Wednesday, 17 September 2025

Oppenheimer

 ಒಂದು ಚಲನಚಿತ್ರವು ಚಿತ್ರೋದ್ಯಮಕ್ಕೆ ಸಂಬಂಧವೇ ಪಡದ ಕಾರಣಕ್ಕೆ ಸುದ್ದಿಯಾಗುವುದು ಮಾಮೂಲಿಯಾಗಿರುವ ಈ ಕಾಲವೇ ಓಪನ್ಹೈಮರ್ ಮತ್ತು ಭಗವದ್ಗೀತೆಯ ಬಗ್ಗೆ ಒಂದಷ್ಟು ಹೇಳುವುದಕ್ಕೆ ಸಕಾಲವೇನೋ. ಬಾಳೆಲೆಯ ಊಟ ಬಯಸಿದರೆ ಚೈನೀಸ್ ಬಡಿಸುವ, ಕಾಂಟಿನೆಂಟಲ್ ಕೇಳಿದರೆ ರಾಜಸ್ಥಾನೀ ಉಣಿಸುಗಳನ್ನು ಬಡಿಸುವ ಅಡುಗೆ ಭಟ್ಟರಂತೆ ಪ್ರೇಕ್ಷಕರು ಏನನ್ನು ನಿರೀಕ್ಷಿಸಿದ್ದಾರೋ ಅದರಾಚೆಗೆ, ಊಹಾತೀತವಾದದ್ದನ್ನು ಕೊಡುವುದನ್ನೇ ಕಾಯಕ ಮಾಡಿಕೊಂಡಿರುವ ನಿರ್ದೇಶಕ ಕ್ರಿಸ್ಟೋಫರ್ ನೋಲನ್. ಈ ನೋಲನ್ನಣ್ಣನ ಪರಮ ಅಭಿಮಾನಿಯಾದ ನನಗೆ ಈ ಚಲನಚಿತ್ರವೂ ಮೆಚ್ಚುಗೆಯಾಯಿತು ಎಂಬುದೇನೋ ಹೌದಾದರೂ ಈಗ ನಾನು ಬರೆಯಹೊರಟದ್ದು ಆ ಚಿತ್ರದ ಬಗ್ಗೆಯಲ್ಲ. ಈ ಚಿತ್ರದಲ್ಲಿ ಗೀತೆಯ ಸಾಲು ಬಂದಿದೆ ಎಂಬುದು ನಮ್ಮಲ್ಲಿ ಸಂಭ್ರಮಕ್ಕೆ, ವಿವಾದಕ್ಕೆ, ಸೋಜಿಗಕ್ಕೆ, ತಲೆಕೆರೆದುಕೊಳ್ಳುವಿಕೆಗೆ ಎಲ್ಲ ಕಾರಣವಾದದ್ದು ನಮಗೆ ಗೊತ್ತೇ ಇದೆ. ನಾನು ಸಂಕ್ಷಿಪ್ತವಾಗಿ ನಿರೂಪಿಸಲಿರುವುದು ಈ ವಿಷಯದ ಕುರಿತಾಗಿ.

ಎತ್ತಣ ಪರಮಾಣುಬಾಂಬು, ಎತ್ತಣ ಭಗವದ್ಗೀತೆ ಎಂದು ತಿಳಿದುಕೊಳ್ಳುವುದಕ್ಕೆ ಪರಮಾಣುಬಾಂಬಿನ ಯೋಜನೆಯನ್ನು ವೈಜ್ಞಾನಿಕವಾಗಿ ಮುನ್ನಡೆಸಿದ ವಿಜ್ಞಾನಿ ಜೂಲಿಯಸ್ ರಾಬರ್ಟ್ ಓಪನ್ಹೈಮರನ ಹಿನ್ನೆಲೆಯೂ ಒಂಚೂರು ಬೇಕು. ಮೊದಲ ಗಮನೀಯವಾದ ಅಂಶವೆಂದರೆ ಅವನ ಜ್ಞಾನಾನುರಕ್ತಿ, ಭಾಷೆಗಳ ಮೇಲಿನ ಒಲವು. ಓಪನ್ಹೈಮರ್ ಏಳೆಂಟು ಭಾಷೆಗಳನ್ನು ಕಲಿತವನು. ಕಾರ್ಲ್ ಮಾರ್ಕ್ಸನ Das Kapital ಅನ್ನು ಜರ್ಮನ್ ಭಾಷೆಯಲ್ಲಿಯೇ ಓದಿದ್ದೆ ಅಂತ ಅವನು ಹೇಳುವ ದೃಶ್ಯ ಸಿನೆಮಾದಲ್ಲಿದೆ. ಷೇಕ್ಸಪಿಯರನ ಹ್ಯಾಮ್ಲೆಟ್ ಅವನ ವಿಶೇಷವಾದ ಪ್ರೀತಿಗೆ ಪಾತ್ರವಾದ ಕೃತಿ. ಜಾನ್ ಡನ್ ಮತ್ತು ಟಿಎಸ್ ಎಲಿಯಟ್ ಬರೆದ ಕವಿತೆಗಳೂ ಅವನಿಗೆ ಪ್ರಿಯವಾಗಿದ್ದವು. ಈ ಎಲಿಯಟ್ಟನೂ ಭಾರತದ ಪ್ರಾಚೀನ ಸಾಹಿತ್ಯದ ಬಗ್ಗೆ ಆಸಕ್ತಿ ತಾಳಿದವನೇ.
