ಸಪ್ತಸಾಗರದಾಚೆ ಎಲ್ಲೋ ನಮ್ಮನ್ನು ಕೊಂಡೊಯ್ದದ್ದಕ್ಕೆ ನಿರ್ದೇಶಕ ಹೇಮಂತ್ ಎಂ. ರಾವ್ ಅವರಿಗೆ ನಮಸ್ಕಾರ. ಸಿಹಿಯಾದ ದ್ರಾಕ್ಷೆಯನ್ನು ಬಾಯಿಗೆಸೆದಾಗ, ಅದು ಹಲ್ಲುಗಳ ನಡುವೆ ಸಿಕ್ಕಿ, ಅದನ್ನು ನಾವು ಮೆಲ್ಲಗೆ ಕಚ್ಚಿ, ಅದರ ರಸ ಒಸರುವ ಕ್ಷಣದಲ್ಲಿ ಜೇನನ್ನು ನೆಕ್ಕಿದ ಆಮೋದ ಮಿಂಚುತ್ತದಲ್ಲ, ಅದನ್ನು ದೃಶ್ಯ ರೂಪದಲ್ಲಿ ಹಿಡಿಯಲಾಗುವುದಿಲ್ಲ, ಹಾಗೊಂದು ವೇಳೆ ಹಿಡಿದರೆ ಜಿನುಗಬಹುದಾದ ಭಾವದಂತೆ ಈ ಚಿತ್ರವಿದೆ. ಇಡೀ ಚಿತ್ರವನ್ನು "Fragile, Handle with Care" ಎಂಬ ಚೀಟಿ ಅಂಟಿಸಿಕೊಂಡ ಹೂದಾನಿಯನ್ನು ಜಾಗ್ರತೆಯಿಂದ ಹಿಡಿದ ಮಗುವಿನ ಆಸ್ಥೆಯಿಂದ ಹೇಮಂತ್ ಕಟ್ಟಿಕೊಟ್ಟಿದ್ದಾರೆ.
Spoiler Alert: ಒಂದು ಸಲ ಆಡಿದ ಯಾವುದೋ ಮಾತಿಗೆ ವಿಧಿಯು ಇನ್ನೇನೋ ಅರ್ಥವನ್ನು ಉಂಟುಮಾಡುವ ದೃಶ್ಯಗಳೂ ಇಲ್ಲಿವೆ, ಅವು ಒಂದು ರೀತಿಯ Foreshadowing ಇರುವ ದೃಶ್ಯಗಳು. ಉದಾಹರಣೆಗೆ, ಮೊದಲ ದೃಶ್ಯದಲ್ಲಿ ಬಡವನಾದ ನಾಯಕ ಕೋಟಿ ರೂಪಾಯಿಯ ಕಾರನ್ನು ವೇಗವಾಗಿ ಓಡಿಸುವಾಗ, ಇದಕ್ಕೇನಾದರೂ ಆದರೆ ನೀನು ಅದರ ಬೆಲೆ ತೆರುವುದಕ್ಕೆ, ಅಂಥ ಕಾರು ಕೊಲ್ಲುವುದಕ್ಕೆ ನಲುವತ್ತು ವರ್ಷ ಬೇಕಾಗುತ್ತದೆ ಎಂಬ ಮಾತು ಬರುತ್ತದೆ. ಮುಂದೆ ಅದೇ ಕಾರಿನಿಂದ ವೇಗದಿಂದ ಆದ ಎಡವಟ್ಟಿಗೆ ನಾಯಕ ಹತ್ತು ವರ್ಷಗಳ ಶಿಕ್ಷೆಯ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ. ಜೈಲಿನಲ್ಲಿ, ಒಂದು ಪಾತ್ರವು ರಕ್ಷಿತ್ ನ ಪಾತ್ರದ ಹತ್ತಿರ ನೀನೇನು ತಪ್ಪು ಮಾಡಿದ್ದೀಯ ಎಂದು ಕೇಳುತ್ತದೆ, 'ನಾನು ಯಾವ ತಪ್ಪೂ ಮಾಡಿಲ್ಲ' ಎಂದು ಆ ಪಾತ್ರ ವಾದಿಸುತ್ತದೆ, ಎಲ್ಲರೂ ಏನಾದರೂ ತಪ್ಪು ಮಾಡಿಯೇ ಇರುತ್ತಾರೆ ಎಂದು ಉತ್ತರ ಬರುತ್ತದೆ, ಏನೂ ತಪ್ಪು ಮಾಡದೆ ಇಲ್ಲಿಗೆ ಬಂದದ್ದೇ ತಾನು ಮಾಡಿದ ಅತಿದೊಡ್ಡ ತಪ್ಪು ಎಂದು ರಕ್ಷಿತ್ ನ ಪಾತ್ರಕ್ಕೆ ಗೊತ್ತಾಗುವುದು ಆಮೇಲೆಯೇ!
