"ಅನೂಷಾ ರಾವ್ ಮತ್ತು ಸುಹಾಸ್ ಮಹೇಶ್ ಅವರು “How to Love in Sanskrit“ ಎಂಬ ಇಂಗ್ಲಿಷ್ ಪುಸ್ತಕ ಬರೆದಿದ್ದಾರೆ" ಎಂದು ರಾಮಪ್ರಸಾದ ಕೆವಿ ಅವರು ಅದರ ವಿಮರ್ಶೆ ಬರೆದದ್ದು ನೋಡಿ ಗೊತ್ತಾಯಿತು. ಲೇಖಕನಾಗಿ ಸುಹಾಸ್ ಮಹೇಶ್ ಅವರ ಹೆಸರು ಕಂಡ ಕೂಡಲೇ ಹಿಂದೆ ಮುಂದೆ ನೋಡದೇ, ನಿಂತ ಕಾಲಿನಲ್ಲಿಯೇ ಪುಸ್ತಕವನ್ನು ತರಿಸಿಬಿಟ್ಟೆ; ಅಡುಗೆಯ ಭಟ್ಟರು ರುಚಿ ರುಚಿಯಾಗಿ ಮಾಡಿ ಬಡಿಸುತ್ತಾರೆ ಎಂಬುದು ಗೊತ್ತಿದ್ದ ಮೇಲೆ, "ಸ್ಟಾರ್ಟರ್ ಇದೆಯೇ, ಪಲ್ಯ ಯಾವುದರದ್ದು, ಪಾಯಸಕ್ಕೆ ಉಪ್ಪು ಹಾಕಿದ್ದಾರೋ, ಹೋಳಿಗೆ ಉಂಟೇ" ಎಂದೆಲ್ಲ ಕೇಳಹೋಗಬಾರದು; ಬೆಲ್ಟು ತೆಗೆದು, ಕೈನೀಡಿ ಕೂತು, ಬಾಳೆ ಎಲೆ ಬಿಡಿಸಿಬಿಡಬೇಕು. ಸಂಸ್ಕೃತದಿಂದ, ಪ್ರಾಕೃತದಿಂದ ಇಂಗ್ಲಿಷ್ ಗೆ ಅನುವಾದಿಸಿರುವ ಸುಭಾಷಿತಗಳ, ಶ್ಲೋಕಗಳ, ಪದ್ಯಗಳ ಸಂಕಲನವಿದು. ವಿಶೇಷವಾಗಿ ಶೃಂಗಾರ ಪರವಾದ ಪದ್ಯಗಳನ್ನು ಹೆಕ್ಕಿ ಜೋಡಿಸಿದ ಚತುರ ಸಂಕಲನವಿದು. ಸಂಸ್ಕೃತದಲ್ಲಿ ಶೃಂಗಾರಕ್ಕೆ ಎಲ್ಲಿಲ್ಲದ ಪ್ರಾಧಾನ್ಯ, ಜಯಂತ ಕಾಯ್ಕಿಣಿ, ಕೆ ಕಲ್ಯಾಣ್, ಡುಂಡಿರಾಜ್, ಬಿಆರ್ ಲಕ್ಶ್ಮಣರಾವ್, ಯೋಗರಾಜ ಭಟ್ಟರ ಹಾಡುಗಳನ್ನು ಕೇಳಿ ಸಂತೋಷ ಪಟ್ಟವರಿಗೆ ಅಂಥ ಸಾವಿರ ಪದ್ಯಗಳು ಸಂಸ್ಕೃತದಲ್ಲಿ(ಮತ್ತು ಪ್ರಾಕೃತದಲ್ಲಿ) ಸಿಗುತ್ತವೆ. ಅವುಗಳಲ್ಲಿ 218 ಪದ್ಯಗಳು ಇಲ್ಲಿ ಸಿಗುತ್ತವೆ.
