Wednesday, 17 September 2025

ಕನ್ನಡದ ಉಪಭಾಷೆಗಳು

 ಸುವರ್ಣ ಕರ್ನಾಟಕ ಸಂಭ್ರಮದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ 'ಬೆಳೆ ಕನ್ನಡ' ಎಂಬ ವಿಶೇಷ ಲೇಖನಸರಣಿಯನ್ನು ಉದಯವಾಣಿ ಪತ್ರಿಕೆಯು ಪ್ರಕಟಿಸುತ್ತಿದೆ. ದಿನಕ್ಕೊಂದರಂತೆ ಲೇಖನಗಳನ್ನು ತಜ್ಞರಿಂದ ಬರೆಸುತ್ತಿದ್ದಾರೆ. "ಎಲ್ಲದಕ್ಕೂ ತಜ್ಞರು ಯಾಕೆ" ಎಂದೋ ಏನೋ, ಅಜ್ಞನಾದ ನನ್ನಿಂದಲೂ ಒಂದು ಲೇಖನವನ್ನು ಬರೆಯಿಸಿದ್ದಾರೆ. ಪದಮಿತಿಯಿರುವುದರಿಂದ ನನ್ನ ಎಂದಿನ ಲಘುಹಾಸ್ಯದ, ವೈಚಾರಿಕ ಲಲಿತ ಪ್ರಬಂಧದ ಶೈಲಿಗೆ ಇಲ್ಲಿ ಆಸ್ಪದವಿಲ್ಲ, to the point ಎಂಬಂತೆ ಉಪಭಾಷೆಗಳ ಬಗ್ಗೆ ಬರೆದಿದ್ದೇನೆ. ಆಸಕ್ತರು ಓದಿ

==============================
ಈವರೆಗೆ ಉಪಲಬ್ಧವಾಗಿರುವ ಕನ್ನಡಗ್ರಂಥಗಳಲ್ಲಿ ಅತ್ಯಂತ ಹಳೆಯದಾದ ಕವಿರಾಜಮಾರ್ಗವು ಅಲಂಕಾರಶಾಸ್ತ್ರಕ್ಕೆ ಸಂಬಂಧ ಪಟ್ಟ ಗ್ರಂಥ. ಹಾಗಿದ್ದರೂ ಇದರಲ್ಲಿ ಅಲ್ಲಲ್ಲಿ ಕನ್ನಡನಾಡು, ನುಡಿ, ಜನ, ಮೊದಲಾದವುಗಳ ಬಗೆಗೆ ಒಂದೆರಡು ಮಾತುಗಳೂ ಇವೆ. ಅದರಲ್ಲಿ, "ಇದೇನು ಹೀಗೆ ಹೇಳಿಬಿಟ್ಟಿದ್ದಾನಲ್ಲ" ಅನ್ನಿಸುವಂಥ ಪದ್ಯವೊಂದು ಪ್ರಥಮಪರಿಚ್ಛೇದದಲ್ಲಿ ಬರುತ್ತದೆ, ಅದನ್ನು ಬಿಡಿಸಿ, ಹಳೆಯ ಅಕ್ಷರಗಳನ್ನು ಬಿಟ್ಟು, ಗದ್ಯರೂಪದಲ್ಲಿ ಬರೆದರೆ ಅದು ಹೀಗೆ ಕಂಡೀತು: ದೇಸಿ ಬೇರೆ ಬೇರೆ ಅಪ್ಪುದರಿನ್ ಕನ್ನಡಂಗಳೊಳ್ ದೋಸಮ್ ಇನಿತೆಂದು ಬಗೆದು ಉದ್ಭಾಸಿಸಿ ತರಿಸಂದು ಅರಿಯಲಾರದೆ ವಾಸುಗಿಯುಮ್ ಬೇಸರುಗುಮ್. ಅಂದರೆ ಆ ಕಾಲದಲ್ಲೇ ಕನ್ನಡದಲ್ಲಿ ಅದೆಷ್ಟು ಬಗೆಯ ಪ್ರಾದೇಶಿಕ ವೈವಿಧ್ಯಗಳು ಇದ್ದವು ಎಂದರೆ, 'ಇದು ಸರಿ, ಇದು ದೋಷ' ಎಂದು ನಿಶ್ಚಯ ಮಾಡಿ ಹೇಳುವುದಕ್ಕೆ ಸಾವಿರ ನಾಲಗೆಗಳುಳ್ಳ ಆದಿಶೇಷನಿಗೂ ಆಗಲಿಕ್ಕಿಲ್ಲವಂತೆ!
