Wednesday, 17 September 2025

Second edition of Baagilu tereye sesamma book

 ಪ್ರಿಯ ಬಾಗಿಲು ತೆರೆಯೇ ಸೇಸಮ್ಮ,

ಆ ದಿನಗಳು ನಿನಗೆ ನೆನಪಿವೆಯೇ? ನೀನು ನನ್ನ ತಲೆಯ ಗೂಡು ಬಿಟ್ಟು ಪುಸ್ತಕದ ಅಂಗಡಿಗಳ ಕಡೆಗೆ ಹಾರಿದ ದಿನಗಳು? ನಾನು ಮೊದಮೊದಲು ರ್ಯಾಗಿಂಗ್ ಮಾಡುವವರ ಕಾಲೇಜಿಗೆ ಮಗಳನ್ನು ಕಳಿಸುವ ಪಾಲಕನಂತೆ ಹೆದಹೆದರಿ ನಿನ್ನನ್ನು ಕಳುಹಿಕೊಟ್ಟ ಗಳಿಗೆ? ವಿನಯಕುಮಾರ ಸಾಯ ತಯಾರಿಸಿಕೊಟ್ಟ ಹಳದಿ ಬಣ್ಣದ ಮುಖಪುಟದ ದಿರಿಸನ್ನು ದಿವಿನಾಗಿ ತೊಟ್ಟು, ಗಣೇಶ ಭಟ್ ನೆಲೆಮಾಂವ್ ಅವರ ಬೆನ್ನುಡಿಯನ್ನು ಮೆಚ್ಚಿನೋಲೆಯಾಗಿ ಧರಿಸಿ, ಜೋಗಿಯವರ ಮುನ್ನುಡಿಯನ್ನು ವಿಐಪಿ ಪಾಸಿನಂತೆ ಬೀಸಿ ತೊನೆದಾಡಿಸುತ್ತ ನೀನು ನಿರ್ಗಮಿಸಿದ್ದೆ; ನೀನು ಮೊದಲಿನಿಂದಲೂ ಹೇಳಿದ ಮಾತನ್ನು ಕೇಳಿದವಳಲ್ಲ.
"ನೀನಿಲ್ಲಿಯೇ ಹಾಯಾಗಿ ಇರು, ಪುಸ್ತಕರೂಪವೆಲ್ಲ ನಿನಗೆ ಬೇಡ" ಎಂದು ಸಾರಿ ಸಾರಿ ಹೇಳಿದರೂ ಬಿಡದ ಗಡಸುಗಾರ್ತಿ ನೀನು. ಸಿಂಗಾರ ಬಂಗಾರ ಮಾಡಿಕೊಂಡು, ಪುಸ್ತಕರೂಪಿಯಾಗಿ, ಹಾರಬೇಕೋ ನಡೆಯಬೇಕೋ ಎಂದು ಗೊತ್ತಾಗದೆ ಗೊಂದಲಗೊಂಡ ಮರಿಹಕ್ಕಿಯೊಂದರಂತೆ ನೀನು ಪುಸ್ತಕದ ಮಳಿಗೆಗಳೆಡೆಗೆ, ಸಾಹಿತ್ಯಲೋಕದ ಕಡೆಗೆ ನೆಗೆನೆಗೆದು ಹೊರಟೆ. "ನಿನ್ನನ್ನು ಯಾರು ಓದುತ್ತಾರೆ?" ಎಂದು ಕೇಳಿದರೆ, "ಓದಲೇಬೇಕೆಂದು ಏನಿದೆ? ಯಾರಾದರೂ ಚಹಾದ ಲೋಟವನ್ನಿಡಲು 'ಕೋಸ್ಟರ್' ಆಗಿ, ಮಕ್ಕಳಿಗೆ ತಲೆಯಿಟ್ಟು ಮಲಗಲು ಆಧಾರವಾಗಿ ಅಥವಾ ಪುಟ ಹರಿಯಲು ಸಿಗುವ ಆಟದ ಸಾಮಾನಾಗಿ, ಸೊಳ್ಳೆ ಹೊಡೆಯುವ ಆಯುಧವಾಗಿ ನನ್ನನ್ನು ಬಳಸಬಹುದು" ಎಂದು ಜೋಕ್ ಮಾಡಿದ್ದೆ. ನೀನು ಯಾವುದನ್ನೂ ಸುಲಭದಲ್ಲಿ ಒಪ್ಪಿದವಳೇ ಅಲ್ಲ.
ನಿನಗೇನು ಪ್ರಚಾರವಿತ್ತೇ, ಕಟ್ ಔಟುಗಳಿದ್ದವೇ, ಯಾರಾದರೂ ಟಿಕ್ ಟಾಕಿನಲ್ಲಿ ನಿನ್ನ ಬಗ್ಗೆ ಡ್ಯಾನ್ಸ್ ಮಾಡಿದರೇ? ಏನೂ ಇರಲಿಲ್ಲ. ಆದರೂ ನೀನು ಎಷ್ಟು ಸಾಧ್ಯವೋ ಅಷ್ಟು ಜನರನ್ನು ತಲುಪುತ್ತೇನೆಂದು ಹೊರಟೆ. "ಬರೆದದ್ದು ಚೆನ್ನಾಗಿದ್ದರೆ, ಅದೇ ಒಳ್ಳೆಯ ಮಾರ್ಕೆಟಿಂಗ್" ಎಂಬುದು ನಿನ್ನ ವಾದವಾಗಿತ್ತು. ನನ್ನ ಮಾತನ್ನು ನೀನೆಲ್ಲಿ ಕೇಳುತ್ತೀಯೆ? ಕಡೆಗೂ, "ಜನರ ಪ್ರೀತಿಯನ್ನು ಗಳಿಸು" ಎಂದು ಹೇಳಿ ನಾನು ನಿನ್ನನ್ನು ಬೀಳ್ಕೊಟ್ಟೆ. ಓದುಗರು ಮೆಚ್ಚಿ ಕೊಂಡಾಡಿದಾಗ, ನೀನು ನಾಚಿ, ಪುಟದ ಬದಿಗಳು ಕೆಂಪಾದದ್ದನ್ನು ನಾನು ಮರೆತಿಲ್ಲ.
ಈಗ ನೋಡಿದರೆ, ಮೊದಲ ಮುದ್ರಣದ ಎಲ್ಲ ಪ್ರತಿಗಳು ಮುಗಿದು ಎರಡನೆಯ ಮುದ್ರಣಕ್ಕೆ ಹೊರಟಿದ್ದೇನೆಂದು ಹೇಳಿ, "ನನ್ನ ಬಗ್ಗೆ ಫೇಸ್ಬುಕ್ಕಿನಲ್ಲಿ ಏನಾದರೂ ಬರಿ" ಎಂದು ಪೀಡಿಸುತ್ತಿರುವೆ. "ಈ ಪುಟ್ಟ ಸಾಧನೆಯನ್ನು ನಿನ್ನ ಬೈಂಡಿಂಗಿಗೆ ಹತ್ತಿಸಿಕೊಂಡು ಬೀಗಬೇಡ; ನೀನೊಂದು ಪಿಡಿಎಫ್ಫಿನಲ್ಲಿ ಚದುರಿದ ಅಕ್ಷರಗಳ ಮುದ್ದೆಯಾಗಿ identity crisisನಿಂದ ಒದ್ದಾಡುತ್ತಿದ್ದದ್ದನ್ನು ನೋಡಿದ್ದೇನೆ" ಎಂದು ನಾನು ಹೇಳಿದರೂ ಕೇಳದೆ ಒತ್ತಾಯ ಮಾಡಿದೆ. ನಿನಗೆ ಎರಡನೆಯ ಮುದ್ರಣದ ನೆವದಲ್ಲಿ ಅಭಿನಂದನೆಗಳನ್ನು ಬೇಕಾದರೆ ಹೇಳುತ್ತೇನೆ, ಆದರೆ ಈ ಅಲ್ಪತೃಪ್ತಿಯು ಬೇಡ. ನಾನು ಹೇಳಿಕೇಳಿ ಒಬ್ಬ ಇಂಡಿಯನ್ ಪೇರೆಂಟ್; ನನ್ನನ್ನು ಅಷ್ಟು ಸುಲಭದಲ್ಲಿ ಮೆಚ್ಚಿಸಲಾಗದು. ಈಗ ನೋಡು, ನಿನ್ನ ಪುಟ್ಟ ತಮ್ಮನೂ, ನವಜಾತಶಿಶುವೂ ಆದ "ಹತ್ತೇವು ವಿಜ್ಞಾನದ ಜೀಪ" ಇದ್ದಾನಲ್ಲ, ಅವನಿಗೆ ವಿಶ್ವವಾಣಿ ಅಂಕಿತ ಟಾಪ್-10 ಪಟ್ಟಿಯಲ್ಲಿ ಕಳೆದ ವಾರ ಆರನೆಯ ಸ್ಥಾನವೂ ಅದರ ಮೊದಲಿನ ವಾರದಲ್ಲಿ ಮೂರನೆಯ ಸ್ಥಾನವೂ ಬಂದಿದೆ. ನೀನೂ ಬಿಂಕವನ್ನು ಬಿಟ್ಟು ಸ್ವಲ್ಪ ಅವನನ್ನು ನೋಡಿ ಕಲಿ. ಅವನ ಹಾಗೆ ಏನಾದರೂ ಮಾಡಿ ತೋರಿಸು. ನಿಮಗಿಬ್ಬರಿಗೂ ಒಳಿತಾಗಲಿ.
ಇಂತಿ ನಿನ್ನ ಪ್ರೀತಿಯ ಸೃಷ್ಟಿಕರ್ತ,
ಶರತ್ ಸೇರಾಜೆ



*************************************************
ಗುರುರಾಜ ಕೊಡ್ಕಣಿ: ಕನ್ನಡದ ಇತ್ತೀಚಿನ ಬರಹಗಾರರ ಪೈಕಿ ನನಗೆ ತುಂಬ ಇಷ್ಟದ ಯುವ (ಯುವ ಅನ್ನಬಹುದಾ ಇಲ್ಲವಾ ಗೊತ್ತಿಲ್ಲ, ನನ್ನಷ್ಟೇ ವಯಸ್ಸಿರಬಹುದಾ ಅಂತ) ಬರಹಗಾರ Sharath Bhat Seraje . ಇವರ ಚೊಚ್ಚಲ ಕೃತಿ 'ಬಾಗಿಲು ತೆರೆಯೇ ಸೇಸಮ್ಮ' ಓದಿದಾಗ ಇವರ ಬರವಣಿಗೆ ವ್ಯಾಪ್ತಿ ನಿಜಕ್ಕೂ ದಂಗುಬಡಿಸಿತ್ತು. ಸಾಧ್ಯಂತವಾಗಿ ಎಲ್ಲವನ್ನೂ ವಿವರಿಸುವ ಶೈಲಿ, ಕ್ಲಿಷ್ಟಕರ ವಿಷಯಗಳ ಆಯ್ಕೆಯಾದರೂ ಬರವಣಿಗೆ ಲಹರಿ ನನಗಂತೂ ಮೆಚ್ಷಿನದ್ದು. ಅದ್ಯಾಕೋ ಸರಿಯಾದ ಪ್ರಚಾರವೇ ಸಿಕ್ಕಿಲ್ಲ ಎನ್ನಿಸುವಷ್ಟರಲ್ಲಿ 'ಬಾಗಿಲು ತೆರೆಯೇ ಸೇಸಮ್ಮ' ಎರಡನೇ ಮುದ್ರಣ ಕಂಡಿದೆ ಎನ್ನುವ ಸುದ್ದಿ ತಿಳಿದು ಖುಷಿಯಾಯಿತು. ಇತ್ತೀಚೆಗಷ್ಟೇ ಅವರ ಎರಡನೇ ಕೃತಿ,' ಹಚ್ಚೇವು ವಿಜ್ಞಾನದ ಜೀಪ' ಕೂಡ ಮಾರುಕಟ್ಟೆಗೆ ಬಂದಿತ್ತು. ಇವೆರಡರ ನಡುವೆ ಮೂರನೇ ಕೃತಿ ಇನ್ನೇನು ಮಾರುಕಟ್ಟೆಗೆ ಬರಲಿದೆ... ಒಟ್ಟಾರೆಯಾಗಿ ಯೋಗ್ಯ'ಬರಹಗಾರರೊಬ್ಬರು ನಿಧಾನಕ್ಕಾದರೂ ಸರಿ,ಸಾಹಿತ್ಯವಲಯದಲ್ಲಿ ಗುರುತಿಸಲ್ಪಡುತ್ತಿರುವುದು ಸಂತಸದ ವಿಷಯ..😊😊😊

Kannada book about Artificial Intelligence - Reviews of AI Barutide Daari Bidi

ಹೊಸಪುಸ್ತಕಗಳ ಬಗ್ಗೆ ಹೊಸ ಪ್ರತಿಕ್ರಿಯೆಗಳು ಹೊಸ ಹರ್ಷವನ್ನು ಉಂಟುಮಾಡುತ್ತವೆ. ನನ್ನ ಹೊಸಪುಸ್ತಕದ ಬಗ್ಗೆ ಮನುಶ್ರೀ ಜೋಯ್ಸ್ ಅವರು ಬರೆದ ಟಿಪ್ಪಣಿ:

AI ಅನ್ನೋದು ಈಗ ಮೊಬೈಲಿನಷ್ಟೇ ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಕಡೆ ಆಕ್ರಮಿಸಿಕೊಂಡು ಬಿಟ್ಟಿದೆ‌.‌ ನಮಗೆ ಗೊತ್ತಿಲ್ಲದೆಯೂ ನಾವು ಇದರ ಭಾಗವಾಗಿದ್ದೇವೆ. ಇದರ ಬಗೆಗಿನ ಕನಿಷ್ಠ ಜ್ಞಾನ ಈಗ ಅನಿವಾರ್ಯ.
ಆದ್ದರಿಂದ ಇವತ್ತಿಗೆ ಈ ಪುಸ್ತಕ ಅತ್ಯಂತ ಪ್ರಸ್ತುತ , ಕನ್ನಡದಲ್ಲಿ ಇದು ಬಂದಿರುವುದು ನಮ್ಮ ಅದೃಷ್ಟ.
AI ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಕೋರ್ಸುಗಳು, ಟ್ರೈನಿಂಗ್ ಗಳು , ಕೆಲಸ ಮಾಡಲು ಬೇಕಾಗಿದ್ದು, ಬೇಡವಾಗಿದ್ದು, ಅದರ ಹಳೆ ಕಥೆ, ಹೊಸ ಪ್ಲಾನ್ ಹೀಗೆ ಎಲ್ಲವೂ ಸಿಗುತ್ತದೆ. ಆದರೆ ಇದೊಂದು ಸಾಗರ ಇಲ್ಲಿ ಮುಳುಗಿ ಎದ್ದು ಓದುವಷ್ಟರಲ್ಲಿ AI ಇನ್ನೊಂದು ಕಡೆ ಹರಿಯಲು ಶುರು ಮಾಡುತ್ತದೆ. ಇಂತಹ ಸಾಗರವನ್ನು ಕಮಂಡಲದಲ್ಲಿ ಹಿಡಿದು ಅತೀ ಮುಖ್ಯವಾದ ಅಂಶಗಳನ್ನು ಮಾತ್ರ ಹಾಕಿ , ಸಾರವನ್ನು ಭಟ್ಟಿ ಇಳಿಸಿದ್ದಾರೆ.
AI ಈಗ ಪ್ರಸಿದ್ಧಿಗೆ ಬಂದಿರಬಹುದು, ಆದರೆ ಇದರ ಹಿಂದಿರುವ ಸೋತ ಪ್ರಯತ್ನಗಳು , ಗೆಲುವುಗಳು ಎಲ್ಲವೂ ಆಸಕ್ತಿಕರ. ಇಮಿಟೇಷನ್ ಟೆಸ್ಟ್‌ ನಿಂದ ಶುರುವಾಗುವ AI ಹುಟ್ಟನ್ನು ಲೇಖಕರು ಸೊಗಸಾಗಿ ಬರೆದಿದ್ದಾರೆ.
ಈ ಚಾಟ್ ಬಾಟ್ ಗಳು ಅಷ್ಟೇ... ಈಗ ಸಾಕಷ್ಟು ಶಕ್ತಿಯುತವಾಗಿವೆ. ಮೊದಲಿನ ಚಾಟ್ ಬಾಟ್ ಗಳ ಅವಾಂತರ ಈ ಪುಸ್ತಕದಲ್ಲಿ ನೋಡಬೇಕು😂. AI ಎಂಬ ಹೆಸರಿಡಲು ಪಟ್ಟ ಪಾಡು, ಚೆಸ್‌ ನೊಂದಿಗಿರುವ ಅವಿನಾಭಾವ ಸಂಬಂಧ.
ನನಗೆ ಅತೀ ಇಷ್ಟವಾದ ಭಾಗವೆಂದರೆ ಮಾಡಿ ತಿಳಿ , ಎಡವಿ ಕಲಿ ಎಂದು ವಿವರಿಸಿದ ಮಷೀನ್ ಲರ್ನಿಂಗ್ , ಮನುಷ್ಯನ ತಲೆಗೂ ಇಲ್ಲಿನ ನ್ಯೂರಲ್ ನೆಟ್ ವರ್ಕಗೆ ಇರುವ ಸಾಮ್ಯತೆ. LLM ಮಾಡಲ್ ಗಳ ಬಗೆಗಿನ ಅಧ್ಯಾಯದಲ್ಲಿ ಕ್ಲಿಷ್ಟಕರ ಸಂಕೀರ್ಣ ವಿಚಾರಗಳನ್ನು ಹದವಾಗಿ ಬಿಡಿಸಿಟ್ಟಿದ್ದಾರೆ.
ಇದು ಮಾಡುವ ತಪ್ಪುಗಳು, ಸುಳ್ಳು ಉತ್ತರಗಳು. ಇದನ್ನು ಬಳಸುವ ವಿಧಾನಗಳು, ಮಿತಿಯಾಗಿ ಬಳಸಬೇಕಾದ ಉದಾಹರಣೆಗಳು, ಎಲ್ಲವೂ ಓದಲೇ ಬೇಕಾದ ಪುಟಗಳು. ನಮ್ಮತನವನ್ನು ಕಾಪಾಡಿಕೊಳ್ಳಲು , ಸೃಜನಶೀಲತೆ ಉಳಿಸಿ ಕೊಳ್ಳಲು, ಹೆಚ್ಚೆಚ್ಚು ಇದನ್ನು ನೆಚ್ಚಿ ಕೊಳ್ಳದೇ ಇರುವುದೇ ಉತ್ತಮ ಎಂದು ನನಗೆ ಕೊನೆಗೆ ಅನಿಸಿತು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅನ್ನುವ ಹಾಗೆ ಇದರ ಉತ್ತರವನ್ನು ಕಣ್ಣು ಮುಚ್ಚಿ ಕಾಪಿ ಪೇಸ್ಟ್ ಮಾಡದೇ ಇರುವುದು ಕ್ಷೇಮ, ಒಂದೊಂದು ಅಕ್ಷರವನ್ನೂ ಪರಾಂಬರಿಸಿ ನೋಡಿ ಬಳಸುವುದು ಒಳಿತು.
ಬರವಣಿಗೆ ಲಲಿತ ಪ್ರಬಂಧವಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳುವ ಒಂದೇ ಒಂದು ಗಟ್ಟಿ ಕಡಲೆಯೂ ಇಲ್ಲ. ಸರಾಗ ಆಪ್ತ ಆಕರ್ಷಕ ಬರವಣಿಗೆ. ಒಟ್ಟಿನಲ್ಲಿ ಒಂದು ಓದಲೇಬೇಕಾದ ಅವಶ್ಯಕ, ಉಪಯುಕ್ತ ಚಂದದ ಪುಸ್ತಕ.
************************************************************* ಗಣೇಶ್ ಭಟ್: ಕಳೆದ ಮೂರು ವರ್ಷಗಳಲ್ಲಿ ನೀವು ಯಾವುದೋ ಗುಹೆಯನ್ನು ಸೇರಿ ತಪಸ್ಸು ಮಾಡುತ್ತಿಲ್ಲವೆಂದಾದರೆ, ಮತ್ತು ಹುಲುಮಾನವರ ಕ್ಷುದ್ರ ದೈನಂದಿನ ವ್ಯವಹಾರಗಳಿಗೆ ಸ್ವಲ್ಪವಾದರೂ ಕಣ್ಣು-ಕಿವಿಗಳನ್ನು ತೆರೆದುಕೊಂಡಿದ್ದೀರಿ ಎಂದಾದರೆ, ಖಂಡಿತವಾಗಿಯೂ ಎಐ, ಚಾಟ್ ಜಿಪಿಟಿ, ಎಲ್.ಎಲ್.ಎಮ್, ಮುಂತಾದ ಶಬ್ದಗಳು ಅಲೆಗಳಂತೆ ಮತ್ತೆ ಮತ್ತೆ ಬಂದು ನಿಮ್ಮ ಕಿವಿಗಳಿಗೆ ಅಪ್ಪಳಿಸಿರಲೇಬೇಕು. ಈ ಎಐ ಅಥವಾ ಕೃತಕ ಬುದ್ಧಿಮತ್ತೆ ಎಂದರೆ ನಿಜವಾಗಿಯೂ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಅದು ಮನುಷ್ಯನ ಬುದ್ಧಿಯಂತೆ ಇದೆಯೇ ಅಥವಾ ಮನುಷ್ಯನ ಬುದ್ಧಿಗಿಂತ ಭಿನ್ನವೇ? ಅದು ಯೋಚಿಸುವಾಗ ಅದರ ತಲೆಯೊಳಗೆ ಏನು ಓಡುತ್ತಿರತ್ತದೆ? ಮುಂತಾದ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಎಐ ಕುರಿತಾದ ಇಂತಹ ಬಹಳಷ್ಟು ವಿಷಯಗಳನ್ನು, ತಂತ್ರಜ್ಞಾನದ ಹಿನ್ನೆಲೆ ಇರದ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿ Sharath Bhat Seraje ಅವರು ಬರೆದ ‘ಎಐ ಬರುತಿದೆ ದಾರಿಬಿಡಿ’ ಪುಸ್ತಕ ಸಾವಣ್ಣ ಪ್ರಕಾಶನದಿಂದ ಹೊಸದಾಗಿ ಪ್ರಕಟವಾಗಿದೆ. ಎಐ ಕುರಿತು ಕುತೂಹಲ ಇರುವವರೆಲ್ಲರೂ ಖಂಡಿತವಾಗಿಯೂ ಓದಬೇಕಾದ ಪುಸ್ತಕ. ಪುಸ್ತಕವು ಅಂಕಿತ, ನವಕರ್ನಾಟಕ, ಸಪ್ನಾ ಮುಂತಾದ ಪ್ರಮುಖ ಮಳಿಗೆಗಳಲ್ಲಿ ಮತ್ತು ಆನ್ಲೈನ್ ತಾಣಗಳಲ್ಲಿ ಲಭ್ಯವಿದೆ. ಜೊತೆಗೆ ಆಸಕ್ತರು ಇದೇ ಲೇಖಕರ ಹಿಂದಿನ ಪುಸ್ತಕಗಳಾದ ‘ಹತ್ತೇವು ವಿಜ್ಞಾನದ ಜೀಪ’ ಮತ್ತು ‘ಬಾಗಿಲು ತೆರೆಯೇ ಸೇಸಮ್ಮ’ ಪುಸ್ತಕಗಳನ್ನೂ ಓದಬಹುದು. ************************************************************* ಮಾಕೋನಹಳ್ಳಿ ವಿನಯ್‌ ಮಾಧವ: AI ಬಂದಾಗಿದೆ… ತೆಪ್ಪಗೆ ದಾರಿಗೆ ಬನ್ನಿ ಏಳೆಂಟು ವರ್ಷಗಳ ಹಿಂದಿನ ಮಾತು… ಒಮ್ಮೆ, ನನ್ನ ಕಾರನ್ನು ಗ್ಯಾರೇಜಿನಲ್ಲಿ ರಿಪೇರಿಗಾಗಿ ಬಿಟ್ಟಾಗ ಅದು ಕಳ್ಳತನವಾಯಿತು. ಗ್ಯಾರೇಜಿನಿಂದ ಕಳ್ಳತನವಾದ್ದರಿಂದ, ವಿಷಯ ಇತ್ಯರ್ಥವಾಗುವವರೆಗೆ ಇರಲಿ ಎಂದು ಕಂಪನಿಯವರು ನನಗೆ ಬದಲೀ ಕಾರನ್ನು ಕೊಟ್ಟಿದ್ದರು. ಆಗಲೇ ನಾನು ಫಾಸ್ಟ್ಯಾಗ್‌ ಉಪಯೋಗಿಸಲು ಆರಂಭಿಸಿದ್ದೆ. ಒಂದೆರೆಡು ವಾರಗಳ ನಂತರ ನಾನು ಊರಿಗೆ ಹೊರಟಾಗ, ಎರಡು ಟೋಲ್ ಗೇಟ್ ಗಳಲ್ಲಿ ದುಡ್ಡು ಕೊಟ್ಟು ದಾಟಿದ್ದೆನಷ್ಟೆ. ಫೋನಿನಲ್ಲಿ ಮೆಸೆಜ್ ಬಂದಿತು: `ದೀಪಾವಳಿಗೆ ಊರಿಗೆ ಹೊರಟಿರುವಿರಾ? ಟೋಲ್ ಗೇಟ್ ನಲ್ಲಿ ಸರದಿ ಕಾಯುವ ಬದಲು, ಫಾಸ್ಟ್ಯಾಗ್ ಬಳಸಿರಿ,’ ಎಂದು.’ `ಒಂದೆರೆಡು ನಿಮಿಷ ಗಡಿಬಿಡಿಯಾಯಿತು. ಮೊದಲನೆಯದಾಗಿ, ಈ ಕಾರು ನನ್ನದಲ್ಲ. ಆದರೂ, ನಾನು ಊರಿಗೆ ಹೋಗುತ್ತಿರುವುದಾಗಿ ಫಾಸ್ಟ್ಯಾಗ್ ಕಂಪನಿಯವರಿಗೆ ಯಾರು ಹೇಳಿದ್ದು? ಎರಡನೆಯದಾಗಿ, ನಾನು ನನ್ನ ಎಲ್ಲಾ ವ್ಯವಹಾರಗಳಿಗೂ ನೀಡುವುದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನನ್ನ ಅತ್ತೆಯ ಮನೆಯ ವಿಳಾಸ. ನನ್ನ ಗೂಗಲ್ ಖಾತೆ, ಬ್ಯಾಂಕ್ ಖಾತೆ, ಆಧಾರ್, ಚುನಾವಣೆ ಗುರುತಿನ ಚೀಟಿ... ಅಷ್ಟೇಕೆ, ಫಾಸ್ಟ್ಯಾಗ್ ಪಡೆದದ್ದು ಕೂಡ ಇದೇ ವಿಳಾಸದಿಂದ. ಹಾಗಾದರೆ, ಮೂಡಿಗೆರೆ ನನ್ನ ಊರು ಅಂತ ಫಾಸ್ಟ್ಯಾಗ್ ಕಂಪನಿಗೆ ಹೇಳಿದವರು ಯಾರು? ನಾನು ಮೂಡಿಗೆರೆಗೆ ಹೋಗುತ್ತಿದ್ದೇನೆ ಅಂತ ಹೇಳಿದವರು ಯಾರು? ಡ್ರೈವ್ ಮಾಡುತ್ತಾ ಹಾಗೇ ಯೋಚನೆ ಮಾಡಿದೆ. ನನ್ನ ಫೋನ್ ನಲ್ಲಿ ಇರುವ ಗೂಗಲ್ ನಕ್ಷೆಯಿಂದ ನಾನು ಮೂಡಿಗೆರೆ ಕಡೆಗೆ ಹೋಗುತ್ತಿರುವುದು ಗೂಗಲ್ ಗೆ ಗೊತ್ತಾಗಿದೆ. ಆದರೆ ಮೂಡಿಗೆರೆ ನನ್ನ ಊರು ಅಂತ ಯಾರು ಹೇಳಿದರು? ಸಾಮಾಜಿಕ ಜಾಲತಾಣವಾದ ಫೇಸ್ಬುಕ್ಕಿನಲ್ಲಿ ನಾನು ಮೂಡಿಗೆರೆಯಿಂದ ಅಂತ ನಮೂದಿಸಿದ್ದೆ. ಆಗಾಗ ಮೂಡಿಗೆರೆಗೆ ಹೋಗಿ ಬರುತ್ತಿದ್ದರಿಂದ, ಅದನ್ನು ನನ್ನ ಊರು ಅಂತ ಗೂಗಲ್ ಕಂಡು ಹಿಡಿದಿದೆ. ನಾನು, ನನ್ನ ಊರು, ನನ್ನ ಬಳಿ ಇರುವ ಫಾಸ್ಟ್ಯಾಗ್, ಎಲ್ಲದರ ಮಾಹಿತಿ ಗೂಗಲ್ ಬಳಿ ಇದ್ದು, ನಾನು ಅದನ್ನು ಉಪಯೋಗಿಸದೇ ಇದ್ದಾಗ, ಫಾಸ್ಟ್ಯಾಗ್ ಕಂಪನಿ ಮೂಲಕ ನನಗೆ ಅಶರೀರವಾಣಿ ಮೊಳಗಿದೆ. `ತಕ್ಷಣವೇ ನಾನು ನನ್ನ ಸ್ನೇಹಿತ ರಾಜೇಶನಿಗೆ ಫೋನ್ ಮಾಡಿ ನೆಡೆದಿದ್ದನ್ನು ಹೇಳಿದೆ. ಇವೆಲ್ಲ ಗಾಭರಿ ಹುಟ್ಟಿಸುವ ವಿಷಯ ಅಂತ ಹೇಳಿ, ಅವನಿಗಾದ ಅನುಭವವನ್ನೂ ಹಂಚಿಕೊಂಡ. ಒಮ್ಮೆ, ಅವನ ಕಛೇರಿಗೆ ವಿದೇಶದಲ್ಲಿರುವ ಹಿರಿಯ ಸಹದ್ಯೋಗಿ ಬಂದಿದ್ದರಂತೆ. ಮಾತಿನ ಮಧ್ಯ, ಕಛೇರಿಯಲ್ಲಿ ಕಾಗದಗಳನ್ನು ನಾಶಪಡಿಸುವ ಯಂತ್ರ (ಪೇಪರ್ ಶಡ್ಡರ್) ಇಲ್ಲದಿರುವುದರ ಬಗ್ಗೆ ಪ್ರಸ್ತಾಪಿಸಿ, ಒಂದನ್ನು ಕೊಂಡುಕೊಳ್ಳಲು ಸಲಹೆ ನೀಡಿದ್ದರಂತೆ. ಮಾರನೇ ದಿನ ರಾಜೇಶನ ಜಿ-ಮೇಲ್ ನಲ್ಲಿ, ನಾಲ್ಕೈದು ಕಂಪನಿಗಳು ಪೇಪರ್ ಶಡ್ಡರ್ ಗಳನ್ನು ಮಾರುವ ಬಗ್ಗೆ ಈ-ಮೇಲ್ ಕಳುಹಿಸಿದ್ದರಂತೆ. ರಾಜೇಶ್ ಮೊದಲಿಗೆ ಗಡಿಬಿಡಿಗೊಂಡನಂತೆ. ನಂತರ ಯೋಚಿಸುವಾಗ, ಸಹದ್ಯೋಗಿಯ ಜೊತೆ ಮಾತನಾಡುವಾಗ, ರಾಜೇಶ್ ತನ್ನ ಜಿ-ಮೇಲನ್ನು ತೆಗೆದಿಟ್ಟಿದ್ದನಂತೆ. ಪ್ರತೀ ಕಂಪ್ಯೂಟರ್ ಅಥವಾ ಫೋನ್ ನಲ್ಲಿರುವ ಮಾತನಾಡುವ ಸಾಧನ (ಸ್ಪೀಕರ್) ಮೂಲಕ ಅದು ಗೂಗಲ್ ನಲ್ಲಿ ಧ್ವನಿ ಮುದ್ರಿತವಾಗುತ್ತದೆ. ಗೂಗಲ್, ಈ ಥರಹದ ಸಂದೇಶಗಳನ್ನು ಕಂಪನಿಗಳಿಗೆ ರವಾನಿಸುತ್ತದೆ. ತಕ್ಷಣವೇ, ಆ ಕಂಪನಿಗಳು ಇಂತಹ ಈ-ಮೇಲ್ ಗಳನ್ನು ರವಾನಿಸುತ್ತವೆ. ಕೇಳಿ ನಡುಗಿ ಹೋದೆ. ಎಷ್ಟೋ ಸಲ ಏನನ್ನಾದರೂ ಖರೀದಿಸಬೇಕು ಅಂತ ಮನೆಯಲ್ಲಿ ಮಾತನಾಡಿದ ಒಂದೆರೆಡು ದಿನಗಳಲ್ಲಿ ಅದೇ ವಿಷಯದಲ್ಲಿ ಈ-ಮೇಲ್ ಹೇಗೆ ಬರುತ್ತೆ ಅಂತ ಎಷ್ಟೋ ಸಲ ಯೋಚಿಸಿದ್ದೆ. ಈಗ ಉತ್ತರ ಸಿಕ್ಕಿತ್ತು. ಗೂಗಲ್‌ ಎನ್ನುವ Search Engine ಯಾವಾಗಲೂ ಉಪಯೋಗಿಸುವುದರಿಂದ, ಈ ಅನಿಷ್ಟಕ್ಕೆಲ್ಲಾ ಗೂಗಲ್‌ ಎನ್ನುವ ಶನೀಶ್ವರನೇ ಕಾರಣ ಎಂಬ ನಿರ್ಣಯಕ್ಕೆ ಬಂದೆ. ಹೇಗಾದರೂ ಮಾಡಿ ನನ್ನ ವೈಯಕ್ತಿಕ ವಿವರಗಳನ್ನು ಈ ಗೂಗಲ್‌ ಎನ್ನುವ ದುಷ್ಟ ಶಕ್ತಿಯಿಂದ ಹೊರಗಿಡಬೇಕೆಂಬ ಹಠಕ್ಕೆ ಬಿದ್ದೆ. ನಿಧಾನವಾಗಿ `ಕೃತಕ ಬುದ್ದಿಮತ್ತೆ’ ಅಥವಾ (Artificial Intelligence), ಆಲ್ಗೋರಿದಮ್ (Algorithm) ಕೆಲಸ ಮಾಡುವ ರೀತಿಯನ್ನು ತಿಳಿದುಕೊಳ್ಳುತ್ತಾ ಹೋದೆ. ಸ್ವಲ್ಪ ದಿನಗಳ ನಂತರ, ನನ್ನ ಹೆಂಡತಿಯ ತಮ್ಮ ಚೇತನ್‌ ಫೋನ್‌ ಮಾಡಿ, ʻವಿನಯ್‌, ಅಮೇರಿಕಾದಿಂದ ಬರುತ್ತಾ ನಿಮಗೆ ಏನು ತರಲಿ?ʼ ಎಂದು ಕೇಳಿದ. ʻಒಂದು ಗೂಗಲ್‌ ಪಿಕ್ಸೆಲ್‌ ಫೋನ್‌ ತಗೊಂಡು ಬಾʼ ಎಂದು ತಣ್ಣಗೆ ಹೇಳಿದೆ. ಅಲ್ಲಿಂದ ಇಲ್ಲಿಯವರೆಗೂ ನಾನು ಉಪಯೋಗಿಸುತ್ತಿರುವುದು ಈ ಗೂಗಲ್‌ ಫೋನನ್ನೇ. ಈ ಘಟನೆ ನೆನಪಾಗಿದ್ದು, ಶರತ್‌ ಭಟ್‌ ಸೆರಾಜೆ ಬರೆದ ʻAI ಬರುತ್ತಿದೆ ದಾರಿ ಬಿಡಿʼ ಪುಸ್ತಕ ಓದುತ್ತಿದ್ದಾಗ. ಈ ಕೃತಕ ಬುದ್ದಿಮತ್ತೆಯ ಬಗ್ಗೆ ಸಾಧಾರಣ ಜನಗಳಿಗೆ ಬಹಳಷ್ಟು ಉಗ್ರ ವಿಭ್ರಾಂತಿಗಳಿವೆ (Exaggerated notions). ಅದಕ್ಕೆ ಕಾರಣಗಳೂ ಹಲವಷ್ಟಿವೆ. ಯಾವುದೇ ವಿಷಯವನ್ನು ವೈಭವೀಕರಣ ಮಾಡುವುದು ಮನುಷ್ಯನ ಸಹಜ ಗುಣ. ಈ ಕಂಪ್ಯೂಟರ್‌ ಗಳು ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಕಳೆದ ಮೂರು ದಶಕಗಳಲ್ಲಿ ಬಂದ ʻScience Fictionʼ ಪುಸ್ತಕಗಳು ಮತ್ತು ಸಿನೆಮಾಗಳನ್ನು ನೋಡಿದಾಗ, ಇನ್ನು ಕೆಲವೇ ವರ್ಷಗಳಲ್ಲಿ, ಕಂಪ್ಯೂಟರ್‌ ಗಳು ಬೌದ್ಧಿಕ ಸ್ವಾವಲಂಬಿಗಳಾಗಿ, ಮನುಷ್ಯನನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ ಎನ್ನುವುದನ್ನು ಪ್ರತಿಪಾದಿಸುವ ಮಟ್ಟಕ್ಕೆ ಹೋಗಿವೆ. ಕೆಲವೇ ಕೆಲವು ಸಿನೆಮಾಗಳನ್ನು ಬಿಟ್ಟರೆ, (The Nȩt, Enemy of the State̤̤…) ನಾವು ನೋಡಿದ ರೋಚಕ ಚಿತ್ರಗಳಾದ ಟರ್ಮಿನೇಟರ್‌, ಡೈ ಹಾರ್ಡ್‌ - 4 ಮುಂತಾದ ಚಿತ್ರಗಳು ಮಾನವ ಜನಾಂಗದ ಸರ್ವನಾಶವನ್ನೇ ಸಾರುತ್ತವೆ. ನಾನು ಪತ್ರಿಕೋದ್ಯಮ ಓದುವಾಗ, ಒಬ್ಬರು ಕಂಪ್ಯೂಟರ್‌ ತಜ್ಞರನ್ನು ಭಾಷಣಕ್ಕೆ ಕರೆದಿದ್ದರು. ಆಗ ಅವರು ಹೇಳಿದ ಒಂದು ಮಾತು: ʻComputers should be used as tooļs not as alternative brainsʼ. ಆ ಮೂವತ್ತು ವರ್ಷಗಳ ಹಿಂದಿನ ಕಂಪ್ಯೂಟರನ್ನು ಈಗ ತಿರುಗಿ ನೋಡಿದಾಗ, ಶಿಲಾಯುಗದ ಕಾಲದ ತಂತ್ರಜ್ಞಾನವಲ್ಲದಿದ್ದರೂ, ಲೋಹಯುಗದ ತಂತ್ರಜ್ಞಾನದಂತೆ ಕಾಣುತ್ತದೆ. ಮೈಕ್ರೋಸಾಫ್ಟ್‌ ಕಂಪನಿಯ ʻMS DoSʼ ಉಪಯೋಗಿಸಿಕೊಂಡು, 286, 386, 486 ಎಂಬ ಕಂಪ್ಯೂಟರ್‌ ಗಳನ್ನು ಸಾಮಾನ್ಯ ಮನುಷ್ಯ ಉಪಯೋಗಿಸುತ್ತಿದ್ದ ಕಾಲ. ಪೆಂಟಿಯಮ್‌ ಬಂದು, ಡಯಲ್‌ ಅಪ್‌ ಇಂಟರ್‌ ನೆಟ್‌ ಸಾಧಾರಣ ಜನಗಳಿಗೆ ತಲುಪಲು ಇನ್ನೂ ಸ್ವಲ್ಪ ಸಮಯ ಹಿಡಿದಿತ್ತು. ಆದರೆ, ಈಗ ನಾವು ಉಪಯೋಗಿಸುತ್ತಿರುವ ಕಂಪ್ಯೂಟರ್‌ ಗಳು ಬರುತ್ತವೆ ಎನ್ನುವುದನ್ನು ಊಹಿಸಲೂ ಅಸಾಧ್ಯವಾಗಿತ್ತು. ಆಗೆಲ್ಲ ಹೊಸ ತಂತ್ರಜ್ಞಾನ ಬರಲು ವರ್ಷಗಳು ಬೇಕಾಗಿದ್ದವು. ಆದರೆ ಈಗ, ತಿಂಗಳಿಗೊಂದು ತಂತ್ರಜ್ಞಾನ ಬಂದು, ಒಂದು ವರ್ಷದ ಹಿಂದೆ ನಾವು ಉಪಯೋಗಿಸುತ್ತಿದ್ದ ತಂತ್ರಜ್ಞಾನಗಳೇ ನಿರುಪಯೋಗಿಗಳಾಗಿ ಕಾಣುತ್ತವೆ. ಕೃತಕ ಬುದ್ದಿಮತ್ತೆಯ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದರೆ, ಒಂದು ಕ್ಷಣ ಗಾಭರಿಯಾಗುವುದಂತೂ ನಿಜ. ಆದರೆ, ಈ ಕೃತಕ ಬುದ್ದಿಮತ್ತೆಗಳಿಗೂ ಒಂದು ಮಿತಿ ಇದೆ. ಅವು ಮಿತಿಗಳಲ್ಲಿ ಕೆಲಸ ಮಾಡುತ್ತವೆ. ಅವುಗಳಿಗೆ ಯಾವುದೇ ಭಾವನೆಗಳಿಲ್ಲ. ಅವು, ಶತದಡ್ಡನಂತೆ ಕೆಲಸ ಮಾಡಬಲ್ಲವು. ನಮ್ಮ ಇಂದಿನ ಅವಶ್ಯಕತೆ ಏನೆಂದರೆ, ಕೃತಕ ಬುದ್ದಿಮತ್ತೆಗಳ ಮಿತಿಗಳನ್ನು ಅರಿತುಕೊಳ್ಳುವುದು ಮತ್ತು ʻAI should be used as a too̧l, not as an alternative brainʼ ಎಂಬ ಸತ್ಯವನ್ನು ಅರಿತುಕೊಳ್ಳುವುದು. ಈ ನಿಟ್ಟಿನಲ್ಲಿ, ಕೃತಕ ಬುದ್ದಿಮತ್ತೆಯನ್ನು ಬಹಳ ಸರಳವಾಗಿ ಶರತ್‌ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ತೊಂಬತ್ತು ಅಧ್ಯಾಯಗಳಿರುವ ಈ ಪುಸ್ತಕವು, ಕೃತಕ ಬುದ್ದಿಮತ್ತೆಯ ಅವಿಷ್ಕಾರದ ಮೂಲವನ್ನೇ ಸ್ವಾರಸ್ಯಕರವಾಗಿ ಹುಡುಕುತ್ತಾ ಹೊರಡುತ್ತದೆ. ಎರಡನೇ ಮಹಾ ಯುದ್ದದ ಸಮಯದಲ್ಲಿ, ಜರ್ಮನ್‌ ದೇಶದ ಎನಿಗ್ಮಾ ಕೋಡನ್ನು ಬೇಧಿಸಿದ ಅಲನ್‌ ಟ್ಯೂರಿಂಗ್‌ ಹೆಸರಿನಲ್ಲಿ ಬರುವ ಒಂದು ಪಂದ್ಯ, ಅದಕ್ಕೆ ಕೊಡುವ ಲೋಬ್ನರ್‌ ಬಹುಮಾನ ಮತ್ತು ಕೃತಕ ಬುದ್ದಿಮತ್ತೆಯ ಈ ಸ್ಪರ್ಧೆಯ ನಿರ್ದೇಶಕನಾಗಿದ್ದ ರಾಬರ್ಟ್‌ ಎಪ್‌ಸ್ಟೈನ್ ಒಂದು ಪ್ರಣಯ ಪ್ರಸಂಗಕ್ಕೆ ಬಿದ್ದು, ಚಾಟ್‌ಬಾಟ್‌ ನಿಂದ ಬೆಸ್ತು ಬಿದ್ದ ಪ್ರಸಂಗ ಸ್ವಾರಸ್ಯಕರವಾಗಿದೆ. ಮೊದಲನೇ ಚಾಟ್‌ಬಾಟ್‌ ಆದ ಎಲಿಝಾ, ಜನಗಳ ಕಷ್ಟಗಳನ್ನು ಕೇಳಿಸಿಕೊಳ್ಳುವ ಸಾಧನವಾಗಿ ಮಾರ್ಪಾಡಾಗಿದ್ದು, MGonz ಇಂದಿನ ಟ್ರೋಲ್‌ ಜಗತ್ತಿನ ಪಿತಾಮಹನಂತೆ ವರ್ತಿಸಿದರೂ, ಮನುಷ್ಯರ ನಡುವೆ ಸ್ಪರ್ಧಿಸಿ ಲೋಬ್ನರ್‌ ಬಹುಮಾನ ಗೆದ್ದು, ಬಹುಮಾನದ ಸಮಿತಿಯನ್ನೇ ಬೆಸ್ತು ಬೀಳಿಸಿದ ಪ್ರಸಂಗಗಳು ಮನಸ್ಸಿಗೆ ಮುದ ನೀಡುತ್ತವೆ. ಮುಂದೆ, ಚೆಸ್‌ ಆಡುವ ʻDeep Blueʼ ಬಹಳ ಸ್ವಾರಸ್ಯವಾಗಿದೆ. ಅತೀ ಬುದ್ದಿಮತ್ತೆ ತೋರಿಸುವ ಈ ಕೃತಕ ಬುದ್ದಿಮತ್ತೆ, ಅತೀ ಮೂರ್ಖತನ ತೋರಿಸಿದಾಗ, ಅದರ ಎದುರಾಳಿಯಾಗಿದ್ದ ಆಗಿನ ಗ್ರ್ಯಾಂಡ್‌ ಮಾಸ್ಟರ್‌ ಗ್ಯಾರಿ ಕ್ಯಾಸ್ಪರೋವ್‌ ಒಳಗಾಗುವ ಮಾನಸಿಕ ಕ್ಷೋಬೆಯನ್ನು ಬಹಳ ಸ್ವಾರಸ್ಯವಾಗಿ ವಿವರಿಸಿದ್ದಾರೆ. ಈ ಅಧ್ಯಾಯ ಓದುವಾಗ ಒಂದು ಘಟನೆ ನೆನಪಾಯಿತು. ಭಾರತದ ವಿಶ್ವನಾಥ್‌ ಆನಂದ್‌ ಗ್ರ್ಯಾಂಡ್‌ ಮಾಸ್ಟರ್‌ ಆದಾಗ, ಭಾರತಕ್ಕೆ ಹಿಂದುರುಗುವ ಸಮಯದಲ್ಲಿ, ʻDeep Blueʼ ಒಳಗೊಂಡ ಒಂದು ಲ್ಯಾಪ್‌ ಟಾಪ್‌ ತಮ್ಮ ಜೊತೆ ತಂದರು. ಆ ಲ್ಯಾಪ್‌ ಟಾಪ್‌ನಲ್ಲಿ ಎಷ್ಟೋ ಸಾವಿರವೋ, ಲಕ್ಷವೋ ಆಟಗಳಿದ್ದವು ಎಂದು ಓದಿದ ನೆನಪು. ಆದರೆ, ವಿಮಾನ ನಿಲ್ದಾಣದಲ್ಲಿ ಕಸ್ಟಂ ಅಧಿಕಾರಿಗಳು ಅವರನ್ನು ತಡೆದರು. ಆಗಿನ ಕಾಲದಲ್ಲಿ, ಸ್ವಂತ ಉಪಯೋಗಕ್ಕೆ ಒಂದು ಲ್ಯಾಪ್‌ ಟಾಪ್‌ ವಿದೇಶದಿಂದ ತರಬಹುದಿತ್ತು. ಯಾವುದೇ ʻelectronic gadgetʼ ಒಂದಕ್ಕಿಂತ ಹೆಚ್ಚು ಒಬ್ಬ ಪ್ರಯಾಣಿಗನ ಜೊತೆಗೆ ಇದ್ದರೆ, ಅದನ್ನು ವ್ಯಾಪರಕ್ಕೆ ಎಂದು ಪರಿಗಣಿಸಿ, ಅದರ ಮೇಲೆ ಶೇ 350 ಸುಂಕ ವಿಧಿಸುತ್ತಿದ್ದರು. ಭಾರತದಿಂದ ಹೋಗುವಾಗ, ವಿಶ್ವನಾಥ್‌ ಆನಂದ್‌ ತಮ್ಮ ಲ್ಯಾಪ್‌ ಟಾಪ್‌ ತೆಗೆದುಕೊಂಡು ಹೋಗಿದ್ದರು. ಬರುವಾಗ ಎರಡನೆಯದು ಅವರ ಕೈಯಲ್ಲಿ ಇತ್ತು. ಹಾಗಾಗಿ, ಸುಂಕದವರು ಅದಕ್ಕೆ ಸುಂಕ ಕೊಡದೆ ಹೊರಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ವಿಶ್ವನಾಥ್‌ ಆನಂದ್‌ ಎಷ್ಟೇ ಹೇಳಿದರೂ, ಬರೀ ಚೆಸ್‌ ಆಡಲು ಒಂದು ಲ್ಯಾಪ್‌ ಟಾಪ್‌ ಎನ್ನುವುದನ್ನು ಅಧಿಕಾರಿಗಳು ಒಪ್ಪಲು ತಯಾರಿರಲಿಲ್ಲ. ಏಕೆಂದರೆ, ಆಗ ಕಂಪ್ಯೂಟರ್‌ ಬಗ್ಗೆ ಅವರಿಗೆ ಮತ್ತು ನಮಗೂ ಇದ್ದ ಜ್ಞಾನ ಅಷ್ಟೆ. ಆನ್‌ಲೈನ್‌ ಬ್ಯಾಂಕಿಂಗ್‌ ಮತ್ತು ಗೂಗಲ್‌ ಪೇ ಇಲ್ಲದ ಕಾಲ. ಸುಂಕ ಕಟ್ಟುವಷ್ಟು ದುಡ್ಡು ಆನಂದ್‌ ಅವರ ಪರ್ಸ್‌ ನಲ್ಲೂ ಇರಲಿಲ್ಲ. ಹೊಸ ಲ್ಯಾಪ್‌ ಟಾಪ್‌ ಅನ್ನು ಅಲ್ಲಿಯೇ ಬಿಟ್ಟು, ಮನೆಗೆ ತೆರಳಿದರು. ಆನಂತರ, ಕೇಂದ್ರ ವಾಣಿಜ್ಯ ಇಲಾಖೆಗೆ ವಿಷಯ ಗೊತ್ತಾಗಿ, ಆ ಹೊಸ ಲ್ಯಾಪ್‌ ಟಾಪ್‌ ಅನ್ನು ವಿಶ್ವನಾಥ್‌ ಆನಂದ್‌ ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಪುಸ್ತಕದ ಹತ್ತೊಂಬತ್ತು ಅಧ್ಯಾಯಗಳಲ್ಲೂ, ಈ ಕೃತಕ ಬುದ್ಧಿಮತ್ತೆ ಬೆಳೆದ ದಾರಿ, ಪ್ರತೀ ಹಂತದಲ್ಲೂ ಮನುಷ್ಯರು ಮತ್ತು ಕೃತಕ ಬದ್ದಿಮತ್ತೆ ಎದುರಿಸಿದ ಸವಾಲುಗಳು, ಅವುಗಳ ಮತ್ತು ಮನುಷ್ಯರ ಇತಿಮಿತಿಗಳ ಬಗ್ಗೆ ಶರತ್‌ ಸ್ವಾರಸ್ಯವಾಗಿ, ಸರಳವಾಗಿ ವಿವರಿಸಿದ್ದಾರೆ. ಎಂದಿನಂತೆ, ವಿಜ್ಞಾನದ ಬಗ್ಗೆ ಸಾಹಿತ್ಯ, ಪೌರಾಣಿಕ ಲೇಪನಗಳೂ ಉಪಮೇಯಗಳಾಗಿ ಬಂದು ಹೋಗುವುದರಿಂದ, ಕಬ್ಬಿಣದ ಕಡಲೆ ತಿನ್ನುತ್ತಿದ್ದೇನೆ ಎಂದು ಎಂತಹ ಕಂಪ್ಯೂಟರ್‌ ವಿರೋಧಿಗೂ ಅನ್ನಿಸುವುದಿಲ್ಲ. ಹಾಗಾಗಿ, ಅವರ ಕೊನೆ ಅಧ್ಯಾಯದ ಹೆಸರಾದ ʻAI ಬಂದಿದೆ, ಸೇರಿ ನಡೆʼ ಎನ್ನುವ ಹೆಸರನ್ನೂ ಸಹ ನನಗೆ ಒಪ್ಪಲಾಗಿಲ್ಲ. ಏಕೆಂದರೆ, ಕೃತಕ ಬುದ್ದಿ ನಮ್ಮ ಜೀವನದ ಅವಿಭಾಜ್ಯ ಅಂಗವಾದ ನಂತರವೂ, ನಾವಿನ್ನೂ ಅವುಗಳ ವಿಷಯದಲ್ಲಿ ಅನಾವಶ್ಯಕ ಭ್ರಾಂತಿಗಳಲ್ಲಿ ಚರ್ಚೆ ಮಾಡುತ್ತಿದ್ದೇವೆ. ಈ ಪುಸ್ತಕದ ಹೆಸರು, ʻAI ಬಂದಾಗಿದೆ, ತೆಪ್ಪಗೆ ದಾರಿಗೆ ಬನ್ನಿʼ ಎನ್ನುವುದೇ ಸರಿ ಅಂತ ನನಗನ್ನಿಸಿತು…

