ಎಲ್ಲರ ಕನ್ನಡ ಭಾಗ ಎರಡು(ಭಾಗ ಮೂರು ನಾಲ್ಕುಗಳೂ ಬರುತ್ತವೆಯೇ ಅಂತ ಹೆದರಬೇಡಿ, ಇದೇನು ಮೆಗಾ ಸೀರಿಯಲ್ಲಾಗುವುದಿಲ್ಲ!). ಶಂಕರ ಭಟ್ಟರು ಮತ್ತವರ ಅಭಿಮಾನಿಗಳು ಎತ್ತುವ ಇನ್ನೊಂದು ಮುಖ್ಯ ವಿಚಾರವನ್ನು ಮುಟ್ಟಿ ತಟ್ಟಿ ಕುಟ್ಟಿ ನೋಡೋಣವಂತೆ. ಟೆಕ್ನಿಕಲ್ ಟರ್ಮ್ಸ್ ಅಥವಾ ಪಾರಿಭಾಷಿಕ ಪದಗಳು ಅಥವಾ ಅರಿಮೆಯ ಪದಗಳ ತಂಟೆಗೆ ಹೋಗುವ ಧೈರ್ಯ ಮಾಡೋಣ. ನಮ್ಮಲ್ಲಿ ಇರುವ ಬಹುಮಟ್ಟಿಗಿನ ಟೆಕ್ನಿಕಲ್ ಟರ್ಮುಗಳು ಸಂಸ್ಕೃತದವು, ಇದರಿಂದಾಗಿ ಮಕ್ಕಳಿಗೆ ವಿಜ್ಞಾನ, ಗಣಿತಗಳು ಕಷ್ಟವಾಗಿವೆ, ಇವುಗಳ ಬದಲಿಗೆ ಎಲ್ಲರ ಕನ್ನಡದ ಪದಗಳನ್ನು ಹಾಕಿಬಿಟ್ಟರೆ ವಿಜ್ಞಾನ, ಗಣಿತಗಳ ಕಬ್ಬಿಣ ಕರಗಿ ಅವು ಬೇಯಿಸಿದ ಮಸಾಲೆ ಕಡಲೆಗಳಾಗಿಬಿಡುತ್ತವೆ ಅನ್ನುವುದು ಈ ವಾದದ ಒಟ್ಟು ಸಾರ. ವಿಷಯ ಅಷ್ಟು ಸರಳವಾಗಿಯೇನೂ ಇಲ್ಲ ಅಂತ ನನಗನ್ನಿಸಿದ್ದರಿಂದ ಇಷ್ಟು ಬರೆದಿದ್ದೇನೆ.
ನಮ್ಮಲ್ಲಿ ವಿಜ್ಞಾನ ಹೇಳಿಕೊಡುವಾಗ Concave and convex lensಗಳ ಪಾಠ ಮಾಡುವಾಗ ಅವುಗಳನ್ನು ನಿಮ್ನದರ್ಪಣ, ಪೀನದರ್ಪಣ ಅಂತೆಲ್ಲ ಸಂಸ್ಕೃತ ಪದಗಳಲ್ಲಿ ಹೇಳುತ್ತಾರೆ, ಇದರ ಬದಲು ಉಬ್ಬುಗನ್ನಡಿ, ತಗ್ಗುಗನ್ನಡಿ ಅಂತ ಹೇಳಿಕೊಟ್ಟಿದ್ದರೆ ವಿಜ್ಞಾನ ಸುಲಭವಾಗುತ್ತಿತ್ತು ಅನ್ನುವುದು ಎಲ್ಲರ ಕನ್ನಡದ ಎಲ್ಲರ ಫೇವರಿಟ್ ಉದಾಹರಣೆ. ಈ ವಾದವನ್ನೇ ರಾಘವೇಂದ್ರ ಮಾಯಕೊಂಡ ಅವರು ಇನ್ನೊಂದು ರೀತಿ ಹೀಗೆ ಹೇಳಿದ್ದಾರೆ(ಅವರ ಲೇಖನ ಕೆಳಗಿದೆ): "ಬೆಳಕು ಇಲ್ಲಾ ಯಾವುದೇ ಅಲೆ ಒಂದು Mediumನಿಂದ ಇನ್ನೊಂದು ಮೀಡಿಯಂಗೆ ನುಗ್ಗಿದಾಗ ಅದು ತನ್ನ ದಿಕ್ಕನ್ನ ಸ್ವಲ್ಪ ಬದಲಾಯಿಸತ್ತೆ.ಇದಕ್ಕೆ ಬೆಳಕಿನ ವಕ್ರೀಭವನ ಅಂತಾರಂತೆ. ಇದನ್ನೇ ಬೆಳಕಿನ ವಾರೆಯಾಗುವಿಕೆ ಅಂದ್ರೆ ಎಲ್ಲಾರ್ಗೂ ಅರ್ಥ ಆಗ್ತಿರಲಿಲ್ವಾ?"