ನಮ್ಮಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಧಾರವಾಡ, ಕುಂದಾಪುರ,ಬಿಜಾಪುರ,ಕಲಬುರ್ಗಿ ಇತ್ಯಾದಿಗಳ ಕನ್ನಡ, ಹವಿಗನ್ನಡ, ಹಾಲಕ್ಕಿಯವರ ಕನ್ನಡ, ಅರೆಭಾಷೆ ಇವೆಲ್ಲ ಇರುವಂತೆ ಶ್ರೀವಿಜಯನ ಕಾಲದಲ್ಲಿಯೂ ಸೀಮೆಗೊಂದೊಂದು ಬಗೆಯ ಕನ್ನಡಗಳು ಇದ್ದಿರಬೇಕು. ಯಾವುದು ಸರಿ ಎಂಬ ಚರ್ಚೆ ಬಂದಾಗ ಎಲ್ಲರೂ ನಮ್ಮದೇ ನಿರ್ದುಷ್ಟ ಎಂದು ಕೂಗೆಬ್ಬಿಸುವುದನ್ನು ನೋಡಿ ತಲೆಬಿಸಿಯಾಗಿ, ಇದನ್ನು ಇತ್ಯರ್ಥ ಮಾಡುವುದಕ್ಕೆ ವಾಸುಕಿಯ ಸಾವಿರ ನಾಲಗೆಗಳೂ ಸಾಲವು ಎಂದು ಮಾರ್ಗಕಾರನು ಹೇಳಿದನೋ ಏನೋ. ಏನೇ ಇರಲಿ, ಇಂದಿನಂತೆ ಅಂದೂ ವೈವಿಧ್ಯವಿತ್ತು ಎನ್ನುವುದು ಸಂತೋಷದ ವಿಷಯ, ಮತ್ತು ಕಾಲದ ಬಂಡಿ ಓಡಿ ಓಡಿ, ನಾವೀಗ ಈ ಹತ್ತು ಹಲವು ಕನ್ನಡಂಗಳ ಬಗ್ಗೆ ಬೇಸರ ಪಡದೆ, ಅವುಗಳ ಬಗ್ಗೆ ಸಂಭ್ರಮ ಪಡುವ ಹಂತಕ್ಕೆ ಮುಟ್ಟಿದ್ದೇವೆ ಎನ್ನುವುದು ಇನ್ನೂ ಖುಷಿಯ ವಿಷಯ.
