'ಗುರುರಾಜ ಕೊಡ್ಕಣಿಯವರು ಚೆನ್ನಾಗಿ ಬರೆಯುತ್ತಾರೆ' ಎಂದು ನಾನೊಂದು ಹೇಳಿಕೆಯನ್ನು ಕೊಟ್ಟರೆ ಅದು ಯಾವ ವಾರ್ತಾವಾಹಿನಿಯಲ್ಲಿಯೂ ಬ್ರೇಕಿಂಗ್ ನ್ಯೂಸ್ ಆಗಲಾರದು;ಯಾಕೆಂದರೆ ಅದು ನಮಗೆಲ್ಲ ಗೊತ್ತಿರುವ ವಿಚಾರವೇ. ಅವರು ಅನುವಾದವನ್ನೂ ಸಲೀಸಾಗಿ ನಿಭಾಯಿಸುತ್ತಾರೆ ಅನ್ನುವುದು ನನ್ನ ಮಟ್ಟಿಗೆ, ಆಜ್ ಕೀ ತಾಜಾ ಖಬರ್. "ಅಂಕಣಕ್ಕೆ ಅನುವಾದಿತ ಕತೆಗಳು" ಎಂಬ ಅವರ ಕಥಾಸಂಕಲನ ಈ ಭಾವವನ್ನು ಹುಟ್ಟಿಸಿತು.
ಒಂದಷ್ಟು ಇಂಗ್ಲೀಷು ಕಥೆಗಳ ಭಾವಾನುವಾದ ಮಾಡುವ ಯೋಜನೆಯೊಂದನ್ನು ನಾನೂ ಇಟ್ಟುಕೊಂಡಿದ್ದೇನೆ, ಹಾಗಂತ ಬರೆದಾಗ,ಕೊಡ್ಕಣಿಯವರು, "ಆ ಕೆಲಸವನ್ನು ನಾನಾಗಲೇ ಮಾಡಿಯಾಗಿದೆ" ಎಂದುಸುರಿ ಹಾರರ್ ಕಥೆಯಾಚೆಗೂ ನನ್ನನ್ನು ಹೆದರಿಸಿದರು! ಹೆದರಿಸಿದರು ಎಂದರೆ ಹಾಗಲ್ಲ! ನಾನು ಮಾಡಬೇಕೆಂದಿರುವ, ಮಾಡಿ ಕನ್ನಡಿಗರಿಗೆ ಹಿತವಾದ ಅಚ್ಚರಿ ಕೊಡಬೇಕು ಎಂದಿರುವ ಕಥೆಗಳ ಅನುವಾದವನ್ನು ಈ ಪುಣ್ಯಾತ್ಮನಂಥ ಸಮರ್ಥರು ಈಗಾಗಲೇ ಮಾಡಿದ್ದರೆ, ನಾನವನ್ನು ಮತ್ತೆ ತರುವ ಅಗತ್ಯವೇ ಬೀಳುವುದಿಲ್ಲವಲ್ಲ. ಇದು ನನ್ನ ಕಳವಳಕ್ಕೆ ಕಾರಣ. ಪುಣ್ಯಕ್ಕೆ ನಾನು ಅನುವಾದಿಸಿರುವ/ಅನುವಾದಿಸಲಿರುವ ಕಥೆಗಳ್ಯಾವುವೂ ಕೊಡ್ಕಣಿಯವರ ಪಟ್ಟಿಯಲ್ಲಿಲ್ಲ.
ಇಲ್ಲಿ ಓ ಹೆನ್ರಿ, ಗೇಬ್ರಿಯಲ್ ಗಾರ್ಸಿಯ ಮಾರ್ಕೆಸ್, ಚೆಕಾಫ್, ಟಾಲ್ಸ್ಟಾಯಿಯಂಥ ಬಹಳಷ್ಟು ಸಲ ಅನುವಾದವಾಗಿರುವವರಿದ್ದಾರೆ. ಅರ್ನೆಸ್ಟ್ ಹೆಮ್ಮಿಂಗ್ವೆ, ರಸ್ಕಿನ್ ಬಾಂಡ್, ಪೌಲೋ ಕೊಯೆಲೊವಿನಂಥ ಪರಿಚಿತ ಹೆಸರುಗಳಿವೆ. ಇಷ್ಟಲ್ಲದೆ, ಮೊಹ್ಸಿನ್ ಹಮೀದ್, ಸಿಡನಿ ಕೂಲೆಟ್, ಸುಲಾಮಿತ್ ಇಶ್ಕಿಶೋರ್, ಶಿರ್ಲೆ ಜಾಕ್ಸನ್ರಂಥ ಕನ್ನಡಿಗರಿಗೆ ಅಷ್ಟಾಗಿ ಗೊತ್ತಿಲ್ಲದ ಹೆಸರುಗಳೂ ಇವೆ. ಕೊಡ್ಕಣಿಯಂಥ ತುಂಬ ಓದಿಕೊಂಡಿರುವವರ ಕೊಡುಗೆ ಇರಬೇಕಾದ್ದು ಇಂಥ ಕಡಮೆ ಪರಿಚಿತರನ್ನು ಕನ್ನಡಿಗರ ಕೈಕುಲುಕಿಸುವುದರಲ್ಲಿಯೇ. ಮೊದಲ ಪಟ್ಟಿಯಲ್ಲಿಯೂ ಲ್ಲಿಯೂ, ಓ ಹೆನ್ರಿಯ ಕಥೆಯಾದರೂ, ನನಗೆ ಗೊತ್ತಿಲ್ಲದೇ ಇದ್ದ, ಅದ್ಭುತ ವಿಡಂಬನೆಯುಳ್ಳ ಕಥೆಯೊಂದನ್ನು ಆಯ್ದುಕೊಂಡಿರುವುದು ಮೆಚ್ಚುಗೆಯಾಯಿತು. ಹೆಮ್ಮಿಂಗ್ವೆ,ಮಾರ್ಕೆಸ್ ಮುಂತಾದವರ ಕಥಗಳ ಆಯ್ಕೆಗೂ ಚಪ್ಪಾಳೆ. ಅನುವಾದಕ್ಕೆ ಎಂಥ ಕಥೆಗಳನ್ನು ಆಯ್ದುಕೊಳ್ಳುತ್ತೇವೆ ಎಂಬುದೂ ಪುಸ್ತಕ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದಲ್ಲ. ಇಲ್ಲಿ ಗುರುರಾಜರು ಗೆದ್ದಿದ್ದಾರೆ.
'ನಿಮಗೆ ತಪ್ಪುಗಳನ್ನು ಹುಡುಕಲು ಬರುವಿದಲ್ಲವೇ' ಎಂದು ಮುಂದೆ ಕೇಳಲಿರುವವರಿಗಾಗಿ ಒಂದೆರಡು - "ಅಂಕಣಕ್ಕೆ ಅನುವಾದಿತ ಕತೆಗಳು" ಎಂಬ ಶೀರ್ಷಿಕೆಯು, "ಪುಸ್ತಕಕ್ಕೊಂದು ಶೀರ್ಷಿಕೆ ಕೊಡಿ ಸ್ವಾಮೀ" ಎಂದು ಯಾರೋ ಗಂಟು ಬಿದ್ದದ್ದಕ್ಕೆ "ಇದನ್ನು ತಗೊಂಡು ತೊಲಗಿ" ಎಂದು ಬೈದು ಬರೆದುಕೊಟ್ಟದ್ದೇನೋ ಎನ್ನಿಸುವಂತೆ ಸಪ್ಪೆಯಾಗಿದೆ. ಕರಡು ತಿದ್ದುವ ಕೆಲಸವನ್ನು ಐದು ನಿಮಿಷದಲ್ಲಿ ಮುಗಿಸಿದ್ದಾರೆ ಅನ್ನಿಸುವಷ್ಟು ಅಕ್ಷರದ ತಪ್ಪುಗಳು ನುಸುಳಿವೆ. ಪರಿವಿಡಿಯಿದ್ದಿದ್ದರೆ ಒಳ್ಳೆಯದಿತ್ತು.
