Wednesday, 17 September 2025

ಸೇರಾಜೆ ಸೀತಾರಾಮ ಭಟ್ಟರು

 ಪ್ರವಚನಕಾರ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ಪ್ರಸಂಗಕರ್ತ, ನನ್ನ ದೊಡ್ಡಪ್ಪ ಸೇರಾಜೆ ಸೀತಾರಾಮ ಭಟ್ಟರ ಬಗ್ಗೆ ಅವರ ಅಭಿನಂದನ ಗ್ರಂಥಕ್ಕೆಂದು ನಾನು ಬರೆದಿದ್ದ ಲೇಖನವಿದು:

ನಾವಾಗ ಹೊನ್ನಾವರದಲ್ಲಿದ್ದೆವು. ಸೇರಾಜೆಯವರಿಗೆ ಮಂಗಳಗ್ರಹಕ್ಕೆ ಹೋದರೂ ಯಕ್ಷಗಾನದ ನಂಟು ತಪ್ಪುವುದಿಲ್ಲ ಎಂಬಂತೆ, ಹೊನ್ನಾವರದ ಸುತ್ತಮುತ್ತವೂ ಯಕ್ಷಗಾನದ ಅಭಿಮಾನಿಗಳ ಬಾಯಿಯಲ್ಲಿ ಆಗಾಗ ಬರುವ ಹೆಸರುಗಳ ಊರುಗಳಿವೆ; ಚಿಟ್ಟಾಣಿ, ಕೊಂಡದಕುಳಿ, ಕೆರೆಮನೆ, ಕಡತೋಕ, ಕರ್ಕಿ ಇವೆಲ್ಲ ಹೊನ್ನಾವರದ ಆಚೀಚೆ ಇರುವ ಊರುಗಳೇ. ಅದರೊಂದಿಗೆ, ಹೊನ್ನಾವರವೆಂದರೆ, ಅನತಿ ದೂರ ಆಚೆಗೆ, ಅನತಿ ದೂರ ಈಚೆಗೆ ಹೋದರೆ ಕಣ್ಮನ ತುಂಬಬಲ್ಲ ನಿಸರ್ಗದ ಸೌಂದರ್ಯವನ್ನು ಉಡುಗೊರೆಯಾಗಿ ಪಡೆದ ಭಾಗ್ಯಶಾಲಿ. ಹಸುರು ಸೆರಗನ್ನುಟ್ಟ ಗುಡ್ಡಗಳೇ, ಗುಡ್ಡಗಳ ಬದಿಯಲ್ಲಿ ಬಳುಕಿ ಹರಿಯುವ ಶರಾವತಿ ನದಿಯೇ, ಜಲಪಾತಗಳೇ, ರುದ್ರಗಂಭೀರಾರ್ಣವವೇ, ಏನುಂಟು ಏನಿಲ್ಲ ಅಲ್ಲಿ. ಇದೆಲ್ಲ ಏನೇ ಇದ್ದರೂ ಮುರುಡೇಶ್ವರಕ್ಕೆ ಹೋದಷ್ಟು ಸಲ ನಾವು ಬೇರೆಲ್ಲಿಗೂ ಹೋಗಿರಲಾರೆವು. ಮನೆಗೆ ಊರಿಂದ ಯಾರೇ ನೆಂಟರು ಬಂದರೂ ಅವರಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಬೇಕು ಎಂದು ಹೊರಟಾಗ ಪಟ್ಟಿಯಲ್ಲಿ ಮೊದಲ ಸ್ಥಾನ ಯಾವತ್ತಿದ್ದರೂ ಮುರುಡೇಶ್ವರಕ್ಕೇ ಸಿಗುತ್ತಿತ್ತು. 'ಮನಸ್ಸು ಮಾಡಿದರೆ ಮುರುಡೇಶ್ವರದ ಟೂರ್ ಗೈಡ್ ಆಗಬಲ್ಲೆ' ಎಂಬಷ್ಟು ಸಲ ನಾನಲ್ಲಿಗೆ ಹೋದದ್ದಿತ್ತು.