ಭಾಷೆ ಎಂಬುದು ಸ್ವವಿಚಾರ ಪ್ರಕಾಶನಕ್ಕೆ ಊರುಗೋಲು, ಅದು ಜ್ಞಾನವನ್ನೋ, ವಿವೇಕವನ್ನೋ, ಅನುಭವವು ಕಲಿಸಿದ ಪಾಠವನ್ನೋ ಸಂಗ್ರಹ ಮಾಡಿ ಇಡುವುದಕ್ಕೂ ಆಗಿಬರುವ ಉಪಕರಣ. ಅದು ವಿಚಾರವಿನಿಮಯಕ್ಕೆ ಸಾಧನವು ಹೇಗೋ ಹಾಗೆಯೇ ವಿಚಾರವಿಮರ್ಶೆಗೂ ಉಪಕಾರಿ. ಬೇರೆ ಬೇರೆ ಪ್ರಾಂತಗಳ ನಿತ್ಯವ್ಯವಹಾರಗಳು ಅಲ್ಲಿನ ಆಡುಭಾಷೆಗಳಲ್ಲಿ, ಉಪಭಾಷೆಗಳಲ್ಲಿಯೇ ನಡೆಯುತ್ತವಷ್ಟೇ. ಹಾಗಿರುವಾಗ ಅವರ ಪರಂಪರೆಯ ಹೆಚ್ಚುಗಾರಿಕೆ, ಅವರ ಸಂಸ್ಕೃತಿಯ ಹಿರಿಮೆ, ಅಲ್ಲಿನವರ ಇತಿಹಾಸದ ವೈಶಿಷ್ಟ್ಯ, ಅವರ ಲೋಕಾನುಭವದ ಒಟ್ಟುಮೊತ್ತ ಇವೆಲ್ಲ ಅವರ ಉಪಭಾಷೆಗಳಲ್ಲಿಯೇ ಗುಪ್ತನಿಧಿಯಂತೆ ಅಡಗಿರುತ್ತದೆ ಎಂದರೆ ಹೆಚ್ಚಾಗಲಿಕ್ಕಿಲ್ಲ. ನನಗೆ ಗೊತ್ತಿರುವ ಭಾಷೆಯಾದ ಹವಿಗನ್ನಡದಿಂದಲೇ ಒಂದೆರಡು ಉದಾಹರಣೆಗಳನ್ನು ಮೊದಲು ಮುಂದಿಡಬಹುದು.
ಹವಿಗನ್ನಡವು ಕನ್ನಡದ್ದೇ ಒಂದು ರೂಪ; ಬಹುಶಃ ಕದಂಬರ ಕಾಲದಲ್ಲಿ ಬನವಾಸಿ ದೇಶದಲ್ಲಿ ಜನರು ಆಡುತ್ತಿದ್ದ ಹಳಗನ್ನಡದ ಒಂದು ದೇಸಿರೂಪ. ಹಾಗಾಗಿಯೇ ಅದು ಹಳಗನ್ನಡ ಮತ್ತೆ ನಡುಗನ್ನಡದ ಕಂಪನ್ನು ಈಗಲೂ ಉಳಿಸಿಕೊಂಡಿರುವ ಭಾಷೆ. ಪಂಪನು ಒಂದುಕಡೆ "ಓಡ" ಎಂಬ ಪದವನ್ನು ಬಳಸುತ್ತಾನೆ. ವಿದ್ವಾಂಸರೊಬ್ಬರು, "ಈ ಪದವು ಎಲ್ಲಿಂದ ಬಂತಪ್ಪಾ, ಇದರ ಅರ್ಥ ಏನಪ್ಪಾ" ಎಂದು ಯೋಚನೆ ಮಾಡಿದ್ದನ್ನು ನೋಡಿದ್ದೆ. ಆದರೆ ನನಗದರ ಅರ್ಥ ಕೂಡಲೇ ಹೊಳೆದಿತ್ತು; ಕಾರಣ ಇಷ್ಟೇ: ನಮ್ಮಲ್ಲಿ ಈಗಲೂ ದೋಣಿ ಎಂಬುದನ್ನು ಓಡ ಅಂತಲೇ ಹೇಳುತ್ತಾರೆ. ವಿದ್ವಾಂಸರೇ ಯೋಚನೆ ಮಾಡಬೇಕಾದ ಒಂದು ಪದವು ಹವ್ಯಕರಲ್ಲಿ, ತುಳುವರಲ್ಲಿ ಉಳಿದು ಬಿಟ್ಟಿದೆ!