ಪ್ರೇಮಕಥೆಗಳು ಸಾವಿರ ಸಾವಿರ ಬಂದಿರುವುದರಿಂದ ಅದನ್ನು ಕ್ಲೀಷೆಯ ರಾಶಿಯಾಗಿಸದೆ ವಿಭಿನ್ನವಾಗಿಸುವುದು ಕಷ್ಟ. ಇದರಿಂದ ತಪ್ಪಿಸಿಕೊಳ್ಳಲು ಮಾಡಬಹುದಾದ ಒಂದು ಉಪಾಯವೆಂದರೆ ಕಥೆಯನ್ನು ಯಾವುದಾದರೂ ದೊಡ್ಡ ಘಟನೆಯ ಕ್ಯಾನ್ವಾಸಿಯ ಹಿನ್ನೆಲೆಯಲ್ಲಿ ಚಿತ್ರಿಸುವುದು. ಟೈಟಾನಿಕ್ಕಿನ ಭವ್ಯತೆ, ಅದು ಮುಳುಗುವ ದುರಂತದ ಹಿನ್ನೆಲೆಯಿಟ್ಟುಕೊಂಡು ಜೇಮ್ಸ್ ಕ್ಯಾಮೆರೋನ್ ಪ್ರೇಮಕಥೆಯನ್ನು ಹೇಳಿದ, ಮುತ್ತಿನಹಾರದಲ್ಲಿ ಸೈನ್ಯದ, ಯುದ್ಧದ ಹಿನ್ನೆಲೆಯಲ್ಲಿ ಪ್ರೇಮಿಗಳು ಇರುತ್ತಾರೆ, Casablanca ದಲ್ಲಿ ಮಹಾಯುದ್ಧ, ನಾಟ್ಜಿಗಳು ಈ ಹಿನ್ನೆಲೆಯಲ್ಲಿ ಪ್ರೇಮಿಗಳ ಕಥನ ಬಿಚ್ಚಿಕೊಳ್ಳುತ್ತದೆ, Mao's Last Dancerನಲ್ಲಿ ದೇಶಗಳ ಗಡಿಗಳು, ವೀಸಾ ಇವೆಲ್ಲ ಪ್ರೇಮಿಗಳನ್ನು ಬಾಧಿಸುತ್ತವೆ, Raanjhanaaದಲ್ಲಿ ಒಂದು ಕೊಲೆಯ ಪಾಪಪ್ರಜ್ಞೆಯ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ, ಹೀಗೆ. ಇಲ್ಲಿ ಒಂದು ಅಪರಾಧ ಮತ್ತು ಕಾರಾಗ್ರಹವನ್ನಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಅಡಿಗರು ಹೇಳಿದಂತೆ ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ ಪ್ರೇಮಿಗಳಿಗೆ ನಾಟಿದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಇಂಥ ಕಥೆಗೆ ಬೇಕಾಗುವ ಸಾವಧಾನ, ಸೂಕ್ಷ್ಮಗಳನ್ನು ಹಿಡಿಯುವ ಕವಿಮನಸ್ಸು ನಿರ್ದೇಶಕರಿಗೆ ಸಿದ್ದಿಸಿದೆ.
