Wednesday, 17 September 2025

Operation Sindoor

 ಅಂತೂ ಎಲ್ಲ ಗಲಾಟೆಯು ಮುಗಿದು, ಕದನಕ್ಕೆ ವಿರಾಮ ಸಿಕ್ಕಿರುವುದರಿಂದ ಆದದ್ದರ ಬಗ್ಗೆ ಸಿಂಹಾವಲೋಕನ ಮಾಡಲಿಕ್ಕೆ, ನಾವು ಕಲಿತದ್ದೇನು ಎಂದು ಪರ್ಯಾಲೋಚಿಸುವುದಕ್ಕೆ ಇದು ಸಕಾಲವೇನೋ.

ಪಾಠ ೧: ಭಾರತವು ಏನಾದರೂ ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಕೊಡದೆ ಬಿಡೆವು ಎಂದು ಪಾಕಿಸ್ತಾನಿ ಸೈನ್ಯದವರು ಬೊಬ್ಬಿರಿದರು; ಮತ್ತು ನುಡಿದಂತೆಯೇ ನಡೆದರು. ನಮ್ಮ ದಾಳಿಯಾದ ದಿನದಿಂದಲೇ ಪಾಕಿಸ್ತಾನವು ಅತ್ಯಂತ ಪ್ರಬಲವಾಗಿ, ಸಶಕ್ತವಾಗಿ, ಭಾರತಕ್ಕೆ ದಂಗುಬಡಿಯುವಂತೆ ಪ್ರತ್ಯಾಕ್ರಮಣವನ್ನು ಮಾಡಿತು! ಹೇಗೆ? ತನ್ನ ಡಿಜಿಟಲ್ ಸೇನೆಯ ಮೂಲಕ! ಮೊದಲಿಗೆ ಪಟ್ನಾ ಮತ್ತು ಬೆಂಗಳೂರು ಬಂದರುಗಳನ್ನು ಪಾಕಿನ ಕೀಬೋರ್ಡ್ ವೀರರು (ನಮ್ಮ ವಾಹಿನಿಗಳ ಭಾಷೆಯಲ್ಲಿ ಹೇಳುವುದಾದರೆ) ಉಡೀಸ್ ಮಾಡಿದರು! ಮೊದಲೇ ಸೆಖೆ, ಟ್ರಾಫಿಕ್ಕು ಎಂದು ಕಂಗೆಟ್ಟಿದ್ದ ಬೆಂಗಳೂರಿಗರು ಬಂದರು ನಾಶವಾದ ಮೇಲೆ ಇನ್ನು ಹಡಗುಗಳೂ ರಸ್ತೆಯಲ್ಲೇ ಓಡಿದರೆ ಟ್ರಾಫಿಕ್ಕಿನ ಗತಿಯೇನು ಎಂದು ಭಯಭೀತರಾದರು. ಪಟ್ನಾದ ಅವಸ್ಥೆ ಹೇಗಿದೆಯೋ ದೇವರೇ ಬಲ್ಲ. ಈ ಆಘಾತದಿಂದ ಚೇತರಿಸಿಕೊಳ್ಳಲಿಕ್ಕೆ ಇನ್ನು ಐವತ್ತು ವರ್ಷಗಳಾದರೂ ಬೇಕು ಎಂದು ನಾವು ಚಿಂತಾಕ್ರಾಂತರಾಗಿದ್ದಾಗ ಮತ್ತಷ್ಟು ಪಾಕಿ ಅಸೀಮಪರಾಕ್ರಮಿಗಳು ಟ್ವಿಟ್ಟರಿನಲ್ಲೇ ಐದಾರು ರಫೇಲ್ ಜೆಟ್ಟುಗಳನ್ನು ಹೊಡೆದುರುಳಿಸಿದರು, ಶಿವಾನಿ ಸಿಂಗ್ ಎಂಬ ನಮ್ಮ ಪೈಲಟ್ ಅನ್ನು ಟ್ವಿಟ್ಟರಿನಲ್ಲೇ ಬಂಧಿಸಿದ್ದೂ ಆಯಿತು, ಭಾರತೀಯ ಸೇನೆಯ ಏರ್ ಬೇಸುಗಳನ್ನು ಪಾಕಿಗಳು ಇನ್ಸ್ಟಾಗ್ರಾಮಿನಲ್ಲೇ ಧ್ವಂಸ ಮಾಡಿ ಬಿಸಾಕಿದರು. ಭಾರತದ ಆದಂಪುರದ ವಾಯುನೆಲೆಯನ್ನು, ಬ್ರಹ್ಮೋಸ್ ಮಿಸೈಲುಗಳ storage siteಗಳನ್ನು ಎಲ್ಲ ಕೀಬೋರ್ಡ್ ವೀರರು ಫೇಸ್ಬುಕ್ಕಿನಲ್ಲೇ ಗುದ್ದಿ ಪುಡಿ ಮಾಡಿದರು. ಇದು ಎಷ್ಟು ಅತಿಗೆ ಹೋಯಿತು ಎಂದರೆ ಪಾಕಿ ಸರ್ಕಾರದ ಅಧಿಕೃತ ಖಾತೆಯೊಂದು ಟ್ವಿಟ್ಟರಿನಲ್ಲಿ ವೀಡಿಯೋ ಗೇಂ ಒಂದರ ವೀಡಿಯೊವನ್ನು ಹಾಕಿ, "ನೋಡಿ ಇದು ನಮ್ಮ ವಾಯುಸೇನೆಯು ಭಾರತಕ್ಕೆ ಕೊಟ್ಟ ದಿಟ್ಟ ಪ್ರತ್ಯುತ್ತರ" ಎಂದು ಸಾರಿತು! ವಿಷಯ ಎಲ್ಲಿಯವರೆಗೆ ಮುಟ್ಟಿದೆ ಎಂದರೆ , ಭಾರತೀಯರೆಲ್ಲ ಪಾಕಿಸ್ತಾನದ ಭೀಕರ ದಾಳಿ(!)ಗೆ ಹೆದರಿ, ಗಡಗಡ ನಡುಗಿ, ಎದ್ದು ಬಿದ್ದು ಓಡಿ, ಪಶ್ಚಿಮ ಭಾಗದವರು ಅರಬ್ಬೀ ಸಮುದ್ರಕ್ಕೂ ಪೂರ್ವದವರು ಬಂಗಾಳ ಕೊಲ್ಲಿಗೂ ಹಾರಿದ್ದಾರೇನೋ ಎನ್ನುವಷ್ಟರ ಮಟ್ಟಿಗೆ ಪಾಕಿ ಪ್ರಜೆಗಳನ್ನು ನಂಬಿಸಲಾಗಿದೆ.