ಇನ್ನು ಅನುವಾದದ ವಿಚಾರ. ಕನ್ನಡದ ವಾಕ್ಯರಚನೆಯ ಕ್ರಮವು ಇಂಗ್ಲೀಷಿನದ್ದಕ್ಕಿಂತ ಭಿನ್ನ. ಇಂಗ್ಲೀಷಿನ ನುಡಿಗಟ್ಟುಗಳೂ ಬಹಳ ಕಾಟ ಕೊಡುತ್ತವೆ. ಇಂಥಲ್ಲಿ
ಪದ ಪದಗಳ ಅನುವಾದ ಮಾಡಿದರೆ ಮೂಲವಾಕ್ಯದ ಕತ್ತು ಹಿಸುಕಿದಂತೆಯೇ. ಎಷ್ಟೋ ಸಲ, ದೊಡ್ಡವರೂ ಇಂಥ ನೀರಸ "ಗೂಗಲ್ ಟ್ರಾನ್ಸ್ಲೇಟ್" ಮಾದರಿಯ ಅನುವಾದ ಮಾಡಿ ಮೂಲದ ಸ್ವಾರಸ್ವವನ್ನೇ ಕೆಡಿಸಿ ಓದುಗರಿಂದ ಶಾಪ ಹಾಕಿಸಿಕೊಳ್ಳುವುದಿದೆ. ಅನುವಾದಕನ ನಿಷ್ಠೆ ಮೂಲದ ವಾಕ್ಯಕ್ಕಲ್ಲದೆ, ಮೂಲದ ಭಾವದ ಕಡೆಗಿದ್ದರೆ ಅನುವಾದ ಗೆಲ್ಲುತ್ತದೆ, ಗುರುರಾಜರು ಈ ಹಾದಿಯನ್ನೇ ಹಿಡಿದು ವಿಜಯಪತಾಕೆ ಹಾರಿಸಿದ್ದಾರೆ.
ಕೆಲವು ಉದಾಹರಣೆಗಳು:
Anton Chekhov ಬರೆದ A Country Cottage ಎಂಬುದರ ಮೊದಲ ಸಾಲುಗಳು ಇಂಗ್ಲೀಷಿನ ಅನುವಾದದಲ್ಲಿ ಹೀಗಿವೆ:
Two young people who had not long been married were walking up and down the platform of a little country station. His arm was round her waist, her head was almost on his shoulder, and both were happy.
ಕೊಡ್ಕಣಿಯವರ ಅನುವಾದ ಹೀಗಿದೆ:
"ಇಳಿಸಂಜೆಯ ಹೊತ್ತಿನಲ್ಲಿ ಆ ಚಿಕ್ಕ ಹಳ್ಳಿಯ ರೈಲು ನಿಲ್ದಾಣದ ಆವರಣದಲ್ಲಿ ಮೆಲ್ಲಗೆ ನಡೆದುಕೊಂಡು ಹೋಗುತ್ತಿದ್ದ ನವದಂಪತಿಗಳಿಗದು ಶೃಂಗಾರದ ಸಮಯ.ಉತ್ಕಟಪ್ರೇಮದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಅಂಟಿಕೊಂಡಿದ್ದರು.ಅವನ ಕೈಗಳು ಆಕೆಯ ಸೊಂಟವನ್ನು ಬಳಸಿದ್ದರೆ,ಆಕೆ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ತನ್ನ ತಲೆಯನ್ನುಅವನ ಭುಜಕ್ಕೆ ಆನಿಸಿಕೊಂಡೇ ನಡೆದುಬರುತ್ತಿದ್ದಳು"
ಇಂಗ್ಲೀಷಿನ ಪದಗಳು ಹೇಗೆ ಕನ್ನಡದ ಜಾಯಮಾನಕ್ಕೆ ಸರಿ ಹೊಂದುವಂತೆ ಹಿಂದೆ ಮುಂದಾಗಿವೆ, ಬದಲಾಗಿವೆ ನೋಡಿ. ಅನುವಾದದ ಕೌಶಲವೆಂದರೆ ಇದೇ. ಇಂಗ್ಲೀಷಿನಲ್ಲಿ both were happy ಎಂದಿದ್ದದ್ದು ಆಕೆ ತಲೆಯನ್ನು ಅವನ ಭುಜಕ್ಕೆ ಆನಿಸಿದ್ದೇ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ಚಿತ್ರಿತವಾಗಿದೆ.