ಎಕ್ಕಸಕ್ಕತನಂಗಳು ಎಂಬುದು ಪಂಪನ ಇನ್ನೊಂದು ಬಳಕೆ. ಡಿ ಎಲ್ ನರಸಿಂಹಾಚಾರ್ಯರು ಎಕ್ಕಸಕ್ಕತನಂಗಳು = ನಿಂದೆ ಪರಿಹಾಸಗಳು ಎಂದು ಅರ್ಥವನ್ನು ಕೊಟ್ಟಿದ್ದಾರೆ, ಅದಕ್ಕೆ ತೆಲುಗಿನ ಎಕ್ಕಸಕ್ಕಮು ಅನ್ನುವ ಪ್ರಯೋಗ ಅವರಿಗೆ ಆಧಾರವಾಗಿ ಕಂಡಿದೆ. ಆದರೆ ತುಳುನಾಡಿನವರಿಗೆ ಇದಕ್ಕೆ ಇನ್ನೊಂದು ಅರ್ಥ ಗೋಚರಿಸುತ್ತದೆ. ಯಾಕೆಂದರೆ ಇದು ತುಳುವಿನಲ್ಲಿ ಮತ್ತು ಹವಿಗನ್ನಡದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಪದವೇ. ಬೇಕಾಬಿಟ್ಟಿ, ಲಂಗುಲಗಾಮಿಲ್ಲದ ಎಂಬ ಅರ್ಥದಲ್ಲಿ ಇದು ನಮ್ಮಲ್ಲಿ ತುಳು ಮತ್ತು ಹವಿಗನ್ನಡಗಳಲ್ಲಿ ಈಗಲೂ ಬಳಕೆಯಲ್ಲಿದೆ. ಕನ್ನಡಿಗರು ಬಿಟ್ಟಿರುವ ಕನ್ನಡದ್ದೇ ಎಷ್ಟೋ ಪ್ರಯೋಗಗಳು ಹವಿಗನ್ನಡದಲ್ಲಿ ಉಳಿದುಕೊಂಡಿರುವುದು ಗಮನಾರ್ಹ. ಹಳಗನ್ನಡದ ಅಧ್ಯಯನ ಆಗುವಾಗ ತಮಿಳು, ತೆಲುಗುಗಳ ಜೊತೆಗೆ ಹವ್ಯಕ ಮತ್ತು ತುಳುಗಳ ಪ್ರಯೋಗಗಳನ್ನೂ ಗಮನಿಸಿದರೆ ಉಪಕಾರವುಂಟು ಎಂದು ನನಗನ್ನಿಸಿದ್ದುಂಟು.
ಕನ್ನಡಿಗರು ಬಿಟ್ಟಿರುವ ಕನ್ನಡದ್ದೇ ಎಷ್ಟೋ ಪ್ರಯೋಗಗಳು ಈ ಉಪಭಾಷೆಯಲ್ಲಿ ಹೇಗೆ ಉಳಿದವು ಎಂದು ಯೋಚನೆ ಮಾಡಿದಾಗ ಹೊಳೆದದ್ದು ಇಷ್ಟು: ಒಂದು ಭಾಷೆಯು ಬದಲಾಗುವುದು ಕೊಡು ಕೊಳೆಯಿಂದ, ಅನುಕರಣೆಯಿಂದ. ಬಹುಭಾಷಿಕರು ಇರುವಲ್ಲಿ, ನಗರಗಳಲ್ಲಿ ಇದು ಹೆಚ್ಚಾಗಿ ಆಗುತ್ತದೆ. ಹವಿಕರು ಹಳ್ಳಿಗಳಲ್ಲಿಯೇ ಕೃಷಿ ಮಾಡಿಕೊಂಡು ಇದ್ದವರು. ಎರಡು ಮೂರು ಜಿಲ್ಲೆಗಳಲ್ಲಿ ಮಾತ್ರ ಇದ್ದವರು. ಹೀಗಾಗಿ ಬೇರೆ ಭಾಷೆಗಳ ಪ್ರಭಾವ ಅವರ ಮೇಲೆ ಅಷ್ಟಾಗಿ ಆಗಲಿಲ್ಲ ಅಂತ ಹೇಳಬಹುದು. ಈ ಭಾಷೆಯು ಒಂದು ಸೀಮಿತ ವಲಯದಲ್ಲಿ ಮಾತ್ರ ಚಾಲ್ತಿಯಲ್ಲಿದ್ದದ್ದರಿಂದ ಬಹಳಷ್ಟು ಹಳೆಯ ಪ್ರಯೋಗಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಯಿತು ಅಂತ ಕಾಣುತ್ತದೆ.