ಮೇಲುನೋಟಕ್ಕೆ, "ಹೌದಲ್ಲವೇ, ಎಷ್ಟು ಚೆನ್ನಾಗಿದೆ" ಅನ್ನಿಸುವ ವಾದ ಇದು. "ಅಯ್ಯೋ , ಸಂಸ್ಕೃತದವರು ಬಂದು ಮಕ್ಕಳಿಗೆ ವಿಜ್ಞಾನ ಅರ್ಥವಾಗದ ಹಾಗೆ ಮಾಡಿದರಲ್ಲ" ಅಂತ ತೋರಲಿಕ್ಕೂ ಸಾಕು. ಇದರಲ್ಲಿ ತಪ್ಪೇನೂ ಇಲ್ಲ, ಅರ್ಥವಾಗದ ಪದಗಳ ಬದಲು ಅರ್ಥವಾಗುವ ಪದಗಳಿದ್ದರೆ ಒಳ್ಳೆಯದೇ , ಆದರೆ ಇಷ್ಟು ಮಾಡಿಬಿಟ್ಟರೆ ಸಮಸ್ಯೆ ಪರಿಹಾರವಾಗಿ, ನಾವು ಮಜ್ಜಿಗೆ ಕುಡಿದು ಮಲಗಬಹುದು ಎಂಬುದು ಮಾತ್ರ ನಿಸ್ಸಂದೇಹವಾಗಿಯೂ ಒಂದು ಕ್ಲಿಷ್ಟ ಸಮಸ್ಯೆಗೆ ಒಂದು oversimplified ಪರಿಹಾರವಾಗುತ್ತದೆ! ಯಾಕೆ ಅಂತ ನೋಡೋಣ.
ಈಗ Concave ಲೆನ್ಸ್ , convex lensಗಳನ್ನು ಉಬ್ಬು ಗಾಜು, ತಗ್ಗು ಗಾಜು ಅಂತಲೇ ಹೇಳಿದೆವು ಅಂತಿಟ್ಟುಕೊಳ್ಳಿ. ಉಬ್ಬು ಗಾಜು ಅಂದರೆ ಉಬ್ಬಿರುವ ಗಾಜು ಅಂತ ಬರೆದು ಕೈಮುಗಿದರೆ ನಿಮಗೆ ಯಾವ ವಿಜ್ಞಾನದ ಮಾಷ್ಟ್ರೂ ನೂರಕ್ಕೆ ಐವತ್ತು ಅಂಕಗಳನ್ನೂ ಕೊಡಲಾರ. ಉಬ್ಬು ಗಾಜು ಅಂದರೆ ಉಬ್ಬಿರುವ ಗಾಜು ಅಂತ ಹೇಳಲಿಕ್ಕೆ ಯಾವ ವಿಜ್ಞಾನಿಯೂ ಬೇಕಾಗಿಯೂ ಇಲ್ಲ ! ಅದು ವಿಜ್ಞಾನವಾಗಬೇಕಾದರೆ ನಿಮಗೆ axis, focal length ಎಂಬ ವಿಷಯಗಳು ತಲೆಗೆ ಹೋಗಬೇಕು, focal points, radius of curvature ಇತ್ಯಾದಿ ರಾಕ್ಷಸರಂಥ ಪದಗಳು ಅರ್ಥ ಆಗಬೇಕು , distance from the object to the lens, the distance from the lens to the image ಮುಂತಾದ ವಿಚಾರಗಳು ಕಣ್ಣ ಮುಂದೆ ಸುಳಿಯಬೇಕು. ಮತ್ತು ಇವನ್ನೆಲ್ಲ ಉಪಯೋಗಿಸಿ ಒಂದು ಗಣಿತದ ಫಾರ್ಮುಲಾ ಹಾಕಿ ಲೆಕ್ಕ ಬಿಡಿಸಲು ಬರಬೇಕು. ಇವೆಲ್ಲ ಎಷ್ಟೋ ಸಲ ಪಾಠ ಮಾಡುವ ಶಿಕ್ಷಕರಿಗೇ ಅರ್ಥ ಆಗಿರುವುದಿಲ್ಲ, ಅವರು ಮಕ್ಕಳಿಗೆ ಏನು ಅಂತ ಹೇಳಿಯಾರು ! ಈಗ ಹೇಳಿ axis, focal length, focal points radius of curvature, distance from the object to the lens, the distance from the lens to the image, ಅದರ ಹಿಂದಿರುವ ಗಣಿತ ಈ ಎಲ್ಲ ಗೋಜಲುಗಳಿಂದ, ತಲೆಗಿಳಿಯದ ಕಾನ್ಸೆಪ್ಟುಗಳ ಭಾರದಿಂದ ವಿಜ್ಞಾನ ಕಷ್ಟ ಆಗುವುದೋ, ಪೀನದರ್ಪಣ ಎಂಬ ಸಂಸ್ಕೃತ ಪದದಿಂದಲೋ !
ವಕ್ರೀಭವನವನ್ನು ಒಂದುವೇಳೆ ಬೆಳಕಿನ ವಾರೆಯಾಗುವಿಕೆ ಅಂತ ನಾವು ಸುಲಭ ಮಾಡಿಕೊಂಡೆವು ಅಂದುಕೊಳ್ಳಿ. ಅದಿದ್ದರೂ Angle of Incidence, Angle of Refraction, index of refraction of the incident medium, index of refraction of the refractive medium ಮುಂತಾದ ಭೂತ ಬೇತಾಳಗಳಂತೆ ಕಾಣುವ ಕಾನ್ಸೆಪ್ಟುಗಳನ್ನು ಮಕ್ಕಳು ಕಲಿಯಲೇ ಬೇಕು. ಇವು ಅಧ್ಯಾಪಕರಿಗೆ ಅರ್ಥವಾದರೇ ಪುಣ್ಯ, ಇನ್ನು ಮಕ್ಕಳಿಗೆ ಅರ್ಥಮಾಡಿಸುವಂಥಾ ಗುರುಗಳು ಸಿಕ್ಕಿದರೆ ಮಕ್ಕಳದು ದುಪ್ಪಟ್ಟು ಪುಣ್ಯ. ಇಷ್ಟಾದ ಮೇಲೆ, n1 sin θ1 = n2 sinθ2 ಎಂಬ ಅರ್ಥವಾಗದ ಫಾರ್ಮುಲಾ ಕಲಿಯದೇ ಬೆಳಕಿನ ವಾರೆಯಾಗುವಿಕೆ ಅಂತ ಮಾತ್ರ ಹೇಳಿದರೆ ಯಾವ ಪರೀಕ್ಷೆಯಲ್ಲಿಯೂ ಮೇಲೆ ಬೀಳುವುದು ಸುಲಭವಲ್ಲ. ವಿಜ್ಞಾನವು ತ್ರಾಸದಾಯಕವಾಗುವುದಕ್ಕೆ ಈ ಎಲ್ಲ ಕಷ್ಟದ ಕಾನ್ಸೆಪ್ಟುಗಳನ್ನು ದೂರಬೇಕೋ, ಎಲ್ಲ ಪಾಪವನ್ನೂ ವಕ್ರೀಭವನ ಎಂಬ ಪಾಪದ ಸಂಸ್ಕೃತ ಶಬ್ದದ ತಲೆಗೆ ಕಟ್ಟಬೇಕೋ ! ಯೋಚನೆ ಮಾಡಿ.