ಹಾಗೆ ಟೂರ್ ಗೈಡ್ ಆಗಿ ನಾನೊಂದು ಸಲ ಹೋದದ್ದೂ ಉಂಟು - ಅದು ನಾನು ಪುಟ್ಟ ಹುಡುಗನಾಗಿದ್ದಾಗ ನನ್ನ ದೊಡ್ಡಪ್ಪ(ನನ್ನ ತಂದೆ ಸೇರಾಜೆ ಗಣಪತಿ ಭಟ್ಟರ ಅಣ್ಣ) ಸೇರಾಜೆ ಸೀತಾರಾಮ ಭಟ್ಟರನ್ನು ಅಲ್ಲಿಗೆ ಕರೆದುಕೊಂಡು ಹೋದಾಗ. ಅದೆಷ್ಟು ಸಲ ಅಲ್ಲಿಗೆ ಹೋಗಿದ್ದರೂ ದೊಡ್ಡಪ್ಪನ ಜೊತೆ ಅಲ್ಲಿಗೆ ಹೋದದ್ದು ಅವರೇ ಮಾಡಿದ ಒಂದು ಹಾಸ್ಯದಿಂದಾಗಿ ಇಂದಿಗೂ ನೆನಪಿನ ಪುಟಗಳಲ್ಲಿ ಅಳಿಸದ ರೇಖೆಯಾಗಿ ನಿಂತಿದೆ. ಅದಾದದ್ದು ಹೀಗೆ: ದೊಡ್ಡಪ್ಪ ನಮ್ಮಲ್ಲಿಗೆ ಬಂದರು, ಅವರು ನನ್ನನ್ನು ಕರೆದುಕೊಂಡು ಹೋದದ್ದೋ ನಾನು ಅವರನ್ನು ಕರೆದುಕೊಂಡು ಹೋದದ್ದೋ, ಅಂತೂ ನಾವಿಬ್ಬರೂ ಮುರುಡೇಶ್ವರಕ್ಕೆ ಹೋದೆವು. ಹೋದಾಗ ನಾನೇನು ಮಾಡಿದೆನೋ ಹೇಳಿದೆನೋ ನೆನಪಿಲ್ಲ, ನಾನೇನು ಹೇಳಿದೆನೆಂದು ದೊಡ್ಡಪ್ಪ ಹೇಳಿದರೆಂಬುದು ಮಾತ್ರ ನೆನಪಿದೆ; ಅದನ್ನವರು ಸ್ವಾರಸ್ಯಕಾರಿಯಾಗಿ ವರ್ಣಿಸಿದ ಕ್ರಮದಿಂದ: "ಇವನು ನನಗೆ ಮುರುಡೇಶ್ವರದಲ್ಲಿ ಏನು ತೋರಿಸಿದ ಗೊತ್ತುಂಟೋ? ದೇವಸ್ಥಾನವನ್ನಲ್ಲ, ಅದನ್ನು ತೋರಿಸಿದ, ಇಲ್ಲ ಅಂತಲ್ಲ, ಆದರೆ ಅದಕ್ಕಿಂತಲೂ ಹೆಚ್ಚು ಉತ್ಸಾಹದಿಂದ, ಸಂಭ್ರಮದಿಂದ ತೋರಿಸಿದ್ದು(ಸ್ವಲ್ಪಭಾಗ ಸಮುದ್ರದಲ್ಲಿ ಇರುವ, ನಾವು ಸಮುದ್ರದ ಹೋಟೆಲು ಎನ್ನುತ್ತಿದ್ದ) ಅಲ್ಲಿನ ಹೋಟೆಲನ್ನು! ಅದನ್ನು ತೋರಿಸಿಯೂ, ಎಲ್ಲ ಮಕ್ಕಳಂತೆ ಈ ಹೋಟೆಲಿಗೆ ಕರೆದುಕೊಂಡು ಹೋಗಿ ಅನ್ನಲಿಲ್ಲ, ಈ ತಿಂಡಿ ಕೊಡಿಸಿ ಎನ್ನಲಿಲ್ಲ. ಮತ್ತೆಂತ ಹೇಳಿದ ಹಾಗಾದರೆ?" ಹೀಗೆ ನಗುತ್ತಾ ಹೇಳಿ ದೊಡ್ಡಪ್ಪ ಮಾತು ನಿಲ್ಲಿಸಿದರು, "ಎಂತ ಹೇಳಿದ?" ನನ್ನ ಅಪ್ಪ ಅಮ್ಮ ಕೇಳಿದರು, ಆಗ ದೊಡ್ಡಪ್ಪ ಮುಂಬರಿದು ಹೇಳಿದರು, "ಇಲ್ಲಿ ಹೋಟೆಲಿದೆ, ಅಲ್ಲಿ ಕೂತರೆ, ಸಮುದ್ರ ನೋಡಬಹುದು, ಒಳ್ಳೆ ಹೋಟೆಲು, ನನ್ನ ಅಪ್ಪ ಆದರೆ ನನಗೆ ಇಲ್ಲಿ ಯಾವತ್ತೂ ಶೀರಾ(ಕೇಸರಿಭಾತು) ಮತ್ತು ಪೂರಿ ಕೊಡಿಸುತ್ತಾರೆ, ಹೀಗೆ ಹೇಳಿದ ನಮ್ಮ ಶರತ್" ಎಂದು ನಕ್ಕರು. ಏನನ್ನಾದರೂ ಕೊಡಿಸಿ ಎಂದು ನೇರವಾಗಿ ಕೇಳದೆ, ಪರೋಕ್ಷವಾಗಿ, "ನನ್ನಪ್ಪ ಕೊಡಿಸುತ್ತಾರೆ, ಆದ್ದರಿಂದ ನೀವೂ ಕೊಡಿಸಬೇಕು" ಎಂದು ನಾನು ಕೇಳಿದ ಪರಿಯನ್ನು "ಭಾರೀ ಉಶಾರಿದ್ದ ಮಾಣಿ" ಎನ್ನುತ್ತಾ, ದೊಡ್ಡಪ್ಪ ನನ್ನ ಕಾಲೆಳೆಯುತ್ತಾ ವರ್ಣಿಸಿದ್ದೇ ವರ್ಣಿಸಿದ್ದು, ನಾವೆಲ್ಲರೂ ನಕ್ಕೆವು(ಕಾಲೆಳೆಸಿಕೊಂಡ ನಾನೂ ಸೇರಿಕೊಂಡೆ).
ಹೀಗೆ ಯಾವುದಾದರೂ ಘಟನೆಯನ್ನು ಎತ್ತಿಕೊಂಡು, ಅದರಲ್ಲಿನ ಸ್ವಾರಸ್ಯವನ್ನು ಗುರುತಿಸಿ, ರಸಸ್ಥಾನ ಅಥವಾ ಪಂಚ್ ಲೈನಿನ ಕಡೆಗೆ ನಿಧಾನವಾಗಿ, ಸಸ್ಪೆನ್ಸ್ ಉಂಟುಮಾಡುತ್ತಾ ಕೊಂಡೊಯ್ಯುವುದರಲ್ಲಿ ಅವರು ಸಿದ್ಧಹಸ್ತರು. ಅವರ ಸಂಗ್ರಹದಲ್ಲಿ ರಸಪ್ರಸಂಗಗಳಿಗೆ, ಆಖ್ಯಾಯಿಕೆಗಳಿಗೆ, ನೆನಪುಗಳಿಗೆ ಕೊರತೆಯಿಲ್ಲ, ಶೇಣಿಯವರ ಬಗ್ಗೆ ಮತ್ತು ದೇರಾಜೆಯವರ ಬಗ್ಗೆಯಂತೂ ಅವರ ಹತ್ತಿರ ಸಾಕಷ್ಟು ಕಥೆಗಳು ಉಂಟು. ಘಟನೆಗಳ ನಿರೂಪಣೆಯನ್ನು ಕೇಳುವವರ ಕುತೂಹಲ ಕೆರಳುವಂತೆ ಕಥನಮಾಡುವುದೂ ಅವರಿಗೆ ಒಲಿದಿರುವ ಕಲೆಯೇ. ಇದನ್ನು ಇನ್ನಷ್ಟು ಮುಂದೆ ಕೊಂಡು ಹೋಗಿ ಹೇಳುವುದಾದರೆ, ವಾಕ್ಚಾತುರ್ಯದ, ಬುದ್ಧಿಚಮತ್ಕಾರದ wit ಇರುವ ಮಾತುಗಳು, ವಿನೋದದ ಉಕ್ತಿಗಳು ಅವರಿಗೆ ಬಲುಪ್ರಿಯ. ಅವರ ಸೋದರಮಾವನಾದ ಕುರಿಯ ವಿಠ್ಠಲ ಶಾಸ್ತ್ರಿಗಳ ಬಗ್ಗೆ ಬರೆಯುವಾಗ ಅವರೊಮ್ಮೆ ಹೀಗೆ ಬರೆದಿದ್ದರು: "ಇತಿಹಾಸವು ಹಲವು ಕಲಾವಿದರನ್ನು ನಿರ್ಮಿಸಿದೆ, ಇತಿಹಾಸವನ್ನೇ ನಿರ್ಮಿಸಿದ ಕಲಾವಿದರು ಮಾತ್ರ ಬೆರಳೆಣಿಕೆಯಷ್ಟೇ ಜನರಿರುವುದು". ಹೀಗೆ ಮಾತಿನ ಜೊತೆ ಆಟ ಆಡುವುದು, ಶ್ಲೇಷೆಗಳನ್ನು ಬಳಸುವುದು ಎಲ್ಲ ಅವರಿಗೆ ಪ್ರಿಯವೂ ಹೌದು, ಲೀಲಾಜಾಲವೂ ಹೌದು.
ಒಮ್ಮೆ ನಮ್ಮಲ್ಲಿ ಅವರು ಊಟಮಾಡುವಾಗ ನನ್ನನ್ನು ನೋಡಿ ಹೇಳಿದರು, "ದಾಕ್ಷಿಣ್ಯ ಮಾಡಬೇಡ, ಇದು ನಿನ್ನದೇ ಮನೆ ಎಂದುಕೋ" ಅದರ ಬೆನ್ನಿಗೇ ದೇರಾಜೆಯವರ ಜೋಕೊಂದು ದೊಡ್ಡಪ್ಪನ ಸ್ಮರಣೆಗೆ ಬಂತು. ದೇರಾಜೆಯವರು ಒಂದು ಕಡೆಗೆ ಹೋಗಿದ್ದಾಗ ಊಟ ಬಡಿಸುತ್ತಾ ಒಬ್ಬರು ಹೇಳಿದ್ದರಂತೆ, "ದೇರಾಜೆಯವರೇ ದಾಕ್ಷಿಣ್ಯ ಮಾಡಬೇಡಿ", ದೇರಾಜೆಯವರ ಉತ್ತರ ಕೂಡಲೇ ಬಂತು, "ದಾಕ್ಷಿಣ್ಯ ಮಾಡಲಿಕ್ಕೆ ಇದೇನು ನನ್ನ ಮನೆಯೇ?". ದೊಡ್ಡಪ್ಪನ ಹಾಸ್ಯಪ್ರಜ್ಞೆ, ವಿನೋದದಲ್ಲಿ ಅವರು ಮೆಚ್ಚುವ ಮಾತಿನ ಜಾಣ್ಮೆ, ಸಮಯಸ್ಫೂರ್ತಿ ಇವೆಲ್ಲ ಈ ನಿದರ್ಶನಗಳಲ್ಲಿ ಎದ್ದು ಕಾಣುತ್ತವೆ.
