Wednesday, 17 September 2025

ಏಳುಮಲೆ ಕನ್ನಡ ಸಿನೆಮಾ

 ಇನ್ನೊಂದು ವಾರದ ಒಳಗೇ ಒಂದೊಳ್ಳೆ ಕನ್ನಡ ಸಿನೆಮಾವನ್ನು ನೋಡಬೇಕು ಎನ್ನುವವರು ನೀವಾದರೆ ಹೀಗೆ ಮಾಡಿ: 'ಏಳುಮಲೆ' ಎಂಬ ಹೊಸಚಿತ್ರವನ್ನು ನೋಡಿಬಿಡಿ. ಚಿತ್ರವು ಶುರುವಾದ ಮೇಲೆ ಅತ್ತಿತ್ತ ಅಲುಗಾಡುವಂತೆಯೋ, ಕುರ್ಚಿ ಬಿಟ್ಟು ಏಳುವಂತೆಯೋ ಇಲ್ಲ; ಪ್ರದರ್ಶನವು ಶುರುವಾಗುವ ಮೊದಲು ಚಿತ್ರತಂಡದವರು ರಹಸ್ಯ ಕಾರ್ಯಾಚರಣೆಯೊಂದನ್ನು ಮಾಡಿ, ಕುರ್ಚಿಗಳಿಗೆ ಫೆವಿ ಕ್ವಿಕ್ ಅನ್ನು ಅಂಟಿಸಿದ್ದಾರೋ ಎನ್ನಿಸಬೇಕು—ಅಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಚಿತ್ರವು ಹಿಡಿದಿಡುತ್ತದೆ. ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಮಲೆಮಹದೇಶ್ವರ ಬೆಟ್ಟ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಥ್ರಿಲ್ಲರ್ ಕಥೆಯಿದು. ಟೈಗರ್ ಅಶೋಕ್ ಕುಮಾರ್ ಅವರು ವೀರಪ್ಪನ್ ವಿರುದ್ಧ ನಡೆದ ಕಾರ್ಯಾಚರಣೆಯ ಕಥೆಗಳನ್ನು ಹೇಳುತ್ತಿದ್ದಾಗ ಪ್ರಸ್ತಾವಿಸುತ್ತಿದ್ದ ಜಾಗಗಳಲ್ಲಿ ಅಥವಾ ವೀರಪ್ಪನ್ನನ ಕಾರ್ಯಕ್ಷೇತ್ರ ಎನ್ನಬಹುದಾದ ಜಾಗಗಳಲ್ಲಿ ಇದರ ಕಥೆಯು ಬಿಚ್ಚಿಕೊಳ್ಳುತ್ತದೆ. ಈ ಪರಿಸರದ ಕಥೆಯನ್ನು ಆಯ್ದುಕೊಂಡಿರುವುದರಲ್ಲೇ ನಿರ್ದೇಶಕರು ಅರ್ಧ ಗೆದ್ದಿದ್ದಾರೆ.