ಈಗ ನಾನು ಪ್ರತಿಯೊಬ್ಬರ ಕನ್ನಡ ಅಂತ ಮಾಡಿದೆ ಅಂತಿಟ್ಟುಕೊಳ್ಳಿ. ಅದರಲ್ಲಿ Einstein's theory of general relativity ಅನ್ನು "ಬೆಳಕಿನ ವಿಚಿತ್ರ ಚೇಷ್ಟೆಗಳ ಕಿತಾಪತಿ" ಎಂಬ ಸುಲಭದ ಹೆಸರಿನಿಂದ ಕರೆದೆ ಅಂದುಕೊಳ್ಳಿ! ಹೀಗಂದ ಮಾತ್ರಕ್ಕೆ theory of relativity ಎಲ್ಲರಿಗೂ ಸುಲಭವಾಗುವಂತಿದ್ದರೆ ಎಷ್ಟು ಒಳ್ಳೆಯದಿತ್ತು ! ನಮ್ಮ ಎಲ್ಲ ಪೀಯೂಸಿ ದಾಟಿದ ಹುಡುಗರೂ "ಬೆಳಕಿನ ವಿಚಿತ್ರ ಚೇಷ್ಟೆಗಳ ಕಿತಾಪತಿ" ಎಂಬ ಸುಲಭದ ಹೆಸರಿರುವ ವಿಷಯ ಕಲಿತು ಜಗತ್ಪ್ರಸಿದ್ಧ ವಿಜ್ಞಾನಿಗಳಾಗಬಹುದಿತ್ತು. ಹಾಗೆಯೇ Quantum physics ಅನ್ನುವುದಕ್ಕೆ "ಪರಮಾಣುಗಳ ಮಂಗ ಬುದ್ಧಿ" ಎಂಬ ಎಲ್ಲರಿಗೂ ಅರ್ಥ ಆಗುವ ಹೆಸರು ಕೊಡಬಹುದು. ಹಾಗೆ ಮಾಡಿದರೆ ನಮ್ಮಲ್ಲಿ Quantum physics ಅನ್ನು ಅರ್ಥ ಮಾಡಿಕೊಂಡ ವಿಜ್ಞಾನಿಗಳ ದಂಡೇ ಹೊರಟೀತೆ ? ಕಠಿಣ ಪದಗಳಿಗೆ ಸುಲಭದ, ಬೇಕಾದರೆ ಕೆಲವು ಕಡೆಗಳಲ್ಲಿ ಎಲ್ಲರ ಕನ್ನಡದ ಪದಗಳೇ ಬರಲಿ, ಅಡ್ಡಿಯೇನಿಲ್ಲ, ಆದರೆ ಅದು ಶಿಕ್ಷಣದ ಸಮಸ್ಯೆಯ ಶೇಕಡಾ ಒಂದು ಭಾಗ ಮಾತ್ರ ಅಂತ ನೆನಪಿರಲಿ. ವಿಷಯ ಅರ್ಥ ಮಾಡಿಸುವುದು, ವಿಜ್ಞಾನಿ ಅದನ್ನು ಯಾಕೆ ಕಂಡುಹಿಡಿದ ಅನ್ನುವ ಹಿನ್ನೆಲೆ ಹೇಳುವುದು, ಪ್ರಾಕ್ಟಿಕಲ್ ಅಪ್ಪ್ಲಿಕೇಷನ್ನಿನ ಮೇಲೆ ಒಟ್ಟು ಕೊಡುವುದು, ವಿಡಿಯೋ ತೋರಿಸುವುದು, ಪ್ರಯೋಗ ಮಾಡಿ ತೋರಿಸುವುದು, ತತ್ತ್ವದ ನಿಜವಾಗಿಯೂ ಏನನ್ನು ಹೇಳಲು ಹೊರಟಿದೆ ಅನ್ನುವುದನ್ನು ಸುಲಭವಾಗಿ ಹೇಳುವುದು ಮುಂತಾದ ತಂತ್ರಗಳು ವಿಜ್ಞಾನ, ಗಣಿತಗಳನ್ನು ಕಲಿಸಲು ಬೇಕು.