ಮಾತು, ಬರೆಹಗಳಲ್ಲಿ, ತಾಳಮದ್ದಳೆಯಲ್ಲಿ ಪಾಂಡಿತ್ಯದ ವಿನಿಯೋಗದ ಬಗ್ಗೆ ನಾವು ಮಾಡುವಾಗ ದೊಡ್ಡಪ್ಪ ಪ್ರಸಂಗವೊಂದನ್ನು ನೆನಪಿಸಿಕೊಂಡರು, ದೊಡ್ಡ ಸಾಮಗರ ಅರ್ಥದ ಬಗ್ಗೆ ಒಬ್ಬರು ದೊಡ್ಡಪ್ಪನ ಹತ್ತಿರ ಹೀಗೆ ವಿಮರ್ಶೆ ಮಾಡಿದರಂತೆ, "ಸಾಮಗರದ್ದು ಅರ್ಥ ಎಂದರೆ ಅರ್ಥ. ಅದ್ಭುತವಾದ ಅರ್ಥ. ಎಂಥಾ ಅರ್ಥ, ಎಂಥಾ ಅರ್ಥ! ಛೆ! ಆದರೆ ನಮ್ಮಂಥವರಿಗೆಲ್ಲ ಅರ್ಥ ಆಗುವಂಥದ್ದಲ್ಲ!", ಈ ಜೋಕನ್ನು ಅವರು ವ್ಯಾಖ್ಯಾನಿಸಲಿಲ್ಲ. ಅರ್ಥ ಆದದ್ದೂ ಅದ್ಭುತವಾಗಿ ಕಾಣಬಹುದು, ಅರ್ಥ ಆಗದೇ ಇದ್ದದ್ದು ಮತ್ತೊಂದೇ ಕಾರಣಕ್ಕೆ ಅದ್ಭುತವೆಂದೆನ್ನಿಸಬಹುದು, "ದೇರಾಜೆಯವರು ರಾತ್ರಿ ಕೂಟದಲ್ಲಿ ಹೇಳಿದ ಚತುರೋಕ್ತಿಗೆ ನಾನು ಮರುದಿನ ಮನೆಗೆ ಬಂದು ನಕ್ಕದ್ದುಂಟು" ಎಂದು ದೊಡ್ಡಪ್ಪನೇ ನನ್ನ ಹತ್ತಿರ ಇನ್ನೊಂದು ಸಂದರ್ಭದಲ್ಲಿ ತಡವಾಗಿ ಅರ್ಥ ಆಗುವಿಕೆಯ ಸ್ವಾರಸ್ಯದ ಬಗ್ಗೆ ಹೇಳಿದ್ದುಂಟು. ಚತುರೋಕ್ತಿಯ ಬಗೆಗಿನ ವಿಮರ್ಶೆಯನ್ನೂ ಹೀಗೆ ಚತುರೋಕ್ತಿಯ ಮೂಲಕವೇ ಮಾಡಬಲ್ಲವರು ದೊಡ್ಡಪ್ಪ.
ಅವರ ಈ ತಮಾಷೆಯ ಮುಖ, ಪರಿಹಾಸ ಪ್ರಜ್ಞೆ, ರಸಪ್ರಸಂಗಗಳ ಸಂಗ್ರಹವು ಸಭೆ ಸಮಾರಂಭಗಳ ಭಾಷಣಗಳಲ್ಲಿ, ಅವರ ತಾಳಮದ್ದಳೆ ಅರ್ಥಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲವೇನೋ. ಈ ಮುಖವು, ಈ wit, ಈ ವಿನೋದವು ಪ್ರಭಾಕರ ಜೋಶಿಯವರ ಭಾಷಣಗಳಲ್ಲಿ ಕಾಣಿಸಿಕೊಳ್ಳುವಂತೆ ದೊಡ್ಡಪ್ಪನ ಭಾಷಣಗಳಲ್ಲಿ ಅರ್ಥಗಾರಿಕೆಯಲ್ಲಿ, ಬರೆಹದಲ್ಲಿಯೂ ಕಾಣಿಸಿಕೊಳ್ಳಲಿ ಎಂದು ನನ್ನ ಹಾರೈಕೆ. ಯಕ್ಷಗಾನದ ದಿಗ್ಗಜಗಳ ಒಡನಾಟ, ಯಕ್ಷಗಾನವು ಹೇಗಿರಬೇಕೆಂಬ ಸ್ಪಷ್ಟವಾದ ಕಲ್ಪನೆ, ಸರಿಯಾದದ್ದು ಸರಿಯೆಂದೂ, ಸರಿಯಲ್ಲದ್ದನ್ನು ಇದು ಹೀಗಲ್ಲವೆಂದೂ ಹೇಳುವ ಸಾಮರ್ಥ್ಯ, ವಿಮರ್ಶೆಯ ಮಾತುಗಳನ್ನು ಯುಕ್ತವಾಗಿ ಜೋಡಿಸುವ ವಾಕ್ಪಟುತ್ವ ಇವೆಲ್ಲ ದೊಡ್ಡಪ್ಪನಲ್ಲಿ ಇರುವುದರಿಂದ ವಿಮರ್ಶೆಯ ಕ್ಷೇತ್ರಕ್ಕೂ ಅವರು ಇನ್ನಷ್ಟು ಕೊಡುಗೆಗಳನ್ನು ಕೊಡಲು ಸಾಧ್ಯವಿದೆಯೆಂದು ನನ್ನ ಅಭಿಪ್ರಾಯ. ಶೇಣಿಯವರ "ಯಕ್ಷಗಾನ ಮತ್ತು ನಾನು"ವನ್ನು ಮಾದರಿಯಾಗಿಟ್ಟುಕೊಂಡು ಅಂಥದ್ದೊಂದು ಮೌಲಿಕ ಕೃತಿಯನ್ನು ರಚಿಸುವ ನಿಟ್ಟಿನಲ್ಲಿಯೂ ಅವರು ಯೋಚನೆ ಮಾಡಬಹುದು, ಅದಕ್ಕೆ ಬೇಕಾದ ಅನುಭವ ಸಾಮಗ್ರಿ, ಕಲೆಯ ನಿಕಟಪರಿಚಯ, ಚಿಂತನೆಯ ಶೈಲಿ ಎಲ್ಲವೂ ಅವರ ಹತ್ತಿರ ಇದೆ, ಅವರು ಮನಸ್ಸು ಮಾಡಿ, ಹಠ ಹಿಡಿದು ಕೂರಬೇಕು, ಕೂತರೆ ಆದೀತು.
ನಾವು ನಮ್ಮ ಮಕ್ಕಳನ್ನು ಮಾತ್ರ ಹೊಗಳಬೇಕೆಂಬ ಸಂಕುಚಿತ ಮನೋಭಾವ ಸೇರಾಜೆಯ ಮನೆಯವರಲ್ಲಿ ಕಂಡು ಬರುವುದಿಲ್ಲ, ದೊಡ್ಡಪ್ಪನಾದರೂ ಹಾಗೆಯೇ, ನನ್ನ ಬಗ್ಗೆ ಅಕ್ಕರೆಯ, ಪ್ರಶಂಸೆಯ ನುಡಿಯನ್ನೆಲ್ಲ ಯಾವತ್ತೂ ಮುಕ್ತವಾಗಿ ಆಡುವವರೇ. ಮೇಲಿನ ಪ್ರಸಂಗಗಳು ಅವರ ವ್ಯಕ್ತಿತ್ವದ ಇನ್ನೊಂದು ಆಯಾಮವನ್ನೂ ತೋರಿಸುತ್ತವೆ. ಓದುವುದಕ್ಕೆ, ಕೆಲಸಕ್ಕೆ ಎಂದು ದೂರದ ಊರುಗಳಲ್ಲಿ ನೆಲೆಸಿರುವ ನನ್ನಂಥವರು ಬಂಧುಗಳನ್ನು, ಹಿರಿಯರನ್ನು ಭೇಟಿಯಾಗುವುದು ಊರಿನಲ್ಲಿ ಮದುವೆಯೋ, ಉಪನಯನವೋ, ತಿಥಿಯೋ, ಪೂಜೆಯೋ ಆದಾಗಲೇ. ಹಾಗೆ ಭೇಟಿಯಾದಾಗಲೆಲ್ಲ, ಮಾತಾಡುವುದಕ್ಕೆ ವಿಷಯ ಸಿಕ್ಕದೆ, "ನೀನೀಗ ಎಲ್ಲಿ ಇರುವುದು, ಯಾವ ಕಂಪೆನಿಯಲ್ಲಿ ಕೆಲಸ?" ಎಂದು ಮೊದಲಾಗಿ ಎರಡು ವಾಕ್ಯಗಳ ಉಪಚಾರದ ಮಾತುಗಳಲ್ಲೇ ಸಂಭಾಷಣೆಗಳು ಕೊನೆಗೊಳ್ಳುವುದು ಹೆಚ್ಚು. ನನಗೆ ದೊಡ್ಡಪ್ಪನೊಂದಿಗೆ ಹಾಗಾಗುವದು ಕಡಮೆ. ಯಾವಾಗ ಸಿಕ್ಕಿದರೂ ನಮ್ಮದು ದೀರ್ಘವಾದ ಪಟ್ಟಾಂಗ, ರಸಪ್ರಸಂಗಗಳ ವಿನಿಮಯ, ತಾಳಮದ್ದಲೆಗಳ ಬಗ್ಗೆ ಚರ್ಚೆ. ನಾನು ಒಂದು ಮೂವತ್ತೈದು ವರ್ಷಗಳ ಮೊದಲು ಹುಟ್ಟಿದ್ದರೆ ದೊಡ್ಡಪ್ಪ ನನಗೆ ಗೆಳೆಯರೇ ಆಗಿರುತ್ತಿದ್ದರೋ ಏನೋ!