Kannada book about Artificial Intelligence Artificial Intelligence in Kannada Book about AI in Kannada ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಕನ್ನಡದಲ್ಲಿ ಸರಳವಾಗಿ ಕೃತಕ ಬುದ್ಧಿಮತ್ತೆ
What Makes the Book Special:
Known for transforming dry scientific concepts into engaging narratives
Consistently uses wit, humour, and relatable analogies
Each book maintains his characteristic conversational tone that feels like learning from a knowledgeable friend
Accessibility: Complex scientific theories explained in everyday Kannada
Entertainment Value: Incorporates sarcasm, light humour and amusing observations 

Kannada book about Artificial Intelligence in Amazon Hot New Releases

 ಆರ್ಟಿಫಿಷಿಯಲ್ ಇಂಟೆಲಿಜೆನ್ಸಿನ ಬಗ್ಗೆ ನಾನು ಬರೆದ "AI ಬರುತಿದೆ ದಾರಿಬಿಡಿ" ಪುಸ್ತಕವನ್ನು "Amazon Hot New Releases"ನ Hot New Releases in Essays ಪಟ್ಟಿಯಲ್ಲಿ ಹತ್ತನೆಯ ಸ್ಥಾನದಲ್ಲಿ ಕಂಡು ಹರ್ಷವಾಯಿತು(ಇದು ಬರಿಯ ಕನ್ನಡದ ಪಟ್ಟಿಯಲ್ಲ, ಇದರಲ್ಲಿ ಇಂಗ್ಲಿಷ್, ಹಿಂದಿ, ಮತ್ತು ಎಲ್ಲ ಭಾರತೀಯ ಭಾಷೆಗಳ ಪುಸ್ತಕಗಳೂ ಸೇರಿವೆ) ಅಂದ ಹಾಗೆ, ನೀವಿನ್ನೂ ಪುಸ್ತಕವನ್ನು ಓದಿಲ್ಲವಾದರೆ, ಓದಿ ಬಿಡಿ.


Book about Artificial Intelligence 

Artificial Intelligence in Kannada Book about AI in Kannada 

ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ 

ಕನ್ನಡದಲ್ಲಿ ಸರಳವಾಗಿ ಕೃತಕ ಬುದ್ಧಿಮತ್ತೆ



Kannada book about Artificial Intelligence - AI Barutide Daari Bidi

ನಿಮಗೊಂದು ಬ್ರೇಕಿಂಗ್ ನ್ಯೂಸ್: ವಿಶ್ವಾಸಾರ್ಹ ಮೂಲಗಳಿಂದ ಬಂದ ವರದಿಯೊಂದರ ಪ್ರಕಾರ, ಚಾಟ್‌ಜಿಪಿಟಿ, ಕ್ಲಾಡ್, ಜೆಮಿನೈ ಮುಂತಾದ ಚಾಟ್‌ಬಾಟ್‌ಗಳ ಜಗತ್ತಿನಲ್ಲಿ ಕಳೆದೊಂದು ವಾರದಿಂದ ಭಾರೀ ಕೋಲಾಹಲವೇ ಎದ್ದಿದೆಯಂತೆ. "ಈ ಶರತ್ ಸೇರಾಜೆ ಎಂಬವನು ನಮ್ಮ ಬಗ್ಗೆಯೇ ಒಂದು ಪುಸ್ತಕವನ್ನು ಬರೆಯುವ ಧೈರ್ಯ ಮಾಡಿದ್ದಾನಂತೆ" ಎಂದು ಚಾಟ್‌ಜಿಪಿಟಿಯು ಗುಸುಪಿಸು ಮಾಡುತ್ತ ಪಿಸುಗುಟ್ಟಿದಾಗ, ಎಲ್ಲವನ್ನೂ ಬಲ್ಲ ಗೂಗಲ್ಲಿನ ಜೆಮಿನೈಯು, "ಈಚೆಗಷ್ಟೇ ವಿಜ್ಞಾನದ ಬಗ್ಗೆ ಅವನ ಪುಸ್ತಕವೊಂದು ಬಂದಿತ್ತಲ್ಲ, ಅಷ್ಟರಲ್ಲೇ ಮತ್ತೊಂದು ದುಸ್ಸಾಹಸವೇ?" ಎಂದು ಸಂದೇಹವನ್ನು ವ್ಯಕ್ತಪಡಿಸಿತಂತೆ. "ಪುಸ್ತಕವು ಬೋರ್ ಹೊಡೆಸದೆ, ವಿಡಂಬನೆ, ತಿಳಿಹಾಸ್ಯದೊಂದಿಗೆ, ಕಚಗುಳಿಯಿಡುತ್ತ ಕಥೆ ಹೇಳುವ ಶೈಲಿಯಲ್ಲಿ ಉಂಟಂತೆ, ಓದಿದವರು ಇಷ್ಟಪಟ್ಟಿದ್ದಾರಂತೆ, ಹೀಗೆಲ್ಲ ಗಾಳಿಸುದ್ದಿ ಉಂಟು" ಎಂದು ಗ್ರಾಕ್ ಮತ್ತು ಕ್ಲಾಡ್ ಒಗ್ಗರಣೆ ಹಾಕಿದವಂತೆ. "ಹಾಗಾದರೆ ನಾವೆಲ್ಲರೂ ಆದಷ್ಟು ಬೇಗ ಈ ಪುಸ್ತಕವನ್ನೋದಿ ನಮ್ಮ ಬಗ್ಗೆ ಈ ಮಹಾಶಯ ಅದೇನು ಬರೆದು ಗುಡ್ಡೆ ಹಾಕಿದ್ದೇನೋ ನೋಡಿಯೇ ಬಿಡೋಣ" ಎಂದವು ಒಕ್ಕೊರಲಿನ ತೀರ್ಮಾನಕ್ಕೆ ಬಂದವಂತೆ.       

****************************** 

ಅಂದ ಹಾಗೆ, ಓದುಗರಿಗೊಂದು ಶುಭಸಮಾಚಾರ (ಶುಭಸಮಾಚಾರವೋ ಬೈಯ್ಯಲು ಪ್ರೇರಣೆ ಕೊಡುವ ಸಮಾಚಾರವೋ ನೀವೇ ಹೇಳಿ). ನನ್ನ ಹೊಸ ಪುಸ್ತಕವೊಂದು ಲೋಕಾರ್ಪಣೆಯಾಗಿದೆ. ಈ ಪುಸ್ತಕವನ್ನು ಚಾಟ್‌ಬಾಟ್‌ಗಳು ಓದುವ ಮುನ್ನ ನೀವೇ ಓದಿ, ಅವುಗಳಿಗಿಂತ ನೀವೇ ಫಾಸ್ಟ್ ಎಂದು ತೋರಿಸಿಬಿಡಿ ಎಂದು ಓದುಗ ಪ್ರಭುಗಳಲ್ಲಿ ನನ್ನ ಪ್ರಾರ್ಥನೆ. ಪುಸ್ತಕದ ಶೀರ್ಷಿಕೆ ಇದು: AI ಬರುತಿದೆ ದಾರಿ ಬಿಡಿ(ನೀವು ಆನ್ಲೈನ್ ಆರ್ಡರ್ ಮಾಡುವುದಾದರೆ ಲಿಂಕುಗಳು ಇಲ್ಲಿವೆ:

Navakarnataka:

https://www.navakarnataka.com/ai-barutide-daari-bidi

Sapnaonline:

https://www.sapnaonline.com/books/ai-barutide-daari-bidi-sharath-bhat-8199052651-9788199052659

Amazon:

https://www.amazon.in/dp/8199052651

Veeraloka:

https://veeralokabooks.com/book/ai-ai-barutide-daari-bidi

Kannadaloka

https://tinyurl.com/3kbnrmd6

Beetle bookshop:

https://beetlebookshop.com/products/ai-barutide-daari-bidi

Harivu Books:

https://harivubooks.com/products/ai-barutide-daari-bidi-collection-of-essays-sharath-bhat-seraje-kannada-book?srsltid=AfmBOooz1-tw_-fh6DhfIEMlM3qf5Vu5vIlpf_lDiU92P_FSiSBXlAnp



This is a Kannada book about Artificial Intelligence

Artificial Intelligence in Kannada

Book about AI in Kannada

ಕನ್ನಡದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ


Reactions to my new book - Hattevu Vijnanada Jipa Part 2

 ಪ್ರಸಿದ್ಧ ಕಾದಂಬರಿಕಾರರಾದ ಎಂ.ಆರ್. ದತ್ತಾತ್ರಿಯವರು ಕಳಿಸಿದ ಮೆಸೇಜು ಇದು:

ಪ್ರಿಯ ಶರತ್ ಭಟ್, ನಿಮ್ಮ ಪುಸ್ತಕ ‘ಹತ್ತೇವು ವಿಜ್ಞಾನದ ಜೀಪ’ ಓದಿದೆ. ಇದು ಒಂದು ವಿಶೇಷ ಬಗೆಯ ಓದಿನ ಅನುಭವವನ್ನು ಕೊಡುವ ಪುಸ್ತಕ. ವಿಜ್ಞಾನ ಮತ್ತು ತತ್ತ್ವಜ್ಞಾನ ವಿಚಾರಗಳನ್ನು ಲಲಿತಪ್ರಬಂಧಗಳ ರೂಪದಲ್ಲಿ ಬರೆದಿದ್ದೀರಿ. ನಿಮ್ಮ ಭಾಷೆ ಓದಲು ಸುಲಲಿತ. ಪ್ರತಿ ಪ್ರಬಂಧದಲ್ಲೂ ಹೊಸ ವಿಚಾರಗಳಿವೆ, ಮತ್ತು ಅವುಗಳನ್ನು ವಿನೂತನ ಬಗೆಯಲ್ಲಿ ನಿರೂಪಿಸಿದ್ದೀರಿ. ನಿಮ್ಮ ಹಾಸ್ಯಪ್ರಜ್ಞೆಯಂತೂ ಅಮೋಘವಾಗಿದೆ.

ವಿಜ್ಞಾನ ಸಾಹಿತ್ಯವನ್ನು ನಾನು ಮೊದಲಿಂದಲೂ ಇಷ್ಟಪಟ್ಟು ಓದಿಕೊಂಡು ಬಂದಿದ್ದೇನೆ. ಅಮೆರಿಕದಲ್ಲಿ ಪ್ರತಿವರ್ಷ ಪ್ರಕಟವಾಗುವ The Best American Science and Nature Writing ಸರಣಿಯನ್ನು ಪ್ರತಿವರ್ಷ ತಪ್ಪದೆ ಓದುತ್ತೇನೆ. ನಾನೂ ಕೆಲವು ವಿಜ್ಞಾನ ವಿಚಾರಗಳ ಲೇಖನಗಳನ್ನು ಬರೆದಿದ್ದೇನೆ. ನನ್ನ ಪೂರ್ವ-ಪಶ್ಚಿಮ ಸಂಗ್ರಹದಲ್ಲಿ ಕೆಲವಿವೆ. ಆದರೂ, ಏಕೋ ಅದು ನನ್ನಿಂದ ತಪ್ಪಿತು. ಕಾದಂಬರಿ ಬರಹದ ವ್ಯಾಮೋಹ ಬಹುತೇಕ ಕಾರಣ. 

ನಿಮ್ಮ ಬರಹಗಳು ನನಗೆ ಉಲ್ಲಾಸವನ್ನು ನೀಡಿದವು. ಬಿಲ್ ಬ್ರೈಸನ್ನನ A Short History of Nearly Everything ಓದಿದ ಅನುಭವಕ್ಕೆ ಹತ್ತಿರವಾಗಿವೆ. ವಿಪರೀತದ ವೈಜ್ಞಾನಿಕ ಪದಪುಂಜಗಳನ್ನು ಬಳಸದೆ ಸಾಧಾರಣ ಭಾಷೆಯಲ್ಲಿ ಸುಲಲಿತವಾಗಿ ಅನೇಕ ವಿಚಾರಗಳನ್ನು ಬರೆದಿದ್ದೀರಿ. ಇದು ಅಪರೂಪ. ಶ್ರೀವತ್ಸ ಜೋಶಿಯವರಿಂದ ಮುನ್ನುಡಿ ಬರೆಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ನಮ್ಮ ತಲೆಮಾರಿನಲ್ಲಿ ಈ ಬಗೆಯ ಬರಹ ಮತ್ತು ಭಾಷೆಗೆ ಮಾಲೀಕರು ಅವರು.

ನಿಮ್ಮ ಮುಂದಿನ ಪುಸ್ತಕಕ್ಕೆ ಅನುಕೂಲವಾಗಬಹುದು ಎಂದು ನಾನು ಪರಿಗಣಿಸುವ ಒಂದೆರಡು ಮಾತಗಳನ್ನು ಹೇಳುತ್ತೇನೆ. ಅನೇಕ ಲೇಖನಗಳು ವಿಜ್ಞಾನ ವಿಚಾರಕ್ಕಿಂತ (subject matter) ಅದರ ಕಾರ್ಯವಿಧಾನ (process) ಮತ್ತು ವಿಜ್ಞಾನಿಗಳ ಮೇಲಿವೆ. ಅದು ತಪ್ಪು ಎಂದಲ್ಲ, ಆದರೆ ವಿಚಾರಗಳ ಮೇಲೆ ಕೇಂದ್ರಿತವಾದಾಗ ಹೆಚ್ಚು ವಿಜ್ಞಾನವು ಓದುಗರನ್ನು ತಲುಪುತ್ತದೆ (ಮತ್ತೆ, ಬಿಲ್ ಬ್ರೈಸನ್ನನ ಪುಸ್ತಕ ನೆನಪಾಗುತ್ತದೆ). ಮತ್ತೊಂದು ವಿಚಾರವೆಂದರೆ, ಲೇಖನಗಳ ವ್ಯಾಪ್ತಿಯನ್ನು ಹಿಗ್ಗಿಸಬಹುದು. ವಿಚಾರಗಳು ಹಿರಿದಾಗಿವೆ ಮತ್ತು ನಿಮ್ಮ ಬರಹವು ಸಂಕ್ಷಿಪ್ತ ಭಾಷೆಗಿಂತ ಸುಲಲಿತ ಭಾಷೆಯನ್ನು ಆಯ್ದುಕೊಳ್ಳುವ ಕಾರಣಕ್ಕೆ ಈ ಬಗೆಯ ಲೇಖನಗಳನ್ನು ಇನ್ನೂ ವಿಸ್ತಾರದಲ್ಲಿ ಬರೆಯಬಹುದು. ಅವೆಲ್ಲವೂ ನಿಮಗೆ ಸಾಧ್ಯ. ಆ ಕಾರಣಕ್ಕೇ ಈ ಮಾತುಗಳನ್ನು ಹೇಳಿದೆ.

ಅಭಿನಂದನೆಗಳು. ಒಂದು ಹೊಸಬಗೆಯ ಬರವಣಿಗೆಯನ್ನು ದಕ್ಕಿಸಿಕೊಂಡಿದ್ದೀರಿ. ನಿಮ್ಮಿಂದ ಕನ್ನಡ ವಿಜ್ಞಾನ ಸಾಹಿತ್ಯವು ಮತ್ತಷ್ಟು ಸಂಪನ್ನಗೊಳ್ಳಲಿದೆ. 

ಎಂ.ಆರ್. ದತ್ತಾತ್ರಿ 

*****************************************************

ಶ್ರೀನಿವಾಸಮೂರ್ತಿ ಶೃಂಗೇರಿ:

ಬಾಗಿಲು ತೆರೆದು ವಿಜ್ಞಾನದ ಜೀಪನ್ನು ಹತ್ತಿ ತಿಂಗಳೇ ಕಳೆದಿತ್ತು. ಆದರೆ ಚಾಲಕನ ಸ್ಥಾನದಲ್ಲಿ ಕುಳಿತಮೇಲೆ ನನ್ನ ಜನ್ಮಸಿದ್ಧ ಹಕ್ಕಾದ ಸೋಮಾರಿತನದ ಕಾರಣ ಜೀಪನ್ನು ಬಹಳ ನಿಧಾನವಾಗಿ ಚಲಾಯಿಸಿದೆ! ಅಂತೂ ಗುರಿಯನ್ನು ತಲುಪಿದ್ದಾಯಿತು. ಅಂತೂ ಈ ಎರಡು ಪುಸ್ತಕಗಳ ಬಗ್ಗೆ ಬರೆಯಲು ಇಂದು ಕಾಲ ಕೂಡಿಬಂದಿದೆ. 

ಎರಡೂ ಪುಸ್ತಕಗಳ ಶೀರ್ಷಿಕೆಯೇ ಅಷ್ಟೊಂದು ಸೊಗಸಾಗಿದೆ. ಜೊತೆಗೆ ವಿಜ್ಞಾನ ಎಂದರೆ ಮಾರುದೂರ ಓಡುವವರೂ ಸಲೀಸಾಗಿ ಓದಬಹುದಾದಂಥ ಪುಸ್ತಕಗಳಿವು. ವಿಜ್ಞಾನದ ಜೀಪ ಎನ್ನುವ ಹೆಸರಿದ್ದಮಾತ್ರಕ್ಕೆ ಭಯಾನಕವಾದ ಸೂತ್ರಗಳು, ಗೋಜಲು ಗೋಜಲಾದ ಸಮೀಕರಣಗಳು, ಅರ್ಥವಾಗದ ಚಿತ್ರವಿಚಿತ್ರ ನಕ್ಷೆಗಳು ಮತ್ತು ಚಿತ್ರಗಳನ್ನೊಳಗೊಂಡ ಕಬ್ಬಿಣದ ಕಡಲೆ ಎಂದು ಭಾವಿಸಬೇಕಿಲ್ಲ. ಪುಸ್ತಕ ವಿಜ್ಞಾನವನ್ನು ಲಲಿತ ಪ್ರಬಂಧದ ಮಾದರಿಯಲ್ಲಿ ಬೋಧಿಸುತ್ತದೆ. 

ಒಂದೊಂದು ವೈಜ್ಞಾನಿಕ ಸಂಶೋಧನೆಯೂ ಎಷ್ಟೊಂದು ಹೋರಾಟಗಳ ಪ್ರತಿಫಲ ಎನ್ನುವುದು ಬಹುಶಃ ಜನಸಾಮಾನ್ಯರಿಗೆ ತಿಳಿದಿರಲಿಕ್ಕಿಲ್ಲ. ನಾವೆಲ್ಲ ದಿನನಿತ್ಯ ಉಪಯೋಗಿಸುವ ಪ್ರತಿಯೊಂದು ಉಪಕರಣವೂ ಸಾವಿರಾರು ಸಲ ಪ್ರಯೋಗಗಳಿಗೊಳಪಟ್ಟು, ಅದರಲ್ಲಿನ ದೋಷಗಳೆಲ್ಲ ನಿವಾರಣೆಯಾಗಿ ಇಂದಿನ ಹಂತಕ್ಕೆ ಬರುವ ಮೊದಲು ಎಷ್ಟು ಜನ ಸಂಶೋಧಕರು ಎಷ್ಟೆಲ್ಲ ಬೆವರು, ರಕ್ತ ಬಸಿದು, ಹಣ ಖರ್ಚುಮಾಡಿ ಅದನ್ನು ಕಂಡುಹಿಡಿದಿದ್ದರು, ಮತ್ತೆ ಎಷ್ಟು ಜನ ಅದನ್ನು ಸುಧಾರಿಸಲು ಪ್ರಯತ್ನಿಸಿದರು ಎನ್ನುವುದರ ಅರಿವು ನಮಗೆ ಇರುವುದು ಅಸಂಭವ. ಮೈಕ್ರೋವೇವ್ ಒಲೆಯನ್ನು ಕಂಡುಹಿಡಿದ ಬಗ್ಗೆ, ಸಿಡುಬಿನ ಲಸಿಕೆ ಕಂಡುಹಿಡಿದ ಬಗ್ಗೆ, ಈ ಪುಸ್ತಕದಲ್ಲಿ ಶರತ್ ಭಟ್ಟರು ಬರೆದಿದ್ದಾರೆ. ಇವು ಕೇವಲ ಉದಾಹರಣೆಗಳಷ್ಟೇ. ಇಂಥ ಅನೇಕ ಸ್ವಾರಸ್ಯಕರ ವಿಷಯಗಳನ್ನು ಬರೆದಿದ್ದಾರೆ. 

ಇನ್ನು ಬಾಗಿಲು ತೆರೆಯೇ ಸೇಸಮ್ಮ ಕುತೂಹಲಕಾರಿ ಲಲಿತಪ್ರಬಂಧಗಳ ಸಂಕಲನ. ಓದುತ್ತ ಹೋದಂತೆ ನಿಮ್ಮ ತಲೆಯಲ್ಲಿ ಎಂಥ ಭಯಾನಕ ಚಿಂತೆಯ ಭೂತ ಹೊಕ್ಕಿದ್ದರೂ ಒಂದು ಕ್ಷಣ ಅದೆಲ್ಲ ಮಾಯವಾಗಿ ತುಟಿಯಲ್ಲೊಂದು ಮುಗುಳ್ನಗೆ, ಮನಸ್ಸಿನಲ್ಲೊಂದು ನೆಮ್ಮದಿ ಖಂಡಿತ ಮೂಡುತ್ತದೆ ಎನ್ನುವುದಕ್ಕೆ ಗ್ಯಾರಂಟಿ ಕೊಡಬಲ್ಲೆ. 

ಮರ್ಯಾದೆ ತೆಗೆಯುವ ಕಲೆ ಎಂಬ ಲೇಖನವನ್ನು ಓದುವಾಗಲಂತೂ ಅದೆಷ್ಟು ನಕ್ಕಿದ್ದೇನೋ ನನಗೇ ಗೊತ್ತಿಲ್ಲ. ಖ್ಯಾತನಾಮರ ಚತುರ ಮಾತುಗಳ ಬಗ್ಗೆ ಸಾಕಷ್ಟು ಕೇಳಿದ್ದ ನಾನು ಅವುಗಳನ್ನೆಲ್ಲ ಸಂಗ್ರಹರೂಪದಲ್ಲಿ ಓದಿದ್ದು ಶರತ್ ಭಟ್ಟರ ಈ ಲೇಖನದಲ್ಲಿ. 

ನಮ್ಮ ಇಂಗ್ಲೀಷ್ ವ್ಯಾಮೋಹಕ್ಕೆ ಇಂಗ್ಲಿಶ್ ಎನೆ ಕುಣಿದಾಡುವುದೆನ್ನದೆ ಎನ್ನುವ ಲೇಖನದಲ್ಲಿ ಸರಿಯಾಗಿ ಮದ್ದು ಅರೆದಿದ್ದಾರೆ. ಮಾತೃಭಾಷೆಯಲ್ಲಿ ಸಂಶೋಧನೆ ಮಾಡಿದ ಪಂಡಿತರೆಲ್ಲ ಎಂಥೆಂಥ ಸಾಧನೆಗಳನ್ನು ಮಾಡಿದ್ದಾರೆ ಎನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದಾರೆ. ಇಂಗ್ಲೀಷ್ ಭಾಷೆ ಇಂದು ಅಗತ್ಯ ಎನ್ನುವುದು ನಿಜವಾದರೂ ಅದಿಲ್ಲದೆ ಜೀವನವೇ ಇಲ್ಲವೆಂದು ನಾವು ಹಲುಬುವ ಅಗತ್ಯವಂತೂ ಖಂಡಿತ ಇಲ್ಲ. ವಿಜ್ಞಾನ ಮತ್ತು ಗಣಿತಗಳಲ್ಲಿ ಬಹಳ ಪಂಡಿತರೆನ್ನಿಸಿಕೊಂಡ ರಷ್ಯನ್ನರಲ್ಲಿ ಹೆಚ್ಚಿನವರಿಗೆ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲ. ನಾನು ಬಹಳವಾಗಿ ಇಷ್ಟಪಡುವ ವಿಜ್ಞಾನದ ಲೇಖಕ ಯಾಕೋವ್ ಪೆರೆಲ್ಮನ್ ತನ್ನ ಪುಸ್ತಕಗಳನ್ನೆಲ್ಲ ಬರೆದಿರುವುದು ರಷ್ಯನ್ ಭಾಷೆಯಲ್ಲಿ! ಅದನ್ನು ಯಾರೋ ಒಬ್ಬ ಪುಣ್ಯಾತ್ಮ ಇಂಗ್ಲೀಷಿಗೆ ಅನುವಾದ ಮಾಡಿರುವುದರಿಂದ ನಾನು ಅದನ್ನು ಓದಲು ಸಾಧ್ಯವಾಯಿತು ಎನ್ನುವುದು ಬೇರೆ ವಿಚಾರ. ಆದರೆ ಇಂಗ್ಲೀಷ್ ಹೊರತುಪಡಿಸಿ ಬೇರೆ ಭಾಷೆಗಳಲ್ಲೂ ಜ್ಞಾನದ ಸೆಲೆ ಅಪಾರವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. 

ಕೊನೆಯದಾಗಿ ಪಾಸ್ ವರ್ಡ್ ಗಳ ವಿಷಯಕ್ಕೆ ಬಂದರೆ ಹೆಚ್ಚಿನವರ ಪಾಸ್ವರ್ಡ್ ಗಳು ಬಹಳ ಸುಲಭವಾಗಿ ಊಹಿಸುವಂತೆ ಇರುತ್ತವೆ. ಆದರೆ ಒಂದೊಂದು ಪಾಸ್ವರ್ಡ್ ಹೇಗೆ ಸರ್ವರಿನಲ್ಲಿ ಸೇವ್ ಆಗಿರುತ್ತದೆ, ಅದರ ಹಿಂದಿನ ಕೋಡಿಂಗ್ ಏನು ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಇದರ ಬಗ್ಗೆ ನಾನೆಲ್ಲೋ ಒಂದು ಜೋಕು ಓದಿದ್ದೆ. ಒಬ್ಬ ಸರ್ದಾರ್ಜಿ ಎಟಿಎಂನಲ್ಲಿ ದುಡ್ಡು ತೆಗೆಯುತ್ತಿದ್ದನಂತೆ. ಆಗ ಅವನ ಹಿಂದೆ ನಿಂತಿದ್ದವನೊಬ್ಬ "ನಿನ್ನ ಎಟಿಎಂ ಪಿನ್ ನನಗೆ ಗೊತ್ತಾಯಿತು. ಅದು ****" ಎಂದು ನಗಾಡಿದನಂತೆ. ಅದಕ್ಕೆ ಪ್ರತಿಯಾಗಿ ಆ ಸರ್ದಾರ್ಜಿ ಬಿದ್ದುಬಿದ್ದು ನಗುತ್ತ "ಅಲ್ಲ, ನನ್ನ ಪಿನ್ 2765. ನಿನಗೆ ಗೊತ್ತಾಗಿಲ್ಲ" ಎಂದನಂತೆ! ಇಂಥ ಪಾಸ್ವರ್ಡ್ ಬಗ್ಗೆಯೂ ಒಂದು ಚಂದದ ಲೇಖನ ಬರೆದಿದ್ದಾರೆ. ಅದಕ್ಕೆ ಬಾಗಿಲು ತೆರೆಯೇ ಸೇಸಮ್ಮ ಎನ್ನುವ ಕುತೂಹಲಕಾರಿ ಶೀರ್ಷಿಕೆ ಕೂಡ ಕೊಟ್ಟಿದ್ದಾರೆ ಎಂದರೆ ಲೇಖನದ ಬಗ್ಗೆ ಅವರು ಅದೆಷ್ಟು ಹೋಂವರ್ಕ್ ಮಾಡಿರಬಹುದು ಎಂದು ಊಹಿಸಬಹುದು. 

ಯಾವುದೇ ಪುಸ್ತಕಗಳಿಗೆ ಕೊಟ್ಟ ಹಣ ವ್ಯರ್ಥವಲ್ಲ. ಹಾಗೆಯೇ ಭಟ್ಟರ ಈ ಪುಸ್ತಕಗಳಿಗೆ ಕೊಟ್ಟ ಹಣವಂತೂ ಖಂಡಿತ ವ್ಯರ್ಥವಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ನೀವು ವಿಜ್ಞಾನದ ಕುತೂಹಲಿಯಾಗಿದ್ದರೂ ಅಥವಾ ಅಲ್ಲದಿದ್ದರೂ ಈ ಪುಸ್ತಕಗಳು ನಿಮಗೆ ಸಾಕಷ್ಟು ಅರಿವು ಹಾಗೂ ಮನರಂಜನೆಯನ್ನು ಖಂಡಿತ ಕೊಡುತ್ತವೆ. ಈ ಪುಸ್ತಕಗಳನ್ನು ತಪ್ಪದೇ ಓದಿ, ಪುಸ್ತಕ ಓದುವ ಸುಖವನ್ನು ನಿಮ್ಮದಾಗಿಸಿಕೊಳ್ಳಿ ಎನ್ನುವ ಪುಕ್ಕಟೆ ಸಲಹೆಯನ್ನು ಕೊಡಬಯಸುತ್ತೇನೆ!

*****************************************************

✍️ ಜಿ.ಎಸ್.ಲಲಿತಾ :


ವಿಜ್ಞಾನ ಎಂದರೇನು ?


ವಿಶೇಷ ಜ್ಞಾನ.....


ವಿಶಿಷ್ಟ ಜ್ಞಾನ.....


ವಿಶಾಲ ಜ್ಞಾನ.....


ವಿಸ್ಮಯ ಜ್ಞಾನ.....


ವಿಸ್ತ್ರತ ಜ್ಞಾನ.....


ವಿಶ್ಲೇಷಿತ ಜ್ಞಾನ.....


ವಿಶದವಾದ ಜ್ಞಾನ.....


ಕೊನೆ ಕೊನೆಗೆ ವಿಷಾದವಾದ ಜ್ಞಾನ......ಎಂದೂ ಹೇಳುವವರಿರಬಹುದು !!


ಹೀಗೊಂದು ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ನೀಡಲು #ವಿಜ್ಞಾನ_ಕಾನನದಲೊಂದು_ಸಫಾರಿ ಎಂಬ ಅಡಿಬರಹದೊಂದಿಗೆ ಕರೆದುಕೊಂಡು ಹೋಗಲು #ಹತ್ತೇವು_ವಿಜ್ಞಾನದ_ಜೀಪ' ಎಂಬ ಪುಸ್ತಕದಲ್ಲಿ ಡ್ರೈವರ್ ಆಗಿ ಕೂತು ವಿವಿಧ ಗೇರ್ ಬದಲಾಯಿಸುತ್ತಾ ಗಿರಗಿರನೆ ಸುತ್ತಿಸುವ ವಿಜ್ಞಾನದ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷನಾಗಲು ಹಗಲಿರುಳೂ ಹಾತೊರೆಯುತ್ತಿರುವ ಲೇಖಕ ಶ್ರೀ #ಶರತ್_ಭಟ್_ಸೇರಾಜೆ !!


ವಿಜ್ಞಾನದ ಬರಹ ಅಂದರೆ ತಾಂತ್ರಿಕ ವಿವರಗಳು,, ಪಾರಿಭಾಷಿಕ ಪದಗಳನ್ನೆಲ್ಲಾ ಬಳಸಿ ಬರೆದರೆ 'ಬೋರು ಹೊಡೆಯುವುದು ಸುಲಭ' ಎಂದೆಣಿಸಿ ಅವರೊಳಗಿನ ವಿಜ್ಞಾನವು ' ಸಾಧ್ಯವಾದರೆ ನನ್ನ ಬಗ್ಗೆ ಸುಲಲಿತವಾಗಿ, ರೋಚಕವಾಗಿ ಬರಿ ನೋಡೋಣ ' ಎಂಬ ಸವಾಲೆಸೆದಂತಾಗಿ ವೈಜ್ಞಾನಿಕ ವಿಷಯಗಳ ಬಗ್ಗೆ ಬರೆಯದೇ 'ವಿಜ್ಞಾನ'ವನ್ನೇ ವಸ್ತುವಾಗಿಕೊಂಡು ಒಟ್ಟು 18 ಪ್ರಬಂಧಗಳ ಸಂಕಲನವಾಗಿ ಹೊರತಂದ ಪುಸ್ತಕ ರೂಪ.


ಈ ಕಾನನದ ಸಫಾರಿಗಾಗಿ ಜೀಪೇನೋ ಹತ್ತಿಯಾಗಿದ್ದ ನನಗೆ ಮೊದಲ ಪ್ರಬಂಧ 'ಕಿರಿಕಿರಿಯಿಂದ ಅಭಿನಂದನಾ ಭಾಷಣಕ್ಕೆ ' ಎಂಬಲ್ಲಿಂದ ಆರಂಭಿಸಿ ' ಇದು ಎಂಥಾ ಪ್ರಯೋಗವಯ್ಯಾ'  ಎಂಬ 7 ಪ್ರಬಂಧಗಳ ಮೈಲುಗಲ್ಲು ದಾಟುವವರೆಗೂ ಜೀಪಿನ ಫಸ್ಟ್ ಗೇರ್ ನಲ್ಲಿ ಪ್ರಯಾಣಿಸಿದಂತೆ ಜೊತೆಗೆ ಕಾನನದ ಏರುತಗ್ಗಿನ ಹಾದಿಯಲ್ಲಿ ಏರಿ ಹಾರಿ ಸಾಗಿದಂತಾ ಅನುಭವ. ಇಷ್ಟರೊಳಗೆ ಕಾನನದ ಸಫಾರಿಗೆ ಜೀಪಿನಲ್ಲಿ ಕೂತವರಿಗೆ ಡ್ರೈವರ್ ಕಮ್ ಗೈಡ್ ಜೀಪಿನ ಆಚೀಚೆ,ಕಾನನದ ಕೋರೆ ಕೋರೆಗಳಲ್ಲಿ ಓ ಅಲ್ ನೋಡಿ ಅದಿದೆ, ಓ ಇಲ್ ನೋಡಿ ಇದಿದೆ,  ಅದ್ಯಾವುದೋ ಪ್ರಾಣಿಗಳ ಹಿಂಡು ಹಾದುಹೋಗ್ತಿದೆ  ಸೈಲೆಂಟಾಗಿ ಆ ದೃಶ್ಯ ನೋಡಿ, ಹಿಂದೆಲ್ಲಾ ಹಾಗಿತ್ತು, ಮುಂದ್ ಹೋದ್ರೆ ಹೀಗಿದೆ,  ಅಂತಾ ಒಂದಿಷ್ಟು ಸೂಚನೆಗಳ ರಾಶಿಯನ್ನು ತಲೆಗೆ ತುಂಬಿಸಿದಂತೆ. ಇದನ್ನು ಭಾರವಾಗಿಸದೇ ಇರಲು ಅಲ್ಲಲ್ಲಿ ಒಂದು ಜೋಕ್, ಒಂದು ತಮಾಷೆ ಪ್ರಸಂಗ ಅಂತ ಸೇರಿಸಿದ್ದರೂ ಈಗಾಗಲೇ ಕಾನನದ ಏರುತಗ್ಗಿನ ದಾರಿಯಲ್ಲಿ ಕೂತು ಮೈ ಕೈ ಉಜ್ಜಿಕೊಳ್ಳುತ್ತಾ, ತಲೆ ಸವರಿಕೊಳ್ತಾ ಮುಂದೇನಿದೆ ಪ್ರಯಾಣದಲ್ಲಿ ಅಂತಾ ಇರೋರಿಗೆ ಈ ಪ್ರಸಂಗಗಳು 'ಹಾಯ್'  ಎಂಬ ಭಾವ ಮೂಡಿಸಲು ಆಗಿಲ್ಲ.


ಎಂಟನೇ ಪ್ರಬಂಧ ' ಕಾರ್ಯಕಾರಣದೊಂದಪೂರ್ವ ನಟನೆ ' ನಂತರ ಸ್ವಲ್ಪ ಗೇರ್ ಬದಲಾಯಿಸುವ ಜೀಪ್ ಕೊನೆಯ 18 ನೇ ಪ್ರಬಂಧದವರೆಗೆ ಓದುವ ಹಾದಿಗೆ ಸ್ವಲ್ಪ ನಯವಾಗಿ, ವೈಚಾರಿಕವಾಗಿ, ತಲೆದೂಗುವಂತೆ ಪ್ರಯಾಣವನ್ನು ಸುಲಲಿತವಾಗಿಸಲು ಪ್ರಯತ್ನಿಸಿದೆ.


ನನ್ನಂತಹ ವಿಜ್ಞಾನದ ಸಾಮಾನ್ಯ ವಿದ್ಯಾರ್ಥಿಗೆ ಹಿಡಿಸಿದ ಅಂಶ 13 ನೇ  'ವಿಜ್ಞಾನವೂ ಅದರ ಆಭಾಸವೂ ' ಎಂಬ ಪ್ರಬಂಧದಲ್ಲಿ ಬರುವ ವಿಚಾರಗಳಲ್ಲಿನ ಪ್ರಕಾರಗಳ ಬಗೆಗಿನ ಅವರ ಅಭಿಪ್ರಾಯ. ಅವರೆಂದಂತೆ ವಿಚಾರಗಳನ್ನು ನಾಲ್ಕು ಪ್ರಕಾರಗಳಾಗಿಸಿ ನೋಡುವುದು. ಅವುಗಳೆಂದರೆ, ವೈಜ್ಞಾನಿಕ (Scientific), ಮೌಢ್ಯ (Disbelief), ವಿಜ್ಞಾನಾಭಾಸ(Pseudoscience), ಮತ್ತು ವಿಜ್ಞಾನೇತರ(Non Science).... (Nonsense) ಅಲ್ಲ !! ಈ ಅಂಶಗಳು ನನಗೆ ವೈಯಕ್ತಿಕವಾಗಿ ಪ್ರತಿಶತ ಹೌದೆನ್ನಿಸಿದವುಗಳು.


ಈ ಪುಸ್ತಕ ನನ್ನಂತಹ ಸಾಮಾನ್ಯ ಓದುಗಳಿಗೆ ಅತಿಶಯದ ರಾಶಿ ಎನಿಸಲು ಕಾರಣ ಲೇಖಕರು ಪ್ರತೀ ಪ್ರಬಂಧಗಳಲ್ಲೂ ಉದ್ಧರಿಸುವ, ಉದಾಹರಿಸುವ ಹೇಳಿಕೆಗಳು, ಪ್ರಸಂಗಗಳು, ಘಟನೆಗಳು, ಕಾಲಮಾನಗಳು ಹೀಗೆ ಒಂದಿಷ್ಟು ವಿಷಯಗಳು. ಕ್ರಿ.ಪೂ. ದಿಂದ ಕ್ರಿ.ಶ.ದವರೆಗೆ, ಜಗತ್ತಿನ ಪೂರ್ವದಿಂದ ಪಶ್ಚಿಮದವರೆಗಿನ ತತ್ವಜ್ಞಾನಿಗಳು, ಚಕ್ರವರ್ತಿಗಳು, ವಿಜ್ಞಾನಿಗಳು, ಲೇಖಕರು ವಿವಿಧ ಕ್ಷೇತ್ರಗಳಲ್ಲಿನ ಪ್ರಸಿದ್ಧ ವ್ಯಕ್ತಿಗಳು, ಅವರವರ ಹೇಳಿಕೆಗಳು, ಪ್ರಸಂಗಗಳು ಎಲ್ಲವನ್ನೂ ಪ್ರಬಂಧಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಪೋಣಿಸಿರುವುದು. ಇದು ಅವರ ಅಧ್ಯಯನದ ಅಗಾಧತೆ ಮತ್ತು ಗಾಢತೆ !! ಇದರಿಂದ


ಓದುಗನಿಗೆ ಲೇಖಕರ ಅಧ್ಯಯನದ ಆಳ, ಹರಿವು, ವಿಸ್ತಾರ ಮತ್ತು ಅದರ ಸಾಂದರ್ಭಿಕ ಬಳಕೆ ಬಗ್ಗೆ ಹುಬ್ಬೇರಿಸಿ, ತಲೆ ಸವರಿಕೊಂಡು ತಲೆ ಬಾಗುವಂತೆ ಮಾಡುವ ಸಂಗತಿ.


ಇನ್ನೊಂದು ವಿಶೇಷವೆಂದರೆ ಈ ಪುಸ್ತಕದ ಶೀರ್ಷಿಕೆ ಮತ್ತು ಪ್ರತೀ ಪ್ರಬಂಧಗಳ ತಲೆಬರಹ !! ಇಲ್ಲೆಲ್ಲಾ ನಮಗೆಲ್ಲಾ ಅತಿ ಪರಿಚಿತವಾದ, ಜನಪ್ರಿಯವಾದ ಅಚ್ಚ ಕನ್ನಡದ (ಅದು ಹಳೆಗನ್ನಡದಿಂದ ಹೊಸಗನ್ನಡದವರೆಗೆ) ಪದಪುಂಜಗಳನ್ನು ವಿಷಯಕ್ಕನುಸಾರವಾಗಿ ಬಳಸಿರುವ ಅವರ ಕನ್ನಡದ ಒಲುಮೆ ಮತ್ತು ಜಾಣ್ಮೆ !!


ಇವುಗಳಿಂದಲೇ ನಾನು ಆಕರ್ಷಿತಳಾಗಿ ಇನ್ನೊಬ್ಬ ಹೆಸರಾಂತ ಲೇಖಕ #ಶ್ರೀವತ್ಸ_ಜೋಶಿ (ಪರಾಗಸ್ಪರ್ಶ ಖ್ಯಾತಿ) ರವರು ಈ ಪುಸ್ತಕಕ್ಕೆ ಬರೆದ ಮುನ್ನುಡಿ ಬರೆಹವನ್ನು ಅವರ FB page ನಲ್ಲಿನ ಪೋಸ್ಟ್ ಓದಿ ಅಲ್ಲಿ ಸಿಕ್ಕ ಸಂಪರ್ಕ ಸಂಖ್ಯೆಯನ್ನು ಬಳಸಿಕೊಂಡು ಪುಸ್ತಕ ಪ್ರಕಾಶಕರಿಂದ ತರಿಸಿಕೊಂಡು ಕೂಡಲೇ ಸಂಪೂರ್ಣ ಓದಿದ್ದು. ಮತ್ತೀಗ ಅದರ ಕುರಿತು ನನ್ನ ಅನಿಸಿಕೆ ಬರೆದಿದ್ದು.


ಇದೆಲ್ಲವನ್ನೂ ಓದಿದ ಸಾಮಾನ್ಯ ಸಾಹಿತ್ಯ ಓದುಗನಿಗೆ, ಈಗಾಗಲೇ ವಿಜ್ಞಾನ ಕ್ಷೇತ್ರ ಆಯ್ದುಕೊಂಡು ಜೀವನೋಪಾಯ ಹುಡುಕಿಕೊಂಡವನಿಗೆ,ಅನ್ವಯಿಕ ವಿಜ್ಞಾನ ವಿಜ್ರಂಭಿಸುತ್ತಿರುವ ಈ ಕಾಲಕ್ಕೆ, ಮೂಲ ವಿಜ್ಞಾನ ಎಂದರೇನು ? ಎಂಬುದನ್ನು ಒಬ್ಬ ಅಪ್ಪಟ ವಿಜ್ಞಾನದ ಅಭಿಮಾನಿಯಾಗಿ ಶರತ್ ಭಟ್ ಸೇರಾಜೆ ಕೊಡುವ ವ್ಯಾಖ್ಯಾನವೆಂದರೆ ' ಅತಿಶಯವಾದ ಜ್ಞಾನ ಪಿಪಾಸೆಯನ್ನು, ಸತ್ಯವನ್ನು ತಿಳಿಯಬೇಕೆಂಬ ಹಂಬಲದ ಋಜುಮಾರ್ಗವನ್ನು, ವಸ್ತುನಿಷ್ಠವಾದ ಸತ್ಯದ ಹುಡುಕಾಟವನ್ನು, ಕಾರ್ಯ - ಕಾರಣಗಳ ಸಂಬಂಧಗಳ ಬಗೆಗಿನ ನಿತಾಂತವಾದ ಕಾಳಜಿಯನ್ನು, ಅನುದಿನವೂ ಪ್ರಯೋಗಗಳಿಗೆ, ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ನಿತ್ಯನೂತನವಾಗುತ್ತಾ, ಅಗ್ನಿದಿವ್ಯಗಳನ್ನು ಹಾದು ವಿಜಯದುಂಧುಬಿಯನ್ನು ಮೊಳಗಿಸುವ ಹುಮ್ಮಸ್ಸೆಂಬ ಗುಣವಿಶೇಷಗಳನ್ನು ಹೊಂದಿರುವುದೇ "#ವಿಜ್ಞಾನ".


#ವಿಜ್ಞಾನಂ_ಗೆಲ್ಗೆ !!


🙏ಧನ್ಯವಾದಗಳು #ಶರತ್_ಭಟ್_ಸೇರಾಜೆ ಒಂದು ಸೈಂಟಿಫಿಕ್ ಸಫಾರಿಗೆ


*****************************************************


ಮಾಕೋನಹಳ್ಳಿ ವಿನಯ್‌ ಮಾಧವ:


ವಿಜ್ಞಾನವು ಅಜ್ಜಿ ಕಥೆಗಳಾದಾಗ…


ಪಿಯುಸಿ ಎಂಬ ಘಟ್ಟವನ್ನು ಕಷ್ಟದಲ್ಲಿ ಪಾಸ್‌ ಮಾಡಿದಾಗಲೇ ನನಗೆ ಗೊತ್ತಾಗಿತ್ತು. ವಿಜ್ಞಾನಕ್ಕೂ, ನನ್ನ ಮೆದುಳಿಗೂ ಸಂಬಂಧವಿಲ್ಲ ಎನ್ನುವುದು. ಆದರೆ, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸೀಟು ಬೇಕಿತ್ತು ಅಷ್ಟೆ. ಉಪ ಪ್ರಿನ್ಸಿಪಾಲ್‌ ಆಗಿದ್ದ ರಾಮ್‌ ಭಟ್‌ ಅವರಿಗೆ ನಾನು ಅವರ ಕಾಲೇಜು ಸೇರುವುದು ಇಷ್ಟವಿರಲಿಲ್ಲ ಎಂದು ನನಗೆ ಗೊತ್ತಾಯಿತು. ಪ್ರಿನ್ಸಿಪಲ್‌ ಪ್ರೊ ಕೆ ಈಶ್ವರ್‌ ಅವರು ಮಾತನಾಡುವ ಮುಂಚೆಯೇ, ʻನಿನಗೆ ಬೇಕಾದರೆ ಬಿ ಎಸ್ಸಿ ಪಿ.ಸಿ.ಎಂ (ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ) ಸಿಗುತ್ತದೆ. ಕಲಾ ಅಥವಾ ವಾಣಿಜ್ಯಕ್ಕೆ ಸೀಟು ಕೊಡಲಾಗುವುದಿಲ್ಲʼ ಎಂದು ಘೋಷಿಸಿದರು.