ಪಾಠ ೧ ಇಷ್ಟೇ: ಯುದ್ಧ ಎಂಬುದು ಎಷ್ಟೋ ಸಲ ರಣರಂಗಕ್ಕೆ ಸೀಮಿತವಾಗಿರುವುದಿಲ್ಲ, ನರೇಟಿವ್ ವಾರ್ ಎಂಬುದೂ ಒಂದಿದೆ. ಫೇಕ್ ನ್ಯೂಸ್ ಎಂಬುದು ಈ ಕಾಲದ ಅತಿದೊಡ್ಡ ಪಿಡುಗು; ಯುದ್ಧದ ಸಮಯದಲ್ಲಿ ಫೇಕ್ ನ್ಯೂಸುಗಳ ಮೂಲಕ ನರೇಟಿವ್ ವಾರನ್ನು ಗೆಲ್ಲಲು ಹೇಗೆಲ್ಲ ಪ್ರಯತ್ನ ಮಾಡಬಹುದು ಎಂಬುದನ್ನು ಪಾಕ್ ದಿನಕ್ಕೆ ಹತ್ತಿಪ್ಪತ್ತು ಸಲ ತೋರಿಸಿತು (ಪಾಕಿಸ್ತಾನಕ್ಕೆ ಬೇರೆ ಯಾವ ಯುದ್ಧವನ್ನೂ ಗೆಲ್ಲಲು ಸಾಧ್ಯವಿಲ್ಲ, ಹಾಗಾಗಿ ನರೇಟಿವ್ ವಾರನ್ನಾದರೂ ಗೆಲ್ಲುವ ಪ್ರಯತ್ನವನ್ನು ಅದು ಮಾಡಿದ್ದು ಸಹಜವೇ ಅನ್ನಿ. ನಮ್ಮ ವಾರ್ತಾವಾಹಿನಿಗಳೂ, "ನಾವೇನು ಕಡಮೆಯಲ್ಲ ಎಂಬಂತೆ ಸಾಕಷ್ಟು ಉತ್ಪ್ರೇಕ್ಷೆಗಳನ್ನು, ತಪ್ಪುಮಾಹಿತಿಗಳನ್ನು ಹರಡಿದವು ಎಂಬುದೂ ಸತ್ಯವೇ). ಒಂದರ್ಥದಲ್ಲಿ ಸಾಮಾಜಿಕ ಜಾಲತಾಣಗಳೂ ಯುದ್ಧಭೂಮಿಗಳೇ.
ಪಾಠ ೨: ಈ ಕಾಲದಲ್ಲಿ ತಂತ್ರಜ್ಞಾನವೂ ಸೈನಿಕನೇ. ಅಥವಾ ಒಂದು ಗಟ್ಟಿಯಾದ ತಂತ್ರಜ್ಞಾನವು ಸಾವಿರ ಕಮಾಂಡೋಗಳಿಗೆ ಸಮ. ಅಂದೊಮ್ಮೆ ಸರ್ಜಿಕಲ್ ಸ್ಟ್ರೈಕ್ ಆದಾಗ ಉಗ್ರರ ನೆಲೆಗಳಿಗೆ ನಮ್ಮ ಕಮಾಂಡೋಗಳು ನುಗ್ಗಿದ್ದರು. ಆದರೆ ಈ ಸಲ ಕಾಲಕ್ಕೆ ತಕ್ಕಂತೆ ನಮ್ಮ ಸೈನ್ಯಕ್ಕೂ ಒಂದು ಹೊಸರೀತಿಯ ವರ್ಕ್ ಫ್ರಮ್ ಹೋಮ್ ಆಪ್ಷನ್ ಅನ್ನು ಕೊಡಲಾಯಿತು ಎನ್ನಬಹುದೇನೋ! ನಮ್ಮವರು ಇಲ್ಲೇ ಕೂತು ಸಾಫ್ಟ್ವೇರ್, ಹಾರ್ಡ್ವೇರ್, ಎಲೆಕ್ಟ್ರಾನಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಗಳನ್ನು ಬಳಸಿ ಉಗ್ರರ ಆಫೀಸು ಮತ್ತು ಟ್ರೈನಿಂಗ್ ಫೆಸಿಲಿಟಿಗಳಾಗಿದ್ದ ಒಂಬತ್ತು ತಾಣಗಳನ್ನು ಕುಟ್ಟಿ ಕೆಡವಿದರು. ಒಬ್ಬನೇ ಒಬ್ಬ ಸೈನಿಕನೋ, ಪೈಲಟ್ಟೋ ಗಡಿಯನ್ನೇ ದಾಟದೆ ಪಾಕಿಸ್ತಾನದ ಹನ್ನೊಂದು ಏರ್ ಬೇಸುಗಳನ್ನು ಇಲ್ಲಿಂದಲೇ ಮೆಟ್ಟಿ ಉರುಳಿಸಿದರು. ಇವುಗಳ ನಿಖರತೆ ಎಷ್ಟೆಂದರೆ ನೀವು ಇಲ್ಲಿಂದ ಒಂದು ಮಿಸೈಲನ್ನು ಅಲ್ಲಿರುವ ಮಸೂದ್ ಅಝರನ ತಲೆಗೆ ಬೀಳುವಂತೆ ಕಳಿಸಿದರೆ ಅದು ಅವನ ತಲೆಗೇ ಬೀಳುತ್ತದೆ, ಡೊಳ್ಳುಹೊಟ್ಟೆಗಲ್ಲ. ಇದು ತಮಾಷೆಗೆ ಮಾಡಿದ ಉತ್ಪ್ರೇಕ್ಷೆಯಾದರೂ, ವಾಸ್ತವಕ್ಕೆ ಹತ್ತಿರದಲ್ಲೇ ಇದೆ; ಈ ಮಿಸೈಲುಗಳ Circular error probable (CEP) ಒಂದು ಮೀಟರ್ ಎಂದು ತಜ್ಞರು ಹೇಳುತ್ತಿದ್ದಾರೆ, ಹಾಗೆಂದರೆ ನೀವು ಈ ಶಸ್ತ್ರಗಳನ್ನು ಒಂದು ಗುರಿಯೆಡೆಗೆ ನೂರು ಸಲ ಕಳಿಸಿದರೆ ಅವು ಐವತ್ತು ಸಲ ಗುರಿಯ ಒಂದು ಮೀಟರಿನ ಒಳಗೆಯೇ ಮುಟ್ಟುತ್ತವೆ, ಅದಕ್ಕಿಂತ ಹೊರಗೆ ಹೋಗುವುದಿಲ್ಲ. ಈ ಮಟ್ಟದ ನಿಖರತೆಯು ಅದ್ಭುತವೇ ಸರಿ.
ಇನ್ನು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯಂತ್ರಗಳ ವೇಗಕ್ಕೆ ಪಾಕಿಗಳು ಕಳಿಸಿದ ನೂರಾರು ಡ್ರೋನುಗಳೋ, ಮಿಸೈಲುಗಳೋ ಪಕ್ಕದ ಮೋರಿಯಿಂದ ಹೆಕ್ಕಿ ತಂದ ಹಳೆ ಪಟಾಕಿಯಂತೆ ಠುಸ್ ಆದವು. "ಗೂಗಲ್ಲಿನ ಸಿಇಓ ನಮ್ಮವರು, ಮೈಕ್ರೋಸಾಫ್ಟ್ ನ ಸಿಇಓ ನಮ್ಮವರು, ಪ್ರಾಚೀನ ಭಾರತದ್ದು ವಿಜ್ಞಾನ, ತಂತ್ರಜ್ಞಾನದಲ್ಲಿ ದೊಡ್ಡ ಸಾಧನೆ, ಹೀಗಿದ್ದರೂ ನಾವ್ಯಾಕೆ ವಿಜ್ಞಾನ ತಂತ್ರಜ್ಞಾನಗಳಲ್ಲಿ ಇಷ್ಟು ಹಿಂದಿದ್ದೇವೆ" ಎಂಬ ಧಾಟಿಯಲ್ಲಿ ನಮ್ಮಂಥವರು ಗೊಣಗುವುದಿತ್ತು. ಇಸ್ರೋ, ಡಿಆರ್ಡಿಓ, ಬಿಇಎಲ್ ಮುಂತಾದ ಸಂಸ್ಥೆಗಳ ವಿಜ್ಞಾನಿಗಳೂ, ಎಂಜಿನಿಯರುಗಳೂ ಆಕಾಶ್ ಮಿಸೈಲು, ಆಕಾಶ್ ತೀರ್ ಎಂಬ ವ್ಯವಸ್ಥೆಯನ್ನೆಲ್ಲ ನಮ್ಮ ಮುಂದಿಟ್ಟು ನಮ್ಮನ್ನು ಹೆಮ್ಮೆಯಿಂದ ತಲೆಯೆತ್ತುವಂತೆ ಮಾಡಿದ್ದಾರೆ. ಸ್ವದೇಶಿ ತಯಾರಿಗಳಾದ ಇವುಗಳು ರಷ್ಯಾ, ಅಮೆರಿಕಾ, ಇಸ್ರೇಲ್, ಚೀನಾ ಮುಂತಾದ ದೇಶಗಳ ಯಾವ ಆಧುನಿಕ ತಂತ್ರಜ್ಞಾನಕ್ಕೂ ಕಡಮೆಯಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕಿಂತ ಸಂತೋಷ ಇನ್ನೇನಿದೆ. ಇವುಗಳಂತೆಯೇ ಸೈನಿಕರಿಗೆ ಆನೆಬಲ ತುಂಬಿದ ಉಳಿದ ದುಬಾರಿ ಶಸ್ತ್ರಗಳನ್ನು ಖರೀದಿ ಮಾಡಿದ ರಕ್ಷಣಾ ಮಂತ್ರಿಗಳು, ಪ್ರಧಾನಿ, ಮಿಲಿಟರಿ ಅಧಿಕಾರಿಗಳ ದೂರದೃಷ್ಟಿಯೂ ಮೆಚ್ಚತಕ್ಕದ್ದೇ. ಇವನ್ನೆಲ್ಲ ತಯಾರು ಮಾಡುವ ಕೆಲಸವು ಇಪ್ಪತ್ತು ಮೂವತ್ತು ವರ್ಷಗಳ ಮೊದಲೇ ಶುರುವಾಗಿತ್ತಂತೆ, ಸಾವಿರಾರು ಜನ ವಿಜ್ಞಾನಿಗಳ ಪರಿಶ್ರಮವೂ ಅವುಗಳ ಹಿಂದಿದೆ. ಈ ದೂರದೃಷ್ಟಿಗೆ ನಮಸ್ಕಾರ. ಇದರಿಂದ ಹೊರಡುವ ನೀತಿಯನ್ನೇ ನಾವು ಪಾಠ ೩ ಎನ್ನಬಹುದು:
ಪಾಠ ೩: ಬಿ ಎಂ ಗಿರಿರಾಜ ಅವರ 'ನವಿಲಾದವರು' ಎಂಬ ಚಿತ್ರದಲ್ಲಿ ಒಂದು ಮಾತು ಬರುತ್ತದೆ: "ಶಾಂತಿ ಬುದ್ಧಿಜೀವಿಗಳ ಕನಸು, ಯುದ್ಧ ಐತಿಹಾಸಿಕ ಸತ್ಯ". ಇದೊಂದು ಕಹಿಯಾದ ಸತ್ಯ, ಕಟುವಾದ ವಾಸ್ತವ. ನಾವು ಶಾಂತಿಪ್ರಿಯರೇ, ಬೇಕಾದರೆ ಗಾಂಧೀಜಿಯವರ ಜೊತೆ ಸ್ಪರ್ಧೆಗಿಳಿದವರಂತೆ ಶಾಂತಿಮಂತ್ರವನ್ನು ಪಠಿಸೋಣ, ಶಾಂತಿಯನ್ನು ಪಾಲಿಸೋಣ, ಆದರೆ ಯುದ್ಧಕ್ಕೆ ಯಾವಾಗಲೂ ತಯಾರಾಗಿಯೇ ಇರೋಣ. ನಾವೆಷ್ಟೇ ಶಾಂತಿಪ್ರಿಯರಾದರೂ ಪಕ್ಕದ ಮನೆಯವರು ನಮ್ಮನ್ನು ಶಾಂತರಾಗಿರಲು ಬಿಡುತ್ತಾರೆ ಎನ್ನುವಂತಿಲ್ಲ. ಇದು ಈ ಪಾಪಿಜಗತ್ತು ನಮಗೆ ಹೇಳಿಕೊಟ್ಟಿರುವ ಪಾಠ. “You can get much farther with a kind word and a gun than you can with a kind word alone.” ಎಂಬ ಅಲ್ ಕೆಪೋನನ ಮಾತನ್ನೂ ನಾವು ಮರೆಯುವಂತಿಲ್ಲ. 2045ನೇ ಇಸವಿಯಲ್ಲಿ ಆಗಬಹುದಾದ ಯುದ್ಧವನ್ನು ಗೆಲ್ಲಬೇಕಾದರೆ ಅದಕ್ಕೆ ತಯಾರಿ ಈಗಿಂದಲೇ ಆಗಬೇಕು. ಹೀಗೆ ಮಾಡಿದ್ದರಿಂದಲೇ ನಾವು ಆಪರೇಷನ್ ಸಿಂದೂರದಲ್ಲಿ ಜಯ ಸಾಧಿಸಲು ಸಾಧ್ಯವಾಯಿತು.