ಒಮ್ಮೆ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡುವಾಗ ವೈದ್ಯರೊಬ್ಬರು ಮಾಡಿದ ಎಡವಟ್ಟಿನಿಂದ ದೊಡ್ಡಪ್ಪನ ಆರೋಗ್ಯ ಹದಗೆಟ್ಟಿತ್ತು. ಅವರು ಕ್ಷೀಣರಾಗಿ, ಕಂಗಾಲಾಗಿದ್ದರು. ಆಗ ನಾನವರನ್ನು ನೋಡಲು ಹೋಗಿದ್ದೆ. ಆಗಲೂ ಆರೋಗ್ಯ ಹೀಗಾಯಿತಲ್ಲ ಎಂಬುದಕ್ಕಿಂತ, ತಾಳಮದ್ದಲೆಗಳಿಗೆ, ಪ್ರವಚನಗಳಿಗೆ, ಉಪನ್ಯಾಸಗಳಿಗೆ ಹೋಗಲಾಗುತ್ತಿಲ್ಲವಲ್ಲ ಎಂಬ ಚಿಂತೆಯೇ ಅವರನ್ನು ಹೆಚ್ಚು ಕಾಡಿದಂತೆ ಕಂಡಿತು! ಆಟ, ತಾಳಮದ್ದಳೆ, ಉಪನ್ಯಾಸ ಇವೆಲ್ಲ ಅವರನ್ನು ಅಷ್ಟು ಆವರಿಸಿಕೊಂಡಿವೆ. ಹಾಗೆಂದು ಅವರು ಇಷ್ಟಕ್ಕೆ ಸೀಮಿತರಾದವರೇನೂ ಅಲ್ಲ. ಸಿಕ್ಕಾಗ ಬೇರೆ ಎಷ್ಟೋ ವಿಷಯಗಳ ಬಗ್ಗೆಯೂ ನಾವು ಹರಟಿದ್ದಿದೆ. ಹಳೆಯ ಇಂಗ್ಲಿಷ್ ಥ್ರಿಲ್ಲರ್ ಕಾದಂಬರಿಗಳು, ಹಳೆಯ ಹಾಲಿವುಡ್ ಚಿತ್ರಗಳು ಹೀಗೆ ಯಾವುದರ ಬಗ್ಗೆಯಾದರೂ ಸರಿ ನಮ್ಮದು ಮಾತೇ ಮಾತು(ಹಳೆಯ ಹಾಲಿವುಡ್ ಚಿತ್ರಗಳ ಬಗ್ಗೆ ಸಾಕಷ್ಟು ಮಾತಾಡಲೂ ದೊಡ್ಡಪ್ಪ ಬಲ್ಲರು). ಶಿವರಾಮ ಕಾರಂತರ ಒಂದು ಮಾತನ್ನೋ, ಬೀಚಿಯವರ ಒಂದು ಭಾಷಣವನ್ನೋ ತಮ್ಮ ನೆನಪಿನ ಸಂಚಿಯಿಂದ ಹೊರಗೆಳೆಯಬಲ್ಲರು. ಬೇರೆ ಏನೂ ಸಿಕ್ಕದಿದ್ದರೆ, ಶೇಣಿಯವರ ಹೆಸರನ್ನು ಎಳೆದು ತಂದರಾಯಿತು! ಶೇಣಿಯವರ ಅರ್ಥದ ಪರಮ ಅಭಿಮಾನಿಯಾದ ದೊಡ್ಡಪ್ಪ ಮತ್ತೊಂದು ಹತ್ತು ನಿಮಿಷವಾದರೂ ಶೇಣಿಯವರ ವಿಚಾರವಾಗಿ ಮಾತಾಡುತ್ತಾರೆ.