ʻಈ ಡಿಗ್ರಿ ಮಾಡಿ ಗುಡ್ಡ ಕಡಿಯೋದು ಅಷ್ಟರಲ್ಲೇ ಇದೆ,ʼ ಎಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಾ, ಸಿಕ್ಕದ್ದನ್ನು ತೆಗೆದುಕೊಂಡು ಕಾಲೇಜು ಸೇರಿದೆ. ತಿಪ್ಪರಲಾಗ ಹಾಕಿದರೂ ರಸಾಯನ ಶಾಸ್ತ್ರ ತಲೆಗೆ ಹತ್ತಲು ಒಪ್ಪಲೇ ಇಲ್ಲ. ನಾನೂ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಕ್ಲಾಸಿನಲ್ಲೇ ಪ್ರತಿಭಾವಂತಳಾಗಿದ್ದ ಲತಾ ಭಟ್‌ಗೆ ನನ್ನ ಮೇಲೆ ಕರುಣೆ ಇಲ್ಲದೇ ಹೋಗಿದ್ದರೆ, ನಾನು ಲ್ಯಾಬ್‌ ರೆಕಾರ್ಡ್‌ ಸಹ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಅಂತೂ, ಆ ಬಿಎಸ್ಸಿ ಎನ್ನುವ ಡಿಗ್ರಿ ನನಗೆ ಸಿಗಲೇ ಇಲ್ಲ.


ಮುಂದೆ, ಕಲಾ ವಿಭಾಗದ ರಾಜಕೀಯ ಶಾಸ್ತ್ರ, ಅರ್ಥ ಶಾಸ್ತ್ರ ಮತ್ತು ಪತ್ರಿಕೋದ್ಯಮಗಳನ್ನು ಓದಿ, ಕೆಲಸಕ್ಕೆ ಸೇರಿದ ಮೇಲೆ ನನಗೆ ಈ ವಿಜ್ಞಾನ ಎನ್ನುವುದು ಅಷ್ಟೊಂದು ಕಷ್ಟದ ವಿಷಯವಲ್ಲ ಎನ್ನುವುದು ಅರ್ಥವಾಗತೊಡಗಿತು. ಆದರೆ, ಅದನ್ನು ಓದುವ ಮತ್ತು ಅರ್ಥಮಾಡಿಕೊಳ್ಳುವ ರೀತಿ ಬೇರೆ ಎನ್ನುವುದು ಸಹ ತಿಳಿಯಿತು. ಆದರೆ, ನಾನು ಕಾಲೇಜಿನಲ್ಲಿದ್ದಾಗ ಇವೆಲ್ಲ, ಅದರಲ್ಲೂ ರಸಾಯನ ಶಾಸ್ತ್ರ ಏಕೆ ಅರ್ಥವಾಗುತ್ತಿರಲಿಲ್ಲ ಎನ್ನುವುದು ಒಂದು ಯಕ್ಷ ಪ್ರಶ್ನೆಯಾಗಿ ಕಾಡತೊಡಗಿತು.


ಮುಂದೊಂದು ದಿನ, ಆಲ್ಬರ್ಟ್‌ ಐನ್ ಸ್ಟೀನ್ ಬಗ್ಗೆ ಇರುವ ತಮಾಷೆಯನ್ನು ಓದುವಾಗ ನನಗೆ ಏನೋ ಹೊಳೆದಂತಾಯಿತು. ಯಾರೋ ಒಂದು ದಿನ ಐನ್‌ ಸ್ಟೀನ್‌ನನ್ನು ಕೇಳಿದರಂತೆ: ʻಒಂದು ಕಿಲೋಮೀಟರ್‌ ನಲ್ಲಿ ಎಷ್ಟು ಇಂಚುಗಳಿರುತ್ತವೆ?ʼ ಎಂದು.


ʻಲಾಗ್‌ ಬುಕ್‌ ತೆಗೆದು ನೋಡಿ. ಅದನ್ನೆಲ್ಲ ಉರು ಹೊಡೆದು ತಲೆಯಲ್ಲಿ ಇಟ್ಟುಕೊಳ್ಳುವುದು ಸಮಯ ವ್ಯರ್ಥ,ʼ ಎಂದರಂತೆ. ನನ್ನ ಇಂದಿನ ಸಮಸ್ಯೆ ಕೂಡ ಅದೇ… ಯಾವುದಾದರನ್ನು ಉರು ಹೊಡೆದು ನೆನಪಿನಲ್ಲಿಟ್ಟುಕೊಳ್ಳುವುದು. ರಸಾಯನ ಶಾಸ್ತ್ರದಲ್ಲಿ ಎಷ್ಟೋ ರಾಸಾಯನಿಕಗಳ ಸಂಯೋಜನೆಗಳನ್ನು ಉರು ಹೊಡೆದೇ ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು.


ಸೋಡಿಯಂ ಗೆ Na ಯಾಕೆ ಬರಬೇಕು ಅಂತ ಪ್ರಶ್ನೆ ಮಾಡುತ್ತಿದ್ದನೇ ಹೊರತು, ಅದನ್ನು ಉರು ಹೊಡೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಅದು ನನ್ನ ತಲೆಯಲ್ಲಿಯೂ ಉಳಿಯುತ್ತಿರಲಿಲ್ಲ. ಆದರೆ ಮುಂದೆ, ಅವುಗಳ ಉಪಯೋಗ ಮತ್ತು ಅಪಾಯಗಳನ್ನು ಮಾತ್ರ ಅರ್ಥಮಾಡಿಕೊಳ್ಳಬೇಕಾದ್ದರಿಂದ, ಸುಲಭ ಅನ್ನಿಸುತ್ತಿತ್ತು.


ಒಮ್ಮೆ ನಾನು ಊರಿಗೆ ಹೋದಾಗ, ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಹಾಗೆಯೇ ಕಾರು ಹತ್ತಿ ಕೊಟ್ಟಿಗೆಹಾರದ ಕಡೆಗೆ ಹೊರಟೆ. ಆಗಿನ್ನೂ ತೇಜಸ್ವಿ ಪ್ರತಿಷ್ಠಾನ ಆರಂಭವಾಗಿ, ಕೊಟ್ಟಿಗೆಹಾರದ ಬಸ್‌ ಸ್ಟ್ಯಾಂಡ್‌ ಪಕ್ಕದಲ್ಲಿದ್ದ ಒಂದು ಸಣ್ಣ ಕಟ್ಟಡದಲ್ಲಿ ಇತ್ತು. ಕೊಟ್ಟಿಗೆ ಹಾರದಲ್ಲಿ ವಿಪರೀತ ಮಳೆ ಹಿಡಿದಿತ್ತು ಮತ್ತು ಪ್ರತಿಷ್ಠಾನದಲ್ಲಿ ಯಾರೂ ಇರಲಿಲ್ಲ. ಹಾಗೆಯೇ ಮುಂದು ಚಾರ್ಮಾಡಿ ಘಾಟಿನ ತುದಿಯಲ್ಲಿರುವ ಮಲಯ ಮಾರುತ ಫಾರೆಸ್ಟ್‌ ಗೆಸ್ಟ್‌ ಗೌಸ್‌ ಕಡೆಗೆ ಹೊರಟೆ.


ಕಾರಿನಲ್ಲಿಂದಿಳಿದು ಗೆಸ್ಟ್‌ ಹೌಸ್‌ ಒಳಗೆ ಓಡಿದ ತಕ್ಷಣವೇ ತಪ್ಪು ಮಾಡಿದೆ ಅನ್ನಿಸಿತು. ಎಲ್ಲಾ ಕಡೆಯಿಂದ ನೀರು ಒಳಗೆ ನುಗ್ಗುತ್ತಿತ್ತು. ನೆಲದ ಮೇಲೆ ಅರ್ಧ ಅಡಿಯಷ್ಟು ನೀರು ನಿಂತಿತ್ತು ಮತ್ತು ಇಬ್ಬರು ಡಿಪಾರ್ಟ್‌ಮೆಂಟಿನವರು ನೀರನ್ನು ಹೊರಕ್ಕೆ ಹಾಕಲು ಹರ ಸಾಹಸ ಪಡುತ್ತಿದ್ದರು. ಸರ್ಕಾರದ ಕಟ್ಟಡಗಳ ದುರವಸ್ಥೆ ಕಂಡು ನಗು ಬಂತು. ವಾಪಾಸು ಬರುವಾಗ ತೊಪ್ಪೆಯಾಗಿದ್ದೆ.


ಹಾಗೆಯೇ ಅಂದು ಪ್ರದೀಪ್‌ ಕೆಂಜಿಗೆಗೆ ಫೋನ್‌ ಮಾಡಿ ಮಾತನಾಡುತ್ತಾ, ʻಅಣ್ಣ, ಮಲಯ ಮಾರುತ ಸಕತ್ತಾಗಿತ್ತು. ತೇಜಸ್ವಿ ಏನಾದ್ರೂ ಇದ್ದಿದ್ದು, ಇವತ್ತು ಅಲ್ಲಿಗೆ ಬಂದಿದ್ರೆ, ಒಂದೊಳ್ಳೆ ಕಥೆ ಬರೀತಿದ್ರು ಕಣ್ರಿ… ಕಿರುಗೂರಿನ ಗಯ್ಯಾಳಿಗಳು ಅಥವಾ ನಿಗೂಢ ಮನುಷ್ಯರು ಥರ,ʼ ಎಂದೆ.


ʻಬರೀತ್ತಿದ್ರೇನೋ ಗೊತ್ತಿಲ್ಲ ಕಣ್ರಿ… ಆದ್ರೆ, ಇತ್ತೀಚೆಗೆ ತೇಜಸ್ವಿ ಬರೆಯೋದು ಬಹಳ ಬದಲಾಗಿತ್ತು ಅಂತ ಅನ್ನಿಸೋಲ್ವಾ? ಈಗ ಮಾಯಾ ಲೋಕನೇ ನೋಡಿ. ಅದು ತುಂಬಾ ಜನಕ್ಕೆ ಅರ್ಥವಾಗಿಲ್ಲ. ಯಾಕಂದ್ರೆ, ಅವರು ಅದನ್ನ ಒಂದು ಸೀರೀಸ್‌ ಥರ ಬರೀಬೇಕು ಅಂತ ಇದ್ರು ಅನ್ನಿಸುತ್ತೆ. ಈಗ ಒಂದು ನದಿ ಇಟ್ಟುಕೊಂಡು, ಮುಂದಿನ ಭಾಗದಲ್ಲಿ ಅದರ ಸುತ್ತು ಇರುವ ಜೀವರಾಶಿ…. ಹೀಗೇ ಬರೀತಾ ಹೋಗ್ಬೇಕು ಅಂತ ಇದ್ರು. ಅದನ್ನ ಒಂದ್ಸಲ ನನ್ನ ಹತ್ರಾನೂ ಹೇಳಿದ್ರು. ಈ ಸೀರೀಸ್‌ ವೈಜ್ಞಾನಿಕವಾಗಿ ಇರಬೇಕು ಅಂತ ಅವರಿಗೆ ಇತ್ತು. ಅದೊಂಥರಾ ಹೂವು ಅರಳೋ ಪ್ರಕ್ರಿಯೆ ಇದ್ದ ಹಾಗೆ, ಏನೂ ಇಲ್ಲದ ಎಲೆಯಲ್ಲಿ ನಿಧಾನವಾಗಿ ಮೊಗ್ಗು ಬಂದು, ಅರಳಿ, ಕೊನೆಗೆ ಒಣಗಿ ಉದುರಿ ಹೋಗೋ ಪ್ರಕ್ರಿಯೆ ಥರ… ಮೊದಲನೇ ಭಾಗ ಬರೆದು ಮುಗಿಸಿದ ತಕ್ಷಣ ಹೊರಟು ಹೋದ್ರು. ಹಾಗಾಗಿ, ಅವರ ಮನಸ್ಸಲ್ಲಿ ಏನಿತ್ತು ಅಂತ ಹೇಳೋದು ಕಷ್ಟ,ʼ ಎಂದರು ಪ್ರದೀಪಣ್ಣ.


ನಾನು ಮೌನವಾಗಿ ಅದನ್ನೇ ಯೋಚಿಸುತ್ತಿದ್ದೆ. ಮನೆಗೆ ಬಂದವನೇ, ತೇಜಸ್ವಿ ಅವರ ಕರ್ವಾಲೋ, ಜುಗಾರಿ ಕ್ರಾಸ್ ಮತ್ತು ಚಿದಂಬರ ರಹಸ್ಯ ಪುಸ್ತಕಗಳನ್ನು ತಿರುವಿ ಹಾಕಿದೆ. ನಾನು ಓದಿಯೂ, ಗಮನಿಸದೇ ಇದ್ದ ಎಷ್ಟೋ ವಿಷಯಗಳು ಹೇಗೆ ಪ್ರಕೃತಿ ಮತ್ತು ವಿಜ್ಞಾನಗಳ ಕೊಂಡಿಯನ್ನು ಸೂಕ್ಷ್ಮವಾಗಿ ನಿರೂಪಿಸಿದ್ದಾರೆ ತೇಜಸ್ವಿಯವರು ಎನ್ನುವುದು ನನ್ನ ಗ್ರಹಿಕೆಗೆ ಅನುಗುಣವಾಗಿ ಅರ್ಥವಾಯಿತು. ಉಳಿದವರಿಗೆ ಇದು ಇನ್ನೂ ಹೆಚ್ಚಿನ ಮಟ್ಟಿಗೆ ಅರ್ಥವಾಗಿರಬಹುದು ಎಂದೂ ಅನ್ನಿಸಿತು. ಆದರೆ, ಇದನ್ನು ಗಮನಿಸದೇ ಇದ್ದಾಗ, ಯಾವುದೋ ರಾತ್ರಿ ಮಲಗುವಾಗ ಅಜ್ಜಿ ಹೇಳಿದ ಕಥೆಯಂತೆ ಭಾಸವಾಗುತ್ತಿತ್ತು.


ನಾನಂತೂ ವಿಜ್ಞಾನಕ್ಕೆ ಮಣ್ಣು ಹೊರವ ಪ್ರಯತ್ನವನ್ನಾದರೂ ಮಾಡಿದ್ದೆ. ಹಾಗೆ ನೋಡಿದರೆ ತೇಜಸ್ವಿ ಏನೂ ವಿಜ್ಞಾನದ ವಿದ್ಯಾರ್ಥಿಯಲ್ಲ. ಅವರು ಮೊದಲಿಂದಲೂ ಸಾಹಿತ್ಯ, ತತ್ವಜ್ಞಾನ ಅಭ್ಯಾಸ ಮಾಡಿದವರು. ಅವರು ಜೀವನವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿಕೊಂಡು ಬದುಕಿದವರು ಅನ್ನಿಸತೊಡಗಿತು. ಇದು ಹೇಗೆ? ಎನ್ನುವ ಪ್ರಶ್ನೆ ನನ್ನನ್ನು ಬಹಳವಾಗಿ ಕಾಡಿತ್ತು.


ಶರತ್‌ ಭಟ್‌ ಸೇರಾಜೆ ಬರೆದ ʻಹತ್ತೇವು ವಿಜ್ಞಾನದ ಜೀಪʼ ಪುಸ್ತಕ ಓದುವಾಗ ಅದಕ್ಕೆ ಉತ್ತರ ಸಿಕ್ಕಿತು ಎಂದುಕೊಂಡಿದ್ದೇನೆ. ಏಕೆಂದರೆ, ವಿಜ್ಞಾನದ ಬಗ್ಗೆ ಒಂದೆರೆಡು ವಾಕ್ಯದಲ್ಲಿ ಯಾವುದಾದರೂ ವ್ಯಾಖ್ಯಾನ ಅಥವಾ Deifinition ಹೇಳುವುದು, ವಾಟ್ಸಾಪ್‌ ನಲ್ಲಿ ಮಹಾಭಾರತ ಕಳುಹಿಸಿದಂತೆ ಆಗುತ್ತದೆ. ಹಾಗೆಯೇ, ತತ್ವ ಶಾಸ್ತ್ರ ಮತ್ತು ವಿಜ್ಞಾನ ದಾಯಾದಿಗಳು. ಎರಡರ ಗುರಿಯೂ ಒಂದೇ: ಮೂಲಸತ್ಯದ ಅನ್ವೇಷಣೆ, ಜ್ಞಾನದ ಹುಡುಕಾಟ.


ಇದನ್ನೇ ತೇಜಸ್ವಿಯವರು ಬದುಕಿನಲ್ಲಿ ಮಾಡಿದ್ದು. ಪ್ರಕೃತಿಯ ಮೂಲ ಸತ್ಯದ ಅನ್ವೇಷಣೆಯಲ್ಲಿ, ಅವರು ಜ್ಞಾನವನ್ನು ಹುಡುಕಾಡುತ್ತಿದ್ದರು. ಹಾಗಾಗಿ, ತೇಜಸ್ವಿಯವರು ಹೇಳಿದ: ʻಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಭಾಗ,ʼ ಎನ್ನುವ ಮಾತು ವಿಜ್ಞಾನಕ್ಕೂ ಅನ್ವಯಿಸುತ್ತದೆ ಎಂದುಕೊಂಡೆ… ʻಪ್ರಕೃತಿ ವಿಜ್ಞಾನದ ಭಾಗವಲ್ಲ, ವಿಜ್ಞಾನ ಪ್ರಕೃತಿಯ ಭಾಗ.ʼ ಹಾಗಾಗಿ, ನನ್ನ ಪ್ರಕಾರ, ʻEnvironmental Scienceʼ ಎನ್ನುವ ಪದವೇ ತಪ್ಪು.


ತೇಜಸ್ವಿಯವರು ವಿಜ್ಞಾನವನ್ನು ತಮ್ಮ ಸಾಹಿತ್ಯದಲ್ಲಿ ಎಷ್ಟು ಸರಳವಾಗಿ ಅಳವಡಿಸಿಕೊಂಡಿದ್ದರೆಂದರೆ, ನಮಗೆ ವಿಜ್ಞಾನ ಮತ್ತು ಬದುಕಿನ ಮಧ್ಯೆ ಇರುವ ಸಣ್ಣ ರೇಖೆಯು ಗಮನಕ್ಕೇ ಬರುತ್ತಿರಲಿಲ್ಲ. ಶರತ್‌ ಭಟ್‌ ಸೆರಾಜೆಯ ಈ ಪುಸ್ತಕ ಸಹ ಹಾಗೆಯೇ… ಅವರ ಮೊದಲ ಪುಸ್ತಕವಾದ ʻಬಾಗಿಲು ತೆರೆಯೇ ಸೇಸಮ್ಮʼದ ಥರ, ವಿಜ್ಞಾನದ ಬಗ್ಗೆ ಇರುವ ಒಂದು ಲಲಿತ ಪ್ರಬಂಧಗಳ ಗುಚ್ಚ. ಆದರೆ, ಸಾಧಾರಣ ಓದುಗರಿಗೆ ತಾವು ವಿಜ್ಞಾನದ ಬಗ್ಗೆ ಓದುತ್ತಿದ್ದೇವೆ ಎನ್ನುವ ಯಾವುದೇ ʻಅರಿಮೆʼ ಮೂಡುವುದಿಲ್ಲ.


ಇಲ್ಲಿ ವಿಜ್ಞಾನಿಗಳ ಕಥೆಗಳು, ಚಾರಿತ್ರಿಕ ಘಟನೆಗಳು ಮತ್ತು ಸತ್ಯ-ಅಸತ್ಯಗಳ ತುಲನೆಗಳು ಬೇಕಷ್ಟಿವೆ. ಪ್ರಪಂಚದ ಎಲ್ಲಾ ವಿಜ್ಞಾನಿಗಳೂ ನಮ್ಮ ಹತ್ತಿರ ಮಾತನಾಡುತ್ತಿರುವಾಗ, ಭಾರತದ ವಿಜ್ಞಾನದ ವಿಶ್ಲೇಷಣೆ… ವೇದಗಳಿಂದ ಹಿಡಿದು, ಭಾರತೀಯ ನವ ದರ್ಶನಗಳಾದ (Nine schools of Indian Philosophy) ನ್ಯಾಯ,  ವೈಶೇಷಿಕ, ಸಾಂಕ್ಯ, ಯೋಗ, ಮಿಮಾಂಸಾ, ವೇದಾಂತ, ಚಾರ್ವಕ, ಬೌದ್ದ ಮತ್ತು ಜೈನಗಳ ಬಗ್ಗೆಯೂ ಬಹಳಷ್ಟು ಬೆಳಕು ಚೆಲ್ಲಿದ್ದಾರೆ. ಓದುಗರಿಗೆ ಯಾವುದೇ ಥರಹದ ಕೀಳರಿಮೆ ಬರದ ರೀತಿಯಲ್ಲಿ.


ಈ ಪುಸ್ತಕವು ವೈಜ್ಞಾನಿಕ ಅವಿಷ್ಕಾರಗಳ ಬಗ್ಗೆ ಇರುವ ಪುಸ್ತಕವೇನಲ್ಲ. ವಿಜ್ಞಾನವನ್ನು ಹೇಗೆ ಮತ್ತು ಯಾಕಾಗಿ ಅರ್ಥ ಮಾಡಿಕೊಳ್ಳಬೇಕು, ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ವೈಜ್ಞಾನಿಕ ಮನೋಸ್ಥಿತಿ ಹೇಗಿರಬೇಕು, ಎಷ್ಟನ್ನು ನಂಬಬೇಕು ಮತ್ತು ಎಷ್ಟರ ಮಟ್ಟಿಗೆ  ನಮ್ಮ ತನದ ಬಗ್ಗೆ ದುರಭಿಮಾನಿಯಾಗಿರಬೇಕು ಎನ್ನುವುದನ್ನು ಸಹ, ಉದಾರಣೆ ಸಹಿತ ವಿವರಿಸಿದ್ದಾರೆ.


ಕೆಲವೊಮ್ಮೆ ಹೀಗಾಗುತ್ತದೆ. ಬಹಳ ವರ್ಷಗಳ ಹಿಂದೆ, ಬಿಡಿಸಲಾಗದ ಬಂಧನವಿರುವ ನನ್ನ ಸಂಬಂಧಿಯ ಮನೆಗೆ, ಆರು ತಿಂಗಳ ಅಂತರದಲ್ಲಿ ಹೋಗಿದ್ದೆ. ಮನೆಯ ಸ್ವರೂಪವೇ ಬದಲಾಗಿತ್ತು. ನಿಧಾನವಾಗಿ ಬದಲಾವಣೆಗಳನ್ನೇ ಗಮನಿಸುತ್ತಾ, ನನ್ನ ಅಸಮಾಧಾನ ಹೊರ ಹಾಕಿದೆ.


ʻಇಲ್ಲ ಅಣ್ಣಾ… ಯಾವುದೂ ಸರಿ ಹೋಗುತ್ತಿರಲಿಲ್ಲ. ವಾಸ್ತು ಬದಲಾಯಿಸಿದ್ದೇನೆ,ʼ ಎಂದ. ಅದಕ್ಕೆ ಸುಮಾರು ಹತ್ತು ಲಕ್ಷ ಆಗಿನ ಕಾಲದಲ್ಲೇ ಖರ್ಚು ಮಾಡಿದ್ದು ಕೇಳಿ ನನಗೆ ಪಿತ್ತ ನೆತ್ತಿಗೇರಿತು.


ʻಅಲ್ವೋ… ನಿಮ್ಮಪ್ಪ ಈ ಮನೆ ತಗೊಂಡಾಗ ಬರೀ ನೆಲ ಮಹಡಿ ಇದ್ದಿದ್ದು. ಅದರ ಮೇಲೆ ಒಂದು ಮಹಡಿ ಕಟ್ಟಿದ್ದಾರೆ. ನಿನ್ನ ಮೂರು ಅಕ್ಕಂದಿರನ್ನೂ ಒಳ್ಳೆ ಕಡೆ ಕೊಟ್ಟು ಮದುವೆ ಮಾಡಿದ್ದಾರೆ. ಊರಿನಲ್ಲಿ ಹೆಚ್ಚಿನ ತೋಟ ಕೊಂಡಿದ್ದಾರೆ. ನಿನ್ನ ಡಾಕ್ಟರ್‌ ಮಾಡಿದ್ದಾರೆ. ನಿನ್ನ ಮದುವೆ ಸಹ ಮಾಡಿದ್ದಾರೆ. ಊರಲ್ಲಿ ಸಹ ಅಷ್ಟೊಂದು ದೊಡ್ಡ ಮನೆ ಕಟ್ಟಿದ್ದಾರೆ. ಇದಕ್ಕಿಂತ ವಾಸ್ತು ಇನ್ನೇನೋ ಬೇಕು?ʼ ಎಂದು ಕೇಳಿದೆ.


ʻಅಲ್ಲ ಅಣ್ಣಾ… ವಾಸ್ತು ಸೈನ್ಸ್‌ ಕಣೋ…ʼ ಎಂದೇನೋ ಹೇಳೋಕೆ ಹೋದ.


ಮೊದಲೇ ಸಿಟ್ಟಿನಲ್ಲಿದ್ದ ನಾನು, ʻಆ ವಾಸ್ತು ಹೇಳಿದ ಸೂ… ಮಗ ನನ್ನ ಕೈಗೆ ಸಿಕ್ಕಿದರೆ ಅವನ ತಲೆ ಒಡೀತ್ತೀನಿ. ಅದ್ಯಾವ ನಿನ್ನ ಸೈನ್ಸ್‌ ಅವನ್ನ ಬದುಕಿಸುತ್ತೆ ನೋಡೋಣ. ಅವನ ಮನೆನೂ ವಾಸ್ತು ಪ್ರಕಾರ ಇರ್ತದಲ್ಲ… ನಾನು ಅವನ ತಲೆ ಒಡೆದಾಗ ಏನೂ ಆಗಬಾರದಲ್ಲಾ?ʼ ಎಂದು ಹೇಳಿದ್ದೆ.


ನಮ್ಮ ಎಲ್ಲಾ ಸಂಪ್ರದಾಯದ ನಂಬಿಕೆಗಳಿಗೂ ವಿಜ್ಞಾನದ ತಳಕು ಹಾಕುವುದರ ಬಗ್ಗೆಯೂ ಸಹ ಶರತ್‌ ಈ ಪುಸ್ತಕದಲ್ಲಿ ಬಹಳ ತಮಾಷೆಯಾಗಿ ಬರೆಯುತ್ತಾರೆ. ವಿಜ್ಞಾನ ಎನ್ನುವ ಪದದ ಓತಪ್ರೋತ ಪ್ರಯೋಗದ ಬಗ್ಗೆ ಕಿಡಿ ಕಾರುತ್ತಾ,ʻ… ಪ್ರಾಯಶಃ, ವಿಜ್ಞಾನಿಗಳ ಬಳಗವೊಂದನ್ನು ಬಿಟ್ಟು, ಉಳಿದವರೆಲ್ಲ ತಾವು ಹೇಳುತ್ತಿರುವುದನ್ನು ಸೈನ್ಸ್‌ ಎಂದು ಕರೆಯುತ್ತಿದ್ದಾರೇನೋ! ಇನ್ನು ಸೈನ್ಸ್‌ ಆಫ್‌ ಕತ್ತೆ ಕಾಯುವುದು, ಸೈನ್ಸ್‌ ಆಫ್‌ ಟ್ರೋಲ್‌ ಮಾಡುವುದು – ಎಂಬಂಥವು ಮಾತ್ರ ಬಾಕಿ ಉಳಿದಿರುವಂತಿವೆ…ʼ


ಹಾಗೆಯೇ, ಯಾವುದೇ ವಿಜ್ಞಾನದ ಆವಿಷ್ಕಾರಗಳು ನಮ್ಮ ವೇದಗಳಲ್ಲಿ ಇವೆ ಎಂದು ಹೇಳುವುದನ್ನೂ ಶರತ್‌ ಬಹಳ ಸ್ಪಷ್ಟವಾಗಿ, ಆಯಾ ಶ್ಲೋಕಗಳ ಸಹಿತವಾಗಿ ವಿವರಿಸುತ್ತಾರೆ. ಆದರೆ, ಆಧುನಿಕ ಆವಿಷ್ಕಾರಗಳ ಬುನಾದಿಗಳು ಅಲ್ಲಿ ಕಂಡುಬರುವುದನ್ನೂ ಸಹ, ಉದಾಹರಣೆ ಸಹಿತ ಸ್ಪಷ್ಟವಾಗಿಯೇ ಒಪ್ಪುತ್ತಾರೆ.


ವಿಜ್ಞಾನ ಇರುವುದೇ ಮನುಷ್ಯರ ಜೀವನ ಸರಳಗೊಳಿಸಲು ಹೊರತು, ಕ್ಲಿಷ್ಟಕರವಾಗಿಸಲು ಅಲ್ಲ. ಆದರೆ, ವಾಸ್ತವ ಬೇರೆ ದಿಕ್ಕಿನಲ್ಲಿ ಹೋಗುತ್ತಿದೆ. ಇದಕ್ಕೆ ಕಾರಣ ಇಷ್ಟೆ. ವಿಜ್ಞಾನವನ್ನು ನಾವು ಸರಳವಾಗಿ ಅರ್ಥ ಮಾಡಿಕೊಂಡು, ಆನಂತರ ಅಳವಡಿಸಿಕೊಳ್ಳುವ ಬದಲು, ಅದರ ʻEnd Productʼ ಅನ್ನು ನೇರವಾಗಿ ಮಾರುಕಟ್ಟೆ ವ್ಯಾಪಾರೀಕರಣಕ್ಕೆ ಬಳಸುತ್ತಿದ್ದೇವೆ.


ವಿಜ್ಞಾನವನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ, ʻಹತ್ತೇವು ವಿಜ್ಞಾನದ ಜೀಪʼ ಪುಸ್ತಕವು ಕನ್ನಡ ಸಾಹಿತ್ಯದಲ್ಲೇ ಒಂದು ವಿಶಿಷ್ಟ ಮತ್ತು ಉಪಯುಕ್ತ ಪ್ರಯೋಗ ಎಂದು ನನಗನ್ನಿಸುತ್ತದೆ. ಈ ಪುಸ್ತಕದ ಎಲ್ಲಾ ಆಯಾಮಗಳನ್ನು ಬರೆಯಲು ಕುಳಿತರೆ, ಶರತ್‌ ಹೇಳಿದಂತೆ, ʻಮಹಾಭಾರತವನ್ನು ವಾಟ್ಸ್ಯಾಪ್‌ ನಲ್ಲಿ ಕಳುಹಿಸಿದಂತೆʼ ಆಗುತ್ತದೆ.


ಶರತ್‌ ಬರೆದ ʻಬಾಗಿಲು ತೆಗೆಯೇ ಸೇಸಮ್ಮʼ ಪುಸ್ತಕದ ಬಗ್ಗೆ ಬರೆಯುತ್ತಾ, ನಾನು ಒಂದು ಮಾತು ಬರೆದಿದ್ದೆ. ʻಸ್ಟೀಫನ್‌ ಹಾಕಿನ್ಸ್ ಬರೆದ ʻA Brief History of Timeʼ ಪುಸ್ತಕವನ್ನು ಕನ್ನಡಕ್ಕೆ ಯಾರಾದರೂ ಭಾಷಾಂತರಿಸಬಲ್ಲರೇ ಎಂಬ ಪ್ರಶ್ನೆ ನನ್ನನ್ನು ಬಹಳ ಸಮಯದಿಂದ ಕಾಡುತ್ತಿತ್ತು. ಬಾಗಿಲು ತೆಗೆಯೇ ಸೇಸಮ್ಮ ಪುಸ್ತಕ ಓದಿದ ಮೇಲೆ, ಅದಕ್ಕೆ ಉತ್ತರ ಸಿಕ್ಕಿದೆ ಎಂದು ಅನ್ನಿಸುತ್ತಿದೆ.ʼ


ಅದಕ್ಕೆ ಇಂದೂ ಬದ್ದನಾಗಿದ್ದೇನೆ…

Reactions to my new book - Hattevu Vijnanada Jipa

Reviews of my new popular science book - Hattevu Vijnanada Jipa

ಮನುಶ್ರೀ ಜೋಯ್ಸ್ ಅವರು ಬರೆದದ್ದು :

ಹತ್ತೇವು ವಿಜ್ಞಾನದ ಜೀಪ

ಲೇಖಕರು: Sharath Bhat Seraje 

ಈ ಪುಸ್ತಕದಲ್ಲಿ ಏನಿದೆ , ಏನಿಲ್ಲ ಅಂತ ಆಶ್ಚರ್ಯ ಆಗತ್ತೆ. ವಿಜ್ಞಾನದ ಕೌತುಕಗಳು, ಭಾಷೆಯ ಬಳಕೆ, ಹಾಸ್ಯ, ತತ್ವಜ್ಞಾನ, ಹಳಗನ್ನಡ ‌ಎಲ್ಲಾ ಸೇರಿಕೊಂಡಿರುವ ರಿಚ್ ಕೋಸಂಬರಿಯ ಹಾಗಿದೆ ಅನ್ನಬಹುದು.

