Wednesday, 17 September 2025

ಬಾನು ಮುಷ್ತಾಕ್ ಮತ್ತು ದಸರಾ ಉದ್ಘಾಟನೆ

ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಬೇಕೇ ಮಾಡಬಾರದೇ ಎಂಬ ಚರ್ಚೆಯನ್ನು ಕಂಡು ಒಂದಷ್ಟು ವಿಷಯಗಳು ನೆನಪಾದವು.

ಬಾಬ್ರಿ ಮಸೀದಿ ಗಲಾಟೆಯಾದಾಗ, ಪ್ರತಿಭಟನೆ ಮಾಡಲಿಕ್ಕೆ ಸಾಹಿತಿಗಳೆಲ್ಲ ಟೌನ್ ಹಾಲಿನ ಹತ್ತಿರಕ್ಕೆ ಬರಬೇಕು ಅಂತ ಕರೆಕೊಡಲಾಗಿತ್ತಂತೆ. ಸಮಯಕ್ಕೆ ಸರಿಯಾಗಿ ಮತ್ತು ಎಲ್ಲರಿಗಿಂತ ಮೊದಲು ಬಂದದ್ದು ಪರಮ ದೈವಭಕ್ತರೂ, ಸನಾತನಿಗಳೂ ಆಗಿದ್ದ ಪು. ತಿ. ನರಸಿಂಹಾಚಾರ್ಯರು! ಅದೂ ಎಂದಿನಂತೆ ತಮ್ಮ ಟೊಪ್ಪಿ,ಇಷ್ಟುದ್ದದ ನಾಮ, ಜುಟ್ಟು ಇತ್ಯಾದಿಗಳ ಜೊತೆಗೆ ! ಹಾಗೆಯೇ ಕ್ರೈಸ್ತ ಧರ್ಮದ ಗ್ರಂಥಗಳನ್ನು ಬಹುಶಃ ಹೀಬ್ರೂ ಭಾಷೆಯಲ್ಲಿಯೇ ಓದಿ, ಏಸು ಕ್ರಿಸ್ತನ ಬಗ್ಗೆ ಗೊಲ್ಗೊಥಾ ಎಂಬ ಖಂಡ ಕಾವ್ಯವನ್ನು ಬರೆದದ್ದು ಬಲಪಂಥೀಯರೂ, ಸನಾತನಿಗಳೂ ಆಗಿದ್ದ ಪಂಡಿತಶ್ರೇಷ್ಠ ಮಂಜೇಶ್ವರ ಗೋವಿಂದ ಪೈಗಳು. ಅವರು ಬುದ್ಧನ ಬಗ್ಗೆಯೂ ಹಾಗೆಯೇ ಬರೆದಿದ್ದಾರೆ. ಪಾಳಿ ಮತ್ತು ಪ್ರಾಕೃತ ಭಾಷೆಗಳನ್ನು ಕಲಿತು ಬೌದ್ಧ ಮತ್ತು ಜೈನ ಧರ್ಮಗಳ ಬಗ್ಗೆ ಸಾಕಷ್ಟು ಬರೆದದ್ದು ಜಿಪಿ ರಾಜರತ್ನಂ ಅಯ್ಯಂಗಾರ್ ಅವರು. ನಾಡಿನ ಬಹಳ ದೊಡ್ಡ ವಿದ್ವಾಂಸರಾಗಿದ್ದ ಸಾಕೃ ರಾಮಚಂದ್ರರಾಯರೂ ಹೀಗೆಯೇ ಮಾಡಿದವರು. ಈಗ ಜೈನ ಮತ್ತು ಬೌದ್ಧ ಧರ್ಮಗಳ ಬಗ್ಗೆ ತುಂಬ ಮಾತಾಡುತ್ತಿರುವವರು, ಅವುಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತಿರುವವರು ಸನಾತನ ಧರ್ಮದ ಮೇಲೆ ಶ್ರದ್ಧೆ ಭಕ್ತಿಗಳಿರುವ, ಬಲಪಂಥೀಯರೆಂದೇ ಗುರುತಿಸಲ್ಪಡುತ್ತಿರುವ ಜಿ.ಬಿ. ಹರೀಶ ಅವರು. ಅವರು ಜೈನ ಧರ್ಮದ ಮೇಲೆ ಪಿಎಚ್ಡಿಯನ್ನೂ ಮಾಡಿರುವವರು. ಯುಗಂಧರ್ ಎಂಬ ಚಿತ್ರದಲ್ಲಿ 'ಕೃಷ್ಣ ಆಯೇಗಾ' ಎಂಬ ಭಕ್ತಿಗೀತೆಯನ್ನು ಬರೆದದ್ದು ಪರಮನಾಸ್ತಿಕರಾದ ಜಾವೇದ್ ಅಖ್ತರ್ ಅವರು. ಅವರು ಲಗಾನ್ ಚಿತ್ರದಲ್ಲಿ ಬರೆದ 'ರಾಧಾ ಕೈಸೇ ನ ಜಲೇ' ಎಂಬ ಹಾಡನ್ನು ಕೇಳಿದರೆ ಕೃಷ್ಣನ ಬಗ್ಗೆ ಪ್ರೀತಿಯಿಲ್ಲದವರು ಇದನ್ನು ಬರೆಯಲು ಸಾಧ್ಯವಿಲ್ಲ ಎನ್ನಿಸುವಂತಿದೆ, ತಮ್ಮ ನಾಸ್ತಿಕ ಧೋರಣೆಗಳನ್ನಿಟ್ಟುಕೊಂಡೇ 'ಓ ಪಾಲನ್ ಹಾರೇ' ಎಂಬ ಭಜನ್ ಅನ್ನೂ ಅವರು ಆ ಚಿತ್ರಕ್ಕಾಗಿ ಬರೆದಿದ್ದಾರೆ.