ಇದರಲ್ಲಿ ಇನ್ನೊಂದು ವಿಷಯವೂ ಅಡಕವಾಗಿದೆ. ಹೆಚ್ಚಿನ ಕಡೆಗಳಲ್ಲಿ ಎರಡು ತಲೆಮಾರಿನವರ ನಡುವೆ ಜನರೇಶನ್ ಗ್ಯಾಪ್ ಇರುವುದುಂಟು. ಹಿರಿಯರು ಕಿರಿಯರ ಜೊತೆ ಸಲುಗೆಯಿಂದಿರಬಾರದು, ಬಿಗುಮೋರೆ ಹಾಕಿಕೊಂಡು, ಗಂಭೀರವದನರಾಗಿ ಕಿರಿಯರಿಂದ ಅಂತರ ಕಾಪಾಡಿಕೊಳ್ಳಬೇಕು ಎಂದಾಗುವುದುಂಟು. ಈಗಿನ ಮಕ್ಕಳಾದರೋ ಮೊಬೈಲನ್ನು ನೋಡುವಷ್ಟು ಹೊತ್ತು ಮನುಷ್ಯರನ್ನು ನೋಡುವುದಿಲ್ಲ ಎನ್ನಿಸುವುದುಂಟು. ನಮ್ಮಲ್ಲಿ ಮಾತ್ರ ಎಂದೂ ಹೀಗಾಗಿಲ್ಲ. ನಾವು ಯಾವಾಗ ಸಿಕ್ಕಿದರೂ ಸರಸ ಸಂಭಾಷಣೆಗೆ ದೊಡ್ಡಪ್ಪನೇ ತೊಡಗುವುದರಿಂದ ಗ್ಯಾಪೂ ಇಲ್ಲ, ಇನ್ನೊಂದೂ ಇಲ್ಲ, ಮತ್ತೊಂದೂ ಇಲ್ಲ. ನನ್ನ ದೊಡ್ಡ ದೊಡ್ಡಪ್ಪ ಸೇರಾಜೆ ತಿರುಮಲೇಶ್ವರ ಭಟ್ಟರೂ ಹೀಗೆ ನನ್ನೊಂದಿಗೆ ಎಷ್ಟೋ ಸಂಭಾಷಣೆಗಳನ್ನು ನಡೆಸಿ, ಕಥೆಗಳನ್ನು, ತಮಾಷೆಗಳನ್ನು ಹಂಚಿಕೊಂಡವರೇ. "ಸಣ್ಣ ಮಕ್ಕಳು, ಅವರ ಹತ್ತಿರ ಏನು ಮಾತು" ಎಂಬ ಭಾವ ನನ್ನ ಅಪ್ಪ, ದೊಡ್ಡಪ್ಪಂದಿರಲಿಲ್ಲ.
ಆತ್ಮೀಯತೆಯ ಸಲುಗೆಯಿಂದ ಇಷ್ಟು ಬರೆದಿದ್ದೇನೆ. ದೊಡ್ಡಪ್ಪನಿಂದ ಇನ್ನಷ್ಟು ಸಾಹಿತ್ಯಸೇವೆ, ಮಹತ್ವಾಕಾಂಕ್ಷೆಯ ಕೃತಿಗಳು ಇವೆಲ್ಲ ಬರಲಿ, ಅವರು ನನಗೆ ತಮ್ಮ ನೆನಪಿನ ಬುತ್ತಿಯಿಂದ ಇನ್ನಷ್ಟು ಕಥೆಗಳನ್ನು ಹೇಳಲಿ ಎಂದು ಹಾರೈಸುತ್ತೇನೆ.

No comments:

Post a Comment