ಈ ಕಥೆಯು ಇಂಥದ್ದೇ ಪ್ರಕಾರದ ಕಥೆಯೆಂದು ಹೇಳುವುದು ಕಷ್ಟ. ಅಲೆಹಾಂದ್ರೋ ಗೊನ್ಜಾಲೆಸ್ ಇನರಿತು ಅವರ ಅಮೋರಸ್ ಪೆರ್ರೋಸ್, ಬ್ಯಾಬೆಲ್ ಮೊದಲಾದ ಚಿತ್ರಗಳು ಬಂದ ಮೇಲೆ ಹೈಪರ್‌ಲಿಂಕ್‌ ಸಿನೆಮಾ ಎಂಬ ಪ್ರಕಾರವು ಪ್ರಚಾರಕ್ಕೆ ಬಂತು, ಎರಡು ಮೂರು ಬೇರೆ ಬೇರೆ ಎಳೆಗಳನ್ನು ತೋರಿಸುತ್ತಾ ಬಂದು, ಕೊನೆಗೆ ಅವೆಲ್ಲ ಒಂದಕ್ಕೊಂದು ತಳುಕು ಹಾಕಿಕೊಳ್ಳುವ ಹಾಗೆ ಮಾಡುವುದು ಇಂತಹ ಚಿತ್ರಗಳ ಶೈಲಿ. ನಮ್ಮಲ್ಲೂ ನಾಗೇಶ್ ಕುಕುನೂರ್ ಅವರ ತೀನ್ ದೀವಾರೇ, ತಮಿಳಿನ ಮಾನಗರಮ್, ಸೂಪರ್ ಡಿಲಕ್ಸ್ ಮುಂತಾದವು ಇದೇ ಪ್ರಕಾರದವು. ಏಳುಮಲೆಯು ತಕ್ಕಮಟ್ಟಿಗೆ ಇದೇ ತರಹದ ಚಿತ್ರ. ಇದು ಮೂಲದಲ್ಲಿ ಪ್ರೇಮಕಥೆಯೇ ಹೌದಾದರೂ ಇದರಲ್ಲಿ Road movies, Hitchcockian movies (ಜನಸಾಮಾನ್ಯನು ಚಕ್ರವ್ಯೂಹದಂತಹ ಸನ್ನಿವೇಶಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು; ordinary people in extraordinary situations) ಮುಂತಾದ ಪ್ರಕಾರಗಳ ಛಾಯೆಯೂ ಉಂಟು. ಪ್ರೇಮಕಥೆ ಎಂದಾಗ ನಾವು ಸಾಧಾರಣವಾಗಿ ನಿರೀಕ್ಷೆ ಮಾಡುವ ಯಾವ ಅಂಶಗಳೂ ಇಲ್ಲಿಲ್ಲ. ಇದು ಬಹುಮಟ್ಟಿಗೆ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದ್ದರಿಂದ ಏಕ್ ಚಾಲೀಸ್ ಕೀ ಲಾಸ್ಟ್ ಲೋಕಲ್, ಕೈಥಿ, ಮ್ಯಾಕ್ಸ್ ಮುಂತಾದ ಚಿತ್ರಗಳ ಪ್ರಕಾರಕ್ಕೂ ಸೇರಿದ್ದೆನ್ನಬಹುದು.
"ಚಿತ್ರಮಂದಿರದಲ್ಲಿ ಆಮ್ಲಜನಕದ ಪ್ರಮಾಣವನ್ನು ಕಡಮೆ ಮಾಡಿದರೂ ತೊಂದರೆಯಿಲ್ಲ; ಯಾಕೆಂದರೆ ಪ್ರೇಕ್ಷಕರಿಗೆ ಉಸಿರಾಡಲಿಕ್ಕೆ ಪುರುಸೊತ್ತೇ ಇಲ್ಲ" ಎನ್ನಿಸುವಂತೆ ಯಾವುದೇ ಅನಗತ್ಯ ಮಸಾಲೆಗಳನ್ನು ತುರುಕದೆ ಸರಸರನೆ ಘಟನೆಗಳನ್ನು ಪೋಣಿಸಿಕೊಂಡು ಹೋಗಿ, ಸಸ್ಪೆನ್ಸ್ ಮತ್ತು ಟೆನ್ಶನ್ ಹೆಚ್ಚುವಂತೆ ಮಾಡಿರುವುದರಲ್ಲಿ ನಿರ್ದೇಶಕ, ಚಿತ್ರಕಥೆಗಾರ ಪುನೀತ್ ರಂಗಸ್ವಾಮಿಯವರ ಗೆಲುವಿದೆ. ರಿಷಬ್, ರಕ್ಷಿತ್, ರಾಜ್ ಅವರು ದಕ್ಷಿಣ ಕನ್ನಡದ ಕಥೆಗಳನ್ನು ಹೇಳಿದಂತೆ ಎಲ್ಲರೂ ಅವರವರ ಪ್ರದೇಶದ ವಿಶಿಷ್ಟವಾದ ಕಥೆಗಳನ್ನು ಹೇಳಿದರೆ ಚಿತ್ರರಂಗವು ಶ್ರೀಮಂತವಾಗುತ್ತದೆ ಎಂದು ನನಗನ್ನಿಸುವುದುಂಟು. ಇಲ್ಲಿ ನಿರ್ದೇಶಕರು ತಾವು ನೋಡಿದ ಚಾಮರಾಜನಗರದ ಸುತ್ತಮುತ್ತಲಿನ ಪ್ರದೇಶಗಳ ಕಥೆಯನ್ನು ಹೇಳಿ ಅದನ್ನು ಸಾಧಿಸಿದ್ದಾರೆ; ಮಂಡ್ಯ ಮೈಸೂರು ಕಡೆಯವರು ಚಿತ್ರರಂಗದಲ್ಲಿ ಹಲವರು ಬಂದಿದ್ದರೂ ಇಂಥ ಕಥೆಯೊಂದನ್ನು ಹೆಣೆದಿರಲಿಲ್ಲ ಎಂಬುದು ಗಮನಾರ್ಹ. ಏನೇ ಇರಲಿ, ಸು ಫ್ರಮ್ ಸೋ ಆಯಿತು, ಈಗ ಏಳುಮಲೆ ಬಂದಿದೆ, ಮುಂದೆ ಕಾಂತಾರ ಬರಲಿದೆ. ಕನ್ನಡ ಚಿತ್ರಗಳನ್ನು ಹೊಗಳುವವರಿಗೆ ಕೈತುಂಬ ಕೆಲಸ ಸಿಗುವುದನ್ನು ನೋಡುವುದೂ ಸಂತೋಷದ ವಿಷಯವೇ. ನೀವೂ ಚಿತ್ರಮಂದಿರದ ಕಡೆಗೆ ಹೋಗಿ, ನೋಡಿ, ಹೇಗನ್ನಿಸಿತು ಎಂದು ತಿಳಿಸಿ.

No comments:

Post a Comment