ನಿನ್ನೆ ರಾತ್ರಿ ಹತ್ತು ಗಂಟೆಗೆ 'ಸು ಫ್ರಂ ಸೋ' ಎಂಬ ವಿಚಿತ್ರ ಹೆಸರಿನ ಸಿನೆಮಾವನ್ನು ನೋಡಿದ್ದಾಯಿತು. 'ಭಯಂಕರ ಸ್ಟಾರ್ ಗಳು ಅಂತ ಯಾರೂ ಇಲ್ಲದಿದ್ದರೆ ಕನ್ನಡ ಸಿನೆಮಾ ನೋಡುವುದಕ್ಕೆ ಯಾರೂ ಬರುವುದಿಲ್ಲ' ಎಂಬ ನಂಬಿಕೆಯ ತಲೆ ಮೇಲೆ ಹೊಡೆದಂತೆ ಜನ ಬಂದಿದ್ದರು.
ಚಿತ್ರವನ್ನು ನೋಡಿಯಾದ ಮೇಲೆ, ಚಿತ್ರದ ನಿರ್ದೇಶಕ ಜೆ.ಪಿ. ತುಮಿನಾಡ್ ಅವರು ಮನಸ್ಸಿನಲ್ಲೇ ಪ್ರೇಕ್ಷಕರ ಜೊತೆಗೆ ನಡೆಸಿರಬಹುದಾದ ಸಂಭಾಷಣೆಯೊಂದನ್ನು ಕಲ್ಪಿಸಿಕೊಂಡೆ:
ಜೆ.ಪಿ. : ಚಿತ್ರಕ್ಕೆ ಬರುವಾಗ ಮೊಬೈಲು ಫೋನುಗಳನ್ನು ತರಬೇಡಿ
ಪ್ರೇಕ್ಷಕ: ಯಾಕೆ ತರಬಾರದು? ಮೊಬೈಲು ನಮ್ಮ ಹಕ್ಕು
ಜೆ.ಪಿ. : ಅಯ್ಯೋ, ಹಾಗೆ ಹೇಳಿದ್ದಲ್ಲ ಮಾರಾಯರೆ, ಮೊಬೈಲಿದ್ದರೆ ಚಿತ್ತ ಚಂಚಲವಾಗುತ್ತದೆ, ದೊಡ್ಡ ಪರದೆಯ ಬದಲಿಗೆ ಅದರ ಕಿರುತೆರೆಯ ಕಡೆಗೇ ಗಮನ ಹೋಗುತ್ತದೆ, ಸುಮ್ಮನೆ Distraction ಆಗುತ್ತದೆ ಅಂತ ನಾನು ಹೇಳಿದ್ದಷ್ಟೇ.
ಪ್ರೇಕ್ಷಕ: ಆದದ್ದಾಗಲಿ, ನಾವು ಮೊಬೈಲು ತಂದೇ ತರುತ್ತೇವೆ
ಜೆ.ಪಿ. : ಚಾಲೆಂಜ್ accepted. ನೀವು ಅದು ಹೇಗೆ ಮೊಬೈಲು ನೋಡುತ್ತೀರೋ ನಾನೂ ನೋಡಿಯೇ ಬಿಡುತ್ತೇನೆ.
ಹೌದು, ಚಿತ್ರವು ಒಂದಾದ ಮೇಲೆ ಒಂದು ನಗೆಪಟಾಕಿಗಳನ್ನು ಅದೆಷ್ಟು ವೇಗದಲ್ಲಿ ಎಸೆಯುತ್ತದೆ ಎಂದರೆ, ಪ್ರೇಕ್ಷಕನಿಗೆ ಮೊಬೈಲನ್ನು ನಲುವತ್ತೆರಡು ಸೆಕೆಂಡುಗಳಷ್ಟು ಕಾಲ ನೋಡಿದರೂ ಕನಿಷ್ಠ ಎರಡೂವರೆ ಜೋಕುಗಳಾದರೂ ಸಿಗದೇ ತಪ್ಪಿ ಹೋಗುತ್ತವೆ; ಇಲ್ಲೊಂದು ಪಾತ್ರದ ಮಂಗಾಟಕ್ಕೆ ನಕ್ಕು ಮುಗಿಸುವಾಗ, ಅಲ್ಲೊಂದು ಪಂಚ್ ಡಯಲಾಗ್, ಅದನ್ನು ಅರಗಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಪಾತ್ರದ್ದು ಇನ್ನೇನೋ ಒಂದು ನಗೆಯುಕ್ಕಿಸುವ ಮುಖಭಾವ—ಹೀಗೆ ಸಾಗುತ್ತದೆ.
ಒಂದೊಂದು ಪಾತ್ರವನ್ನೂ, ಅದರ ಹಾವಭಾವವನ್ನೂ ಅಷ್ಟು ಚೆನ್ನಾಗಿ ಕಟ್ಟಲಾಗಿದೆ. ಹಾಸ್ಯಪ್ರಧಾನವಾದ ತುಳು ರಂಗಭೂಮಿಯ ಪ್ರಭಾವವೂ ಈ ಚಿತ್ರದ ಮೇಲೆ ದಟ್ಟವಾಗಿಯೇ ಆಗಿದೆ; ನಿರ್ದೇಶಕರು, ಕಲಾವಿದರು ಎಲ್ಲ ತುಳು ನಾಟಕಗಳಲ್ಲಿಕೆಲಸ ಮಾಡಿದವರೇ. ದಕ್ಷಿಣ ಕನ್ನಡದಲ್ಲಿ ಕಳೆದ ಇಪ್ಪತ್ತು ಮುವತ್ತು ವರ್ಷಗಳಲ್ಲಿ ತುಳು ನಾಟಕಗಳು, ಅವುಗಳ ಹಾಸ್ಯದಿಂದ ಯಾವ ಮಟ್ಟಿಗಿನ ಜನಪ್ರಿಯತೆಯನ್ನು ಸಾಧಿಸಿವೆ ಎಂದರೆ ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಆನಂದ ಬೋಳಾರ್ ಮುಂತಾದ ರಂಗಭೂಮಿ ಕಲಾವರಿಗೆ ಸಿನೆಮಾ ನಟರಷ್ಟೇ ತಾರಾಮೌಲ್ಯವಿದೆ. ಇವರೆಲ್ಲ ಸುಮ್ಮನೆ, "ಇವತ್ತು ಬೆಳಗ್ಗೆ ಒಂದು ತಟ್ಟೆ ಅವಲಕ್ಕಿಯನ್ನು ಕಲಸಿ ತಿಂದೆ" ಎಂದು ತುಳುವಿನಲ್ಲಿ ಹೇಳಿದರೂ ಜನರು ನಗುತ್ತಾರೆ ಎನ್ನುವಷ್ಟು ಇವರ ಹಾಸ್ಯಪ್ರಜ್ಞೆ ಮತ್ತು ನಟನೆ ಜನರಿಗೆ ಹತ್ತಿರವಾಗಿವೆ. ನನಗೆ ಹರುಕು ಮುರುಕು ತುಳುವಷ್ಟೇ ಮಾತಾಡಲು ಬರುವುದಾದರೂ ಅದು ಚೆನ್ನಾಗಿ ಅರ್ಥವಾಗುತ್ತದೆ. ಮತ್ತು ತುಳುವಿನ ಈ ಆಪ್ತವಾಗುವ, ಹಾಸ್ಯಕ್ಕೆ ಒದಗಿಬರುವ ಗುಣದಿಂದಾಗಿ ಅದು ನನಗೆ ಕನ್ನಡದಂತೆ ಮನಸ್ಸಿಗೆ ಹತ್ತಿರವಾದ ಭಾಷೆಯೇ.