ಇನ್ನು ಹಿಂದೂ ರಾಷ್ಟ್ರವನ್ನು ಕಟ್ಟಿ ಅಂದಿದ್ದ ಸಾವರ್ಕರರು ಒಬ್ಬ ನಾಸ್ತಿಕರು, ವಿಚಾರವಾದಿ. ಮುಸ್ಲಿಂ ರಾಷ್ಟ್ರ ಕಟ್ಟ ಹೊರಟ ಜಿನ್ನಾ ಒಬ್ಬ ಶ್ರದ್ದಾವಂತ ಮುಸ್ಲಿಮರಾಗಿರಲಿಲ್ಲ, ಅಡ್ವಾಣಿಯವರು ಒಬ್ಬ agnostic ಅಂತ ಕೇಳಿದ್ದೇನೆ. ಸುಬ್ರಮಣ್ಯಂ ಸ್ವಾಮಿಯವರ ಹೆಂಡತಿ ಒಬ್ಬ ಪಾರ್ಸಿ, ಅಳಿಯ ಒಬ್ಬ ಮುಸಲ್ಮಾನ. ಧರ್ಮವೇ ಬೇರೆ, ಧರ್ಮದ ಹೆಸರಿನಲ್ಲಿ ನಡೆಯುವ ರಾಜಕಾರಣವೇ ಬೇರೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಳವನ್ನು ಕಟ್ಟಿದ್ದು ಬಪ್ಪ ಬ್ಯಾರಿ ಎಂಬ ಶ್ರದ್ದಾವಂತ ಮುಸ್ಲಿಮನೊಬ್ಬ. ಯಕ್ಷಗಾನದಲ್ಲಿ ಈ ಬಪ್ಪಬ್ಯಾರಿಯ ಪಾತ್ರವನ್ನು ಮಾಡುತ್ತಿದ್ದದ್ದು ಶೇಣಿ ಗೋಪಾಲಕೃಷ್ಣ ಭಟ್ಟರು, ಅವರು ಇಸ್ಲಾಮಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿರೋಧಿಸಲು ಬಂದಿದ್ದ ಮುಸ್ಲೀಮರು ಅವರ ಪಾತ್ರಚಿತ್ರಣವನ್ನು ನೋಡಿ ಮೆಚ್ಚಿದ್ದರಂತೆ. ಶೇಣಿಯವರು ಆ ಪಾತ್ರಕ್ಕಾಗಿ ಸಾಕಷ್ಟು ಅಧ್ಯಯನವನ್ನೂ ರಿಸರ್ಚ್ ಅನ್ನೂ ಮಾಡಿದ್ದರಂತೆ. ಕಾರ್ಪೋರೇಶನ್ ಬ್ಯಾಂಕಿನ ಸ್ಥಾಪಕರಾದ ಹಾಜಿ ಅಬ್ದುಲ್ಲಾ ಸಾಹೇಬರು function ಮಾಡಿದರೆ ಹಿಂದೂಗಳಿಗೆ, ಅವರ ಸಂಪ್ರದಾಯದಂತೆ ಹಂತಿ ಹಾಕಿಸಿ, ಬಾಳೆ ಎಲೆಯಲ್ಲಿ ಶಾಕಾಹಾರಿ ಭೋಜನ ಮಾಡಿಸಿ, ಊಟ ದಕ್ಷಿಣೆಯನ್ನೂ ಕೊಡುತ್ತಿದ್ದರಂತೆ! ಬೊಳುವಾರು ಮಹಮದ್ ಕುಂಞ್ ಅವರಿಗೆ ಒಂದೊಮ್ಮೆ ಅವರು ಮುಸ್ಲಿಮರು ಅನ್ನುವ ಕಾರಣಕ್ಕೆ ಸುಲಭಕ್ಕೆ ಮನೆ ಸಿಗದೇ ಹೋದಾಗ, ಒಂದು ಫೋನ್ ಮಾಡಿ ಮನೆಯನ್ನು ಕೊಡಿಸಿದ್ದು ವೈದಿಕರೂ ಸನಾತನಿಗಳೂ ಆದ ಬನ್ನಂಜೆ ಗೋವಿಂದಾಚಾರ್ಯರು. ಅಪ್ಪಟ ನಾಸ್ತಿಕರೂ, ಕಮ್ಮ್ಯೂನಿಷ್ಟರೂ ಆಗಿದ್ದ ಗೌರೀಶ ಕಾಯ್ಕಿಣಿಯವರಿಗೆ ಗೋಕರ್ಣದ ದೇವಸ್ಥಾನದ ಜನರು, ಪುರೋಹಿತರು ಇವರೆಲ್ಲರ ಜೊತೆಗೆ ಸೌಹಾರ್ದವೇ ಇತ್ತು. ನಾಸ್ತಿಕರಾಗಿದ್ದ ಮೂರ್ತಿರಾಯರ ಆತ್ಮೀಯರಾಗಿ ಜೊತೆಗಿದ್ದದ್ದು ಪು.