Wednesday, 17 September 2025

ಪಿ.ವಿ. ನಾರಾಯಣ ನಿಧನ

 ಬಿ.ಎಂ.ಶ್ರೀ. ಪ್ರತಿಷ್ಠಾನದವರು ಹಳಗನ್ನಡ ರಸಗ್ರಹಣ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದು ಕೇಳಿದ್ದೆ. ಆಫೀಸಿನ ಒತ್ತಡದಿಂದ ಹೋಗಲಾಗಿರಲಿಲ್ಲ. ಒಂದು ವರ್ಷ ಆ ತರಗತಿಗಳನ್ನು ರೆಕಾರ್ಡ್ ಮಾಡಿದ್ದಾರೆ ಎಂದು ತಿಳಿದು, ಅದನ್ನು ಕೇಳಲಿಕ್ಕೆ ಬಿ.ಎಂ.ಶ್ರೀ. ಪ್ರತಿಷ್ಠಾನಕ್ಕೆ ಹೋಗಿದ್ದೆ. ಅಲ್ಲಿದ್ದ ಆಫೀಸಿನವರು ಕೊಡಲು ಕಷ್ಟ ಎಂದೇನೋ ಹೇಳಹೊರಟರು, ಆಗ ಅಲ್ಲಿದ್ದ ಪಿ.ವಿ. ನಾರಾಯಣ ಅವರು ನನ್ನನ್ನು ನೋಡಿ, ನನ್ನ ಆಸಕ್ತಿಯನ್ನು ತಿಳಿದು, "ಕೂಡಲೇ ಇವರಿಗೆ ರೆಕಾರ್ಡಿಂಗ್ ಅನ್ನು ಹಾಕಿ ಕೊಟ್ಟುಬಿಡಿ, ಪಾಪ ಅದಕ್ಕೋಸ್ಕರ ಬಂದಿದ್ದಾರೆ" ಎಂದುಬಿಟ್ಟರು.