ಪಾಠ ೪: ಉಗ್ರರ ದಾಳಿಗಳಾದಾಗ ಎಡಪಂಥೀಯರು, ಮುಸಲ್ಮಾನರು ಅದನ್ನು ಖಂಡಿಸುವುದಿಲ್ಲ ಎಂಬ ಮಾತಿದೆ. ಆದರೆ ಈ ಸಲ ಹಲವರು ಕೃತ್ಯವನ್ನು ಬಹಿರಂಗವಾಗಿ ಖಂಡಿಸಿದರು, ಕಾಶ್ಮೀರಿಗಳೂ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ಕಂಡಿತು. ಇದು ಸ್ವಾಗತಾರ್ಹವಾದ ಬೆಳವಣಿಗೆ. ಆದರೆ ಕೆಲವರು ಹತ್ತು ಸಾಲುಗಳ ಖಂಡನೆಯಲ್ಲಿ ಎಂಟು ಸಾಲುಗಳನ್ನು, "ಹಿಂದೂ ಭಯೋತ್ಪಾದನೆಯೂ ಉಂಟಲ್ಲವೇ, ಯಹೂದಿಗಳೂ ಕೆಟ್ಟವರಲ್ಲವೇ, ಮೋದಿ ಏನು ಮಾಡುತ್ತಿದ್ದ? ಅಜಿತ್ ಡೋವಲ್ ಚಪಾತಿ ತಿನ್ನುತ್ತಿದ್ದನೇ, ಆರೆಸ್ಸೆಸ್ ಏನು ಮಾಡಲಿದೆ, ವೀರಪ್ಪನನೂ ಅಮಾಯಕರನ್ನು ಕೊಂದಿದ್ದನಲ್ಲವೇ" ಎಂದು ಮುಂತಾಗಿ ಹೇಳುವುದಕ್ಕೆ ಮೀಸಲಿಟ್ಟರು. ಹೀಗೆ ನಾಲ್ಕಾರು ವಿಷಯಗಳನ್ನು ಬೆರೆಸುವುದರಿಂದ ವಿಷಯ ಡೈಲ್ಯೂಟ್ ಆಗುತ್ತದೆ, ವಿಷಯಾಂತರವೂ ಆಗುತ್ತದೆ. ಮತಾಂಧ ಉಗ್ರರನ್ನು ಬೈಯುವಾಗ ಉಗ್ರರನ್ನೇ ಬೈಯಿರಿ, ಮತಾಂಧತೆಯನ್ನೇ ತೆಗಳಿರಿ, ಸ್ಪಷ್ಟವಾಗಿ, ದೊಡ್ಡಸಂಖ್ಯೆಯಲ್ಲಿ, ಬೇಷರತ್ ಆಗಿ ಬೈಯಿರಿ, ಉಳಿದವರನ್ನು ಬೈಯುವುದಕ್ಕೆ, ಉಳಿದ ವಿಷಯಗಳನ್ನು ಮಾತಾಡುವುದಕ್ಕೆ ಉಳಿದ ೩೬೪ ದಿನಗಳು ಹೇಗೂ ಇವೆಯಲ್ಲ. ನಾಟ್ಜಿ ಜರ್ಮನಿಯಲ್ಲಿ ಎಲ್ಲರೂ ನಾಟ್ಜಿಗಳೂ, ಯಹೂದಿದ್ವೇಷಿಗಳೂ ಆಗಿರಲಿಲ್ಲ, ಮಾಡರೇಟ್ ದನಿಗಳೂ ದೊಡ್ಡ ಸಂಖ್ಯೆಯಲ್ಲಿ ಇದ್ದರು, ಆದರೆ ಅವರ್ಯಾರೂ ದೊಡ್ಡ ದನಿಯಲ್ಲಿ, ದೊಡ್ಡ ಸಂಖ್ಯೆಯಲ್ಲಿ ಸ್ಪಷ್ಟವಾಗಿ ಮಾತಾಡಲಿಲ್ಲ. ಆದ್ದರಿಂದ ದುಷ್ಟಶಕ್ತಿಗಳು ನರೇಟಿವ್ ಅನ್ನು ಹೈಜಾಕ್ ಮಾಡಿದವು. ಹಾಗಾಗಬಾರದಲ್ಲವೇ?
ಪಾಠ ೫: ಇಡೀ POKಯೇ ಚಿಟಿಕೆ ಹೊಡೆಯುವಷ್ಟರಲ್ಲಿ ನಮ್ಮದಾಗುತ್ತದೆ, ಪಾಕಿಸ್ತಾನವು ಭೂಪಟದಿಂದ ಅಳಿಸಿ ಹೋಗುತ್ತದೆ, ಕರಾಚಿಯನ್ನು ಗೋಣಿಯಲ್ಲಿ ತುಂಬಿಸಿ ತರಲಾಗುತ್ತದೆ ಎಂಬ ಅತಿರಂಜಿತ ಯುದ್ಧೋನ್ಮಾದದ ಹೇಳಿಕೆಗಳು, ನಿರೀಕ್ಷೆಗಳು ಉಚಿತವಲ್ಲ. ಇದೆಲ್ಲ ಹೇಳುವುದಕ್ಕೆ ಚೆನ್ನವೇ ಹೊರತು ಮಾಡುವುದಕ್ಕಲ್ಲ. ನಮ್ಮ ಸೇನೆಗೆ ಸಾಟಿಯಲ್ಲವಾದರೂ ಪಾಕಿಸ್ತಾನದ ಹತ್ತಿರವೂ ಒಂದು ದೊಡ್ಡ ಸೈನ್ಯ ಇದೆ. ಅವರ ಹತ್ತಿರವೂ ಆಧುನಿಕ ಶಸ್ತ್ರಾಸ್ತ್ರಗಳಿವೆ. ಹಾಗೆಲ್ಲ ಯುದ್ಧವನ್ನು ಒಂದು ವಾರದಲ್ಲಿ ಮುಗಿಸಲು ಸಾಧ್ಯವೂ ಇಲ್ಲ. ಈಗ ರಷ್ಯಾ- ಉಕ್ರೇನ್ ಯುದ್ಧವನ್ನೇ ನೋಡಿ. ಅದು ಆನೆ ಮತ್ತು ಆಡುಗಳ ಕಾಳಗ. ಆದರೂ ಮೂರು ವರ್ಷವಾದರೂ ಅಷ್ಟು ಬಲಿಷ್ಠ ರಷ್ಯಾದ ಎದುರು ಉಕ್ರೇನ್ ಸೋಲೊಪ್ಪಿಕೊಂಡಿಲ್ಲ. ಸಿಂಹದಂಥ ಇಸ್ರೇಲು ಅದೆಷ್ಟು ಬಡಿದರೂ ಹಮಾಸ್ ಸೋತು ಶರಣಾಗಿಲ್ಲ. ಅದು ಎಂದಿಗೂ ಮುಗಿಯದ ಯುದ್ಧ ಎಂಬ ಭಾವ ಮೂಡತೊಡಗಿದೆ. ಹೀಗಿರುವಾಗ ಪಾಕಿನ ಜೊತೆ ಯುದ್ಧಕ್ಕೆ ಹೊರಟು ನಾಲ್ಕು ವರ್ಷ ಯುದ್ಧವಾದರೆ ಅದಕ್ಕೆ ಬೇಕಾದ ತಯಾರಿ ನಮ್ಮಲ್ಲಿ ಇದೆಯೇ? ಎಷ್ಟು ಜನ ನಮ್ಮ ಸೈನಿಕರು ಸತ್ತಾರು? Sustainability ಹೇಗೆ? ಆರ್ಥಿಕ ಆರೋಗ್ಯದ ಗತಿಯೇನು? ಚೀನಾ ಮಧ್ಯ ಪ್ರವೇಶ ಮಾಡಿದರೆ ನಾವೇನು ಮಾಡಬೇಕು? ಅಮೆರಿಕಾ ಪಾಕಿಗೆ ಒಳಗೊಳಗೇ ಸಹಾಯ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ? ಗಮನಿಸಿ: ಮೊದಲಿನಿಂದಲೂ ಸರಕಾರವಾಗಲೀ ಮಿಲಿಟರಿಯಾಗಲೀ ಇದನ್ನೊಂದು ಯುದ್ಧ ಎಂದು ಹೇಳಲೇ ಇಲ್ಲ. ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗರಪತ್ರಿಕಾ ಗೋಷ್ಠಿಗಳಿಂದ ಹಿಡಿದು ರಾಜೀವ್ ಘಾಯ್ ಅವರವರಿಗೆ ಎಲ್ಲರೂ ಇದನ್ನು measured, calibrated, proportionate, and non-escalatory strike ಎಂದೇ ಹೇಳುತ್ತಾ ಬಂದಿದ್ದಾರೆ. ನಾವು ಹೊಡೆದಿರುವುದು ಉಗ್ರಗಾಮಿ ನೆಲೆಗಳಿಗೆ, ಪಾಕಿಸ್ತಾನದ ನಾಗರೀಕರಿಗೋ, ಸೈನ್ಯದ ನೆಲೆಗಳಿಗೋ ಅಲ್ಲ, ನಮ್ಮದು non-escalatory ಹೊಡೆತ ಎಂಬ ಮಾತನ್ನು ಆರಂಭದಿಂದಲೂ ಮಂತ್ರದಂತೆ ಹೇಳುತ್ತಲೇ ಬಂದಿದ್ದಾರೆ. ಅವರು ಒಂದು ಹೊಡೆದರೆ ನಾವು ತಿರುಗಿಸಿ ಎರಡು ಕೊಡುತ್ತೇವೆ, ನಾವಾಗಿ ಹೊಡೆದಾಟ ಶುರುಮಾಡುವುದಿಲ್ಲ. ಅವರೇ ಆರಂಭಿಸಿದರೆ, ಅನಿವಾರ್ಯವಾದರೆ ಮಾತ್ರ ಯುದ್ಧ ಎಂಬುದು ಭಾರತದ ನಿಲುವು ಎಂಬುದನ್ನು ಭಾರತವು ಸ್ಪಷ್ಟವಾದ ಮಾತುಗಳಲ್ಲಿ ಹೇಳುತ್ತಲೇ ಬಂದಿದೆ.
ಇದು ಯುದ್ಧದ ಕಾಲವಲ್ಲ ಎಂದು ಮೋದಿ ಹೇಳಿದ್ದೂ ಅದನ್ನೇ. ಹೀಗಿರುವಾಗ ಯುದ್ಧ ಮಾಡುತ್ತಾರೆ, ಪಾಕನ್ನು ನಾಮಾವಶೇಷ ಮಾಡುತ್ತಾರೆ ಎಂಬುದು ಒಂದು ತಪ್ಪು ನಿರೀಕ್ಷೆ ಬಿಟ್ಟರೆ ಬೇರೇನೂ ಅಲ್ಲ. ಕದನಕ್ಕೆ ನಾವು ಹೊರಟೇ ಇರಲಿಲ್ಲ ಎಂದಮೇಲೆ ಕದನವಿರಾಮವು ಅಂಥ ಆಶ್ಚರ್ಯದ, ನಿರಾಸೆ ಮೂಡಿಸಬಹುದಾದ ನಡೆಯಲ್ಲವೇ ಅಲ್ಲ.