ಕಷ್ಟ ಸುಲಭಗಳು ಪದಗಳಿಂದ, ಮಹಾಪ್ರಾಣಗಳಿಂದ ಆಗುವುದಲ್ಲ, ವಿಚಾರಗಳಿಂದ, ಕಾನ್ಸೆಪ್ಟುಗಳಿಂದ ಅನ್ನುವುದಕ್ಕೆ ಸಾಹಿತ್ಯದಿಂದಲೂ ಉದಾಹರಣೆಗಳನ್ನು ತೆಗೆದುಕೊಳ್ಳಬಹುದು. ಬೇಂದ್ರೆಯವರ ಈ ಸಾಲುಗಳನ್ನು ಓದಿ :
ಸಲಿಗೆಯ ಸುಲಿಗೆಯ/ಬಯಕೆಯ ಒಲುಮೆ/ಬಯಲಿನ ನೆಯ್ಗೆಯ ಸಿರಿಯುಡುಗಿ;
ನಾಡಿಯ ನಡಿಗೆಯ/ನಲುವಿನ ನಾಲಿಗೆ/ನೆನೆದಿರೆ ಸೋಲುವ ಸೊಲ್ಲಿನಲಿ;
ಮುಟ್ಟದ ಮಾಟದ/ಹುಟ್ಟದ ಹುಟ್ಟಿಗೆ/ಜೇನಿನ ಥಳಿಮಳಿ ಸನಿಹ ಹನಿ;
ಇದರಲ್ಲಿ ಸಂಸ್ಕೃತದ ಮೆರವಣಿಗೆ ಇಲ್ಲ, ಒತ್ತಕ್ಷರಗಳೂ ಕಡಮೆ, ಅಪ್ಪಟ ಕನ್ನಡ ಪದಗಳೇ ತುಂಬಿವೆ. ಮಹಾಪ್ರಾಣಗಳ ಹಾರಾಟ ಇಲ್ಲ, ಅರ್ಥವಾಗದ ಪದಗಳೂ ಹೆಚ್ಚಿಲ್ಲ, ಆದರೆ ಈ ಕಾವ್ಯದ ಸಾಲುಗಳು ಎಷ್ಟು ಜನರಿಗೆ ಅರ್ಥವಾಗಬಹುದು ? ಕಷ್ಟವಾಗುವದು ಸಂಸ್ಕೃತದಿಂದಲೋ ಮಹಾಪ್ರಾಣದಿಂದಲೋ ಅಲ್ಲ ಅಂತ ಕಷ್ಟವಿಲ್ಲದೆ ಅರ್ಥವಾಗಲು ಇದು ಸಾಕಲ್ಲವೇ ?
ಅಥವಾ ಅವರದ್ದೇ ಈ ಸಾಲುಗಳನ್ನು ನೋಡಿ :
ಬ್ರಹ್ಮದಿಂದ ಅಗಲಿಸಿತು ಮಾಯೆ ಆ ಬ್ರಹ್ಮಕದುವೆ ಸೇತು/ ಬೀಜವೊಡೆಯೆ ಆ ಬೀಜ ಪಡೆಯೆ ಬರುವಂತೆ ಬೀಜ ಹೂತು/ ಇಹುದು ಅಂದರದು ಇಹುದು ಇದಿರು;ಇದು ಅಲ್ಲವೆಂದರಿಲ್ಲ/ದೇವಮಾಯೆ ಅದರಾಟ ಮಾಟಗಳ ಬಳ್ಳನೊಬ್ಬ ಬಲ್ಲ
ಇದರಲ್ಲಿ ಮಹಾಪ್ರಾಣಗಳು ಎಲ್ಲಿವೆ ? ಡಿಕ್ಷನರಿ ನೋಡಬೇಕಾದ ಪದಗಳು ಎಷ್ಟಿವೆ ? ಬ್ರಹ್ಮ, ಮಾಯೆ ಮುಂತಾದ ಸಂಸ್ಕೃತ ಪದಗಳು ಇದ್ದರೂ ಅವು ಕನ್ನಡಿಗರಿಗೆ ಪರಿಚಿತವಾದವೇ ಆಗಿವೆ . ಇಷ್ಟು ಸುಲಭದ ಪದಗಳಿದ್ದರೂ ಈ ಸಾಲುಗಳ ಅರ್ಥ ಮಾತ್ರ ಸರಾಗವಲ್ಲ. ಶಂಕರಾಚಾರ್ಯರ ವಾದಗಳು, ಉಪನಿಷತ್ತು ಎಲ್ಲ ಗೊತ್ತಿಲ್ಲದಿದ್ದರೆ ಇದು ಗ್ರಹಿಕೆಗೆ ಸಿಕ್ಕಲಾರದು.