ಈ ಸಾಲುಗಳನ್ನೇ, "ಇಬ್ಬರು ಯುವಜೀವಿಗಳು ಬಹಳ ಕಾಲವಾಗದೆ ಮದುವೆಯಾಗಿ ಪ್ಲಾಟ್ಫಾರ್ಮಿನ ಮೇಲೆ ಕೆಳಗೆ ಓಡಾಡುತ್ತಿದ್ದರು ಹಳ್ಳಿಯ ಸ್ಟೇಷನ್ನಿನಲ್ಲಿ. ಅವನ ಕೈ ಅವಳ ಸೊಂಟದ ಸುತ್ತ ಇತ್ತು, ಅವಳ ತಲೆ ಅವನ ಭುಜದ ಹತ್ತಿರ ಹತ್ತಿರ ಇತ್ತು, ಮತ್ತು ಅವರಿಬ್ಬರೂ ಖುಷಿಯಾಗಿದ್ದರು" ಎಂದು ಅನುವಾದಿಸಿ, ಮೂಲದ ವಾಕ್ಯವನ್ನು ಇರುವ ಹಾಗೇ ತಂದು ಕನ್ನಡದ ಕೊಲೆ ಮಾಡುವ ಅವಕಾಶ ಖಂಡಿತವಾಗಿಯೂ ಇತ್ತು, ಹಾಗೆ ಮಾಡುವವರೂ ಇದ್ದಾರೆ! ಕೊಡ್ಕಣಿಯವರು ಹಾಗೆಲ್ಲ ಮಾಡಲೆಳಸುವವರಲ್ಲ! ಅವರದ್ದು ಮೂಲದ ಸುಂದರಿಗೆ ಮತ್ತಷ್ಟು ಮೇಕ್ ಅಪ್ ಮಾಡುವ ಕ್ರಮ.
ಮುಂದಿನ ಸಾಲುಗಳು ಹೀಗಿವೆ:The moon peeped up from the drifting cloudlets and frowned, as it seemed, envying their happiness and regretting her tedious and utterly superfluous virginity. The still air was heavy with the fragrance of lilac and wild cherry. Somewhere in the distance beyond the line a corncrake was calling.
ಕೊಡ್ಕಣಿಯವರ ಅನುವಾದ ಹೀಗಿದೆ: "ತೇಲುತ್ತಿದ್ದ ಮೋಡಗಳ ನಡುವೆ ಸುಮ್ಮನೇ ಇಣುಕಿದ ಚಂದ್ರ ,ಇವರಿಬ್ಬರ ಪ್ರೀತಿಯನ್ನು ಕಂಡು ಮೋಡಗಳ ನಡುವೆ ತನ್ನ ಮುಖವನ್ನು ಮುಚ್ಚಿಕೊಂಡ. ಹುಡುಗಿಯ ಸೌಂದರ್ಯ ಮತ್ತು ತುಸು ಹೆಚ್ಚೇ ಎನಿಸುವಷ್ಟು ಎದ್ದು ಕಾಣುತ್ತಿದ್ದ ಅವಳ ಸ್ತ್ರೀತ್ವ ಚಂದ್ರನಲ್ಲೂ ಅಸೂಯೆ ಮೂಡಿಸಿತೇನೊ ಎನ್ನುವಂತೆ ಭಾಸವಾಗುತ್ತಿತ್ತು. ಮುಸ್ಸಂಜೆಯ ನಸುಗತ್ತಲಲ್ಲಿ ಹಿತವಾಗಿ ಬೀಸುತ್ತಿದ್ದ ತಂಗಾಳಿಯ ತುಂಬೆಲ್ಲ ಹರಡಿಕೊಂಡಿದ್ದ ಕಾಡುಹೂವೊಂದರ ನಸುಗಂಪು ,ಸಂಜೆಯನ್ನು ಇನ್ನಷ್ಟು ಕಾವ್ಯಾತ್ಮಕವಾಗಿಸಿತ್ತು .ನಡುನಡುವೆ ಕಾಡಿನಲ್ಲೆಲ್ಲೋ ಕೂಗುತ್ತಿದ್ದ ಹಕ್ಕಿಯ ದನಿಯೂ ಹಿತವಾಗಿ ಕೇಳಿಸುತ್ತಿತ್ತು"