ಬಹಳ ಚೆನ್ನಾಗಿದೆ. ಆದರೆ ಬೇಗ ಬೇಗ ಓದಕ್ಕೆ ಆಗಲ್ಲ.‌ ನಿಧಾನಕ್ಕೆ ಸವಿದು ಅರಗಿಸಿ ಕೊಳ್ಳಬೇಕು. ತುಂಬಾ ತುಂಬಾ ಮಾಹಿತಿ ಪೂರ್ಣ , ಸಂಗ್ರಹ ಯೋಗ್ಯ ಮತ್ತು ವಿಶೇಷವಾಗಿ "ಹಾಸ್ಯ" ಕಾಶೀ ಹಲ್ವದಲ್ಲಿ ಗೋಡಂಬಿಯ ಹಾಗಿದೆ. ಒಂದು ಕಡೆಯಿಂದ ವಿಜ್ಞಾನದ ಕೌತುಕ, ಇನ್ನೊಂದು ಕಡೆಯಿಂದ ತತ್ವಜ್ಞಾನ ದರ್ಶನ ಮತ್ತೊಂದು ಕಡೆಯಿಂದ ಪದಗಳ ಜೊತೆ ಆಟ, ವರ್ತಮಾನದ ಮಾಹಿತಿಯ ಜೊತೆ ಬೆರೆತು ಓದಿಸಿಕೊಂಡು ಹೋಯಿತು ಒಟ್ಟಾರೆ  ಭೂರಿ ಭೋಜನ.

ಸಾಕಷ್ಟು ಗೊತ್ತಿರದ ವಿಷಯಗಳನ್ನು ತಿಳಿಸಿತು. ನಿರೂಪಣೆ ವಿಶಿಷ್ಟವಾಗಿ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಹಾಗಿದೆ. ಪುರಾತನ ಕಾಲದ ವಿಚಾರಗಳನ್ನು ವರ್ತಮಾನದೊಂದಿಗೆ ವಿವರಿಸಿರುವ ರೀತಿ ಇಷ್ಟವಾಯಿತು.

ಒಳ್ಳೆಯ ಪುಸ್ತಕ, ಆದರೆ ಹಿಡಿದು ಕೂತು ಓದಬೇಕು. ಓದಿದ ಮೇಲೆ ಅದರ ಪರಿಣಾಮ, ಹೊಸ ವಿಷಯಗಳು ಖಂಡಿತ ಅರಿವಾಗುತ್ತದೆ. ತತ್ವಗಳ ಬಗ್ಗೆಯೇ ಒಂದು ಬುಕ್ ಮಾಡಿ, ಹಳಗನ್ನಡದ ಸೊಗಡು ಆಗಿ‌ನ ವಿಚಾರಗಳ ಬಗ್ಗೆ ಇನ್ನೊಂದು ಪುಸ್ತಕ ಬರೆದು, ಈ ವಿಜ್ಞಾನ ವಿಜ್ಞಾನಿಗಳನ್ನು ಬೇರೆ ಮಾಡಿ ಅದನ್ನು ಪ್ರತ್ಯೇಕ ಪ್ರಕಟಿಸಿದರೆ ಓದುಗರಿಗೆ ಸುಲಭವೂ, ರಸಗವಳವೂ ಆಗುತ್ತಿತ್ತು ಅನ್ನುವುದು ನನ್ನ ಅಭಿಪ್ರಾಯ. ಕನ್ನಡದಲ್ಲಿ ಮಿಸ್ ಮಾಡಬಾರದ ವಿಶೇಷ ವೈಜ್ಞಾನಿಕ ಕೃತಿ.

*****************************************************

ಗಣೇಶ್ ಭಟ್ :

ಕನ್ನಡ ಸಾಹಿತ್ಯದ ಬಗ್ಗೆ ಮಾತಾಡುವಾಗ ಸಾಮಾನ್ಯವಾಗಿ ಬರುವ ಒಂದು ಆಕ್ಷೇಪವೆಂದರೆ ಕನ್ನಡದಲ್ಲಿ ವಿಜ್ಞಾನಸಾಹಿತ್ಯದ ಪ್ರಮಾಣ, ಅಂದರೆ ಜನಸಾಮಾನ್ಯರಿಗಾಗಿ ಅರ್ಥವಾಗುವಂತೆ ವಿಜ್ಞಾನದ ವಿಷಯಗಳನ್ನು ವಿವರಿಸುವ ಸಾಹಿತ್ಯದ ಪ್ರಮಾಣ, ಕಡಿಮೆ ಎಂಬುದು. ಅಲ್ಲಿ ಇಲ್ಲಿ ಒಂದಷ್ಟು ಲೇಖಕರು ಪುಸ್ತಕಗಳನ್ನು ಬರೆಯುವುದು ಕಾಣಸಿಗುವುದಾದರೂ ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ವಿಜ್ಞಾನಸಾಹಿತ್ಯ ಬಹಳ ಕಡಿಮೆ ಎನ್ನುವುದು ನಿಜ. ಅದರಲ್ಲೂ ವಿಜ್ಞಾನದ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಪೂರ್ತಿಯಾಗಿ ಚರ್ಚಿಸುವ ಪುಸ್ತಕವು ಇರುವುದು ಬಹಳ ಕಡಿಮೆ. ಅಂತಹ ಒಂದು ಪುಸ್ತಕ Sharath Bhat Seraje ಅವರ ‘ಹತ್ತೇವು ವಿಜ್ಞಾನದ ಜೀಪ’. ಇದು ಸಾಮಾನ್ಯ ಜನರನ್ನು ತಲುಪುವ ಉದ್ದೇಶದಿಂದಲೇ ಬರೆದ ವಿಜ್ಞಾನದ ಪುಸ್ತಕ.

ಪಾಶ್ಚ್ಯಾತರಲ್ಲಿ ಫಿಲಾಸಫಿ ಆಫ್ ಸೈನ್ಸ್ ಎಂಬ ‍‌‌ಒಂದು ಪರಿಕಲ್ಪನೆ ಇದೆ. ವಿಜ್ಞಾನ ಎಂದರೇನು? ವಿಜ್ಞಾನದ ವ್ಯಾಪ್ತಿ ಏನು? ಒಂದು ವಿಷಯ ವೈಜ್ಞಾನಿಕವಾಗುವುದು ಹೇಗೆ? ಯಾವುದು ವಿಜ್ಞಾನ ಅಲ್ಲ? ಇತ್ಯಾದಿ ವಿಷಯಗಳ ಬಗ್ಗೆ ಜಿಜ್ಞಾಸೆ ಮಾಡುವ, ತತ್ವಶಾಸ್ತ್ರದ ಒಂದು ಶಾಖೆ. ಕನ್ನಡದಲ್ಲಿ ಬೇಕಾದರೆ ವಿಜ್ಞಾನಮೀಮಾಂಸೆ ಎಂದು ಹೇಳುವುದು ಸೂಕ್ತವಾಗಬಹುದೇನೋ. ಕನ್ನಡದಲ್ಲಂತೂ ಈ ವಿಜ್ಞಾನಮೀಮಾಂಸೆ ಇರುವ ಪುಸ್ತಕ ಈ ಹಿಂದೆ ಬಂದಂತಿಲ್ಲ. ಆದರೆ ‘ಹತ್ತೇವು ವಿಜ್ಞಾನದ ಜೀಪ’ ಪುಸ್ತಕವು ಈ ಕೊರತೆಯನ್ನು ತುಂಬುವಲ್ಲಿ ಒಂದು ಮುಖ್ಯವಾದ ಹೆಜ್ಜೆ ಎನಿಸುತ್ತದೆ. ವಿಜ್ಞಾನಸಾಹಿತ್ಯ ಎಂದಾಕ್ಷಣ ಬಹಳ ಗಂಭೀರವಾಗಿರುತ್ತದೆ, ವಿಜ್ಞಾನವನ್ನು ಬಹಳ ತಿಳಿದುಕೊಂಡಿರುವವರಿಗೆ ಮಾತ್ರ ಅರ್ಥವಾಗುವುದು ಎಂದು ಭಾವಿಸಬೇಕಾಗಿಲ್ಲ. ಮೊದಲೇ ಹೇಳಿದಂತೆ ಇದು ಜನಸಾಮಾನ್ಯರಿಗಾಗಿಯೇ ಬರೆದ ಪುಸ್ತಕ. ಸರಳ, ಸುಲಭವಾದ ಶೈಲಿಯಲ್ಲಿ, ಹಾಸ್ಯದ ಲೇಪನದೊಂದಿಗೆ ಕ್ಲಿಷ್ಟವಾದ ವಿಷಯಗಳನ್ನು ಸ್ವಾರಸ್ಯಕರವಾಗಿ, ಸುಲಿದ ಬಾಳೆಯ ಹಣ್ಣಿನಂದದಿ ವಿವರಿಸುವ ಪುಸ್ತಕ. ಇದನ್ನು ಓದಲು ನಿಮಗೆ ವಿಜ್ಞಾನದಲ್ಲಿ ಪಾಂಡಿತ್ಯವೋ, ವಿದ್ವತ್ತೆಯೋ ಬೇಕಿಲ್ಲ. ಹೊಸ ವಿಷಯವೊಂದನ್ನು ಓದುವ ಆಸಕ್ತಿ ಇದ್ದರೆ ಸಾಕು.

*****************************************************

ಪ್ರಸಿದ್ಧ ಕನ್ನಡ ಲೇಖಕ ಜೋಗಿ ಅವರು ಬರೆದದ್ದು :

ಶರತ್ ಭಟ್ ಸೇರಾಜೆ ಬರೆದಿರುವ ಹತ್ತೇವು ವಿಜ್ಞಾನದ ಜೀಪ ವಿಶಿಷ್ಟ ಶೈಲಿಯ ಪುಸ್ತಕ. ಈಗ ಕನ್ನಡದಲ್ಲಿ ಈ ಮಾದರಿಯ ಪುಸ್ತಕಗಳು ಬಹಳ ಕಡಿಮೆ. ಬಹಳ ಹಿಂದೆ ಇಂಥ ವೈಜ್ಞಾನಿಕ ಪ್ರಬಂಧಗಳನ್ನು ಕೆಲವರು ಬರೆಯುತ್ತಿದ್ದರು. ನನಗೆ ನೆನಪಿರುವಂತೆ ಜಿಟಿ ನಾರಾಯಣ ರಾವ್, ಜೆ ಆರ್ ಲಕ್ಷ್ಮಣರಾವ್ ಬರೆಯುತ್ತಿದ್ದ ವಿಜ್ಞಾನವನ್ನೂ ಒಳಗೊಂಡ ಪ್ರಬಂಧಗಳು, ಪ್ರಬಂಧದ ಶೈಲಿಯಲ್ಲಿದ್ದ ವೈಜ್ಞಾನಿಕ ಬರಹಗಳು ಕುತೂಹಲ ಕೆರಳಿಸುತ್ತಾ, ತಣಿಸುತ್ತಾ, ಓದಿನ ಖುಷಿಯನ್ನೂ ಕೊಡುತ್ತಿದ್ದವು. ಆಗ ಅಗ್ಗದ ಬೆಲೆಗೆ ಮನರಂಜನೆಗಾಗಿ ಭೌತಶಾಸ್ತ್ರ ಮುಂತಾದ ಪುಸ್ತಕಗಳೂ ದೊರೆಯುತ್ತಿದ್ದವು. ನಮ್ಮ ಕಾಲಕ್ಕೆ ಬಂದರೆ ವ್ಯಾಪಕವಾಗಿಯೂ ಆಳವಾಗಿಯೂ ರಂಜಕವಾಗಿಯೂ ಬರೆಯುತ್ತಿದ್ದವರು, ಈಗಲೂ ಆಗಾಗ ಬರೆಯುತ್ತಿರುವವರು ನಾಗೇಶ ಹೆಗಡೆ. ಹಾಲ್ದೊಡ್ಡೇರಿ ಸುಧೀಂದ್ರ ಕೂಡ ವಿಜ್ಞಾನದ ಬರಹಗಳನ್ನು ಮಾಹಿತಿ, ಮನರಂಜನೆ ಎರಡೂ ಇರುವಂತೆ ಬರೆಯುತ್ತಿದ್ದರು.

ಶರತ್ ಭಟ್ ಸೇರಾಜೆಯ ಪುಸ್ತಕದಲ್ಲಿರುವ ಜಾರುಹಾದಿಯಲ್ಲಿ ಎಂಬ ಲೇಖನವನ್ನೇ ನೋಡೋಣ. ಅದು ವಿಜ್ಞಾನದ ಬಹುಜನಪ್ರಿಯವಾದ Falsifiability ಎಂಬ ಕಾರ್ಲ್ ಪಾಪ್ಪರನ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಹೊರಡುತ್ತದೆ. ಈ ಸಿದ್ಧಾಂತ ಹೇಳುವುದಿಷ್ಟು; ಯಾವುದೇ ಸಿದ್ಧಾಂತವಾದರೂ,  ಪ್ರಯೋಗದ ಮೂಲಕವೋ ಪರಿಶೀಲನೆಯ ಮೂಲಕವೋ ಸುಳ್ಳೆಂದು ಸಾಬೀತುಪಡಿಸುವುದಕ್ಕೆ, ಅನುವು ಮಾಡಿಕೊಡಬೇಕು.  ಅಂದರೆ ಒಂದು ಸಿದ್ಧಾಂತ ಸುಳ್ಳೆಂದು ಸಾಧಿಸಲಿಕ್ಕೆ ಬೇಕಾದ ಮುಕ್ತವಾದ ಅವಕಾಶ ಆ ಸಿದ್ಧಾಂತದಲ್ಲೇ ಇರಬೇಕು.  ಆ ಸಿದ್ಧಾಂತ ವೈಜ್ಞಾನಿಕ ಹೌದೋ ಅಲ್ಲವೋ ಅನ್ನುವುದನ್ನು ನಿರ್ಧರಿಸುವುದೇ ಈ ಸುಳ್ಳೆಂದು ಸಾಬೀತು ಪಡಿಸಿಕೊಳ್ಳುವ ಸಾಧ್ಯತೆಯನ್ನು ಒಡಲಲ್ಲಿ ಇಟ್ಟುಕೊಂಡಿರುವುದು.

ಇದರ ಸುತ್ತ ಮಾತಾಡುತ್ತಾ ಶರತ್ ಹತ್ತಿಪ್ಪತ್ತು ಸೊಗಸಾದ ಪ್ರಸಂಗಗಳನ್ನು ಹೇಳುತ್ತಾ ಹೋಗುತ್ತಾರೆ. ಅವರು ಓದಿದ, ಕೇಳಿದ, ಗ್ರಹಿಸಿದ ಸಂಗತಿಗಳನ್ನೆಲ್ಲ ಬಳಸಿಕೊಂಡು ಅವರು ತಮ್ಮ ವಾದವನ್ನು ಮಂಡಿಸುತ್ತಾ ಬರುತ್ತಾರೆ. ಒಂದು ರೀತಿಯಲ್ಲಿ ಇದು, ನ್ಯಾಯಾಲಯದಲ್ಲಿ ನುರಿತ ನ್ಯಾಯವಾದಿ ಒಂದೊಂದೇ ಸಾಕ್ಷಿಯನ್ನೂ ಸನ್ನಿವೇಶವನ್ನೂ ಮುಂದಿಡುತ್ತಾ ವಾದ ಮಾಡುತ್ತಿರುವಂತೆ ಕಾಣುತ್ತದೆ. ಈ ಕ್ರಮದಲ್ಲಿ ಓದುವ ಕುತೂಹಲವೂ ಹೊಸದನ್ನು ತಿಳಿದುಕೊಂಡ ಸಂತೋಷವೂ ಏಕಕಾಲಕ್ಕೆ ಉಂಟಾಗುತ್ತವೆ.

ಇಡೀ ಪುಸ್ತಕದ ತುಂಬ ಶರತ್ ಇಂಥ ಬೆರಗುಗೊಳಿಸುವ ಸಂಗತಿಗಳನ್ನು ಒಂದರ ಹಿಂದೊಂದರಂತೆ ಹೇಳುತ್ತಾ ಹೋಗುತ್ತಾರೆ. ಪ್ರಯೋಗಪರಿಣತಮತಿಗಳ್, ಇದೆಂಥಾ ಪ್ರಯೋಗವಯ್ಯಾ, ಕಾರ್ಯಕಾರಣದೊಂದಪೂರ್ವ ನಟನೆ, ಇದ ತಿಳಿದನೆಂದರೂ ತಿಳಿದ ಧೀರನಿಲ್ಲ, ದೂರದಿಂದ ಬಂದಂಥ ಸುಂದರಾಂಗ ಜ್ಞಾನ- ಹೀಗೆ ಆಕರ್ಷಕ ಶೀರ್ಷಿಕೆಗಳ ಅತ್ಯಾಕರ್ಷಕ ಬರಹಗಳು ಇಲ್ಲಿ ಅನೇಕವಿವೆ.

ಶರತ್ ಭಟ್ ಬರಹವನ್ನು ಓದುತ್ತಿದ್ದರೆ ನನಗೆ ಥಟ್ಟನೆ ನೆನಪಾಗುವುದು ವೈಯನ್ಕೆ. ತಾನು ಹೇಳುತ್ತಾ ಹೋಗುವಾಗ ಹತ್ತಾರು ಉದಾಹರಣೆಗಳನ್ನು ಕೊಡುತ್ತಾ ಹೋಗುತ್ತಿದ್ದರು ವೈಯನ್ಕೆ. ಷೇಕ್ಸ್‌ಪಿಯರ್ ಬಗ್ಗೆ ಬರೆಯುತ್ತಾ ಕೈಲಾಸಂ ತನಕ ಬಂದು, ಶೇಕ್ಸ್ ಪಿಯರ್ ನಾಟಕಗಳನ್ನು ಯಾರು ಬರೆದಿರಬಹುದು ಎಂದು ಹಲವು ಹೆಸರುಗಳನ್ನು ಸೂಚಿಸುತ್ತಾ ಲೇಖನ ಮುಗಿದ ನಂತರವೂ ಕುತೂಹಲ ಉಳಿಯುವಂತೆ ಮಾಡುತ್ತಿದ್ದ ವೈಯನ್ಕೆಯವರ ಶೈಲಿಯನ್ನು ಶರತ್ ಭಟ್ ಸೇರಾಜೆಯವರ ಬರಹಗಳಲ್ಲೂ ಕಾಣಬಹುದು. ಒಂದೇ ಒಂದು ವ್ಯತ್ಯಾಸವೆಂದರೆ ಶರತ್ ಭಟ್ ಸೇರಾಜೆಗೆ ವೈಯನ್ಕೆಗಿಂತ ಹೆಚ್ಚು ತಾಳ್ಮೆಯಿದೆ. ಹಾಗೇ ಸೇರಾಜೆ ವೈಯನ್ಕೆಗಿಂತ ಹೆಚ್ಚು ವಾಚಾಳಿ ಕೂಡ.

ಉದಾಹರಣೆಗೆ ‘ಮುನ್ನುಡಿಗೆ ಥ್ಯಾಂಕ್ಸ್’ ಎಂದು ಒಂದೇ ಪದದಲ್ಲೋ ಸಾಲಲ್ಲೋ  ಹೇಳುವ ಬದಲು `ಪರ್ಸನಲ್ ಲೋನ್ ಬೇಕಾ, ಹೋಮ್ ಲೋನ್ ಬೇಕಾ ಎಂದೆಲ್ಲ ಆಗಾಗ ಬ್ಯಾಂಕಿನವರು ನನಗೆ ಕರೆ ಮಾಡುತ್ತಿರುತ್ತಾರೆ. ನನಗಾದರೋ ಮುನ್ನುಡಿಕಾರರಿಗೆ ಕೊಡುವುದಕ್ಕೆ ಒಂದಷ್ಟು ಧನ್ಯವಾದಗಳ ಸಾಲ ಬೇಕಿತ್ತು. ಅದನ್ನು ಯಾವ ಬ್ಯಾಂಕಿನವರೂ ಕೊಟ್ಟಿಲ್ಲ.  ಹೀಗಾಗಿ ನನ್ನ ಹತ್ತಿರ ಇರುವ ಒಂದಷ್ಟು ಧನ್ಯವಾದಗಳನ್ನೇ ಮೂಟೆಕಟ್ಟಿ ಅವರಿಗೆ ಕೊಡುತ್ತಿದ್ದೇನೆ’ ಎಂದು ನಾಲ್ಕಾರು ಸಾಲುಗಳನ್ನು ಬರೆಯುತ್ತಾರೆ. ಇದೆಲ್ಲ ಹಳೆಯ ಕಾಲದ ಅತಿವಾಚಾಳಿತನ ಎಂದು ನನಗೆ ಅನ್ನಿಸುತ್ತದೆ. ಇದು ಪ್ರಬಂಧಗಳಲ್ಲೂ ಅಲ್ಲಲ್ಲಿ ಹಣಿಕಿಹಾಕುತ್ತದೆ. ಈ ಪುಸ್ತಕದ ಶೀರ್ಷಿಕೆ ಕೂಡ ನನಗೆ ಅಷ್ಟಾಗಿ ಸೇರಲಿಲ್ಲ. ಹಚ್ಚೇವು ಕನ್ನಡದ ದೀಪ ಎಂಬ ಸಾಲು ಹತ್ತೇವು ವಿಜ್ಞಾನದ ಜೀಪ ಎಂದಾಗಿದೆ. ಅದು ಈ ಪುಸ್ತಕದಲ್ಲಿರುವ ಬರಹಗಳು ಏನು ಹೇಳುತ್ತವೋ ಅವನ್ನೆಲ್ಲ ಧ್ವನಿಸುವುದಿಲ್ಲ. ಅಲ್ಲದೇ ಮೂಲ ಸಾಲುಗಳಿಲ್ಲದೇ, ಈ ಸಾಲಿಗೆ ಸ್ವಯಂದೀಪಕತೆಯೂ ಇಲ್ಲ.  Pun is the lowest form of wit.

ಅದ್ಭುತವಾದ ವಿಚಾರಗಳು, ಸೊಗಸಾದ ಉದಾಹರಣೆಗಳು, ಅಪರೂಪದ ಉಲ್ಲೇಖಗಳು, ಎಲ್ಲೋ ಓದಿದ ಪ್ರಸಂಗಗಳನ್ನು ಒಳಗೊಂಡ ಇದು ಕನ್ನಡಕ್ಕೆ ತುಂಬ ಅಪರೂಪದ ಪುಸ್ತಕ. ಇದರ ಓದು ಒಂದು ಸುಖಾನುಭವ. ಶರತ್ ಈಗಾಗಲೇ ತಮ್ಮದೇ ಆದ ಒಂದು ಶೈಲಿ, ಪ್ರಕಾರ ಮತ್ತು ಧಾಟಿಯನ್ನು ಕಂಡುಕೊಂಡಿದ್ದಾರೆ. ಅವರು ಮತ್ತಷ್ಟು ಬರೆಯಲಿ ಎಂದು ಹಾರೈಸುತ್ತೇನೆ.

*****************************************************




My new book on Science

 ನನ್ನ ಹೊಸ ಪುಸ್ತಕವೊಂದು ಕಳೆದ ಈಚೆಗಷ್ಟೇ  ಲೋಕಾರ್ಪಣೆಯಾದದ್ದು ನಿಮ್ಮಲ್ಲಿ ಹಲವರಿಗೆ ಗೊತ್ತಿರಬಹುದು. ಅದೀಗ ನಿಮ್ಮ ಓದಿಗೆ ಸಜ್ಜಾಗಿ ಕಾದು ಕುಳಿತಿದೆ. "ವಿಷಯವು ಏನಿರಬಹುದು, ಹೇಗಿರಬಹುದು?" ಎಂಬ ಪ್ರಶ್ನೆಗಳಿಗೆ ಎರಡು ಉತ್ತರಗಳಿವೆ (ಪುಸ್ತಕದ ಶೀರ್ಷಿಕೆ ಮತ್ತು ಟ್ಯಾಗ್ ಲೈನಿನಲ್ಲೂ ಉತ್ತರವಿದೆ ಎನ್ನಿ) :

೧. ಇದೂ ನನ್ನ ಮೊದಲ ಪುಸ್ತಕವಾದ, 'ಬಾಗಿಲು ತೆರೆಯೇ ಸೇಸಮ್ಮ'ದ ಹಾಗೆಯೇ; ವೈಚಾರಿಕ ಲಲಿತ ಪ್ರಬಂಧಗಳನ್ನು ಪೋಣಿಸಿದ ಮಾಲೆ; ಈ ಸಲ ಎಲ್ಲವೂ ವಿಜ್ಞಾನದ ಬಗ್ಗೆ ಎಂಬುದಷ್ಟೇ ವ್ಯತ್ಯಾಸ. ಪುಸ್ತಕದ ಶೀರ್ಷಿಕೆಯಿದು: "ಹತ್ತೇವು ವಿಜ್ಞಾನದ ಜೀಪ". 'ವಿಜ್ಞಾನ' ಎಂದ ಕೂಡಲೇ ಹೆದರಿ ದೂರ ಓಡಬೇಕಾದ್ದಿಲ್ಲ. ವಿಷಯವು ಗಂಭೀರವಾದದ್ದಾರೂ ತಮಾಷೆಯ, ವಿಡಂಬನೆಯ, ಲಘುವಾದ, ಲಲಿತ ಪ್ರಬಂಧಗಳ ಶೈಲಿಯೇ ಇಲ್ಲಿಯೂ ಇದೆ. ಕಥೆ ಹೇಳುವ ಹಾಗೆ ಆತ್ಮೀಯವಾಗಿ ಹೇಳುವ ಶೈಲಿ ಎಂದರೂ ಆದೀತು. ವೈಚಾರಿಕತೆಯೂ ಉಂಟು, ವಿನೋದವೂ ಉಂಟು. ಇನ್ನೂ ಸರಳವಾಗಿ ಹೇಳುವುದಾದರೆ, ನಿಮಗೆ ನನ್ನ ಮೊದಲ ಪುಸ್ತಕ ಮತ್ತು ಹಿಂದಿನ ಬೇರೆಯ ಬರೆಹಗಳು ಇಷ್ಟವಾಗಿದ್ದರೆ ಇದೂ ಮುದವನ್ನೇ ನೀಡೀತು ಎಂದು ನನ್ನ ಭರವಸೆ. 

೨. ಶ್ರೀವತ್ಸ ಜೋಶಿಯವರು ಮತ್ತು ಗುರುರಾಜ ಕೊಡ್ಕಣಿಯವರು ಫೇಸ್ಬುಕ್ಕಿನಲ್ಲೇ  ಹಾಕಿರುವ ಪರಿಚಯಗಳನ್ನು ನೋಡಬಹುದು (ಲಿಂಕುಗಳು ಕೆಳಗೆ ಕಾಮೆಂಟಿನಲ್ಲಿವೆ)    

ಇಷ್ಟು ದಿನಗಳ ಕಾಲ, "ಮುಂದಿನ ಪುಸ್ತಕ ಯಾವಾಗ? ನೀವ್ಯಾಕಿನ್ನೂ ಮೂರ್ನಾಲ್ಕು ಹೊಸ ಕೃತಿಗಳನ್ನು ತಂದಿಲ್ಲ? ಯಾಕಿಷ್ಟು ತಡ? ಯಾಕಿಷ್ಟು ಗ್ಯಾಪ್?" ಎಂದು ಆಗಾಗ ಕೇಳಿದವರೆಲ್ಲ ಇನ್ನು "ಪುಸ್ತಕವು ಎಲ್ಲಿ ಸಿಗುತ್ತದೆ?" ಎಂದು ಪ್ರಶ್ನೆಯನ್ನು ಬದಲಿಸಿ, ಪುಸ್ತಕವನ್ನು ಓದಿ ಸೇಡು ತೀರಿಸಿಕೊಂಡರೆ ನನಗೂ ಸಮಾಧಾನ. ನೀವು ಕೇಳುವವರೆಗೆ ಕಾಯದೆ, "ಪುಸ್ತಕವನ್ನು ತರಿಸಿಕೊಳ್ಳುವುದು ಹೇಗೆ?" ಎಂಬ ಪ್ರಶ್ನೆಗೆ ಉತ್ತರವನ್ನು ಇಲ್ಲೇ ಕೆಳಗೆ ಕಾಮೆಂಟು ಸೆಕ್ಷನ್ನಿನಲ್ಲಿ ಕೊಟ್ಟಿದ್ದೇನೆ.   

ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ನಾನಿದ್ದೇನೆ. ಓದುತ್ತೀರಲ್ಲ? ಓದಿ ತಿಳಿಸುತ್ತೀರಲ್ಲ?


ಗುರುರಾಜ ಕೊಡ್ಕಣಿಯವರ ಬರೆಹ:

https://www.facebook.com/gururaj.kodkani/posts/pfbid02CpnNhJhkviJ9eQMEVJJaXrivPDkuMzWxV7JSJPV2FFJjmLJyQqDLVWGhKuPCcTuKl


ಶ್ರೀವತ್ಸ ಜೋಶಿಯವರ ಬರೆಹವು ಇಲ್ಲಿದೆ:

https://www.facebook.com/srivathsa.joshi/posts/pfbid0UiBxtSJT1nXWsDACzrkCJwRi3kEXyhFwwXgnzkAeqsYnQkBULZD5ZxsWFzW56A6vl


ಪುಸ್ತಕವನ್ನು ತರಿಸುವ ಸುಲಭದ ವಿಧಾನವು ಇದು, ಇಲ್ಲಿ ಆನ್ಲೈನ್ ಆರ್ಡರ್ ಮಾಡಿದರೆ ನಿಮ್ಮ ಮನೆಗೇ ಬರುತ್ತದೆ:

https://www.navakarnataka.com/hattevu-vijaana-jipa

ಎರಡನೆಯ ವಿಧಾನವು ಪ್ರಕಾಶಕರಾದ ಸೂರ್ಯಪ್ರಕಾಶ ಪಂಡಿತ್ ಅವರಿಗೆ ಮೆಸೇಜು ಮಾಡುವುದು, ಅವರು ಕಳಿಸಿಕೊಡುತ್ತಾರೆ:

ಅವರ ವಾಟ್ಸ್ಯಾಪ್ ನಂಬರ್ ಇದು: +91 94484 94949

ಮೂರನೆಯ ವಿಧಾನ: ನವಕರ್ನಾಟಕ ಮತ್ತು ಅಂಕಿತ ಪುಸ್ತಕದ ಮಳಿಗೆಗಳಲ್ಲಿ ಪುಸ್ತಕವು ಸಿಗಲಿದೆ.

ನಾಲ್ಕನೆಯ ವಿಧಾನ: ನೀವು ಬೆಂಗಳೂರಿನ ಶ್ರೀನಿವಾಸನಗರದ ಆಸುಪಾಸಿನಲ್ಲಿದ್ದರೆ, ಮುದ್ರಕರಾದ ರಜನೀಶ ಕಶ್ಯಪ್ ಅವರ ಗಾಯತ್ರಿ ಪ್ರಿಂಟ್ಸ್ ಅಂಗಡಿಯಲ್ಲಿಯೂ ಕೇಳಬಹುದು. ಅವರ ನಂಬರ್ ಇದು : +91 92435 94818

New popular science book in Kannada(Hattevu Kannadada jeepa or hattevu Vijnanada Jipa)



ಏಳುಮಲೆ ಕನ್ನಡ ಸಿನೆಮಾ

 ಇನ್ನೊಂದು ವಾರದ ಒಳಗೇ ಒಂದೊಳ್ಳೆ ಕನ್ನಡ ಸಿನೆಮಾವನ್ನು ನೋಡಬೇಕು ಎನ್ನುವವರು ನೀವಾದರೆ ಹೀಗೆ ಮಾಡಿ: 'ಏಳುಮಲೆ' ಎಂಬ ಹೊಸಚಿತ್ರವನ್ನು ನೋಡಿಬಿಡಿ. ಚಿತ್ರವು ಶುರುವಾದ ಮೇಲೆ ಅತ್ತಿತ್ತ ಅಲುಗಾಡುವಂತೆಯೋ, ಕುರ್ಚಿ ಬಿಟ್ಟು ಏಳುವಂತೆಯೋ ಇಲ್ಲ; ಪ್ರದರ್ಶನವು ಶುರುವಾಗುವ ಮೊದಲು ಚಿತ್ರತಂಡದವರು ರಹಸ್ಯ ಕಾರ್ಯಾಚರಣೆಯೊಂದನ್ನು ಮಾಡಿ, ಕುರ್ಚಿಗಳಿಗೆ ಫೆವಿ ಕ್ವಿಕ್ ಅನ್ನು ಅಂಟಿಸಿದ್ದಾರೋ ಎನ್ನಿಸಬೇಕು—ಅಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಚಿತ್ರವು ಹಿಡಿದಿಡುತ್ತದೆ. ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಮಲೆಮಹದೇಶ್ವರ ಬೆಟ್ಟ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಥ್ರಿಲ್ಲರ್ ಕಥೆಯಿದು. ಟೈಗರ್ ಅಶೋಕ್ ಕುಮಾರ್ ಅವರು ವೀರಪ್ಪನ್ ವಿರುದ್ಧ ನಡೆದ ಕಾರ್ಯಾಚರಣೆಯ ಕಥೆಗಳನ್ನು ಹೇಳುತ್ತಿದ್ದಾಗ ಪ್ರಸ್ತಾವಿಸುತ್ತಿದ್ದ ಜಾಗಗಳಲ್ಲಿ ಅಥವಾ ವೀರಪ್ಪನ್ನನ ಕಾರ್ಯಕ್ಷೇತ್ರ ಎನ್ನಬಹುದಾದ ಜಾಗಗಳಲ್ಲಿ ಇದರ ಕಥೆಯು ಬಿಚ್ಚಿಕೊಳ್ಳುತ್ತದೆ. ಈ ಪರಿಸರದ ಕಥೆಯನ್ನು ಆಯ್ದುಕೊಂಡಿರುವುದರಲ್ಲೇ ನಿರ್ದೇಶಕರು ಅರ್ಧ ಗೆದ್ದಿದ್ದಾರೆ.

ಈ ಕಥೆಯು ಇಂಥದ್ದೇ ಪ್ರಕಾರದ ಕಥೆಯೆಂದು ಹೇಳುವುದು ಕಷ್ಟ. ಅಲೆಹಾಂದ್ರೋ ಗೊನ್ಜಾಲೆಸ್ ಇನರಿತು ಅವರ ಅಮೋರಸ್ ಪೆರ್ರೋಸ್, ಬ್ಯಾಬೆಲ್ ಮೊದಲಾದ ಚಿತ್ರಗಳು ಬಂದ ಮೇಲೆ ಹೈಪರ್‌ಲಿಂಕ್‌ ಸಿನೆಮಾ ಎಂಬ ಪ್ರಕಾರವು ಪ್ರಚಾರಕ್ಕೆ ಬಂತು, ಎರಡು ಮೂರು ಬೇರೆ ಬೇರೆ ಎಳೆಗಳನ್ನು ತೋರಿಸುತ್ತಾ ಬಂದು, ಕೊನೆಗೆ ಅವೆಲ್ಲ ಒಂದಕ್ಕೊಂದು ತಳುಕು ಹಾಕಿಕೊಳ್ಳುವ ಹಾಗೆ ಮಾಡುವುದು ಇಂತಹ ಚಿತ್ರಗಳ ಶೈಲಿ. ನಮ್ಮಲ್ಲೂ ನಾಗೇಶ್ ಕುಕುನೂರ್ ಅವರ ತೀನ್ ದೀವಾರೇ, ತಮಿಳಿನ ಮಾನಗರಮ್, ಸೂಪರ್ ಡಿಲಕ್ಸ್ ಮುಂತಾದವು ಇದೇ ಪ್ರಕಾರದವು. ಏಳುಮಲೆಯು ತಕ್ಕಮಟ್ಟಿಗೆ ಇದೇ ತರಹದ ಚಿತ್ರ. ಇದು ಮೂಲದಲ್ಲಿ ಪ್ರೇಮಕಥೆಯೇ ಹೌದಾದರೂ ಇದರಲ್ಲಿ Road movies, Hitchcockian movies (ಜನಸಾಮಾನ್ಯನು ಚಕ್ರವ್ಯೂಹದಂತಹ ಸನ್ನಿವೇಶಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು; ordinary people in extraordinary situations) ಮುಂತಾದ ಪ್ರಕಾರಗಳ ಛಾಯೆಯೂ ಉಂಟು. ಪ್ರೇಮಕಥೆ ಎಂದಾಗ ನಾವು ಸಾಧಾರಣವಾಗಿ ನಿರೀಕ್ಷೆ ಮಾಡುವ ಯಾವ ಅಂಶಗಳೂ ಇಲ್ಲಿಲ್ಲ. ಇದು ಬಹುಮಟ್ಟಿಗೆ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದ್ದರಿಂದ ಏಕ್ ಚಾಲೀಸ್ ಕೀ ಲಾಸ್ಟ್ ಲೋಕಲ್, ಕೈಥಿ, ಮ್ಯಾಕ್ಸ್ ಮುಂತಾದ ಚಿತ್ರಗಳ ಪ್ರಕಾರಕ್ಕೂ ಸೇರಿದ್ದೆನ್ನಬಹುದು.
"ಚಿತ್ರಮಂದಿರದಲ್ಲಿ ಆಮ್ಲಜನಕದ ಪ್ರಮಾಣವನ್ನು ಕಡಮೆ ಮಾಡಿದರೂ ತೊಂದರೆಯಿಲ್ಲ; ಯಾಕೆಂದರೆ ಪ್ರೇಕ್ಷಕರಿಗೆ ಉಸಿರಾಡಲಿಕ್ಕೆ ಪುರುಸೊತ್ತೇ ಇಲ್ಲ" ಎನ್ನಿಸುವಂತೆ ಯಾವುದೇ ಅನಗತ್ಯ ಮಸಾಲೆಗಳನ್ನು ತುರುಕದೆ ಸರಸರನೆ ಘಟನೆಗಳನ್ನು ಪೋಣಿಸಿಕೊಂಡು ಹೋಗಿ, ಸಸ್ಪೆನ್ಸ್ ಮತ್ತು ಟೆನ್ಶನ್ ಹೆಚ್ಚುವಂತೆ ಮಾಡಿರುವುದರಲ್ಲಿ ನಿರ್ದೇಶಕ, ಚಿತ್ರಕಥೆಗಾರ ಪುನೀತ್ ರಂಗಸ್ವಾಮಿಯವರ ಗೆಲುವಿದೆ. ರಿಷಬ್, ರಕ್ಷಿತ್, ರಾಜ್ ಅವರು ದಕ್ಷಿಣ ಕನ್ನಡದ ಕಥೆಗಳನ್ನು ಹೇಳಿದಂತೆ ಎಲ್ಲರೂ ಅವರವರ ಪ್ರದೇಶದ ವಿಶಿಷ್ಟವಾದ ಕಥೆಗಳನ್ನು ಹೇಳಿದರೆ ಚಿತ್ರರಂಗವು ಶ್ರೀಮಂತವಾಗುತ್ತದೆ ಎಂದು ನನಗನ್ನಿಸುವುದುಂಟು. ಇಲ್ಲಿ ನಿರ್ದೇಶಕರು ತಾವು ನೋಡಿದ ಚಾಮರಾಜನಗರದ ಸುತ್ತಮುತ್ತಲಿನ ಪ್ರದೇಶಗಳ ಕಥೆಯನ್ನು ಹೇಳಿ ಅದನ್ನು ಸಾಧಿಸಿದ್ದಾರೆ; ಮಂಡ್ಯ ಮೈಸೂರು ಕಡೆಯವರು ಚಿತ್ರರಂಗದಲ್ಲಿ ಹಲವರು ಬಂದಿದ್ದರೂ ಇಂಥ ಕಥೆಯೊಂದನ್ನು ಹೆಣೆದಿರಲಿಲ್ಲ ಎಂಬುದು ಗಮನಾರ್ಹ. ಏನೇ ಇರಲಿ, ಸು ಫ್ರಮ್ ಸೋ ಆಯಿತು, ಈಗ ಏಳುಮಲೆ ಬಂದಿದೆ, ಮುಂದೆ ಕಾಂತಾರ ಬರಲಿದೆ. ಕನ್ನಡ ಚಿತ್ರಗಳನ್ನು ಹೊಗಳುವವರಿಗೆ ಕೈತುಂಬ ಕೆಲಸ ಸಿಗುವುದನ್ನು ನೋಡುವುದೂ ಸಂತೋಷದ ವಿಷಯವೇ. ನೀವೂ ಚಿತ್ರಮಂದಿರದ ಕಡೆಗೆ ಹೋಗಿ, ನೋಡಿ, ಹೇಗನ್ನಿಸಿತು ಎಂದು ತಿಳಿಸಿ.

Inspirational story of book lovers

ಎಲ್ಲ ಸ್ಪೂರ್ತಿದಾಯಕವಾದ ಕಥೆಗಳೂ ಪುಸ್ತಕಗಳಲ್ಲೇ ಸಿಗುವುದಲ್ಲ, ಕೆಲವು ಪುಸ್ತಕದಂಗಡಿಗಳಲ್ಲಿಯೂ ಸಿಗುತ್ತವೆ. ಅಂತಹದೊಂದು ಕಥೆಯಿದು. ಅಮೆರಿಕಾದ ಮಿಷಿಗನ್ನಿನಲ್ಲಿ Chelsea ಎಂಬುದೊಂದು ಪುಟ್ಟ ಊರಿದೆ(ಇದು ಫುಟ್ಬಾಲ್ ಕ್ಲಬ್ ಒಂದರ ಹೆಸರಿನಿಂದ ಪ್ರಸಿದ್ಧವಾದ Chelseaಯಲ್ಲ, ಅದಿರುವುದು ಇಂಗ್ಲೆಂಡ್‌ನಲ್ಲಿ). ಅಲ್ಲಿ ಮಿಷೆಲ್ ಟುಪ್ಲಿನ್ ಎಂಬಾಕೆ ಸೆರೆಂಡಿಪಿಟಿ ಬುಕ್ಸ್ ಎಂಬ ಪುಸ್ತಕದಂಗಡಿಯನ್ನು ಇಪ್ಪತ್ತೈದು ವರ್ಷಗಳಿಂದ ನಡೆಸುತ್ತ ಬಂದಿದ್ದಳು. ಈಚೆಗೆ ಈ ಅಂಗಡಿಯಲ್ಲಿ ಜಾಗವು ಸಾಕಾಗುತ್ತಿಲ್ಲ ಎನ್ನಿಸಿ, ಹತ್ತಿರದಲ್ಲೇ ಇರುವ ಇನ್ನೊಂದು ಸ್ಥಳಕ್ಕೆ ಅಂಗಡಿಯನ್ನು ಸ್ಥಳಾಂತರ ಮಾಡುವ ಯೋಚನೆಯನ್ನವಳು ಮಾಡಿದಳು. ಹೊಸಜಾಗವು 105 ಮೀಟರ್ ದೂರದಲ್ಲಿತ್ತು, ಅದು ನೇರವಾದ ಹಾದಿಯಾಗಿರಲಿಲ್ಲ, ಒಂದೆರಡು ತಿರುವುಗಳಿದ್ದವು, ಅವಳ ಸಂಗ್ರಹದಲ್ಲಿ 9,100 ಪುಸ್ತಕಗಳಿದ್ದವು. ಸರಿಯಪ್ಪಾ, ಇದರಲ್ಲೇನು ವಿಶೇಷವಿದೆ ಎಂದಿರಾ, ನಿಲ್ಲಿ ಅಲ್ಲಿಗೇ ಬಂದೆ.

ಹೀಗೆ ಮಾಡಲಿಕ್ಕೆ ಸಾಮಾನುಗಳನ್ನು ಸಾಗಿಸುವ ಸಂಸ್ಥೆಗಳ ಬಳಿ ಹೋಗುವ ಬದಲು ಆಕೆ ತನಗೆ ಸಹಾಯವು ಬೇಕಾಗಿದೆಯೆಂದು ಓದುಗರನ್ನೇ ಕೇಳಿದಳು. ಅವರು ಬಂದಾರೆಂದು ನಂಬಿದಳು. ಮೊದಮೊದಲು ಬರುತ್ತೇವೆಂದು ಹೇಳಿದವರು ಬರದಿದ್ದಾಗ ಸ್ವಲ್ಪ ಚಿಂತೆಯಾಯಿತು. ಆದರೆ ಏನಾಶ್ಚರ್ಯ ಎಂಬಂತೆ ಅರ್ಧ ಗಂಟೆಯಲ್ಲಿ ಚಿತ್ರಣವೇ ಬದಲಾಯಿತು. ಒಬ್ಬರು ಬಂದರು, ಇಬ್ಬರು ಬಂದರು, ಎರಡು ಹತ್ತಾಯಿತು, ಹತ್ತು ಐವತ್ತಾಯಿತು. ನೋಡನೋಡುತ್ತಿದ್ದಂತೆ ಮೂರುನೂರು ಜನರು ಅಲ್ಲಿ ಜಮಾಯಿಸಿದರು. ಎಲ್ಲರೂ ಸೇರಿ ಒಂದು ಮಾನವಸರಪಣಿಯನ್ನೇ ರೂಪಿಸಿಬಿಟ್ಟರು. ಪಾದಚಾರಿಗಳ ಹಾದಿಯಲ್ಲಿ(sidewalk) ಎಲ್ಲರೂ ನಿಲ್ಲಲಿಕ್ಕೆ ಜಾಗವು ಸಾಕಾಗದೆ ಎರಡೆರಡು ಸಾಲುಗಳನ್ನು ಮಾಡಬೇಕಾಗಿ ಬಂತು! ಕಿರಿಯರು, ಹಿರಿಯರು, ಮಧ್ಯವಯಸ್ಕರು ಎಲ್ಲರೂ ಬಂದಿದ್ದರು, ಒಂದಿಬ್ಬರು ವೀಲ್ ಚಯರಿನಲ್ಲಿ ಕುಳಿತೂ ಬಂದಿದ್ದರು. ಬಂದವರು ನಗುತ್ತ, ಹರಟುತ್ತ, ಹಾಡುತ್ತ, ಕುಣಿಯುತ್ತ ಕೈಯಿಂದ ಕೈಗೆ ಪುಸ್ತಕಗಳನ್ನು ಕೊಟ್ಟುಕೊಟ್ಟು ಅಷ್ಟೂ ಪುಸ್ತಕಗಳನ್ನು ಹೊಸಜಾಗಕ್ಕೆ ಸಾಗಿಸಿಯೇ ಬಿಟ್ಟರು.
ಮನೆಯನ್ನು ಸಾಗಿಸಿದಾಗ ನನಗೆ ಬರುವ ಸಮಸ್ಯೆಯೆಂದರೆ ಹೊಸಮನೆಯಲ್ಲಿ ಪುಸ್ತಕವನ್ನು ಮತ್ತೆ ಒಪ್ಪವಾಗಿ, ಯಾವುದು ಎಲ್ಲಿರಬೇಕೋ ಅಲ್ಲೇ ಜೋಡಿಸುವ ಶ್ರಮ; ಅದಕ್ಕೇ ಒಂದು ದಿನ ಬೇಕಾಗುತ್ತದೆ. ಆದರಿಲ್ಲಿ 9,100 ಪುಸ್ತಕಗಳೂ ಒಂದೊಂದಾಗಿ FIFO(First-In, First-Out) ಮಾದರಿಯಲ್ಲಿ ಸಾಗಿಸಲ್ಪಟ್ಟ ಕಾರಣ ಗಮ್ಯವನ್ನು ಮುಟ್ಟಿದಾಗ ಮೊದಲು ಹೇಗೆ ಜೋಡಿಸಲ್ಪಟ್ಟಿದ್ದವೋ ಹಾಗೆಯೇ ಸಾಲಾಗಿ, ವಿಷಯಾನುಸಾರವಾಗಿ, ಅಕಾರಾದಿಯಲ್ಲಿ ಜೋಡಿಸಿ ಇಡಲ್ಪಟ್ಟವು. ಹೀಗೆ ಸಾಗಿಸುವಾಗ ಕೆಲವರು ತಾವಿನ್ನೂ ಓದಿರದ, ಓದಬೇಕಾದ ಪುಸ್ತಕಗಳನ್ನೂ ಗುರುತಿಸಿಟ್ಟುಕೊಂಡರಂತೆ. ಈ ಅಪೂರ್ವವಾದ ಘಟನೆಯು ಆನಂದದಾಯಕವಾದ ಪುಸ್ತಕಪ್ರೀತಿಯ ಪ್ರದರ್ಶನವಾಗಿ ಗಮನಸೆಳೆದದ್ದು ಮಾತ್ರವಲ್ಲದೆ, ನಮ್ಮಲ್ಲಿ ಇನ್ನೂ ಒಂದಷ್ಟು ಒಳ್ಳೆಯತನವಿದೆ ಎಂಬುದನ್ನೂ ತೋರಿಸಿಕೊಟ್ಟಿತು.


ಬಾನು ಮುಷ್ತಾಕ್ ಮತ್ತು ದಸರಾ ಉದ್ಘಾಟನೆ

ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಬೇಕೇ ಮಾಡಬಾರದೇ ಎಂಬ ಚರ್ಚೆಯನ್ನು ಕಂಡು ಒಂದಷ್ಟು ವಿಷಯಗಳು ನೆನಪಾದವು.

ಬಾಬ್ರಿ ಮಸೀದಿ ಗಲಾಟೆಯಾದಾಗ, ಪ್ರತಿಭಟನೆ ಮಾಡಲಿಕ್ಕೆ ಸಾಹಿತಿಗಳೆಲ್ಲ ಟೌನ್ ಹಾಲಿನ ಹತ್ತಿರಕ್ಕೆ ಬರಬೇಕು ಅಂತ ಕರೆಕೊಡಲಾಗಿತ್ತಂತೆ. ಸಮಯಕ್ಕೆ ಸರಿಯಾಗಿ ಮತ್ತು ಎಲ್ಲರಿಗಿಂತ ಮೊದಲು ಬಂದದ್ದು ಪರಮ ದೈವಭಕ್ತರೂ, ಸನಾತನಿಗಳೂ ಆಗಿದ್ದ ಪು. ತಿ. ನರಸಿಂಹಾಚಾರ್ಯರು! ಅದೂ ಎಂದಿನಂತೆ ತಮ್ಮ ಟೊಪ್ಪಿ,ಇಷ್ಟುದ್ದದ ನಾಮ, ಜುಟ್ಟು ಇತ್ಯಾದಿಗಳ ಜೊತೆಗೆ ! ಹಾಗೆಯೇ ಕ್ರೈಸ್ತ ಧರ್ಮದ ಗ್ರಂಥಗಳನ್ನು ಬಹುಶಃ ಹೀಬ್ರೂ ಭಾಷೆಯಲ್ಲಿಯೇ ಓದಿ, ಏಸು ಕ್ರಿಸ್ತನ ಬಗ್ಗೆ ಗೊಲ್ಗೊಥಾ ಎಂಬ ಖಂಡ ಕಾವ್ಯವನ್ನು ಬರೆದದ್ದು ಬಲಪಂಥೀಯರೂ, ಸನಾತನಿಗಳೂ ಆಗಿದ್ದ ಪಂಡಿತಶ್ರೇಷ್ಠ ಮಂಜೇಶ್ವರ ಗೋವಿಂದ ಪೈಗಳು. ಅವರು ಬುದ್ಧನ ಬಗ್ಗೆಯೂ ಹಾಗೆಯೇ ಬರೆದಿದ್ದಾರೆ. ಪಾಳಿ ಮತ್ತು ಪ್ರಾಕೃತ ಭಾಷೆಗಳನ್ನು ಕಲಿತು ಬೌದ್ಧ ಮತ್ತು ಜೈನ ಧರ್ಮಗಳ ಬಗ್ಗೆ ಸಾಕಷ್ಟು ಬರೆದದ್ದು ಜಿಪಿ ರಾಜರತ್ನಂ ಅಯ್ಯಂಗಾರ್ ಅವರು. ನಾಡಿನ ಬಹಳ ದೊಡ್ಡ ವಿದ್ವಾಂಸರಾಗಿದ್ದ ಸಾಕೃ ರಾಮಚಂದ್ರರಾಯರೂ ಹೀಗೆಯೇ ಮಾಡಿದವರು. ಈಗ ಜೈನ ಮತ್ತು ಬೌದ್ಧ ಧರ್ಮಗಳ ಬಗ್ಗೆ ತುಂಬ ಮಾತಾಡುತ್ತಿರುವವರು, ಅವುಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತಿರುವವರು ಸನಾತನ ಧರ್ಮದ ಮೇಲೆ ಶ್ರದ್ಧೆ ಭಕ್ತಿಗಳಿರುವ, ಬಲಪಂಥೀಯರೆಂದೇ ಗುರುತಿಸಲ್ಪಡುತ್ತಿರುವ ಜಿ.ಬಿ. ಹರೀಶ ಅವರು. ಅವರು ಜೈನ ಧರ್ಮದ ಮೇಲೆ ಪಿಎಚ್ಡಿಯನ್ನೂ ಮಾಡಿರುವವರು. ಯುಗಂಧರ್ ಎಂಬ ಚಿತ್ರದಲ್ಲಿ 'ಕೃಷ್ಣ ಆಯೇಗಾ' ಎಂಬ ಭಕ್ತಿಗೀತೆಯನ್ನು ಬರೆದದ್ದು ಪರಮನಾಸ್ತಿಕರಾದ ಜಾವೇದ್ ಅಖ್ತರ್ ಅವರು. ಅವರು ಲಗಾನ್ ಚಿತ್ರದಲ್ಲಿ ಬರೆದ 'ರಾಧಾ ಕೈಸೇ ನ ಜಲೇ' ಎಂಬ ಹಾಡನ್ನು ಕೇಳಿದರೆ ಕೃಷ್ಣನ ಬಗ್ಗೆ ಪ್ರೀತಿಯಿಲ್ಲದವರು ಇದನ್ನು ಬರೆಯಲು ಸಾಧ್ಯವಿಲ್ಲ ಎನ್ನಿಸುವಂತಿದೆ, ತಮ್ಮ ನಾಸ್ತಿಕ ಧೋರಣೆಗಳನ್ನಿಟ್ಟುಕೊಂಡೇ 'ಓ ಪಾಲನ್ ಹಾರೇ' ಎಂಬ ಭಜನ್ ಅನ್ನೂ ಅವರು ಆ ಚಿತ್ರಕ್ಕಾಗಿ ಬರೆದಿದ್ದಾರೆ.
ಇನ್ನು ಹಿಂದೂ ರಾಷ್ಟ್ರವನ್ನು ಕಟ್ಟಿ ಅಂದಿದ್ದ ಸಾವರ್ಕರರು ಒಬ್ಬ ನಾಸ್ತಿಕರು, ವಿಚಾರವಾದಿ. ಮುಸ್ಲಿಂ ರಾಷ್ಟ್ರ ಕಟ್ಟ ಹೊರಟ ಜಿನ್ನಾ ಒಬ್ಬ ಶ್ರದ್ದಾವಂತ ಮುಸ್ಲಿಮರಾಗಿರಲಿಲ್ಲ, ಅಡ್ವಾಣಿಯವರು ಒಬ್ಬ agnostic ಅಂತ ಕೇಳಿದ್ದೇನೆ. ಸುಬ್ರಮಣ್ಯಂ ಸ್ವಾಮಿಯವರ ಹೆಂಡತಿ ಒಬ್ಬ ಪಾರ್ಸಿ, ಅಳಿಯ ಒಬ್ಬ ಮುಸಲ್ಮಾನ. ಧರ್ಮವೇ ಬೇರೆ, ಧರ್ಮದ ಹೆಸರಿನಲ್ಲಿ ನಡೆಯುವ ರಾಜಕಾರಣವೇ ಬೇರೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಳವನ್ನು ಕಟ್ಟಿದ್ದು ಬಪ್ಪ ಬ್ಯಾರಿ ಎಂಬ ಶ್ರದ್ದಾವಂತ ಮುಸ್ಲಿಮನೊಬ್ಬ. ಯಕ್ಷಗಾನದಲ್ಲಿ ಈ ಬಪ್ಪಬ್ಯಾರಿಯ ಪಾತ್ರವನ್ನು ಮಾಡುತ್ತಿದ್ದದ್ದು ಶೇಣಿ ಗೋಪಾಲಕೃಷ್ಣ ಭಟ್ಟರು, ಅವರು ಇಸ್ಲಾಮಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿರೋಧಿಸಲು ಬಂದಿದ್ದ ಮುಸ್ಲೀಮರು ಅವರ ಪಾತ್ರಚಿತ್ರಣವನ್ನು ನೋಡಿ ಮೆಚ್ಚಿದ್ದರಂತೆ. ಶೇಣಿಯವರು ಆ ಪಾತ್ರಕ್ಕಾಗಿ ಸಾಕಷ್ಟು ಅಧ್ಯಯನವನ್ನೂ ರಿಸರ್ಚ್ ಅನ್ನೂ ಮಾಡಿದ್ದರಂತೆ. ಕಾರ್ಪೋರೇಶನ್ ಬ್ಯಾಂಕಿನ ಸ್ಥಾಪಕರಾದ ಹಾಜಿ ಅಬ್ದುಲ್ಲಾ ಸಾಹೇಬರು function ಮಾಡಿದರೆ ಹಿಂದೂಗಳಿಗೆ, ಅವರ ಸಂಪ್ರದಾಯದಂತೆ ಹಂತಿ ಹಾಕಿಸಿ, ಬಾಳೆ ಎಲೆಯಲ್ಲಿ ಶಾಕಾಹಾರಿ ಭೋಜನ ಮಾಡಿಸಿ, ಊಟ ದಕ್ಷಿಣೆಯನ್ನೂ ಕೊಡುತ್ತಿದ್ದರಂತೆ! ಬೊಳುವಾರು ಮಹಮದ್ ಕುಂಞ್ ಅವರಿಗೆ ಒಂದೊಮ್ಮೆ ಅವರು ಮುಸ್ಲಿಮರು ಅನ್ನುವ ಕಾರಣಕ್ಕೆ ಸುಲಭಕ್ಕೆ ಮನೆ ಸಿಗದೇ ಹೋದಾಗ, ಒಂದು ಫೋನ್ ಮಾಡಿ ಮನೆಯನ್ನು ಕೊಡಿಸಿದ್ದು ವೈದಿಕರೂ ಸನಾತನಿಗಳೂ ಆದ ಬನ್ನಂಜೆ ಗೋವಿಂದಾಚಾರ್ಯರು. ಅಪ್ಪಟ ನಾಸ್ತಿಕರೂ, ಕಮ್ಮ್ಯೂನಿಷ್ಟರೂ ಆಗಿದ್ದ ಗೌರೀಶ ಕಾಯ್ಕಿಣಿಯವರಿಗೆ ಗೋಕರ್ಣದ ದೇವಸ್ಥಾನದ ಜನರು, ಪುರೋಹಿತರು ಇವರೆಲ್ಲರ ಜೊತೆಗೆ ಸೌಹಾರ್ದವೇ ಇತ್ತು. ನಾಸ್ತಿಕರಾಗಿದ್ದ ಮೂರ್ತಿರಾಯರ ಆತ್ಮೀಯರಾಗಿ ಜೊತೆಗಿದ್ದದ್ದು ಪು.ತಿ.ನ., ತೀನಂಶ್ರೀ, ಶಿವರಾಮ ಶಾಸ್ತ್ರೀ ಮುಂತಾದ ಸಂಪ್ರದಾಯ ಶ್ರದ್ಧೆಯಿದ್ದ ದೈವಭಕ್ತರು. ಅಬ್ದುಲ್ ಕಲಾಂ, ಜಾಕೀರ್ ಹುಸೇನ್, ಬಿಸ್ಮಿಲ್ಲಾಖಾನ್, ನಿಸಾರ್ ಅಹಮ್ಮದ್ ಮುಂತಾದವರ ಉದಾಹರಣೆಗಳು ಹೇಗೂ ಇವೆ.
ಭಾರತೀಯ ಸೆಕುಲರಿಸಂ ಇನ ಸ್ವರೂಪವು ಯೂರೋಪಿನ ಅಥವಾ ಅಮೆರಿಕಾದ ಮಾದರಿಯದ್ದಲ್ಲ. ಒಂದು ಧರ್ಮವನ್ನು ಅವಹೇಳನ ಮಾಡುವುದು, ನಿರಂತರವಾಗಿ ಅದರ ಮೇಲೆ ವ್ಯಂಗ್ಯ, ಟೀಕೆಗಳನ್ನು ಹರಿಯಬಿಡುವುದು ಇಲ್ಲಿನ ಸೆಕುಲರಿಸಂ ಅಲ್ಲ. ನಮ್ಮ ಭಕ್ತಿ, ಶ್ರದ್ಧೆ, ಗೌರವಗಳನ್ನು ಬಿಡದೆ ಉಳಿದವರ ಭಾವನೆಗಳಿಗೂ ಗೌರವವನ್ನು ಸಲ್ಲಿಸಬೇಕು ಎಂಬುದು ಇಲ್ಲಿನ ಜನರ ಸಾಮಾನ್ಯವಾದ ನಿಲುವು. ಇದು ಈ ನಾಡಿನ ಜನರ ಸಹಿಷ್ಣುತೆಯ ಕ್ರಮ. ಮತ್ತು ಇಂತಹ ವಿಚಾರಗಳಲ್ಲಿ ಧಾರ್ಮಿಕ ಭಾವನೆ, ಸಾಂಸ್ಕೃತಿಕ ವಿಚಾರಗಳು, ರಾಜಕೀಯ ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಭಾನು ಮುಷ್ತಾಕ್ ಅವರು ಇಸ್ಲಾಮಿನಲ್ಲಿ ಶ್ರದ್ಧೆ ಇರುವವರೋ, ವಿಚಾರವಾದಿಯೋ ನನಗೆ ಗೊತ್ತಿಲ್ಲ(ಇಸ್ಲಾಮ್ ಅನ್ನು ಟೀಕಿಸಿ ಕಟ್ಟರ್ ಮುಸ್ಲಿಮರ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು ಎಂದೂ ಓದಿದ ನೆನಪು). ಅದು ಏನೇ ಇದ್ದರೂ ಅವರ ವೈಯಕ್ತಿಕ ವಿಚಾರ. ದಸರಾವು ಧಾರ್ಮಿಕ ಹಬ್ಬವೂ, ನಾಡಹಬ್ಬವೂ ಎರಡೂ ಆಗಿರುವ ಹಬ್ಬ. ಅದರ ಧಾರ್ಮಿಕ ಸ್ವರೂಪವನ್ನು ಕೈಬಿಟ್ಟು ಅದನ್ನೊಂದು ಸೆಕ್ಯುಲರ್ ಆಚರಣೆಯನ್ನಾಗಿಸುವುದು ಸರಿಯಾಗಲಾರದು. ಅದನ್ನು ಉದ್ಘಾಟನೆ ಮಾಡುವವರು ಅದರ ಹಿಂದಿರುವ ನಾಡಿನ ಜನರ ಧಾರ್ಮಿಕ ಭಾವನೆಗಳಿಗೆ ಗೌರವವನ್ನು ಕೊಡಬೇಕಾದ್ದು ಉಚಿತವಾದ ರೀತಿ. ವೈಯಕ್ತಿಕವಾಗಿ ಅವರಿಗೆ ನಂಬಿಕೆಯಿಲ್ಲದಿದ್ದರೆ ತೊಂದರೆಯೇನೂ ಇಲ್ಲ, ಆದರೆ ನಂಬಿ ನಡೆಯುವ ಜನರ ಭಾವನೆಗಳ ಬಗ್ಗೆ ಗೌರವವು ಇರಬೇಕು, ಇದು ಮುಖ್ಯ.
ಕನ್ನಡವನ್ನು ತಾಯಿ ಭುವನೇಶ್ವರಿ ಎಂದದ್ದನ್ನು ಅವರು ಹಿಂದೊಮ್ಮೆ ವಿರೋಧಿಸಿದ್ದು, ತಾಯಿ ಭುವನೇಶ್ವರಿಯ ಅರಿಶಿನ ಕುಂಕುಮದ ಬಗ್ಗೆ ತಿರಸ್ಕಾರವನ್ನು ತೋರುವುದನ್ನು ಕಂಡಾಗ, "ಅದು ತನ್ನಂತಹ ಅಲ್ಪಸಂಖ್ಯಾತರನ್ನು, ಮಹಿಳೆಯರನ್ನು ಹೊರಗಟ್ಟುವ ಹುನ್ನಾರ" ಎಂದದ್ದು ಎಲ್ಲ ಕಂಡಾಗ ಅಲ್ಲಿ ಈ ನಾಡಿನ ರೀತಿ ನೀತಿಗಳನ್ನು ಅರಿಯದ ಸಂಕುಚಿತ ದೃಷ್ಟಿಯೇ ಕಂಡಿತು. "ಕರ್ಣಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ? ಮಂತ್ರ ಕಣಾ ! ಶಕ್ತಿ ಕಣಾ ! ತಾಯಿ ಕಣಾ ! ದೇವಿ ಕಣಾ !" ಎಂಬ ಕುವೆಂಪು ಅವರ ಸಾಲುಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಬಾನು ಅವರು ಯಾವ ಹಿನ್ನೆಲೆಯಲ್ಲಿ, ಯಾವ ಕಾಂಟೆಕ್ಸ್ಟ್ ನಲ್ಲಿ ಆ ಮಾತುಗಳನ್ನು ಹೇಳಿದರೋ ತಿಳಿಯದು(context ತಿಳಿಯದೆ ಮಾತಾಡಬಾರದು ಎನ್ನುವುದೂ ನನಗೆ ಮುಖ್ಯವೇ). ಆದರೆ ನನಗೆ ಅವರ ಮಾತುಗಳು ಅರ್ಥವಾದಷ್ಟು ಮಟ್ಟಿಗೆ ದಸರಾದ ಉದ್ಘಾಟನೆಯನ್ನು ಮಾಡುವವರಿಗೆ ಅಂತಹ ಮನಃಸ್ಥಿತಿ, ಭಾವನೆಗಳು ಇಲ್ಲದಿದ್ದರೆ ಒಳ್ಳೆಯದೇನೋ. ನೀವು ನಂಬದಿದ್ದರೆ ತೊಂದರೆಯಿಲ್ಲ, ನಂಬುವವರ ಬಗ್ಗೆ ಆದರ, ಗೌರವ, ಮರ್ಯಾದೆಗಳಿರಲಿ. ಬಾನು ಅವರು ಹಾಗೆ ನಡೆದುಕೊಂಡು ಜನರ ಭಾವನೆಗಳಿಗೆ ಬೇಸರವಾಗದಂತೆ ನೋಡಿಕೊಳ್ಳಲಿ ಎಂದು ಹಾರೈಸೋಣ.

ಸು ಫ್ರಂ ಸೋ

 ನಿನ್ನೆ ರಾತ್ರಿ ಹತ್ತು ಗಂಟೆಗೆ 'ಸು ಫ್ರಂ ಸೋ' ಎಂಬ ವಿಚಿತ್ರ ಹೆಸರಿನ ಸಿನೆಮಾವನ್ನು ನೋಡಿದ್ದಾಯಿತು. 'ಭಯಂಕರ ಸ್ಟಾರ್ ಗಳು ಅಂತ ಯಾರೂ ಇಲ್ಲದಿದ್ದರೆ ಕನ್ನಡ ಸಿನೆಮಾ ನೋಡುವುದಕ್ಕೆ ಯಾರೂ ಬರುವುದಿಲ್ಲ' ಎಂಬ ನಂಬಿಕೆಯ ತಲೆ ಮೇಲೆ ಹೊಡೆದಂತೆ ಜನ ಬಂದಿದ್ದರು.