ಇಷ್ಟು ಹೇಳಿದ ಮೇಲೆ, ಶಂಕರ ಭಟ್ಟರು ಕೊಟ್ಟಿರುವ ಎಲ್ಲ ಪದಗಳೂ ವಿಷಯವನ್ನು ಸುಲಭ ಮಾಡುತ್ತವೆ ಅಂತೇನೂ ಹೇಳಲಾಗದು. ಸಂಸ್ಕೃತವನ್ನು ಓಡಿಸುವ ಉಮೇದಿನಲ್ಲಿ ಸುಲಭ ಇರುವುದನ್ನು ಕಷ್ಟ ಮಾಡಿರುವ ಉದಾಹರಣೆಗಳೂ ಹಜ್ಜೆಗೊಂದರಂತೆ ಸಿಗುತ್ತವೆ ! ಚಲನಚಿತ್ರವನ್ನು ಓಡುತಿಟ್ಟ ಅಂದರೆ ಕನ್ನಡಿಗರಿಗೇ ಇದರಲ್ಲಿ ಸಂಸ್ಕೃತ ಯಾವುದು ಕನ್ನಡ ಯಾವುದು ಎಂಬ ಗೊಂದಲ ಹುಟ್ಟೀತು ! "Year" ಅನ್ನುವುದನ್ನು ಕನ್ನಡದಲ್ಲಿ ಹೇಳುವುದು ಹೇಗೆ ?ವರ್ಷ ಮತ್ತು ಸಂವತ್ಸರಗಳು ಸಂಸ್ಕೃತ, ಹಾಗಾಗಿ ಏಡು (ಉದಾ: ಆತ ಬಂದು ಏಡು ಹತ್ತಾಯಿತು), ಸೂಳು ಎಂಬ ಪದಗಳನ್ನು ಭಟ್ಟರು ಕೊಡುತ್ತಾರೆ ! ವರ್ಷ, ಸಂವತ್ಸರಗಳು ಸುಲಭವೋ ಏಡು, ಸೂಳುಗಳು ಸುಲಭವೋ ? "Teacher"? ಶಿಕ್ಷಕ, ಗುರು,ಉಪಾಧ್ಯಾಯ, ಅಧ್ಯಾಪಕ ಎಲ್ಲ ಸಂಸ್ಕೃತವಾದವು. ಶಂಕರ ಭಟ್ಟರು ಕಲ್ಲಾಯ್ತ, ಅಯ್ಗಳು,ಕಲಿಸುಗ ಮುಂತಾದ ಪದಗಳನ್ನು ಕನ್ನಡದ ಪದಗಳು ಅಂತ ಕೊಡುತ್ತಾರೆ. ಕಲ್ಲಾಯ್ತ, ಅಯ್ಗಳು,ಕಲಿಸುಗ ಅಂತ ಬರೆದವರಿಗೆ ಅದರ ಅರ್ಥ ಏನು ಬ್ರಾಕೆಟ್ಟಿನಲ್ಲಿ ಹೇಳಬೇಕಾದ ಕೆಲಸ ಅನಿವಾರ್ಯವಾಗುವುದಿಲ್ಲವೇ ?
Rule ಅನ್ನುವುದಕ್ಕೆ ನಿಯಮ, ವಿಧಿ, ಸೂತ್ರ, ನಿಬಂಧನೆ, ಕಟ್ಟುಕಟ್ಟಳೆ, ವಾಡಿಕೆ, ರೂಢಿ, ಅಭ್ಯಾಸ, ಪದ್ಧತಿ ಇಷ್ಟು ಪದಗಳಿರುವಾಗ ಇವನ್ನೆಲ್ಲ ಬಿಟ್ಟು ಶಂಕರ ಭಟ್ಟರು ಹೇಳುವಂತೆ ಕೋಹು (ಉದಾ :ಈ ಕೋಹಿಗೆ ತಪ್ಪಕೂಡದು), ಗೊತ್ತು (ಗೊತ್ತುವಳಿ), ತಿಟ್ಟ (ಉದಾ : ಅವನು ಹಾಕಿದ ತಿಟ್ಟವನ್ನು ಮೀರುವವರು ಯಾರು?) ಮುಂತಾದ ಪದಗಳನ್ನು ಬಳಸಿದರೆ ಕನ್ನಡ ಸುಲಭವಾಗುತ್ತದೆ ಅನ್ನುವವರಿಗೆ ಎಂಟೆದೆ ಬೇಕು. ದೂರದರ್ಶನ ಮತ್ತು ಶಂಕರ ಭಟ್ಟರ ಗೆಂಟುಕಾಣ್ಕೆಯ ನಡುವೆ ಸ್ಪರ್ಧೆಯೇ ಇಲ್ಲ ಅನ್ನಬೇಕು ! ನಮಗೆ ಗೊತ್ತಿರುವ, ಪರಿಚಯ ಇರುವ ಪದಗಳು ಸುಲಭ, ಪರಿಚಯ ಇಲ್ಲದ, ಬಳಕೆಯಲ್ಲಿಲ್ಲದ ಪದಗಳು ಕಷ್ಟ ಎಂಬ ಸೂತ್ರ ಇಟ್ಟುಕೊಂಡಿದ್ದರೆ ಈ ಗೊಂದಲ ದೂರವಾಗುತ್ತಿತ್ತೋ ಏನೋ.