ನಾವು ನಮ್ಮ ಊರುಗಳಲ್ಲಿ, ಹಳ್ಳಿಗಳಲ್ಲಿ ದಿನನಿತ್ಯ ನೋಡುವ ಪಾತ್ರಗಳನ್ನೇ ಈ ನಾಟಕಗಳು ಬಳಸಿಕೊಳ್ಳುವುದು. ನಾವು ನೋಡಿದ ಪಾತ್ರಗಳಲ್ಲೇ ಇರುವ ಒಳ್ಳೆಯತನ, ಸಣ್ಣತನ, ಹೃದಯವಂತಿಕೆ, ದೌರ್ಬಲ್ಯ, ಮಂಗಬುದ್ಧಿ ಇವೆಲ್ಲವನ್ನೇ ಒಂದಿಷ್ಟು ಉತ್ಪ್ರೇಕ್ಷೆಯೊಂದಿಗೆ ತೋರಿಸುವುದು ಇವುಗಳ ಹೆಚ್ಚುಗಾರಿಕೆ. ದಿನನಿತ್ಯದ ಘಟನೆಗಳನ್ನೇ ಹಾಸ್ಯಕ್ಕೆ ಬೇಕಾದಂತೆ ಉತ್ಪ್ರೇಕ್ಷೆ ಮಾಡುವುದು ಇವರಿಗೆ ಕರಗತವಾಗಿರುವ ಒಂದು ಅಸಾಧಾರಣವಾದ ಕಲೆ. ತುಳುವಿನ ಈ ಹಾಸ್ಯದ ಪ್ರಯೋಜನವು ಕನ್ನಡ ಚಿತ್ರರಂಗಕ್ಕೆ ಆಗಲಾರದೇ ಎಂದು ನಾನು ಯೋಚಿಸಿದ್ದಿತ್ತು. ಅದೀಗ ಅಷ್ಟಿಷ್ಟು ಆಗುತ್ತಿದೆ. ಈ ನಿಟ್ಟಿನಲ್ಲಿ ಈ ಚಿತ್ರವೂ ಯಶಸ್ವಿಯಾಗಿದೆ. 'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ' ರಿಷಬ್ ಶೆಟ್ಟಿಯವರ 'ಸರ್ಕಾರಿ ಹಿರಿಯ ಪ್ರಾ.ಶಾಲೆ, ಕಾಸರಗೋಡು', ಮುಂತಾದ ಚಿತ್ರಗಳೂ ಈ ತಂತ್ರವನ್ನು ಬಳಸಿಕೊಂಡಿದ್ದವು, ಅವುಗಳ ಸುಮಾರ್ಗದಲ್ಲಿದು ಕ್ರಮಿಸಿದೆ.
ಸ್ಟಾರುಗಳು ಇಲ್ಲ ಎಂದೆನಲ್ಲ, ಅದು ಒಂದು ರೀತಿಯಲ್ಲಿ ಸರಿಯಲ್ಲ, ಯಾಕೆಂದರೆ ಈ ಸಿನೆಮಾದಲ್ಲಿ ಎಲ್ಲರೂ ಸ್ಟಾರುಗಳೇ; ಪ್ರತಿಯೊಂದು ಪಾತ್ರವೂ ಮುಖ್ಯವೇ, ಅಥವಾ ಯಾರೂ ಅಮುಖ್ಯರಲ್ಲ; ಎಲ್ಲರೂ ತಮಗೆ ಸಿಕ್ಕಿದ ಅವಕಾಶದಲ್ಲಿ ಮಿಂಚುತ್ತಾರೆ. ಈ ಅರ್ಥದಲ್ಲಿ ಇದು ಆರು ಹೀರೋಗಳನ್ನು ಹಾಕಿ ಮಾಡುವುದಕ್ಕಿಂತ ದೊಡ್ಡದಾದ, ಸಣ್ಣ ಬಜೆಟ್ಟಿನ ಅತಿದೊಡ್ಡ ಮಲ್ಟಿ ಸ್ಟಾರರ್ ಸಿನೆಮಾ. ನಿರ್ದೇಶಕರು, ಕಲಾವಿದರು, ಬರೆದವರೆಲ್ಲ ಇದನ್ನು ಸಾಧಿಸಲು ಪಟ್ಟಿರಬಹುದಾದ ಶ್ರಮವು ಸಫಲವಾಗಿದೆ. ರಂಗಭೂಮಿಯ ಕಲಾವಿದರು ಪೋಷಕಪಾತ್ರಗಳನ್ನು ಎಷ್ಟು ಸೊಗಸಾಗಿ ನಿಭಾಯಿಸಬಲ್ಲರು ಎಂಬುದಕ್ಕೂ ಇಲ್ಲಿ ಸಾಕಷ್ಟು ನಿದರ್ಶನಗಳಿವೆ. ಶನಿಲ್ ಗೌತಮ್, ಜೆ.ಪಿ. ತುಮಿನಾಡ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರಕೆರೆ ಇಷ್ಟು ಹೆಸರುಗಳು ನೆನಪಾಗುತ್ತವಾದರೂ ಉಳಿದವರಲ್ಲಿ ಯಾರೂ ಕಡಮೆಯಿಲ್ಲ, ಎಲ್ಲರೂ ಒಬ್ಬರನ್ನು ಒಬ್ಬರು ಮೀರಿಸುತ್ತಾರೆ. ಹಾಸ್ಯಚಿತ್ರಗಳಲ್ಲಿ ಹಿನ್ನೆಲೆ ಸಂಗೀತವು ಟೊಂಯ್ ಎಂದು ಹಾಸ್ಯಾಸ್ಪದವಾಗಿ ಕುಯ್ಯುವ ರೀತಿಯಲ್ಲಿರದೆ ವಿಶಿಷ್ಟವಾಗಿದೆ. MTV style of editing ಏನೋ ಎಂಬಂತೆ ಸರಸರನೆ ದೃಶ್ಯಗಳು, ಪಾತ್ರಗಳು, ಫೋಕಸ್ ಎಲ್ಲ ಬದಲಾಗುತ್ತವೆ. ಈ ಚಿತ್ರವನ್ನು ಜನರಿಗೆ ಮುಟ್ಟಿಸುತ್ತಿರುವ ರಾಜ್ ಬಿ ಶೆಟ್ಟಿಯವರಿಗೆ ಚಪ್ಪಾಳೆ.
ಈ ವಾರಾಂತ್ಯದಲ್ಲಿ, ಮಲ್ಟಿಪ್ಲೆಕ್ಸುಗಳು, 'ಸೀಟು ಖಾಲಿಯಾಗಿದೆ' ಎನ್ನುವ ಬದಲು 'ಟಿಕೆಟ್ ಖಾಲಿಯಾಗಿದೆ' ಎಂದುಸುರಿ ಧನ್ಯರಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಥಿಯೇಟರಿನಲ್ಲಿ ಜನರು ಮತ್ತೆ ಮತ್ತೆ ನಕ್ಕ ಪರಿ, cheer ಮಾಡಿದ ರೀತಿಯನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಎಲ್ಲ ಥಿಯೇಟರ್ ಗಳ ಮುಂದೆಯೂ ಜನಸಾಗರವು ಜಮೆಯಾಗಲಿದೆ ಎಂದನಿಸಿತು. ಮಹಾಸಾಗರ, ಹಿಂದೂ ಮಹಾಸಾಗರ, ಮುಂದೂ ಮಹಾಸಾಗರವೇ ನೆರೆಯಲಿದೆ ಎಂದು ಅನಿಸುತ್ತಿದೆ. ಚಿತ್ರತಂಡಕ್ಕೆ ಶುಭವಾಗಲಿ. ಜೆ.ಪಿ. ತುಮಿನಾಡ್ ಅವರೇ, ಕನ್ನಡ ಚಿತ್ರರಂಗಕ್ಕೆ ಹೀಗೆ ಬನ್ನಿ.
No comments:
Post a Comment