ಇಂಥ ಪುಸ್ತಕಪ್ರೇಮಿಯಾಗಿದ್ದ ಓಪನ್ಹೈಮರ್ University of California, Berkeleyಯಲ್ಲಿ ಪ್ರೊಫೆಸರ್ ಆಗಿದ್ದ. ಅಲ್ಲಿ ಅವನಿಗೆ ಸಿಕ್ಕಿದ್ದು Arthur W. Ryder ಎಂಬ ಸಂಸ್ಕೃತದ ಪ್ರೊಫೆಸರು. ಇವನ ಹತ್ತಿರವೇ ನಮ್ಮ ವಿಜ್ಞಾನಿಯು ಸಂಸ್ಕೃತದ ಪಾಠ ಹೇಳಿಸಿಕೊಂಡದ್ದು. ಓಪನ್ಹೈಮರ್ ಕಾಳಿದಾಸನ ಮೇಘದೂತವನ್ನೂ ಓದಿ ಆಸ್ವಾದಿಸಿದ್ದನಂತೆ. ಈ Arthur W. Ryder ನೇ ಅವನಿಗೆ "ಭಗವದ್ಗೀತೆಯನ್ನು ಓದು, ಸಖತ್ತಾಗಿದೆ" ಎಂದು ಶಿಫಾರಸು ಮಾಡಿರಬಹುದೇನೋ. ಓಪನ್ಹೈಮರನಿಗೆ ಗೀತೆಯಲ್ಲಿ ಧಾರ್ಮಿಕವಾದ ಆಸಕ್ತಿಯೇನೂ ಇದ್ದಂತೆ ಕಾಣುವುದಿಲ್ಲ. ಅವನಿಗೆ ಅದು ಒಂದು ತರದ ಪ್ರಾಕ್ಟಿಕಲ್ ಫಿಲಾಸಫಿಯನ್ನು ಹೇಳುವ, ತತ್ತ್ವಜ್ಞಾನದ, ಬೌದ್ಧಿಕವಾಗಿ ಕಾಡುವ ಕೃತಿಯಾಗಿ ಬಹಳ ಹಿಡಿಸಿರಬೇಕು. ಮುಂದಿನ ದಿನಗಳಲ್ಲಿ ಅವನೇ, ಗೀತೆಯನ್ನು, “Very easy and quite marvelous" ಎಂದು ಹೇಳಿದ್ದಿತ್ತು. ಇನ್ನೊಮ್ಮೆ, "The most beautiful philosophical song existing in any known tongue.” ಎಂದು ಪ್ರಶಂಸೆ ಮಾಡಿದ್ದಿತ್ತು. ಅವನು ಬೌದ್ಧ ಧರ್ಮದ ಕೃತಿಗಳನ್ನೂ ತಕ್ಕಮಟ್ಟಿಗೆ ಓದಿಕೊಂಡಿದ್ದನೆಂದು ತೋರುತ್ತದೆ.
ಸಿನೆಮಾದಲ್ಲಿ ಪರಮಾಣು ಬಾಂಬಿನ ಪರೀಕ್ಷೆ ಆದಾಗ ಈ ಸಾಲನ್ನು ಓಪನ್ಹೈಮರ್ ಹೇಳುತ್ತಾನೆ: “Now, I am become Death, the destroyer of worlds.” ಇದು ಎಲ್ಲಿಂದ ಬಂತು? ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ. ಇದರ ಬಗ್ಗೆ ಸ್ವತಃ ಓಪನ್ಹೈಮರನೇ ಅರುವತ್ತರ ದಶಕದಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದ, ಅವನು ಹೇಳಿದ್ದು ಹೀಗೆ: "We knew the world would not be the same. A few people laughed, a few people cried, most people were silent. I remembered the line from the Hindu scripture, the Bhagavad-Gita. Vishnu is trying to persuade the Prince that he should do his duty and to impress him takes on his multi-armed form and says, “Now, I am become Death, the destroyer of worlds.” I suppose we all thought that one way or another."
ಕೃಷ್ಣನನ್ನು ವಿಷ್ಣು ಎಂದಿರುವುದು ಬಿಟ್ಟರೆ ತಕ್ಕಮಟ್ಟಿಗೆ ಗೀತೆಯನ್ನು ಸರಿಯಾಗಿಯೇ ಉದ್ಧರಿಸಿದ್ದಾನೆ. ಗೀತೆಯಲ್ಲಿ ಈ ಪ್ರಕರಣವು ನಿಜವಾಗಿಯೂ ಬರುವುದು ಕೃಷ್ಣನು ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿಸುವ ಸಂದರ್ಭದಲ್ಲಿ, 11ನೇ ಅಧ್ಯಾಯದಲ್ಲಿ. ಸಾವಿರ ಕಣ್ಣುಗಳು, ಸಾವಿರ ತೋಳುಗಳು ಎಲ್ಲ ಇರುವ ಕಣ್ಣುಕುಕ್ಕುವ ಭಯಂಕರರೂಪಿಯಾಗಿ ಕೃಷ್ಣನು ಈ ಅಧ್ಯಾಯದಲ್ಲಿ ಕಾಣಿಸಿಕೊಳ್ಳುತ್ತಾನೆ. ಆಡುಮಾತಿನಲ್ಲಿ ಈಗಲೂ "ಅವನ ವಿಶ್ವರೂಪ ದರ್ಶನವಾಯಿತು" ಎಂಬ ಪ್ರಯೋಗ ಇದೆ.
ನಮ್ಮ ವಿಜ್ಞಾನಿಯು ಸೂಚಿಸುತ್ತಿರುವ ಶ್ಲೋಕ ಹೀಗಿದೆ:
"ಕಾಲೋSಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ । ಋತೇ ಅಪಿ ತ್ವಾಮ್ ನ ಭವಿಷ್ಯಂತಿ ಸರ್ವೇ ಯೇ ಅವಸ್ಥಿತಾಃ ಪ್ರತಿ ಅನೀಕೇಷು ಯೋಧಾಃ". ನಾನು ಕಾಲನಾಗಿದ್ದೇನೆ, ಲೋಕಗಳನ್ನು ನಾಶಮಾಡುವ ಕೆಲಸದಲ್ಲಿ ಪ್ರವೃತ್ತನಾಗಿದ್ದೇನೆ. ನೀನು ಯುದ್ಧ ಮಾಡದಿದ್ದರೂ ಪ್ರತಿಪಕ್ಷದ ಸೈನಿಕರು ಸಾಯುತ್ತಾರೆ ಎಂಬುದು ಇದರ ಸ್ಥೂಲಾರ್ಥ. ಈ ಶ್ಲೋಕದಲ್ಲಿ ಕಾಲ ಎಂದಿರುವುದು death ಆಗುವುದು ಹೇಗೆ? ವಿಶೇಷವೆಂದರೆ, ಮೇಲೆ ಹೇಳಿದ Arthur W. Ryderನು ಗೀತೆಯನ್ನು ಆ ಕಾಲದಲ್ಲಿ ಅನುವಾದ ಮಾಡಿದ್ದ, ಅವನ ಅನುವಾದದಲ್ಲಿ ಈ ಶ್ಲೋಕ ಹೀಗಿದೆ: Death am I, and my present task Destruction. View in me The active slayer of these men; For though you fail and flee. These captains of the hostile hosts Shall die, shall cease to be. ನಾನು ಕಾಲನಾಗಿದ್ದೇನೆ ಎಂಬುದನ್ನು ಇಲ್ಲಿ Death am I ಎಂದು ಅನುವಾದ ಮಾಡಲಾಗಿದೆ. ಕಾಲ ಎಂಬ ಶಬ್ದಕ್ಕೆ ಯಮ, ಮೃತ್ಯುದೇವತೆ ಎಂಬ ಅರ್ಥವೂ ಇದೆಯಲ್ಲ, ಇದೇ ಅರ್ಥ ರೈಡರನ ಮನಸ್ಸಿನಲ್ಲಿ ಇದ್ದಿರಬಹುದು. ಓಪನ್ಹೈಮರನ Now, I am become Death ಎಂಬ ಸಾಲಿಗೆ ಇದೇ ಸ್ಫೂರ್ತಿ ಇರಬಹುದೇನೋ. ಲೋಕಕ್ಷಯಕೃತ್ ಪ್ರವೃತ್ತಃ(ಲೋಕವನ್ನು ಕ್ಷಯ ಮಾಡುವುದರಲ್ಲಿ ನಾನು ಪ್ರವೃತ್ತನಾಗಿದ್ದೇನೆ) ಎಂಬುದನ್ನು ರೈಡರ್ "my present task Destruction" ಎಂದು ಅನುವಾದ ಮಾಡಿದ್ದಾನೆ. ಓಪನ್ಹೈಮರನ "the destroyer of worlds" ಎನ್ನುವ ಭಾಗಕ್ಕೆ ಇದೇ ಅಥವಾ ಮೂಲದ ಲೋಕಕ್ಷಯಕೃತ್ ಎಂಬುದೇ ಸ್ಫೂರ್ತಿಯಿರಬಹುದು.