ಇಷ್ಟು ಹೇಳಿದ ಮೇಲೆ ಶಂಕರ ಭಟ್ಟರ ಎಲ್ಲ ಪದಗಳೂ ಹೀಗಿವೆ ಅಂತೇನೂ ಹೇಳಲಾರೆ, magnet ಅನ್ನುವುದಕ್ಕೆ ಅಯಸ್ಕಾಂತ, ಲೋಹಚುಂಬಕ, ಸೂಜಿಗಲ್ಲು ಮುಂತಾದ ಪದಗಳಿವೆ, ಶಂಕರ ಭಟ್ಟರು ಸೆಳೆಗಲ್ಲುಅಂತ ಕೊಟ್ಟಿದ್ದಾರೆ, ಇದು ಚೆನ್ನಾಗಿದೆ. euphemism - ಸಿಹಿನುಡಿ (ಕೆಟ್ಟದ್ದನ್ನು ಹೇಳುವುದಿದ್ದರೂ ಸಿಹಿನುಡಿಯಲ್ಲೇ ಹೇಳಿ), ಬಳಸುನುಡಿ ಹೀಗೆ ಅಲ್ಲಲ್ಲಿ ಕೆಲವು ಒಳ್ಳೆಯ ಪದಗಳನ್ನು ಭಟ್ಟರು ಕೊಟ್ಟಿದ್ದಾರೆ. ಸಂಕಲನ, ವ್ಯವಕಲನಗಳಿಗಿಂತ ಕೂಡಿಸು, ಕಳೆ ಸುಲಭ ಅಂದರೆ ತೊಂದರೆಯೇನಿಲ್ಲ. ಟೆಕ್ನಿಕಲ್ ಟರ್ಮುಗಳನ್ನು ಕನ್ನಡದಲ್ಲಿ ಕಟ್ಟುವಾಗ ಶಂಕರ ಭಟ್ಟರ ಪದಗಳನ್ನೂ ಇಟ್ಟುಕೊಳ್ಳೋಣ, ಮಣ್ಣಿನ ಪರಿಮಳ ಇರುವ, ಮುದ್ದಾದ ಪದಗಳನ್ನು ಅವರು ಕೊಟ್ಟಾಗ ಸ್ವೀಕರಿಸಬಹುದು, ನಮಗೆ ಕನ್ನಡದಲ್ಲೇ ಒಳ್ಳೊಳ್ಳೆಯ ಪಾರಿಭಾಷಿಕ ಪದಗಳು ಬೇಕೆಂಬ ಕಾಳಜಿಯಿಂದ ಕೆಲಸ ಮಾಡುತ್ತಿರುವ ಪ್ರಾಮಾಣಿಕ ಗೆಳೆಯರ ಬಗ್ಗೆ ಗೌರವವೂ ಇರಲಿ. ಸಂಸ್ಕೃತವನ್ನು ಹೇಗಾದರೂ ಓಡಿಸುವ ಹಠದಿಂದಲೇ ಕಟ್ಟಿದ "ಗೆಂಟುಕಾಣ್ಕೆ"ಯಂಥವನ್ನು ಬಿಟ್ಟರಾಯಿತು ಅಷ್ಟೇ !
No comments:
Post a Comment