ಹಾಗಂತ ಎಷ್ಟೋ ಹಳೆಯ ಶಬ್ದಗಳು ಬದಲಾಗಿ ಉಳಿದಿರುವುದೂ ಉಂಟು. ಪಂಚಭಕ್ಷ್ಯ ಪರಮಾನ್ನದಲ್ಲಿ ಬರುವ ಪರಮಾನ್ನ ಹವ್ಯಕರಲ್ಲಿ ಈಗಲೂ ಬಳಕೆಯಲ್ಲಿದೆ, ಆದರೆ ಪಾಯಸ ಅನ್ನುವ ಸೀಮಿತ ಅರ್ಥದಲ್ಲಿ. ಅಡರು ಅನ್ನುವ ಶಬ್ದವನ್ನು ಪಂಪ ಮೇಲಕ್ಕೇರು ಅನ್ನುವ ಅರ್ಥದಲ್ಲಿ ಬಳಸಿದ್ದಾನೆ (ಉದಾ : ರಥವನ್ನು ಅಡರಿದನು). ಹವಿಕರಲ್ಲಿ ಏನಾದರೂ ತಲೆಗೆ ಏರುವುದು ಎಂಬ ಸೀಮಿತ ಅರ್ಥದಲ್ಲಿ ಇದು ಈಗಲೂ ಇದೆ. ಉದಾ: ಅವಂಗೆ ಹಾಂಕಾರ ತಲೆಗೆ ಅಡರಿದ್ದು (ಅವನಿಗೆ ಅಹಂಕಾರ ತಲೆಗೆ ಏರಿದೆ). ಹವಿಕರು ಬೆಳಗ್ಗೆ,ಸಂಜೆ ಅನ್ನುವುದನ್ನು ಉದಿಯಪ್ಪಗ,ಹೊತ್ತೊಪ್ಪಗ ಅನ್ನುತ್ತಾರೆ. ಸ್ವಲ್ಪ ಯೋಚಿಸಿದರೆ ಇದರ ಅರ್ಥ ಹೊಳೆಯುತ್ತದೆ. (ಸೂರ್ಯ)ಉದಯ ಆಗುವಾಗ --> ಉದಯ ಅಪ್ಪಗ --> ಉದಿಯಪ್ಪಗ. ಹೊತ್ತು ಹೋಗುವಾಗ --> ಹೊತ್ತು ಹೋಪಗ ---> ಹೊತ್ತೊಪ್ಪೊಗ. ಇದನ್ನು, ಹೊತ್ತು ಆಗುವಾಗ --> ಹೊತ್ತು ಅಪ್ಪಗ ---> ಹೊತ್ತಪ್ಪಗ ಅಂತಲೂ ಬಿಡಿಸಬಹುದು. ಇಲ್ಲೆಲ್ಲ ಕನ್ನಡದ ಹಳೆಯ ಪ್ರಯೋಗಗಳೇ ಹವಿಕರ ನಾಲಗೆಯಲ್ಲಿ ಸ್ವಲ್ಪ ತಿರುಚಲ್ಪಟ್ಟ ರೂಪದಲ್ಲಿವೆ.
