Wednesday, 17 September 2025

Inspirational story of book lovers

ಎಲ್ಲ ಸ್ಪೂರ್ತಿದಾಯಕವಾದ ಕಥೆಗಳೂ ಪುಸ್ತಕಗಳಲ್ಲೇ ಸಿಗುವುದಲ್ಲ, ಕೆಲವು ಪುಸ್ತಕದಂಗಡಿಗಳಲ್ಲಿಯೂ ಸಿಗುತ್ತವೆ. ಅಂತಹದೊಂದು ಕಥೆಯಿದು. ಅಮೆರಿಕಾದ ಮಿಷಿಗನ್ನಿನಲ್ಲಿ Chelsea ಎಂಬುದೊಂದು ಪುಟ್ಟ ಊರಿದೆ(ಇದು ಫುಟ್ಬಾಲ್ ಕ್ಲಬ್ ಒಂದರ ಹೆಸರಿನಿಂದ ಪ್ರಸಿದ್ಧವಾದ Chelseaಯಲ್ಲ, ಅದಿರುವುದು ಇಂಗ್ಲೆಂಡ್‌ನಲ್ಲಿ). ಅಲ್ಲಿ ಮಿಷೆಲ್ ಟುಪ್ಲಿನ್ ಎಂಬಾಕೆ ಸೆರೆಂಡಿಪಿಟಿ ಬುಕ್ಸ್ ಎಂಬ ಪುಸ್ತಕದಂಗಡಿಯನ್ನು ಇಪ್ಪತ್ತೈದು ವರ್ಷಗಳಿಂದ ನಡೆಸುತ್ತ ಬಂದಿದ್ದಳು. ಈಚೆಗೆ ಈ ಅಂಗಡಿಯಲ್ಲಿ ಜಾಗವು ಸಾಕಾಗುತ್ತಿಲ್ಲ ಎನ್ನಿಸಿ, ಹತ್ತಿರದಲ್ಲೇ ಇರುವ ಇನ್ನೊಂದು ಸ್ಥಳಕ್ಕೆ ಅಂಗಡಿಯನ್ನು ಸ್ಥಳಾಂತರ ಮಾಡುವ ಯೋಚನೆಯನ್ನವಳು ಮಾಡಿದಳು. ಹೊಸಜಾಗವು 105 ಮೀಟರ್ ದೂರದಲ್ಲಿತ್ತು, ಅದು ನೇರವಾದ ಹಾದಿಯಾಗಿರಲಿಲ್ಲ, ಒಂದೆರಡು ತಿರುವುಗಳಿದ್ದವು, ಅವಳ ಸಂಗ್ರಹದಲ್ಲಿ 9,100 ಪುಸ್ತಕಗಳಿದ್ದವು. ಸರಿಯಪ್ಪಾ, ಇದರಲ್ಲೇನು ವಿಶೇಷವಿದೆ ಎಂದಿರಾ, ನಿಲ್ಲಿ ಅಲ್ಲಿಗೇ ಬಂದೆ.