ಮುಟ್ಟಿದರೆ ಮುದುಡಿ ಹೋಗಬಹುದಾದ ಹೂವಿನಂಥ ಭಾವಗಳನ್ನು ದೃಶ್ಯಮಾಧ್ಯಮದಲ್ಲಿ ನಿಭಾಯಿಸುವುದು ಕಷ್ಟ, ಅದೇನಿದ್ದರೂ ಭಾವಗೀತಗಳಲ್ಲಿ ಆಗಬಹುದಾದ ಕೆಲಸ ಎನ್ನುವವರು ಈ ಚಿತ್ರವನ್ನು ನೋಡಬೇಕು. ಇಡೀ ಚಿತ್ರವು ಪರಿಮಳಿಸುವುದು ಪುಟ್ಟ ಪುಟ್ಟ ಕ್ಷಣಗಳಿಂದ, ಭಾವ ಬಿಂದುಗಳಿಂದ. ಹನಿ ಹನಿ ಕೂಡಿ ಹಳ್ಳ ಆಗುವ ಬದಲು ಇಂಥ ಹನಿಗಳು ನೋಡುವವನ ಕಣ್ಣಿಂದ ಇಳಿದು ಬಂದರೆ ಅದು ನಿರ್ದೇಶಕನ ಶಕ್ತಿ. 'ನಿನ್ನ ಪ್ರೀತಿಗೆ, ಅದರ ರೀತಿಗೆ, ಕಣ್ಣ ಹನಿಗಳೆ ಕಾಣಿಕೆ' ಎಂಬ ಕವಿವಾಣಿಯನ್ನು ಸಾಧ್ಯವಾಗಿಸುವ ಹಲವಷ್ಟು ಕ್ಷಣಗಳನ್ನು, ದೃಶ್ಯಗಳನ್ನು ಚಿತ್ರದಲ್ಲಿ ಬಚ್ಚಿಡಲಾಗಿದೆ. ಇದರಲ್ಲಿ ನಟರ, ಹಿನ್ನೆಲೆ ಸಂಗೀತದ ಪಾತ್ರವೂ ಹಿರಿದು. ಒಂದು ಟೇಪ್ ರೆಕಾರ್ಡರು, ಜೈಲಿನ ಸಂದರ್ಶಕರ ಕೊಠಡಿಯಂಥ ಜಾಗಗಳು ಅಳು ಒತ್ತರಿಸಿ ಬರುವಂತೆ ಮಾಡಬಲ್ಲವು ಎಂದು ಯಾರಿಗೆ ಗೊತ್ತಿತ್ತು? ಅಂಥ ಮಾಯಗಾರಿಕೆ ಇಲ್ಲಿ ಸಾಧ್ಯವಾಗಿದೆ, ಅದು ಬರೆವಣಿಗೆಯ, ಕಥೆಗಾರನ ತಾಕತ್ತು. ಅರ್ಧ ನಿಮಿಷ ಮೊಬೈಲು ನೋಡಿದರೆ ಭಾವದ ತೇರಿನಿಂದ ಕೆಳ ಜಾರಿಯೇವು ಎಂದೆನ್ನಿಸಿ ತೆರೆಯ ಮೇಲೆ ಕಣ್ಣು ನೆಟ್ಟು ಕೂರುವಂತೆ ಮಾಡುವಲ್ಲಿ ಚಿತ್ರ ಯಶಸ್ವಿಯಾಗಿದೆ.
ಹೊರಗೆ ಬಂದಾದ ಮೇಲೆಯೂ ಕಣ್ಣ ತೇವ ಆರದೆ, ಹೃದಯದ ಭಾರ ಇಳಿಯದೆ, ಮಾಯದ ಗಾಯದಂತೆ ಚಿತ್ರ ಕಾಡಿದರೆ ಅದಕ್ಕೆ ಇಡೀ ಚಿತ್ರತಂಡಕ್ಕೆ ವಂದನೆಗಳನ್ನು ಹೇಳಬೇಕು. A ಬುದ್ದಿವಂತರಿಗೆ ಮಾತ್ರ, ಇದು ಭಾವಜೀವಿಗಳಿಗೆ ಮಾತ್ರ.
No comments:
Post a Comment