ನಗರಗಳಿಗೆ ವಲಸೆ ಹೆಚ್ಚಾಗಿ ಈ ಭಾಷೆಯಲ್ಲಿಯೂ ಎಷ್ಟೋ ಪ್ರಯೋಗಗಳು ಇತ್ತೀಚೆಗೆ ಮಾಯವಾಗುತ್ತಿವೆ. ಹಳಗನ್ನಡದಲ್ಲಿ ಅಮ್ಮ = ತಂದೆ, ಅಬ್ಬೆ = ತಾಯಿ, ಹವಿಕರಲ್ಲೂ ಮೊನ್ನೆ ಮೊನ್ನೆಯವರೆಗೆ ಅಮ್ಮನನ್ನು ಅಬ್ಬೆ ಅನ್ನಲಾಗುತ್ತಿತ್ತು (ಅದೇ ರೀತಿ ಚಿಕ್ಕಮ್ಮ - ಕಿರಿಯಬ್ಬೆ) ಈಗ ಈ ಪದದ ಬಳಕೆ ಇಲ್ಲ. ಅಡುಗೆಮನೆಯನ್ನು ಮೊನ್ನೆ ಮೊನ್ನೆಯವರೆಗೂ ಹಳ್ಳಿಗಳಲ್ಲಿ ಅಟ್ಟುಂಬೊಳ ಅನ್ನಲಾಗುತ್ತಿತ್ತು (ಅಟ್ಟು ಉಂಬ ಒಳ = ಅಟ್ಟುಂಬೊಳ, ಇದು ಈಗಿನ ಅಡುಗೆ ಮನೆ + ಡೈನಿಂಗ್ ಹಾಲ್). ಹಾಗೆಯೇ ಮನೆಯಲ್ಲಿ ಕೈಸಾಲೆ, ಮುಖಮಂಟಪ, ಉಪ್ಪರಿಗೆ ಇತ್ಯಾದಿ ಭಾಗಗಳು. ಹಾಗೆಯೇ ಬಾತ್ ರೂಮು ಎಂಬುದಕ್ಕೆ ಇದ್ದ ಪದ ಬೆಶಿನೀರು ಕೊಟ್ಟಗೆ. ಅಂದರೆ ಹಂಡೆಯಲ್ಲಿ ಯಾವಾಗಲೂ ಬಿಸಿ ಬಿಸಿ ನೀರಿರುವ ಜಾಗ. ಇಂತಹಾ ಎಷ್ಟೋ ಪ್ರಯೋಗಗಳನ್ನು ನಗರವಾಸಿಗಳು ಮರೆಯುತ್ತಿದ್ದೇವೆ. ಬೆಂಗಳೂರಿಗೆ ಬಂದವರ ಬಾಯಲ್ಲಿ "ಕಂಡಾಬಟ್ಟೆ", "ಭಯಂಕರ", "ಭಾರೀ" ಎಂಬ ದಕ್ಷಿಣ ಕನ್ನಡದ ಪ್ರಯೋಗಗಳಿಗೆ ಬದಲಾಗಿ "ಸಕ್ಕತ್" ಮತ್ತು "ಬೇಜಾನ್"ಗಳು ಕೇಳಿಸುತ್ತಿವೆ. ಬೆಶಿನೀರಿನ ಕೊಟ್ಟಗೆಯ ಜಾಗಕ್ಕೆ ಬಾತ್ ರೂಮು ಬರುವುದು, ಅಟ್ಟುಂಬೊಳದ ಬದಲಿಗೆ ಅಡುಗೆಮನೆ ಬರುವುದು ಎಂದರೆ ಒಂದು ಸಂಸ್ಕೃತಿಯು ಮರೆಯಾಗುವುದರ ಸೂಚನೆ ಎಂದು ಅರ್ಥಮಾಡಿಕೊಂಡರೆ ನಮಗೆ ಉಪಭಾಷೆಗಳ ಮಹತ್ತ್ವ ತಿಳಿಯುತ್ತದೆ.