ಅನುವಾದ ಕಷ್ಟ ಎನ್ನಿಸುವ ಇಂಥ ಸಾಲುಗಳಲ್ಲೂ ಕೊಡ್ಕಣಿಯವರ ಲೇಖನಿ ಹೇಗೆ ಸರಾಗವಾಗಿ ಓಡುತ್ತದೆ ಎಂಬುದಕ್ಕೆ ಈ ಸಾಲುಗಳೇ ಸಾಕ್ಷಿ. The still air was heavy with the fragrance of lilac and wild cherry ಎಂಬುದು ಕನ್ನಡಿಗರಿಗೆ ಬೇಕಾದಂತೆ "ಮುಸ್ಸಂಜೆಯ ನಸುಗತ್ತಲಲ್ಲಿ ಹಿತವಾಗಿ ಬೀಸುತ್ತಿದ್ದ ತಂಗಾಳಿಯ ತುಂಬೆಲ್ಲ ಹರಡಿಕೊಂಡಿದ್ದ ಕಾಡುಹೂವೊಂದರ ನಸುಗಂಪು" ಎಂದಾಗಿ ಹಿತವಾಗಿದೆ. ಇದರ ಮೇಲೆ ಬೋನಸ್ ಎಂಬಂತೆ ಅನುವಾದದಲ್ಲಿ "ಸಂಜೆಯನ್ನು ಇನ್ನಷ್ಟು ಕಾವ್ಯಾತ್ಮಕವಾಗಿಸಿ"ಯೂ ಇದ್ದಾರೆ. "regretting her tedious and utterly superfluous virginity" ಎಂಬ ಸಾಲನ್ನು ಬಿಟ್ಟಿರುವುದೂ ಉಚಿತವೇ ಆಗಿದೆ. Corncrake ಅನ್ನು ಕಾಡಿನ ಹಕ್ಕಿಯಾಗಿಸಿದ್ದು, Lilac ಮತ್ತು wild ಚೆರ್ರಿಯನ್ನು ಅನುವಾದಿಸ ಹೋಗದೆ, ಕಾಡುಹೂವನ್ನು ತಂದದ್ದೂ ಜಾಣ್ಮೆಯ ಕೆಲಸವೇ.
ಆಯ್ದುಕೊಂಡ ಎಲ್ಲ ಕಥೆಗಳೂ ಒಂದಿಲ್ಲೊಂದು ಕಾರಣಕ್ಕೆ ಒಳ್ಳೆಯ ಕಥೆಗಳೇ, ಪಳಗಿದ ಕೈಯ್ಯ ಅನುವಾದವಾದ್ದರಿಂದ ರಸಭಂಗವಾಗದೇ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ - ಇದು ಈ ಸಂಕಲನದ ವಿಶೇಷ. ಕಥೆಗಳ ಕೊನೆಗೆ, ಕಥೆಯ ವಸ್ತು ವಿಶ್ಲೇಷಣೆಯುಳ್ಳ ಕಿರು ಟಿಪ್ಪಣಿಯೊಂದನ್ನು ಅನುವಾದಕರು ಸೇರಿಸಿರುವುದು ನನಗೆ ಇಷ್ಟವಾಯಿತು. ಕಥೆ ಮುಗಿದಾದ ಮೇಲೆ ಬರುವ ಟಿಪ್ಪಣಿಯನ್ನು ಗೆರೆಯ ಮೂಲಕವೋ, ಇನ್ನು ಹೇಗಾದರೋ ಪ್ರತ್ಯೇಕವಾಗಿ ಕಾಣುವಂತೆ ಫಾರ್ಮ್ಯಾಟ್ ಮಾಡಿದ್ದರೆ ಚೆನ್ನಿತ್ತು.
ಇಷ್ಟು ಹೇಳಿಯಾದ ಮೇಲೆ, "ಅನುವಾದಗಳು ಸೊಗಸಾಗಿವೆ" ಎಂದು ಬೇರೆ ಬಾಯಿ ಬಿಟ್ಟು ಹೇಳಬೇಕೇ? ಅದು obvious. ಆಸಕ್ತರು ಓದಿ.
No comments:
Post a Comment