಕೊಡುವುದು, ತಮಾಷೆಯ ಉತ್ತರದಲ್ಲಿ ವಿಡಂಬನೆ, ವಿಚಿತ್ರ ಕಲ್ಪನೆಗಳು, ತರಲೆ, pun ಮಾಡುವುದು ಇಂಥದಕ್ಕೆಲ್ಲ ಮುಕ್ತವಾದ ಅವಕಾಶ -- ಇಂಥ ಸ್ವರೂಪವು ಅಂಕಣದ ಜನಪ್ರಿಯತೆಗೆ ಕಾರಣವಾಗಿದ್ದಿರಬೇಕು. ಇದನ್ನು ನಡೆಸಿಕೊಟ್ಟವರು ಟಿ.ಆರ್. ಅನಂತರಾಮು ಮತ್ತು ಶರಣಬಸವೇಶ್ವರ ಅಂಗಡಿಯವರು. ಆಗ ಸುಧಾ ಪತ್ರಿಕೆಯಲ್ಲಿದ್ದ ನಾಗೇಶ ಹೆಗಡೆ ಮತ್ತು ಜಿ. ಎನ್. ರಂಗನಾಥರಾವ್ ಅವರು ಇದಕ್ಕೆ ಪ್ರೋತ್ಸಾಹವಿತ್ತವರು.
Subscribe to:
Post Comments (Atom)
No comments:
Post a Comment