ಮೇಲೆ ಹವಿಗನ್ನಡವನ್ನು ಇಟ್ಟುಕೊಂಡು ಹೇಳಿದ ಮಾತುಗಳನ್ನು ಧಾರವಾಡ, ಮಂಡ್ಯ, ಕುಂದಾಪುರ ಕನ್ನಡಗಳಿಗೂ ಅನ್ವಯಿಸಿ ಅರ್ಥಮಾಡಿಕೊಳ್ಳಬೇಕು. ಗೌಡರ ಕನ್ನಡ, ಹಾಲಕ್ಕಿ ಸಮುದಾಯದ ಕನ್ನಡ ಇಂಥ ನುಡಿಗಳಲ್ಲಿಯೂ ಅದೆಷ್ಟೋ ಸಾಂಸ್ಕೃತಿಕ ಅಂಶಗಳೂ ಹಳೆಯ ಪದಗಳೂ ಈಗಲೂ ಬಳಕೆಯಲ್ಲಿರುತ್ತವೆ. ಈಗ ಮುದ್ದಣನ "ಓವೊ ! ಕಾಲಪುರುಷಂಗೆ ಗುಣಮಣಮಿಲ್ಲಂ ಗಡ ! ನಿಸ್ತೇಜಂ ಗಡ ! ಜಡಂ ಗಡ !" ಎಂಬ ಸಾಲನ್ನೇ ತೆಗೆದುಕೊಳ್ಳಿ. ಇಲ್ಲಿ ಗಡ = ಅಂತೆ/ಅಲ್ಲವೇ ಎಂದು ಅರ್ಥ. ಕನ್ನಡದಲ್ಲಿ ಬಿಟ್ಟುಹೋಗಿರುವ ಈ ಪ್ರಯೋಗವು ಅರೆಭಾಷೆಯಲ್ಲಿ ಈಗಲೂ ಅಂವ ಬಾತ್ ಗಡ, ಕೊಡೊಕಡ ಎಂಬ ಪ್ರಯೋಗಗಳಲ್ಲಿ ಇರುವುದನ್ನು ಪ್ರೊ.ಕುಶಾಲಪ್ಪ ಗೌಡರು ಗುರುತಿಸಿದ್ದಾರೆ. ಸಣ್ಣ ಎಂಬ ಅರ್ಥದ 'ಕುಂಞ' ಎಂಬ ಪದ, ಅಪರರಾತ್ರಿ ಎಂಬುದನ್ನು ಹೇಳುವ ನಡೀರ್ಲ್ನ, ನಡು+ ಇರುಳು= ಅಂದರೆ ರಾತ್ರಿಯ ನಡುವಿನ ಭಾಗ(ಹವಿಗನ್ನಡದಲ್ಲೂ ಈ ಪ್ರಯೋಗ ಉಂಟು). ಅತಿಸಾರ ಅಥವಾ ಆಮಶಂಕೆಗೆ ಇರುವ 'ಹೊಟ್ಟೆಂದ ಹೋದು' ಎಂಬ ಪ್ರಯೋಗ ಇವೆಲ್ಲ ಅರೆಭಾಷೆಯ ಹಳಗನ್ನಡದ ಸೊಗಡಿನ ವಿಶಿಷ್ಟ ಪ್ರಯೋಗಗಳು. ಇಲಿಗೆ ಪೂರ್ವದ ಹಳಗನ್ನಡದಲ್ಲಿ 'ಎಲಿ' ಎಂದು ಪ್ರಯೋಗ. ಅರೆಭಾಷೆಯಲ್ಲಿ ಇದು ಈಗಲೂ ಎಲಿ ಎಂದೇ ಇದೆ. ಅಡಂಗು, ಕಲಂಕ್ ಮುಂತಾದ ಸಬಿಂದುಕ ಪದಗಳು ಹಳಗನ್ನಡದ ರೂಪಗಳಲ್ಲಿಯೇ ಅರೆಭಾಷೆಯಲ್ಲಿ ಉಳಿದಿವೆ.
ಎಲ್ಲವನ್ನೂ ಒತ್ತಿ, ಸಂಕ್ಷೇಪ ಮಾಡಿ ಹೇಳುವ ಅದ್ಭುತ ಶಕ್ತಿ ಇರುವ ಕುಂದಾಪುರ ಕನ್ನಡದಿಂದಲೂ ಇಂಥವನ್ನು ಎತ್ತಿ ತೋರಿಸಬಹುದು. ಹಳಗನ್ನಡದ ಈಗಳ್, ಆಗಳ್, ಏಗಳ್ ಇವುಗಳಂತೆ ಕುಂದಾಪುರದಲ್ಲಿ ಏಗಳಿಕೆ(ಯಾವಾಗ) ಇದೆ. ಹಳಗನ್ನಡದ ಮಿಡುಕು 'ಮಿಡುಕ್ತ/ಮಿಡುಕ್ತಳ್' ಎಂಬ ಪ್ರಯೋಗಗಳಲ್ಲಿ ಕಾಣಸಿಗುತ್ತದೆ. ಮರುಗು ಎಂಬ ಹಳೆಯ ಪ್ರಯೋಗವು ಕುಂದಗನ್ನಡದಲ್ಲಿ ಮರ್ಕು(ಅಂದರೆ ಅಳು). ಇನ್ನು ಬಪ್ಪುದು, ಹೋಪುದು, ದಾಂಟು ಇವೆಲ್ಲ ಹಳೆಯ ಪ್ರಯೋಗಗಳನ್ನು ಈಗಲೂ ಜತನದಿಂದ ಉಳಿಸಿಕೊಂಡಿರುವುದಕ್ಕೆ ನಿದರ್ಶನಗಳು. ಧಾರವಾಡದ ಬಗೆಗಂತೂ ಹೇಳುವುದೇ ಬೇಡ, ಅದು ವಿಶಿಷ್ಟ ಪ್ರಯೋಗಗಳ ಆಡುಂಬೊಲ. ಹಳೆಯ ದೊಡ್ಡ ಕವಿಗಳೆಷ್ಟೋ ಜನ ಆ ಪ್ರದೇಶದವರೇ ತಾನೇ. ಕವಿರಾಜಮಾರ್ಗ'ದಲ್ಲಿ ಕಿಸುವೊಳಲು (ಪಟ್ಟದಕಲ್ಲು), ಕೊಪಣನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ), ಒಂಕುಂದ ( ಒಕ್ಕುಂದ) ಈ ಗ್ರಾಮಗಳ 'ನಡುವಣ ನಾಡೆ ನಾಡೆ ಕನ್ನಡದ ತಿರುಳ್' ಎಂದು ಹೇಳಿದೆ. ಪಂಪನೂ ತನ್ನ 'ವಿಕ್ರಮಾರ್ಜುನವಿಜಯ'ವನ್ನು ಪುಲಿಗೆರೆಯ ತಿರುಳ ಕನ್ನಡದಲ್ಲಿ ಬರೆದಿದ್ದೇನೆಂದು ಹೇಳಿದ್ದಾನೆ. ಅಂದರೆ ಆ ಕಾಲಕ್ಕೆ ಉತ್ತರ ಕರ್ನಾಟಕದ ಭಾಷೆಯೇ ಕನ್ನಡದ ತಿರುಳು. ಬ್ಯಾನಿ(ಬೇನೆ), ಮಾರಿ(ಮೋರೆ), ಮಳ್ಳ(ಮರುಳ), ಮುತ್ಯಾ(ಅಜ್ಜ) ಇಲ್ಲೆಲ್ಲ ಹಳೆಯ ಕಾಲದ ಕನ್ನಡದ ಪರಿಮಳವೇ ಉಂಟು.
ತುಳು, ಕೊಡವ, ಬ್ಯಾರಿ ಭಾಷೆಗಳ ಅಭಿವೃದ್ಧಿಗೆ ನಿಗಮಗಳನ್ನು ಮಾಡಿರುವಂತೆ ಕನ್ನಡದ್ದೇ ಉಪಭಾಷೆಗಳಿಗೂ ಮಾಡಿದರೆ ಪ್ರಯೋಜನ ಆದೀತು. ಎಲ್ಲ ಉಪಭಾಷೆಗಳ ಗಾದೆಮಾತುಗಳ ಸಂಗ್ರಹ, ಪಡೆನುಡಿ ಕೋಶಗಳು, ನಿಘಂಟುಗಳು ಬಂದರೆ ಒಳ್ಳೆಯದು. ಉಪಭಾಷೆಗಳಲ್ಲಿ ನಾಟಕ, ಯಕ್ಷಗಾನಾದಿಗಳು, ಕೃತಿರಚನೆಗಳು, ಕೃತಿರಚನೆಗಳ ಸ್ಪರ್ಧೆಗಳು ಎಲ್ಲ ಆದರೆ ಪ್ರಚಾರಕ್ಕೆ ಸಹಾಯವಾದೀತು. ಎಲ್ಲ ಪ್ರಾಂತಗಳ ಜನರ ಜ್ಞಾನಭಂಡಾರದ ಕೀಲಿಕೈ ಅವರವರ ಭಾಷೆಗಳಲ್ಲಿವೆ ಎಂಬುದನ್ನು ಮರೆಯದಿರೋಣ.

No comments:

Post a Comment