ಚಿತ್ರವನ್ನು ನೋಡಿಯಾದ ಮೇಲೆ, ಚಿತ್ರದ ನಿರ್ದೇಶಕ ಜೆ.ಪಿ. ತುಮಿನಾಡ್‌ ಅವರು ಮನಸ್ಸಿನಲ್ಲೇ ಪ್ರೇಕ್ಷಕರ ಜೊತೆಗೆ ನಡೆಸಿರಬಹುದಾದ ಸಂಭಾಷಣೆಯೊಂದನ್ನು ಕಲ್ಪಿಸಿಕೊಂಡೆ:
ಜೆ.ಪಿ. : ಚಿತ್ರಕ್ಕೆ ಬರುವಾಗ ಮೊಬೈಲು ಫೋನುಗಳನ್ನು ತರಬೇಡಿ
ಪ್ರೇಕ್ಷಕ: ಯಾಕೆ ತರಬಾರದು? ಮೊಬೈಲು ನಮ್ಮ ಹಕ್ಕು
ಜೆ.ಪಿ. : ಅಯ್ಯೋ, ಹಾಗೆ ಹೇಳಿದ್ದಲ್ಲ ಮಾರಾಯರೆ, ಮೊಬೈಲಿದ್ದರೆ ಚಿತ್ತ ಚಂಚಲವಾಗುತ್ತದೆ, ದೊಡ್ಡ ಪರದೆಯ ಬದಲಿಗೆ ಅದರ ಕಿರುತೆರೆಯ ಕಡೆಗೇ ಗಮನ ಹೋಗುತ್ತದೆ, ಸುಮ್ಮನೆ Distraction ಆಗುತ್ತದೆ ಅಂತ ನಾನು ಹೇಳಿದ್ದಷ್ಟೇ.
ಪ್ರೇಕ್ಷಕ: ಆದದ್ದಾಗಲಿ, ನಾವು ಮೊಬೈಲು ತಂದೇ ತರುತ್ತೇವೆ
ಜೆ.ಪಿ. : ಚಾಲೆಂಜ್ accepted. ನೀವು ಅದು ಹೇಗೆ ಮೊಬೈಲು ನೋಡುತ್ತೀರೋ ನಾನೂ ನೋಡಿಯೇ ಬಿಡುತ್ತೇನೆ.
ಹೌದು, ಚಿತ್ರವು ಒಂದಾದ ಮೇಲೆ ಒಂದು ನಗೆಪಟಾಕಿಗಳನ್ನು ಅದೆಷ್ಟು ವೇಗದಲ್ಲಿ ಎಸೆಯುತ್ತದೆ ಎಂದರೆ, ಪ್ರೇಕ್ಷಕನಿಗೆ ಮೊಬೈಲನ್ನು ನಲುವತ್ತೆರಡು ಸೆಕೆಂಡುಗಳಷ್ಟು ಕಾಲ ನೋಡಿದರೂ ಕನಿಷ್ಠ ಎರಡೂವರೆ ಜೋಕುಗಳಾದರೂ ಸಿಗದೇ ತಪ್ಪಿ ಹೋಗುತ್ತವೆ; ಇಲ್ಲೊಂದು ಪಾತ್ರದ ಮಂಗಾಟಕ್ಕೆ ನಕ್ಕು ಮುಗಿಸುವಾಗ, ಅಲ್ಲೊಂದು ಪಂಚ್ ಡಯಲಾಗ್, ಅದನ್ನು ಅರಗಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಪಾತ್ರದ್ದು ಇನ್ನೇನೋ ಒಂದು ನಗೆಯುಕ್ಕಿಸುವ ಮುಖಭಾವ—ಹೀಗೆ ಸಾಗುತ್ತದೆ.
ಒಂದೊಂದು ಪಾತ್ರವನ್ನೂ, ಅದರ ಹಾವಭಾವವನ್ನೂ ಅಷ್ಟು ಚೆನ್ನಾಗಿ ಕಟ್ಟಲಾಗಿದೆ. ಹಾಸ್ಯಪ್ರಧಾನವಾದ ತುಳು ರಂಗಭೂಮಿಯ ಪ್ರಭಾವವೂ ಈ ಚಿತ್ರದ ಮೇಲೆ ದಟ್ಟವಾಗಿಯೇ ಆಗಿದೆ; ನಿರ್ದೇಶಕರು, ಕಲಾವಿದರು ಎಲ್ಲ ತುಳು ನಾಟಕಗಳಲ್ಲಿಕೆಲಸ ಮಾಡಿದವರೇ. ದಕ್ಷಿಣ ಕನ್ನಡದಲ್ಲಿ ಕಳೆದ ಇಪ್ಪತ್ತು ಮುವತ್ತು ವರ್ಷಗಳಲ್ಲಿ ತುಳು ನಾಟಕಗಳು, ಅವುಗಳ ಹಾಸ್ಯದಿಂದ ಯಾವ ಮಟ್ಟಿಗಿನ ಜನಪ್ರಿಯತೆಯನ್ನು ಸಾಧಿಸಿವೆ ಎಂದರೆ ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಆನಂದ ಬೋಳಾರ್ ಮುಂತಾದ ರಂಗಭೂಮಿ ಕಲಾವರಿಗೆ ಸಿನೆಮಾ ನಟರಷ್ಟೇ ತಾರಾಮೌಲ್ಯವಿದೆ. ಇವರೆಲ್ಲ ಸುಮ್ಮನೆ, "ಇವತ್ತು ಬೆಳಗ್ಗೆ ಒಂದು ತಟ್ಟೆ ಅವಲಕ್ಕಿಯನ್ನು ಕಲಸಿ ತಿಂದೆ" ಎಂದು ತುಳುವಿನಲ್ಲಿ ಹೇಳಿದರೂ ಜನರು ನಗುತ್ತಾರೆ ಎನ್ನುವಷ್ಟು ಇವರ ಹಾಸ್ಯಪ್ರಜ್ಞೆ ಮತ್ತು ನಟನೆ ಜನರಿಗೆ ಹತ್ತಿರವಾಗಿವೆ. ನನಗೆ ಹರುಕು ಮುರುಕು ತುಳುವಷ್ಟೇ ಮಾತಾಡಲು ಬರುವುದಾದರೂ ಅದು ಚೆನ್ನಾಗಿ ಅರ್ಥವಾಗುತ್ತದೆ. ಮತ್ತು ತುಳುವಿನ ಈ ಆಪ್ತವಾಗುವ, ಹಾಸ್ಯಕ್ಕೆ ಒದಗಿಬರುವ ಗುಣದಿಂದಾಗಿ ಅದು ನನಗೆ ಕನ್ನಡದಂತೆ ಮನಸ್ಸಿಗೆ ಹತ್ತಿರವಾದ ಭಾಷೆಯೇ.
ನಾವು ನಮ್ಮ ಊರುಗಳಲ್ಲಿ, ಹಳ್ಳಿಗಳಲ್ಲಿ ದಿನನಿತ್ಯ ನೋಡುವ ಪಾತ್ರಗಳನ್ನೇ ಈ ನಾಟಕಗಳು ಬಳಸಿಕೊಳ್ಳುವುದು. ನಾವು ನೋಡಿದ ಪಾತ್ರಗಳಲ್ಲೇ ಇರುವ ಒಳ್ಳೆಯತನ, ಸಣ್ಣತನ, ಹೃದಯವಂತಿಕೆ, ದೌರ್ಬಲ್ಯ, ಮಂಗಬುದ್ಧಿ ಇವೆಲ್ಲವನ್ನೇ ಒಂದಿಷ್ಟು ಉತ್ಪ್ರೇಕ್ಷೆಯೊಂದಿಗೆ ತೋರಿಸುವುದು ಇವುಗಳ ಹೆಚ್ಚುಗಾರಿಕೆ. ದಿನನಿತ್ಯದ ಘಟನೆಗಳನ್ನೇ ಹಾಸ್ಯಕ್ಕೆ ಬೇಕಾದಂತೆ ಉತ್ಪ್ರೇಕ್ಷೆ ಮಾಡುವುದು ಇವರಿಗೆ ಕರಗತವಾಗಿರುವ ಒಂದು ಅಸಾಧಾರಣವಾದ ಕಲೆ. ತುಳುವಿನ ಈ ಹಾಸ್ಯದ ಪ್ರಯೋಜನವು ಕನ್ನಡ ಚಿತ್ರರಂಗಕ್ಕೆ ಆಗಲಾರದೇ ಎಂದು ನಾನು ಯೋಚಿಸಿದ್ದಿತ್ತು. ಅದೀಗ ಅಷ್ಟಿಷ್ಟು ಆಗುತ್ತಿದೆ. ಈ ನಿಟ್ಟಿನಲ್ಲಿ ಈ ಚಿತ್ರವೂ ಯಶಸ್ವಿಯಾಗಿದೆ. 'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ' ರಿಷಬ್ ಶೆಟ್ಟಿಯವರ 'ಸರ್ಕಾರಿ ಹಿರಿಯ ಪ್ರಾ.ಶಾಲೆ, ಕಾಸರಗೋಡು', ಮುಂತಾದ ಚಿತ್ರಗಳೂ ಈ ತಂತ್ರವನ್ನು ಬಳಸಿಕೊಂಡಿದ್ದವು, ಅವುಗಳ ಸುಮಾರ್ಗದಲ್ಲಿದು ಕ್ರಮಿಸಿದೆ.
ಸ್ಟಾರುಗಳು ಇಲ್ಲ ಎಂದೆನಲ್ಲ, ಅದು ಒಂದು ರೀತಿಯಲ್ಲಿ ಸರಿಯಲ್ಲ, ಯಾಕೆಂದರೆ ಈ ಸಿನೆಮಾದಲ್ಲಿ ಎಲ್ಲರೂ ಸ್ಟಾರುಗಳೇ; ಪ್ರತಿಯೊಂದು ಪಾತ್ರವೂ ಮುಖ್ಯವೇ, ಅಥವಾ ಯಾರೂ ಅಮುಖ್ಯರಲ್ಲ; ಎಲ್ಲರೂ ತಮಗೆ ಸಿಕ್ಕಿದ ಅವಕಾಶದಲ್ಲಿ ಮಿಂಚುತ್ತಾರೆ. ಈ ಅರ್ಥದಲ್ಲಿ ಇದು ಆರು ಹೀರೋಗಳನ್ನು ಹಾಕಿ ಮಾಡುವುದಕ್ಕಿಂತ ದೊಡ್ಡದಾದ, ಸಣ್ಣ ಬಜೆಟ್ಟಿನ ಅತಿದೊಡ್ಡ ಮಲ್ಟಿ ಸ್ಟಾರರ್ ಸಿನೆಮಾ. ನಿರ್ದೇಶಕರು, ಕಲಾವಿದರು, ಬರೆದವರೆಲ್ಲ ಇದನ್ನು ಸಾಧಿಸಲು ಪಟ್ಟಿರಬಹುದಾದ ಶ್ರಮವು ಸಫಲವಾಗಿದೆ. ರಂಗಭೂಮಿಯ ಕಲಾವಿದರು ಪೋಷಕಪಾತ್ರಗಳನ್ನು ಎಷ್ಟು ಸೊಗಸಾಗಿ ನಿಭಾಯಿಸಬಲ್ಲರು ಎಂಬುದಕ್ಕೂ ಇಲ್ಲಿ ಸಾಕಷ್ಟು ನಿದರ್ಶನಗಳಿವೆ. ಶನಿಲ್ ಗೌತಮ್, ಜೆ.ಪಿ. ತುಮಿನಾಡ್‌, ಪ್ರಕಾಶ್ ತುಮಿನಾಡ್, ದೀಪಕ್‌ ರೈ ಪಾಣಾಜೆ, ಮೈಮ್‌ ರಾಮದಾಸ್‌, ಸಂಧ್ಯಾ ಅರಕೆರೆ ಇಷ್ಟು ಹೆಸರುಗಳು ನೆನಪಾಗುತ್ತವಾದರೂ ಉಳಿದವರಲ್ಲಿ ಯಾರೂ ಕಡಮೆಯಿಲ್ಲ, ಎಲ್ಲರೂ ಒಬ್ಬರನ್ನು ಒಬ್ಬರು ಮೀರಿಸುತ್ತಾರೆ. ಹಾಸ್ಯಚಿತ್ರಗಳಲ್ಲಿ ಹಿನ್ನೆಲೆ ಸಂಗೀತವು ಟೊಂಯ್ ಎಂದು ಹಾಸ್ಯಾಸ್ಪದವಾಗಿ ಕುಯ್ಯುವ ರೀತಿಯಲ್ಲಿರದೆ ವಿಶಿಷ್ಟವಾಗಿದೆ. MTV style of editing ಏನೋ ಎಂಬಂತೆ ಸರಸರನೆ ದೃಶ್ಯಗಳು, ಪಾತ್ರಗಳು, ಫೋಕಸ್ ಎಲ್ಲ ಬದಲಾಗುತ್ತವೆ. ಈ ಚಿತ್ರವನ್ನು ಜನರಿಗೆ ಮುಟ್ಟಿಸುತ್ತಿರುವ ರಾಜ್ ಬಿ ಶೆಟ್ಟಿಯವರಿಗೆ ಚಪ್ಪಾಳೆ.
ಈ ವಾರಾಂತ್ಯದಲ್ಲಿ, ಮಲ್ಟಿಪ್ಲೆಕ್ಸುಗಳು, 'ಸೀಟು ಖಾಲಿಯಾಗಿದೆ' ಎನ್ನುವ ಬದಲು 'ಟಿಕೆಟ್ ಖಾಲಿಯಾಗಿದೆ' ಎಂದುಸುರಿ ಧನ್ಯರಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಥಿಯೇಟರಿನಲ್ಲಿ ಜನರು ಮತ್ತೆ ಮತ್ತೆ ನಕ್ಕ ಪರಿ, cheer ಮಾಡಿದ ರೀತಿಯನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಎಲ್ಲ ಥಿಯೇಟರ್ ಗಳ ಮುಂದೆಯೂ ಜನಸಾಗರವು ಜಮೆಯಾಗಲಿದೆ ಎಂದನಿಸಿತು. ಮಹಾಸಾಗರ, ಹಿಂದೂ ಮಹಾಸಾಗರ, ಮುಂದೂ ಮಹಾಸಾಗರವೇ ನೆರೆಯಲಿದೆ ಎಂದು ಅನಿಸುತ್ತಿದೆ. ಚಿತ್ರತಂಡಕ್ಕೆ ಶುಭವಾಗಲಿ. ಜೆ.ಪಿ. ತುಮಿನಾಡ್‌ ಅವರೇ, ಕನ್ನಡ ಚಿತ್ರರಂಗಕ್ಕೆ ಹೀಗೆ ಬನ್ನಿ.

ಎಚ್.ಎಸ್.ವೆಂಕಟೇಶಮೂರ್ತಿ

 "ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ", "ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ? ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ", "ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ", "ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ ನೀರಿನಾಳ ತಿಳಿಯಿತೇನು ಹಾಯಿದೋಣಿಗೆ?", "ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?" ಮುಂತಾದ ಸಾಲುಗಳು ನನಗೆ ಬಹಳವೇ ಇಷ್ಟ. ಈಚೆಗೆ ಸಪ್ತ ಸಾಗರದಾಚೆಯೆಲ್ಲೋ ಸಿನೆಮಾದಲ್ಲಿ "ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ" ಹಾಡು ಬಂದ ಮೇಲೆ ಅದನ್ನು, ಮತ್ತು ಅದೇ ಹಾಡನ್ನು ರಾಘವೇಂದ್ರ ಬೀಜಾಡಿಯವರು ಹಾಡಿರುವುದನ್ನೂ ಮತ್ತೆ ಮತ್ತೆ ಕೇಳುತ್ತಿದ್ದೆ. ಇಂತಹ ಸಾಲುಗಳನ್ನು ಕೊಟ್ಟ ಎಚ್.ಎಸ್. ವೆಂಕಟೇಶಮೂರ್ತಿಯವರು ಭೌತಿಕವಾಗಿ ಇನ್ನಿಲ್ಲ ಎಂಬುದು ಬೇಸರದ ಸಂಗತಿ.

ನಾನು ಇನ್ನೊಂದು ವರ್ಷಗಳಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ಹಳಗನ್ನಡ/ನಡುಗನ್ನಡಗಳಿಂದ ಆಯ್ದ ಮಾತಿನ ಚಮತ್ಕಾರ, ಉಕ್ತಿ ವೈಚಿತ್ರ್ಯಗಳಿರುವ ಸಾಲುಗಳನ್ನು ಪರಿಚಯಿಸುವ ಪುಸ್ತಕವೊಂದನ್ನು ಬರೆಯಬೇಕು ಎಂದುಕೊಂಡಿದ್ದೆ, ಅದನ್ನು ಎಚ್ಚೆಸ್ವಿಯವರನ್ನು ಭೇಟಿಯಾಗಿ, ಪರಿಚಯ ಮಾಡಿಕೊಂಡು, ಅವರಿಗೆ ತೋರಿಸಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದೆ. ಹಳಗನ್ನಡ ಕಾವ್ಯಗಳ ಬಗ್ಗೆ ಕುವೆಂಪು ಅವರು ಬರೆದಿರುವ ಲೇಖನಗಳು ಚಂದವೋ ಚಂದ, ತೀನಂಶ್ರೀಯವರು ಬರೆದಿರುವ ಲೇಖನಗಳೂ ಸೊಗಸಾಗಿವೆ. ಈ ನನ್ನ ಮೆಚ್ಚುಗೆಯ ಪಟ್ಟಿಗೆ ಎಚ್ಚೆಸ್ವಿಯವರೂ ಸೇರುತ್ತಾರೆ. ಅವರು ಎಷ್ಟೊಳ್ಳೆಯ ಕವಿಯೋ ಅಷ್ಟೇ ಒಳ್ಳೆಯ ಕಾವ್ಯರಸಿಕರು, ವ್ಯಾಖ್ಯಾನಕಾರರು, ಹಳಗನ್ನಡ, ನಡುಗನ್ನಡ, ಸಂಸ್ಕೃತ ಸಾಹಿತ್ಯದ ಸೊಗಸನ್ನು ತಿಳಿಯಾಗಿ, ಸೊಗಸಾಗಿ ತೆರೆದು ತೋರಿಸಬಲ್ಲ ಕಾವ್ಯಾಸ್ವಾದನಾ ನಿಪುಣರಾದ ವಿದ್ವಾಂಸರು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಅವಧಿ ಮ್ಯಾಗಝೀನಿನಲ್ಲಿ ಕಾವ್ಯವನ್ನು ಹೇಗೆ ನೋಡಬೇಕು, ಹೇಗೆ ಆಸ್ವಾದಿಸಬೇಕು ಎಂಬ ವಿಷಯವನ್ನಿಟ್ಟುಕೊಂಡು ಅವರು ಬರೆದಿದ್ದ ಸರಣಿ ಲೇಖನಗಳು ಅಭ್ಯಾಸಯೋಗ್ಯವೂ, ಮನನಯೋಗ್ಯವೂ ಆಗಿವೆ. ಕನ್ನಡಪ್ರಭಕ್ಕೆ ಬುಕ್ ರೆಕಮೆಂಡೇಷನ್ ಲೇಖನವವೊಂದನ್ನು ನಾನು ಬರೆದಾಗ, ಅದರಲ್ಲಿ ಬಂದಿದ್ದ ಒಂದು ಭಾಗವನ್ನು ಕೆಳಗೆ ಕೊಟ್ಟಿದ್ದೇನೆ:
***************************************
ಕುಮಾರವ್ಯಾಸನು ವಾಗ್ದೇವಿಯ ಶಾಪಿಂಗ್ ಮಾಲ್'ನಲ್ಲಿ ಇದ್ದದ್ದನ್ನೆಲ್ಲಾ ಬಾಚಿ ಗುಡಿಸಿ ಶಾಪಿಂಗ್ ಮಾಡಿರುವ ಮಹಾಕವಿ. ಅವನ ಕಂಠಪತ್ರದ ಉಲುಹು ಕೇಳಿದಾಗ ಕಿವಿಗೊಟ್ಟರೆ, ಕಿವಿ ತುಂಬುವಷ್ಟು ವಕ್ರೋಕ್ತಿಗಳು ಕೇಳಿಸುತ್ತವೆ. ಅವನು ವಕ್ರೋಕ್ತಿ ಸಾಮ್ರಾಜ್ಯಚಕ್ರವರ್ತಿ. ಉತ್ಪ್ರೇಕ್ಷೆ, ಅತಿಶಯೋಕ್ತಿಗಳನ್ನು ಹೆಣೆಯಲು ನಿಂತರೆ ಅವನು ನಮ್ಮನ್ನು ಬೆರಗಾಗಿಸಿಬಿಡುತ್ತಾನೆ, ರೂಪಕಗಳು ಅವನು ಬೇಕೆಂದಾಗ ಬರುತ್ತವೆ. ಇಂಥ ಕವಿಯ ಪದ್ಯಗಳಿಗೆ ನಮ್ಮ ಕಾಲದ ಕವಿಯೊಬ್ಬರು ಸ್ಪಂದಿಸಿದಾಗ ಸಿಕ್ಕಿದ್ದು 'ಕುಮಾರವ್ಯಾಸ ಕಥಾಂತರ'. ನಮ್ಮಲ್ಲಿ ಒಬ್ಬೊಬ್ಬ ಕವಿಗೆ ಒಬ್ಬೊಬ್ಬ ಅಭಿಮಾನಿ, ವ್ಯಾಖ್ಯಾನಕಾರರು ಸಿಕ್ಕಿ, ಆ ಕವಿಯ ಬಗ್ಗೆ ಸಾಕಷ್ಟು ಬರೆದು, ಮಾತಾಡಿ ಹೆಸರು ಮಾಡಿದ್ದಾರೆ - ಪಂಪನಿಗೆ ಮುಳಿಯ ತಿಮ್ಮಪ್ಪಯ್ಯ, ಮುದ್ದಣನಿಗೆ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು, ಬೇಂದ್ರೆಗೆ ಕುರ್ತಕೋಟಿ, ನರಸಿಂಹಸ್ವಾಮಿಗೆ ನರಹಳ್ಳಿ, ಹೀಗೆ. ಕುಮಾರವ್ಯಾಸನಿಗಾದರೋ ಮೂರು ನಾಲ್ಕು ಜನ - ಕೀರ್ತಿನಾಥ ಕುರ್ತಕೋಟಿ, ಶತಾವಧಾನಿ ಗಣೇಶ್(ಉಪನ್ಯಾಸಗಳು ಮತ್ತು ಸುದೀರ್ಘವಾದ ಗಮಕ ವಾಚನದ ವ್ಯಾಖ್ಯಾನ) , ಎ.ವಿ. ಪ್ರಸನ್ನ(ಕುಮಾರವ್ಯಾಸನ ಕಾವ್ಯ ಚಿತ್ರಗಳು) ಮತ್ತು ಎಚ್.ಎಸ್.ವೆಂಕಟೇಶಮೂರ್ತಿ. ಒಂದು ಮಹಾಕೃತಿಯನ್ನು ಎಷ್ಟು ವೈವಿಧ್ಯಮಯವಾದ ನೆಲೆಗಳಿಂದ ಓದಬಹುದು ಎಂಬುದಕ್ಕೆ ಈ ಎಲ್ಲರ ವ್ಯಾಖ್ಯಾನಗಳು ಸಾಕ್ಷಿಯಾಗುತ್ತವೆ.
ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರ 'ಕುಮಾರವ್ಯಾಸ ಕಥಾಂತರ'ವು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದೆ. ರೂಪಕಗಳ ಚೆಲುವು, ಭಾಷೆಯ, ಪದಗಳ ವಿಶ್ಲೇಷಣೆ, ಎಲ್ಲವನ್ನೂ ವೆಂಕಟೇಶಮೂರ್ತಿಯವರು ಹಿಡಿದಿರುವ ಪರಿಯೇ ಚಂದವಾಗಿದೆ. ಕುಮಾರವ್ಯಾಸ ಭಾರತವನ್ನು ಒಬ್ಬ ಕವಿಯಾಗಿ, ಓದುಗನಾಗಿ ಅವರು ಗ್ರಹಿಸುವ ರೀತಿ, ಅವರ ಹೊಳಹುಗಳನ್ನು ಅವರು ಸೊಗಸಾದ ಗದ್ಯದಲ್ಲಿ ವ್ಯಕ್ತಪಡಿಸುವ ವಿಧಾನ ಎಲ್ಲ ಸೇರಿ ಈ ಸರಣಿಯ ಪುಸ್ತಕಗಳು ಇಷ್ಟವಾಗುತ್ತವೆ.
****************************************
ಎಚ್ಚೆಸ್ವಿಯವರಿಗೆ ಅಂತಿಮ ನಮನಗಳು

Operation Sindoor

 ಅಂತೂ ಎಲ್ಲ ಗಲಾಟೆಯು ಮುಗಿದು, ಕದನಕ್ಕೆ ವಿರಾಮ ಸಿಕ್ಕಿರುವುದರಿಂದ ಆದದ್ದರ ಬಗ್ಗೆ ಸಿಂಹಾವಲೋಕನ ಮಾಡಲಿಕ್ಕೆ, ನಾವು ಕಲಿತದ್ದೇನು ಎಂದು ಪರ್ಯಾಲೋಚಿಸುವುದಕ್ಕೆ ಇದು ಸಕಾಲವೇನೋ.