My Facebook Id is: Sharath Bhat Seraje, my mail id is: sharathbhats@gmail.com
Wednesday, 17 September 2025
How to Love in Sanskrit
ಸಂಸ್ಕೃತದ ಸಾಲುಗಳು ಇಂಗ್ಲಿಷಿಗೆ ಬಂದಾಗ ಮೂಲದ ಸ್ವಾರಸ್ಯ ಸಂಪೂರ್ಣವಾಗಿ ಮಾಯವಾಗುವ ಸಂದರ್ಭಗಳೇ ಹೆಚ್ಚು, ಅಂಥ ಅನುವಾದಗಳು ಬೇಕಾದಷ್ಟು ಸಿಗುತ್ತವೆ. ಅನುವಾದಕರು ಇಂಗ್ಲಿಷ್ ಪಂಡಿತರಾದರಂತೂ ಯಾವುದೋ ವಿಕ್ಟೋರಿಯನ್ ಕಾಲದ ಇಂಗ್ಲೀಷನ್ನು ಓದಿದಂತಾಗಿ ಬಿಡುತ್ತದೆ. ಒಂದೊಂದು ಶಬ್ದವನ್ನೂ ಬಿಡದೆ ಅನುವಾದ ಮಾಡಿದರೆ ಓದುವುದೇ ಕಷ್ಟ ಆಗಿಬಿಡುತ್ತದೆ. "ಅವರ ವಿಷಯ ನಮಗ್ಯಾಕೆ, ಅವರು ದೊಡ್ಡ ಮನುಷ್ಯರು" ಎಂಬುದನ್ನು "why do we need to discuss his topic, he is a big man" ಎಂದರೆ ಆಗುವಂತೆ ಅಥವಾ "ಆರತಿ ಬೆಳಗಿದರು" ಎನ್ನುವುದನ್ನು they illuminated by rotating a holy lamp ಎಂದೋ They cast light by the turning of a sacred lantern ಎಂದೋ ಹೇಳಿದರೆ ಆಗುವ ಎಡವಟ್ಟಿನಂತೆ ಆಗಿಬಿಡುತ್ತದೆ. ("ಆರತಿ ಬೆಳಗಿದರು" ಎನ್ನುವುದನ್ನು ಇಂಗ್ಲಿಷಿಗೆ ಸರಿಯಾಗಿ ಅನುವಾದ ಮಾಡಲಿಕ್ಕೆ ಸಾಧ್ಯವೂ ಇಲ್ಲ ಅನ್ನಿ). ಆ ಮಟ್ಟಿಗೆ ಅನೂಷಾ ಮತ್ತು ಸುಹಾಸ್ ವಿಜಯಧ್ವಜ ಹಾರಿಸಿದ್ದಾರೆ. ಅವರದು ಸಲೀಸಾಗಿ ಓಡುವ, ಸರಳವಾದ ಇಂಗ್ಲೀಷು; ನನ್ನಂಥವರು, ನನ್ನ ತಲೆಮಾರಿನವರು ಮಾತಾಡುವ ಇಂಗ್ಲೀಷು.
ಪುಸ್ತಕದ ಬ್ಲರ್ಬಿನಲ್ಲಿ ARUNDHATHI SUBRAMANIAM ಅವರು ಬರೆದಿರುವ 'Witty, surprising and joyous, this book banishes notions of solemnity and turgid scholarship that one might nurse about translations from the Sanskrit. Several translations here wear their learning lightly, as good poems must, reminding us that centuries are separated "by historians, not poets" ಎಂಬ ಸಾಲುಗಳಿಗೆ ನನ್ನದು ಸಂಪೂರ್ಣ ಸಮ್ಮತಿಯಿದೆ. A difficult book to write, but since the two editors wear their scholarship lightly, they make it seem easy ಎಂದು BIBEK DEBROY ಹೇಳಿರುವುದೂ ಸತ್ಯವೇ. ಬಹುಶ್ರುತ ಎಂದರೆ ತುಂಬ ಓದಿಕೊಂಡವನು ಎಂದು ಅರ್ಥ. ಈ ಪುಸ್ತಕಕ್ಕೆ 218 ಪದ್ಯಗಳನ್ನು ಹೆಕ್ಕುವುದಕ್ಕೆ ಸುಮಾರು 10000 ಪದ್ಯಗಳನ್ನು ಓದಿರುವುದಾಗೆ ಲೇಖಕರು ಬರೆದುಕೊಂಡಿದ್ದಾರೆ. ಇಂಥ ಬಹುಶ್ರುತತ್ವವು ಓದುಗರ ತಲೆ ಹಾಳು ಮಾಡದ ಹಾಗೆ ಬರೆಯುವುದು ಕಷ್ಟ, ಪಾಂಡಿತ್ಯವಿದ್ದರೂ wearing the scholarship lightly ಎಂಬಂತೆ ಬರೆಯುವುದು ಇನ್ನೂ ಕಷ್ಟ. ಇದನ್ನು ಲೇಖಕರು ಸಲೀಸಾಗಿ ಸಾಧಿಸಿದ್ದಾರೆ. ಪಕ್ವವಾದ ಪಾಂಡಿತ್ಯ, ಒಳ್ಳೆಯ ಅಭಿರುಚಿ, ಕಚಗುಳಿಯಿಡುವ ಹಾಸ್ಯಪ್ರಜ್ಞೆ, ಬಿ ಎಂಶ್ರೀ ಮಾದರಿಯ, ಮೂಲವನ್ನು ಸೂಕ್ತವಾಗಿ ಬದಲಾಯಿಸಿಕೊಂಡ ಅನುವಾದ ಇಲ್ಲಿನ ಹೈಲೈಟ್. ಹೀಗಾಗಿ ಆಯ್ಕೆಗೂ ನೂರಕ್ಕೆ ತೊಂಬತ್ತೈದು, ಅನುವಾದಕ್ಕೂ ನೂರಕ್ಕೆ ತೊಂಬತ್ತೈದು ಅಂಕಗಳನ್ನು ಆರಾಮವಾಗಿ ಕೊಡಬಹುದು.
ಕೊನೆಸಿಡಿ: ಸಂಸ್ಕೃತ ಮತ್ತು ಹಳಗನ್ನಡದ ಸ್ವಾರಸ್ಯಕಾರಿ ಸಾಲುಗಳನ್ನು ಪರಿಚಯಿಸುವ ಪುಸ್ತಕವೊಂದನ್ನು ನಾನೂ ಬರೆಯಲಿದ್ದೇನೆ, ಆ ನಿಟ್ಟಿನಲ್ಲಿ ಕೆಲಸವನ್ನೂ ಶುರು ಮಾಡಿದ್ದೇನೆ. ಕಾದು ನೋಡಿ!
Subscribe to:
Post Comments (Atom)
No comments:
Post a Comment