ಹೀಗೆ ಮಾಡಲಿಕ್ಕೆ ಸಾಮಾನುಗಳನ್ನು ಸಾಗಿಸುವ ಸಂಸ್ಥೆಗಳ ಬಳಿ ಹೋಗುವ ಬದಲು ಆಕೆ ತನಗೆ ಸಹಾಯವು ಬೇಕಾಗಿದೆಯೆಂದು ಓದುಗರನ್ನೇ ಕೇಳಿದಳು. ಅವರು ಬಂದಾರೆಂದು ನಂಬಿದಳು. ಮೊದಮೊದಲು ಬರುತ್ತೇವೆಂದು ಹೇಳಿದವರು ಬರದಿದ್ದಾಗ ಸ್ವಲ್ಪ ಚಿಂತೆಯಾಯಿತು. ಆದರೆ ಏನಾಶ್ಚರ್ಯ ಎಂಬಂತೆ ಅರ್ಧ ಗಂಟೆಯಲ್ಲಿ ಚಿತ್ರಣವೇ ಬದಲಾಯಿತು. ಒಬ್ಬರು ಬಂದರು, ಇಬ್ಬರು ಬಂದರು, ಎರಡು ಹತ್ತಾಯಿತು, ಹತ್ತು ಐವತ್ತಾಯಿತು. ನೋಡನೋಡುತ್ತಿದ್ದಂತೆ ಮೂರುನೂರು ಜನರು ಅಲ್ಲಿ ಜಮಾಯಿಸಿದರು. ಎಲ್ಲರೂ ಸೇರಿ ಒಂದು ಮಾನವಸರಪಣಿಯನ್ನೇ ರೂಪಿಸಿಬಿಟ್ಟರು. ಪಾದಚಾರಿಗಳ ಹಾದಿಯಲ್ಲಿ(sidewalk) ಎಲ್ಲರೂ ನಿಲ್ಲಲಿಕ್ಕೆ ಜಾಗವು ಸಾಕಾಗದೆ ಎರಡೆರಡು ಸಾಲುಗಳನ್ನು ಮಾಡಬೇಕಾಗಿ ಬಂತು! ಕಿರಿಯರು, ಹಿರಿಯರು, ಮಧ್ಯವಯಸ್ಕರು ಎಲ್ಲರೂ ಬಂದಿದ್ದರು, ಒಂದಿಬ್ಬರು ವೀಲ್ ಚಯರಿನಲ್ಲಿ ಕುಳಿತೂ ಬಂದಿದ್ದರು. ಬಂದವರು ನಗುತ್ತ, ಹರಟುತ್ತ, ಹಾಡುತ್ತ, ಕುಣಿಯುತ್ತ ಕೈಯಿಂದ ಕೈಗೆ ಪುಸ್ತಕಗಳನ್ನು ಕೊಟ್ಟುಕೊಟ್ಟು ಅಷ್ಟೂ ಪುಸ್ತಕಗಳನ್ನು ಹೊಸಜಾಗಕ್ಕೆ ಸಾಗಿಸಿಯೇ ಬಿಟ್ಟರು.
ಮನೆಯನ್ನು ಸಾಗಿಸಿದಾಗ ನನಗೆ ಬರುವ ಸಮಸ್ಯೆಯೆಂದರೆ ಹೊಸಮನೆಯಲ್ಲಿ ಪುಸ್ತಕವನ್ನು ಮತ್ತೆ ಒಪ್ಪವಾಗಿ, ಯಾವುದು ಎಲ್ಲಿರಬೇಕೋ ಅಲ್ಲೇ ಜೋಡಿಸುವ ಶ್ರಮ; ಅದಕ್ಕೇ ಒಂದು ದಿನ ಬೇಕಾಗುತ್ತದೆ. ಆದರಿಲ್ಲಿ 9,100 ಪುಸ್ತಕಗಳೂ ಒಂದೊಂದಾಗಿ FIFO(First-In, First-Out) ಮಾದರಿಯಲ್ಲಿ ಸಾಗಿಸಲ್ಪಟ್ಟ ಕಾರಣ ಗಮ್ಯವನ್ನು ಮುಟ್ಟಿದಾಗ ಮೊದಲು ಹೇಗೆ ಜೋಡಿಸಲ್ಪಟ್ಟಿದ್ದವೋ ಹಾಗೆಯೇ ಸಾಲಾಗಿ, ವಿಷಯಾನುಸಾರವಾಗಿ, ಅಕಾರಾದಿಯಲ್ಲಿ ಜೋಡಿಸಿ ಇಡಲ್ಪಟ್ಟವು. ಹೀಗೆ ಸಾಗಿಸುವಾಗ ಕೆಲವರು ತಾವಿನ್ನೂ ಓದಿರದ, ಓದಬೇಕಾದ ಪುಸ್ತಕಗಳನ್ನೂ ಗುರುತಿಸಿಟ್ಟುಕೊಂಡರಂತೆ. ಈ ಅಪೂರ್ವವಾದ ಘಟನೆಯು ಆನಂದದಾಯಕವಾದ ಪುಸ್ತಕಪ್ರೀತಿಯ ಪ್ರದರ್ಶನವಾಗಿ ಗಮನಸೆಳೆದದ್ದು ಮಾತ್ರವಲ್ಲದೆ, ನಮ್ಮಲ್ಲಿ ಇನ್ನೂ ಒಂದಷ್ಟು ಒಳ್ಳೆಯತನವಿದೆ ಎಂಬುದನ್ನೂ ತೋರಿಸಿಕೊಟ್ಟಿತು.


No comments:

Post a Comment