ಪಾಠ ೬: ಪರೋಕ್ಷವಾಗಿ ಸಂದೇಶ ರವಾನೆ ಮಾಡುವುದೂ ಯುದ್ಧದ ಒಂದು ಭಾಗವೇ. ಈಗೊಬ್ಬ ಅಪರಾಧಿಯು ಕೀನ್ಯಾದಲ್ಲಿ ಒಂದುಕಡೆ ಇದ್ದಾನೆ ಎಂದುಕೊಳ್ಳೋಣ. ಅವನನ್ನು ಹೆದರಿಸುವುದಕ್ಕೆ ಅವನ ಮನೆಗೇ ನುಗ್ಗಿ ಹೊಡೆಯಬೇಕು ಎಂದೇನೂ ಇಲ್ಲ, ಅವನ ಪಕ್ಕದ ಮನೆಗೆ ಬೀಳುವಂತೆ ಒಂದು ಬಾಂಬು ಹಾಕಿದರೂ ಸಾಕು, "ಪಕ್ಕದ ಮನೆಗೆ ಬಾಂಬನ್ನು ಹಾಕುವ ಸಾಮರ್ಥ್ಯ ಇದೆ ಎಂದ ಮೇಲೆ ಅದನ್ನೇ ನಿನ್ನ ಮನೆಗೂ ಹಾಕುವುದು ಕಷ್ಟವೇನಲ್ಲ ಎಂಬ ಸಂದೇಶ ಅವನಿಗೆ ರವಾನೆಯಾಗುತ್ತದೆ. ಭಾರತವು ಉದ್ದಕ್ಕೂ ಇದೇ ತಂತ್ರವನ್ನು ಅನುಸರಿಸಿತು. ನಿಮ್ಮ ಏರ್ ಬೇಸ್ ಅನ್ನು ಇಲ್ಲೇ ಕೂತು ನಾಶ ಮಾಡಬಲ್ಲೆವು ಎಂದಾದರೆ ನಾವು ಏನನ್ನೆಲ್ಲ ಮಾಡಲು ಸಮರ್ಥರು ಎಂದು ಅರ್ಥಮಾಡಿಕೊಳ್ಳಿ ಎಂಬ ಸಂದೇಶ ಪಾಕಿಗೆ ಮುಟ್ಟಿಯೇ ಇರುತ್ತದೆ. ಕೆಲವು ಪುಡಿ ರೌಡಿಗಳಿರುತ್ತಾರೆ, ಅಂಥವರು ಮಾತೆತ್ತಿದರೆ, "ಗೊತ್ತಲ್ಲ! ನಾನು ಸರಿ ಇಲ್ಲ! ನಾನು ತಲೆ ಕೆಟ್ರೆ ರಾಕ್ಷಸ! ಟಾಪ್ ಟು ಬಾಟಮ್ ಕುಯ್ದಾಕಿ ಬಿಡ್ತೀನಿ" ಎಂದು ಹಾರಾಡುತ್ತಿರುತ್ತಾರೆ. ತಮ್ಮ ಬಗ್ಗೆ ಜನರಿಗೆ ಹೆದರಿಕೆ ಹುಟ್ಟಲಿ ಎಂಬುದು ಅವರ ಆಶಯ, ಡಾನುಗಳು ಹೀಗೆಲ್ಲ ಹಾರಾಡಬೇಕಾದ ಅಗತ್ಯ ಇಲ್ಲ, ಅವರು ಬಂದರೆ ಅವರ ಸುತ್ತಮುತ್ತ ಇಪ್ಪತ್ತು ಜನ ದಷ್ಟಪುಷ್ಟರು ಗತ್ತಿನಿಂದ ಬಂದು, ಪೋಸು ಕೊಟ್ಟು ಗುರಾಯಿಸಿ ನಿಂತರೇ ಜನ ಹೆದರಿ ಕಂಗಾಲಾಗುತ್ತಾರೆ. ಭಾರತವು ಹೀಗೆ ಡಾನಿನಂತೆ ಪೋಸು ಕೊಟ್ಟಿತು ಎನ್ನಬಹುದೇನೋ. ಪಾಕಿಸ್ತಾನವು ಪುಡಿ ರೌಡಿಯಂತೆ ಹಾರಾಡುತ್ತ, ಬೊಬ್ಬಿಡುತ್ತಾ, "ನಾನು ಸರಿ ಇಲ್ಲ! ನಾನು ತಲೆ ಕೆಟ್ರೆ ರಾಕ್ಷಸ! ನನ್ನತ್ರ ಪರಮಾಣು ಬಾಂಬ್ ಇದೆ ಗೊತ್ತಲ್ಲ" ಎಂದು ಎಗರಾಡುತ್ತಲೇ ಇರುತ್ತದೆ(ಪಾಕಿಸ್ತಾನವು "ನಾನು ಸರಿ ಇಲ್ಲ!" ಎನ್ನಬೇಕಾದ ಅಗತ್ಯವೇನೂ ಇಲ್ಲ ಎನ್ನಿ! ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ). ಇದನ್ನು Nuclear saber rattling(ಪರಮಾಣು ಕತ್ತಿ ಝಳಪಿಸುವಿಕೆ)ಎನ್ನುತ್ತಾರೆ. ಅಂಥ ಪರಮಾಣು ಬಾಂಬುಗಳ ವಾರ್ ಹೆಡ್ಡುಗಳು ಇರುವ ಸ್ಟೋರೇಜ್ ಫೆಸಿಲಿಟಿಗಳ ತೀರಾ ಪಕ್ಕದ ಮನೆಗೇ ಬಾಂಬು ಹಾಕಿ, ಮನಸ್ಸು ಮಾಡಿದರೆ ನಾವು ನಿಮ್ಮ ಪರಮಾಣು ಬಾಂಬುಗಳನ್ನು ನಿಷ್ಕ್ರಿಯಗೊಳಿಸಬಲ್ಲೆವು ಎಂಬ ಸಂದೇಶವನ್ನು ರವಾನೆ ಮಾಡಿದೆ ಎಂಬುದೊಂದು ಊಹೆಯಿದೆ. ಹಠಾತ್ತನೆ ಕದನವಿರಾಮದ ಬಯಕೆ ಮೂಡಿದ್ದೂ ಈ ಕಾರಣಕ್ಕೇ ಎಂಬ ಊಹೆಗಳೂ ಇವೆ. ವಿಕಿರಣ ಸೋರಿಕೆಯಾಗಿದೆ, ಇದರಿಂದ ಈಗಾಗಲೇ ಪರಮಾಣು ಬಾಂಬುಗಳ ವಾರ್ ಹೆಡ್ಡುಗಳು ನಿಷ್ಕ್ರಿಯವಾಗಿದೆ ಎಂಬ ಮಾತನ್ನೂ ಮಾಜಿ ಮೇಜರ್ ಜನರಲ್ ರಾಜೀವ್ ನಾರಾಯಣ್ ಅವರಂಥರು ಹೇಳಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಹೇಳುವುದು ಕಷ್ಟ. ದಾಳಿ ಮಾಡಿದ್ದೇವೆ ಎಂದು ಭಾರತವು ಬಹಿರಂಗವಾಗಿ ಒಪ್ಪುವುದಿಲ್ಲ, ಹೇಳಿದರೆ ಮರ್ಯಾದೆ ಹೋದೀತೆಂದು ಪಾಕಿಸ್ತಾನವೂ ಅದನ್ನು ಮುಚ್ಚಿಡುತ್ತದೆ. ಹೀಗಾಗಿ ಒಂದುವೇಳೆ ಇದೆಲ್ಲ ಆಗಿದ್ದರೂ ಅದನ್ನು ರಹಸ್ಯವಾಗಿಯೇ ಇಡಲಾಗುತ್ತದೆ. ನಾವು ಸತ್ಯವನ್ನು ತಿಳಿಯುವುದು ಕಷ್ಟವೇ. ಅದೇನೇ ಇದ್ದರೂ ಭಾರತವು ನ್ಯೂಕ್ಲಿಯರ್ ಫೆಸಿಲಿಟಿಗಳ ಹತ್ತಿರಕ್ಕೇ ದಾಳಿ ಮಾಡಿ, ಬೇಕಾದರೆ "ಇನ್ನು ಹತ್ತಿರ..... ಹತ್ತಿರ..... ಬರುವೆವು" ಎಂದು ಪಾಕಿಸ್ತಾನಕ್ಕೆ ಒಂದು ಸಂದೇಶ ರವಾನೆ ಮಾಡಿರುವ ಸಾಧ್ಯತೆಯಂತೂ ದಟ್ಟವಾಗಿದೆ ಎನ್ನಬಹುದು.
ಪಾಠ ೭: ಆಪರೇಷನ್ ಸಿಂದೂರವು ತೋರಿಸಿದಂತೆ, ಇಲ್ಲೇ ಕೂತು ಉಗ್ರರ ಮನೆಗೇ ಮಿಸೈಲನ್ನು ಕಳಿಸುವ ಕಾರ್ಯಾಚರಣೆಗಳು ಭವಿಷ್ಯದಲ್ಲಿ ಆಗಲಿವೆ. ಉಗ್ರರು ಇಂಥಲ್ಲೇ ಇದ್ದಾರೆ ಎಂದು ಇಂಟೆಲಿಜೆನ್ಸ್ಸಿನವರು, ಗೂಢಚಾರರು ಮಾಹಿತಿಯನ್ನು ಕೊಡಬೇಕಾಗುತ್ತದೆ ಎಂಬುದು ನಿಜವೇ. ಉಗ್ರರ ವಿಳಾಸವು ಸಿಕ್ಕಿದ ಮೇಲೆ ಅವರ ವಿಳಾಸವನ್ನು ಬರೆದು ಒಂದು ಡ್ರೋನ್ ಅನ್ನೋ ಮಿಸೈಲ್ ಅನ್ನೋ ರಿಜಿಸ್ಟರ್ಡ್ ಪೋಷ್ಟಿನಲ್ಲಿ ಕಳಿಸುವ ಕೆಲಸವೂ ಮುಂದೆ ಆಗಲಿದೆ. Terms of Engagement ಬದಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ Unknown, Unidentified ಗನ್ ಮ್ಯಾನುಗಳು ಉಗ್ರಗಾಮಿಗಳನ್ನು ಕೊಲ್ಲುವ ಸುದ್ದಿಗಳು ಸಾಕಷ್ಟು ಬಂದಿವೆ. ಅವರಿಗೆ ಮುಂದೆಯೂ ಕೈತುಂಬಾ ಕೆಲಸ ಸಿಗಲಿದೆ ಎಂದು ಊಹಿಸೋಣ. "ಅವರನ್ನು ನೀವು ಕಳಿಸಿದ್ದಾ?" ಎಂದು ಯಾರಾದರೂ ಕೇಳಿದರೆ ಏರ್ ಮಾರ್ಷಲ್ ಭಾರ್ತಿಯವರು ವ್ಯಂಗ್ಯವಾಗಿ ನಕ್ಕು, ನ್ಯೂಕ್ಲಿಯರ್ ಶಸ್ತ್ರಗಳಿರುವ ಜಾಗಕ್ಕೆ ಸ್ಟ್ರೈಕ್ ಮಾಡಿದ್ದನ್ನು ಅಲ್ಲಗಳೆದಂತೆ, ನಮ್ಮವರೂ, "ನಮಗೇನೂ ಗೊತ್ತಿಲ್ಲಪ್ಪ, ನಮಗೆ ಯಾವ ಗನ್ ಮ್ಯಾನುಗಳ ಪರಿಚಯವೂ ಇಲ್ಲ" ಎನ್ನಲಿದ್ದಾರೆ.
ಸದ್ಯಕ್ಕಿಷ್ಟು ಸಾಕು.

No comments:

Post a Comment