ಅನಂತರ ಅಲ್ಲಿ ಕೂತು ಅವರೊಂದಿಗೆ ಮಾತಾಡಿದೆ. ಆ ವರ್ಷದ ತರಗತಿಯ ಸಿಲಬಸ್ ಅನ್ನು ಅವರೇ ರೂಪಿಸಿದ್ದರು. ಅದರಲ್ಲಿ ಪಂಪ, ರಾಘವಾಂಕರ ಕೃತಿಗಳು, ಪಂಚತಂತ್ರ, ಕುಮಾರವ್ಯಾಸ ಭಾರತ ಎಲ್ಲವೂ ಇತ್ತು. ಅವುಗಳೊಂದಿಗೆ ಇತಿಹಾಸವನ್ನು ತಿಳಿಯಲು ಬೇಕಾದ ಆಕರ ಸಾಮಗ್ರಿಗಳು, ಹಸ್ತಪ್ರತಿಕಾರರು, ಲಿಪಿಕಾರರ ಪರಿಚಯ ಇಂಥ ವಿಷಯಗಳ ಬಗ್ಗೆ ಲಲಿತಾಂಬ ಅವರ ಉಪನ್ಯಾಸಗಳೂ ಇದ್ದವು. ಕೇಶಿರಾಜನ ಶಬ್ದಮಣಿದರ್ಪಣದ ಪರಿಚಯವೂ ಇತ್ತು. ದೇವರಕೊಂಡಾ ರೆಡ್ಡಿ ಅವರಿಂದ ಶಾಸನಗಳ ಪರಿಚಯವೂ ಇತ್ತು. ಅಶ್ವತ್ಥನಾರಾಯಣ ಅವರು ಪ್ರಾಕೃತದ ಪರಿಚಯವನ್ನೂ ಮಾಡಿದ್ದರು. ಮುರಳೀಧರ ಅವರು ಕಾವ್ಯಮೀಮಾಂಸೆಯ ಪಾಠವನ್ನು ಮಾಡಿದ್ದರು. ಹೀಗೆ ಹಳಗನ್ನಡದ ಕೃತಿಗಳನ್ನು ಸರಿಯಾಗಿ ತಿಳಿಯಬೇಕಾದರೆ ಅದಕ್ಕೆ ಪೂರಕವಾಗಿ ಕಾವ್ಯಮೀಮಾಂಸೆ, ವ್ಯಾಕರಣ, ಶಾಸನಗಳ ಅಧ್ಯಯನ, ಸಂಸ್ಕೃತ ಮತ್ತು ಪ್ರಾಕೃತಗಳ ಪರಿಚಯ ಎಲ್ಲವೂ ಬೇಕು ಎಂಬುದು ಅವರ ನಿಲುವಾಗಿತ್ತು(ಸಂಸ್ಕೃತ ಮತ್ತು ಪ್ರಾಕೃತಗಳ ಪರಿಚಯ ಯಾಕೆ ಬೇಕು ಎಂದು ಹೇಳಹೊರಟರೆ ಅದೊಂದು ಬೇರೆಯೇ ಲೇಖನವಾಗುತ್ತದೆ). ಇದು ನನಗೂ ಇಷ್ಟವಾದ ನಿಲುವು.
"ನನ್ನ ಎಲ್ಲ ಕೃತಿಗಳನ್ನೂ ಜನರಿಗೆ ಸಿಗಲಿ ಎಂದು ಇಂಟರ್ನೆಟ್ಟಿನಲ್ಲಿ ಹಾಕಿದ್ದೇನೆ" ಎಂದಿದ್ದರು. 'ಪದಚರಿತೆ' ಎಂಬ ಹೆಸರಿನಲ್ಲಿ ಪದವ್ಯುತ್ಪತ್ತಿಯ ಜಿಜ್ಞಾಸೆಯನ್ನು ಮಾಡಿದ ಲೇಖನಗಳನ್ನು ಅವರ ಬ್ಲಾಗಿನಲ್ಲಿ ಹಾಕಿಕೊಂಡಿದ್ದರು. ವಚನಗಳ ಬಗ್ಗೆ ಸಾಕಷ್ಟು ಕೆಲಸವನ್ನು ಮಾಡಿದ್ದರು. ಬಿ.ಎಂ.ಶ್ರೀ, ಎಂವೀ ಸೀತಾರಾಮಯ್ಯ, ರಾಜರತ್ನಂ ಮುಂತಾದವರ ಬಗ್ಗೆ ಉತ್ಸಾಹದಿಂದ ಮಾತಾಡಿದರು. 'ರಾಜರತ್ನಂ ಅವರ ಕಂಚಿನ ಕಂಠದ ಉಪನ್ಯಾಸಗಳು ಕೆಲವು ರೆಕಾರ್ಡ್ ಆಗಿ ಆಕಾಶವಾಣಿಯ ಆರ್ಕೈವ್ ನಲ್ಲಿ ಇವೆ, ಅವನ್ನು ಯಾರಾದರೂ ತೆಗೆಸಿ ಯುಟ್ಯೂಬಿನಲ್ಲಿ ಹಾಕಬೇಕು ಎಂದರು'. ಸುದ್ದಿಯನ್ನು ನೋಡಿದಾಗ ಎಲ್ಲ ನೆನಪಾಯಿತು. ಹಳಗನ್ನಡ, ಲಿಪಿಶಾಸ್ತ್ರಗಳ ಅಧ್ಯಯನದ ಇನ್ನೊಂದು ಕೊಂಡಿಯು ಕಳಚಿ ಹೋಯಿತು. ವಿದ್ವತ್ತೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕೆಲವೇ ಜನರಲ್ಲಿ ಒಬ್ಬರಾಗಿದ್ದ ನಾರಾಯಣ ಅವರಿಗೆ ನಮನಗಳು.

No comments:

Post a Comment