ಪುಸ್ತಕವೊಂದರ ಪ್ರಕಾರ, ಇನ್ನೇನು ಬಾಂಬು ಮೊದಲ ಸಲ ಪರೀಕ್ಷೆಯಾಯಿತು ಎನ್ನುವಾಗ ಓಪನ್ಹೈಮರನ ತಲೆಯಲ್ಲಿ ಗೀತೆಯ If the radiance of a thousand suns were to burst into the sky, that would be like the splendor of the Mighty One ಎಂಬ ಸಾಲು ಬಂದಿತ್ತಂತೆ. ಇದೂ ಗೀತೆಯ ಅದೇ ಅಧ್ಯಾಯದಲ್ಲಿಯೇ ಸ್ವಲ್ಪ ಹಿಂದೆ ಬರುವ ಶ್ಲೋಕ. ಮೂಲ ಹೀಗಿದೆ: ದಿವಿ ಸೂರ್ಯಸಹಸ್ರಸ್ಯ ಭವೇದ್ ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾದ್ ಭಾಸಸ್ತಸ್ಯ ಮಹಾತ್ಮನಃ (ಸಾವಿರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ, ಅದರ ಪ್ರಕಾಶವು ಎಷ್ಟಾಗುತ್ತದೋ ಅದು ಆ ಮಹಾತ್ಮನ(ಕೃಷ್ಣನ ವಿಶ್ವರೂಪದ) ಬೆಳಕನ್ನು ಸರಿಗಟ್ಟೀತು! ಎಂದು ಇದರ ಅರ್ಥ), ನಮಗೆ ಇದನ್ನು ಓದುವಾಗ, "ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ" ಎಂಬ ಸಾಲೂ ಅಯಾಚಿತವಾಗಿ ನೆನಪಾಗುತ್ತದೆ. ಗೀತೆಯಲ್ಲಿಸಾವಿರ ಸೂರ್ಯರಾದರೆ, ಇಲ್ಲಿ ಕೋಟಿ ಸೂರ್ಯರು! ಇಲ್ಲಿಯೂ ಗೀತೆಯ ಶ್ಲೋಕವನ್ನು ವಿಜ್ಞಾನಿಯು ಸಂದರ್ಭಕ್ಕೆ ಸರಿಯಾಗಿಯೇ ಅಳವಡಿಸಿಕೊಂಡಿದ್ದಾನೆ.
ಆದರೆ, ಅಷ್ಟು quote ಆಗದ ಆದರೆ ಓಪನ್ಹೈಮರ್ ತುಂಬ ನೆಚ್ಚಿಕೊಂಡ ಸಾಲೆಂದರೆ "ಕಮರ್ಣ್ಯೇವಾದಿಕಾರಸ್ತೇ ಮಾ ಫಲೇಶು ಕದಾಚನ" ಎಂಬ ಸಾಲು. ಇದರ ಇಂಗ್ಲಿಷ್ ಆವೃತ್ತಿಯನ್ನು ಅವನು ಆಗಾಗ ಹೇಳಿದ್ದಿತ್ತು. "ವಿಜ್ಞಾನವನ್ನು ಬಳಸಿ ಬಾಂಬಿನ ಕೆಲಸ ಮಾಡುವುದು ಮಾತ್ರ ನಮ್ಮ ಕರ್ತವ್ಯ. ಅದು ಹೇಗೆ ಬಳಸಲ್ಪಡುತ್ತದೆ ಎಂಬುದು ನಮ್ಮ ಕೈಯಲ್ಲಿಲ್ಲ" ಎಂಬ ನಿಲುವನ್ನು ಅವನು ಈ ಶ್ಲೋಕದ ಆಧಾರದ ಮೇಲೆ ತಾಳಿದ್ದ ಎನ್ನುವುದಕ್ಕೆ ಅವಕಾಶವಿದೆ. ಇದನ್ನೇ ಹೋಲುವ ಸಾಲುಗಳು ಸಿನಿಮಾದಲ್ಲಿಯೂ ಬರುತ್ತದೆ. ಈ ಸಾಲು ಅವನಿಗೆ ಮಸುಕಿದ ಮಬ್ಬಿನಲ್ಲಿ ಕೈಹಿಡಿದು ಮುನ್ನಡೆಸುವ ಬೆಳಕಿನಂತೆ ಎಂಬುದು ವಿಶೇಷ.
ಸದ್ಯಕ್ಕೆ ಇಷ್ಟು.

No comments:

Post a Comment