ಪಾಠ ೧: ಭಾರತವು ಏನಾದರೂ ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಕೊಡದೆ ಬಿಡೆವು ಎಂದು ಪಾಕಿಸ್ತಾನಿ ಸೈನ್ಯದವರು ಬೊಬ್ಬಿರಿದರು; ಮತ್ತು ನುಡಿದಂತೆಯೇ ನಡೆದರು. ನಮ್ಮ ದಾಳಿಯಾದ ದಿನದಿಂದಲೇ ಪಾಕಿಸ್ತಾನವು ಅತ್ಯಂತ ಪ್ರಬಲವಾಗಿ, ಸಶಕ್ತವಾಗಿ, ಭಾರತಕ್ಕೆ ದಂಗುಬಡಿಯುವಂತೆ ಪ್ರತ್ಯಾಕ್ರಮಣವನ್ನು ಮಾಡಿತು! ಹೇಗೆ? ತನ್ನ ಡಿಜಿಟಲ್ ಸೇನೆಯ ಮೂಲಕ! ಮೊದಲಿಗೆ ಪಟ್ನಾ ಮತ್ತು ಬೆಂಗಳೂರು ಬಂದರುಗಳನ್ನು ಪಾಕಿನ ಕೀಬೋರ್ಡ್ ವೀರರು (ನಮ್ಮ ವಾಹಿನಿಗಳ ಭಾಷೆಯಲ್ಲಿ ಹೇಳುವುದಾದರೆ) ಉಡೀಸ್ ಮಾಡಿದರು! ಮೊದಲೇ ಸೆಖೆ, ಟ್ರಾಫಿಕ್ಕು ಎಂದು ಕಂಗೆಟ್ಟಿದ್ದ ಬೆಂಗಳೂರಿಗರು ಬಂದರು ನಾಶವಾದ ಮೇಲೆ ಇನ್ನು ಹಡಗುಗಳೂ ರಸ್ತೆಯಲ್ಲೇ ಓಡಿದರೆ ಟ್ರಾಫಿಕ್ಕಿನ ಗತಿಯೇನು ಎಂದು ಭಯಭೀತರಾದರು. ಪಟ್ನಾದ ಅವಸ್ಥೆ ಹೇಗಿದೆಯೋ ದೇವರೇ ಬಲ್ಲ. ಈ ಆಘಾತದಿಂದ ಚೇತರಿಸಿಕೊಳ್ಳಲಿಕ್ಕೆ ಇನ್ನು ಐವತ್ತು ವರ್ಷಗಳಾದರೂ ಬೇಕು ಎಂದು ನಾವು ಚಿಂತಾಕ್ರಾಂತರಾಗಿದ್ದಾಗ ಮತ್ತಷ್ಟು ಪಾಕಿ ಅಸೀಮಪರಾಕ್ರಮಿಗಳು ಟ್ವಿಟ್ಟರಿನಲ್ಲೇ ಐದಾರು ರಫೇಲ್ ಜೆಟ್ಟುಗಳನ್ನು ಹೊಡೆದುರುಳಿಸಿದರು, ಶಿವಾನಿ ಸಿಂಗ್ ಎಂಬ ನಮ್ಮ ಪೈಲಟ್ ಅನ್ನು ಟ್ವಿಟ್ಟರಿನಲ್ಲೇ ಬಂಧಿಸಿದ್ದೂ ಆಯಿತು, ಭಾರತೀಯ ಸೇನೆಯ ಏರ್ ಬೇಸುಗಳನ್ನು ಪಾಕಿಗಳು ಇನ್ಸ್ಟಾಗ್ರಾಮಿನಲ್ಲೇ ಧ್ವಂಸ ಮಾಡಿ ಬಿಸಾಕಿದರು. ಭಾರತದ ಆದಂಪುರದ ವಾಯುನೆಲೆಯನ್ನು, ಬ್ರಹ್ಮೋಸ್ ಮಿಸೈಲುಗಳ storage siteಗಳನ್ನು ಎಲ್ಲ ಕೀಬೋರ್ಡ್ ವೀರರು ಫೇಸ್ಬುಕ್ಕಿನಲ್ಲೇ ಗುದ್ದಿ ಪುಡಿ ಮಾಡಿದರು. ಇದು ಎಷ್ಟು ಅತಿಗೆ ಹೋಯಿತು ಎಂದರೆ ಪಾಕಿ ಸರ್ಕಾರದ ಅಧಿಕೃತ ಖಾತೆಯೊಂದು ಟ್ವಿಟ್ಟರಿನಲ್ಲಿ ವೀಡಿಯೋ ಗೇಂ ಒಂದರ ವೀಡಿಯೊವನ್ನು ಹಾಕಿ, "ನೋಡಿ ಇದು ನಮ್ಮ ವಾಯುಸೇನೆಯು ಭಾರತಕ್ಕೆ ಕೊಟ್ಟ ದಿಟ್ಟ ಪ್ರತ್ಯುತ್ತರ" ಎಂದು ಸಾರಿತು! ವಿಷಯ ಎಲ್ಲಿಯವರೆಗೆ ಮುಟ್ಟಿದೆ ಎಂದರೆ , ಭಾರತೀಯರೆಲ್ಲ ಪಾಕಿಸ್ತಾನದ ಭೀಕರ ದಾಳಿ(!)ಗೆ ಹೆದರಿ, ಗಡಗಡ ನಡುಗಿ, ಎದ್ದು ಬಿದ್ದು ಓಡಿ, ಪಶ್ಚಿಮ ಭಾಗದವರು ಅರಬ್ಬೀ ಸಮುದ್ರಕ್ಕೂ ಪೂರ್ವದವರು ಬಂಗಾಳ ಕೊಲ್ಲಿಗೂ ಹಾರಿದ್ದಾರೇನೋ ಎನ್ನುವಷ್ಟರ ಮಟ್ಟಿಗೆ ಪಾಕಿ ಪ್ರಜೆಗಳನ್ನು ನಂಬಿಸಲಾಗಿದೆ.
ಪಾಠ ೧ ಇಷ್ಟೇ: ಯುದ್ಧ ಎಂಬುದು ಎಷ್ಟೋ ಸಲ ರಣರಂಗಕ್ಕೆ ಸೀಮಿತವಾಗಿರುವುದಿಲ್ಲ, ನರೇಟಿವ್ ವಾರ್ ಎಂಬುದೂ ಒಂದಿದೆ. ಫೇಕ್ ನ್ಯೂಸ್ ಎಂಬುದು ಈ ಕಾಲದ ಅತಿದೊಡ್ಡ ಪಿಡುಗು; ಯುದ್ಧದ ಸಮಯದಲ್ಲಿ ಫೇಕ್ ನ್ಯೂಸುಗಳ ಮೂಲಕ ನರೇಟಿವ್ ವಾರನ್ನು ಗೆಲ್ಲಲು ಹೇಗೆಲ್ಲ ಪ್ರಯತ್ನ ಮಾಡಬಹುದು ಎಂಬುದನ್ನು ಪಾಕ್ ದಿನಕ್ಕೆ ಹತ್ತಿಪ್ಪತ್ತು ಸಲ ತೋರಿಸಿತು (ಪಾಕಿಸ್ತಾನಕ್ಕೆ ಬೇರೆ ಯಾವ ಯುದ್ಧವನ್ನೂ ಗೆಲ್ಲಲು ಸಾಧ್ಯವಿಲ್ಲ, ಹಾಗಾಗಿ ನರೇಟಿವ್ ವಾರನ್ನಾದರೂ ಗೆಲ್ಲುವ ಪ್ರಯತ್ನವನ್ನು ಅದು ಮಾಡಿದ್ದು ಸಹಜವೇ ಅನ್ನಿ. ನಮ್ಮ ವಾರ್ತಾವಾಹಿನಿಗಳೂ, "ನಾವೇನು ಕಡಮೆಯಲ್ಲ ಎಂಬಂತೆ ಸಾಕಷ್ಟು ಉತ್ಪ್ರೇಕ್ಷೆಗಳನ್ನು, ತಪ್ಪುಮಾಹಿತಿಗಳನ್ನು ಹರಡಿದವು ಎಂಬುದೂ ಸತ್ಯವೇ). ಒಂದರ್ಥದಲ್ಲಿ ಸಾಮಾಜಿಕ ಜಾಲತಾಣಗಳೂ ಯುದ್ಧಭೂಮಿಗಳೇ.
ಪಾಠ ೨: ಈ ಕಾಲದಲ್ಲಿ ತಂತ್ರಜ್ಞಾನವೂ ಸೈನಿಕನೇ. ಅಥವಾ ಒಂದು ಗಟ್ಟಿಯಾದ ತಂತ್ರಜ್ಞಾನವು ಸಾವಿರ ಕಮಾಂಡೋಗಳಿಗೆ ಸಮ. ಅಂದೊಮ್ಮೆ ಸರ್ಜಿಕಲ್ ಸ್ಟ್ರೈಕ್ ಆದಾಗ ಉಗ್ರರ ನೆಲೆಗಳಿಗೆ ನಮ್ಮ ಕಮಾಂಡೋಗಳು ನುಗ್ಗಿದ್ದರು. ಆದರೆ ಈ ಸಲ ಕಾಲಕ್ಕೆ ತಕ್ಕಂತೆ ನಮ್ಮ ಸೈನ್ಯಕ್ಕೂ ಒಂದು ಹೊಸರೀತಿಯ ವರ್ಕ್ ಫ್ರಮ್ ಹೋಮ್ ಆಪ್ಷನ್ ಅನ್ನು ಕೊಡಲಾಯಿತು ಎನ್ನಬಹುದೇನೋ! ನಮ್ಮವರು ಇಲ್ಲೇ ಕೂತು ಸಾಫ್ಟ್ವೇರ್, ಹಾರ್ಡ್ವೇರ್, ಎಲೆಕ್ಟ್ರಾನಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಗಳನ್ನು ಬಳಸಿ ಉಗ್ರರ ಆಫೀಸು ಮತ್ತು ಟ್ರೈನಿಂಗ್ ಫೆಸಿಲಿಟಿಗಳಾಗಿದ್ದ ಒಂಬತ್ತು ತಾಣಗಳನ್ನು ಕುಟ್ಟಿ ಕೆಡವಿದರು. ಒಬ್ಬನೇ ಒಬ್ಬ ಸೈನಿಕನೋ, ಪೈಲಟ್ಟೋ ಗಡಿಯನ್ನೇ ದಾಟದೆ ಪಾಕಿಸ್ತಾನದ ಹನ್ನೊಂದು ಏರ್ ಬೇಸುಗಳನ್ನು ಇಲ್ಲಿಂದಲೇ ಮೆಟ್ಟಿ ಉರುಳಿಸಿದರು. ಇವುಗಳ ನಿಖರತೆ ಎಷ್ಟೆಂದರೆ ನೀವು ಇಲ್ಲಿಂದ ಒಂದು ಮಿಸೈಲನ್ನು ಅಲ್ಲಿರುವ ಮಸೂದ್ ಅಝರನ ತಲೆಗೆ ಬೀಳುವಂತೆ ಕಳಿಸಿದರೆ ಅದು ಅವನ ತಲೆಗೇ ಬೀಳುತ್ತದೆ, ಡೊಳ್ಳುಹೊಟ್ಟೆಗಲ್ಲ. ಇದು ತಮಾಷೆಗೆ ಮಾಡಿದ ಉತ್ಪ್ರೇಕ್ಷೆಯಾದರೂ, ವಾಸ್ತವಕ್ಕೆ ಹತ್ತಿರದಲ್ಲೇ ಇದೆ; ಈ ಮಿಸೈಲುಗಳ Circular error probable (CEP) ಒಂದು ಮೀಟರ್ ಎಂದು ತಜ್ಞರು ಹೇಳುತ್ತಿದ್ದಾರೆ, ಹಾಗೆಂದರೆ ನೀವು ಈ ಶಸ್ತ್ರಗಳನ್ನು ಒಂದು ಗುರಿಯೆಡೆಗೆ ನೂರು ಸಲ ಕಳಿಸಿದರೆ ಅವು ಐವತ್ತು ಸಲ ಗುರಿಯ ಒಂದು ಮೀಟರಿನ ಒಳಗೆಯೇ ಮುಟ್ಟುತ್ತವೆ, ಅದಕ್ಕಿಂತ ಹೊರಗೆ ಹೋಗುವುದಿಲ್ಲ. ಈ ಮಟ್ಟದ ನಿಖರತೆಯು ಅದ್ಭುತವೇ ಸರಿ.
ಇನ್ನು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯಂತ್ರಗಳ ವೇಗಕ್ಕೆ ಪಾಕಿಗಳು ಕಳಿಸಿದ ನೂರಾರು ಡ್ರೋನುಗಳೋ, ಮಿಸೈಲುಗಳೋ ಪಕ್ಕದ ಮೋರಿಯಿಂದ ಹೆಕ್ಕಿ ತಂದ ಹಳೆ ಪಟಾಕಿಯಂತೆ ಠುಸ್ ಆದವು. "ಗೂಗಲ್ಲಿನ ಸಿಇಓ ನಮ್ಮವರು, ಮೈಕ್ರೋಸಾಫ್ಟ್ ನ ಸಿಇಓ ನಮ್ಮವರು, ಪ್ರಾಚೀನ ಭಾರತದ್ದು ವಿಜ್ಞಾನ, ತಂತ್ರಜ್ಞಾನದಲ್ಲಿ ದೊಡ್ಡ ಸಾಧನೆ, ಹೀಗಿದ್ದರೂ ನಾವ್ಯಾಕೆ ವಿಜ್ಞಾನ ತಂತ್ರಜ್ಞಾನಗಳಲ್ಲಿ ಇಷ್ಟು ಹಿಂದಿದ್ದೇವೆ" ಎಂಬ ಧಾಟಿಯಲ್ಲಿ ನಮ್ಮಂಥವರು ಗೊಣಗುವುದಿತ್ತು. ಇಸ್ರೋ, ಡಿಆರ್ಡಿಓ, ಬಿಇಎಲ್ ಮುಂತಾದ ಸಂಸ್ಥೆಗಳ ವಿಜ್ಞಾನಿಗಳೂ, ಎಂಜಿನಿಯರುಗಳೂ ಆಕಾಶ್ ಮಿಸೈಲು, ಆಕಾಶ್ ತೀರ್ ಎಂಬ ವ್ಯವಸ್ಥೆಯನ್ನೆಲ್ಲ ನಮ್ಮ ಮುಂದಿಟ್ಟು ನಮ್ಮನ್ನು ಹೆಮ್ಮೆಯಿಂದ ತಲೆಯೆತ್ತುವಂತೆ ಮಾಡಿದ್ದಾರೆ. ಸ್ವದೇಶಿ ತಯಾರಿಗಳಾದ ಇವುಗಳು ರಷ್ಯಾ, ಅಮೆರಿಕಾ, ಇಸ್ರೇಲ್, ಚೀನಾ ಮುಂತಾದ ದೇಶಗಳ ಯಾವ ಆಧುನಿಕ ತಂತ್ರಜ್ಞಾನಕ್ಕೂ ಕಡಮೆಯಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕಿಂತ ಸಂತೋಷ ಇನ್ನೇನಿದೆ. ಇವುಗಳಂತೆಯೇ ಸೈನಿಕರಿಗೆ ಆನೆಬಲ ತುಂಬಿದ ಉಳಿದ ದುಬಾರಿ ಶಸ್ತ್ರಗಳನ್ನು ಖರೀದಿ ಮಾಡಿದ ರಕ್ಷಣಾ ಮಂತ್ರಿಗಳು, ಪ್ರಧಾನಿ, ಮಿಲಿಟರಿ ಅಧಿಕಾರಿಗಳ ದೂರದೃಷ್ಟಿಯೂ ಮೆಚ್ಚತಕ್ಕದ್ದೇ. ಇವನ್ನೆಲ್ಲ ತಯಾರು ಮಾಡುವ ಕೆಲಸವು ಇಪ್ಪತ್ತು ಮೂವತ್ತು ವರ್ಷಗಳ ಮೊದಲೇ ಶುರುವಾಗಿತ್ತಂತೆ, ಸಾವಿರಾರು ಜನ ವಿಜ್ಞಾನಿಗಳ ಪರಿಶ್ರಮವೂ ಅವುಗಳ ಹಿಂದಿದೆ. ಈ ದೂರದೃಷ್ಟಿಗೆ ನಮಸ್ಕಾರ. ಇದರಿಂದ ಹೊರಡುವ ನೀತಿಯನ್ನೇ ನಾವು ಪಾಠ ೩ ಎನ್ನಬಹುದು:
ಪಾಠ ೩: ಬಿ ಎಂ ಗಿರಿರಾಜ ಅವರ 'ನವಿಲಾದವರು' ಎಂಬ ಚಿತ್ರದಲ್ಲಿ ಒಂದು ಮಾತು ಬರುತ್ತದೆ: "ಶಾಂತಿ ಬುದ್ಧಿಜೀವಿಗಳ ಕನಸು, ಯುದ್ಧ ಐತಿಹಾಸಿಕ ಸತ್ಯ". ಇದೊಂದು ಕಹಿಯಾದ ಸತ್ಯ, ಕಟುವಾದ ವಾಸ್ತವ. ನಾವು ಶಾಂತಿಪ್ರಿಯರೇ, ಬೇಕಾದರೆ ಗಾಂಧೀಜಿಯವರ ಜೊತೆ ಸ್ಪರ್ಧೆಗಿಳಿದವರಂತೆ ಶಾಂತಿಮಂತ್ರವನ್ನು ಪಠಿಸೋಣ, ಶಾಂತಿಯನ್ನು ಪಾಲಿಸೋಣ, ಆದರೆ ಯುದ್ಧಕ್ಕೆ ಯಾವಾಗಲೂ ತಯಾರಾಗಿಯೇ ಇರೋಣ. ನಾವೆಷ್ಟೇ ಶಾಂತಿಪ್ರಿಯರಾದರೂ ಪಕ್ಕದ ಮನೆಯವರು ನಮ್ಮನ್ನು ಶಾಂತರಾಗಿರಲು ಬಿಡುತ್ತಾರೆ ಎನ್ನುವಂತಿಲ್ಲ. ಇದು ಈ ಪಾಪಿಜಗತ್ತು ನಮಗೆ ಹೇಳಿಕೊಟ್ಟಿರುವ ಪಾಠ. “You can get much farther with a kind word and a gun than you can with a kind word alone.” ಎಂಬ ಅಲ್ ಕೆಪೋನನ ಮಾತನ್ನೂ ನಾವು ಮರೆಯುವಂತಿಲ್ಲ. 2045ನೇ ಇಸವಿಯಲ್ಲಿ ಆಗಬಹುದಾದ ಯುದ್ಧವನ್ನು ಗೆಲ್ಲಬೇಕಾದರೆ ಅದಕ್ಕೆ ತಯಾರಿ ಈಗಿಂದಲೇ ಆಗಬೇಕು. ಹೀಗೆ ಮಾಡಿದ್ದರಿಂದಲೇ ನಾವು ಆಪರೇಷನ್ ಸಿಂದೂರದಲ್ಲಿ ಜಯ ಸಾಧಿಸಲು ಸಾಧ್ಯವಾಯಿತು.
ಪಾಠ ೪: ಉಗ್ರರ ದಾಳಿಗಳಾದಾಗ ಎಡಪಂಥೀಯರು, ಮುಸಲ್ಮಾನರು ಅದನ್ನು ಖಂಡಿಸುವುದಿಲ್ಲ ಎಂಬ ಮಾತಿದೆ. ಆದರೆ ಈ ಸಲ ಹಲವರು ಕೃತ್ಯವನ್ನು ಬಹಿರಂಗವಾಗಿ ಖಂಡಿಸಿದರು, ಕಾಶ್ಮೀರಿಗಳೂ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ಕಂಡಿತು. ಇದು ಸ್ವಾಗತಾರ್ಹವಾದ ಬೆಳವಣಿಗೆ. ಆದರೆ ಕೆಲವರು ಹತ್ತು ಸಾಲುಗಳ ಖಂಡನೆಯಲ್ಲಿ ಎಂಟು ಸಾಲುಗಳನ್ನು, "ಹಿಂದೂ ಭಯೋತ್ಪಾದನೆಯೂ ಉಂಟಲ್ಲವೇ, ಯಹೂದಿಗಳೂ ಕೆಟ್ಟವರಲ್ಲವೇ, ಮೋದಿ ಏನು ಮಾಡುತ್ತಿದ್ದ? ಅಜಿತ್ ಡೋವಲ್ ಚಪಾತಿ ತಿನ್ನುತ್ತಿದ್ದನೇ, ಆರೆಸ್ಸೆಸ್ ಏನು ಮಾಡಲಿದೆ, ವೀರಪ್ಪನನೂ ಅಮಾಯಕರನ್ನು ಕೊಂದಿದ್ದನಲ್ಲವೇ" ಎಂದು ಮುಂತಾಗಿ ಹೇಳುವುದಕ್ಕೆ ಮೀಸಲಿಟ್ಟರು. ಹೀಗೆ ನಾಲ್ಕಾರು ವಿಷಯಗಳನ್ನು ಬೆರೆಸುವುದರಿಂದ ವಿಷಯ ಡೈಲ್ಯೂಟ್ ಆಗುತ್ತದೆ, ವಿಷಯಾಂತರವೂ ಆಗುತ್ತದೆ. ಮತಾಂಧ ಉಗ್ರರನ್ನು ಬೈಯುವಾಗ ಉಗ್ರರನ್ನೇ ಬೈಯಿರಿ, ಮತಾಂಧತೆಯನ್ನೇ ತೆಗಳಿರಿ, ಸ್ಪಷ್ಟವಾಗಿ, ದೊಡ್ಡಸಂಖ್ಯೆಯಲ್ಲಿ, ಬೇಷರತ್ ಆಗಿ ಬೈಯಿರಿ, ಉಳಿದವರನ್ನು ಬೈಯುವುದಕ್ಕೆ, ಉಳಿದ ವಿಷಯಗಳನ್ನು ಮಾತಾಡುವುದಕ್ಕೆ ಉಳಿದ ೩೬೪ ದಿನಗಳು ಹೇಗೂ ಇವೆಯಲ್ಲ. ನಾಟ್ಜಿ ಜರ್ಮನಿಯಲ್ಲಿ ಎಲ್ಲರೂ ನಾಟ್ಜಿಗಳೂ, ಯಹೂದಿದ್ವೇಷಿಗಳೂ ಆಗಿರಲಿಲ್ಲ, ಮಾಡರೇಟ್ ದನಿಗಳೂ ದೊಡ್ಡ ಸಂಖ್ಯೆಯಲ್ಲಿ ಇದ್ದರು, ಆದರೆ ಅವರ್ಯಾರೂ ದೊಡ್ಡ ದನಿಯಲ್ಲಿ, ದೊಡ್ಡ ಸಂಖ್ಯೆಯಲ್ಲಿ ಸ್ಪಷ್ಟವಾಗಿ ಮಾತಾಡಲಿಲ್ಲ. ಆದ್ದರಿಂದ ದುಷ್ಟಶಕ್ತಿಗಳು ನರೇಟಿವ್ ಅನ್ನು ಹೈಜಾಕ್ ಮಾಡಿದವು. ಹಾಗಾಗಬಾರದಲ್ಲವೇ?
ಪಾಠ ೫: ಇಡೀ POKಯೇ ಚಿಟಿಕೆ ಹೊಡೆಯುವಷ್ಟರಲ್ಲಿ ನಮ್ಮದಾಗುತ್ತದೆ, ಪಾಕಿಸ್ತಾನವು ಭೂಪಟದಿಂದ ಅಳಿಸಿ ಹೋಗುತ್ತದೆ, ಕರಾಚಿಯನ್ನು ಗೋಣಿಯಲ್ಲಿ ತುಂಬಿಸಿ ತರಲಾಗುತ್ತದೆ ಎಂಬ ಅತಿರಂಜಿತ ಯುದ್ಧೋನ್ಮಾದದ ಹೇಳಿಕೆಗಳು, ನಿರೀಕ್ಷೆಗಳು ಉಚಿತವಲ್ಲ. ಇದೆಲ್ಲ ಹೇಳುವುದಕ್ಕೆ ಚೆನ್ನವೇ ಹೊರತು ಮಾಡುವುದಕ್ಕಲ್ಲ. ನಮ್ಮ ಸೇನೆಗೆ ಸಾಟಿಯಲ್ಲವಾದರೂ ಪಾಕಿಸ್ತಾನದ ಹತ್ತಿರವೂ ಒಂದು ದೊಡ್ಡ ಸೈನ್ಯ ಇದೆ. ಅವರ ಹತ್ತಿರವೂ ಆಧುನಿಕ ಶಸ್ತ್ರಾಸ್ತ್ರಗಳಿವೆ. ಹಾಗೆಲ್ಲ ಯುದ್ಧವನ್ನು ಒಂದು ವಾರದಲ್ಲಿ ಮುಗಿಸಲು ಸಾಧ್ಯವೂ ಇಲ್ಲ. ಈಗ ರಷ್ಯಾ- ಉಕ್ರೇನ್ ಯುದ್ಧವನ್ನೇ ನೋಡಿ. ಅದು ಆನೆ ಮತ್ತು ಆಡುಗಳ ಕಾಳಗ. ಆದರೂ ಮೂರು ವರ್ಷವಾದರೂ ಅಷ್ಟು ಬಲಿಷ್ಠ ರಷ್ಯಾದ ಎದುರು ಉಕ್ರೇನ್ ಸೋಲೊಪ್ಪಿಕೊಂಡಿಲ್ಲ. ಸಿಂಹದಂಥ ಇಸ್ರೇಲು ಅದೆಷ್ಟು ಬಡಿದರೂ ಹಮಾಸ್ ಸೋತು ಶರಣಾಗಿಲ್ಲ. ಅದು ಎಂದಿಗೂ ಮುಗಿಯದ ಯುದ್ಧ ಎಂಬ ಭಾವ ಮೂಡತೊಡಗಿದೆ. ಹೀಗಿರುವಾಗ ಪಾಕಿನ ಜೊತೆ ಯುದ್ಧಕ್ಕೆ ಹೊರಟು ನಾಲ್ಕು ವರ್ಷ ಯುದ್ಧವಾದರೆ ಅದಕ್ಕೆ ಬೇಕಾದ ತಯಾರಿ ನಮ್ಮಲ್ಲಿ ಇದೆಯೇ? ಎಷ್ಟು ಜನ ನಮ್ಮ ಸೈನಿಕರು ಸತ್ತಾರು? Sustainability ಹೇಗೆ? ಆರ್ಥಿಕ ಆರೋಗ್ಯದ ಗತಿಯೇನು? ಚೀನಾ ಮಧ್ಯ ಪ್ರವೇಶ ಮಾಡಿದರೆ ನಾವೇನು ಮಾಡಬೇಕು? ಅಮೆರಿಕಾ ಪಾಕಿಗೆ ಒಳಗೊಳಗೇ ಸಹಾಯ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ? ಗಮನಿಸಿ: ಮೊದಲಿನಿಂದಲೂ ಸರಕಾರವಾಗಲೀ ಮಿಲಿಟರಿಯಾಗಲೀ ಇದನ್ನೊಂದು ಯುದ್ಧ ಎಂದು ಹೇಳಲೇ ಇಲ್ಲ. ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗರಪತ್ರಿಕಾ ಗೋಷ್ಠಿಗಳಿಂದ ಹಿಡಿದು ರಾಜೀವ್ ಘಾಯ್ ಅವರವರಿಗೆ ಎಲ್ಲರೂ ಇದನ್ನು measured, calibrated, proportionate, and non-escalatory strike ಎಂದೇ ಹೇಳುತ್ತಾ ಬಂದಿದ್ದಾರೆ. ನಾವು ಹೊಡೆದಿರುವುದು ಉಗ್ರಗಾಮಿ ನೆಲೆಗಳಿಗೆ, ಪಾಕಿಸ್ತಾನದ ನಾಗರೀಕರಿಗೋ, ಸೈನ್ಯದ ನೆಲೆಗಳಿಗೋ ಅಲ್ಲ, ನಮ್ಮದು non-escalatory ಹೊಡೆತ ಎಂಬ ಮಾತನ್ನು ಆರಂಭದಿಂದಲೂ ಮಂತ್ರದಂತೆ ಹೇಳುತ್ತಲೇ ಬಂದಿದ್ದಾರೆ. ಅವರು ಒಂದು ಹೊಡೆದರೆ ನಾವು ತಿರುಗಿಸಿ ಎರಡು ಕೊಡುತ್ತೇವೆ, ನಾವಾಗಿ ಹೊಡೆದಾಟ ಶುರುಮಾಡುವುದಿಲ್ಲ. ಅವರೇ ಆರಂಭಿಸಿದರೆ, ಅನಿವಾರ್ಯವಾದರೆ ಮಾತ್ರ ಯುದ್ಧ ಎಂಬುದು ಭಾರತದ ನಿಲುವು ಎಂಬುದನ್ನು ಭಾರತವು ಸ್ಪಷ್ಟವಾದ ಮಾತುಗಳಲ್ಲಿ ಹೇಳುತ್ತಲೇ ಬಂದಿದೆ.
ಇದು ಯುದ್ಧದ ಕಾಲವಲ್ಲ ಎಂದು ಮೋದಿ ಹೇಳಿದ್ದೂ ಅದನ್ನೇ. ಹೀಗಿರುವಾಗ ಯುದ್ಧ ಮಾಡುತ್ತಾರೆ, ಪಾಕನ್ನು ನಾಮಾವಶೇಷ ಮಾಡುತ್ತಾರೆ ಎಂಬುದು ಒಂದು ತಪ್ಪು ನಿರೀಕ್ಷೆ ಬಿಟ್ಟರೆ ಬೇರೇನೂ ಅಲ್ಲ. ಕದನಕ್ಕೆ ನಾವು ಹೊರಟೇ ಇರಲಿಲ್ಲ ಎಂದಮೇಲೆ ಕದನವಿರಾಮವು ಅಂಥ ಆಶ್ಚರ್ಯದ, ನಿರಾಸೆ ಮೂಡಿಸಬಹುದಾದ ನಡೆಯಲ್ಲವೇ ಅಲ್ಲ.
ಪಾಠ ೬: ಪರೋಕ್ಷವಾಗಿ ಸಂದೇಶ ರವಾನೆ ಮಾಡುವುದೂ ಯುದ್ಧದ ಒಂದು ಭಾಗವೇ. ಈಗೊಬ್ಬ ಅಪರಾಧಿಯು ಕೀನ್ಯಾದಲ್ಲಿ ಒಂದುಕಡೆ ಇದ್ದಾನೆ ಎಂದುಕೊಳ್ಳೋಣ. ಅವನನ್ನು ಹೆದರಿಸುವುದಕ್ಕೆ ಅವನ ಮನೆಗೇ ನುಗ್ಗಿ ಹೊಡೆಯಬೇಕು ಎಂದೇನೂ ಇಲ್ಲ, ಅವನ ಪಕ್ಕದ ಮನೆಗೆ ಬೀಳುವಂತೆ ಒಂದು ಬಾಂಬು ಹಾಕಿದರೂ ಸಾಕು, "ಪಕ್ಕದ ಮನೆಗೆ ಬಾಂಬನ್ನು ಹಾಕುವ ಸಾಮರ್ಥ್ಯ ಇದೆ ಎಂದ ಮೇಲೆ ಅದನ್ನೇ ನಿನ್ನ ಮನೆಗೂ ಹಾಕುವುದು ಕಷ್ಟವೇನಲ್ಲ ಎಂಬ ಸಂದೇಶ ಅವನಿಗೆ ರವಾನೆಯಾಗುತ್ತದೆ. ಭಾರತವು ಉದ್ದಕ್ಕೂ ಇದೇ ತಂತ್ರವನ್ನು ಅನುಸರಿಸಿತು. ನಿಮ್ಮ ಏರ್ ಬೇಸ್ ಅನ್ನು ಇಲ್ಲೇ ಕೂತು ನಾಶ ಮಾಡಬಲ್ಲೆವು ಎಂದಾದರೆ ನಾವು ಏನನ್ನೆಲ್ಲ ಮಾಡಲು ಸಮರ್ಥರು ಎಂದು ಅರ್ಥಮಾಡಿಕೊಳ್ಳಿ ಎಂಬ ಸಂದೇಶ ಪಾಕಿಗೆ ಮುಟ್ಟಿಯೇ ಇರುತ್ತದೆ. ಕೆಲವು ಪುಡಿ ರೌಡಿಗಳಿರುತ್ತಾರೆ, ಅಂಥವರು ಮಾತೆತ್ತಿದರೆ, "ಗೊತ್ತಲ್ಲ! ನಾನು ಸರಿ ಇಲ್ಲ! ನಾನು ತಲೆ ಕೆಟ್ರೆ ರಾಕ್ಷಸ! ಟಾಪ್ ಟು ಬಾಟಮ್ ಕುಯ್ದಾಕಿ ಬಿಡ್ತೀನಿ" ಎಂದು ಹಾರಾಡುತ್ತಿರುತ್ತಾರೆ. ತಮ್ಮ ಬಗ್ಗೆ ಜನರಿಗೆ ಹೆದರಿಕೆ ಹುಟ್ಟಲಿ ಎಂಬುದು ಅವರ ಆಶಯ, ಡಾನುಗಳು ಹೀಗೆಲ್ಲ ಹಾರಾಡಬೇಕಾದ ಅಗತ್ಯ ಇಲ್ಲ, ಅವರು ಬಂದರೆ ಅವರ ಸುತ್ತಮುತ್ತ ಇಪ್ಪತ್ತು ಜನ ದಷ್ಟಪುಷ್ಟರು ಗತ್ತಿನಿಂದ ಬಂದು, ಪೋಸು ಕೊಟ್ಟು ಗುರಾಯಿಸಿ ನಿಂತರೇ ಜನ ಹೆದರಿ ಕಂಗಾಲಾಗುತ್ತಾರೆ. ಭಾರತವು ಹೀಗೆ ಡಾನಿನಂತೆ ಪೋಸು ಕೊಟ್ಟಿತು ಎನ್ನಬಹುದೇನೋ. ಪಾಕಿಸ್ತಾನವು ಪುಡಿ ರೌಡಿಯಂತೆ ಹಾರಾಡುತ್ತ, ಬೊಬ್ಬಿಡುತ್ತಾ, "ನಾನು ಸರಿ ಇಲ್ಲ! ನಾನು ತಲೆ ಕೆಟ್ರೆ ರಾಕ್ಷಸ! ನನ್ನತ್ರ ಪರಮಾಣು ಬಾಂಬ್ ಇದೆ ಗೊತ್ತಲ್ಲ" ಎಂದು ಎಗರಾಡುತ್ತಲೇ ಇರುತ್ತದೆ(ಪಾಕಿಸ್ತಾನವು "ನಾನು ಸರಿ ಇಲ್ಲ!" ಎನ್ನಬೇಕಾದ ಅಗತ್ಯವೇನೂ ಇಲ್ಲ ಎನ್ನಿ! ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ). ಇದನ್ನು Nuclear saber rattling(ಪರಮಾಣು ಕತ್ತಿ ಝಳಪಿಸುವಿಕೆ)ಎನ್ನುತ್ತಾರೆ. ಅಂಥ ಪರಮಾಣು ಬಾಂಬುಗಳ ವಾರ್ ಹೆಡ್ಡುಗಳು ಇರುವ ಸ್ಟೋರೇಜ್ ಫೆಸಿಲಿಟಿಗಳ ತೀರಾ ಪಕ್ಕದ ಮನೆಗೇ ಬಾಂಬು ಹಾಕಿ, ಮನಸ್ಸು ಮಾಡಿದರೆ ನಾವು ನಿಮ್ಮ ಪರಮಾಣು ಬಾಂಬುಗಳನ್ನು ನಿಷ್ಕ್ರಿಯಗೊಳಿಸಬಲ್ಲೆವು ಎಂಬ ಸಂದೇಶವನ್ನು ರವಾನೆ ಮಾಡಿದೆ ಎಂಬುದೊಂದು ಊಹೆಯಿದೆ. ಹಠಾತ್ತನೆ ಕದನವಿರಾಮದ ಬಯಕೆ ಮೂಡಿದ್ದೂ ಈ ಕಾರಣಕ್ಕೇ ಎಂಬ ಊಹೆಗಳೂ ಇವೆ. ವಿಕಿರಣ ಸೋರಿಕೆಯಾಗಿದೆ, ಇದರಿಂದ ಈಗಾಗಲೇ ಪರಮಾಣು ಬಾಂಬುಗಳ ವಾರ್ ಹೆಡ್ಡುಗಳು ನಿಷ್ಕ್ರಿಯವಾಗಿದೆ ಎಂಬ ಮಾತನ್ನೂ ಮಾಜಿ ಮೇಜರ್ ಜನರಲ್ ರಾಜೀವ್ ನಾರಾಯಣ್ ಅವರಂಥರು ಹೇಳಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಹೇಳುವುದು ಕಷ್ಟ. ದಾಳಿ ಮಾಡಿದ್ದೇವೆ ಎಂದು ಭಾರತವು ಬಹಿರಂಗವಾಗಿ ಒಪ್ಪುವುದಿಲ್ಲ, ಹೇಳಿದರೆ ಮರ್ಯಾದೆ ಹೋದೀತೆಂದು ಪಾಕಿಸ್ತಾನವೂ ಅದನ್ನು ಮುಚ್ಚಿಡುತ್ತದೆ. ಹೀಗಾಗಿ ಒಂದುವೇಳೆ ಇದೆಲ್ಲ ಆಗಿದ್ದರೂ ಅದನ್ನು ರಹಸ್ಯವಾಗಿಯೇ ಇಡಲಾಗುತ್ತದೆ. ನಾವು ಸತ್ಯವನ್ನು ತಿಳಿಯುವುದು ಕಷ್ಟವೇ. ಅದೇನೇ ಇದ್ದರೂ ಭಾರತವು ನ್ಯೂಕ್ಲಿಯರ್ ಫೆಸಿಲಿಟಿಗಳ ಹತ್ತಿರಕ್ಕೇ ದಾಳಿ ಮಾಡಿ, ಬೇಕಾದರೆ "ಇನ್ನು ಹತ್ತಿರ..... ಹತ್ತಿರ..... ಬರುವೆವು" ಎಂದು ಪಾಕಿಸ್ತಾನಕ್ಕೆ ಒಂದು ಸಂದೇಶ ರವಾನೆ ಮಾಡಿರುವ ಸಾಧ್ಯತೆಯಂತೂ ದಟ್ಟವಾಗಿದೆ ಎನ್ನಬಹುದು.
ಪಾಠ ೭: ಆಪರೇಷನ್ ಸಿಂದೂರವು ತೋರಿಸಿದಂತೆ, ಇಲ್ಲೇ ಕೂತು ಉಗ್ರರ ಮನೆಗೇ ಮಿಸೈಲನ್ನು ಕಳಿಸುವ ಕಾರ್ಯಾಚರಣೆಗಳು ಭವಿಷ್ಯದಲ್ಲಿ ಆಗಲಿವೆ. ಉಗ್ರರು ಇಂಥಲ್ಲೇ ಇದ್ದಾರೆ ಎಂದು ಇಂಟೆಲಿಜೆನ್ಸ್ಸಿನವರು, ಗೂಢಚಾರರು ಮಾಹಿತಿಯನ್ನು ಕೊಡಬೇಕಾಗುತ್ತದೆ ಎಂಬುದು ನಿಜವೇ. ಉಗ್ರರ ವಿಳಾಸವು ಸಿಕ್ಕಿದ ಮೇಲೆ ಅವರ ವಿಳಾಸವನ್ನು ಬರೆದು ಒಂದು ಡ್ರೋನ್ ಅನ್ನೋ ಮಿಸೈಲ್ ಅನ್ನೋ ರಿಜಿಸ್ಟರ್ಡ್ ಪೋಷ್ಟಿನಲ್ಲಿ ಕಳಿಸುವ ಕೆಲಸವೂ ಮುಂದೆ ಆಗಲಿದೆ. Terms of Engagement ಬದಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ Unknown, Unidentified ಗನ್ ಮ್ಯಾನುಗಳು ಉಗ್ರಗಾಮಿಗಳನ್ನು ಕೊಲ್ಲುವ ಸುದ್ದಿಗಳು ಸಾಕಷ್ಟು ಬಂದಿವೆ. ಅವರಿಗೆ ಮುಂದೆಯೂ ಕೈತುಂಬಾ ಕೆಲಸ ಸಿಗಲಿದೆ ಎಂದು ಊಹಿಸೋಣ. "ಅವರನ್ನು ನೀವು ಕಳಿಸಿದ್ದಾ?" ಎಂದು ಯಾರಾದರೂ ಕೇಳಿದರೆ ಏರ್ ಮಾರ್ಷಲ್ ಭಾರ್ತಿಯವರು ವ್ಯಂಗ್ಯವಾಗಿ ನಕ್ಕು, ನ್ಯೂಕ್ಲಿಯರ್ ಶಸ್ತ್ರಗಳಿರುವ ಜಾಗಕ್ಕೆ ಸ್ಟ್ರೈಕ್ ಮಾಡಿದ್ದನ್ನು ಅಲ್ಲಗಳೆದಂತೆ, ನಮ್ಮವರೂ, "ನಮಗೇನೂ ಗೊತ್ತಿಲ್ಲಪ್ಪ, ನಮಗೆ ಯಾವ ಗನ್ ಮ್ಯಾನುಗಳ ಪರಿಚಯವೂ ಇಲ್ಲ" ಎನ್ನಲಿದ್ದಾರೆ.
ಸದ್ಯಕ್ಕಿಷ್ಟು ಸಾಕು.