ತಿ.ನ., ತೀನಂಶ್ರೀ, ಶಿವರಾಮ ಶಾಸ್ತ್ರೀ ಮುಂತಾದ ಸಂಪ್ರದಾಯ ಶ್ರದ್ಧೆಯಿದ್ದ ದೈವಭಕ್ತರು. ಅಬ್ದುಲ್ ಕಲಾಂ, ಜಾಕೀರ್ ಹುಸೇನ್, ಬಿಸ್ಮಿಲ್ಲಾಖಾನ್, ನಿಸಾರ್ ಅಹಮ್ಮದ್ ಮುಂತಾದವರ ಉದಾಹರಣೆಗಳು ಹೇಗೂ ಇವೆ.
ಭಾರತೀಯ ಸೆಕುಲರಿಸಂ ಇನ ಸ್ವರೂಪವು ಯೂರೋಪಿನ ಅಥವಾ ಅಮೆರಿಕಾದ ಮಾದರಿಯದ್ದಲ್ಲ. ಒಂದು ಧರ್ಮವನ್ನು ಅವಹೇಳನ ಮಾಡುವುದು, ನಿರಂತರವಾಗಿ ಅದರ ಮೇಲೆ ವ್ಯಂಗ್ಯ, ಟೀಕೆಗಳನ್ನು ಹರಿಯಬಿಡುವುದು ಇಲ್ಲಿನ ಸೆಕುಲರಿಸಂ ಅಲ್ಲ. ನಮ್ಮ ಭಕ್ತಿ, ಶ್ರದ್ಧೆ, ಗೌರವಗಳನ್ನು ಬಿಡದೆ ಉಳಿದವರ ಭಾವನೆಗಳಿಗೂ ಗೌರವವನ್ನು ಸಲ್ಲಿಸಬೇಕು ಎಂಬುದು ಇಲ್ಲಿನ ಜನರ ಸಾಮಾನ್ಯವಾದ ನಿಲುವು. ಇದು ಈ ನಾಡಿನ ಜನರ ಸಹಿಷ್ಣುತೆಯ ಕ್ರಮ. ಮತ್ತು ಇಂತಹ ವಿಚಾರಗಳಲ್ಲಿ ಧಾರ್ಮಿಕ ಭಾವನೆ, ಸಾಂಸ್ಕೃತಿಕ ವಿಚಾರಗಳು, ರಾಜಕೀಯ ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಭಾನು ಮುಷ್ತಾಕ್ ಅವರು ಇಸ್ಲಾಮಿನಲ್ಲಿ ಶ್ರದ್ಧೆ ಇರುವವರೋ, ವಿಚಾರವಾದಿಯೋ ನನಗೆ ಗೊತ್ತಿಲ್ಲ(ಇಸ್ಲಾಮ್ ಅನ್ನು ಟೀಕಿಸಿ ಕಟ್ಟರ್ ಮುಸ್ಲಿಮರ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು ಎಂದೂ ಓದಿದ ನೆನಪು). ಅದು ಏನೇ ಇದ್ದರೂ ಅವರ ವೈಯಕ್ತಿಕ ವಿಚಾರ. ದಸರಾವು ಧಾರ್ಮಿಕ ಹಬ್ಬವೂ, ನಾಡಹಬ್ಬವೂ ಎರಡೂ ಆಗಿರುವ ಹಬ್ಬ. ಅದರ ಧಾರ್ಮಿಕ ಸ್ವರೂಪವನ್ನು ಕೈಬಿಟ್ಟು ಅದನ್ನೊಂದು ಸೆಕ್ಯುಲರ್ ಆಚರಣೆಯನ್ನಾಗಿಸುವುದು ಸರಿಯಾಗಲಾರದು. ಅದನ್ನು ಉದ್ಘಾಟನೆ ಮಾಡುವವರು ಅದರ ಹಿಂದಿರುವ ನಾಡಿನ ಜನರ ಧಾರ್ಮಿಕ ಭಾವನೆಗಳಿಗೆ ಗೌರವವನ್ನು ಕೊಡಬೇಕಾದ್ದು ಉಚಿತವಾದ ರೀತಿ. ವೈಯಕ್ತಿಕವಾಗಿ ಅವರಿಗೆ ನಂಬಿಕೆಯಿಲ್ಲದಿದ್ದರೆ ತೊಂದರೆಯೇನೂ ಇಲ್ಲ, ಆದರೆ ನಂಬಿ ನಡೆಯುವ ಜನರ ಭಾವನೆಗಳ ಬಗ್ಗೆ ಗೌರವವು ಇರಬೇಕು, ಇದು ಮುಖ್ಯ.
ಕನ್ನಡವನ್ನು ತಾಯಿ ಭುವನೇಶ್ವರಿ ಎಂದದ್ದನ್ನು ಅವರು ಹಿಂದೊಮ್ಮೆ ವಿರೋಧಿಸಿದ್ದು, ತಾಯಿ ಭುವನೇಶ್ವರಿಯ ಅರಿಶಿನ ಕುಂಕುಮದ ಬಗ್ಗೆ ತಿರಸ್ಕಾರವನ್ನು ತೋರುವುದನ್ನು ಕಂಡಾಗ, "ಅದು ತನ್ನಂತಹ ಅಲ್ಪಸಂಖ್ಯಾತರನ್ನು, ಮಹಿಳೆಯರನ್ನು ಹೊರಗಟ್ಟುವ ಹುನ್ನಾರ" ಎಂದದ್ದು ಎಲ್ಲ ಕಂಡಾಗ ಅಲ್ಲಿ ಈ ನಾಡಿನ ರೀತಿ ನೀತಿಗಳನ್ನು ಅರಿಯದ ಸಂಕುಚಿತ ದೃಷ್ಟಿಯೇ ಕಂಡಿತು. "ಕರ್ಣಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ? ಮಂತ್ರ ಕಣಾ ! ಶಕ್ತಿ ಕಣಾ ! ತಾಯಿ ಕಣಾ ! ದೇವಿ ಕಣಾ !" ಎಂಬ ಕುವೆಂಪು ಅವರ ಸಾಲುಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಬಾನು ಅವರು ಯಾವ ಹಿನ್ನೆಲೆಯಲ್ಲಿ, ಯಾವ ಕಾಂಟೆಕ್ಸ್ಟ್ ನಲ್ಲಿ ಆ ಮಾತುಗಳನ್ನು ಹೇಳಿದರೋ ತಿಳಿಯದು(context ತಿಳಿಯದೆ ಮಾತಾಡಬಾರದು ಎನ್ನುವುದೂ ನನಗೆ ಮುಖ್ಯವೇ). ಆದರೆ ನನಗೆ ಅವರ ಮಾತುಗಳು ಅರ್ಥವಾದಷ್ಟು ಮಟ್ಟಿಗೆ ದಸರಾದ ಉದ್ಘಾಟನೆಯನ್ನು ಮಾಡುವವರಿಗೆ ಅಂತಹ ಮನಃಸ್ಥಿತಿ, ಭಾವನೆಗಳು ಇಲ್ಲದಿದ್ದರೆ ಒಳ್ಳೆಯದೇನೋ. ನೀವು ನಂಬದಿದ್ದರೆ ತೊಂದರೆಯಿಲ್ಲ, ನಂಬುವವರ ಬಗ್ಗೆ ಆದರ, ಗೌರವ, ಮರ್ಯಾದೆಗಳಿರಲಿ. ಬಾನು ಅವರು ಹಾಗೆ ನಡೆದುಕೊಂಡು ಜನರ ಭಾವನೆಗಳಿಗೆ ಬೇಸರವಾಗದಂತೆ ನೋಡಿಕೊಳ್ಳಲಿ ಎಂದು ಹಾರೈಸೋಣ.

No comments:

Post a Comment